varthabharthi


ತಿಳಿ ವಿಜ್ಞಾನ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಎರಡು ವಿಭಿನ್ನ ಪ್ರಯೋಗಗಳು

ವಾರ್ತಾ ಭಾರತಿ : 17 Apr, 2022
ಆರ್.ಬಿ.ಗುರುಬಸವರಾಜ

ಪ್ಲಾಸ್ಟಿಕ್ ತ್ಯಾಜ್ಯ ಎಂದೊಡನೆ ಮೈ ಹಾಗೂ ಮನಸ್ಸಿಗೆ ಮುಳ್ಳು ಚುಚ್ಚಿದ ಅನುಭವಾಗುವುದು ಸಹಜ. ಇದು ಕೊಳೆಯಲಾರದ, ಕರಗಲಾರದ ವಿಷವಾಗಿರುವುದೇ ಇದಕ್ಕೆಲ್ಲಾ ಕಾರಣ. ಹಾಗಂತ ಸುಮ್ಮನೆ ಇರಲು ಆಗದು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ಅನೇಕ ವಿಜ್ಞಾನಿಗಳು, ಪರಿಸರ ತಜ್ಞರು, ತಂತ್ರಜ್ಞರು ತುಂಬಾ ತಲೆಕೆಡಿಸಿಕೊಂಡಿದ್ದಾರೆ. ವಿಶ್ವದ ನಾನಾ ಭಾಗಗಳಲ್ಲಿ ನಾನಾ ಪ್ರಯೋಗಗಳು ನಡೆಯುತ್ತಲೇ ಇವೆ. ಕೆಲವು ಪ್ರಯತ್ನಗಳು ಯಶಸ್ಸು ಕಂಡಿವೆ. ಬಹಳ ಪ್ರಯೋಗಗಳು ಸರಿಯಾದ ಫಲ ದೊರೆಯದೆ ಮೂಲೆಗುಂಪಾಗಿವೆ. ಅದೆಲ್ಲಾ ಇರಲಿ. ಈಗ ಎರಡು ಹೊಸ ಪ್ರಯೋಗಗಳ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಳ್ಳುವೆ. ಒಂದು ರೈಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ರೂಪಿಸಿದ ಕಾರ್ಯತಂತ್ರ. ಇನ್ನೊಂದು ತ್ಯಾಜ್ಯ ಆಯುವವರು ಬಳಸಿದ ಕಾರ್ಯಯೋಜನೆ. ಟೆಕ್ಸಾಸ್‌ನ ರೈಸ್ ವಿಶ್ವವಿದ್ಯಾನಿಲಯದ ಪ್ರಯೋಗಾಲಯದಲ್ಲಿ ತ್ಯಾಜ್ಯವನ್ನು ಪ್ರಕ್ರಿಯೆಗೊಳಿಸಲು ಕಷ್ಟಕರವಾದ ಪ್ಲಾಸ್ಟಿಕ್ ಕಸವನ್ನು ಕಾರ್ಬನ್ ಕ್ಯಾಪ್ಚರ್ ಮಾಸ್ಟರ್ ಆಗಿ ಪರಿವರ್ತಿಸುತ್ತಿದೆ. ಸಂಶೋಧಕರು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಳ್ಳುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಒಂದು ನಿರ್ದಿಷ್ಟ ರಾಸಾಯನಿಕದ ಉಪಸ್ಥಿತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಸಿ ಮಾಡುವುದರಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಕಣಗಳು ಸೃಷ್ಟಿಯಾಗುತ್ತವೆ ಎಂದು ರೈಸ್ ವಿಶ್ವವಿದ್ಯಾನಿಲಯದ ಸಂಶೋಧನಾ ತಂಡವು ಕಂಡುಹಿಡಿದಿದೆ.

