ಎಸ್‍ಬಿಐ ಶಾಖೆಯಿಂದ ರೂ. 11 ಕೋಟಿ ಮೌಲ್ಯದ ನಾಣ್ಯಗಳು ನಾಪತ್ತೆ; ಸಿಬಿಐ ತನಿಖೆ
ಹೊಸದಿಲ್ಲಿ: ರಾಜಸ್ಥಾನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೆಹಂದಿಪುರ್ ಶಾಖೆಯಲ್ಲಿನ ತಿಜೋರಿಯಿಂದ ರೂ. 11 ಕೋಟಿ ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವ ಕುರಿತ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.
ಈ ಪ್ರಕರಣದಲ್ಲಿ ನಾಪತ್ತೆಯಾಗಿರುವ ಹಣ ರೂ. 3 ಕೋಟಿಗೂ ಅಧಿಕವಾಗಿರುವುದರಿಂದ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ರಾಜಸ್ಥಾನ ಹೈಕೋರ್ಟಿನ ಮೊರೆ ಹೋಗಿತ್ತು.
ರಾಜಸ್ಥಾನ ಪೊಲೀಸರು ಈ ಹಿಂದೆ ಈ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿದ್ದರೆ ಈಗ ಕೋರ್ಟ್ ಸೂಚನೆಯನ್ವಯ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.
ಬ್ಯಾಂಕಿನಲ್ಲಿರುವ ಮೀಸಲು ನಗದಿನಲ್ಲಿ ವ್ಯತ್ಯಾಸವಿದೆಯೆಂದು ತಿಳಿದು ತನಿಖೆ ನಡೆಸಿದಾಗ ರೂ. 11 ಕೋಟಿ ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.
ಜೈಪುರ್ ಮೂಲದ ಖಾಸಗಿ ಸಂಸ್ಥೆಯೊಂದರ ಮೂಲಕ ಶಾಖೆಯಲ್ಲಿದ್ದ ರೂ. 13 ಕೋಟಿಗೂ ಅಧಿಕ ಮೌಲ್ಯದ ನಾಣ್ಯಗಳ ಲೆಕ್ಕ ಮಾಡಲಾಗಿತ್ತು. ಈ ಸಂದರ್ಭ ರೂ. 11 ಕೋಟಿಗೂ ಅಧಿಕ ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವುದು ತಿಳಿದ ಬಂದಿತ್ತು.
ಸುಮಾರು ರೂ. 2 ಕೋಟಿ ಮೌಲ್ಯದ 3000 ನಾಣ್ಯಗಳ ಚೀಲಗಳನ್ನು ಈಗ ಆರ್‍ಬಿಐನ ನಾಣ್ಯ ಸಂಬಂಧಿ ಶಾಖೆಗೆ ವರ್ಗಾಯಿಸಲಾಗಿದೆ.
ನಾಣ್ಯಗಳ ಲೆಕ್ಕ ಮಾಡಿದ ಖಾಸಗಿ ಸಂಸ್ಥೆಯ ಸಿಬ್ಬಂದಿ ಗೆಸ್ಟ್ ಹೌಸ್‍ನಲ್ಲಿದ್ದಾಗ ಅವರಿಗೆ ಆಗಸ್ಟ್ 10, 2021ರ ರಾತ್ರಿ ಬೆದರಿಕೆಯೊಡ್ಡಲಾಗಿತ್ತು ಹಾಗೂ ನಾಣ್ಯಗಳನ್ನು ಲೆಕ್ಕ ಮಾಡದಂತೆ ಎಚ್ಚರಿಸಲಾಗಿತ್ತು ಎಂದು ಎಫ್‍ಐಆರ್ ನಲ್ಲಿ ಹೇಳಲಾಗಿದೆ.