ತಾರತಮ್ಯ ನಿವಾರಣೆಗೆ ಮುಂದಾಗುವರೇ?
ಮಾನ್ಯರೇ,
ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿ:ಶಿಕ್ಷಕ ಅನುಪಾತದ ಆಧಾರದ ಮೇಲೆ ಸರಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ಚುವರಿ ಶಿಕ್ಷಕರ ಸ್ಥಳಾಂತರಕ್ಕೆ ಮುಂದಾಗಿದೆ.ಆದರೆ ಹೆಚ್ಚುವರಿ ಶಿಕ್ಷಕರನ್ನು ಪಟ್ಟಿ ಮಾಡುವಾಗ ಅನುಸರಿಸಿರುವ ಕ್ರಮ ಅವೈಜ್ಞಾನಿಕವಾಗಿದೆ. ಕೆ.ಪಿ.ಎಸ್. ಮಾದರಿ ಶಾಲೆಗೆ ವಿಭಾಗವಾರು ಹುದ್ದೆಗಳನ್ನು ಲೆಕ್ಕ ಹಾಕುವಾಗ 40 ವಿದ್ಯಾರ್ಥಿಗಳಿಗೆ 1 ಶಿಕ್ಷಕ ಹುದ್ದೆಯಂತೆ ತೋರಿಸಿ ಉಳಿದ ಪ್ರೌಢಶಾಲೆಗಳಲ್ಲಿ 70 ವಿದ್ಯಾರ್ಥಿಗಳಿಗೆ 1 ರಂತೆ ತೋರಿಸಿ ಹೆಚ್ಚುವರಿ ಹುದ್ದೆಗಳನ್ನು ಪಟ್ಟಿ ಮಾಡಲಾಗಿದೆ. ರಾಜ್ಯದ ಹಲವು ಸರಕಾರಿ ಪ್ರೌಢಶಾಲೆಗಳಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮವನ್ನೂ ಆರಂಭಿಸಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಶಿಕ್ಷಕರು ಯಶಸ್ವಿಯಾಗಿದ್ದಾರೆ. ಇಂತಹ ಕಡೆಗಳಲ್ಲಿ ಮಾಧ್ಯಮವಾರು ವಿಭಾಗ ಸೃಷ್ಟಿಸಿ ಶಿಕ್ಷಕರ ಸಂಖ್ಯೆಯನ್ನು ಲೆಕ್ಕ ಹಾಕದೆ ಎರಡೂ ಮಾಧ್ಯಮಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಒಗ್ಗೂಡಿಸಿ ಶಿಕ್ಷಕರ ಸಂಖ್ಯೆ ಲೆಕ್ಕ ಹಾಕಲಾಗಿದೆ. ಸದ್ಯದಲ್ಲೇ ಜಾರಿಯಾಗಲಿರುವ ಎನ್.ಇ.ಪಿ.ಯಲ್ಲಿ ಹೇಳಿರುವ ವಿದ್ಯಾರ್ಥಿ:ಶಿಕ್ಷಕ ಅನುಪಾತವನ್ನು ಇಲ್ಲಿ ಅನುಸರಿಸಿಲ್ಲ.ಕಳೆದ ವರ್ಷದ ವರ್ಗಾವಣೆ ಪ್ರಕ್ರಿಯೆಯ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡು ಮೂರು ತಿಂಗಳ ಹಿಂದಷ್ಟೇ ನೆಲೆ ಕಂಡುಕೊಂಡಿರುವ ಶಿಕ್ಷಕರ ಪಾಲಿಗಂತೂ ಈ ಕ್ರಮ ಶೋಚನೀಯ. ಎನ್.ಇ.ಪಿ ಅನುಷ್ಠಾನದ ನಂತರ ಇಲಾಖೆಯು ಈ ಕ್ರಮ ಕೈಗೊಳ್ಳಬಹುದಿತ್ತು ಆದರೆ ಏಕಾಏಕಿ ಈ ರೀತಿ ಸ್ಥಳಾಂತರಕ್ಕೆ ಮುಂದಾಗಿರುವುದು ಶಿಕ್ಷಕರ ಮನೋಬಲವನ್ನು ಕುಗ್ಗಿಸುತ್ತದೆ. ಮಾನ್ಯ ಶಿಕ್ಷಣ ಸಚಿವರು ಹಾಗೂ ಶಿಕ್ಷಕರನ್ನು ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯರು ಈ ತಾರತಮ್ಯ ನಿವಾರಣೆಗೆ ಮುಂದಾಗುವರೆ?