‘ನ್ಯೂ ಇಂಡಿಯಾ’ದ ಗುಪ್ತ ಪಠ್ಯ
ಒಂದು ಪ್ರಜಾಪ್ರಭುತ್ವವನ್ನು ನಿಜವಾಗಿಯೂ ನಾಶ ಮಾಡಬೇಕಿದ್ದರೆ ಅರಾಜಕತೆಗೆ ಸಾಂಸ್ಥಿಕ ರೂಪ ನೀಡಿ ನೈತಿಕ ದಿವಾಳಿತನಕ್ಕೆ ಸಂಪೂರ್ಣ ಶ್ರೀರಕ್ಷೆ ನೀಡುವುದು ಅನಿವಾರ್ಯ. ಕಳೆದ ಐದು ವರ್ಷಗಳಲ್ಲಿ ಇಡೀ ದೇಶಾದ್ಯಂತ ಇದೇ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಏಕೆಂದರೆ ಇರುವ ಹಳೆ ವ್ಯವಸ್ಥೆ ಸಂಪೂರ್ಣ ನಿರ್ನಾಮವಾದರೆ ಮಾತ್ರ ಒಬ್ಬ ಸರ್ವಾಧಿಕಾರಿ ತನ್ನ ಹೊಸ ಸರ್ವಾಧಿಕಾರಿ ವ್ಯವಸ್ಥೆಯನ್ನು ಸ್ಥಾಪಿಸಬಹುದು. ಆಗ ಮಾತ್ರ ಅದನ್ನು ಹೊಸ ವ್ಯವಸ್ಥೆ ಅಥವಾ ನಮ್ಮ ದೇಶದ ವಿಷಯದಲ್ಲಿ ಹೊಸ ಇಂಡಿಯಾ ಎಂದು ಕರೆಯಲು ಸಾಧ್ಯ.
ಈ ಗುಪ್ತ ಪಠ್ಯ ಎಂಬ ಪದ ಶಿಕ್ಷಣ ತಜ್ಞರ ನಡುವೆ ಮೊದಲು ಪ್ರಸಿದ್ಧಿ ಪಡೆದಿದ್ದು ೧೯೬೦ರಲ್ಲಿ. ‘‘ಶಾಲೆಗಳಲ್ಲಿ ಬಹಿರಂಗವಾಗಿ ಹೇಳದ ಆದರೆ ಕಲಿತು ಬಿಡುವ’’ ಪಠ್ಯಗಳು ಇವು ಎಂದು ಅಮೆರಿಕನ್ ವಿದ್ವಾಂಸ ಹಾಗೂ ಸಾಂಸ್ಕೃತಿಕ ವಿಮರ್ಶಕ ಹೆನ್ರಿ ಗಿರೋ ಇದನ್ನು ವ್ಯಾಖ್ಯಾನಿಸಿದ್ದರು.
ಒಂದು ಶಾಲೆಯ ಅಧಿಕೃತ ಪಠ್ಯದಲ್ಲಿ ಹೇಳದೆ ಇರುವ ಆದರೆ ಶಾಲೆಗೆ ಹೋದಾಗ ಅಲ್ಲಿನ ಅನುಭವಗಳ ಮೂಲಕ ಮಕ್ಕಳು ಕಲಿತುಕೊಳ್ಳುವ ವಿಷಯಗಳು ಈ ಗುಪ್ತ ಪಠ್ಯದಲ್ಲಿರುತ್ತವೆ. ಅದು ಮೌಲ್ಯಗಳು, ನೈತಿಕತೆ, ವರ್ತನೆ ಇತ್ಯಾದಿಗಳಿರಬಹುದು. ಅವುಗಳನ್ನು ಪಠ್ಯ ಎಂದು ಅಧಿಕೃತವಾಗಿ ಕಲಿಸದಿದ್ದರೂ ವಿದ್ಯಾರ್ಥಿಗಳು ಅಲ್ಲಿ ಕಲಿತುಕೊಂಡು ಬಿಡುತ್ತಾರೆ.
ಶಾಲೆಗಳಲ್ಲೇ ಹೀಗೆ ಗುಪ್ತ ಪಠ್ಯ ಇದ್ದರೆ ಇನ್ನು ಸರಕಾರಗಳಿಗೆ ಅದು ಇದ್ದೇ ಇರುತ್ತದೆ.
