ಜಾನ್ಫೋರ್ಡ್-ಅಮರ ಚಿತ್ರಗಳ ಕಥನಕಾರ
ಜಾನ್ಫೋರ್ಡ್ ಅವರು ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಒಬ್ಬ ವಿಮರ್ಶಕನ ಒಂದು ಜೀವಿತಾವಧಿಯ ಅಧ್ಯಯನಕ್ಕೆ ಸಾಕಾಗುವಷ್ಟು ಸಂಖ್ಯೆಯಲ್ಲಿವೆ. ಆದರೆ ಅವರ ಕುಖ್ಯಾತಿ ಮತ್ತು ‘ಅಂತರ್ಮುಖಿ’ ಸ್ವಭಾವ ಅವರ ಚಿತ್ರಗಳ ಚರ್ಚೆಗೆ ಅಡ್ಡಬಂದವೆಂದು ತರ್ಕಿಸಲಾಗಿದೆ. ಆದರೂ ಅವರ ಚಿತ್ರಗಳ ಅತ್ಯಂತ ಕಟು ವಿಮರ್ಶಕರೂ ಫೋರ್ಡ್ ನಿರೂಪಿಸಿದ ‘ವೆಸ್ಟರ್ನ್’ ಚಿತ್ರಗಳ ಕಥನಶೈಲಿಯನ್ನು ಮೆಚ್ಚದಿರಲು ಸಾಧ್ಯವಿಲ್ಲ.
ಭಾಗ-1
ಅಮೆರಿಕ(ಸಂಯುಕ್ತ ಸಂಸ್ಥಾನ)ದ ಚಲನಚಿತ್ರ ಇತಿಹಾಸದಲ್ಲಿ ಜಾನ್ಫೋರ್ಡ್ ಅವರಷ್ಟು ಪ್ರಕಾಶಮಾನವಾದ ಮತ್ತೊಂದು ಹೆಸರು ಇರಲಾರದು. ಹೆಚ್ಚು ಕಡಿಮೆ ಹಾಲಿವುಡ್ನ ಆರಂಭದಿಂದ ಸುಮಾರು ಐವತ್ತು ವರ್ಷಗಳ ಕಾಲ ನಿರ್ಮಾಪಕರಾಗಿ, ನಿರ್ದೇಶಕರಾಗಿ ಚಲನಚಿತ್ರವನ್ನು ಕಲೆಯಾಗಿ ರೂಪಿಸುವುದರಲ್ಲಿ ಹೆಣಗಿದ ಮಹಾನುಭಾವರು. ಚಲನಚಿತ್ರ ಕೌಶಲ್ಯವನ್ನು ಉತ್ಕೃಷ್ಟ ಮಟ್ಟಕ್ಕೆ ಏರಿಸಿದವರು. ಪ್ರತಿಯೊಂದು ಚಿತ್ರವನ್ನು ಸುಂದರ ಶಿಲ್ಪವನ್ನಾಗಿ ಕಡೆಯುತ್ತಿದ್ದ ಫೋರ್ಡ್ ಅವರು ಮುಂದೆ ಇಡೀ ಜಗತ್ತಿನ ಚಿತ್ರ ನಿರ್ಮಾಣದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಅಮೆರಿಕನ್ ಚಿತ್ರ ನಿರ್ಮಾಣ ಶೈಲಿಯ ಪ್ರಮುಖ ರೂವಾರಿಯಾದರು. ಚಲನಚಿತ್ರ ವೀಕ್ಷಣೆಗೆ ಸಂಭ್ರಮ, ರೋಮಾಂಚನ, ತಿಳಿವು ಮತ್ತು ಚಿಂತನೆಯನ್ನು ತಂದವರಲ್ಲ್ಲಿ ಅಗ್ರಗಣ್ಯರು. ಅಮೆರಿಕ ಸಂಸ್ಥಾನದ ರಾಷ್ಟ್ರೀಯ ಪರಂಪರೆಯನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ರೂಪಿಸಿದ ಸಾಹಸಿ. ತಾವು ನಿರ್ದೇಶಿಸಿದ ಚಿತ್ರಗಳಲ್ಲಿ ಅಳಿಸಲಾಗದ ವೈಯಕ್ತಿಕ ಛಾಪನ್ನು ಒತ್ತಿದ ಜಾನ್ಫೋರ್ಡ್ ಅನೇಕ ಪೀಳಿಗೆಗಳ ವೀಕ್ಷಕರನ್ನು, ಚಲನಚಿತ್ರ ನಿರ್ದೇಶಕರು ಹಾಗೂ ಅಧ್ಯಯನಾಸಕ್ತರನ್ನು ಪ್ರಭಾವಗೊಳಿಸಿದವರು. ಕೆಲವು ಆಕ್ಷೇಪಣೆಗಳ ನಡುವೆಯೂ ಜಾನ್ಫೋರ್ಡ್ ಅವರು ಅಮೆರಿಕ ರಾಷ್ಟ್ರದ ಘನತೆ ಮತ್ತು ಅಮೆರಿಕನ್ ಚಿತ್ರಗಳ ಶ್ರೇಷ್ಠತೆಯನ್ನು ಪ್ರತಿನಿಧಿಸಿದವರು.
ಜಗತ್ತಿನ ಸರ್ವಶ್ರೇಷ್ಠ ನಿರ್ದೇಶಕ-ನಟರಲ್ಲೊಬ್ಬರಾದ ಆರ್ಸನ್ ವೆಲ್ಸ್ ಅವರು ಫೋರ್ಡ್ ಅವರನ್ನು ಬಣ್ಣಿಸಿದ್ದು ‘‘ಸಿನೆಮಾ ಕ್ಷೇತ್ರ ನಮಗೆ ನೀಡಿದ ಶ್ರೇಷ್ಠ ಕವಿ’’ ಎಂದು.
ಹಾಗಾಗಿ ಜಾನ್ಫೋರ್ಡ್ ಜಗತ್ತಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು ಮಾತ್ರವಲ್ಲ; ಕಾಲಸರಿದಂತೆ ಬೆಳೆಯುತ್ತಿರುವ ಒಂದು ದಂತಕತೆ.
