ಅನುಗಾಲ
ದೇಶಕ್ಕೊಂದು ಸಮವಸ್ತ್ರ

ಈಗ ದೇಶದಲ್ಲಿ ಬೆಳೆಯುತ್ತಿರುವ ಅದ್ವೈತವೆಂದರೆ ಒಂದೇ ಭಾಷೆ, ಒಂದೇ ಗುರುತು, ಒಂದೇ ಬಣ್ಣ. ದೇಶದಲ್ಲಿ ಒಂದೇ ಇರುವುದು ಕೆಂಪು ಬಣ್ಣದ ರಕ್ತ ಮಾತ್ರ. ಕೇಸರಿಯೆಂಬುದು ವೈರಾಗ್ಯದ ಸಂಕೇತವಾಗಿ ರಾಷ್ಟ್ರಧ್ವಜವಾಗಿ ಬೆಳಗಿದರೆ ಅದರ ಇತರ ಬಣ್ಣಗಳನ್ನು ತೊಳೆಯುವ ಮತ್ತು ಕೇಸರಿಯನ್ನು ಮಾತ್ರ ಬೆಳೆಸುವ ಹುನ್ನಾರ ನಡೆದಿದೆ. ಅದೀಗ ವಿರಕ್ತಿಯ ಪ್ರತಿನಿಧಿಯಲ್ಲ; ಗಲಭೆಯ, ಹಿಂಸೆಯ, ಕಲುಷಿತ ಸಮಾಜದ ಬಣ್ಣವಾಗುತ್ತಿದೆ. ಯಾರು ಸಂತರಾಗಿ, ಸನ್ಯಾಸಿಗಳಾಗಿ, ಮಠಾಧೀಶರಾಗಿ ಕೇಸರಿಯನ್ನು ಬಳಸುತ್ತಿದ್ದಾರೋ ಅಂಥವರೂ ಈಗ ಈ ಕಲಬೆರಕೆಗೆ ಒಪ್ಪಿದ್ದು ಈ ದೇಶದ ಆರ್ಷೇಯ ಪರಂಪರೆಯ ಅಂತ್ಯವನ್ನು ಹೇಳುತ್ತಿದೆಯೇನೋ?
ಕರ್ನಾಟಕದ ಹಿಜಾಬ್ ವಿವಾದ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಉಳಿದಿದೆ. ಆದರೆ ಇದರ ಫಲಶ್ರುತಿಯು ಬದುಕನ್ನು ಮತ್ತು ಅದರ ಎಲ್ಲ ಕ್ಷೇತ್ರಗಳನ್ನು ಆವರಿಸುವಂತಿದೆ. ಈಗ ಮತ್ತು ಮುಂದೆ ನಡೆಯುವ ಪದವಿ, ಪದವಿಪೂರ್ವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರು ಹಾಗೂ ಪರೀಕ್ಷೆಗೆ ಸಂಬಂಧಿಸಿದ ಎಲ್ಲರೂ ಸಮವಸ್ತ್ರವ(ಗಳ)ನ್ನು ಧರಿಸಬೇಕೆಂಬ ಸರಕಾರದ ಸೂಚನೆ/ಆದೇಶವಿದೆ. ಇದು ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳ ಬದುಕನ್ನು, ಭವಿಷ್ಯವನ್ನು ಬಲಿತೆಗೆದುಕೊಂಡಿದೆ. ಧರ್ಮ ಮತ್ತು ಶಿಕ್ಷಣಗಳ ನಡುವೆ, ಶಿಕ್ಷಣವೇ ಮತ್ತು ಅಲ್ಲಿನ ಶಿಸ್ತೇ ಮುಖ್ಯವೆಂದು ಹೇಳುವ ನೆಪದಲ್ಲಿ ಧರ್ಮವೇ ಹೆಚ್ಚು ಎಂಬಂತೆ ಸರಕಾರವೇ ನಡೆದುಕೊಳ್ಳುತ್ತಿದೆ. ಇದು ಇನ್ನು ಯಾವ್ಯಾವ ಕ್ಷೇತ್ರಗಳನ್ನು ಬಂಧಿಸುತ್ತದೆಯೊ ಗೊತ್ತಿಲ್ಲ. ಉತ್ತರಪ್ರದೇಶದಂತೆ ಗೋಡೆಗೆ ಕೇಸರಿ ಬಣ್ಣ ಹಚ್ಚುವಂತಹ ಹುಚ್ಚು ಇನ್ನೂ ಇಲ್ಲಿ ವ್ಯಾಪಿಸದಿದ್ದರೂ ಕೇಸರಿ ಬಟ್ಟೆ, ಕಾಗದ, ಶಾಲು, ಉಡುಪು ಇತ್ಯಾದಿಗಳು ಸನ್ಯಾಸಿಗಳನ್ನು ಮಾತ್ರವಲ್ಲ ಲೌಕಿಕರಿಗಂತೂ ಅನ್ವಯಿಸುವಂತಿದೆ. ಪ್ರಾಯಃ ಈಶ್ವರಪ್ಪನವರು ಹೇಳಿದರೆನ್ನಲಾದ ಕೇಸರಿಧ್ವಜವು ಕೆಂಪುಕೋಟೆಯ ಮೇಲೆ ರಾರಾಜಿಸಲಿದೆಯೆಂಬ ದಡ್ಡತನದ ಮಾತು ಸಂವಿಧಾನ ವಿರೋಧಿಯಾದರೂ ಸತ್ಯವಾಗುತ್ತದೆಯೇನೋ ಗೊತ್ತಿಲ್ಲ. ಆತಂಕವಂತೂ ಇದೆ.
