ಕರ್ನಾಟಕದಲ್ಲಿ ಬೀದಿ ನಾಟಕಗಳ ಪ್ರಯೋಗಗಳು
ಕರ್ನಾಟಕದಲ್ಲಿ ಬೀದಿ ನಾಟಕಗಳನ್ನು ಸಾಮಾಜಿಕ ಮೌಲ್ಯಗಳ ಭಿತ್ತರಿಸುವಿಕೆಗೆ, ದಲಿತ, ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧದ ಪ್ರತಿಭಟನೆಗಳಿಗೆ, ಮೂಢನಂಬಿಕೆಗಳ ವಿರುದ್ಧ ಮತ್ತು ಕೋಮು ಸೌಹಾರ್ದ ಸಾರಲು ಹಾಗೂ ವಿವಿಧ ಸಾಮಾಜಿಕ ವಿಷಯಗಳಿಗೆ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಮೊದಮೊದಲಿಗೆ, ಕನ್ನಡದ ಸಾಹಿತಿಗಳ ಪ್ರಖ್ಯಾತ ಕಾದಂಬರಿಗಳ ಕೆಲವು ತುಣುಕುಗಳನ್ನು ಬೀದಿ ನಾಟಕ ರೂಪಕ್ಕೆ ಪರಿವರ್ತಿಸಿ, ಆಯಾ ಸಾಹಿತಿಗಳ ಸಮ್ಮುಖದಲ್ಲಿ, ಪ್ರದರ್ಶನ ನೀಡಿ, ಗೌರವ ಸಮ್ಮಾನ ಮಾಡಿ, ಸಾಹಿತಿಗಳ ಮತ್ತು ಅವರ ಕಾದಂಬರಿಯನ್ನು ಪರಿಚಯಿಸುವ ಕಾರ್ಯಕ್ರಮಗಳಲ್ಲಿ ಬೀದಿ ನಾಟಕ ಬಳಕೆಯಾಗುತಿತ್ತು. ಕರ್ನಾಟಕದಲ್ಲಿ ಈ ಮಾದರಿಯ ಬೀದಿ ನಾಟಕದ ಪ್ರಕಾರವನ್ನು ಪರಿಚಯಿಸಿದವರು ಹಿರಿಯರಾದ ಎ.ಎಸ್.ಮೂರ್ತಿಯವರು. ನಂತರದಲ್ಲಿ ಮೂರ್ತಿಯವರ ಚಿತ್ರಾ, ಬೀದಿ ಮತ್ತು ಅಭಿನಯತರಂಗ ಮುಖಾಂತರ ಸಾಮಾಜಿಕ ಸಮಸ್ಯೆಗಳ ಬೀದಿ ನಾಟಕಗಳ ಪ್ರಸ್ತುತಿಯೂ ನಡೆಯಿತು. ವಿಜಯ, ಮೂರ್ತಿ ಮತ್ತು ಅವರ ಸಹೋದರ ರಾಮಕೃಷ್ಙ ಇವರು ಬ್ಯೂಗಲ್ ರಾಕ್, ಕಲಾಕ್ಷೇತ್ರ, ರಾಜಾಜಿನಗರ, ಮಲ್ಲೇಶ್ವರ ಬಡಾವಣೆಗಳ ಆಟದ ಮೈದಾನಗಳಲ್ಲಿ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಆವರಣಗಳಲ್ಲಿ ಬೀದಿ ನಾಟಕಗಳನ್ನು ಪ್ರಯೋಗಿಸುತ್ತಿದ್ದರು.