ಒಂದು ಸರಕಾರದ ಗುಪ್ತ ಪಠ್ಯ (ಅಜೆಂಡಾ) ಅದು ಅಧಿಕೃತವಾಗಿ ಘೋಷಿಸಿದ ಪ್ರಣಾಳಿಕೆಗಿಂತ ತೀರಾ ಭಿನ್ನವಾಗಿರುತ್ತದೆ ಮತ್ತು ಅದು ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತವಾಗುತ್ತದೆ. ಆ ಸರಕಾರದ ನಾಯಕರ ವರ್ತನೆಯಲ್ಲಿ, ಅವರು ಜನರಿಗೆ ರವಾನಿಸುವ ಸಂದೇಶಗಳಲ್ಲಿ, ಅವರು ಯಾವುದನ್ನು ಕ್ಷಮಿಸುತ್ತಾರೆ ಮತ್ತು ಯಾವುದನ್ನು ಖಂಡಿಸುತ್ತಾರೆ, ಅವರು ತೆರಿಗೆದಾರರ ದುಡ್ಡನ್ನು ಹೇಗೆ ಖರ್ಚು ಮಾಡುತ್ತಾರೆ ಹಾಗೂ ಸಮಾಜದ ಅತ್ಯಂತ ದುರ್ಬಲ ವರ್ಗವನ್ನು ಅವರು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರಲ್ಲಿ ಈ ಅಜೆಂಡಾ ವ್ಯಕ್ತವಾಗುತ್ತದೆ.
ಒಂದು ಸರಕಾರದ ಗುಪ್ತ ಅಜೆಂಡಾ ಬಹಳ ಕಾಲದವರೆಗೆ ಗುಪ್ತವಾಗಿರುವುದಿಲ್ಲ. ಏಕೆಂದರೆ ನಿಮಗೆ ಅದರ ಅರಿವಾಗುವ ಮೊದಲೇ ಅದು ದೇಶದ ವರ್ತಮಾನದ ಮನೋಭಾವವಾಗಿ ಅಲ್ಲಿನ ಬಹುಸಂಖ್ಯೆಯ ಜನರ ವರ್ತನೆಗಳಲ್ಲಿ ಸ್ಪಷ್ಟವಾಗಿ ಕಾಣತೊಡಗುತ್ತದೆ.
ಈ ಗುಪ್ತ ಅಜೆಂಡಾ ಸಾಕಷ್ಟು ಸಮಯ ಮೇಲ್ಪದರಕ್ಕೆ ಬರುವುದಿಲ್ಲ. ಅದು ನಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತಿದೆ ಎಂಬುದು ನಮಗೆ ಆಗ ಗೊತ್ತಾಗುವುದಿಲ್ಲ. ಅದು ಮೇಲ್ಪದರದ ಕೆಳಗೆ ಅದೆಷ್ಟು ಗಾಢವಾಗಿ ಬೇರೂರಿದೆ ಎಂದು ನಮಗೆ ಅರಿವಾಗುವಾಗ ಸಾಕಷ್ಟು ಸಮಯವಾಗಿ ಹೋಗಿರುತ್ತದೆ. ಗಾದೆಯಲ್ಲಿ ಹೇಳಿದ ಆ ಕಪ್ಪೆಯನ್ನು ಕುದಿಯುವ ನೀರಿನ ಪಾತ್ರೆಯಲ್ಲಿ ಹಾಕಿಟ್ಟು ಅಲ್ಲಿನ ವಾಸ್ತವ ಗೊತ್ತಾಗುವಷ್ಟರೊಳಗೆ ಅದು ಬೆಂದು ಹೋಗುವ ಹಾಗೆ ನಮ್ಮನ್ನು ನಮಗೆ ಗೊತ್ತಾಗದ ಹಾಗೆ ನಿಧಾನವಾಗಿ ನಾವು ಈ ಹಿಂದೆಂದೂ ಆಗಿರದಂತಹ ಮನುಷ್ಯರಾಗಿ ಬದಲಾಯಿಸಲಾಗಿದೆ.
ಕಳೆದ ಐದು ವರ್ಷಗಳ ಗುಪ್ತ ಅಜೆಂಡಾ ನಮ್ಮನ್ನು ಹೇಗೆ ಬದಲಾಯಿಸಿದೆ? ನಾವು ಅರಗಿಸಿಕೊಳ್ಳುವಂತೆ ಮಾಡಲಾದ ಅತಿದೊಡ್ಡ ಪಾಠ ಹಾಗೂ ಸಂದೇಶಗಳು ಏನೇನು? ನಾವು ಎಂದೆಂದೂ ಮುಗಿಯದ ಈ ಬ್ರೇಕಿಂಗ್ ನ್ಯೂಸ್‌ನ ಬೊಬ್ಬೆಯನ್ನು ಹಾಗೂ ಸೋಷಿಯಲ್ ಮೀಡಿಯಾದ ಅಭಿಪ್ರಾಯ ಪ್ರವಾಹಗಳನ್ನು ಮೀರಿ ನೋಡಿದರೆ ನಮಗೆ ಹಲವು ಸಂದೇಶಗಳನ್ನು ನೀಡಲಾಗಿದೆ ಎಂಬುದು ಮನವರಿಕೆಯಾಗುತ್ತದೆ:
ಒಂದು ಧರ್ಮ ಇನ್ನೊಂದಕ್ಕಿಂತ ಉತ್ತಮ ಹಾಗೂ ಒಂದು ಸಮುದಾಯವನ್ನು ಈ ದೇಶದ ಇತರ ಸಮುದಾಯಗಳಿಗಿಂತ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನಮಗೆ ಹೇಳಲಾಗಿದೆ. ಈ ದೇಶದ ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಕಿತ್ತೆಸೆದು ಇಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆ ಪ್ರಜೆಗಳಾಗಿ ಮಾಡಬೇಕು ಎಂಬುದು ಇಲ್ಲಿನ ಆಳುವವರ ಉದ್ದೇಶ ಮತ್ತು ಬಯಕೆ ಎಂಬುದನ್ನು ನಮಗೆ ಹೇಳಲಾಗಿದೆ. ಹಾಗೆಯೆ ಆಳುವವರಿಗೆ ಬಡವರಿಗಿಂತ ಶ್ರೀಮಂತರ ಬಗ್ಗೆಯೇ ಹೆಚ್ಚು ಪ್ರೀತಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಶಿಷ್ಟರನ್ನೆ ಶಿಕ್ಷಿಸಿ ದುಷ್ಟರನ್ನು ಬಿಟ್ಟು ಬಿಡುವುದನ್ನು ನಾವು ನೋಡಿದ್ದೇವೆ. ಬಲವೇ ಸರಿ ಎಂಬುದನ್ನು ನಮಗೆ ಹೇಳಲಾಗಿದೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಇನ್ನೂ ಆಳವಾಗಿ ಬೇರೂರಿಸಿ ವ್ಯಾಪಕವಾಗಿ ಹಬ್ಬಿರುವ ಇನ್ನೊಂದು ಸಂದೇಶವನ್ನು ನಮಗೆ ನೀಡಲಾಗಿದೆ.
ನಿರಾಕರಣೆಯ ಸ್ವರೂಪದ ಆ ಸಂದೇಶವನ್ನು ಎರಡೇ ಪದಗಳಲ್ಲಿ ಹೇಳಬೇಕು ಎಂದರೆ: ‘ಯಾವುದೂ ಲೆಕ್ಕಕ್ಕಿಲ್ಲ’.
ಸ್ವಲ್ಪಯೋಚಿಸಿ ನೋಡಿ. ಕಳೆದ ಐದು ವರ್ಷಗಳಲ್ಲಿ ನಾವು ಈ ಹಿಂದೆ ಬಹಳ ಮುಖ್ಯ ಎಂದು ಪರಿಗಣಿಸಿದ್ದ ಎಲ್ಲವನ್ನೂ ಈಗ ಅದು ಲೆಕ್ಕಕ್ಕಿಲ್ಲ ಎಂದು ಹೇಳಲಾಗಿದೆ.