ಜಗತ್ತಿನ ಜನಪ್ರಿಯ ಚಲನಚಿತ್ರ ಶೈಲಿಗಳಲ್ಲೊಂದಾದ ‘ವೆಸ್ಟರ್ನ್’ ಚಿತ್ರ ಪರಂಪರೆಗೆ ಹೊಸಭಾಷ್ಯ ಬರೆದ ಜಾನ್ಫೋರ್ಡ್ ಅವರು ಆವರೆಗೆ ನಿರೂಪಿತವಾಗಿದ್ದ ‘ಕ್ರೂರಿ’ ರೆಡ್ ಇಂಡಿಯನ್ನರು-ಸಾಹಸಿ ಬಿಳಿಯರ ನಡುವಿನ ಸಂಘರ್ಷದ ಕಪ್ಪು-ಬಿಳುಪು ಪಾತ್ರ ಸರಣಿಗಳ ‘ವೆಸ್ಟರ್ನ್’ ಮಾದರಿಯ ಚಿತ್ರಗಳಿಗೆ ಮಾನವೀಯ ಸ್ಪರ್ಶವನ್ನು ನೀಡಿದವರು. ಸರಳವಾದ, ಒಂದೇ ಪಡಿಯಚ್ಚಿನಲ್ಲಿ ತೆಗೆದ ಮನುಷ್ಯ ಸಂಬಂಧಗಳ ಕತೆಗಳಿದ್ದ ಸಿನೆಮಾಗಳಿಗೆ ಸಂಕೀರ್ಣವಾದ ಭಿತ್ತಿಯನ್ನು ಒದಗಿಸಿದವರು. ಮನುಷ್ಯ ಸಂಬಂಧಗಳು, ಪ್ರೀತಿ, ದ್ವೇಷ, ತಲ್ಲಣ, ಕುಟುಂಬಗಳು ಎದುರಿಸುವ ಸಂಕಷ್ಟಗಳು, ವೈಯಕ್ತಿಕ ಮಟ್ಟದ ಸಂಘರ್ಷಗಳು, ಜನನ, ಮರಣ, ಅಸಹಾಯಕ ಪರಿಸ್ಥಿತಿಯಲ್ಲಿ ಕಾನೂನು ಉಲ್ಲಂಘಿಸಿದವರು ತೋರುವ ಎದೆಗಾರಿಕೆ, ನೀತಿ-ಅನೀತಿಗಳ ತಾಕಲಾಟ, ಅಮೆರಿಕ ರಾಷ್ಟ್ರವನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಬಿಳಿಯರು ಕೈಗೊಂಡ ಸಾಹಸ, ರೆಡ್ ಇಂಡಿಯನ್ನರನ್ನು ದಮನ ಮಾಡುವ ಪ್ರಯತ್ನಗಳು- ಹೀಗೆ ಫೋರ್ಡ್ ತಮ್ಮ ಚಿತ್ರಗಳಲ್ಲಿ ಅನೇಕ ಬಗೆಯ ಕಥನಗಳನ್ನು ಕಟ್ಟಿದರು. ಅವರ ಚಲನಚಿತ್ರಗಳು ಅನೇಕ ವೇಳೆ ಕಾವ್ಯದ ಮಟ್ಟಕ್ಕೇರಿದರೆ, ಇನ್ನೂ ಹಲವಾರು ತಮ್ಮ ತೀವ್ರ ಭಾವಾಭಿವ್ಯಕ್ತಿಯ ನಾಟಕೀಯ ಗುಣದಿಂದ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದವು. ಅವರ ಚಿತ್ರಗಳಲ್ಲಿ ಅಮೆರಿಕದ ಭೂದೃಶ್ಯಗಳು ಪಾತ್ರವಾಗಿ ಪ್ರೇಕ್ಷಕರೊಡನೆ ಸಂಭಾಷಿಸುವಷ್ಟು ಸಶಕ್ತವಾಗಿ ಮೂಡಿ ಬರುತ್ತಿದ್ದವು. ಚಲನಚಿತ್ರವನ್ನು ಪರಿಣಾಮಕಾರಿ ರಂಜನೆಯ ಉದ್ದಿಮೆಯಾಗಿ ಪರಿವರ್ತಿಸಿದ ಹಾಲಿವುಡ್ನ ಕಟ್ಟುಪಾಡುಗಳ ವ್ಯವಸ್ಥೆಯಲ್ಲಿಯೇ ತನ್ನದೇ ಆದ ಶೈಲಿಯನ್ನು ರೂಪಿಸಿಕೊಂಡ ಫೋರ್ಡ್ ಅವರು ಅನೇಕ ಚಾರಿತ್ರಿಕ ಮಹತ್ವದ, ಉತ್ಕೃಷ್ಟ ಕಲಾಕೃತಿಗಳನ್ನು ರೂಪಿಸಿದರು. ಸುಮಾರು ನೂರೈವತ್ತು ಚಿತ್ರಗಳನ್ನು ನಿರ್ದೇಶಿಸಿದ ಜಾನ್ಫೋರ್ಡ್ ಅವರ ಚಿತ್ರಗಳು ಏಕಕಾಲಕ್ಕೆ ಕಲಾಕೃತಿಗಳಾಗಿಯೂ, ಅಮೆರಿಕದ ಚರಿತ್ರೆಯನ್ನು ಕಟ್ಟಿಕೊಡುವ ಕಥನಗಳಾಗಿಯೂ ಜಗತ್ಪ್ರಸಿದ್ಧವಾಗಿವೆ.