ಎ.ಎಸ್.ಮೂರ್ತಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ರವಿವಾರಗಳಂದು, ಬೆಂಗಳೂರಿನ ಹೊರವಲಯದ ಹಲವಾರು ಹಳ್ಳಿಗಳಿಗೆ ತೆರಳಿ, ವೈದ್ಯಕೀಯ ಜ್ಞಾನದ ಅರಿವು, ಗ್ರಾಮೀಣ ಸ್ವಚ್ಛತೆಯ ಅವಶ್ಯಕತೆ, ಕುಡಿಯುವ ನೀರಿನ ಸದ್ಬಳಕೆ, ಉತ್ತಮವಾದ ರಸ್ತೆಗಳು ಎಂದರೆ ಹೇಗಿರಬೇಕು ಮುಂತಾದ ಹಲವು ವಿಷಯಗಳ ಮೇಲೆ ಗ್ರಾಮೀಣ ಪ್ರದೇಶದ ಜನರಿಗೆ ತಿಳುವಳಿಕೆ ನೀಡುವ ಪ್ರಾಯೋಜಿತ ಕಾರ್ಯಕ್ರಮಗಳನ್ನು ಬೀದಿ ನಾಟಕದ ಪ್ರಕಾರದಲ್ಲಿ ಮಾಡಿದ್ದಾರೆ. ಹಾಗೆಯೇ, ನಾಗರಾಜಮೂರ್ತಿ ಅವರು ತಮ್ಮ ಪ್ರಯೋಗರಂಗ ತಂಡದ ಮುಖಾಂತರ ಗ್ರಾಮೀಣ ಜನರಿಗೆ ಶೌಚಾಲಯದ ಅವಶ್ಯಕತೆ ಮತ್ತು ಅಗತ್ಯತೆ ಕುರಿತು, ವಿದ್ಯುಚ್ಛಕ್ತಿಯ ಬಳಕೆ ಹಾಗೂ ಬೇಜವಾಬ್ದಾರಿತನದಿಂದ ಆಗುವ ಅನಾಹುತಗಳ ಬಗ್ಗೆ, ವಿದ್ಯಾರ್ಥಿ, ಯುವಜನ ತಮ್ಮ ಅಮೂಲ್ಯ ಮತಗಳನ್ನು ಚುನಾವಣೆಗಳಲ್ಲಿ ಸೂಕ್ತ ಅಭ್ಯರ್ಥಿಗಳಿಗೆ, ಪಕ್ಷಗಳಿಗೆ ಹಾಕಬೇಕಿರುವ ಅವಶ್ಯಕತೆ ಕುರಿತು ಚುನಾವಣಾ ಸಂದರ್ಭದ ಬೀದಿ ನಾಟಕಗಳನ್ನು ಜನ ಜಾಗೃತಿ ಮತ್ತು ಅರಿವು ಮೂಡಿಸುವ ತಲೆಬರಹದ ಅಡಿಯಲ್ಲಿ ಪ್ರಯೋಗಿಸಿದ್ದಾರೆ. ಕರ್ನಾಟಕದಲ್ಲಿ ಬೀದಿ ನಾಟಕದ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವವರು ಎಂದರೆ, ಎ.ಎಸ್. ಮೂರ್ತಿ, ರಾಮಕೃಷ್ಣ, ಪ್ರಸನ್ನ, ಗಂಗಾಧರ ಸ್ವಾಮಿ, ಸಿಜಿಕೆ, ಸಿದ್ದನಗೌಡ ಪಾಟೀಲ, ಜನ್ನಿ, ಬಸವಲಿಂಗಯ್ಯ, ಬಿ.ಸುರೇಶ, ಎಸ್.ಮಾಲತಿ, ಸುಶ್ಮಾ ಎಸ್.ವಿ, ಕಷ್ಯಪ್, ಶಶಿಧರ ಭಾರಿಘಾಟ್, ನಾಗರಾಜ ಮೂರ್ತಿ, ಅವಿಷ್ಕಾರ್ ಸಂಸ್ಥೆಯ ಪ್ರಕಾಶ್ ಅರಸ್, ಶಶಿಕಾಂತ ಯಡಹಳ್ಳಿ, ಶಂಕರಯ್ಯ ಘಂಟಿ (ಕಲಬುರಗಿ) ಎಸ್.