varthabharthi


ಅನುಗಾಲ

ಕನ್ನಡ ರಥಕ್ಕೆ ಅಳಿವಿನ ಪಥ

ವಾರ್ತಾ ಭಾರತಿ : 14 Apr, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸರಕಾರ(ಗಳು) ಸಂವಿಧಾನವನ್ನು ತಮಗೆ ಬೇಕಾದಂತೆ ಅರ್ಥವಿಸಿಕೊಳ್ಳುವ ಈ ಕಾಲದಲ್ಲಿ ಕನ್ನಡದ ಪಾಡು ಕೊರೋನಕ್ಕಿಂತಲೂ ಹೆಚ್ಚು ಅಪಾಯವನ್ನು ತಂದೊಡ್ಡಬಲ್ಲುದು. ಕನ್ನಡದ ಗುಡಿ ಕಾಯೆ, ನುಡಿ ಕಾಯೆ, ನಡೆ ಕಾಯೆ, ಯಾರು ಬರಬೇಕು? ಕನ್ನಡ ಭುವನೇಶ್ವರಿ ಮತಯಂತ್ರವಾಗಿರುವಾಗ, ಕನ್ನಡ ಭಾಷೆ-ಸಾಹಿತ್ಯ ಪ್ರಶಸ್ತಿ-ಪುರಸ್ಕಾರಕ್ಕಷ್ಟೇ ಸೀಮಿತವಾಗಿರುವಾಗ ಕನ್ನಡದ ರಥಕ್ಕೆ ಕಾಡ ಮೂಲಕವೆ ಪಥ-ಆಗಸಕ್ಕಲ್ಲ; ಅಳಿವಿಗೆ.



ಅಪರೂಪಕ್ಕೆ ದೇಶದ ಗೃಹಮಂತ್ರಿ ಪ್ರಧಾನಿಯವರಿಗಿಂತ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಹಿಂದಿಯನ್ನು ದೇಶದೆಲ್ಲೆಡೆ ಹೇರುವ ಮಾತನ್ನಾಡಿದ್ದು. ದಕ್ಷಿಣದ ರಾಜ್ಯಗಳು ಸಹಜವಾಗಿಯೇ ಅದನ್ನು ವಿರೋಧಿಸಿದವು. ಆದರೆ ತಮಿಳುನಾಡಿನಷ್ಟು ಇತರ ರಾಜ್ಯಗಳು ಸದ್ದುಮಾಡಿಲ್ಲ. ಕರ್ನಾಟಕವಂತೂ ಕೆಲವೇ ಮಂದಿಯ ಆಕ್ರೋಶವನ್ನು ಪ್ರತಿನಿಧಿಸಿತು. ಕನ್ನಡಿಗರ ಸ್ವಭಾವವೇ ಹಾಗೆ. ತಮ್ಮ ತಲೆದಿಂಬನ್ನು ಯಾರಾದರೂ ಎಳೆದರೂ ಒಂದರೆಕ್ಷಣ ಎಚ್ಚೆತ್ತು ಮತ್ತೆ ತೋಳನ್ನೇ ತಲೆದಿಂಬಾಗಿಸಿ ಗೊರಕೆ ಹೊಡೆಯುವ ಮಂದಿ. ಕರ್ನಾಟಕದ ಆಳುವ ರಾಜಕಾರಣಿಗಳು ಹೈಕಮಾಂಡಿನ ಹಿಂದಿಧ್ವನಿಯನ್ನು ತಮ್ಮ ಎಂದಿನ ಅತ್ಯಂತ ಅಂಧ ವಿಧೇಯತೆಯಿಂದ ಪ್ರತಿಧ್ವನಿಸಿದ್ದಾರೆ. ಕಾಂಗ್ರೆಸ್ ರಾಜಕಾರಣಿಗಳಂತೂ ತಮ್ಮ ಹೈಕಮಾಂಡ್ ಏನು ಹೇಳುತ್ತದೆಯೆಂದು ಕಾಯುತ್ತಾರೆಯೇ ವಿನಾ ಅಲ್ಲಿಯವರೆಗೆ ಏನೂ ಹೇಳರು. ಜನತಾದಳ (ಎಸ್) ಪ್ರಾದೇಶಿಕ ಪಕ್ಷವಾದ್ದರಿಂದ ಮತ್ತು ಅವರಿಗೆ ರಾಷ್ಟ್ರೀಯ ಮಟ್ಟದ ಹಾನಿಯಿಲ್ಲವಾದ್ದರಿಂದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಹಿಂದಿ ಹೇರಿಕೆಯ ವಿರೋಧವಾದಾಗ ದಕ್ಷಿಣ ಭಾರತವೆಲ್ಲ ಬೆಂಕಿಯನ್ನು ಉಗುಳಿತ್ತು. ಆನಂತರ ಒಕ್ಕೂಟ ಸರಕಾರವು ಎಚ್ಚೆತ್ತಿತು. ಭಾಷಾ ವಿವಾದ ಹೆಚ್ಚಾಗಿರಲಿಲ್ಲ. ಕನ್ನಡ ಬೇಕು ಎಂದಾಗಲೆಲ್ಲ ಯಾರಾದರೊಬ್ಬರು ಅಡ್ಡಿ ಮಾಡಿ ನ್ಯಾಯಾಲಯದ ಮೆಟ್ಟಲು ಹತ್ತಿ ಕನ್ನಡದ ಸಾರ್ವಭೌಮತ್ವಕ್ಕೆ ಮಿತಿ ಹೇರುತ್ತಿದ್ದರು. ಈ ಬಾರಿಯೂ ಅಷ್ಟೇ: ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿ 2021ರಲ್ಲಿ ಮಾಡಿದ ಎರಡು ಆದೇಶಗಳನ್ನು ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಎಂಬ ಸರಕಾರೇತರ ಸಂಸ್ಥೆ ಮತ್ತು ಕೆಲವೇ ವಿದ್ಯಾರ್ಥಿಗಳು ಪ್ರಶ್ನಿಸಿದ್ದರಿಂದ ಕರ್ನಾಟಕ ಉಚ್ಚ ನ್ಯಾಯಾಲಯವು 06.04.2022ರಂದು ಈ ಆದೇಶಗಳ ಅನುಷ್ಠಾನಕ್ಕೆ ತಡೆ ನೀಡಿದೆ. ಈಗ ವಿಚಾರಣೆ ಒಂದು ತಿಂಗಳ ಕಾಲ ಮುಂದೂಡಲ್ಪಟ್ಟಿದೆ. ತೀರ್ಪು ಕಾನೂನಿನಂತೆ ನೀಡಲ್ಪಡುತ್ತದೆ. ಫಲಿತಾಂಶ ಅನಿಶ್ಚಿತ. ಈ ಬೆಳವಣಿಗೆಗಳು ಕನ್ನಡಕ್ಕೆ ಎರಡು ತಾಯಂದಿರು ಮೋಸ ಮಾಡಿದಂತಿದೆ.

ಮೊದಲನೆಯದಾಗಿ ಸತ್ತಂತಿರುವ ಸಂಸ್ಕೃತ ತಾನು ಪುನರುಜ್ಜೀವನಗೊಳ್ಳುವುದಕ್ಕಾಗಿ ಕನ್ನಡದ ಎರಡೂ ಮೂತ್ರಪಿಂಡಗಳನ್ನು ಕಿತ್ತುಕೊಳ್ಳಲು ನಿಶ್ಚಯಿಸಿದೆ. ಕನ್ನಡವನ್ನು ವಿದ್ಯಾರ್ಥಿಗಳು ಓದು-ಬರಹದಲ್ಲಿ ಕಾಣುವ ತನಕ ಸಂಸ್ಕೃತವು ಎದ್ದು ನಿಲ್ಲುವುದು ಕಷ್ಟ. ಸಂಸ್ಕೃತವನ್ನು ಕೆಲವು ವಿದ್ಯಾರ್ಥಿಗಳು ಮಾಧ್ಯಮಿಕ ಹಂತದಲ್ಲಿ ಓದುತ್ತಾರೆ. ಕಾರಣ ಸ್ಪಷ್ಟ. ಒಂದು, ಉತ್ತರ ಪತ್ರಿಕೆಯು ಕನ್ನಡದಲ್ಲಿರುತ್ತದೆ. (ಪ್ರಶ್ನೆಪತ್ರಿಕೆ ಹೇಗಿದೆಯೋ ಗೊತ್ತಿಲ್ಲ!) ಎರಡು, ಸಂಸ್ಕೃತವೆಂಬ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದು ಸುಲಭ. ಒಮ್ಮೆ ಈ ಹಂತವನ್ನು ದಾಟಿದ ಮೇಲೆ ಸಂಸ್ಕೃತವು ವಸ್ತುಸಂಗ್ರಹಾಲಯವನ್ನು ಸೇರುತ್ತದೆ. (ಉದ್ದಾಮ ಸಂಸ್ಕೃತ ಪಂಡಿತರೂ ಕನ್ನಡದಲ್ಲೇ ಸಂಸ್ಕೃತವನ್ನು ಉಸಿರಾಡುತ್ತಾರೆ!)