ಪೊಟ್ಯಾಶಿಯಮ್ ಅಸಿಟೇಟ್ ರಾಸಾಯನಿಕದ ಉಪಸ್ಥಿತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಸಿ ಮಾಡುವುದರಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಕಣಗಳು ಸೃಷ್ಟಿಯಾಗುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಕಾರ್ಬನ್ ಕ್ಯಾಪ್ಚರ್ ವಿಧಾನವು ನೈಸರ್ಗಿಕ ಅನಿಲ ಫೀಡ್‌ಗಳಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುವ ಪ್ರಸ್ತುತ ವಿಧಾನಗಳಿಗಿಂತ ಎಂಟು ಪಟ್ಟು ಅಗ್ಗವಾಗಿದೆ. ಈ ಆವಿಷ್ಕಾರವು ಪ್ಲಾಸ್ಟಿಕ್ ಮರುಬಳಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಅವರ ಅಭಿಮತ. ಸದ್ಯಕ್ಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಹವಾಮಾನ ಬಿಕ್ಕಟ್ಟಿನ ವಿರುದ್ಧ ಹೋರಾಡಲು ವಿಜ್ಞಾನಿಗಳು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದು ಒಂದಿಷ್ಟು ಮುಕ್ತವಾಗಿ ಉಸಿರಾಡಲು ಅವಕಾಶ ದೊರೆಯಬಹುದೇನೋ ಎಂಬ ಆಶಾಭಾವನೆ ಮೂಡಿಸಿದೆ.

‘‘ಪವರ್ ಪ್ಲಾಂಟ್ ಎಕ್ಸಾಸ್ಟ್ ಸ್ಟ್ಯಾಕ್‌ಗಳಂತಹ CO2 ಹೊರಸೂಸುವಿಕೆಯ ಪಾಯಿಂಟ್ ಮೂಲಗಳನ್ನು ಈ ತ್ಯಾಜ್ಯ ಪ್ಲಾಸ್ಟಿಕ್ ಮೂಲದ ವಸ್ತುಗಳೊಂದಿಗೆ ಅಳವಡಿಸಬಹುದಾಗಿದೆ. ಇದು ಸಾಮಾನ್ಯವಾಗಿ ವಾತಾವರಣವನ್ನು ತುಂಬುವ ಅಗಾಧ ಪ್ರಮಾಣದ CO2 ಅನ್ನು ತೆಗೆದುಹಾಕುತ್ತದೆ’’ ಎಂದು ಸಹ ಮುಖ್ಯ ಲೇಖಕ ಜೇಮ್ಸ್ ಟೂರ್ ತಿಳಿಸಿದ್ದಾರೆ. ಇದು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಉತ್ತಮ ಮಾರ್ಗವಾಗಿದೆ. ಜೊತೆಗೆ CO2 ಹೊರಸೂಸುವಿಕೆಗೆ ಕಡಿವಾಣ ಹಾಕಬಹುದಾಗಿದೆ ಎನ್ನುತ್ತಾರೆ. ರಾಸಾಯನಿಕ ಮರುಬಳಕೆ ಎಂದು ಕರೆಯಲ್ಪಡುವ ಪ್ಲಾಸ್ಟಿಕ್ ಅನ್ನು ಪೈರೋಲೈಜ್ ಮಾಡುವ ಪ್ರಸ್ತುತ ಪ್ರಕ್ರಿಯೆಯು ತೈಲಗಳು, ಅನಿಲಗಳು ಮತ್ತು ಮೇಣಗಳನ್ನು ಉತ್ಪಾದಿಸುತ್ತದೆ. ಆದರೆ ಇಂಗಾಲದ ಉಪಉತ್ಪನ್ನವು ಬಹುತೇಕ ನಿಷ್ಪ್ರಯೋಜಕವಾಗಿದೆ. ಆದಾಗ್ಯೂ, ಪೊಟ್ಯಾಶಿಯಮ್ ಅಸಿಟೇಟ್‌ನ ಉಪಸ್ಥಿತಿಯಲ್ಲಿ ಪ್ಲಾಸ್ಟಿಕ್ ಅನ್ನು ಪೈರೋಲೈಸಿಂಗ್ ಮಾಡುವುದರಿಂದ ಕೋಣೆಯ ಉಷ್ಣಾಂಶದಲ್ಲಿ CO2ನಲ್ಲಿ ತಮ್ಮದೇ ತೂಕದ ಶೇ. 18ವರೆಗೆ ಹಿಡಿದಿಡಲು ಸಾಧ್ಯವಾಗುವ ರಂಧ್ರವಿರುವ ಕಣಗಳು ಉತ್ಪಾದಿತವಾಗುತ್ತವೆ.
ಹೆಚ್ಚುವರಿಯಾಗಿ, ಪಾಲಿಪ್ರೊಪಿಲೀನ್ ಮತ್ತು ಹೆಚ್ಚಿನ ಮತ್ತು ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ಸೇರಿದಂತೆ CO2 ಸೋಬೆರ್ಂಟ್ ಅನ್ನು ಉತ್ಪಾದಿಸುವ ಸಲುವಾಗಿ ಕಡಿಮೆ ಸ್ಥಿರ ಕಾರ್ಬನ್ ಅಂಶವನ್ನು ಹೊಂದಿರುವ ಪಾಲಿಮರ್ ತ್ಯಾಜ್ಯಗಳಿಗೆ ವಿಶಿಷ್ಟವಾದ ರಾಸಾಯನಿಕ ಮರುಬಳಕೆ ಕೆಲಸ ಮಾಡುವುದಿಲ್ಲ. ಘನತ್ಯಾಜ್ಯದಲ್ಲಿನ ಮುಖ್ಯ ಘಟಕಗಳಾದ ಪ್ಲಾಸ್ಟಿಕ್‌ಗಳು ಇಲ್ಲಿ ವಿಶೇಷವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಪೊಟ್ಯಾಶಿಯಮ್ ಅಸಿಟೇಟ್‌ನೊಂದಿಗೆ ಬೆರೆಸಿದಾಗ CO2 ಅನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ ಎಂದು ಪ್ರಯೋಗದ ಮೂಲಕ ತಿಳಿಸಿದ್ದಾರೆ.

