ಚೂರಾದದ್ದು ಕಲ್ಲಂಗಡಿ, ಬೆತ್ತಲೆಯಾಗಿದ್ದು ಶ್ರಮಿಕ ಪ್ರಜ್ಞೆ
ಯಾವುದೇ ಒಂದು ಸಮಾಜವನ್ನು ‘ನಾಗರಿಕ’ ಎಂದು ಪರಿಭಾವಿಸಬೇಕಾದರೆ, ಕೆಲವು ಲಕ್ಷಣಗಳು ಅವಶ್ಯವಾಗಿ ಇರಬೇಕಾಗುತ್ತವೆ. ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಅಧಿಕಾರ ಕೇಂದ್ರಗಳು ಯಾವುದೇ ಮಾರ್ಗಗಳನ್ನು ಅನುಸರಿಸುತ್ತಿದ್ದರೂ, ಸಾರ್ವಜನಿಕ ಬದುಕಿನಲ್ಲಿ ತಮ್ಮ ಕಸುಬು, ವೃತ್ತಿ, ನೌಕರಿ ಅಥವಾ ವ್ಯಾಪಾರವನ್ನು ನಂಬಿ ಬದುಕು ಸವೆಸುವ ಸಾಮಾನ್ಯ ಜನರ ನಿತ್ಯ ಬದುಕಿನ ಮಟ್ಟಿಗೆ ಅದು ನಗಣ್ಯವಾಗಿರುತ್ತದೆ.
ಪ್ರಜಾತಂತ್ರವಾಗಲೀ, ನಿರಂಕುಶಾಧಿಕಾರವಾಗಲೀ, ಸರ್ವಾಧಿಕಾರ ಅಥವಾ ಸೇನಾಡಳಿತವೇ ಆಗಲಿ, ತಮ್ಮ ಬದುಕು ಸವೆಸಲು ನಿತ್ಯ ಕಾಯಕವನ್ನೇ ನಂಬಿ ನಡೆಯುವ ಅಸಂಖ್ಯಾತ ಜನರಿಗೆ ತಮ್ಮ ಸುತ್ತಲಿನ ಸಮಾಜ ಮತ್ತು ಆ ಕ್ಷಣದ ವಾತಾವರಣವೇ ಮುಖ್ಯವಾಗಿರುತ್ತದೆಯೇ ಹೊರತು ಆಡಳಿತ ವ್ಯವಸ್ಥೆಯ ಚೌಕಟ್ಟುಗಳಲ್ಲ. ಆದರೆ ಈ ಸಾಮಾನ್ಯ ಜನತೆಯ ಜೀವನ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುವ ಸಾಮುದಾಯಿಕ ಅಸ್ಮಿತೆಗಳು, ಜಾತಿ, ಮತ, ಧರ್ಮ, ಪಂಥ ಮತ್ತು ಭಾಷಿಕ ನೆಲೆಯಲ್ಲಿ ಶ್ರೀಸಾಮಾನ್ಯನನ್ನು ಕಾಡುತ್ತಲೇ ಇರುತ್ತದೆ. ಈ ಕಾಡುವಿಕೆಯಲ್ಲೇ ಜಾತಿ, ಮತಗಳ ಸಾಂಸ್ಥಿಕ ನೆಲೆಗಳು ಜನಸಮುದಾಯಗಳ ಮೇಲೆ ತಮ್ಮ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ವ್ಯಕ್ತಿಗತ ಬದುಕಿನಲ್ಲಿ ಯಾವುದೇ ಪಾತ್ರ ವಹಿಸದ ಅಸ್ಮಿತೆಗಳು ಸಹಜವಾಗಿಯೇ ಸಾಮುದಾಯಿಕ ಬದುಕಿನ ಒಂದು ಭಾಗವಾಗಿ, ಮನುಷ್ಯನನ್ನು ಸಂಗ-ಜೀವಿಯನ್ನಾಗಿ ಮಾಡುತ್ತದೆ.