ಎರಡನೆಯದಾಗಿ ಕನ್ನಡ ತಾಯಿಯು ಭಾರತ ಜನನಿಯ ತನುಜಾತೆ ಎಂಬ ತವರಿನ ಪ್ರೇಮವನ್ನು ಕಳಕೊಳ್ಳುವುದು ಬಹುತೇಕ ಖಾತ್ರಿಯಾಗಿದೆ. ಈಗಾಗಲೇ ಆರ್ಥಿಕ, ರಾಜಕೀಯ ಕಾರಣಗಳಿಂದಾಗಿ ಕನ್ನಡವನ್ನು ಕನ್ನಡ ನೆಲದಲ್ಲಿ ಹುಡುಕುವುದು ಕಷ್ಟವಾಗಿದೆ. ಕೃಷಿಭೂಮಿಗಳು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆಯಾದಂತೆ ಕನ್ನಡವು ಕನ್ನಡೇತರವಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಇಂಗ್ಲಿಷ್ ಒಂದೇ ಕಾರಣವಲ್ಲ. ವಿವಿಧ ಭಾಷಾ ಸಂಸ್ಕೃತಿಯು ಕರ್ನಾಟಕದಲ್ಲಿ ಬೆಳೆೆಯುತ್ತಿರುವುದು ಕನ್ನಡದ ಪಾಲಿಗೆ ಕಳೆಯಾಗುತ್ತಿರುವುದು ದುರಂತ. ಆಳುವ ವರ್ಗದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮತ್ತು ಕನ್ನಡದ ಲೇಖಕರು, ಚಿಂತಕರು ಮತ್ತು ಶಿಕ್ಷಕರು ತಮ್ಮ ಪಾಡಿಗೆ ತಾವು ಪ್ರತಿಷ್ಠಾಪರರಾಗಿ ವರ್ತಿಸುವುದರಿಂದಾಗಿ ಕನ್ನಡ ಬೀದಿಗೆ ಬಂದಿದೆ. ಈ ಸ್ಥಿತಿಗೆ ಈಗ ತನ್ನ ಪಾಡಿಗೆ ತಾನು ಕೊನೆಯುಸಿರೆಳೆಯುತ್ತಿರುವ ಸಂಸ್ಕೃತವೂ ಸೇರಿದೆ. ಯಾವುದೇ ಭಾಷೆ ಇನ್ನೊಂದು ಭಾಷೆಯನ್ನು ಕೆಳಗಿಳಿಸಿ ಮುನ್ನಡೆಯುವುದು ಕುಹಕತನದ ಪರಮಾವಧಿ. ಸಂಗೀತ ಕುರ್ಚಿಯಾಟವು ರಾಜಕಾರಣದಲ್ಲಿ ಸಹಜ. ಆದರೆ ಬೌದ್ಧಿಕ ಬೆಳವಣಿಗೆಯ ಸ್ಪರ್ಧೆಯಲ್ಲಿ ಇನ್ನೊಬ್ಬನನ್ನು ಅಥವಾ ಇನ್ನೊಂದನ್ನು ಮೀರುವ ಕ್ರಮವೆಂದರೆ ತನ್ನ ಸಾಧನೆಯಿಂದ. ಇದು ಕಾನೂನಿನ ಪ್ರಶ್ನೆಯಲ್ಲ. ಆದರೆ ಎಲ್ಲ ಭಾಷೆಗಳ ಮೂಲವೆಂದು ಸ್ವಯಂಘೋಷಿಸಿಕೊಂಡ ಸಂಸ್ಕೃತವು ಈಗ ನ್ಯಾಯಾಲಯದ ಮೂಲಕ ಕನ್ನಡವನ್ನು ಕುಗ್ಗಿಸಿ ತನ್ನನ್ನು ತಾನು ಹಿಗ್ಗಿಸಿಕೊಳ್ಳಲು ಹೊರಟಿದೆ. ಇಲ್ಲಿ ಭಾವನೆಯೂ ಇಲ್ಲ, ವಿಚಾರವೂ ಇಲ್ಲ. ಗದ್ದುಗೆಯ ಆಟ ಮಾತ್ರ. ಧ್ರುವ ಚರಿತ್ರೆ ಆರಂಭವಾದದ್ದೂ ಹೀಗೆಯೇ!