ಇಂತಹ ಜಾನ್ಫೋರ್ಡ್ ಬದುಕಿರುವಾಗಲೇ ಅನೇಕ ಅಪವಾದಗಳಿಗೂ ಗುರಿಯಾಗಿದ್ದರು. ಮುಂಗೋಪಕ್ಕೆ ಹೆಸರುವಾಸಿಯಾಗಿದ್ದ ಅವರನ್ನು ‘ಸ್ಯಾಡಿಸ್ಟ್’ ಎಂದೇ ಕರೆಯುತ್ತಿದ್ದರು. ಸೆಟ್ನಲ್ಲಿ ತನ್ನ ಕಲಾವಿದರನ್ನು ಹೀನಾಯವಾಗಿ ನಿಂದಿಸುತ್ತಿದ್ದರು. ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಅನೇಕ ಸಂದರ್ಭದಲ್ಲಿ ಅದು ವಿಕೋಪಕ್ಕೂ ತಿರುಗಿ ಅನೇಕ ಅನರ್ಥಗಳಾದವು. ಹಾಗಾಗಿ ಅವರ ಅನೇಕ ಶ್ರೇಷ್ಠ ಚಿತ್ರಗಳು ಚರ್ಚೆಗೆ ಬರಲಿಲ್ಲ. ವಿಶ್ಲೇಷಣೆಗೆ ಒಳಪಡಲಿಲ್ಲ. ನಿಜವಾದ ಮೌಲ್ಯಮಾಪನವಾಗಲಿಲ್ಲ. ಅವರ ಸಮಕಾಲೀನ ನಿರ್ದೇಶಕ ಆಲ್ಫ್ರೆಡ್ ಹಿಚ್ಕಾಕ್ರವರ ಪ್ರತಿಯೊಂದು ಚಿತ್ರದ ಪ್ರತಿ ದೃಶ್ಯವನ್ನೂ ತೀವ್ರವಾದ ವಿಶ್ಲೇಷಣೆಗೆ ಒಳಪಡಿಸಿದ ವಿಮರ್ಶಕರು, ಚಲನಚಿತ್ರ ಇತಿಹಾಸಕಾರರು ಫೋರ್ಡ್ ಅವರ ಚಿತ್ರಗಳ ಬಗ್ಗೆ ಮಾತ್ರ ಹೆಚ್ಚು ಚರ್ಚೆ ಮಾಡಲಿಲ್ಲ. ಫೋರ್ಡ್ ಅವರು ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಒಬ್ಬ ವಿಮರ್ಶಕನ ಒಂದು ಜೀವಿತಾವಧಿಯ ಅಧ್ಯಯನಕ್ಕೆ ಸಾಕಾಗುವಷ್ಟು ಸಂಖ್ಯೆಯಲ್ಲಿವೆ. ಆದರೆ ಅವರ ಕುಖ್ಯಾತಿ ಮತ್ತು ‘ಅಂತರ್ಮುಖಿ’ ಸ್ವಭಾವ ಅವರ ಚಿತ್ರಗಳ ಚರ್ಚೆಗೆ ಅಡ್ಡಬಂದವೆಂದು ತರ್ಕಿಸಲಾಗಿದೆ. ಆದರೂ ಅವರ ಚಿತ್ರಗಳ ಅತ್ಯಂತ ಕಟು ವಿಮರ್ಶಕರೂ ಫೋರ್ಡ್ ನಿರೂಪಿಸಿದ ‘ವೆಸ್ಟರ್ನ್’ ಚಿತ್ರಗಳ ಕಥನಶೈಲಿಯನ್ನು ಮೆಚ್ಚದಿರಲು ಸಾಧ್ಯವಿಲ್ಲ.
ಜಾನ್ಫೋರ್ಡ್ ಅವರು ಹುಟ್ಟಿದ್ದು ಅಮೆರಿಕದ ಮೈನೆಯಲ್ಲಿ 1895ರ ಫೆಬ್ರವರಿ ಒಂದರಂದು. ತಂದೆ-ತಾಯಿ ಐರ್ಲ್ಯಾಂಡ್ ಮೂಲದವರು. ಬದುಕನ್ನು ಅರಸಿ ಅಮೆರಿಕಕ್ಕೆ ಬಂದು ತಳವೂರಿದವರು. ಹದಿಮೂರು ಮಕ್ಕಳಿದ್ದ ಬಡತನದ, ಕೆಥೊಲಿಕ್ ಧರ್ಮನಿಷ್ಠ ದೊಡ್ಡ ಸಂಸಾರ. ಜಾನ್ಫೋರ್ಡ್ನ ಹುಟ್ಟುಹೆಸರು ಷಾನ್ ಅಲಾಯಿಸಿಯಸ್ ಓಫೀನಿ. ಬಾಲ್ಯದಲ್ಲಿ ಷಾನ್ಅನ್ನು ಕೆಥೊಲಿಕ್ ಚರ್ಚ್ನಲ್ಲಿ ಧಾರ್ಮಿಕ ಪ್ರಸಾರ ಕಾರ್ಯಗಳನ್ನು ನಿರ್ವಹಿಸಲು ಅಣಿಯಾಗುವಂತೆೆ ತರಬೇತಿ ನೀಡಲು ಕುಟುಂಬ ಇಚ್ಛಿಸಿತ್ತು. ಆದರೆ ಬಾಲಕನಿಗೆ ಕಲಾವಿದನಾಗಬೇಕೆಂಬ ಹಂಬಲವಿತ್ತು. ಆ ನಿಟ್ಟಿನಲ್ಲಿ ಪ್ರಯತ್ನಿಸಿದರೂ ಯಶಸ್ಸು ಕಾಣಲಿಲ್ಲ. ನೌಕಾಪಡೆಯ ಕಾಲೇಜಿಗೆ ಸೇರಬೇಕೆಂಬ ಪ್ರಯತ್ನ ಕೈಗೂಡಲಿಲ್ಲ. ಮೈನೆ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನಕ್ಕೆ ಸೇರಿದ ಕೆಲಕಾಲದಲ್ಲಿಯೇ ಅದನ್ನು ತೊರೆದ ಷಾನ್ ಬದುಕಿನ ವಿಶ್ವವಿದ್ಯಾನಿಲಯದಲ್ಲಿ ಕಲಿಯಲು ಹೊರಟ. ಆತ ನೇರವಾಗಿ ಬಂದದ್ದು ಹಾಲಿವುಡ್ಗೆ. ಅದಾಗಲೇ ಆತನ ಸೋದರ ಫ್ರಾನ್ಸಿಸ್ ಫೋರ್ಡ್ ಮೂಕಿ ಚಿತ್ರಗಳಲ್ಲಿ ನಟನಾಗಿ, ನಿರ್ದೇಶಕನಾಗಿ ಸ್ವಲ್ಪಮಟ್ಟಿನ ಯಶಸ್ಸು ಕಂಡಿದ್ದ.