ದಹನ ನಂತರದ ಫ್ಲೂ ಗ್ಯಾಸ್‌ನಂತಹ ಪಾಯಿಂಟ್ ಮೂಲದಿಂದ ಇಂಗಾಲದ ಡೈಆಕ್ಸೈಡ್ ಸೆರೆಹಿಡಿಯುವಿಕೆಯ ವೆಚ್ಚವು ಟನ್‌ಗೆ 21 ಡಾಲರ್ ಆಗಿರುತ್ತದೆ ಎಂದು ಲ್ಯಾಬ್ ಅಂದಾಜಿಸಿದೆ. ಇದು ನೈಸರ್ಗಿಕ ಅನಿಲ ಫೀಡ್‌ಗಳಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಸಾಮಾನ್ಯ ಬಳಕೆಯಲ್ಲಿರುವ ಶಕ್ತಿ ತೀವ್ರವಾದ, ಅಮೈನ್ ಆಧಾರಿತ ಪ್ರಕ್ರಿಯೆಗಿಂತ ಕಡಿಮೆ ವೆಚ್ಚದಾಯಕವಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಅಮೈನ್ ಆಧಾರಿತ ಪ್ರಕ್ರಿಯೆಗೆ ಒಂದು ಟನ್‌ಗೆ 80-160 ಡಾಲರ್ ವೆಚ್ಚವಾಗುತ್ತದೆ.

ಅಮೈನ್ ಆಧಾರಿತ ವಸ್ತುಗಳಂತೆ, ಸೋಬೆರ್ಂಟ್ ಅನ್ನು ಮರುಬಳಕೆ ಮಾಡಬಹುದು. ಇದನ್ನು ಸುಮಾರು 75 ಡಿಗ್ರಿ ಸೆಲ್ಸಿಯಸ್ (167 ಡಿಗ್ರಿ ಫ್ಯಾರನ್‌ಹೀಟ್)ಗೆ ಬಿಸಿ ಮಾಡುವುದರಿಂದ ರಂಧ್ರಗಳಿಂದ ಸಿಕ್ಕಿಬಿದ್ದ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಸುಮಾರು ಶೇ. 90 ವಸ್ತುವಿನ ಬಂಧಿಸುವ ಸ್ಥಳಗಳನ್ನು ಪುನರುತ್ಪಾದಿಸುತ್ತದೆ.

ವಸ್ತುವನ್ನು ತಯಾರಿಸಲು, ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಪುಡಿಯಾಗಿ ಪರಿವರ್ತಿಸಲಾಗುತ್ತದೆ, ಪೊಟ್ಯಾಶಿಯಮ್ ಅಸಿಟೇಟ್‌ನೊಂದಿಗೆ ಬೆರೆಸಲಾಗುತ್ತದೆ ಮತ್ತು ರಂಧ್ರಗಳನ್ನು ಉತ್ತಮಗೊಳಿಸಲು 45 ನಿಮಿಷಗಳ ಕಾಲ 600 ಡಿಗ್ರಿ ಸೆಲ್ಸಿಯಸ್ (1,112 ಡಿಗ್ರಿ ಫ್ಯಾರನ್‌ಹೀಟ್) ನಲ್ಲಿ ಬಿಸಿಮಾಡಲಾಗುತ್ತದೆ. ಇವುಗಳಲ್ಲಿ ಹೆಚ್ಚಿನವು ಸುಮಾರು 0.7 ನ್ಯಾನೊಮೀಟರ್ ಅಗಲವಿರುತ್ತವೆ. ಈ ಪ್ರಕ್ರಿಯೆಯು ಮೇಣದ ಉಪಉತ್ಪನ್ನವನ್ನು ಸಹ ಉತ್ಪಾದಿಸುತ್ತದೆ. ಅದನ್ನು ಮಾರ್ಜಕಗಳು ಅಥವಾ ಲೂಬ್ರಿಕಂಟ್‌ಗಳಾಗಿ ಮರುಬಳಕೆ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಆದ್ದರಿಂದ, ‘‘ಈ ಪ್ಲಾಸ್ಟಿಕ್ ತ್ಯಾಜ್ಯ ಪಡೆದ ಇಂಗಾಲದ ವಸ್ತುವು ಹೆಚ್ಚಿನ CO2 ಹೊರಸೂಸುವಿಕೆಯ ಪಾಯಿಂಟ್ ಮೂಲಗಳಿಂದ CO2 ಅನ್ನು ಸೆರೆಹಿಡಿಯುವಲ್ಲಿ ಉಪಯುಕ್ತತೆಯನ್ನು ಕಂಡುಕೊಳ್ಳಬೇಕು ಮತ್ತು ಇಲ್ಲದಿದ್ದರೆ ಹಾನಿಕಾರಕ ಪ್ಲಾಸ್ಟಿಕ್ ತ್ಯಾಜ್ಯವಾಗಿ ಬಳಕೆಯನ್ನು ಸ್ಥಗಿತಗೊಳಿಸುತ್ತದೆ’’ ಎಂದು ಅಧ್ಯಯನದ ಲೇಖಕರು ತೀರ್ಮಾನಿಸಿದ್ದಾರೆ.

ಈ ಪ್ರಯೋಗಕ್ಕೆ ಪೂರಕ ಎಂಬಂತೆ ಘಾನಾದಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಟ ಕ್ರಾಂತಿಕಾರಿ ಸ್ವರೂಪದ್ದಾಗಿದೆ. ಪಶ್ಚಿಮ ಆಫ್ರಿಕಾದ ದೇಶದಾದ್ಯಂತ, ತ್ಯಾಜ್ಯ ಆಯುವವರು ಎಂದು ಕರೆಯಲ್ಪಡುವ ಅನೌಪಚಾರಿಕ ಕೆಲಸಗಾರರು ಪ್ಲಾಸ್ಟಿಕ್ ಮುಕ್ತ ದೇಶಕ್ಕೆ ಕೈಜೋಡಿಸಿದ್ದಾರೆ. ಸಮುದಾಯಗಳು ಮತ್ತು ನೈಸರ್ಗಿಕ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಮೂಲಕ, ಅಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದ್ದಾರೆ. ಅವರಿಗೆ ಈ ಕೆಲಸವು ಮಹತ್ವದ್ದಾಗಿದೆ. ಏಕೆಂದರೆ ಅವರಾರೂ ಉಚಿತ ಸೇವೆ ಮಾಡುತ್ತಿಲ್ಲ. ಹೀಗೆ ಪ್ಲಾಸ್ಟಿಕ್ ತ್ಯಾಜ್ಯ ಆಯುವ ಮೂಲಕ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ದೇಶದಲ್ಲಿನ ಉದ್ಯಮಗಳ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಆಧುನೀಕರಿಸಲು ದೊಡ್ಡ ಯೋಜನೆಗಳನ್ನು ಹೊಂದಲು ಪರೋಕ್ಷವಾಗಿ ಕಾರಣೀಭೂತರಾಗುತ್ತಿದ್ದಾರೆ. ಚರಂಡಿಗಳು, ಅಕ್ರಮ ತ್ಯಾಜ್ಯ ಸಂಗ್ರಹ ತಾಣಗಳು ಮತ್ತು ಕಡಲತೀರಗಳಲ್ಲಿ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇನ್ನಿತರ ಪ್ಲಾಸ್ಟಿಕ್ ವಸ್ತುಗಳನ್ನು ಆರಿಸಿ ತಂದು ಪ್ಲಾಸ್ಟಿಕ್ ಉದ್ದಿಮೆಗಳಿಗೆ ಪೂರೈಕೆ ಮಾಡುತ್ತಾರೆ. ಪ್ಲಾಸ್ಟಿಕ್ ಉದ್ದಿಮೆದಾರರು ಅವರಿಗೆ ಕೈ ತುಂಬಾ ಹಣ ನೀಡುತ್ತಾರೆ. ಇದರಿಂದ ಅವರು ಪ್ಲಾಸಿಕ್ ಆಯುವಲ್ಲಿ ಇನ್ನಷ್ಟು ಮುತುವರ್ಜಿ ವಹಿಸುತ್ತಿದ್ದಾರೆ.