ಒಕ್ಕೂಟ ಸರಕಾರವು ತನ್ನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದಿಯ ಹೊರತು ಇತರ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ನೀತಿಯಿಲ್ಲವೆಂದು ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸಿತು. ಕರ್ನಾಟಕ ಸರಕಾರದ ಪರ ವಕೀಲರು ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಮಂದಿ ಕನ್ನಡವನ್ನು ಆಯ್ಕೆ ಮಾಡಿದ್ದಾರೆಂದು ಹೇಳಿದರು. ನ್ಯಾಯಾಲಯವು ಕೇಂದ್ರದ ಶಿಕ್ಷಣ (ರಣ)ನೀತಿಯನ್ನೊಪ್ಪಿ ಸದ್ಯ ಕನ್ನಡದ ಹಾದಿಯನ್ನು ದುರ್ಗಮಗೊಳಿಸಿದೆ.

ರಾಜಕಾರಣಿಗಳಿಗೆ ಭಾಷೆಯಿಲ್ಲ; ಭಾಷೆ ಬೇಡ!

 ಆದರೆ ಪ್ರಶ್ನೆ ಇಷ್ಟೇ ಅಲ್ಲ. ಒಂದು ದೇಶ ಒಂದು ವೇಷ, ಒಂದು ಬಣ್ಣ, ಒಂದು ಪಕ್ಷ, ಒಂದು ವಿಚಾರ, ಒಂದು ಧರ್ಮ ಎಂಬಿತ್ಯಾದಿ ಸರ್ವಸ್ವಾಮ್ಯದ ನೀತಿಯನ್ನು ಶಿಕ್ಷಣದಲ್ಲೂ ತಂದು ಕಾಮನಬಿಲ್ಲನ್ನು ಅವಮಾನಿಸಿ ಮುಗ್ಧ ಮನಸ್ಸುಗಳನ್ನು ತಿದ್ದಲಾಗದಂತೆ ವಿರೂಪಗೊಳಿಸುವ ಒಕ್ಕೂಟ ಸರಕಾರದ ಯತ್ನವು ಈಗ ನಡೆಯುತ್ತಿರುವ ಅವ್ಯವಸ್ಥೆಗಿಂತಲೂ ಸಾಮಾಜಿಕ ಅಸ್ತವ್ಯಸ್ತತೆಗೆ ಕಾರಣವಾಗಲಿದೆ. ಹಿಂದಿಯನ್ನು ಕಡ್ಡಾಯಗೊಳಿಸುವ ಯತ್ನವು ಮನುಷ್ಯನ ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಮಣ್ಣುಪಾಲಾಗಿಸಲಿದೆ. ಮೆಕಾಲೆ ಎಂಬವನು 19ನೇ ಶತಮಾನದ ಪೂರ್ವಾರ್ಧದಲ್ಲಿ ಇಂಗ್ಲಿಷ್ ಶಿಕ್ಷಣದ ಮೂಲಕ ತಮ್ಮ ಮತ್ತು ಜನಸಾಮಾನ್ಯರ ನಡುವೆ ಸಂಪರ್ಕಸೇತುವಾಗಿ ಕೆಲಸಮಾಡಬಲ್ಲ ಮತ್ತು ಭಾರತೀಯ ಚಿಂತನಾ ವಿಧಾನವನ್ನೇ ಬುಡಮೇಲು ಮಾಡಬಲ್ಲ ಯೋಜನೆಯನ್ನು ಹುಟ್ಟುಹಾಕಿದ. (ಹಾಗೆಂದು ನಾವು ಆಪಾದಿಸುತ್ತೇವೆ.) ಆದರೆ ಭಾರತೀಯ ಭಾಷಾ ಬೆಳವಣೆಗೆಗೂ ಬ್ರಿಟಿಷರ ಕೊಡುಗೆ ಸಾಕಷ್ಟಿತ್ತು.