ಆರ್. ರಮೇಶ್ (ಮೈಸೂರು) ವಿ.ಎನ್.ಅಕ್ಕಿ (ರಾಯಚೂರು) ನೀಲಾ ಕೆ. ಕಲಬುರಗಿ, ಇಳಿಗಾರ್ (ಹುಬ್ಬಳ್ಳಿ-ಧಾರವಾಡ), ಅಚ್ಯುತ (ಕೆಜಿಎಫ್), ರವೀಂದ್ರನಾಥ ಸಿರಿವರ (ತುಮಕೂರು) ಮುಂತಾದವರು. ಈ ಹೆಸರುಗಳು ಅಂತಿಮವೇನಲ್ಲ; ಇನ್ನೂ ಸಾಕಷ್ಟು ಹೆಸರುಗಳು ಜ್ಞಾಪಿಸಿಕೊಳ್ಳುತ್ತಾ ಹೋದರೆ ಅಗಾಧವಾಗಿ ಸಿಗುತ್ತವೆ.
ತುರ್ತುಪರಿಸ್ಥಿತಿಯನ್ನು ಹಿಂದೆಗೆದುಕೊಂಡ ಮೇಲೆ, ಇಂದಿರಾಗಾಂಧಿಯವರು ಚಿಕ್ಕಮಗಳೂರಿನಿಂದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ ಸಮಯದಲ್ಲಿ, ಕರ್ನಾಟಕದ ಹಲವು ರಂಗ ತಂಡಗಳು ಅವರ ಆಯ್ಕೆಯ ವಿರುದ್ಧ ಪ್ರಚಾರವನ್ನು ಬೀದಿ ನಾಟಕಗಳ ಮುಖಾಂತರ ಧ್ವನಿ ಏರಿಸಿ, ಇಡೀ ಚಿಕ್ಕಮಗಳೂರು ಕ್ಷೇತ್ರದ ವಿವಿಧ ತಾಲೂಕುಗಳಲ್ಲಿ ಪ್ರಯೋಗಿಸಿದ್ದಾರೆ. ಸಮುದಾಯ, ರಂಗ ಸಂಪದ, ಕಲಾಗಂಗೋತ್ರಿ, ನಟರಂಗ, ಸೂತ್ರಧಾರ ಪ್ರಯೋಗ ರಂಗ, ಮುಂತಾದವುಗಳು ಪ್ರಮುಖವಾದವು. ಸಾಕ್ಷರತಾ ಆಂದೋಲನ ದೇಶವ್ಯಾಪಿ ನಡೆದಾಗ, ಕರ್ನಾಟಕ ರಾಜ್ಯದಲ್ಲೂ ಸಾಕ್ಷರತೆಯನ್ನು ಮೂಡಿಸಲು ಎಲ್ಲ ಜಿಲ್ಲೆ, ತಾಲೂಕು ಮತ್ತು ಹಳ್ಳಿಗಳಲ್ಲಿ ಪ್ರಚಾರಾಂದೋಲನ ನಡೆದಾಗ, ಬಹಳ ದೊಡ್ಡ ಮಟ್ಟದಲ್ಲಿ ಬೀದಿ ನಾಟಕ ಪ್ರಕಾರ ಬಳಕೆಯಾಯಿತು. ರಾಜ್ಯ ಸರಕಾರದ ಪ್ರಮುಖ ಕಾರ್ಯಕ್ರಮವಾಗಿ ನಡೆದ ಈ ಆಂದೋಲನದಲ್ಲಿ ಸಾವಿರಾರು ಕಲಾವಿದರು, ನೂರಾರು ನಿರ್ದೇಶಕರು, ಪಾಲ್ಗೊಂಡು ಬೀದಿ ನಾಟಕದ ಪ್ರಕಾರವನ್ನು ಜನಪ್ರಿಯಗೊಳಿಸಿದ್ದೇ ಅಲ್ಲದೆ, ನಾವೂ ಮಾಡಬಹುದು ಎಂಬ ಹುಂಬ ಧೈರ್ಯವನ್ನು ಗ್ರಾಮೀಣ ಭಾಗದ ಯುವಕ-ಯುವತಿಯರಲ್ಲಿ ತುಂಬಲು ಸಹಕಾರಿಯಾಯಿತು. ಅದೇ ರೀತಿ, ಜನರಿಗೆ ಸಾಮಾನ್ಯ ವಿಜ್ಞಾನದ ಪರಿಚಯ ಮಾಡಿಸಲು, ಗ್ರಹಣ ಮುಂತಾದ ಮೂಢನಂಬಿಕೆಗಳ ವಿರುದ್ಧ ವೈಜ್ಞಾನಿಕ ಮನೋಭಾವದ ಅರಿವು ಮೂಡಿಸಲು ಜ್ಞಾನ-ವಿಜ್ಞಾನ ಜಾಥಾ ನಡೆದಾಗಲೂ, ಕರ್ನಾಟಕದ ಆಯ್ದ ಪ್ರಮುಖ ಜಿಲ್ಲೆಗಳ ಹಳ್ಳಿಗಳಲ್ಲಿ ಬೀದಿ ನಾಟಕಗಳ ಮುಖಾಂತರ ಜನರನ್ನು ತಲುಪಿದ್ದೇವೆ. ಸಮುದಾಯ ಬೆಂಗಳೂರು ತಂಡವು, ಎಪ್ಪತ್ತರ ದಶಕದಲ್ಲಿ ರಾಷ್ಟ್ರ ಮಟ್ಟದ ಬೀದಿ ನಾಟಕದ ಪಿತಾಮಹ ಬಾದಲ್ ಸರಕಾರ್ ಅವರನ್ನು ಬೆಂಗಳೂರಿಗೆ ಕರೆಸಿ, ಅವರ ಮೂರು ಬೀದಿ ನಾಟಕಗಳನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಮೂರು ದಿನಗಳ ಕಾಲ ಪ್ರದರ್ಶನದ ವ್ಯವಸ್ಥೆ ಮಾಡಿಸಿತು. ಅವರು ತಮ್ಮ ಬಂಗಾಲಿ ಭಾಷೆಯ ಮಿಛಿಲ್(ಮೆರವಣಿಗೆ), ಗೊಂಡಿ(ಕಕೇಷಿಯನ್ ಚಾಕ್ ಸರ್ಕಲ್) ಮತ್ತು ರಾಜರಕ್ತೊ ನಾಟಕಗಳನ್ನು ಬೀದಿ ನಾಟಕದ ಆಯಾಮದಲ್ಲಿ ಪ್ರಯೋಗಿಸಿದರು. ನಂತರ ಅವರ ನೇತೃತ್ವದಲ್ಲಿ ಕುಂಬಳಗೋಡಿನಲ್ಲಿ ರಾಜ್ಯ ಮಟ್ಟದ ಬೀದಿ ನಾಟಕದ ಪ್ರಕಾರ ಕುರಿತು ( ಮೂರನೇ ರಂಗಭೂಮಿ) 15 ದಿನಗಳ ಕಾಲದ ರಂಗ ಶಿಬಿರವನ್ನು ಎರಡು ವರ್ಷ ನಡೆಸಿಕೊಟ್ಟರು.. ಇವರ ನಂತರ ಮಣಿಪುರ ರಾಜ್ಯದ ಕನ್ಹಯ್ಯಲಾಲ್ ಅವರ ತಂಡದ ಬೀದಿ ನಾಟಕ ‘ಪೆಬೆ ತೇತೋ’ವನ್ನು ಬೆಂಗಳೂರು, ಶಿವಮೊಗ್ಗ ಮತ್ತು ಹೆಗ್ಗೋಡಿನಲ್ಲಿ ಪ್ರದರ್ಶನದ ಪ್ರಾಯೋಜನೆ ಮಾಡಿತು. ಇದರ ನಂತರ ಸಮುದಾಯ ‘ಬೆಲ್ಚಿ’ ನಾಟಕವನ್ನು ಸಿಜಿಕೆ ನಿರ್ದೇಶನದಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ಇಡೀ ದೇಶದ ವಿವಿಧ ರಾಜ್ಯಗಳಲ್ಲಿ, ಪ್ರಮುಖ ನಾಟಕೋತ್ಸವಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ನೀಡಿತು ಕೇವಲ ಬೀದಿ ನಾಟಕಗಳನ್ನೇ ಇಟ್ಟುಕೊಂಡು, ರಾಜ್ಯ ಮಟ್ಟದ ಐದು ಜಾಥಾಗಳನ್ನು ಮಾಡಿತು. ಹೊಸ ಮೌಲ್ಯಗಳತ್ತ ಸಮುದಾಯ ಸಾಂಸ್ಕೃತಿಕ ಜಾಥಾ, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳೇ ಒಂದಾಗಿ- ರೈತನತ್ತ ಸಮುದಾಯ ಜಾಥಾ, ನೂರು ಅಡಿಗಳ ಬಣ್ಣದ ನಡೆ-ಅಣು ಸಮರಕ್ಕೆ ಜನತೆಯ ತಡೆ, ನೀಲಗಿರಿ ಬೆಳೆ - ರೈತನ ಭೂಮಿಗೆ ಕಳೆ, ಸಫ್ದರ್ ಹಶ್ಮಿ ನೆನಪಿನ ರಾಜ್ಯ ಮಟ್ಟದ ಬೀದಿ ನಾಟಕೋತ್ಸವ ಮತ್ತು ಸಮುದಾಯ 20 ಬೀದಿ ಮತ್ತು ರಂಗ ನಾಟಕೋತ್ಸವ ಮುಂತಾದವುಗಳು ಬಹಳ ಪ್ರಮುಖ ರಾಜ್ಯ ಮಟ್ಟದ ಬೀದಿ ನಾಟಕಗಳ ನಾಟಕೋತ್ಸವಗಳು. ಮೂರು ರಾಜಕೀಯ ನಾಟಕಗಳು (ನಿ: ಪ್ರಸನ್ನ), ಮೆಟಲ್ ಲ್ಯಾಂಪ್ ಕ್ಯಾಪ್ಸ್ ಕಾರ್ಖಾನೆಯ ಕಾರ್ಮಿಕರ ಶೋಷಣೆ ಕುರಿತ ನಾಟಕ ಸ್ಟ್ರಗಲ್ (ನಿ: ಸಿಜಿಕೆ ಮತ್ತು ಲಕ್ಷ್ಮೀ ಚಂದ್ರಶೇಖರ್) ಮಾಂಸಾಹಾರಿ ಹೋಟೆಲ್ಗಳಲ್ಲಿನ ಕಾರ್ಮಿಕರ ಶೋಷಣೆ ಕುರಿತಾದ ಬೀದಿ ನಾಟಕ ಪಂಚತಾರ(ನಿ: ರಘುನಂದನ), ಗಾಂಧಿ, ನೆಹರೂ, ಅಂಬೇಡ್ಕರ್ (ನಿ: ರಘುನಂದನ), ಪತ್ರೆ ಸಂಗಪ್ಪನ ಕೊಲೆ ಪ್ರಸಂಗ (ನಿ: ಪ್ರಸನ್ನ), ಛಾಸನಾಲ ಗಣಿ ದುರಂತ (ನಿ: ಪ್ರಸನ್ನ), ನಾವು ಮಹಿಳೆಯರು, ಬೆಲೆ ಏರಿಕೆ (ನಿ: ಎಸ್.