ಷಾನ್ ಓಫೀನಿ ತನ್ನ ವೃತ್ತಿ ಬದುಕನ್ನು ಹಾಲಿವುಡ್ನ ಪ್ರಸಿದ್ಧ ಸ್ಟುಡಿಯೋಗಳಲ್ಲೊಂದಾದ ಯೂನಿವರ್ಸಲ್ ಸ್ಟುಡಿಯೊನಲ್ಲಿ ಆರಂಭಿಸಿದಾಗ ಹತ್ತೊಂಬತ್ತರ ತರುಣ(1914). ಸ್ಟುಡಿಯೊದಲ್ಲಿ ಕೂಲಿಕಾರನಾಗಿ ನಂತರ ಸೆಟ್ ಸಹಾಯಕನಾಗಿ ದುಡಿದ. ಕ್ರಮೇಣ ಮೂಕಿ ಚಿತ್ರಗಳಲ್ಲಿ ನಟನಾಗಿ, ಸ್ಟಂಟ್ಮನ್ ಆಗಿ, ಮುಂದುವರಿದು ನಿರ್ದೇಶಕನಿಗೆ ಸಹಾಯಕನಾಗಿ ಭಡ್ತಿ ಪಡೆದ. ಹೀಗಾಗಿ ಸಿನೆಮಾ ನಿರ್ಮಾಣದ ತಳ ಹಂತದಿಂದ ಮೇಲಿನ ಹಂತದವರೆಗಿನ ಎಲ್ಲ ಕಸುಬುಗಳು ಕರಗತವಾದವು. ಸ್ಟುಡಿಯೊಗೆ ಬಂದು ಸೇರಿದ ಮೂರು ವರ್ಷಗಳಲ್ಲಿಯೇ ಸ್ವತಂತ್ರವಾಗಿ ನಿರ್ದೇಶಕನಾಗುವ ಹಂತ ತಲುಪಿದ್ದು ಕಂಡರೆ, ಷಾನ್ ತನ್ನ ವೃತ್ತಿ ಬದುಕಿನಲ್ಲಿ ಸಾಧಿಸಿದ್ದ ತನ್ಮಯತೆ ಎದ್ದು ಕಾಣುತ್ತದೆ.
1917ರ ನಂತರ ಅನೇಕ ಮೂಕಿ ಚಿತ್ರಗಳನ್ನು ನಿರ್ದೇಶಿಸಿದ ಷಾನ್(ಬಹುತೇಕ ಅವುಗಳು ಈಗ ಉಳಿದಿಲ್ಲ) 1920ರಲ್ಲಿ ಹಾಲಿವುಡ್ನ ಪ್ರಸಿದ್ಧ ಫಾಕ್ಸ್ ಸ್ಟುಡಿಯೊ ಸೇರಿದ. ಅಲ್ಲಿ ಆತ ‘ವೆಸ್ಟರ್ನ್’ ಶೈಲಿಯ ಚಿತ್ರಗಳನ್ನು ನಿರ್ದೇಶಿಸತೊಡಗಿ ಕ್ರಮೇಣ ತನ್ನ ವಿಶಿಷ್ಟ ನಿರೂಪಣಾ ಕ್ರಮದಿಂದ ಎಲ್ಲರ ಗಮನ ಸೆಳೆದ. ‘ವೆಸ್ಟರ್ನ್’ ಚಿತ್ರಗಳ ಶೈಲಿಗೆ ಹೊಸ ಭಾಷ್ಯವೊಂದನ್ನು ಬರೆದ. 1923ರಲ್ಲಿ ತನ್ನ ಹೆಸರನ್ನು ಜಾನ್ಫೋರ್ಡ್ ಎಂದು ಬದಲಿಸಿಕೊಂಡ.
‘ದಿ ಐರನ್ ಹಾರ್ಸ್’(1924) ಜಾನ್ಫೋರ್ಡ್ ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ‘ವೆಸ್ಟರ್ನ್’ ಶೈಲಿಯ ಸಿನೆಮಾಗಳಲ್ಲಿ ಆರಂಭದ ಕ್ಲಾಸಿಕ್ ಎನಿಸಿಕೊಂಡ ‘ದಿ ಐರನ್ ಹಾರ್ಸ್’ ಚಿತ್ರವು ಅಮೆರಿಕ ಖಂಡದಲ್ಲಿ ಹಳಿಗಳನ್ನು ಅಳವಡಿಸಿ ರೈಲುಮಾರ್ಗವನ್ನು ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ರೂಪಿಸಿದ ಕಥಾನಕ. ಈ ರೈಲು ಹಳಿಮಾರ್ಗ ಅಂತಿಂಥದ್ದಲ್ಲ. ಅದು ಅಮೆರಿಕ ಸಂಸ್ಥಾನದ ಪೂರ್ವ ಕರಾವಳಿ(ಅಟ್ಲಾಂಟಿಕ್ ಸಾಗರ)ಯಿಂದ ಹಿಡಿದು ಪಶ್ಚಿಮ ಕರಾವಳಿ(ಪೆಸಿಫಿಕ್ ಸಾಗರ)ಯವರೆಗೆ ನಿರ್ಮಿಸಿದ (1863-1869) ಬೃಹತ್ ರೈಲುಮಾರ್ಗದ ಜಾಲ. ಈ ರೈಲು ಮಾರ್ಗ ನಿರ್ಮಾಣ ಮಾಡಿದ ಯೂನಿಯನ್ ಪೆಸಿಫಿಕ್ ಸಂಸ್ಥೆಯಲ್ಲಿ ಫೋರ್ಡ್ನ ಚಿಕ್ಕಪ್ಪ ಕೂಲಿಕಾರನಾಗಿದ್ದ. ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪ ಹೇಳುತ್ತಿದ್ದ ಸಾಹಸಕತೆೆಗಳು ಬಾಲಕ ಫೋರ್ಡ್ನ ಕಲ್ಪನಾಲೋಕವನ್ನು ಉದ್ದೀಪಿಸಿರಬಹುದು. ಆ ಹಿನ್ನೆಲೆಯನ್ನು ಆರಿಸಿಕೊಂಡು ಫೋರ್ಡ್ ಅವರು ಒಂದು ಸಸ್ಪೆನ್ಸ್ ಚಿತ್ರವನ್ನು ಹೆಣೆದರು. ರೈಲು ಮಾರ್ಗ ನಿರ್ಮಾಣದ ಕಥಾ ಆಶಯಗಳ ಜೊತೆಗೆ ತನ್ನ ತಂದೆಯ ಕೊಲೆಗಾರರನ್ನು ಹುಡುಕಿಕೊಂಡು ಬರುವ ವ್ಯಕ್ತಿಯೊಬ್ಬನ ಕುತೂಹಲದ ಕತೆಯನ್ನು ಅದರಲ್ಲಿ ಜೋಡಿಸಲಾಗಿದೆ. ಕತೆ ನಡೆಯುವ ನೆವೆಡಾ ಪ್ರಾಂತದಲ್ಲಿಯೇ ಚಿತ್ರೀಕರಣ ಮಾಡಿದ ಫೋರ್ಡ್ ಅವರು ಅಮೆರಿಕದ ಭೂದೃಶ್ಯಗಳನ್ನು ಪ್ರೇಕ್ಷಕರು ತಲೆದೂಗುವಂತಹ ದೃಶ್ಯವೈಭವವನ್ನು ತೆರೆಯ ಮೇಲೆ ತಂದರು. ದಿಗಂತದಂಚಿನವರೆಗೂ ಕಾಣುವ ವಿಶಾಲವಾದ ಬಯಲು, ಕ್ಯಾಂಪ್ಫೈರ್ನ ದೃಶ್ಯಾವಳಿ, ರೆಡ್ ಇಂಡಿಯನ್ನರು ಕಾರ್ಮಿಕರನ್ನು ಸುತ್ತುವರಿದು ನಡೆಸುವ ದಾಳಿಯ ಜೊತೆಗೆ ಚಕಚಕನೆ ಓಡುವ ದೃಶ್ಯಗಳ ಸಂಕಲನವು ವೀಕ್ಷಕರನ್ನು ರೋಮಾಂಚನಗೊಳಿಸಿತ್ತು. ಲಾಂಗ್ಷಾಟ್ಗಳಲ್ಲಿ ಮೂಡಿದ ಅಮೆರಿಕ ಸಂಸ್ಥಾನದ ವಿಶಾಲ ಭೂದೃಶ್ಯ, ಕೊನೆಯಲ್ಲಿ ಯಾತನೆಯಿಂದ ನರಳುವ ಗಾಯಾಳುಗಳನ್ನು ಒಯ್ಯುವ ನಿಧಾನಗತಿಯಲ್ಲಿ ಚಲಿಸುವ ರೈಲಿನ ದೃಶ್ಯಗಳು ಆ ಕಾಲಕ್ಕೆ ದೃಶ್ಯ ವೈಭವವೊಂದನ್ನು ನಿರ್ಮಿಸಿದ್ದವು.
‘ದಿ ಐರನ್ ಹಾರ್ಸ್’ ಬಿಡುಗಡೆಯಾದಾಗ ಇಡೀ ಚಿತ್ರಜಗತ್ತಿನಲ್ಲಿ ಸಂಚಲನವೊಂದುಂಟಾಯಿತು. ಪ್ರೇಕ್ಷಕರು ಮತ್ತು ವಿಮರ್ಶಕರು ಮುಕ್ತವಾಗಿ ಹೊಗಳಿದರು. ಈ ಚಿತ್ರವು ನಿರ್ದೇಶಕ ಜಾನ್ಫೋರ್ಡ್ ಅವರನ್ನು ಹಾಲಿವುಡ್ನಲ್ಲಿ ಮುನ್ನೆಲೆಗೆ ತಂದು ನಿಲ್ಲಿಸಿತು. ದೈತ್ಯ ಪ್ರತಿಭೆಯೊಂದು ಅರಳಲು ಆರಂಭಿಸಿತು. ಸಾಹಸ ಕತೆಯ ಶೈಲೀಕೃತ ಚಿತ್ರಗಳಿಂದ ತುಂಬಿ ಹೋಗಿದ್ದ ಹಾಲಿವುಡ್ನ ನೀರಸ ತೋಟದಲ್ಲಿ ಸುವಾಸನೆಭರಿತ ಹೂವೊಂದು ಘಮಘಮಿಸಿ ಅರಳಿತು.
‘ದಿ ಐರನ್ ಹಾರ್ಸ್’ ಚಿತ್ರದ ಯಶಸ್ಸಿನಿಂದ ಉತ್ತೇಜಿತರಾದ ಫೋರ್ಡ್ ಅವರು ಮತ್ತಷ್ಟು ‘ವೆಸ್ಟರ್ನ್’ ಮಾದರಿಯ ಚಿತ್ರಗಳನ್ನು ನಿರ್ದೇಶಿಸಲು ಅಣಿಯಾದರು. ‘ವೆಸ್ಟರ್ನ್’ ಮಾದರಿಯ ಚಿತ್ರಗಳಿಗೆ, ಅಮೆರಿಕ ಮಾತ್ರವಲ್ಲ, ಜಗತ್ತಿನಾದ್ಯಂತ ಪ್ರೇಕ್ಷಕರಿದ್ದರು. ಈ ಹಿಂದೆ ಅಮೆರಿಕದ ಬಯಲಿನಲ್ಲಿ ಬದುಕುತ್ತಿದ್ದ ಸಾಹಸಿಗಳ ಜೀವನ ಕಥನವು ಗತಕಾಲದ ನೆನಪನ್ನು ಕೆದಕಿ ಅಮೆರಿಕದ ಸಾಹಸಿಗಳ ಚರಿತ್ರೆಯನ್ನು ಹೇಳುತ್ತಿತ್ತು. ಅದರ ಜೊತೆಗೆ ಪುರುಷನ ದೈಹಿಕ ಬಲದ ವಿಜಯ, ಕಷ್ಟವನ್ನು ಎದುರಿಸುವ ಸಹಿಷ್ಣುತೆ, ದುಷ್ಟತನದ ವಿರುದ್ಧ ಸಜ್ಜನಿಕೆಯ ಗೆಲುವುಗಳನ್ನು ಈ ಬಗೆಯ ಚಿತ್ರಗಳು ವೈಭವೀಕರಿಸುತ್ತಿದ್ದವು. ತನ್ನ ಕ್ರಿಯಾಶೀಲತೆಯನ್ನು ಬಸಿದು ಕಥನ ಕಟ್ಟುವ ಫೋರ್ಡ್ನ ನಿರ್ದೇಶನದಲ್ಲಿ ‘ವೆಸ್ಟರ್ನ್’ ಚಿತ್ರಗಳು ಭಾವಪೂರ್ಣ ಚಿತ್ರಗಳಾಗಿ ಅರಳಿದವು.