ಕನ್ನಡದ ಹಳೆಯ ಕಾವ್ಯಗಳ ಸಂಪಾದನೆ/ಸಂಗ್ರಹ, ಮುದ್ರಣ, ಹಂಚಿಕೆ ಇವೆಲ್ಲವೂ ಅವರ ಪಠ್ಯಪರಿವಿಡಿಯಲ್ಲಿತ್ತು. ಮೆಕಾಲೆಯ ಉದ್ದೇಶವೇನೇ ಇರಲಿ, ಅದು ಇಂಗ್ಲಿಷನ್ನು ಬೆಳೆಸಿತಾದರೂ ಕನ್ನಡವನ್ನು ಕೊಲ್ಲಲಿಲ್ಲ. ಕನ್ನಡವೂ ಬೆಳೆಯಿತು. ಕನ್ನಡವನ್ನು ಕೊಲ್ಲುತ್ತಿರುವವರು ನಾವೇ. ಇವೆಲ್ಲವುಗಳ ನಡುವೆ ಭಾರತೀಯ ದೃಷ್ಟಿಕೋನವು ಆಧುನಿಕವಾಗಲಾರಂಭಿಸಿತು. ಮೆಕಾಲೆಯನ್ನು ದೂಷಿಸುವ ನಾವು ಬ್ರಿಟಿಷರ ಮೂಲಕ ರದ್ದಾದ ಸತಿಸಹಗಮನ, ಬಾಲ್ಯವಿವಾಹ ಮುಂತಾದವುಗಳಿಗೆ ನೆರವಾದ ಬೆಂಟಿಂಕ್ ಮುಂತಾದ ಸಾಮಾಜಿಕ ಸುಧಾರಕರನ್ನು ಮರೆಯುತ್ತೇವೆ. ಇಂಗ್ಲಿಷ್ ಇಲ್ಲದಿದ್ದರೆ ನನ್ನಂಥವರು ಟಾಲ್‌ಸ್ಟಾಯ್‌ಯನ್ನು ಮಾತ್ರವಲ್ಲ, ರವೀಂದ್ರರನ್ನೂ ಓದುತ್ತಿರಲಿಲ್ಲ. ಇಂಗ್ಲಿಷ್ ವಿರುದ್ಧ ನಾವು ದೇಶಿಯನ್ನು ವಹಿಸಿಕೊಳ್ಳುತ್ತೇವೆ, ನಿಜ. ಆದರೆ ಈಗ ಹಿಂದಿ ಹೇರಿಕೆಯ ನಡೆಯಿಂದಾಗಿ ನಾವು-ಮುಖ್ಯವಾಗಿ ಕನ್ನಡಿಗರು-ಅತ್ತಲೂ ಇಲ್ಲ ಇತ್ತಲೂ ಅಲ್ಲ ಎಂಬ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮಲ್ಲಿ ತಮಿಳರ, ಮಲೆಯಾಳಿಗಳ ಹಾಗೆ ಅಸ್ಮಿತೆಯೆಂಬುದು ಕಾಣಸಿಗದು. ನಾವೇನಿದ್ದರೂ ಸ್ವಂತ ಲಾಭ, ಪ್ರಚಾರ, ಪ್ರಶಸ್ತಿ, ಪುರಸ್ಕಾರ, ಪ್ರತಿಷ್ಠೆ ಇಷ್ಟಕ್ಕೆ ಕನ್ನಡವನ್ನು ಬಳಸಿಕೊಳ್ಳುವವರು ಎಂದು ವಿಷಾದದಿಂದಲೇ ಹೇಳಬೇಕಾಗುತ್ತದೆ. ಒಪ್ಪಿಗೆಯಾಗದಿದ್ದರೆ ನಮ್ಮ ಜನಪ್ರಿಯ ಬರಹಗಾರರನ್ನು, ಚಿಂತಕರನ್ನು ಗಮನಿಸಿ. ಭವಿಷ್ಯ ಇನ್ನೂ ಮಬ್ಬಾಗಿದೆ.