ನಮಗೆ ಮತ್ತೆ ಮತ್ತೆ ಸತ್ಯ ಲೆಕ್ಕಕ್ಕಿಲ್ಲ, ಕಾನೂನು ಲೆಕ್ಕಕ್ಕಿಲ್ಲ, ಬಡವರು ಲೆಕ್ಕಕ್ಕಿಲ್ಲ, ಐಕ್ಯತೆ ಲೆಕ್ಕಕ್ಕಿಲ್ಲ, ಶಿಕ್ಷಣ ಲೆಕ್ಕಕ್ಕಿಲ್ಲ
ಸತ್ಯ ಲೆಕ್ಕಕ್ಕಿಲ್ಲ: ಏಕೆಂದರೆ ಸತ್ಯಕ್ಕೆ ನಿಜವಾಗಿಯೂ ಬೆಲೆ ಇದ್ದಿದ್ದರೆ ಭಾರತದ ಪ್ರಮುಖ ಟಿವಿ ಚಾನಲ್‌ಗಳು ಸರಕಾರದ ಕಾರ್ಯವೈಖರಿ ಬಗ್ಗೆ ಈಗಿರುವುದಕ್ಕಿಂತ ಹೆಚ್ಚು ವಸ್ತುನಿಷ್ಠವಾಗಿ, ನಿಷ್ಠುರವಾಗಿ ವರದಿ ಮಾಡುತ್ತಿದ್ದವು. ಸತ್ಯಕ್ಕೆ ಬೆಲೆ ಇದ್ದಿದ್ದರೆ ಈ ದೇಶದ ಅತಿದೊಡ್ಡ ಮೀಡಿಯಾ ಸಂಸ್ಥೆಗಳ ಮಾಲಕರು ‘ಆಚಾರ್ಯ ಅಟಲ್’ ಎದುರು ಕುಳಿತುಕೊಳ್ಳುತ್ತಿರಲಿಲ್ಲ. ಆತ ಈ ದೇಶದಲ್ಲೇ ಖ್ಯಾತ ಮೀಡಿಯಾ ಸಂಸ್ಥೆಗಳ ಮಾಲಕರ ಮೇಲೆ ನಡೆಸಲಾದ ಅತಿದೊಡ್ಡ ಕುಟುಕು ಕಾರ್ಯಾಚರಣೆ ಮಾಡಿದ ವ್ಯಕ್ತಿ.
ಕಾನೂನು ಲೆಕ್ಕಕ್ಕಿಲ್ಲ: ಈ ದೇಶದ ಅಟಾರ್ನಿ ಜನರಲ್ ಒಂದು ದಿನ ರಕ್ಷಣಾ ಸಚಿವಾಲಯದಿಂದ ಪ್ರಮುಖ ದಾಖಲೆಗಳು ಕಳವಾಗಿವೆ ಎಂದು ಹೇಳಿ ಒಂದೆರಡು ದಿನ ಬಿಟ್ಟು ಬಂದು ನಿಜವಾಗಿ ಆ ದಾಖಲೆಗಳ ನಕಲು ಪ್ರತಿಗಳು ಮಾತ್ರ ಕಳವಾಗಿವೆ ಎಂದು ನಾನು ಹೇಳಿದ್ದು ಎಂದಾಗ ಈ ದೇಶದಲ್ಲಿ ಕಾನೂನು ಒಂದು ಜೋಕಾಗಿ ಬಿಟ್ಟಿದೆ ಎಂಬ ಸಂದೇಶ ರವಾನೆಯಾಯಿತು. ಸುಧಾ ಭಾರದ್ವಾಜ್ ಅವರಂತಹ ಸಾಮಾಜಿಕ ಕಾರ್ಯಕರ್ತರನ್ನು ದೇಶದ್ರೋಹಿಗಳು ಎಂದು ಹಣೆಪಟ್ಟಿ ಹಚ್ಚಿ ಜೈಲಿಗೆ ಕಳುಹಿಸಿ ಬಾಬು ಬಜರಂಗಿ ಜೈಲಿನಿಂದ ಬಿಡುಗಡೆಯಾದಾಗ ಈ ದೇಶದಲ್ಲಿ ಇನ್ನು ಕಾನೂನು ಲೆಕ್ಕಕ್ಕಿಲ್ಲ ಎಂದು ನಮಗೆ ಸಂದೇಶ ನೀಡಲಾಯಿತು.
ಬಡವರು ಲೆಕ್ಕಕ್ಕಿಲ್ಲ: ಏಕೆಂದರೆ ಬಡವರ ಬಗ್ಗೆ ಕಾಳಜಿ ಇದ್ದಿದ್ದರೆ ಆ ಹೃದಯ ಹೀನ ನೋಟು ರದ್ದತಿಯನ್ನು ಇಲ್ಲಿ ತರುತ್ತಿರಲಿಲ್ಲ. ಒಂದು ಸಹಿ ಹಾಕಿ ಅವರ ಭೂಮಿ ಹಾಗೂ ಅರಣ್ಯವನ್ನು ಅವರಿಂದ ಕಿತ್ತುಕೊಳ್ಳುತ್ತಿರಲಿಲ್ಲ. ಅವರ ಬಗ್ಗೆ ಏನಾದರೂ ಕಾಳಜಿ ಇದ್ದಿದ್ದರೆ ಆ ಬೃಹತ್ ಪ್ರತಿಮೆಗೆ ಬಳಸಿದ ೩,೦೦೦ ಕೋಟಿ ರೂಪಾಯಿಯನ್ನು ಬಡವರ ಕಲ್ಯಾಣ ಯೋಜನೆಗಳಿಗೆ ಬಳಸಲಾಗುತ್ತಿತ್ತು.