ಈಗ ನಡೆಯುವ ಎಲ್ಲ ವಿವಾದಗಳು ಭೌಗೊಳಿಕವಾಗಿ ಭಾರತವೆಂದು ಗುರುತಿಸಲ್ಪಟ್ಟ ಅಥವಾ ಅದರ ಯಾವುದಾದರೊಂದು ರಾಜ್ಯದ ಮಿತಿಯಲ್ಲಿ ನಿಯಮಿಸಿದ ವಿನಾಕಾರಣಗಳೇ ಹೊರತು ಪ್ರಾಕೃತಿಕವಲ್ಲ. ಭಾಷೆಯ ಉದಾಹರಣೆಯನ್ನೇ ಪರಿಶೀಲಿಸಿದರೆ, 1956ರಲ್ಲಿ ಭಾಷಾವಾರು ವಿಂಗಡಣೆಯ ಹೆಸರಿನಲ್ಲಿ ಘೋಷಿಸಿದ ರಾಜ್ಯಗಳಲ್ಲಿ ಹಿಂದಿ ಮೂಲದ ರಾಜ್ಯಗಳಲ್ಲಿ ಒಂದು ವಿಧದ ಸಾಮ್ಯತೆಯಿದೆಯೇ ಹೊರತು ಇತರ ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿಲ್ಲ. ಹಿಂದಿ ಮಾತನಾಡುವವರೆಲ್ಲರೂ ಒಂದು ರಾಜ್ಯವಾಗುವುದಾದರೆ ಉತ್ತರದ ಬಹುತೇಕ ರಾಜ್ಯಗಳು ಒಂದೇ ರಾಜ್ಯವಾಗಿ ಘೋಷಿತವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳದಂತಹ ರಾಜ್ಯಗಳು ತಮ್ಮ ತಮ್ಮ ಭಾಷೆಗಳ ಒಂದು ಸಂಸ್ಕೃತಿಯನ್ನು ಹೊಂದಿವೆಯೇ ಹೊರತು ಇತರ ರಾಜ್ಯಗಳು ಹಾಗಿಲ್ಲ. ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಘಡ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಇವುಗಳಿಗೆ ಭಾಷಾ ಭಿನ್ನತೆಯಿಲ್ಲ. ಅವಕ್ಕೆ ಅಂಟಿಕೊಂಡಂತಿರುವ ರಾಜಸ್ಥಾನ, ಬಿಹಾರದಲ್ಲೂ ಹಿಂದಿ ಭಾಷೆಯಾಗಿದೆಯೇ ಹೊರತು ಹಾವಳಿಯಾಗಿಲ್ಲ. ಇವೆಲ್ಲದರ ಸಾರಾಂಶವೆಂದರೆ ಯಾವುದೇ ವಿಂಗಡನೆಗೆ ಒಂದು ಸಿದ್ಧಾಂತವನ್ನು ಆಧರಿಸಿದರೆ ಅದರಲ್ಲಿರುವ ವಿರೋಧಾಭಾಸವು ಮುಂದುವರಿಯುತ್ತಲೇ ಇರುತ್ತದೆ. ಆದ್ದರಿಂಧ ಭಾಷಾವಾರು ವಿಂಗಡಣೆಯೆಂಬ ತತ್ವವೇ ಒಂದರ್ಥದಲ್ಲಿ ತಪ್ಪು. ಈ ಭಾಷಾ ಸೂತ್ರವು ಸಮವಸ್ತ್ರಕ್ಕಿಂತ ಹೆಚ್ಚಿನದ್ದೇನೂ ಸಾಧಿಸಲಿಲ್ಲ.