ಆದರೆ ಇಂಗ್ಲಿಷನ್ನು ಕಳಿಸಿ ಹಿಂದಿಯನ್ನು ಉಳಿಸಿಕೊಳ್ಳಬೇಕೆಂಬುದು ಈಗಿನ ಹೊಸ ನಡೆಯೇನಲ್ಲ. ಭಾರತದ ಸಂವಿಧಾನ ನಿರ್ಮಾಪಕರು ಭಾಗ 17ರಲ್ಲಿ ರಾಜಭಾಷೆಯ ಕುರಿತು ದೇಶದ ನೀತಿಯನ್ನು ಘೋಷಿಸಿದ್ದಾರೆ. ಅದರಂತೆ ಇಂಗ್ಲಿಷ್ ಭಾರತೀಯರಿಗೆ ನಮ್ಮದೇ ಮನೆ ಸಿಗುವ ವರೆಗಿನ ಬಾಡಿಗೆಯ ಮನೆ; ಅತಿಥಿಗೃಹ. ಈ ಭಾಗದ 4 ಅಧ್ಯಾಯಗಳಲ್ಲಿ ಸಂಘದ ಭಾಷೆ, ಪ್ರಾದೇಶಿಕ ಭಾಷೆಗಳು, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ಭಾಷೆ ಹಾಗೂ ಕೊನೆಯದಾಗಿ ವಿಶೇಷ ನಿರ್ದೇಶನಗಳು ಎಂಬಂತೆ 343ನೇ ವಿಧಿಯಿಂದ 351ನೇ ವಿಧಿಯ ವರೆಗೆ ಚರ್ಚಿಸಲಾಗಿದೆ. ಮೊದಲ ಅಧ್ಯಾಯದಂತೆ ಸಂವಿಧಾನವು ಪ್ರಾರಂಭವಾದಾಗಿನಿಂದ, 15 ವರ್ಷಗಳ ಅವಧಿಯವರೆಗೆ, ಇಂಗ್ಲಿಷ್ ಭಾಷೆಯನ್ನು ಉಪಯೋಗಿಸಲು ಅವಕಾಶವಿದೆ. ಅಂಕಿಗಳನ್ನು ಮಾತ್ರ ಭಾರತೀಯ ಅಂಕಿಗಳ ಅಂತರ್‌ರಾಷ್ಟ್ರೀಯ ರೂಪವಾಗಿರಿಸಿದೆ. ಇಂಗ್ಲಿಷ್‌ನ ಜೊತೆಗೆ ಹಿಂದಿ ಮತ್ತು ಅಂತರ್‌ರಾಷ್ಟ್ರೀಯ ಅಂಕಿಗಳ ಜೊತೆಗೆ ದೇವನಾಗರಿ ರೂಪದ ಅಂಕಿಗಳ ಬಳಕೆಯನ್ನು ಅಧಿಕೃತಗೊಳಿಸಬಹುದಾಗಿದೆ. 15 ವರ್ಷಗಳ ಅನಂತರ ಈ ಬಗ್ಗೆ ಕಾನೂನನ್ನು ತರಬಹುದು. ಐದು ವರ್ಷಗಳ ಬಳಿಕ ಒಂದು ರಾಜಭಾಷಾ ಆಯೋಗವನ್ನು ಮತ್ತು ಸಂಸದೀಯ ಸಮಿತಿಯನ್ನು ರಚಿಸಬಹುದು. ಈ ಆಯೋಗವು ಹಿಂದಿ ಭಾಷೆಯನ್ನು ಮಾತನಾಡದ ಪ್ರದೇಶಗಳ ನ್ಯಾಯವಾದ ಬೇಡಿಕೆ ಮತ್ತು ಹಿತಾಸಕ್ತಿಗಳನ್ನು ಗಮನಿಸಬೇಕು. ಆನಂತರ ಸೂಕ್ತ ನಿರ್ದೇಶನಗಳನ್ನು ಹೊರಡಿಸಬಹುದು.

2ನೇ ಅಧ್ಯಾಯದಂತೆ ರಾಜ್ಯಗಳಿಗೆ ತಮ್ಮ ಆಯ್ಕೆಯ ರಾಜಭಾಷೆಗಳನ್ನು ಆಡಳಿತಕ್ಕೆ ಮತ್ತು ಬಳಕೆಗೆ ಅಂಗೀಕರಿಸಬಹುದು. ಆದರೆ ತತ್ಕಾಲದ ಅಧಿಕೃತ ಭಾಷೆಯು (ಇಂಗ್ಲಿಷ್) ರಾಜ್ಯ-ರಾಜ್ಯಗಳ, ರಾಜ್ಯ ಮತ್ತು ಸಂಘದ ನಡುವಣ ಸಂಪರ್ಕಭಾಷೆಯಾಗಿರಬೇಕು. ಈ ಪೈಕಿ ಎರಡು ರಾಜ್ಯಗಳು ಹಿಂದಿಯನ್ನು ಒಪ್ಪಿಕೊಂಡರೆ ಹಿಂದಿಯನ್ನು ಬಳಸಬಹುದು. ಉತ್ತರ ಭಾರತದ ಬಹಳಷ್ಟು ರಾಜ್ಯಗಳು ಹಿಂದಿಯನ್ನು ಬಳಸುವುದು ಈ ಕಾರಣಕ್ಕೆ (ಮತ್ತು ಪ್ರಾಯಃ ಇಂಗ್ಲಿಷ್ ಸರಿಯಾಗಿ ಬಾರದಿರುವುದಕ್ಕೆ!) ರಾಜ್ಯದೊಳಗೂ ವಿವಿಧ ಸಮುದಾಯಗಳ ಪೈಕಿ ಸಾಕಷ್ಟು ಮಂದಿ ಮಾತನಾಡುವ ಭಾಷೆಗೂ ಮಾನ್ಯತೆ ನೀಡಬಹುದು. 3ನೇ ಅಧ್ಯಾಯದಲ್ಲಿ ಮೇಲ್‌ಸ್ತರದ ನ್ಯಾಯಾಲಯಗಳಲ್ಲಿ ಇಂಗ್ಲಿಷ್ ಭಾಷೆಗೆ ಅವಕಾಶ ನೀಡಲಾಗಿದೆ. ಹಾಗೂ ಅಧಿಕೃತ ಪಾಠಗಳು ಇಂಗ್ಲಿಷ್‌ನಲ್ಲೇ ಇರಬೇಕೆಂದು ನಿರ್ದೇಶಿಸಿದೆ. ಆಯಾಯ ರಾಜ್ಯಭಾಷೆಗಳಿಗೆ ಅನುವಾದಿಸಿದಾಗಲೂ ಇಂಗ್ಲಿಷ್ ಭಾಷೆಯ ಪಾಠವೇ ಅಧಿಕೃತವೆಂದು ತಿಳಿಯಬೇಕಾಗಿದೆ. (ಇದೂ ಸರಿಯೇ. ಅನುವಾದಗಳನ್ನು ಗಮನಿಸಿದರೆ ನಮ್ಮದಲ್ಲದ ಇಂಗ್ಲಿಷೇ ವಾಸಿ ಅನ್ನಿಸುತ್ತದೆ.)

4ನೇ ಅಧ್ಯಾಯದಲ್ಲಿ ತನ್ನ ರಾಜ್ಯದಲ್ಲಿ ಅಧಿಕೃತವಾಗಿ ಬಳಸುವ ಭಾಷೆಯಲ್ಲಿ ಅರ್ಜಿ/ಮನವಿಯನ್ನು ಸಲ್ಲಿಸಲು ಅವಕಾಶವಿದೆ. ಈ ಅಧ್ಯಾಯದ ಕೊನೆಯಲ್ಲಿ (351ನೇ ವಿಧಿ) 'ಹಿಂದಿ ಭಾಷೆಯ ಅಭಿವೃದ್ಧಿಗಾಗಿ ನಿರ್ದೇಶನ' ಎಂಬ ಉಪಶೀರ್ಷಿಕೆಯಡಿ ''ಭಾರತದ ಸಮ್ಮಿಶ್ರ ಸಂಸ್ಕೃತಿಯ ಎಲ್ಲ ಮೂಲತತ್ವಗಳ ಅಭಿವ್ಯಕ್ತಿ ಮಾಧ್ಯಮವಾಗಿರುವಂತೆ ಹಿಂದಿ ಭಾಷೆಯನ್ನು ಅಭಿವೃದ್ಧಿಗೊಳಿಸುವುದು ಮತ್ತು ಅದರ ಜಾಯಮಾನಕ್ಕೆ ಚ್ಯುತಿ ಬಾರದಂತೆ ಹಿಂದೂಸ್ಥಾನೀ ಭಾಷೆಯಲ್ಲಿ ಅಥವಾ ಎಂಟನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭಾರತದ ಇತರ ಭಾಷೆಗಳಲ್ಲಿ ಉಪಯೋಗಿಸಲಾಗಿರುವ ರೂಪಗಳು, ಶೈಲಿ ಮತ್ತು ಪದಾವಳಿಗಳನ್ನು ಏಕರೂಪಗೊಳಿಸುವುದರ ಮೂಲಕ ಮತ್ತು ಅವಶ್ಯವಾದಾಗಲೆಲ್ಲ ಅಥವಾ ಅಪೇಕ್ಷಿತವಾದೆಡೆಗಳಲ್ಲೆಲ್ಲ, ಅದರ ಶಬ್ದ ಭಂಡಾರಕ್ಕಾಗಿ ಮೊದಲನೆಯದಾಗಿ ಸಂಸ್ಕೃತದಿಂದಲೂ, ಎರಡನೆಯದಾಗಿ ಇತರ ಭಾಷೆಗಳಿಂದಲೂ ಶಬ್ದಗಳನ್ನು ತೆಗೆದುಕೊಳ್ಳುವುದರ ಮೂಲಕ ಅದರ ಶ್ರೀಮಂತಿಕೆಯು