‘ದಿ ಐರನ್ ಹಾರ್ಸ್’ ಚಿತ್ರದ ನಂತರ 1927ರಲ್ಲಿ ಟಾಕಿ ಚಿತ್ರಗಳನ್ನು ನಿರ್ದೇಶಿಸಲು ಆರಂಭಿಸಿದ ಫೋರ್ಡ್ ಅವರು ದೃಶ್ಯದ ಭಾವತೀವ್ರತೆಯನ್ನು ಪರಿಣಾಮಕಾರಿಯಾಗಿ ಮೂಡಿಸಲು ಶಬ್ದ, ಸಂಭಾಷಣೆ ಮತ್ತು ಸಂಗೀತಗಳನ್ನು ಹದವರಿತು ಬಳಸತೊಡಗಿದರು. ಆ ನಿಟ್ಟಿನಲ್ಲಿ ಬಂದ, ಪ್ರಥಮ ಮಹಾಯುದ್ಧದ ಹಿನ್ನೆಲೆಯನ್ನು ಹೊಂದಿರುವ ಅವರ ‘ದಿ ಲಾಸ್ಟ್ ಪ್ಯಾಟ್ರೋಲ್’(1934) ಒಂದು ಗಮನಾರ್ಹ ಪ್ರಯತ್ನ. ಕೊಲೆ, ಕುತೂಹಲ, ಸಾಹಸ ಮತ್ತು ಮನುಷ್ಯನ ಅದಮ್ಯ ಶಕ್ತಿಗಳನ್ನು ಬಳಸಿಕೊಂಡ ಈ ಚಿತ್ರವು ಪ್ರೇಕ್ಷಕರಿಗೆ ಮೋಡಿ ಹಾಕಿತು. ಅದು ಯುದ್ಧದ ಘೋರತೆಯನ್ನು ಪರಿಚಯಿಸುವ ಚಿತ್ರವಲ್ಲ, ಬದಲು ಯುದ್ಧಕ್ಕೆ ಹೋಗುವ ಸೈನಿಕ ಪಡೆಯೊಂದು ಅನಿರೀಕ್ಷಿತವಾಗಿ ಎದುರಿಸುವ ಸಂಕಷ್ಟಗಳನ್ನು ಕುರಿತ ಚಿತ್ರ.
ಮೊದಲ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ಸೇನೆಯ ತುಕಡಿಯೊಂದು ಮೆಸಪಟೋಮಿಯಾ ಮರಳುಗಾಡಿನಲ್ಲಿ ಪಡುವ ಸಂಕಷ್ಟಗಳು ಈ ಚಿತ್ರದ ಬಹುಭಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಮರುಭೂಮಿಯಲ್ಲಿ ಸಾಗುವಾಗ ಅಗೋಚರವಾದ ಅರಬ್ ಸೈನಿಕನ ಗುಂಡಿಗೆ ಸೇನಾ ತುಕಡಿಯ ನಾಯಕ ಅಸು ನೀಗುತ್ತಾನೆ. ಆದರೆ ತಾವು ಸಾಗುತ್ತಿರುವ ಉದ್ದೇಶವನ್ನು ತುಕಡಿಯ ಯಾವ ಸೈನಿಕನಿಗೂ ನಾಯಕ ತಿಳಿಸಿರದ ಕಾರಣ ಆ ತುಕಡಿಯ ಸಾರ್ಜೆಂಟ್ ದಿಕ್ಕುಗೆಡುತ್ತಾನೆ. ಹಾಗಾಗಿ ಮತ್ತೆ ಬ್ರಿಟಿಷ್ ಸೈನ್ಯಕ್ಕೆ ವಾಪಸಾಗಲು ನಿರ್ಧರಿಸುತ್ತಾನೆ. ಆದರೆ ತಾವಿರುವ ಸ್ಥಳ ಅಥವಾ ಬ್ರಿಟಿಷ್ ಸೈನ್ಯ ಬೀಡುಬಿಟ್ಟಿರುವ ನೆಲೆ ಎರಡೂ ತಿಳಿಯದ ಸೇನೆ ಹುಡುಕಾಟ ಮುಂದುವರಿಸುತ್ತದೆ. ಆ ಸಮಯದಲ್ಲಿ ಸೈನಿಕರು ಒಬ್ಬೊಬ್ಬರಾಗಿ ಕೊಲೆಯಾಗುತ್ತಾರೆ. ಆದರೆ ಅವರನ್ನು ಕೊಲ್ಲುವ ಶತ್ರುಗಳು ಕಣ್ಣಿಗೆ ಕಾಣಿಸುವುದಿಲ್ಲ. ಕೊನೆಗೆ ಶತ್ರುವನ್ನು ಹುಡುಕಲು ನಿಯೋಜನೆಗೊಂಡು ಹೊರಟ ಇಬ್ಬರು ಕೊಲೆಯಾಗುತ್ತಾರೆ. ಬ್ರಿಟಿಷ್ ಸೇನಾ ವಿಮಾನದ ಪೈಲಟ್ ಒಬ್ಬ ಮರುಭೂಮಿಯಲ್ಲಿ ಅಳಿದುಳಿದ ಸೈನಿಕರನ್ನು ಪತ್ತೆ ಹಚ್ಚುತ್ತಾನೆ. ವಿಮಾನವನ್ನು ಕೆಳಗಿಳಿಸಿದ ಆತನೂ ಅಗೋಚರ ಶತ್ರುವಿನಿಂದ ಹತನಾಗುತ್ತಾನೆ. ವಿಮಾನದಿಂದ ಮಿಷಿನ್ಗನ್ ಕೆಳಗಿಳಿಸಿದ ಸೈನಿಕರು ವಿಮಾನಕ್ಕೆ ಬೆಂಕಿ ಇಟ್ಟು ಬ್ರಿಟಿಷರ ಗಮನ ಸೆಳೆಯಲು ಯತ್ನಿಸುತ್ತಾರೆ. ಎಲ್ಲರೂ ಅಳಿದು ಕೊನೆಗೆ ಉಳಿಯುವ ಸಾರ್ಜೆಂಟ್ ಏಕಾಂಗಿಯಾಗಿ ಮಿಷಿನ್ ಗನ್ ಬಳಸಿ ಶತ್ರುಗಳನ್ನು ಬಲಿಹಾಕುತ್ತಾನೆ. ಆ ರಣಾಂಗಣದಲ್ಲಿ ಎದ್ದ ಹೊಗೆಯನ್ನು ಗುರುತಿಸಿ ಬರುವ ಮತ್ತೊಂದು ಬ್ರಿಟಿಷ್ ಸೇನಾ ತುಕಡಿ ಉಳಿದ ಆ ಸಾರ್ಜೆಂಟ್ನನ್ನು ರಕ್ಷಿಸುತ್ತದೆ.