ಈ ಸಂಗ-ಜೀವಿಯ ಬೇಕು ಬೇಡಗಳನ್ನು ಪೂರೈಸುವ ನೈತಿಕ ಹೊಣೆಗಾರಿಕೆ ಆಡಳಿತ ವ್ಯವಸ್ಥೆಯ ಮೇಲಿದ್ದರೂ, ನಿತ್ಯ ಬದುಕಿನ ಹಾದಿಯಲ್ಲಿ ಜನಸಮುದಾಯಗಳು ತಮ್ಮೆಳಗಿನ ಸ್ನೇಹ ಸೇತುವೆಗಳನ್ನು ಗಟ್ಟಿಗೊಳಿಸುತ್ತಾ ತಮ್ಮಾಳಗಿನ ವೈವಿಧ್ಯತೆಯನ್ನೇ ಬಂಡವಾಳವನ್ನಾಗಿರಿಸಿಕೊಂಡು, ತಮ್ಮ ನಡುವಿನ ಭಿನ್ನತೆಗಳನ್ನು ಬದಿಗಿರಿಸುತ್ತಾ, ಪರಸ್ಪರ ಕಷ್ಟ ಸುಖಗಳಿಗೆ ಹೆಗಲು ನೀಡುತ್ತಾ ಬದುಕು ಸವೆಸುತ್ತಾರೆ. ಇದು ದುಡಿಯುವ ವರ್ಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಾರ್ವತ್ರಿಕ ಲಕ್ಷಣ. ದೈಹಿಕ ಮತ್ತು ಬೌದ್ಧಿಕ ಶ್ರಮದಲ್ಲಿ ತೊಡಗಿರುವವರಷ್ಟೇ ಅಲ್ಲದೆ, ಜೀವನೋಪಾಯಕ್ಕಾಗಿ, ಜೀವನ ನಿರ್ವಹಣೆಗಾಗಿ ಸಣ್ಣ ಪುಟ್ಟ ವ್ಯಾಪಾರವನ್ನು ಅವಲಂಬಿಸಿ ಬದುಕುವ ಕೋಟ್ಯಂತರ ಜನರು ಈ ‘ಶ್ರಮಜೀವಿ ವರ್ಗ’ಕ್ಕೇ ಸೇರಿದವರಾಗಿರುತ್ತಾರೆ. ಭಾರತದಂತಹ ಸಾಂಪ್ರದಾಯಿಕ, ಶ್ರೇಣೀಕೃತ ಸಮಾಜದಲ್ಲೂ, ಗುಪ್ತವಾಹಿನಿಯಂತೆ ಹರಿಯುವ ಅಸ್ಪೃಶ್ಯತೆ ಮತ್ತು ಜಾತೀಯತೆಯಂತಹ ವಿಷತೊರೆಗಳ ಹೊರತಾಗಿಯೂ, ಈ ಶ್ರಮಜೀವಿ ವರ್ಗವು ಒಂದಾಗಿ ಬದುಕುವುದು ಸಾಧ್ಯ ಎನ್ನುವುದನ್ನು ಇತಿಹಾಸ ನಿರೂಪಿಸಿದೆ. ಅಸ್ಪೃಶ್ಯ ಸಮುದಾಯಗಳು, ತಮ್ಮ ಮೇಲೆ ನಿರಂತರವಾಗಿ ನಡೆಯುವ ಜಾತಿ ದೌರ್ಜನ್ಯಗಳನ್ನೂ ಬದುಕಿನ ಒಂದು ಭಾಗ ಎಂದು ಭಾವಿಸುವ ದುರಂತ ಮನಸ್ಥಿತಿಯೇ ಆವರಿಸಿರುವುದರಿಂದ, ಈ ಸಮುದಾಯಗಳ ಸಹಿಷ್ಣುತೆಯೂ ಹೆಚ್ಚಾಗಿಯೇ ಕಾಣುತ್ತದೆ. ಸಮಕಾಲೀನ ಸಮಾಜದಲ್ಲಿ ಒಂದು ಸೌಹಾರ್ದ ವಾತಾವರಣ ಇದೆ ಎಂದರೆ ಈ ಸಮಾಜ ದೌರ್ಜನ್ಯ ಮುಕ್ತವಾಗಿದೆ ಎಂದರ್ಥವಲ್ಲ ಅಥವಾ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ಅಮಾನುಷ ಪದ್ಧತಿಗಳು ಇಲ್ಲವಾಗಿದೆ ಎಂದೂ ಹೇಳಲಾಗುವುದಿಲ್ಲ.