ಸುನಿಶ್ಚಿತಗೊಳ್ಳುವಂತೆ ಹಿಂದಿ ಭಾಷೆಯ ಪ್ರಸಾರವನ್ನು ಉನ್ನತಿಗೊಳಿಸುವುದು ಸಂಘದ ಕರ್ತವ್ಯವಾಗಿರತಕ್ಕುದು.'' ಎಂದು ಹೇಳಲಾಗಿದೆ. ಇದು ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಪ್ರಕಟನೆೆಯಾಗಿರುವುದರಿಂದ ಅರ್ಥವಾಗಲು ಕಷ್ಟವಾದರೆ ಮೂಲ ಇಂಗ್ಲಿಷ್ ಆವೃತ್ತಿಯನ್ನು ಆಶ್ರಯಿಸಬಹುದು. ಆದರೂ ಇದರ ತಾತ್ಪರ್ಯವೆಂದರೆ ಹಿಂದಿಯನ್ನು ಎಲ್ಲೆಡೆ ಹಬ್ಬಿಸುವುದು ಮತ್ತು ಆದ್ಯತೆಯಿಂದ ಸಂಸ್ಕೃತವನ್ನು ಒಳಗೊಳ್ಳುವುದು ಮತ್ತು ಇವೆರಡೂ ಅಶಕ್ತವಾದರೆ ಇತರ ರಾಜ್ಯಭಾಷೆಗಳನ್ನು ಗಮನಿಸುವುದು.

ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಂದು ಧರ್ಮ, ಮತ, ಜಾತಿಯ ಭಾವನಾತ್ಮಕ ಅಂಶಗಳ ಮೂಲಕ ಜನರನ್ನು ಪ್ರಚೋದಿಸುವ ಮತ್ತು ಸಂವಿಧಾನವನ್ನು ಅಲಕ್ಷಿಸುವ ಒಕ್ಕೂಟ ಸರಕಾರವು ಹಿಂದಿ ಹೇರಿಕೆಗೆ ಮಾತ್ರ ಸಂವಿಧಾನದ ವಿಚಾರವನ್ನವಲಂಬಿಸಿದಂತೆ ಮತ್ತು ಆ ಮೂಲಕ ತನ್ನ ಏಕ ನೀತಿಯನ್ನು ಜಾರಿಗೊಳಿಸುವತ್ತ ದಾಪುಗಾಲು ಹಾಕಿದೆಯೆಂದು ಗೊತ್ತಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಣ್ಣುಮುಚ್ಚಿ ಒಪ್ಪಿದವರು ಇದರಿಂದಾಗಿ ರಾಜ್ಯಭಾಷೆಗಳಿಗೆ ಆಗುವ ಅನ್ಯಾಯವನ್ನು ಗುರುತಿಸುವುದು ಒಳ್ಳೆಯದು. ಸರಕಾರ(ಗಳು) ಸಂವಿಧಾನವನ್ನು ತಮಗೆ ಬೇಕಾದಂತೆ ಅರ್ಥವಿಸಿಕೊಳ್ಳುವ ಈ ಕಾಲದಲ್ಲಿ ಕನ್ನಡದ ಪಾಡು ಕೊರೋನಕ್ಕಿಂತಲೂ ಹೆಚ್ಚು ಅಪಾಯವನ್ನು ತಂದೊಡ್ಡಬಲ್ಲುದು. ಕನ್ನಡದ ಗುಡಿ ಕಾಯೆ, ನುಡಿ ಕಾಯೆ, ನಡೆ ಕಾಯೆ, ಯಾರು ಬರಬೇಕು? ಕನ್ನಡ ಭುವನೇಶ್ವರಿ ಮತಯಂತ್ರವಾಗಿರುವಾಗ, ಕನ್ನಡ ಭಾಷೆ-ಸಾಹಿತ್ಯ ಪ್ರಶಸ್ತಿ-ಪುರಸ್ಕಾರಕ್ಕಷ್ಟೇ ಸೀಮಿತವಾಗಿರುವಾಗ ಕನ್ನಡದ ರಥಕ್ಕೆ ಕಾಡ ಮೂಲಕವೆ ಪಥ-ಆಗಸಕ್ಕಲ್ಲ; ಅಳಿವಿಗೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)