ಐಕ್ಯತೆ ಲೆಕ್ಕಕ್ಕಿಲ್ಲ: ಈ ದೇಶದ ಇತಿಹಾಸದಲ್ಲೇ ಅತಿದೊಡ್ಡ ರೈತ ರ್ಯಾಲಿ ರಾಜಧಾನಿ ತಲುಪಿದಾಗ ಇಲ್ಲಿನ ಪ್ರಮುಖ ಮಾಧ್ಯಮಗಳಲ್ಲಿ ಅದರ ಬಗ್ಗೆ ಚರ್ಚೆಯೇ ಆಗುವುದಿಲ್ಲ ಎಂದರೆ ಇಲ್ಲಿ ಐಕ್ಯತೆ ಲೆಕ್ಕಕ್ಕೇ ಇಲ್ಲ ಎಂದಾಯಿತು. ಶ್ರೀಮಂತರು ದೇಶ ಬಿಟ್ಟು ಹೋಗಲು ಸುಲಭವಾಗಿ ಸಾಧ್ಯವಾಗುತ್ತದೆ. ಆದರೆ ಕಳೆದ ಅರ್ಧ ಶತಮಾನದಲ್ಲೇ ಅತ್ಯಂತ ಹೆಚ್ಚು ನಿರುದ್ಯೋಗ ದರ ಇರುವ ದೇಶದಲ್ಲಿ ಬಡವರು ಮಾತ್ರ ಹಾಗೆ ಉಳಿದು ಬಿಡುತ್ತಾರೆ ಎಂದರೆ ಇಲ್ಲಿನ ಸರಕಾರಕ್ಕೆ ಐಕ್ಯತೆ ಈಗ ಲೆಕ್ಕಕ್ಕೇ ಇಲ್ಲ ಎಂದು ಖಚಿತವಾಯಿತು.
ಶಿಕ್ಷಣ ಲೆಕ್ಕಕ್ಕಿಲ್ಲ: ಶಿಕ್ಷಣ ನಿಜಕ್ಕೂ ಲೆಕ್ಕಕ್ಕೆ ಇದ್ದಿದ್ದರೆ ವಿಶ್ವವಿದ್ಯಾನಿಲಯಗಳು ಹಾಗೂ ಪ್ರಾಥಮಿಕ ಶಿಕ್ಷಣದ ಬಜೆಟ್ ಅನುದಾನವನ್ನು ಇಷ್ಟು ಕಡಿತ ಮಾಡುತ್ತಿದ್ದರೆ?
ಇದೆಲ್ಲ ಈಗ ಲೆಕ್ಕಕ್ಕೇ ಇಲ್ಲ.
ಈಗ ಈ ದೇಶದಲ್ಲಿ ಮುಖ್ಯವಾಗಿರುವುದು ಆ ಮಹಾ ನಾಯಕ ಮಾತ್ರ. ಆ ನಾಯಕ ಈಗ ಇಡೀ ದೇಶವನ್ನು ತನ್ನದೇ ಇಮೇಜಿನಲ್ಲಿ ಪುನಃಸ್ಥಾಪಿಸುವ ದೈವಿಕ ಆದೇಶವನ್ನು ಪಾಲಿಸುತ್ತಿದ್ದಾರೆ. ಇದಕ್ಕಾಗಿ ತನ್ನ ಚಿತ್ರವನ್ನು ಎಲ್ಲೆಡೆಯೂ ಹಾಕಿಸುತ್ತಿದ್ದಾರೆ. ಗೋಡೆಗಳ ಮೇಲೆ, ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಪರದೆಗಳ ಮೇಲೆ, ಸಿನೆಮಾ ಪರದೆಗಳ ಮೇಲೆ ಹೀಗೆ ದೇಶದ ಎಲ್ಲ ಕಡೆ ಈಗ ಅವರದೇ ಚಿತ್ರ. ಹಾಗಾಗಿ ಎಲ್ಲ ಕಡೆ, ಎಲ್ಲ ವಸ್ತುಗಳ ಮೇಲೆ, ಒಟ್ಟಾರೆ ಪ್ರತಿಯೊಂದರ ಮೇಲೂ ಅವರೇ ಇದ್ದಾರೆ ಎಂದು ಜನರೂ ನೋಡುತ್ತಿದ್ದಾರೆ.
ಇದೆಲ್ಲ ಈ ದೇಶದ ಯುವಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ?
ಹಿಂಸೆ ಎಸಗುವವರಿಗೆ ಶಿಕ್ಷೆಯಾಗುತ್ತಿಲ್ಲ. ಹಾಗಾಗಿ ಹಿಂಸೆ ಸರಿ ಎಂದು ಅವರು ಕಲಿಯುತ್ತಿದ್ದಾರೆ. ಹಿಂಸೆ ಎಸಗಿದವರು ಜೈಲಿನಿಂದ ಬಿಡುಗಡೆಯಾದಾಗ ಕೇಂದ್ರ ಸಚಿವರೇ ಹೋಗಿ ಅವರಿಗೆ ಹಾರ ಹಾಕಿ ಸ್ವಾಗತಿಸಬಹುದು. ಇನ್ನು ನಿಷ್ಠುರವಾಗಿ ಯೋಚಿಸುವುದು ನಿಮ್ಮನ್ನು ಜೈಲಿಗೆ ತಲುಪಿಸುವ ಸಾಧ್ಯತೆ ಇರುವುದರಿಂದ ಶಿಕ್ಷಣ ಅಪಾಯಕಾರಿ ಎಂದು ಯುವಜನತೆ ಕಲಿಯುತ್ತಿದ್ದಾರೆ. ಜೆಎನ್‌ಯುನಲ್ಲಿ ಏನಾಯಿತು ನೋಡಿ! ಸರಕಾರ ಸಮರ್ಥವಾಗಿರಬೇಕಿಲ್ಲ, ಅದಕ್ಕೆ ಸಹಾನುಭೂತಿಯೂ ಇರಬೇಕಾಗಿಲ್ಲ, ನಾಯಕರು ವಿವೇಕವಂತರಾಗಿರಬೇಕಿಲ್ಲ, ನ್ಯಾಯ ನೀಡಬೇಕಾಗಿಲ್ಲ ಹಾಗೂ ದಮನಿತರ ಧ್ವನಿಯನ್ನು ಆಲಿಸಬೇಕಾಗಿಲ್ಲ ಎಂದು ಯುವಜನ ಕಲಿಯುತ್ತಿದ್ದಾರೆ. ಹಾಗಾಗಿ ಕೊನೆಗೆ ನಾವು ೧೯೮೪ರ ಜಾರ್ಜ್ ಆರ್ವೆಲ್ ನ ಕಾದಂಬರಿಯಲ್ಲಿ ಬರುವ ಬಿಗ್ ಬ್ರದರ್ ಸರಕಾರ ಹಾಕಿದ ಈ ಕೆಳಗಿನ ಘೋಷಣೆಗಳ ಬೋರ್ಡುಗಳನ್ನು ಹಾಕಬಹುದು:
ಯುದ್ಧವೇ ಶಾಂತಿ
ಗುಲಾಮಗಿರಿಯೇ ಸ್ವಾತಂತ್ರ್ಯ
ಅಜ್ಞಾನವೇ ಸಾಮರ್ಥ್ಯ
ಏಕೆಂದರೆ ಒಂದು ಪ್ರಜಾಪ್ರಭುತ್ವವನ್ನು ನಿಜವಾಗಿಯೂ ನಾಶ ಮಾಡಬೇಕಿದ್ದರೆ ಅರಾಜಕತೆಗೆ ಸಾಂಸ್ಥಿಕ ರೂಪ ನೀಡಿ ನೈತಿಕ ದಿವಾಳಿತನಕ್ಕೆ ಸಂಪೂರ್ಣ ಶ್ರೀರಕ್ಷೆ ನೀಡುವುದು ಅನಿವಾರ್ಯ. ಕಳೆದ ಐದು ವರ್ಷಗಳಲ್ಲಿ ಇಡೀ ದೇಶಾದ್ಯಂತ ಇದೇ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಏಕೆಂದರೆ ಇರುವ ಹಳೆ ವ್ಯವಸ್ಥೆ ಸಂಪೂರ್ಣ ನಿರ್ನಾಮವಾದರೆ ಮಾತ್ರ ಒಬ್ಬ ಸರ್ವಾಧಿಕಾರಿ ತನ್ನ ಹೊಸ ಸರ್ವಾಧಿಕಾರಿ ವ್ಯವಸ್ಥೆಯನ್ನು ಸ್ಥಾಪಿಸಬಹುದು. ಆಗ ಮಾತ್ರ ಅದನ್ನು ಹೊಸ ವ್ಯವಸ್ಥೆ ಅಥವಾ ನಮ್ಮ ದೇಶದ ವಿಷಯದಲ್ಲಿ ಹೊಸ ಇಂಡಿಯಾ ಎಂದು ಕರೆಯಲು ಸಾಧ್ಯ.