ತಳಸಮುದಾಯಗಳನ್ನು ನಿರಂತರವಾಗಿ ಕಾಡುವ ಬಡತನ ಮತ್ತು ಆರ್ಥಿಕ ಪರಾವಲಂಬನೆಯೇ ಅವರಲ್ಲಿನ ಸಹಿಷ್ಣುತೆಯನ್ನೂ ಅನಿವಾರ್ಯವಾಗಿ ಹೆಚ್ಚಿಸುತ್ತದೆ. ಈ ಶೋಷಿತ ಸಮುದಾಯಗಳ ನಡುವೆ ಉದ್ಭವಿಸಬಹುದಾದ ಬಂಡಾಯವನ್ನು, ಪ್ರತಿರೋಧವನ್ನು ಅಡಗಿಸುವ ಸಲುವಾಗಿಯೇ ಆಳುವ ವರ್ಗಗಳು ಮತ್ತು ಸಮಾಜದ ಪ್ರಬಲ ವರ್ಗಗಳು ಜಾತಿ-ಮತಗಳ ಅಸ್ಮಿತೆಗಳನ್ನು ಬಳಸುತ್ತಿರುತ್ತವೆ. ಜಾತಿ, ಮತ, ಪಂಥ ಅಥವಾ ಭಾಷೆಯ ಆಧಾರದ ಮೇಲೆ ಸಾಂಸ್ಥಿಕ, ಸಂಘಟನಾತ್ಮಕ ಶಕ್ತಿಗಳು ಈ ವರ್ಗವನ್ನು ವಿಭಜಿಸಿ, ವಿಘಟನೆಗೊಳಪಡಿಸುವ ಮೂಲಕ ಸಮುದಾಯಗಳ ಮೇಲೆ, ಸಮಾಜದ ಮೇಲೆ ತಮ್ಮ ಆಧಿಪತ್ಯವನ್ನು ಸಾಧಿಸಲು ಸದಾ ಯತ್ನಿಸುತ್ತಲೇ ಇರುತ್ತವೆ. ಈ ಶಕ್ತಿಗಳಿಂದ ಅಡ್ಡಡ್ಡಲಾಗಿ ಸೀಳಲ್ಪಡುವ ಶ್ರಮಜೀವಿ ವರ್ಗಗಳು ತಮ್ಮ ನಡುವೆ ನಿರ್ಮಿಸಲಾಗುವ ಬೌದ್ಧಿಕ ಮತ್ತು ಭೌತಿಕ ಗೋಡೆಗಳನ್ನು ಭಂಜಿಸದೆ, ಭೇದಿಸದೆ ಹೋದರೆ ಈ ಗೋಡೆಗಳೇ ಕಾಲಕ್ರಮೇಣ ದೊಡ್ಡ ಕಂದರಗಳಾಗಿ, ಸಮುದಾಯಗಳ ನಡುವೆ ಶಾಶ್ವತವಾದ ಬೇಲಿಗಳಾಗಿ ಪರಿಣಮಿಸಿಬಿಡುತ್ತವೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಅಧಿಕಾರ ಕೇಂದ್ರಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧರಾಗಿರುವವರೆಗೂ ಜನಸಮುದಾಯಗಳು ತಮ್ಮ ನೆಮ್ಮದಿಯ ಬದುಕನ್ನು ತಮ್ಮದೇ ಆದ ಅಸ್ಮಿತೆಗಳೊಂದಿಗೆ ಸವೆಸಲು ಸಾಧ್ಯ. ಆದರೆ ಒಮ್ಮೆ ಈ ಅಧಿಕಾರ ಕೇಂದ್ರಗಳು ತೀವ್ರತೆರನಾದ ನಿರಂಕುಶಾಧಿಕಾರಕ್ಕೊಳಗಾದಾಗ, ನಿರ್ದಿಷ್ಟ ಮತಾಚರಣೆಯ ಸಾಂಸ್ಕೃತಿಕ ಚೌಕಟ್ಟುಗಳಲ್ಲಿ ಬಂಧಿಸಲ್ಪಟ್ಟಾಗ ಮತಾಂಧತೆ ಮತ್ತು ಮತೀಯವಾದವೇ ಆಡಳಿತ ನೀತಿಗಳಾಗಿಬಿಡುತ್ತವೆ.
ಇಂತಹ ವಾತಾವರಣದಲ್ಲಿ ಶ್ರಮಜೀವಿ ವರ್ಗಗಳನ್ನು ಅಸ್ಮಿತೆಗಳ ಆಧಾರದ ಮೇಲೆ ವಿಭಜಿಸುವ ವ್ಯವಸ್ಥಿತ ರಾಜಕಾರಣ ನಡೆಯುತ್ತದೆ. ಅನೇಕ ಪಶ್ಚಿಮ ರಾಷ್ಟ್ರಗಳಲ್ಲಿ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದಲ್ಲಿ ಇದು ಸಂಭವಿಸಿದೆ. ದುರದೃಷ್ಟವಶಾತ್ ಇಂದು ಭಾರತವೂ ಇದೇ ದಿಕ್ಕಿನಲ್ಲಿ ಸಾಗುತ್ತಿದೆ. ಹಿಂದೂ, ಇಸ್ಲಾಂ, ಕ್ರೈಸ್ತ ಅಥವಾ ಸಿಖ್ ಮತಗಳ ಪ್ರಭಾವಳಿಗೆ ಸಿಲುಕಿ ತಮ್ಮ ಮೂಲ ಅಸ್ಮಿತೆಯನ್ನು ಕಳೆದುಕೊಳ್ಳುವ ಶ್ರಮಜೀವಿ ವರ್ಗಗಳು ತಮ್ಮ ಶೋಷಕರನ್ನು ಅಗೋಚರ ಶಕ್ತಿಯಲ್ಲಿ ಕಾಣಲು ಹಪಹಪಿಸುತ್ತವೆ. ಅಥವಾ ಅಧಿಕಾರ ರಾಜಕಾರಣದಲ್ಲಿ ಸೃಷ್ಟಿಯಾಗುವಂತಹ ಮತೀಯ ಚೌಕಟ್ಟುಗಳಲ್ಲಿ ಕಾಣುತ್ತವೆ. ಅಸ್ಪೃಶ್ಯತೆಯ ಕ್ರೌರ್ಯವನ್ನು ದಿನನಿತ್ಯ ಅನುಭವಿಸುವ ಸಮುದಾಯಗಳೂ, ತಮ್ಮ ಶೋಷಣೆಗೆ ಮೂಲ ಕಾರಣ ಈ ದೇಶದ ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ವೈದಿಕಶಾಹಿಯ ಸಾಂಸ್ಕೃತಿಕ ಆಧಿಪತ್ಯ ಎನ್ನುವುದನ್ನು ಅರಿಯದೆ, ಅನ್ಯಮತಗಳಲ್ಲಿ, ಅನ್ಯ ಧರ್ಮಗಳಲ್ಲಿ, ಸಾಂಸ್ಕೃತಿಕ ರಾಜಕಾರಣದ ಮೇಲಾಟದಲ್ಲಿ ಕಾಣಲು ಹಂಬಲಿಸುತ್ತವೆ. ಜಾತಿ ತಾರತಮ್ಯ ಮತ್ತು ದೌರ್ಜನ್ಯಗಳನ್ನು ಪೋಷಿಸುವ ಬಂಡವಾಳಶಾಹಿ ಆರ್ಥಿಕತೆ ಮತ್ತು ಈ ಅರ್ಥವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳುವ ಮೇಲ್ಜಾತಿಯ ಹಿಡಿತವನ್ನು ಗ್ರಹಿಸಿ, ಇದರ ವಿರುದ್ಧ ಸಿಡಿದೇಳಬೇಕಾದ ಶೋಷಿತ ಸಮುದಾಯಗಳು, ಯಾವುದೋ ಒಂದು ಧಾರ್ಮಿಕ ನಂಬಿಕೆಗಳಿಗೆ ಬಲಿಯಾಗಿ, ಮತೀಯ ಅಸ್ತಿತ್ವಗಳಿಗೆ ಬಲಿಯಾಗಿ, ಮತ್ತೊಂದು ಜನಾಂಗದ ಶ್ರಮಿಕ ವರ್ಗಗಳ ವಿರುದ್ಧವೇ ಹೋರಾಡಲು ಸಜ್ಜಾಗುತ್ತವೆ. ಇದರಲ್ಲಿ ಪ್ರಬಲ ಮೇಲ್ವರ್ಗಗಳ ರಾಜಕೀಯ ಜಾಣ್ಮೆಯನ್ನು ಕಾಣುವಂತೆಯೇ, ತಳಸಮುದಾಯಗಳ ಅರಿವಿನ ಕೊರತೆಯನ್ನೂ ಕಾಣಬೇಕಿದೆ. ಶೂದ್ರ ಸಮುದಾಯದ ಯುವಪೀಳಿಗೆಯೇ ಹೆಚ್ಚುಹೆಚ್ಚಾಗಿ ಹಿಂದುತ್ವ ರಾಜಕಾರಣದ, ಮುಸ್ಲಿಮ್ ಮತಾಂಧತೆಯ ಕಾಲಾಳು ಪಡೆಗಳಾಗಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗಿದೆ. ಜಾತಿಯ ಸಾಂಸ್ಕೃತಿಕ ನೆಲೆಯಲ್ಲಿ ಅಥವಾ ಆರ್ಥಿಕತೆಯ ನೆಲೆಯಲ್ಲಿ ಗುರುತಿಸಲಾಗದ ಶತ್ರುವನ್ನು ಶೂದ್ರ ಮತ್ತು ದಲಿತ ಸಮುದಾಯಗಳು ಮತೀಯ ನೆಲೆಯಲ್ಲಿ ಗುರುತಿಸಲಾರಂಭಿಸಿವೆ. ಹಾಗಾಗಿಯೇ ಇಸ್ಲಾಂ ಪ್ರಬಲ ಶತ್ರು ಎನಿಸುತ್ತದೆ ಅಥವಾ ಮುಸ್ಲಿಮ್ ಸಮುದಾಯ ‘ಅನ್ಯ’ ಎನಿಸಿಬಿಡುತ್ತದೆ. ತಮ್ಮ ವಿರುದ್ಧ ನಡೆಯುತ್ತಿರುವ ಶೋಷಣೆಯನ್ನೂ ಗುರುತಿಸಲಾಗದಂತಹ ಸಮೂಹ ಸನ್ನಿಗೆ ಸಮುದಾಯ ಒಳಗಾದಾಗ, ಈ ‘ಅನ್ಯತೆ’ಯೇ ಮತೀಯ ರಾಜಕಾರಣಕ್ಕೆ ಬುನಾದಿಯಾಗಿಬಿಡುತ್ತದೆ.
