ಇರುವುದೊಂದೇ ಯಕೃತ್ತು
ಇಂದು ವಿಶ್ವ ಯಕೃತ್ತು ದಿನ
ಯಕೃತ್ತು (ಲಿವರ್) ನಮ್ಮ ದೇಹದ ಸವ್ಯಸಾಚಿ ಅಂಗವಾಗಿದ್ದು, ಜೀರ್ಣಕ್ರಿಯೆ, ರಕ್ಷಣಾ ಕ್ರಿಯೆ, ಪಚನ ಕ್ರಿಯೆ, ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆ ಹೀಗೆ ಹತ್ತು ಹಲವು ಜೈವಿಕ ಕ್ರಿಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಇಂತಹ ಬಹುಮುಖ್ಯ ಭೂಮಿಕೆ ನಿರ್ವಹಿಸುವ ಯಕೃತ್ತಿಗೆ ತೊಂದರೆ ಉಂಟಾದಲ್ಲಿ ಹತ್ತು ಹಲವು ಜೈವಿಕ ಕ್ರಿಯೆಗಳಿಗೆ ಅಡ್ಡಿಯಾಗಿ, ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲೂಬಹುದು. ಯಕೃತ್ ನಮ್ಮ ದೇಹದಲ್ಲಿ ಚರ್ಮದ ನಂತರದ ಎರಡನೇ ದೊಡ್ಡ ಅಂಗವಾಗಿರುತ್ತದೆ. ಹಾಗೆಯೇ ಮೆದುಳಿನ ನಂತರದ ಅತ್ಯಂತ ಸಂಕೀರ್ಣವಾದ ದೇಹದ ಅಂಗವಾಗಿರುತ್ತದೆ. ಏನಿಲ್ಲವೆಂದರೂ ಸುಮಾರು 50ಕ್ಕೂ ಹೆಚ್ಚು ರಾಸಾಯನಿಕ ಕ್ರಿಯೆಗಳು ನಮ್ಮ ಯಕೃತ್ತಿನಲ್ಲಿ ದಿನ ನಿತ್ಯ ಜರುಗುತ್ತಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ನಾವು ನಮ್ಮ ಯಕೃತ್ತಿನ ಆರೋಗ್ಯವನ್ನು ನಿರಂತರವಾಗಿ ಜೋಪಾನವಾಗಿರಿಸಬೇಕಾದ ಅನಿವಾರ್ಯತೆ ಇರುತ್ತದೆ. ಲಿವರ್ಗೆ ಬರುವ ರೋಗಗಳಲ್ಲಿ ಹೆಪಟೈಟಿಸ್ ಎಂಬ ವೈರಾಣು ಸೋಂಕು, ಲಿವರ್ ಸಿರ್ಹೊಸಿಸ್ ಎಂಬ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುವ ಕಾಯಿಲೆ ಮತ್ತು ಲಿವರ್ ಕ್ಯಾನ್ಸರ್ ಬಹು ಮುಖ್ಯ ಕಾಯಿಲೆಗಳಾಗಿರುತ್ತದೆ.
ಯಕೃತ್ತು ಮುಖ್ಯವಾಗಿ ಪಿತ್ತರಸವನ್ನು ಜೀರ್ಣಾಂಗ ವ್ಯೆಹಕ್ಕೆ ತಲುಪುವಂತೆ ಮಾಡಿ ಕೊಬ್ಬು ಕರಗಿಸುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ರಕ್ತ ಹೆಪ್ಪುಗಟ್ಟುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ನಾವು ತೆಗೆದುಕೊಂಡ ಔಷಧಿ ಮತ್ತು ಸೇವಿಸಿದ ಆಹಾರವು ಜೀರ್ಣಿಸಿಕೊಳ್ಳುವಲ್ಲಿ ಯಕೃತ್ತು ನಿರ್ಣಾಯಕ ಪಾತ್ರವಹಿಸುತ್ತದೆ. ಅದೇ ರೀತಿ ದೇಹದಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುವಲ್ಲಿಯೂ ಯಕೃತ್ತು ಅತ್ಯಂತ ಅವಶ್ಯಕವಾಗಿರುತ್ತದೆ.
