ಬಲಿಷ್ಠರ ಮೌನ ಅಪಾಯಕ್ಕೆ ಆಹ್ವಾನ!
ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾರ್ಪೊರೇಟ್ ದಿಗ್ಗಜರ ವೌನ ಅಥವಾ ವಿನಮ್ರತೆಯು ಜಗತ್ತಿನ ಅತಿ ಬಲಿಷ್ಠ ಪ್ರಜಾಪ್ರಭುತ್ವವೆನಿಸಿರುವ ಅಮೆರಿಕದಲ್ಲಿನ ಕಾರ್ಪೊರೇಟ್ ಮಂದಿಗಿಂತ ಸಂಪೂರ್ಣ ವ್ಯತಿರಿಕ್ತವಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಬಿಳಿಯ ಜನಾಂಗೀಯ ಶ್ರೇಷ್ಠತೆ ನಿಲುವಿಗೆ ಅಮೆರಿಕದ ಕಾರ್ಪೊರೇಟ್ ಕಂಪೆನಿಗಳು ಪ್ರಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದವು. ಇದಕ್ಕೆ ಟ್ರಂಪ್ ಅವರ ಆಡಳಿತದ ಆರಂಭ ವರ್ಷಗಳೇ ಉತ್ತಮ ನಿದರ್ಶನವಾಗಿದೆ.
ಸೆಲೆಬ್ರಿಟಿ ಚಿತ್ರ ತಾರೆಯರು ಹಾಗೂ ಕ್ರೀಡಾಪಟುಗಳು ದಕ್ಷಿಣ ಏಶ್ಯದ ಈ ಭಾಗದಲ್ಲಿ ಕುತೂಹಲಕರವಾದ ಸಾಮ್ಯತೆಯನ್ನು ಹೊಂದಿದ್ದಾರೆ. ಅವರ ನೈತಿಕತೆಯ ದಿಕ್ಸೂಚಿಯು ಸಾಮಾನ್ಯವಾಗಿ ಸಿರಿವಂತ, ಬಲಿಷ್ಠ ಹಾಗೂ ಪ್ರಭಾವಿ ವ್ಯಕ್ತಿಗಳ ‘ಸದಾಚಾರ’ದೆಡೆಗೆ ವಾಲುತ್ತದೆ.
ತಮ್ಮ ಧರ್ಮದ ಹೆಸರಿನಲ್ಲಿ ರಸ್ತೆ, ಬೀದಿಗಳಲ್ಲಿ ಅಮಾಯಕ ಜನರನ್ನು ಥಳಿಸಿ ಹತ್ಯೆಗೈಯುವ ಹಾಗೂ ವಿಭಿನ್ನ ಸಮುದಾಯಗಳಿಗೆ ಸೇರಿದ ಪ್ರೇಮಿಗಳನ್ನು ಬೆನ್ನಟ್ಟುವ, ಸಾರ್ವಜನಿಕ ವೇದಿಕೆಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹತ್ಯಾಕಾಂಡಕ್ಕೆ ಬಹಿರಂಗವಾಗಿ ಕರೆ ನೀಡುವ ಹಾಗೂ ಇದೇ ರೀತಿಯ ದ್ವೇಷಭರಿತ ಕೃತ್ಯಗಳು ಸಾಮಾನ್ಯವಾಗಿ ಅವರ ಆತ್ಮಸಾಕ್ಷಿಯನ್ನು ಬಾಧಿಸುವುದಿಲ್ಲ. ಕಾರ್ಪೊರೇಟ್ ಜಗತ್ತಿನ ಪ್ರತಿಷ್ಠಿತರು ಕೂಡಾ ಇವರಿಗಿಂತ ಭಿನ್ನವಾಗಿಲ್ಲ.