ಇತ್ತೀಚೆಗೆ ಕರ್ನಾಟಕದ ಹಲವೆಡೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಡೆದ ದಾಳಿಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ. ಜೀವನೋಪಾಯದ ಮಾರ್ಗವಾಗಿ, ಲಾಭದಾಹವಿಲ್ಲದ ವ್ಯಾಪಾರವನ್ನು ನಂಬಿ ಬದುಕುವ ಪೆಟ್ಟಿಗೆ ಅಂಗಡಿಯ ಮುಸಲ್ಮಾನ, ತಳ್ಳುಗಾಡಿಯಲ್ಲಿ ಕಲ್ಲಂಗಡಿ ಮಾರುವ ನಬೀಸಾಬ್, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವವರು, ಜಾತ್ರೆ ಸಂತೆಗಳಲ್ಲಿ ಅಲ್ಪಬಂಡವಾಳ ಮತ್ತು ಹೆಚ್ಚು ಸಾಲದ ಹೊರೆಯೊಂದಿಗೆ ವ್ಯಾಪಾರ ಮಾಡುವ ಮುಸ್ಲಿಮ್ ವರ್ತಕರು, ಧರ್ಮ ರಕ್ಷಣೆಯ ಹೆಸರಿನಲ್ಲಿ ದಾಳಿಗೊಳಗಾಗಿರುವುದನ್ನು ಗಮನಿಸುವಾಗ, ಈ ದಾಳಿಗಳನ್ನು ಪ್ರಚೋದಿಸಿರುವ ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಗಳ ಮೂಲ ನೆಲೆಗಳನ್ನೂ ಗಮನಿಸಬೇಕಾಗುತ್ತದೆ. ಶ್ರಮಿಕ ವರ್ಗಗಳ ನಡುವೆಯೇ ಅಂತರ್‌ಕಲಹ ಸೃಷ್ಟಿಸುವ ಮೂಲಕ, ಶೋಷಿತ ಸಮುದಾಯಗಳು ಎಂದಿಗೂ ಐಕ್ಯತೆಯನ್ನು ಸಾಧಿಸದಿರುವಂತೆ ಮಾಡುವ, ಬಂಡವಾಳಶಾಹಿಯ ಹುನ್ನಾರ ಮತ್ತು ಬಂಡವಾಳ ವ್ಯವಸ್ಥೆಯನ್ನು ಪೋಷಿಸುವ ಮೇಲ್ಜಾತಿ-ಮೇಲ್ವರ್ಗಗಳ ರಾಜಕೀಯ ಮೇಲಾಟಗಳನ್ನು ಸೂಕ್ಷ್ಮವಾಗಿ ಗಮನಿಸದೆ ಹೋದರೆ, ಶ್ರಮಿಕ ವರ್ಗಗಳು ತಮ್ಮ ನಡುವೆ ನಿರ್ಮಿಸಲಾಗಿರುವ ಗೋಡೆಗಳನ್ನು ಭೇದಿಸುವುದು ಸಾಧ್ಯವಾಗುವುದೇ ಇಲ್ಲ. ಇಲ್ಲಿ ಶ್ರಮಿಕ ವರ್ಗಗಳ ನಡುವೆ ಇರಲೇಬೇಕಾದ ವರ್ಗಪ್ರಜ್ಞೆಯ ಪ್ರಶ್ನೆ ಮುನ್ನೆಲೆಗೆ ಬರುತ್ತದೆ.