ಖಂಡಿತ ನಾವು ಇದಕ್ಕಿಂತ ಜಾಣರು. ಪ್ರಜಾಪ್ರಭುತ್ವ ಕಾನೂನು ಸುವ್ಯವಸ್ಥೆ ಇದ್ದಾಗ ಮಾತ್ರ ಬೆಳೆಯುತ್ತದೆ ಎಂದು ಖಂಡಿತ ನಮಗೆ ತಿಳಿದಿದೆ. ಜನರು ಶಿಕ್ಷಿತರಾದಾಗ, ಸಮಾಜದ ದುರ್ಬಲರ ಜೊತೆ ಜನರು ಒಗ್ಗಟ್ಟು ಪ್ರದರ್ಶಿಸಿದಾಗ, ಶಿಕ್ಷಣಕ್ಕೆ ಆದ್ಯತೆ ಸಿಕ್ಕಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಹಾಗೆಯೇ, ಕಠಿಣ ಪ್ರಶ್ನೆ ಕೇಳುವ ಪತ್ರಕರ್ತರು ಇರುವ, ಸತ್ಯವನ್ನು ಗೌರವಿಸುವ ಪತ್ರಿಕೋದ್ಯಮ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ. ಒಂದು ನಿಜವಾದ ಪ್ರಜಾಪ್ರಭುತ್ವ ಅಲ್ಲಿನ ಸ್ವಾಯತ್ತ ಸಂಸ್ಥೆಗಳು ಎಷ್ಟು ಬಲಿಷ್ಠ ಹಾಗೂ ಸ್ವತಂತ್ರವಾಗಿರುತ್ತವೆಯೋ ಅಷ್ಟೇ ಬಲಿಷ್ಠವಾಗಿರುತ್ತದೆ. ಅದು ಆ ದೇಶದ ಜನತೆ ತೋರಿಸುವ ಒಟ್ಟು ಧೈರ್ಯ ಹಾಗೂ ಸಹಾನುಭೂತಿಯನ್ನು ಪ್ರತಿಫಲಿಸುತ್ತದೆ.
ಹಾಗಾಗಿಯೇ, ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ.
ಸತ್ಯ ಮುಖ್ಯ, ಕಾನೂನು ಮುಖ್ಯ, ಬಡವರು ಮುಖ್ಯ, ಐಕ್ಯತೆ ಮುಖ್ಯ, ಶಿಕ್ಷಣ ಮುಖ್ಯ, ಎಲ್ಲರೂ ಮುಖ್ಯ
ಹೇಗೆ ಶಾಲೆಯ ಗುಪ್ತ ಪಠ್ಯವನ್ನು ಅಲ್ಲಿನ ಎಲ್ಲ ವಿದ್ಯಾರ್ಥಿಗಳೂ ಪಾಲಿಸುವುದಿಲ್ಲವೋ ಹಾಗೆಯೇ ದೇಶದ ಎಲ್ಲ ನಾಗರಿಕರೂ ಅಲ್ಲಿನ ಸರಕಾರದ ಗುಪ್ತ ಪಠ್ಯವನ್ನು ಬೆಂಬಲಿಸುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶ ಈ ಗುಪ್ತ ಪಠ್ಯವನ್ನು ಎಷ್ಟು ಜನರು ಒಪ್ಪಿಕೊಂಡಿದ್ದಾರೆ, ಎಷ್ಟು ಜನ ತಿರಸ್ಕರಿಸಿದ್ದಾರೆ ಎಂದು ನಮಗೆ ತೋರಿಸಲಿದೆ.
ಕೃಪೆ: thewire.in