ಯಕೃತ್ತಿನ ರಚನೆ:
ಯಕೃತ್ತು ಎಂಬ ಅಂಗ ನಮ್ಮ ಕಿಬ್ಬೊಟ್ಟೆಯ ಮೇಲ್ಭಾಗದಲ್ಲಿ ಬಲಗಡೆಯಲ್ಲಿ ಪಕ್ಕೆಲುಬುಗಳ ಕೆಳಭಾಗದಲ್ಲಿ ಇದೆ. ಇದರ ಮೇಲೆ ವಫೆ ಇರುತ್ತದೆ. ಗಾತ್ರದಲ್ಲಿ ಸುಮಾರು 25ರಿಂದ 27 ಸೆ.ಮೀ. ಅಗಲ, 15ರಿಂದ 18 ಸೆ.ಮೀ. ಎತ್ತರ ಹಾಗೂ 10ರಿಂದ 13 ಸೆ.ಮೀ. ಮುಂದಿನಿಂದ ಹಿಂದಕ್ಕೆ ಅಳತೆ ಮಾಡಿದಾಗ ಇರುತ್ತದೆ. ಕೆಂಪು ಮಿಶ್ರಿತ ಕಂದು ಬಣ್ಣದ ಈ ಅಂಗ ಸುಮಾರು ಮೆತ್ತಗಿರುತ್ತದೆ. ತುಂಬ ಗಡುಸಾಗಿಯೂ ಇರುವುದಿಲ್ಲ, ಬಲಹಾಲೆ ಮತ್ತು ಎಡಹಾಲೆ ಅಥವಾ ಲೋಬ್ ಎಂದು ಪ್ರತ್ಯೇಕಿಸಲ್ಪಟ್ಟದ್ದು, ಇದರ ಸುತ್ತಲೂ ಬಲಯುತವಾದ ನಾರುಯುಕ್ತ ಕವಚ ಇರುತ್ತದೆ. ಯಕೃತ್ತು ತುಂಬಾ ಜಟಿಲವಾದ ಮತ್ತು ಸಂಕೀರ್ಣವಾದ ಅಂಗವಾಗಿದ್ದು ಬಹಳಷ್ಟು ರಕ್ತನಾಳಗಳಿಂದ ಕೂಡಿದೆ. ಯಕೃತ್ತಿನಲ್ಲಿರುವ ರಕ್ತ ಪ್ರಸರಣ ಮತ್ತು ಇತರ ಪ್ರಸರಣ ಪ್ರಕ್ರಿಯೆ ಇತರ ಅಂಗಗಳಿಗಿಂತ ವಿಭಿನ್ನವಾಗಿದೆ. ಯಕೃತ್ತು ಹೆಪಾಟಿಕ್ ರಕ್ತನಾಳಗಳಿಂದ 25 ಶೇಕಡಾ ಮತ್ತು 75 ಶೇಕಡಾ ರಕ್ತವನ್ನು ಮುಖ್ಯ ರಕ್ತನಾಳಗಳಿಂದ ಪಡೆಯುವುದು. ಈ ರಕ್ತವು ಜೀರ್ಣವಾಗಲು ಬೇಕಾದ ಪೋಷಕತ್ವಗಳನ್ನು ಹೊಂದಿರುತ್ತದೆ. ಒಟ್ಟಿನಲ್ಲಿ ಯಕೃತ್ತು ಒಂದು ರಾಸಾಯನಿಕ ಕಾರ್ಖಾನೆಯಾಗಿದ್ದು ದೇಹಕ್ಕೆ ಸೇರಿದ ಆಹಾರವನ್ನು ಪರಿಷ್ಕರಿಸಿ, ಶುದ್ಧೀಕರಿಸಿ ಉಪಯೋಗಿಸಿಕೊಂಡು, ಉಳಿದ ತ್ಯಾಜ್ಯವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಏನಿದು ಸಿರ್ಹೊಸಿಸ್?