ಆದಾಗ್ಯೂ ಒಮ್ಮಮ್ಮೆ ಇಂತಹ ಅನಿಷ್ಟಗಳಿಗೆ ಅಸಮ್ಮತಿ ವ್ಯಕ್ತಪಡಿಸುವ ಧ್ವನಿಗಳೂ ಕೇಳಿಬರುತ್ತಿವೆ. ಭಾರತದ ಅತಿ ದೊಡ್ಡ ಬಯೋಫಾರ್ಮಾಸ್ಯೂಟಿಕಲ್ ಕಂಪೆನಿಯ ಸಂಸ್ಥಾಪಕಿಯಾದ ಕಿರಣ್ ಮಜುಂದಾರ್ ಶಾ ನಿಖರವಾಗಿ ಹಾಗೆಯೇ ಮಾಡಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಕೋಮು ವಿಭಜನೆಯ ಬಗ್ಗೆ ಅವರು ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದ್ದರು. ಹಾಗೂ ಐಟಿಬಿಟಿ (ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ) ಉದ್ಯಮ ವಲಯದಲ್ಲಿ ಭಾರತದ ಜಾಗತಿಕ ನಾಯಕತ್ವಕ್ಕೆ ಇದರಿಂದ ಹೇಗೆ ಹಿನ್ನಡೆಯಾಗಲಿದೆಯೆಂಬುದನ್ನು ಅವರು ವಿವರಿಸಿದ್ದರು.
ಆರ್ಥಿಕ ದೃಷ್ಟಿಕೋನದಿಂದ ಕೂಡಿದ ಆಕೆಯ ಹೇಳಿಕೆಯು ಅತ್ಯಂತ ಸೌಮ್ಯ ರೂಪದ್ದಾಗಿರಬಹುದು, ಆದರೂ ಅವರ ವಿರುದ್ಧ ಬಲಪಂಥೀಯರು ಟ್ರೋಲ್‌ಗಳ ಸುರಿಮಳೆಗರೆಯುವುದಕ್ಕೆ ಅದರಿಂದ ಅಡ್ಡಿಯಾಗಲಿಲ್ಲ,
ದೇವಾಲಯಗಳ ಪರಿಸರದಲ್ಲಿ ಹಿಂದೂಯೇತರ ವರ್ತಕರು ವ್ಯಾಪಾರ ಮಾಡುವುದಕ್ಕೆ ಅನುಮತಿಯನ್ನು ನಿರಾಕರಿಸಿದ್ದುದು, ಆವರಿಗೆ ಹೀಗೆ ಮಾತನಾಡುವಂತಾಗಲು ಪ್ರೇರೇಪಿಸಿತು. ಆದರೆ ಈ ವಿವಾದವು ಕಳೆದ ಕೆಲವು ಸಮಯದಿಂದ ಹೊಗೆಯಾಡುತ್ತಲೇ ಇತ್ತು.
ಆಕೆಯ ಅಭಿಪ್ರಾಯವನ್ನು ಬೆಂಬಲಿಸಿ ಹಲವಾರು ಮಂದಿ ಧ್ವನಿಯೆತ್ತಿದರು. ಆದರೆ ಕಾರ್ಪೊರೇಟ್ ಸಮುದಾಯದ ಯಾರೂ ಕೂಡಾ ಆಕೆಯ ಜೊತೆ ಏಕತೆಯನ್ನು ಪ್ರದರ್ಶಿಸಲಿಲ್ಲ. ಕೆಟ್ಟದ್ದನ್ನು ಆಡಬೇಡಿ, ಕೆಟ್ಟದ್ದನ್ನು ನೋಡಬೇಡಿ
‘ಪ್ರಭಾವಿಗಳ ಈ ವೌನದ ಕುರಿತು ವಿಶೇಷವಾದುದೇನೂ ಇಲ್ಲ. ಇಂದಿನ ದಿನಗಳಲ್ಲಿ ಕೆಟ್ಟದ್ದನ್ನು ಹೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ ಹಾಗೂ ಕೆಟ್ಟದ್ದನ್ನು ಕೇಳಬೇಡಿ’ ಎಂಬುದೇ ಅವರ ಧೋರಣೆಯಾಗಿದೆ.
ಗುಂಪು ಥಳಿತದಿಂದ ಹತ್ಯೆ, ಗಾಂಧಿ ಹಂತಕನ ವೈಭವೀಕರಣ ಅಥವಾ ಉದ್ಯಮರಂಗದಲ್ಲಿ ಭಯದ ವಾತಾವರಣ ಕುರಿತು ಖ್ಯಾತ ಉದ್ಯಮಿ ರಾಹುಲ್ ಬಜಾಜ್ ಅವರು ಅಮಿತ್ ಶಾ ಅವರಿಗೆ ಸಾರ್ವಜನಿಕವಾಗಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದ್ದುದು ಇದಕ್ಕೊಂದು ಉತ್ಕೃಷ್ಟವಾದ ಉದಾಹರಣೆಯಾಗಿದೆ. ಆದರೆ ಕಾರ್ಪೊರೇಟ್ ಜಗತ್ತಿನ ಗಣ್ಯರಿಂದ ಸಂಪೂರ್ಣವಾಗಿ ವೌನ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ದೊಡ್ಡದಾದ ಸಾಂವಿಧಾನಿಕ ವಿಷಯಗಳನ್ನಾಗಲಿ ಅಥವಾ ಸಾಮಾಜಿಕ ಸಮಸ್ಯೆಗಳನ್ನಾಗಲಿ ಮರೆತುಬಿಡಿ. ಈ ಕಾರ್ಪೊರೇಟ್ ಧಣಿಗಳ ವಿಧೇಯತೆ ಅಥವಾ ನಿರ್ಲಿಪ್ತತೆಯು ಅವರ ಖಾಸಗಿ ವಿಷಯಗಳಿಗೂ ವಿಸ್ತರಿಸಿದೆ.
ಕಳೆದ ವರ್ಷ ಆಡಳಿತಾರೂಢ ಸರಕಾರಕ್ಕೆ ನಿಕಟವಾಗಿರುವ ಮ್ಯಾಗಝಿನ್ ಪತ್ರಿಕೆಯೊಂದು ಇನ್‌ಫೋಸಿಸ್‌ನಂತಹ ಬ್ಲೂಚಿಪ್ ಕಂಪೆನಿಯ ವಿರುದ್ಧ ಕೆಟ್ಟ ಆರೋಪಗಳನ್ನು ಮಾಡಿತ್ತು. ಇದೊಂದು ದೇಶದ್ರೋಹಿ ಸಂಸ್ಥೆಯೆಂದು ನಿಂದಿಸಿದ ಪತ್ರಿಕೆಯು ನಕ್ಸಲರಿಗೆ, ತುಕ್ಡೆ ತುಕ್ಡೆ ಗ್ಯಾಂಗ್ ಇತ್ಯಾದಿಗೆ ನೆರವಾಗುತ್ತಿದೆಯೆಂದು ಆರೋಪಿಸಿತ್ತು. ವಾಸ್ತವವೇನೆಂದರೆ ಈ ಪ್ರಮುಖ ಬ್ಲೂಚಿಪ್ ಕಂಪೆನಿಯ ನಿರ್ವಹಣೆಯಲ್ಲಿ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಕಳೆದ ಕೆಲವು ತಿಂಗಳುಗಳಿಂದ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿತ್ತು. ಇನ್‌ಫೋಸಿಸ್ ಮೇಲೆ ದಾಳಿ ನಡೆಸಲು ಆರೆಸ್ಸೆಸ್‌ಗೆ ನಿಷ್ಠವಾದ ಈ ಪತ್ರಿಕೆಗೆ ಈ ವಿಷಯ ಧಾರಾಳವಾಗಿ ಸಾಕಾಯಿತು.ಇದೇ ವೇಳೆ ಮೋದಿ-ಶಾ ಅವರ ಪರಮನಿಷ್ಠರಾಗಿರುವ ಸಚಿವ ಪಿಯೂಶ್ ಗೋಯಲ್ ಅವರು ಟಾಟಾ ಸೇರಿದಂತೆ ಹಲವು ಪ್ರಮುಖ ಉದ್ಯಮಸಂಸ್ಥೆಗಳು ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಸಾಕಷ್ಟು ಶ್ರಮಿಸುತ್ತಿಲ್ಲವೆಂದು ಟೀಕಿಸಿದ್ದರು, ಆದರೆ ಆನಂತರ ನಡೆದಿದ್ದುದು ಎಲ್ಲರೂ ಕಣ್ತೆರೆಯುವಂತಿತ್ತು. ಈ ಆರೋಪಗಳು ಆಧಾರರಹಿತ ಹಾಗೂ ಹುರುಳಿಲ್ಲದ್ದು ಎಂಬ ಸತ್ಯಾಂಶದ ಹೊರತಾಗಿಯೂ ಈ ಕೊಳಕು ಅಭಿಯಾನವನ್ನು ಎದುರಿಸಲು ಅಥವಾ ಸಂಬಂಧಪಟ್ಟ ವ್ಯಕ್ತಿಗಳಿಗೆ ಅಸಮ್ಮತಿ ಪತ್ರವನ್ನು ಕಳುಹಿಸಲು ಈ ಎರಡೂ ಕಂಪೆನಿಗಳನ್ನು ಪ್ರೇರೇಪಿಸಲಿಲ್ಲ. ಅಲ್ಲದೆ ಅವು ಯಾವುದೇ ದೂರು ಕೂಡಾ ನೀಡಲಿಲ್ಲ. ನೊಂದ ಗುಂಪಿನಿಂದ ಯಾವುದೇ ದೂರು ದಾಖಲಾಗಲಿಲ್ಲ.
ನಾವಿಬ್ಬರು, ನಮಗಿಬ್ಬರು
ಈ ಕಾರ್ಪೊರೇಟ್ ಕಂಪೆನಿಗಳ ವೌನಕ್ಕೆ ಆಡಳಿತ ರೂಢ ಸರಕಾರದ ಒಂದು ಕೈಗೆ ಬೆಣ್ಣೆ , ಇನ್ನೊಂದು ಕೈಗೆ ಸುಣ್ಣ ನೀತಿಯೇ ಕಾರಣವಾಗಿದೆ.
ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಲು ಸಿದ್ಧವಾಗಿರುವ ಉದ್ಯಮಸಂಸ್ಥೆಗಳಿಗೆ ವಿಶೇಷವಾದ ಸವಲತ್ತುಗಳನ್ನು ಒದಗಿಸುವುದು, ಹಾಗೆ ನಡೆಯದ ಕಂಪೆನಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಿಂದ ಹಿಡಿದು ಸಿಬಿಐವರೆಗೆ ವಿವಿಧ ತನಿಖಾ ಸಂಸ್ಥೆಗಳ ಮೂಲಕ ಬಲಪ್ರಯೋಗಿಸಲಾಗುತ್ತದೆಯೆಂಬುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯವಾಗಿದೆ.
ಒಂದೊಮ್ಮೆ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ನಂಬರ್ 1 ಸಂಸ್ಥೆಯಾಗಿದ್ದ ಜಿಎಂಆರ್ ಗ್ರೂಪ್ ಮುಂಬೈ ವಿಮಾನ ನಿಲ್ದಾಣವನ್ನು ಅತ್ಯಧಿಕ ಲಾಭದಾಯಕವಾಗಿಸುವಲ್ಲಿ ಯಶಸ್ವಿಯಾಗಿತ್ತು. ಆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವಂತೆ ಸರಕಾರ ಮನವೊಲಿಸತೊಡಗಿದಾಗ ಜಿಎಂಆರ್ ಗ್ರೂಪ್ ಒಪ್ಪಲಿಲ್ಲ. ಪ್ರತಿಯೊಂದು ಬೃಹತ್ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಹುಳುಕುಗಳಿರುತ್ತವೆಯೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಉದ್ಯಮಸಂಸ್ಥೆಗಳನ್ನು ಹೇಗೆ ಮಟ್ಟಹಾಕಬೇಕೆಂದು ಈ ಸರಕಾರಕ್ಕೆ ಚೆನ್ನಾಗಿ ತಿಳಿದಿದೆ.