ಈ ಪ್ರಾಯೋಗಿಕ ಯೋಜನೆಯಲ್ಲಿ 2,000ಕ್ಕೂ ಹೆಚ್ಚು ತ್ಯಾಜ್ಯ ಆಯುವವರು ಒಂದು ಸುಸಂಘಟಿತ ಗುಂಪನ್ನು ರಚಿಸಿಕೊಂಡಿದ್ದಾರೆ. ಅವರು ಸಂಗ್ರಹಿಸುವ ಪ್ಲಾಸ್ಟಿಕ್‌ನ ಪ್ರಮಾಣ ಮತ್ತು ಪ್ರಕಾರಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯನ್ನು ಘಾನಾ ಸರಕಾರ ಅವುಗಳನ್ನು ಉತ್ಪಾದಿಸಿದ ಮೂಲ ಉತ್ಪಾದಕರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರಿಂದ ಮರುಬಳಕೆಯ ಪ್ರಮಾಣ ಎಷ್ಟಾಯಿತು ಎಂಬುದು ತಿಳಿಯುತ್ತದೆ. ಪರಸ್ಪರ ಮಾಹಿತಿ ಹಂಚಿಕೊಳ್ಳುವ ಮೂಲಕ ಯೋಜನೆಯು ಎಲ್ಲಾ ಪಾಲುದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಸಾಮಾಜಿಕವಾಗಿ ಜವಾಬ್ದಾರಿಯುತ ಕಂಪೆನಿಗಳು ಸಾಮಾಜಿಕ ಪ್ಲಾಸ್ಟಿಕ್‌ಗಳಿಗೆ ಪ್ರೀಮಿಯಂ ಪಾವತಿಸುತ್ತವೆ. ಇದು ಅಂತಿಮ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸಮುದಾಯಗಳು ಮತ್ತು ಪರಿಸರವನ್ನು ರಕ್ಷಿಸುತ್ತದೆ. ತ್ಯಾಜ್ಯವನ್ನು ಹೆಕ್ಕುವವರು ಉತ್ತಮ ವೇತನವನ್ನು ಗಳಿಸುವ ಮೂಲಕ ಪ್ರಯೋಜನವನ್ನು ಪಡೆಯುತ್ತಾರೆ. ಮರುಬಳಕೆ ಘಟಕಗಳನ್ನು ಎಲ್ಲೆಲ್ಲಿ ವಿಸ್ತರಿಸಬೇಕು ಎಂಬುದನ್ನು ನಿರ್ಧರಿಸಲು ಅಲ್ಲಿನ ನೀತಿ ನಿರ್ಮಾಪಕರು ಈ ಮಾಹಿತಿಯನ್ನು ಬಳಸುತ್ತಿದ್ದಾರೆ.