ಹಲವಾರು ಕಾರಣಗಳಿಂದ ಯಕೃತ್ತಿಗೆ ಹಾನಿಯಾಗಿ ಅದು ತನ್ನ ಕೆಲಸವನ್ನು ಮಾಡಲು ಸಾಧ್ಯವಾಗದೆ ಇರುವ ಸಂಕೀರ್ಣ ಸ್ಥಿತಿಗೆ ‘ಲಿವರ್ ಸಿರ್ಹೊಸಿಸ್’ ಎನ್ನಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ
1. ಆಲ್ಕೋಹಾಲಿಕ್ ಫ್ಯಾಟೀ ಲಿವರ್ ಡಿಸೀಸ್(AFLD)
ಇದು ಅತಿಯಾದ ಮದ್ಯಪಾನದಿಂದ ಉಂಟಾಗುತ್ತದೆ. ಅತಿಯಾದ ಮದ್ಯಪಾನದಿಂದ ಲಿವರ್ನ ಜೀವಕೋಶಗಳಾದ ಹೆಪಟೋಸೈಟ್ ನಾಶವಾಗಿ, ಅದರ ಬದಲಾಗಿ ಲಿವರ್ನಲ್ಲಿ ಕೊಬ್ಬು ಮತ್ತು ನಾರುಗಳು ತುಂಬಿರುತ್ತದೆ. ಮದ್ಯಪಾನ ಮಾಡುವ ಶೇಕಡಾ 70 ಮಂದಿಗೆ ಈ ರೋಗ ಬರುವ ಸಾಧ್ಯತೆ ಇರುತ್ತದೆ.
2. ಮೆಟಾಬಾಲಿಕ್ ಡಿಸ್ಫಂಕ್ಟನ್ ಪ್ಯಾಟೀ ಲಿವರ್(MAFLD) ಇದನ್ನು ನಾನ್-ಆಲ್ಕೋಹಾಲಿಕ್ ಫ್ಯಾಟೀ ಲಿವರ್ (NAFLD) ಎಂದೂ ಕರೆಯುತ್ತಾರೆ.
ಕಾರಣಗಳು ಏನು?
1. ಅತಿಯಾದ ಮದ್ಯಪಾನ
2. ಅತಿಯಾದ ಧೂಮಪಾನ
3. ಅತಿಯಾದ ದೇಹದ ತೂಕ ಅಥವಾ ಸ್ಥೂಲಕಾಯ
4. ಅನಿಯಂತ್ರಿತ ರಕ್ತದೊತ್ತಡ ಮತ್ತು ಮಧುಮೇಹ
5. ದೈಹಿಕ ಪರಿಶ್ರಮವಿಲ್ಲದ ಆಲಸೀ ಜೀವನ ಶೈಲಿ
6. ಅತಿಯಾದ ಸಕ್ಕರೆ, ಕೊಬ್ಬು ಮತ್ತು ಕ್ಯಾಲರಿ ಇರುವ ಆಹಾರ ಸೇವನೆ
7. ಅನಗತ್ಯವಾಗಿ ಅತಿಯಾಗಿ ನೋವು ನಿವಾರಕ ಔಷಧಿ ಮತ್ತು ಇತರ ಔಷಧಿಗಳ ದುರ್ಬಳಕೆ
ಲಕ್ಷಣಗಳು ಏನು?
1. ವಿಪರೀತ ಸುಸ್ತು, ಬಳಲಿಕೆ ಮತ್ತು ಆಯಾಸ
2. ಹಸಿವಿಲ್ಲದಿರುವುದು, ಆಹಾರದ ಮೇಲೆ ನಿರಾಸಕ್ತಿ
3. ಚರ್ಮದಲ್ಲಿ ತುರಿಕೆ, ಹಳದಿ ಚರ್ಮ ಉಂಟಾಗಬಹುದು
4. ಕಾಲುಗಳು ಊದಿಕೊಳ್ಳುವುದು ಅಥವಾ ನೀರು ತುಂಬಿಕೊಳ್ಳಬಹುದು
5. ಹೊಟ್ಟೆಯ ಸುತ್ತ ನೀರು ತುಂಬಿಕೊಳ್ಳುವುದು 6. ಜೇಡರ ಬಲೆಯ ಆಕಾರದ ರಕ್ತನಾಳಗಳು ಹೊಟ್ಟೆಯ ಸುತ್ತ ಕಂಡುಬರುತ್ತದೆ
7. ಬೇಗನೆ ಗಾಯವಾಗುವುದು, ರಕ್ತ ಹೆಪ್ಪುಗಟ್ಟುವುದು ಮತ್ತು ಗಾಯ ಒಣಗದೇ ಇರುವುದು
8. ಯಕೃತ್ತು ಊದಿಕೊಳ್ಳುವುದು ಮತ್ತು ಹೊಟ್ಟೆಯ ಭಾಗದಲ್ಲಿ ನೋವು ಕಂಡು ಬರಬಹುದು
ತಡೆಗಟ್ಟುವುದು ಹೇಗೆ?