ಶ್ರಮಿಕ ವರ್ಗಗಳಲ್ಲಿ ಈ ವರ್ಗಪ್ರಜ್ಞೆಯ ಕೊರತೆ ಇರುವುದರಿಂದಲೇ ಭಾರತದಲ್ಲಿ ಶೋಷಕ ವರ್ಗಗಳು ಜಾತಿಮತಗಳ ನೆಲೆಯಲ್ಲಿ ಮತ್ತು ಆರ್ಥಿಕ ನೆಲೆಯಲ್ಲಿ ತಮ್ಮ ಶೋಷಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುತ್ತಿವೆ. ದೇಶದ ಸಂಪತ್ತನ್ನು ವೃದ್ಧಿಸಲು ನೆರವಾಗುವ ಶ್ರಮಶಕ್ತಿಯನ್ನು ಗುರುತಿಸಬೇಕಾದರೆ, ಉತ್ಪಾದಕೀಯ ಶಕ್ತಿಗಳಾದ ಶ್ರಮಿಕರನ್ನು ಪರಸ್ಪರ ಸಂಪರ್ಕಿಸುವ ಶ್ರಮ ಸರಪಳಿಯ ಸಂರಚನೆಯನ್ನೂ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಧಾರವಾಡದ ನಬೀಸಾಬ್ ತನ್ನ ಕಲ್ಲಂಗಡಿ ಹಣ್ಣುಗಳ ರಾಶಿ ನೆಲಸಮವಾಗುತ್ತಿರುವುದನ್ನು ಕಂಡು, ವೇದನೆಯಿಂದ ‘‘ನನ್ನನ್ನೂ ಕೊಂದುಬಿಡಿ’’ ಎಂದು ಹೇಳುವುದನ್ನು ಒಂದು ರೂಪಕದಂತೆ ನಾವು ನೋಡಬೇಕಿದೆ. ರಸ್ತೆಯಲ್ಲಿ ಚೆಲ್ಲಿದ ಕಲ್ಲಂಗಡಿಯ ತುಣುಕುಗಳಲ್ಲಿ ನಮಗೆ, ಹೊಲದಲ್ಲಿ ದಿನವಿಡೀ ಬೆವರು ಸುರಿಸಿದ ಕೃಷಿ ಕಾರ್ಮಿಕ, ಸಣ್ಣ ರೈತ, ರೈತ ಮಹಿಳೆಯರು, ಹೊಲದಿಂದ ಮಾರುಕಟ್ಟೆಗೆ ಸಾಗಾಣೆ ಮಾಡುವ ಒಬ್ಬ ಶ್ರಮಿಕ, ಅದನ್ನು ವಾಹನದೊಳಗೆ ತುಂಬಿಸಿ ಮತ್ತೆ ಕೆಳಗಿಳಿಸುವ ಒಬ್ಬ ಕೂಲಿ ಕಾರ್ಮಿಕ, ತಳ್ಳುಗಾಡಿಯ ಗಾಲಿ ಕೀಲುಗಳನ್ನು ತಯಾರಿಸುವ ಒಬ್ಬ ಕುಶಲಕರ್ಮಿ ಮತ್ತು ಈ ವ್ಯಾಪಾರವನ್ನೇ ನಂಬಿ ಬದುಕುವ ಒಂದು ಬಡ ಕುಟುಂಬ, ಇವೆಲ್ಲವೂ ಕಾಣದೆ ಹೋದರೆ ನಾವು ನಾಗರಿಕ ಪ್ರಜ್ಞೆಯನ್ನು ಕಳೆದುಕೊಂಡಿದ್ದೇವೆ ಎಂದೇ ಅರ್ಥ. ಹಾಗೆಯೇ ಈ ಶ್ರಮಸರಪಳಿಯ ಕೊಂಡಿಗಳನ್ನು ಅರ್ಥಮಾಡಿಕೊಳ್ಳದೆ ಹೋದರೆ ನಮ್ಮಲ್ಲಿ ಸಾಮಾಜಿಕ ವರ್ಗಪ್ರಜ್ಞೆ ನಶಿಸಿದೆ ಎಂದೇ ಅರ್ಥ. ನಬೀಸಾಬ್‌ರ ವೇದನೆಗೆ ಮಿಡಿಯುವ ಮನಸ್ಸುಗಳು ಪುಲ್ವಾಮ ಯೋಧರಿಗಾಗಿ ಮಿಡಿದಿತ್ತೇ ಎಂದು ಪ್ರಶ್ನಿಸುವ ಅಪ್ರಬುದ್ಧ ಮನಸುಗಳು ಯೋಚಿಸಬೇಕಾದ್ದೇನೆಂದರೆ, ಇಲ್ಲಿ ನಬೀಸಾಬ್ ಹೇಗೆ ಬಂಡವಾಳ ವ್ಯವಸ್ಥೆಯನ್ನು ಪೋಷಿಸುತ್ತಲೇ ದೇಶದ ಮುನ್ನಡೆಯ ವಾಹಕವಾಗುತ್ತಾರೋ ಹಾಗೆಯೇ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರು ಅಧಿಕಾರ ರಾಜಕಾರಣವನ್ನು ಪೋಷಿಸುತ್ತಾ ದೇಶದ ರಕ್ಷಣೆಯ ವಾಹಕರಾಗಿರುತ್ತಾರೆ. ಎರಡೂ ವರ್ಗಗಳ ಶ್ರಮವೂ ದೇಶವನ್ನು ಕಾಪಾಡಲೆಂದೇ ವ್ಯಯವಾಗುತ್ತಿರುತ್ತದೆ. ಮಿಡಿದ ಕಂಬನಿಗಳನ್ನು ತುಲನಾತ್ಮಕವಾಗಿ ನೋಡುವಷ್ಟು ಮಟ್ಟಿಗೆ ನಮ್ಮ ಸಮಾಜ ಅಸೂಕ್ಷ್ಮವಾಗಿದೆ, ಸಂವೇದನಾರಹಿತವಾಗಿದೆ ಎನ್ನುವುದು ಗಮನಿಸಬೇಕಾದ ಅಂಶ. ಅಲ್ಲಿ ಯೋಧರ ಬದುಕು ಶತ್ರುಸೈನ್ಯದಿಂದ ದಾಳಿಗೊಳಗಾಗಿದ್ದರೆ ಇಲ್ಲಿ ನಬೀಸಾಬ್‌ರಂತಹ ಶ್ರಮಿಕರು ಮಿತ್ರರಿಂದಲೇ ದಾಳಿಗೊಳಗಾಗುತ್ತಾರೆ.