ಮನುಷ್ಯನ ದುಸ್ಸಾಹಸಗಳನ್ನು ಬಗೆಬಗೆಯಾಗಿ ನಿರೂಪಿಸಿದ ಈ ಚಿತ್ರ ಜನಪ್ರಿಯವಾಯಿತು. ಫೋರ್ಡ್ ಮತ್ತೊಮ್ಮೆ ಸಾಹಸಿ ಚಿತ್ರಗಳನ್ನು ಕೇವಲ ರಂಜನೆಯ ಮಟ್ಟಕ್ಕೆ ನಿಲ್ಲಿಸದೆ ತಾತ್ವಿಕ ಚಿಂತನೆಯ ಹಂತಕ್ಕೆ ವಿಸ್ತರಿಸಿದರು.
‘ದಿ ಲಾಸ್ಟ್ ಪ್ಯಾಟ್ರೋಲ್’ ಚಿತ್ರದಲ್ಲಿ ಸಾರ್ಜೆಂಟ್ ಪಾತ್ರ ನಿರ್ವಹಿಸಿದ ನಟ ವಿಕ್ಟರ್ ಮ್ಯಾಕ್ಲಾಗ್ಲೆನ್ ಅವರ ಅಭಿನಯ ಕೌಶಲ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ತಯಾರಾದ ‘ದಿ ಇನ್ಫಾರ್ಮರ್’(1936) ಚಿತ್ರವು ಜಾನ್ಫೋರ್ಡ್ ಅವರನ್ನು ವಿಶ್ವದ ಅಗ್ರಮಾನ್ಯ ನಿರ್ದೇಶಕರ ಪಟ್ಟಿಯಲ್ಲಿ ತಂದುಕೂರಿಸಿತು. ಸಾಹಸಚಿತ್ರಗಳಿಂದ ಸ್ವಲ್ಪವಿರಾಮ ಪಡೆದ ಫೋರ್ಡ್ ಅವರು ಮನುಷ್ಯನ ದೌರ್ಬಲ್ಯಗಳು, ಆಸೆಗಳು ತರುವ ಪಲ್ಲಟಗಳು ಹಾಗೂ ಕಾಡುವ ಪಾಪಪ್ರಜ್ಞೆಯ ಅಗ್ನಿಕುಂಡದಲ್ಲಿ ಬೇಯುವ ಮನಸ್ಸಿನ ಸ್ಥಿತಿಗತಿಗಳನ್ನು ತೆರೆದಿಟ್ಟ ಚಿತ್ರವನ್ನು ಇನ್ಫಾರ್ಮರ್ ಮೂಲಕ ರೂಪಿಸಿದರು.
ಇಪ್ಪತ್ತನೆಯ ಶತಮಾನದ ಎರಡನೇ ದಶಕದಲ್ಲಿ ಗಲಭೆಪೀಡಿತ ಡಬ್ಲಿನ್ ನಗರದಲ್ಲಿ ನಡೆಯುವ ದ್ರೋಹದ ಕತೆಯೇ ಈ ಚಿತ್ರದ ತಿರುಳು. ಐರ್ಲ್ಯಾಂಡ್ ಪ್ರಭುತ್ವದ ವಿರುದ್ಧ ದಂಗೆಯೆದ್ದ ಬಂಡುಕೋರ ಸಂಘಟನೆಯಲ್ಲಿ ಗೈಪೊ ನೊಲಾನ್ ಎಂಬ ವ್ಯಕ್ತಿ ಒಬ್ಬ ಕಾರ್ಯಕರ್ತ. ಯಾವುದೋ ಕಾರಣಕ್ಕಾಗಿ ಸಂಘಟನೆ ಅವನನ್ನು ಹೊರಹಾಕುತ್ತದೆ. ಪ್ರಿಯತಮೆ ಕೇಟಿ/ಕ್ಯಾಥರಿನ್ ಬಡತನ ತಾಳಲಾರದೆ ವೇಶ್ಯಾವೃತ್ತಿಗಿಳಿದಿರುವುದು ಈಗ ಬದುಕಲು ದಾರಿಯಿಲ್ಲದ ಅವನ ದುಃಖವನ್ನು ನೂರ್ಮಡಿಸಿದೆ. ಇವೆಲ್ಲದಕ್ಕೂ ಇತಿಶ್ರೀ ಹಾಡಲು ಗೈಪೋ ಹಣವನ್ನು ಪಡೆದು ತನ್ನ ಹಿಂದಿನ ಬಂಡುಕೋರ ಸಂಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ದ್ರೋಹವೆಸಗುತ್ತಾನೆ. ಆದರೆ ಆ ದ್ರೋಹ ಅವನ ಆತ್ಮಸಾಕ್ಷಿಯನ್ನು ಹಿಂಸಿಸತೊಡಗುತ್ತದೆ. ಆನಂತರ ಭಾವನಾತ್ಮಕ ತಾಕಲಾಟಗಳು ಇಡೀ ಸಿನೆಮಾವನ್ನು ಆವರಿಸಿಕೊಳ್ಳುತ್ತವೆ.