ಪ್ರತಿ ವರ್ಷ ಒಟ್ಟು 8 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಾಗರಕ್ಕೆ ಸೋರಿಕೆಯಾಗುತ್ತದೆ. 2050ರ ಹೊತ್ತಿಗೆ ನಾವು ತುರ್ತು ಸಾಮೂಹಿಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರುತ್ತದೆ. ಘಾನಾವು ವರ್ಷಕ್ಕೆ ಸರಿಸುಮಾರು 1.1 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ ಮತ್ತು ಅದರಲ್ಲಿ ಸುಮಾರು ಶೇ. 5 ಅನ್ನು ಮಾತ್ರ ಮರುಬಳಕೆಗಾಗಿ ಸಂಗ್ರಹಿಸಲಾಗುತ್ತದೆ. ಅಕ್ಟೋಬರ್ 2019ರಲ್ಲಿ, ಘಾನಾ ಸರಕಾರದ ಅಧ್ಯಕ್ಷ ನಾನಾ ಅಕುಫೊ ಅಡ್ಡೊ ಘಾನಾದ ಸಾಗರ ಮತ್ತು ಜಲಮಾರ್ಗಗಳಲ್ಲಿ ಶೂನ್ಯ ಪ್ಲಾಸ್ಟಿಕ್ ಸೋರಿಕೆಯನ್ನು ಸಾಧಿಸಲು ಪ್ರತಿಜ್ಞೆ ಮಾಡಿದ್ದರು. ಘಾನಾವು ಪ್ಲಾಸ್ಟಿಕ್ ನಿರ್ವಹಣೆ ವಿಷಯದಲ್ಲಿ ಆಫ್ರಿಕಾ ಖಂಡದ ಹಾಗೂ ಇತರ ದೇಶಗಳಿಗೆ ಮಾದರಿಯಾಗಲು ಉತ್ತಮ ಪ್ರಯತ್ನಗಳನ್ನು ಮಾಡುತ್ತದೆ ಎಂದು ನಾನಾ ಅಕುಫೊ ಅಡ್ಡೊ ಹೇಳಿದ್ದರು. ಅದರ ಭಾಗವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಒಟ್ಟಾಗಿ ಈ ಯೋಜನೆಯ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಈ ಗುಂಪು ಸಂಭಾವ್ಯ ಖರೀದಿದಾರರು ಮತ್ತು ಮರುಬಳಕೆದಾರರೊಂದಿಗೆ ತ್ಯಾಜ್ಯ ಆಯುವವರನ್ನು ಸಂಪರ್ಕಿಸುವ ಸಾಫ್ಟ್‌ವೇರ್‌ನ್ನೂ ವಿನ್ಯಾಸಗೊಳಿಸಿದ್ದಾರೆ. ಇದಕ್ಕಾಗಿ ಗ್ಲೋಬಲ್ ಎನ್ವಿರಾನ್‌ಮೆಂಟ್ ಫೆಸಿಲಿಟಿ, ಯುನೈಟೆಡ್ ನೇಷನ್ಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಆರ್ಗನೈಝೇಶನ್ (UNIDO) ಗಳು ಘಾನಾ ಸರಕಾರಕ್ಕೆ ಧನ್ಯವಾದಗಳನ್ನು ತಿಳಿಸಿವೆ. ದೇಶದ ಸುಸ್ಥಿರತೆಯ ಪಾಲುದಾರಿಕೆಗೆ ಜ್ಞಾನ ಮತ್ತು ಸಂಪನ್ಮೂಲಗಳನ್ನು ಕೊಡುಗೆಯಾಗಿ ನೀಡಲು ಆಸಕ್ತಿ ಹೊಂದಿರುವ ವ್ಯಾಪಾರ ನಾಯಕರು, ಪರಿಸರದಲ್ಲಿ ಬದಲಾವಣೆ ತರಲು ಬಯಸಿದವರು, ನಾಗರಿಕರು, ಸಂಶೋಧಕರು, ಉದ್ಯಮಿಗಳು ಮತ್ತು ಯುವ ಕಾರ್ಯಕರ್ತರ ದಂಡು ಈಗ ಘಾನಾದಲ್ಲಿ ಈ ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ ತೊಡಗಿಸಿಕೊಳ್ಳುತ್ತಿದೆ.

ರೈಸ್ ವಿಶ್ವವಿದ್ಯಾನಿಲಯದಂತಹ ಆಧುನಿಕ ಪ್ರಯೋಗಗಳು ಮತ್ತು ಘಾನಾದಲ್ಲಿನ ಕ್ರಾಂತಿಕಾರಕ ಬದಲಾವಣೆಗಳು ಜಾಗತಿಕವಾಗಿ ಹೆಚ್ಚಾಗಲಿ. ಆ ಮೂಲಕ ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸುಖಾಂತ್ಯವಾಗಲಿ ಎಂಬುದು ನಮ್ಮ ಆಶಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)