ದಲಿತ ಸಿಎಂ ಎಂಬ ಹಾಸ್ಯಾಸ್ಪದ ಚುನಾವಣಾ ಕೂಗು
‘‘ಕಾಲ ಕೂಡಿ ಬಂದರೆ ಮುಂದಿನ ಬಾರಿ ದಲಿತರನ್ನೇ ಮುಖ್ಯಮಂತ್ರಿ ಮಾಡಲು ತಯಾರಿದ್ದೇವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಆತ್ಮ ವಂಚನೆಯ ಸಂಕೇತವಾಗಿದೆ.
ಚುನಾವಣೆ ಬಂದಾಗ ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿ ಆಸೆ ಹುಟ್ಟಿಸಲು ಆಡುವ ಈ ಮಾತುಗಳು ಮತಗಳನ್ನು ಒಡೆಯುವ ತಂತ್ರವಷ್ಟೇ.
ಪ್ರಸ್ತುತ ಇರುವ ಜೆಡಿಎಸ್ ಪಕ್ಷದಲ್ಲಿ ನಿಜಕ್ಕೂ ಇರಬೇಕಾದ ಸಾಮಾಜಿಕ ನ್ಯಾಯ ಪ್ರಜ್ಞೆ ಇಲ್ಲ ಎಂಬ ಸ್ಪಷ್ಟತೆಯನ್ನು ನಾವು ಹೊಂದಬೇಕು.
ಅದರಲ್ಲೂ ಕಾಲಕ್ಕೆ ತಕ್ಕಂತೆ ಸೆಕ್ಯುಲರ್ ಮತ್ತು ಕಮ್ಯೂನಲ್ ಆಗುವ ಶಕ್ತಿಯನ್ನು ಹೊಂದಿರುವ ಕುಮಾರಸ್ವಾಮಿ ಅವರ ಮಾತುಗಳ ಬಗ್ಗೆ ಆದಷ್ಟು ಎಚ್ಚರಿಕೆಯಿಂದಲೇ ಇರಬೇಕು. ಇಲ್ಲದೇ ಹೋದರೆ ಈ ಹಿಂದೆ ಹೇಳಿದಂತೆ ನಮಗೆ ಸೈದ್ಧಾಂತಿಕ ಭ್ರಮ ನಿರಸನ ಆಗುವುದಂತೂ ಖಂಡಿತ.
ಅದೇನೋ ಕಾಣೆ ಇತ್ತೀಚೆಗೆ ಕುಮಾರಸ್ವಾಮಿ ಅವರು ಕೋಮು ಸಂಘರ್ಷಗಳು ಮತ್ತು ಹಿಂದುತ್ವ ಮೂಲಭೂತವಾದಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಆಗಿದ್ದರೂ ಕೂಡಾ ಇಷ್ಟು ದಿನ ಇಲ್ಲದ ಆವೇಶ ಈಗೇಕೆ ಇವರಲ್ಲಿ ಬಂದಿದೆ ಎಂಬ ಗೊಂದಲವೂ ನನ್ನಲ್ಲಿ ಮನೆ ಮಾಡಿದೆ.
ಇವರೇನಾದರೂ ಬಿಜೆಪಿಯ ಮಾತು ಕೇಳಿಕೊಂಡು ಸಾಧ್ಯವಾದಷ್ಟು ಅಲ್ಪಸಂಖ್ಯಾತರ ಮತಗಳನ್ನು ಒಡೆಯುತ್ತೇನೆ ಎಂದು ಹೀಗೆ ಮಾತನಾಡುತ್ತಿದ್ದಾರೋ ಅಥವಾ ಸಮಾಜದ ಮೇಲಿನ ನಿಜವಾದ ಕಾಳಜಿಯಿಂದ ಮಾತನಾಡುತ್ತಿದ್ದಾರೋ ಎಂಬುದು ಅಸ್ಪಷ್ಟವಾಗಿದೆ. ಸದ್ಯ ಕುಮಾರಸ್ವಾಮಿ ಅವರು ಮತ ವಿಭಜನೆಗಾಗಿ ಹಾಗೆ ಮಾತನಾಡುತ್ತಿಲ್ಲ ಎಂದು ನಂಬುತ್ತೇನೆ. ಒಂದೆಡೆ ಬಿಜೆಪಿಯ ಧಾರ್ಮಿಕ ವಿಷದ ಬಗ್ಗೆ ಮಾತನಾಡುತ್ತಿರುವ ಕುಮಾರಸ್ವಾಮಿಯವರು ಇನ್ನೊಂದೆಡೆ ಬಸವರಾಜ ಹೊರಟ್ಟಿಯವರು ವಿಧಾನ ಪರಿಷತ್ ಸದಸ್ಯರಾಗಲು ಬಿಜೆಪಿಗೆ ಸೇರಿಕೊಳ್ಳಲು ಅನುಮತಿಸಿದ್ದಾರೆ ಎಂದು ಸ್ವತಃ ಹೊರಟ್ಟಿಯವರೇ ಹೇಳಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಇವರ ಬಗ್ಗೆ ಆದಷ್ಟು ನಾವು ಎಚ್ಚರದಿಂದ ಇರುವುದೇ ಲೇಸು ಎನಿಸುತ್ತಿದೆ.
ಇನ್ನು ಬಿಜೆಪಿ ಮತ್ತು ಜೆಡಿಎಸ್ ವಿಚಾರದಲ್ಲಿ ದಲಿತ ಸಿಎಂ ಎಂಬ ಪದವು ಚುನಾವಣೆಯಲ್ಲಿ ಮತ ವಿಭಜನೆಗಾಗಿ ಬಳಕೆ ಮಾಡುವ ಪದವಾಗಿದ್ದು ದಲಿತ ಸಿಎಂ ವಿಷಯದಲ್ಲಿ ಅವರು ನಂಬಿಕೆಗೆ ಅರ್ಹರಲ್ಲ ಎಂದು ಹೇಳಲು ಬಯಸುತ್ತೇನೆ.
ಜೊತೆಗೆ
ಭಾರತದ ಸಾರ್ವಜನಿಕ ಬದುಕಿನ ಇತಿಹಾಸದಲ್ಲಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಖಇ/ಖ ಕಾಯ್ದೆ, ಗುತ್ತಿಗೆ ಮೀಸಲಾತಿ, ಭಡ್ತಿ ಮೀಸಲಾತಿಯಂತಹ ಐತಿಹಾಸಿಕ ಕಾಯ್ದೆಗಳನ್ನು ರೂಪಿಸುವ ಮೂಲಕ ದಲಿತರ ಹಿತ ಕಾಯುವ ಕೆಲಸ ಮಾಡಿದ್ದು ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ನಂಬಿಕೆಗೆ ಅರ್ಹವಾದ ಪಕ್ಷವೆಂದು ಅನ್ನಿಸಿದೆ.
ದಲಿತ ಸಿಎಂ ಎಂಬುದು ದಲಿತರ ಘನತೆ, ಸ್ವಾಭಿಮಾನ ಮತ್ತು ಹಕ್ಕುದಾಯತ್ವದ ಸಂಗತಿಯೇ ಹೊರತು ಚುನಾವಣಾ ಸಂದರ್ಭದಲ್ಲಿ ಆಸೆ ಹುಟ್ಟಿಸಿ ಮತ ವಿಭಜನೆ ಮಾಡುವ ತಂತ್ರ ಮತ್ತು ಅಣಕದ ವಸ್ತುವಲ್ಲ. ಇದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಅರ್ಥವಾದರೆ ಉತ್ತಮ ಎಂದು ಆಶಿಸುತ್ತೇನೆ.