ವರ್ಗಪ್ರಜ್ಞೆ ಜಾಗೃತವಾಗಿರುವ ಸಮಾಜದಲ್ಲಿ ನಬೀಸಾಬ್ ಏಕಾಂಗಿಯಾಗುತ್ತಿರಲಿಲ್ಲ. ಅವರಂತೆಯೇ ದುಡಿದು ಬದುಕುವ ನೂರಾರು ಶ್ರಮಿಕರು ತಮ್ಮ ಜಾತಿ ಮತಗಳ ಅಸ್ಮಿತೆಗಳನ್ನು ಬದಿಗೊತ್ತಿ, ಶ್ರಮಸರಪಳಿಯ ಕೊಂಡಿಗಳನ್ನು ಮತ್ತಷ್ಟು ಬಲಪಡಿಸುತ್ತಿದ್ದರು. ಇಂದು ತನ್ನ ಧಾರ್ಮಿಕ ನಂಬಿಕೆಗಳಿಗಾಗಿ ದಾಳಿಗೊಳಗಾದ ನಬೀಸಾಬ್‌ರಂತೆಯೇ ಮುಂದೊಂದು ದಿನ ಮತ್ತೋರ್ವ ವ್ಯಾಪಾರಿ ತಾನು ಹುಟ್ಟಿದ ಜಾತಿಯ ಕಾರಣಕ್ಕಾಗಿ ಹಲ್ಲೆಗೊಳಗಾಗಬಹುದು. ರೇಷ್ಮೆ ಗೂಡುಗಳ ಮಾರುಕಟ್ಟೆಯಲ್ಲೂ ಧಾರ್ಮಿಕ ಅಸ್ಮಿತೆಗಳನ್ನು ಹುಡುಕುತ್ತಿರುವ ಧರ್ಮಾಂಧರು ಒಂದು ತುಂಡು ರೇಷ್ಮೆ ವಸ್ತ್ರದ ಹಿಂದಿರುವ ಶ್ರಮಸರಪಳಿಯನ್ನು ಗಮನಿಸಬೇಕು. ಹಿಪ್ಪು ನೇರಳೆ ಬೆಳೆಯುವ ರೈತ ಯಾವುದೋ ಶೂದ್ರ ಸಮುದಾಯಕ್ಕೆ ಸೇರಿದವನಾಗಿರುತ್ತಾನೆ. ಮೇಲ್ಜಾತಿಯವರ ಒಡೆತನದಲ್ಲಿ ನಡೆಯುವ ಬೇಸಾಯ ಪ್ರಕ್ರಿಯೆಯಲ್ಲಿ ದಲಿತರ ಶ್ರಮವೂ ಬೆರೆತಿರುತ್ತದೆ. ಈ ಸೊಪ್ಪುಗಳನ್ನು ಉಣಬಡಿಸುತ್ತಲೇ ಮೊಟ್ಟೆಗಳು ಚಿಟ್ಟೆಗಳಾಗಿ ತಮ್ಮ ಸುತ್ತಲೂ ಗೂಡು ಕಟ್ಟಿಕೊಳ್ಳುತ್ತವೆ. ಗೂಡು ಕಟ್ಟುವಂತೆ ಮಾಡುವ ಸಾಕಾಣಿಕೆ ಶ್ರಮದಲ್ಲಿ ಹಲವು ಜಾತಿ ಸಮುದಾಯಗಳ ಕೊಡುಗೆ ಇರುತ್ತದೆ. ಈ ಗೂಡುಗಳಿಂದ ತೆಗೆಯಲಾಗುವ ನೂಲಿನಲ್ಲಿ ಮುಸಲ್ಮಾನನೊಬ್ಬನ ಬೆವರು ಅಡಗಿರುತ್ತದೆ. ಈ ಬೆವರಿನ ಫಲವನ್ನೇ ನೇಕಾರನೊಬ್ಬನು ವಸ್ತ್ರವನ್ನಾಗಿ ಪರಿವರ್ತಿಸುತ್ತಾನೆ. ಈ ವಸ್ತ್ರದ ಉತ್ಪಾದನೆಯ ಹಾದಿಯಲ್ಲಿ ರೇಷ್ಮೆ ಗೂಡನ್ನು ನಂಬಿ ಬದುಕುವ ರೈತ, ನೂಲನ್ನು ನಂಬಿ ಬದುಕುವ ಮುಸಲ್ಮಾನ ಮತ್ತು ವಸ್ತ್ರ ನೇಯುವ ನೇಕಾರ ತಮ್ಮ ಜಾತಿ ಸಮುದಾಯದ ಅಸ್ಮಿತೆಗಳನ್ನು