ಈ ಚಿತ್ರದ ಕತೆ ಕೇಳಿದ ಸ್ಟುಡಿಯೊ ಮಾಲಕರು ನಿರ್ಮಾಣಕ್ಕೆ ಹಿಂದೆಗೆದರೂ ಜಾನ್ಫೋರ್ಡ್ ಅವರೊಂದಿಗೆ ಹೋರಾಟ ನಡೆಸಿ, ಅವರು ವಿಧಿಸಿದ ಷರತ್ತುಗಳಿಗೆ ಹಾಗೂ ಕಡಿಮೆ ಬಜೆಟ್ಗೆ ಒಪ್ಪಿಹದಿನೇಳು ದಿನಗಳಲ್ಲಿ ಚಿತ್ರವನ್ನು ಸಿದ್ಧಪಡಿಸಿದರು. ಚಿತ್ರವು ಸಾಧಾರಣ ಯಶಸ್ಸು ಕಂಡರೂ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಆ ವರ್ಷ ಆಸ್ಕರ್ ಪ್ರಶಸ್ತಿಯ ಆರು ವಿಭಾಗಗಳಿಗೆ ನಾಮಕರಣಗೊಂಡು ಉತ್ತಮ ನಿರ್ದೇಶಕ(ಜಾನ್ಫೋರ್ಡ್) ನಟ ಪ್ರಶಸ್ತಿಯೂ ಸೇರಿದಂತೆ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿತು.
ಅದೇ ವರ್ಷ ಫೋರ್ಡ್ ಅವರು ಅಂದಿನ ಅಮೆರಿಕದಲ್ಲಿ ಯುವ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ‘ಗ್ಯಾಂಗ್ಸ್ಟರ್’ಗಳ ಕೃತ್ಯವನ್ನು ಅಣಕಿಸುವ ‘ದಿ ಹೋಲ್ ಟೌನ್ ಈಸ್ ಟಾಕಿಂಗ್’ ಸಿನೆಮಾ ನಿರ್ದೇಶಿಸಿದರು. ಚಿಕಾಗೋದಲ್ಲಿ ಮಾಫಿಯಾ ದೊರೆ ಆಲ್ ಕೆಪೂನ್ ಕುಖ್ಯಾತನಾಗಿದ್ದ ಕಾಲವದು. ಆಲ್ ಕೆಪೂನ್ ಮತ್ತವನ ಚಿಕಾಗೊ ಗೂಂಡಾಪಡೆಯ ದುಷ್ಕೃತ್ಯಗಳನ್ನು, ದುಸ್ಸಾಹಸಗಳನ್ನು ಆದರ್ಶ, ಅನುಕರಣೀಯವೆಂಬಂತೆೆ ಅಮೆರಿಕದ ಯುವ ಜನತೆ ಅಭಿಮಾನದಿಂದ ನೋಡುತ್ತಿದ್ದ ಕಾಲ. ಅದನ್ನು ಗೇಲಿ ಮಾಡುವ ಉದ್ದೇಶದಿಂದ ಒಬ್ಬ ಸಭ್ಯ ಆದರೆ ಹೇಡಿಯಾದ ಗುಮಾಸ್ತ ಜಾನ್ ಮತ್ತು ಅವನನ್ನೇ ಹೋಲುವ ಗೂಂಡಾ ಮ್ಯಾನಿನ್ ಅವರು ಅದಲು ಬದಲಾಗಿ ವಿನೋದ ಪ್ರಸಂಗಗಳನ್ನು ಸೃಷ್ಟಿಸುತ್ತಾರೆ. ಅಂತಿಮವಾಗಿ ಗೂಂಡಾ ಹತನಾಗಿ ಸಭ್ಯಸ್ಥ ಜಾನ್ ಬಹುಮಾನ ಪಡೆಯುತ್ತಾನೆ.
ಜಾನ್ಫೋರ್ಡ್ ಸೃಷ್ಟಿಸಿದ ಒಂದೇ ರೂಪದ ಆದರೆ ಗುಣದಲ್ಲಿ ಧ್ರುವಾಂತರವಿರುವ ಪಾತ್ರಗಳ ಚಿತ್ರಗಳು ಮುಂದೆ ಟ್ರೆಂಡ್ ಆಗಿ ಬೆಳೆಯಿತು(ಡಬಲ್ ಆ್ಯಕ್ಟಿಂಗ್ ಎಂಬ ಜನಪ್ರಿಯ ಹೆಸರು ಗಳಿಸಿತು). ಭಾರತದಲ್ಲಂತೂ ‘ರಾಮ್ ಔರ್ ಶ್ಯಾಂ’, ‘ಎಂಗವೀಟ್ಟು ಪಿಳ್ಳೈ’ನಿಂದ ಹಿಡಿದು ‘ಭಲೇ ಜೋಡಿ’, ‘ಒಂದೇ ರೂಪ ಎರಡು ಗುಣ’, ‘ಸೀತಾ ಔರ್ ಗೀತಾ’, ‘ರವಿ-ಚಂದ್ರ’ನವರೆಗೆ ನೂರಾರು ಚಿತ್ರಗಳು ಅವತರಿಸಿವೆ. ‘ಸತಿ ಶಕ್ತಿ’ಯಂಥ ಜಾನಪದ/ಪೌರಾಣಿಕ ಚಿತ್ರಗಳಿಗೂ ಅದೇ ಸ್ಫೂರ್ತಿ. ಹಾಗೆ ನೋಡಿದರೆ ಮಹೇಶ್ಭಟ್ ನಿರ್ದೇಶಿಸಿ ಜೂಹಿ ಚಾವ್ಲಾ, ಸೋನಾಲಿ ಬೇಂದ್ರೆ ಜೊತೆ ದ್ವಿಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದ ಹಿಂದಿ ಚಿತ್ರ ‘ಡೂಪ್ಲಿಕೇಟ್’(1998)ನ ಕತೆ ಮತ್ತು ಪಾತ್ರಗಳು ಸಂಪೂರ್ಣವಾಗಿ ‘ದಿ ಹೋಲ್ ಟೌ