ಮೋದಿ-ಶಾ ಆಡಳಿತವು ಹೇಗೆ ಹಮ್ ದೋ -ಹಮಾರೆ ದೋ ಸರಕಾರವಾಗಿದೆಯೆಂಬುದನ್ನು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಬಹಿರಂಗವಾಗಿ ವಿವರಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಬೃಹತ್ ಯಶಸ್ಸನ್ನು ಕಾಣುತ್ತಿರುವಂತಹ ಎರಡು ಬೃಹತ್ ಕಾರ್ಪೊರೇಟ್ ಸಂಸ್ಥೆಗಳನ್ನು ಮೋದಿ ಸರಕಾರ ಪೋಷಿಸುತ್ತಿರುವುದನ್ನು ಉದ್ದೇಶಿಸಿ ರಾಹುಲ್ ಹೀಗೆ ಹೇಳಿದ್ದರು.
2000ನೇ ಇಸವಿಯ ಆರಂಭದಲ್ಲಿ ಪುಟ್ಟಸಂಸ್ಥೆಯಾಗಿದ್ದ ಅದಾನಿ ಸಮೂಹವು ಹೇಗೆ ಒಂದು ಜಾಗತಿಕ ಮಟ್ಟದ ಕಂಪೆನಿಯಾಗಿ ಬೆಳೆಯಿತೆಂಬುದು ಅಧ್ಯಯನ ಯೋಗ್ಯ ವಿಷಯವಾಗಿದೆ. ಸುಮಾರು ಎರಡು ದಶಕಗಳಲ್ಲಿ ಅದಾನಿ ಸಂಸ್ಥೆ ಹೇಗೆ ಮುನ್ನಡೆ ಸಾಧಿಸಿತೆಂಬುದನ್ನು ಹೇಳುತ್ತಾ ಹೋದರೆ ಅದೇ ದೊಡ್ಡ ಕತೆಯಾದೀತು.
ಕಳೆದ ವಾರ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಅದಾನಿ ಸಮೂಹದ ನಿಯಂತ್ರಣದಲ್ಲಿರುವ ನವೀ ಮುಂಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗಾಗಿನ 12,770 ಕೋಟಿ ರೂ.ಗಳ ಸಾಲದ ಅವಶ್ಯಕತೆಗೆ ಖಾತರಿಯನ್ನು ನೀಡಿತ್ತು.
ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾರ್ಪೊರೇಟ್ ದಿಗ್ಗಜರ ವೌನ ಅಥವಾ ವಿನಮ್ರತೆಯು ಜಗತ್ತಿನ ಅತಿ ಬಲಿಷ್ಠ ಪ್ರಜಾಪ್ರಭುತ್ವವೆನಿಸಿರುವ ಅಮೆರಿಕದಲ್ಲಿನ ಕಾರ್ಪೊರೇಟ್ ಮಂದಿಗಿಂತ ಸಂಪೂರ್ಣ ವ್ಯತಿರಿಕ್ತವಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಬಿಳಿಯ ಜನಾಂಗೀಯ ಶ್ರೇಷ್ಠತೆ ನಿಲುವಿಗೆ ಅಮೆರಿಕದ ಕಾರ್ಪೊರೇಟ್ ಕಂಪೆನಿಗಳು ಪ್ರಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದವು. ಇದಕ್ಕೆ ಟ್ರಂಪ್ ಅವರ ಆಡಳಿತದ ಆರಂಭ ವರ್ಷಗಳೇ ಉತ್ತಮ ನಿದರ್ಶನವಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಗೆಲುವಿನಿಂದ ಉತ್ತೇಜಿತರಾಗಿದ್ದ ಟ್ರಂಪ್ ಅವರು, ಆಯ್ದ ಕೆಲವು ಮುಸ್ಲಿಮ್ ಬಹುಸಂಖ್ಯಾತ ದೇಶಗಳ ಜನರಿಗೆ ಪ್ರಯಾಣ ನಿಷೇಧವನ್ನು ಘೋಷಿಸಿದ್ದರು. ಟ್ರಂಪ್ ಅವರು ದಿಢೀರ್ ನಿಷೇಧವನ್ನು ಘೋಷಿಸಿದ್ದುದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಇದರಿಂದಾಗಿ ಸಾವಿರಾರು ಜನರಿಗೆ ಪ್ರಯಾಣ ನಿಷೇಧಿತ ರಾಷ್ಟ್ರಗಳಿಗೆ ಹೋಗಲು ಸಾಧ್ಯವಾಗದೆ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿ ಹಾಕಿಕೊಳ್ಳಬೇಕಾಯಿತು.
ಆಗ ಅಲ್ಲಿನ ಕಾರ್ಪೊರೇಟ್ ಗುಂಪುಗಳು ಸುಮ್ಮನೆ ಕೂರಲಿಲ್ಲ. ದೊಡ್ಡ ಸಂಖ್ಯೆಯಲ್ಲಿ ಅವು ಟ್ರಂಪ್ ಆಡಳಿತದ ಈ ಅನ್ಯಾಯಯುತವಾದ ಆದೇಶವನ್ನು ಪ್ರಶ್ನಿಸಿದವು.
ಅಮೆರಿಕದ ಪ್ರತಿಷ್ಠಿತ ಹೊಟೇಲ್ ವಸತಿ ಸಂಸ್ಥೆ ಏರ್‌ಬಿಎನ್‌ಬಿಯಿಂದ ಹಿಡಿದು ವಿಶ್ವವಿಖ್ಯಾತ ಮಾಹಿತಿತಂತ್ರಜ್ಞಾನ ಸಂಸ್ಥೆ ಗೂಗಲ್‌ವರೆಗೆ ಹಲವಾರು ಬೃಹತ್ ಕಾರ್ಪೊರೇಟ್ ಕಂಪೆನಿಗಳು ವಲಸಿಗರ ಹಕ್ಕುಗಳ ಸಂಘಟನೆಗಳನ್ನು ಬೆಂಬಲಿಸಲು ಬಿಕ್ಕಟ್ಟು ನಿರ್ವಹಣಾ ನಿಧಿಯನ್ನು ಸೃಷ್ಟಿಸಿದವು.
ಆದರೆ ಭಾರತದಲ್ಲಿ ಪರಿಸ್ಥಿತಿ ತೀರಾ ವಿಭಿನ್ನವಾಗಿದೆ.
ನರೇಂದ್ರ ಮೋದಿಯವರತ್ತ ಕಾರ್ಪೊರೇಟ್ ಗಣ್ಯರ ಒಲವು ಹಿಂದಿನ ಎನ್‌ಡಿಎ ಸರಕಾರದ ಆಡಳಿತದ ಅವಧಿಗಿಂತಲೂ ಹಿಂದಿನದಾಗಿದೆ. 20ರ ದಶಕದ ಆರಂಭದ ವರ್ಷಗಳಲ್ಲಿ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು ಹಾಗೂ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರಕಾರವು ಕೇಂದ್ರದಲ್ಲಿ ಯಶಸ್ವಿಯಾಗಿ ಆಡಳಿತ ನಡೆಸುತ್ತಿತ್ತು. ಆದಾಗ್ಯೂ ಹಲವಾರು ಪ್ರಮುಖ ಕಾರ್ಪೊರೇಟ್ ಧಣಿಗಳು ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಬೇಕೆಂದು ಆಶಿಸಿದ್ದರು.