ಮರೆತು ಶ್ರಮಿಸುತ್ತಾರೆ. ಈ ವಸ್ತ್ರ ಮಾರುಕಟ್ಟೆಗೆ ಬಂದ ಕೂಡಲೇ ಅದಕ್ಕೆ ಪಾವಿತ್ರ್ಯತೆ, ಜಾತಿ ಶ್ರೇಷ್ಠತೆಯ ಪಾರಮ್ಯ ಮತ್ತು ಮಾರುಕಟ್ಟೆ ಮೌಲ್ಯ ಅಂಟಿಕೊಳ್ಳುತ್ತದೆ. ಇಲ್ಲಿಗೆ ಶ್ರಮಿಕರ ಶ್ರಮ ಸರಪಳಿ ಅಂತ್ಯಗೊಂಡು, ಇಡೀ ಶ್ರಮಿಕ ಸಮುದಾಯ ಈ ಉತ್ಪನ್ನದಿಂದ ಹೊರತಾಗಿಬಿಡುತ್ತದೆ. ರೇಷ್ಮೆ ಗೂಡಿನ ವಹಿವಾಟಿನ ಮೇಲೆ ದಾಳಿ ನಡೆಯುವಾಗ, ಈ ಶ್ರಮ ಸರಪಳಿಯ ವಾರಸುದಾರರು ಒಂದಾಗಿದ್ದರೆ, ಇಂತಹ ದಾಳಿಗಳ ವಿರುದ್ಧ ದನಿ ಎತ್ತಬಹುದಲ್ಲವೇ?
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ, ಬಂಡವಾಳಶಾಹಿಯೊಡನೆ ಕೈಜೋಡಿಸಿ ಶ್ರಮಿಕ ಸಮುದಾಯಗಳ ನಡುವೆ ಶಾಶ್ವತವಾದ ಗೋಡೆಗಳನ್ನು ಕಟ್ಟುತ್ತಿರುವ ಈ ಸಂದರ್ಭದಲ್ಲಿ ಇಂತಹ ಒಂದು ವರ್ಗಪ್ರಜ್ಞೆ ಅನಿವಾರ್ಯವಾಗಿದೆ. ಬಹುಶಃ ಈ ವರ್ಗಪ್ರಜ್ಞೆ ಜಾಗೃತವಾಗಿದ್ದಲ್ಲಿ ಇಂದು ಜಾತ್ರೆಗಳಲ್ಲಿ, ಸಂತೆಗಳಲ್ಲಿ, ದೇವಾಲಯದ ಆವರಣಗಳಲ್ಲಿ ಸಣ್ಣಪುಟ್ಟ ವ್ಯಾಪಾರಿಗಳು ಮತಾಂಧರಿಂದ ದಾಳಿಗೊಳಗಾಗುತ್ತಿರಲಿಲ್ಲ. ಮತೀಯ ದ್ವೇಷ ಮತ್ತು ಧಾರ್ಮಿಕ ಅಸ್ಮಿತೆಗಳಿಗೆ ಬಲಿಯಾಗಿ ಇಂತಹ ದಾಳಿಗಳನ್ನು ಸಂಭ್ರಮಿಸುವ ಮೂಲಕ ನಮ್ಮ ಸಮಾಜ ತನ್ನ ಪ್ರಜ್ಞಾಶೂನ್ಯತೆಯನ್ನು ಪ್ರದರ್ಶಿಸಿದೆ. ಆದರೆ ಶ್ರಮಿಕ ವರ್ಗ ಈ ಪ್ರಜ್ಞಾಶೂನ್ಯತೆಯ ಸಮೂಹ ಸನ್ನಿಗೊಳಗಾಗದೆ ತನ್ನ ಮೂಲ ವರ್ಗ ಅಸ್ಮಿತೆಯೊಂದಿಗೆ ಗುರುತಿಸಿಕೊಳ್ಳುವುದರೊಂದಿಗೆ ಶ್ರಮಜೀವಿಗಳ ಶೋಷಣೆಯ ಮೂಲವಾದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಶೋಷಕ ಬಂಡವಾಳಶಾಹಿಯ ವಿರುದ್ಧ ಐಕ್ಯತೆಯಿಂದ ಹೋರಾಡುವುದು ಇಂದಿನ ಅನಿವಾರ್ಯತೆಯಾಗಿದೆ.