1. ಮದ್ಯಪಾನ ಮತ್ತು ಧೂಮಪಾನ ವರ್ಜಿಸಲೇಬೇಕು. ನಿಯಂತ್ರಣವಿಲ್ಲದ ಮದ್ಯಪಾನಿಗಳಿಗೆ ಲಿವರ್ ಸಿರ್ಹೊಸಿಸ್ ಕಟ್ಟಿಟ್ಟ ಬುತ್ತಿ.
2. ಅನಗತ್ಯವಾಗಿ ಔಷಧಿ ಸೇವಿಸಬಾರದು. ನೋವು ನಿವಾರಕ ಔಷಧಿಯನ್ನು ಚಾಕಲೇಟ್ ರೀತಿಯಲ್ಲಿ ತಿನ್ನುವ ಖಯಾಲಿಗೆ ತಿಲಾಂಜಲಿ ಇಡಬೇಕು. ಅತೀ ಅಗತ್ಯವಿದ್ದಲ್ಲಿ ಮಾತ್ರ ಔಷಧಿಯನ್ನು ಸೇವಿಸತಕ್ಕದ್ದು.
3. ಹೆಪಟೈಟಿಸ್ ಬಿ ಮತ್ತು ಸಿ ರೋಗವನ್ನು ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಸಕಾಲದಲ್ಲಿ ಲಸಿಕೆ ಹಾಕಿಸಿ ರೋಗವನ್ನು ತಡೆಗಟ್ಟಬಹುದು. ಹೆಪಟೈಟಿಸ್ ವೈರಾಣು ಸೋಂಕು ಸಿರ್ಹೋಸಿಸ್ಗೆ ಕಾರಣವಾಗುತ್ತದೆ.
4. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗವನ್ನು ಯಾವತ್ತೂ ಹತೋಟಿಯಲ್ಲಿಡಬೇಕು. ಜೀವನಶೈಲಿ ಮಾರ್ಪಾಡು, ಆಹಾರ ಪದ್ಧತಿಯಲ್ಲಿನ ಸೂಕ್ತ ಮಾರ್ಪಾಡು ಮಾಡಿ, ಔಷಧಿಯ ನೆರವಿಲ್ಲದೆ ರೋಗ ನಿಯಂತ್ರಣದಲ್ಲಿಡಬೇಕು.
5. ದೇಹದಲ್ಲಿ ಅತೀ ಕೊಬ್ಬು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ದೇಹದ ತೂಕದ ಮೇಲೆ ಸೂಕ್ತ ನಿಗಾ ಇಡಬೇಕು. ನಿಯಮಿತವಾದ ದೈಹಿಕ ವ್ಯಾಯಾಮ, ಬಿರುಸು ನಡಿಗೆ, ಈಜುವುದು ಮುಂತಾದ ಹವ್ಯಾಸಗಳು ದೇಹದ ತೂಕವನ್ನು ಹತೋಟಿಯಲ್ಲಿಡುತ್ತದೆ.