ನರೇಂದ್ರ ಮೋದಿಯವರ ನವ ಉದಾರವಾದಿ ಮಾದರಿಯು, ಗುಜರಾತ್‌ಗೆ ಬರಲು ಕೈಗಾರಿಕೋದ್ಯಮಿಗಳಿಗೆ ನೀಡಲಾದ ಬಹಿರಂಗ ಆಹ್ವಾನವಾಗಿತ್ತು. ಕಾರ್ಪೊರೇಟ್ ಉದ್ಯಮಿಗಳು ಕಾಳಜಿ ಹೊಂದಿರುವ ಅಂಶಗಳ ಬಗ್ಗೆ ಸಂವೇದನೆಯಿಂದ ವರ್ತಿಸುವ ಭರವಸೆಯನ್ನು ಕೂಡಾ ನೀಡಿದ್ದರು. ಮುಖ್ಯಮಂತ್ರಿಯಾಗಿ ಮೋದಿ ಆಳ್ವಿಕೆಯಲ್ಲಿ ಗುಜರಾತ್‌ನಲ್ಲಿ ಕೈಗಾರಿಕಾ ವಲಯದಲ್ಲಿ ಶಾಂತಿ ನೆಲೆಸಿತ್ತು. ಕಾರ್ಮಿಕ ಒಕ್ಕೂಟಗಳ ಚಟುವಟಿಕೆಗಳನ್ನು ಬೆದರಿಕೆ ಹಾಗೂ ಕಠಿಣಕ್ರಮಗಳ ಮೂಲಕ ದಮನಿಸಿದ್ದುದೇ ಇದಕ್ಕೆ ಕಾರಣವಾಗಿತ್ತು. 2002ರ ಗುಜರಾತ್ ಗಲಭೆಯ ಬಳಿಕ ಗುಜರಾತ್‌ನಲ್ಲಿ ಕೋಮುಧ್ರುವೀಕರಣಗೊಂಡ ಸಂದರ್ಭದಲ್ಲಿ ಯುಪಿಎ ಸರಕಾರವು ಮಾರುಕಟ್ಟೆಯ ಶಕ್ತಿಗಳಿಗೆ ಮುಕ್ತವಾದ ವಾಣಿಜ್ಯ ನೀತಿಯ ಅವಕಾಶಗಳನ್ನು ನೀಡಲು ನಿರಾಕರಿಸಿತ್ತು. ಇದರ ಜೊತೆಗೆ ಯುಪಿಎ ಜಾರಿಗೊಳಿಸಿದ ಭೂ ಸುಧಾರಣಾ ವಿಧೇಯಕವು ಕಾರ್ಪೊರೇಟ್ ಕಂಪೆನಿಗಳಿಗೆ ಭೂಮಿ ಪಡೆಯುವುದನ್ನು ಕಷ್ಟಕರಗೊಳಿಸಿತು. ಇವೆಲ್ಲದರಿಂದ ಮೋದಿಯೆಡೆಗೆ ಕಾರ್ಪೊರೇಟ್ ವಲಯದಲ್ಲಿ ಮೋದಿಯ ಜನಪ್ರಿಯತೆಯನ್ನು ಹೆಚ್ಚಿಸಿದವು.