ಮಾಲತಿ), ಕೇಸರಿ-ಬಿಳಿ-ಹಸಿರು, ನ್ಯಾಯಕ್ಕಾಗಿ ಕಾದಿರುವ ಭಾವ್ರಿದೇವಿ, ಕುಂಡಲಿ ಮಹಾತ್ಮೆ, ಧನ್ವಂತರಿ ಚಿಕಿತ್ಸೆ ಮತ್ತು ಫ್ರಿಡ್ಜ್ನಲ್ಲಿ ಏನಿದೆ (ನಿ: ಶಶಿಧರ ಭಾರಿಘಾಟ್) ಕೇವಲ ಬೆಂಗಳೂರು ಸಮುದಾಯದ ಪ್ರಮುಖ ಮತ್ತು ಮಹತ್ತರ ಬೀದಿ ನಾಟಕಗಳು. ಇದೇ ರೀತಿ ರಾಜ್ಯದಾದ್ಯಂತ ಸಮುದಾಯ ಘಟಕಗಳು ತಮ್ಮ ತಮ್ಮ ಜಿಲ್ಲೆ ಮತ್ತು ಹಳ್ಳಿಗಳಲ್ಲಿ ಸ್ವತಂತ್ರ ಬೀದಿ ನಾಟಕಗಳನ್ನು ಈಗಲೂ ಪ್ರಯೋಗಿಸುತ್ತಾ ಬಂದಿರುತ್ತಾರೆ. ಕೋಲಾರದ ಅನುಸೂಯ ದೇವಿ ಪ್ರಕರಣ, ಬಂಡಾಯ ಸಾಹಿತ್ಯ ಸಂಘಟನೆಯ ಉದ್ಘಾಟನಾ ಸಮಯದಲ್ಲಿ ಮತ್ತು ಯಾವುದೇ ಪ್ರಗತಿಪರ, ಕೋಮುಸೌಹಾರ್ದ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಸಮುದಾಯ ಸಂಘಟನೆಯ ವೈಚಾರಿಕ ಹಾಡುಗಳು ಮತ್ತು ಬೀದಿ ನಾಟಕಗಳ ಪ್ರಸ್ತುತಿ ತೊಂಬತ್ತರ ದಶಕದ ವರೆಗೂ ಕಡ್ಡಾಯ ಮತ್ತು ಖಾಯಂ ಆಗಿತ್ತು. ಜನಾರ್ದನ, ಬಸು, ಪಿಚ್ಚಳ್ಳಿ ಶ್ರೀನಿವಾಸ್, ಜೋಗಿಲ ಸಿದ್ದರಾಜು, ಗಜಾನನ ನಾಯ್ಕಿ, ವಸುಧಾ, ವಿಮಲ, ಬಸಮ್ಮ, ವೆಂಕಟೇಶ್, ಮುಂತಾದ ಗಾಯಕರ ದೊಡ್ಡ ಪಟ್ಟಿಯೇ ನಮ್ಮ ಸಂಘಟನೆಯ ದೊಡ್ಡ ಆಸ್ತಿ. ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ವಿರುದ್ಧ ಪ್ರಚಾರದ ಸಮಯದಲ್ಲಿ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಸಂಘಟನೆಯ ಕಲಾವಿದರ ಮೇಲೆ ಹಲ್ಲೆ ಮಾಡಿದರೆ, ಟಿಪ್ಪು ಸುಲ್ತಾನ್ 200ನೇ ಜನ್ಮ ದಿನದ ಜಾಥಾ ಮಾಡಿದ ಸಮಯದಲ್ಲಿ ಆನೇಕಲ್ನಲ್ಲಿ ಆರೆಸ್ಸೆಸ್ - ಬಿಜೆಪಿಗರು ನಮ್ಮ ಕಲಾವಿದರ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆತ ತಿನ್ನುತ್ತಲೇ, ಇನ್ನಷ್ಟು ಗಟ್ಟಿಯಾಗಿ, ಧೈರ್ಯ ತುಂಬಿಸಿಕೊಂಡು, ಸಾಮಾನ್ಯ ಪ್ರೇಕ್ಷಕರ ಮೇಲೆ ನಂಬಿಕೆ ಕಾಪಾಡಿಕೊಂಡು, ಇಂದಿಗೂ ಸಮುದಾಯ ಸಂಘಟನೆ ಬೀದಿ ನಾಟಕಗಳನ್ನು ಮಾಡುತ್ತಲೇ ಬಂದಿದೆ. ಎನ್ಜಿಒ ಗಳು ಗುಡ್ಡಗಾಡು ಜನಗಳ ಮಧ್ಯೆ, ಆದಿವಾಸಿಗಳ ಮಧ್ಯೆ ತಮ್ಮ ಸಂಘಟನೆಗಳ ಮುಖಾಂತರ ತಮ್ಮ ಸಿದ್ಧಾಂತಗಳ ಪ್ರಚಾರಕ್ಕೂ ಬೀದಿ ನಾಟಕದ ಪ್ರಕಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲವು ಎನ್ಜಿಒ ಗಳು ತೃತೀಯ ಲಿಂಗಿಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಲು, ಅವರನ್ನು ಸಾಮಾಜಿಕವಾಗಿ ಮುನ್ನಲೆಗೆ ತರಲು ಬೀದಿ ನಾಟಕಗಳನ್ನು ಬಳಕೆ ಮಾಡುತ್ತಿದ್ದಾರೆ. ಬೀದಿ ನಾಟಕ ದುರ್ಬಳಕೆಯೂ ಆಗಿದೆ. ಕಾರ್ಪೊರೇಟ್ ಕಂಪೆನಿಗಳು ತಮ್ಮ ಸರಕನ್ನು ಪ್ರಚಾರ ಮಾಡಲು ಬೀದಿ ನಾಟಕಗಳನ್ನು ಪ್ರಯೋಗಿಸಿದ್ದಾರೆ. ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ತಮ್ಮ ಸಿದ್ದಾಂತವನ್ನು ಪ್ರಚಾರ ಮಾಡಲು ಬೀದಿ ನಾಟಕದ ದುರ್ಬಳಕೆ ಆಗಿದೆ;
ಸಾಕ್ಷರತಾ ಆಂದೋಲನದ ಸಮಯದಲ್ಲಿ ಬೀದಿ ನಾಟಕದ ಪ್ರಕಾರ ಅವಹೇಳನಕ್ಕೆ ಗುರಿಯಾಗುವಷ್ಟರ ಮಟ್ಟಿಗೆ ಅದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ; ಬೀದಿ ನಾಟಕದ ಸಿದ್ಧಾಂತ ಮತ್ತು ಅದರ ಮೂಲ ಆಶಯಗಳೇ ಗೊತ್ತಿರದ ತಂಡಗಳೂ ಬೀದಿ ನಾಟಕದ ಪ್ರಯೋಗಕ್ಕೆ, ನಿರ್ದೇಶನಕ್ಕೆ ಕೈ ಹಾಕಿವೆ. ತಮಿಳುನಾಡಿನಲ್ಲಿ ಚೆನ್ನೈ ಕಳೈ ಕುಳು, ಆಂಧ್ರದ ಆಂಧ್ರ ಪ್ರಜಾನಾಟ್ಯ ಮಂಡಳಿ, ದಿಲ್ಲಿಯ ಸಫ್ದರ್ ಹಶ್ಮಿ ಮತ್ತು ಮಾಲಾ ಹಶ್ಮಿ ನೇತೃತ್ವದ ಜನ ನಾಟ್ಯ ಮಂಚ್, ಇಪ್ಟಾದ ಬಂಗಾಳ, ಲಕ್ನೊ, ಕರ್ನಾಟಕ ಮುಂತಾದ ಹಲವು ರಾಜ್ಯಗಳು ಇಂದಿಗೂ ಬೀದಿ ನಾಟಕಗಳ ಪ್ರಕಾರದಲ್ಲಿ ನಂಬಿಕೆ ಇಟ್ಟು ಸಮಾಜದ ಬದಲಾವಣೆಯ ಆಶಯಗಳ ನಾಟಕಗಳನ್ನು ಪ್ರಯೋಗಕ್ಕೆ ಒಳಪಡಿಸುತ್ತಿದ್ದಾರೆ. ಲೇಖನದ ಕೊನೆಗೆ ವಿಷಾದದ ಸಂಗತಿ ಎಂದರೆ, ಬೀದಿ ನಾಟಕಗಳ ಪ್ರಸ್ತುತತೆ ಇಂದು ತುಂಬಾ ಪ್ರಖರವಾಗಿರಬೇಕಿತ್ತು. ಕೋಮುದ್ವೇಷದ ದಳ್ಳುರಿ, ರೈತ ಹೋರಾಟಗಳು, ನಿರಂತರ ಬೆಲೆ ಏರಿಕೆ, ಹೊಸ ಶಿಕ್ಷಣ ಪದ್ಧತಿ, ಹಿಜಾಬ್, ಹಲಾಲ್-ಜಟ್ಕಾ ಮುಂತಾದ ನೂರಾರು ವಿಷಯಗಳು ಸಮಾಜದಲ್ಲಿ ನಮ್ಮ ಮುಂದೆ ಹಾದು ಹೋಗುತ್ತಿದೆ. ಆದರೆ, ಇವುಗಳ ಕುರಿತು ಬೀದಿ ನಾಟಕಗಳ ಮುಖಾಂತರ ಸಾಮಾನ್ಯ ಜನರನ್ನು ಜಾಗೃತ ಗೊಳಿಸುವ ವಾತಾವರಣ ಸಮಾಜದಲ್ಲಿ ಖಾಲಿಯಾಗಿದೆ; ಪ್ರಜಾಸತ್ತಾತ್ಮಕ ಶಕ್ತಿ ರಾಜಕೀಯವಾಗಿಯೂ, ಸಾಮಾಜಿಕವಾಗಿಯೂ ಅಧೀರಗೊಂಡು, ದುರ್ಬಲವಾಗಿದೆ; ಬೀದಿ ನಾಟಕವಾಡಲು, ಆಳುವ ಪಕ್ಷ ಎಷ್ಟೇ ಶಕ್ತಿಶಾಲಿಯಾಗಿದ್ದರೂ ತೊಂದರೆ ಇಲ್ಲ, ಆದರೆ, ಪ್ರಜಾಸತ್ತಾತ್ಮಕ ವಿಚಾರಗಳಲ್ಲಿ ನಂಬಿಕೆ ಇರುವ ಒಂದಿಷ್ಟು ಪಕ್ಷಗಳು ಶಕ್ತಿಶಾಲಿಯಾಗಿರಬೇಕು; ಆಗ ಮಾತ್ರ ನಟರು, ತಂಡಗಳು ಬಯಲಿಗೆ ಧುಮುಕಬಲ್ಲವು. ಇಲ್ಲವಾದಲ್ಲಿ ಆಂತರಿಕ ಟೀಕೆ ಮತ್ತು ಫೇಸ್ಬುಕ್ ಪ್ರತಿಕ್ರಿಯೆಗಳಲ್ಲಿ ಮಾತ್ರ ಸಮಾಧಾನ ಮತ್ತು ತೃಪ್ತಿ ಕಂಡುಕೊಳ್ಳಬೇಕು.. ಬರುವ ದಿನಗಳು ಆಶಾದಾಯಕ ದಿನಗಳಾಗಲಿ, ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ಲೋಕ ಶಕ್ತಿಶಾಲಿಯಾಗಲಿ ಎಂಬ ಆಶಾವಾದ ಮಾತ್ರ ನಮ್ಮನ್ನು ಮುಂದಕ್ಕೆ ಕರೆದೊಯ್ಯತ್ತಲಿದೆ.