6. ಜಂಕ್ ಪುಡ್, ಅತಿಯಾದ ಕೆಫೇನ್ಯುಕ್ತ ಪಾನೀಯ ಮತ್ತು ರಾಸಾಯನಿಕಯುಕ್ತ ಪೇಯಗಳನ್ನು ವರ್ಜಿಸಬೇಕು. ಸಿದ್ಧ ಆಹಾರ ವರ್ಜಿಸಿ, ನೈಸರ್ಗಿಕ ಆಹಾರ ಸೇವಿಸತಕ್ಕದ್ದು. ಇಂಗಾಲಯುಕ್ತ ಪೇಯಗಳನ್ನು ವಿಸರ್ಜಿಸಿ, ಸ್ವಾಭಾವಿಕವಾದ ರಾಸಾಯನಿಕರಹಿತ ನೈಸರ್ಗಿಕ ಪೇಯವನ್ನು ಸೇವಿಸುವುದು ಉತ್ತಮ. 7. ಆಹಾರದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದು. ಕಡಿಮೆ ಕ್ಯಾಲರಿ ಇರುವ ಹೆಚ್ಚು ನಾರುಯುಕ್ತ ಆಹಾರಕ್ಕೆ ಆದ್ಯತೆ ನೀಡುವುದು
ಕೊನೆಮಾತು
ಯಕೃತ್ತು ನಮ್ಮ ದೇಹದ ಅತ್ಯಂತ ಅವಿಭಾಜ್ಯ ಅಂಗ ಮತ್ತು ದೇಹದ ಎಲ್ಲಾ ಕಾರ್ಯ ಚಟುವಟಿಕೆಗಳ ಕೇಂದ್ರಸ್ಥಾನ. ದೇಹದ ರಕ್ಷಣೆ, ಜೀರ್ಣ ಪ್ರಕ್ರಿಯೆ, ದಾಸ್ತಾನು ಕೇಂದ್ರ ಅಥವಾ ತುರ್ತು ಶೇಖರಣಾ ಉಗ್ರಾಣ ಮುಂತಾದ ಕೆಲಸವನ್ನು ಯಶ್ವಸಿಯಾಗಿ ಮಾಡುವ ಏಕೈಕ ಅಂಗ ಯಕೃತ್ತು. ಯಕೃತ್ತಿನ ತಾಕತ್ತನ್ನು ನಾವು ತಪ್ಪಾಗಿ ಅರ್ಥೈಸಿಕೊಂಡು ನಿರ್ಲಕ್ಷ ಮಾಡಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಕೃತಿಗೆ ವಿರುದ್ಧವಾಗಿ ಆಹಾರ ಸೇವನೆ ಮತ್ತು ಜೀವನಶೈಲಿ ಅಳವಡಿಸಿಕೊಂಡಲ್ಲಿ ಯಕೃತ್ತಿಗೆ ಹಾನಿಯಾಗಿ, ಯಕೃತ್ತು ಖಂಡಿತವಾಗಿಯೂ ತನ್ನ ಅಸ್ತಿತ್ವದ ಮಹಿಮೆಯನ್ನು ಹತ್ತು ಹಲವು ರೂಪಗಳಲ್ಲಿ ತೋರಿಸಿಕೊಡುವ ಸಾಧ್ಯತೆಯೂ ಇದೆ. ಒಂದು ಹಂತದವರೆಗೆ ತನ್ನ ಮೇಲಿನ ದೌರ್ಜನ್ಯಗಳನ್ನು ಯಕೃತ್ತು ಮೆಟ್ಟಿ ನಿಂತು, ಹತ್ತು ಹಲವು ಕಾರ್ಯಗಳನ್ನು ಯಶಸ್ವಿಯಾಗಿ ಏಕಕಾಲದಲ್ಲಿ ನಿರ್ವಹಿಸಬಹುದು. ಆದರೆ ದೌರ್ಜನ್ಯ ಮಿತಿ ಮೀರಿದಲ್ಲಿ ಯಕೃತ್ತು ತನ್ನ ಕಾರ್ಯದಕ್ಷತೆಯನ್ನು ಕಳಕೊಂಡಲ್ಲಿ, ಸಾವು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ನಾವೆಲ್ಲಾ ಎಚ್ಚೆತ್ತು ನಮಗಿರುವುದೊಂದೇ ಯಕೃತ್ತು ಎಂಬ ಸತ್ಯದ ಅರಿವಿನಿಂದ, ಸಾತ್ವಿಕ ಜೀವನಶೈಲಿ ಅಳವಡಿಸಿಕೊಂಡಲ್ಲಿ ನೂರುಕಾಲ ಸುಖವಾಗಿ ಬದುಕಬಹುದು.