ಬಹುಶಃ ಕೋಮುಧ್ರುವೀಕರಣಗೊಂಡ ಸಮಾಜದಿಂದ ಅಂತಿಮವಾಗಿ ಪ್ರಯೋಜನವಾಗುವುದು ತಮಗೆ ಎಂಬುದು ಕೈಗಾರಿಕೋದ್ಯಮಿಗಳಿಗೂ ತಿಳಿದಿದೆ. ನವ ಉದಾರವಾದಿ ನೀತಿಯ ಪರಿಣಾಮವಾಗಿ ತಲೆದೋರುವ ಹಸಿವು, ಬಡತನ, ನಿರುದ್ಯೋಗದಂತಹ ಮೂಲಭೂತ ವಿಷಯಗಳ ಬಗ್ಗೆ ಒಂದಲ್ಲ ಒಂದು ದಿನ ದೇಶಾದ್ಯಂತ ಭಾರೀ ಪ್ರತಿಭಟನೆ ಭುಗಿಲೇಳಬಹುದಾಗಿದೆ. ಜನರನ್ನು ನವಭಾರತದ ಘೋಷಣೆಗಳಿಂದ ಯಾವಾಗಲೂ ಮರುಳು ಮಾಡಲು ಸಾಧ್ಯವಿಲ್ಲವೆಂಬ ಸತ್ಯ ದಿಲ್ಲಿಯಲ್ಲಿ ರಾಜಕೀಯ ಕಾರ್ಯತಂತ್ರ ತಜ್ಞರಿಗೆ ಚೆನ್ನಾಗಿ ಅರಿವಿದೆ.
ಜನಸಾಮಾನ್ಯರ ಇಂತಹ ಸಂಯುಕ್ತ ಹೋರಾಟವು ಲಾಭಬಡುಕ ಕಾರ್ಪೊರೇಟ್ ಶಕ್ತಿಗಳ ಭವಿಷ್ಯದಲ್ಲಿ ತಲ್ಲಣವನ್ನು ಸೃಷ್ಟಿಸಬಹುದಾಗಿದೆ. ಈ ಕಾರಣಕ್ಕಾಗಿಯೇ ಕೋಮುಧ್ರುವೀಕರಣದ ಮೂಲಕ ಸಮಾಜದ ಗಮನವನ್ನು ಬೇರೆಡೆ ಸೆಳೆಯುವುದರಿಂದ ತಮಗೆ ಅಪಾರ ಪ್ರಯೋಜನವಿದೆಯೆಂಬುದನ್ನು ಕಾರ್ಪೊರೇಟ್ ಶಕ್ತಿಗಳು ಭಾವಿಸಿವೆ.
ಒಂದೊಮ್ಮೆ ಮಾದರಿ ನವಉದಾರವಾದಿ ನೀತಿಯ ದಾರಿಯನ್ನು ಹಿಡಿದಿರುವ ರಾಷ್ಟ್ರವೆಂದು ಪರಿಗಣಿಸಲಾದ ಶ್ರೀಲಂಕಾದಲ್ಲಿ ಗಂಭೀರ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು ಜನತೆಯ ಬದುಕಿನಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.
ಯಾರಾದರೂ ಒಪ್ಪಲಿ, ಇಲ್ಲವೇ ಬಿಡಲಿ ದೇಶದಲ್ಲಿ ಪ್ರಸಕ್ತ ಒಂದು ರೀತಿಯ ಪೈಶಾಚಿಕ ಕೊಡುಕೊಳ್ಳುವಿಕೆ ಏರ್ಪಟ್ಟಿದ್ದು, ಒಂದೆಡೆ ಕಾರ್ಪೊರೇಟ್ ಸಂಸ್ಥೆಗಳಿಗೆ ಯಥೇಚ್ಛ ಹಣ ಸಂಪಾದಿಸಲು ಮುಕ್ತ ಅವಕಾಶವನ್ನು ನೀಡಲಾಗಿದ್ದರೆ, ಇನ್ನೊಂದೆಡೆ ಹಿಂದುತ್ವವಾದಿ ಶಕ್ತಿಗಳು/ ಸಂಘಟನೆಗಳಿಗೆ ತಮ್ಮ ಸಿದ್ಧಾಂತಗಳನ್ನು ವ್ಯಾಪಕವಾಗಿ ಹರಡಲು ದಾರಿ ಮಾಡಿಕೊಡಲಾಗಿದೆ.
ಕೃಪೆ: countercurrents.org