ಜಾತಿ ತಾರತಮ್ಯ ಕಾನೂನಿಂದ ಸರಿಪಡಿಸಲು ಸಾಧ್ಯವಿಲ್ಲ: ಪರಮೇಶ್ವರ್
ಉಡುಪಿ : ಜಾತಿಯ ಕಾರಣಕ್ಕೆ ಬಾಲ್ಯದಿಂದಲೂ ಅವಮಾನ ಹಾಗೂ ತಾರತಮ್ಯ ಅನುಭವಿಸಿಕೊಂಡು ಬಂದಿದ್ದೇವೆ. ಇದನ್ನು ಕಾನೂನಿಂದ ಸರಿಪಡಿಸಲು ಸಾಧ್ಯವಿಲ್ಲ. ಜನರ ಮನಸ್ಸು ಬದಲಾವಣೆಯಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆಲ್ಲಾ ನಾನು ಶಾಸಕನಾಗಿದ್ದಾಗ, ಸಚಿವನಾಗಿದ್ದಾಗ ನಡೆದ ಘಟನೆಗಳ ಕಾರಣಕ್ಕೆ ಈ ವಿಚಾರವನ್ನು ಇತ್ತೀಚೆಗೆ ಹೇಳಿದ್ದೇನೆ. ಅದನ್ನು ನನ್ನಂಥವರು ಹೇಳದೆ ಮತ್ತೆ ಯಾರು ಹೇಳಬೇಕು? 21ನೇ ಶತಮಾನದಲ್ಲಾದರೂ ಬದಲಾವಣೆ ಯಾಗಲಿ ಎಂಬ ಉದ್ದೇಶದಿಂದ ಹೇಳಿದ್ದೇನೆ ಎಂದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಮುಂದೆ ಈ ರೀತಿಯ ಭ್ರಷ್ಟಾಚಾರ ಪ್ರಕರಣ ಆಗಬಾರದು. ತಕ್ಷಣವೇ ಈಶ್ವರಪ್ಪರನ್ನು ಬಂಧಿಸಬೇಕು. ಹೈಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆ ಆಗಬೇಕು. ಸಂತೋಷ್ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು. ಇದರ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದರು.
ಇದು ಆತ್ಮಹತ್ಯೆಯೋ ಅಥವಾ ಬೇರೆ ಕಾರಣಗಳಿವೆಯೊ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಡೆತ್‌ನೋಟ್ ಸ್ಪಷ್ಟವಾಗಿ ಇರುವುದರಿಂದ ಆತ್ಮಹತ್ಯೆ ಎಂದು ಹೇಳಬಹುದು. ತನಿಖೆ ಆದರೆ ಎಲ್ಲಾ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
ಜಾರ್ಜ್ ಬಂಧನವಾಗಿತ್ತೆ ಎಂಬ ಬಿಜೆಪಿ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಜಾರ್ಜ್ ಪ್ರಕರಣವೇ ಬೇರೆ ಈ ಪ್ರಕರಣವೇ ಬೇರೆ. ಎರಡು ಪ್ರಕರಣಗಳನ್ನು ಹೋಲಿಸಬಾರದು, ಬಿಜೆಪಿಯವರು ಯಾವತ್ತೂ ಹೀಗೆನೇ ಮಾಡುತ್ತಾರೆ. ನೀನು ತಪ್ಪು ಮಾಡಿದ್ದಿ ಅಂದರೆ ನೀವು ಮಾಡಿಲ್ಲವಾ ಎಂದು ಕೇಳುತ್ತಾರೆ. ಈ ಸಮರ್ಥನೆ ಮಾಡುವುದು ಕೆಟ್ಟ ಬೆಳವಣಿಗೆ ಎಂದು ಅವರು ಟೀಕಿಸಿದರು.
‘ಪ್ರಮೋದ್‌ರ ಕೆಲವು ಬೇಡಿಕೆಗಳಿವೆ’
ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಪ್ರಮೋದ್ ಮಧ್ವರಾಜ್ ಜೊತೆ ಮಾತನಾಡಿ ಬಂದಿದ್ದೇನೆ. ಅವರ ಕೆಲವು ಬೇಡಿಕೆಗಳು ಹಾಗೂ ಅನಿಸಿಕೆಗಳು ಇವೆ. ಅದನ್ನೆಲ್ಲ ಸರಿಪಡಿಸಿಕೊಳ್ಳುತ್ತೇವೆ. ಬಿಜೆಪಿ ಸೇರ್ಪಡೆಗೊಳ್ಳುತ್ತಾರೆಂದು ನನಗೆ ಅನಿಸುವುದಿಲ್ಲ ಎಂದು ತಿಳಿಸಿದರು.