ಎಲ್ಲರಿಗೂ ಅನ್ವಯಿಸುವ ಒಂದೇ ಸೂತ್ರವನ್ನು ಜಾರಿಗೆ ತಂದು ಅದರಲ್ಲಿ ಎಲ್ಲರನ್ನೂ ಪೋಣಿಸುವ ಆಡಳಿತವು ಕೇಡನ್ನು ತಂದೊಡ್ಡುತ್ತದೆಯೇ ಹೊರತು ಒಳ್ಳೆಯದನ್ನಲ್ಲ. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದರೆ ಉಳಿದ ಬಣ್ಣಗಳನ್ನೆಲ್ಲ ನಿರ್ನಾಮಗೊಳಿಸಿ ಬಿಳಿಯೊಂದನ್ನೇ ಉಳಿಸಿಕೊಳ್ಳಲಾಗಿದೆಯೆಂದರ್ಥವಲ್ಲ. ಅವೆಲ್ಲವೂ ತಮ್ಮ ವೈಯಕ್ತಿಕತೆಯನ್ನು, ವೈಶಿಷ್ಟ್ಯವನ್ನು, ವೈವಿಧ್ಯವನ್ನು, ಅಸ್ಮಿತೆಯನ್ನು ಉಳಿಸಿಕೊಂಡು ಬೆರೆಯಬಲ್ಲವು ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಮನುಷ್ಯರ ಬಣ್ಣ, ಕೂದಲು, ಎತ್ತರ, ದಪ್ಪಎಲ್ಲಿಯವರೆಗೆ ಒಂದೇ ರೀತಿಯಲ್ಲಿರುವುದಿಲ್ಲವೋ ಅಲ್ಲಿಯ ವರೆಗೂ ಈ ವೈವಿಧ್ಯವನ್ನು ಗೌರವಿಸಿಕೊಂಡು ಹೋಗುವುದೇ ಮನುಷ್ಯತ್ವ. ಹೀಗಿರುವವರೇ ಸರಿ ಮತ್ತು ಹೀಗಿರುವುದೇ ಸರಿ ಎಂಬ ಅರ್ಥೈಸುವಿಕೆಯು ನಾಝಿ ಜರ್ಮನಿಯ ಹಿಟ್ಲರನ ಮಹತ್ವಾಕಾಂಕ್ಷೆಯ ಕೂಸು. ಅದು ಪಕ್ವವಾಗಲಿಲ್ಲ. ಈಡೇರಲಿಲ್ಲ. ದುರಂತದಲ್ಲಿ ಪರ್ಯಾವಸಾನವಾಯಿತು. ಆದರೆ ಇತಿಹಾಸದಿಂದ ಪಾಠ ಕಲಿಯದ ಮನುಷ್ಯರು ಅದನ್ನೇ ಅನುಸರಿಸಿಕೊಂಡು ದಿಗ್ವಿಜಯ ಸಾಧಿಸುವತ್ತ ಸಾಗುತ್ತಿದ್ದಾರೆ. ಅದರಲ್ಲೂ ಭಾರತದಂಹ ಸಾವಿರಾರು ಭಿನ್ನ ಭಾಷೆ, ಜಾತಿ, ಜನಾಂಗಗಳನ್ನು ಹೊಂದಿದ ಸಮಾಜವು ಎಲ್ಲವನ್ನೂ ಒಂದುಗೂಡಿಸುವುದರ ಬದಲಾಗಿ ಒಂದೇ ರಾಶಿಯತ್ತ ಗುಡಿಸುವ ಕೆಲಸಕ್ಕೆ ಹೋಗಬಾರದು. ಪರಸ್ಪರ ಸಾಮರಸ್ಯವೇ ಬದುಕಾಗಬೇಕಲ್ಲದೆ ಸ್ಪರ್ಧೆಯಾಗಲೀ ಹೋಲಿಕೆಯಾಗಲೀ ಇಲ್ಲದ ಒಂದೇ ಭಾವನಾತ್ಮಕ, ವೈಚಾರಿಕ ಘಟಕವಾಗಲು ಸಾಧ್ಯವಿಲ್ಲ. ಯಾವುದೇ ಪಂದ್ಯವಾದರೂ ಉಭಯ ತಂಡಗಳ ವೇಷಭೂಷಣಗಳು ಬೇರೆಬೇರೆಯಾಗುವುದು ಮೇಲುಕೀಳಿನ ಪ್ರಶ್ನೆಯನ್ನು ಉತ್ತರಿಸುವುದಕ್ಕಲ್ಲ. ಅವು ಪರಸ್ಪರ ಭಿನ್ನರೆಂಬುದಕ್ಕೆ. ಆದರೆ ಸಮಾನತೆಯನ್ನು ತರುವುದಕ್ಕಾಗಿ ಮೀಸಲಾತಿ ಮುಂತಾದ ಮಾನವೀಯ ಸೂತ್ರಗಳಿವೆಯಲ್ಲದೆ ಮನುಷ್ಯರನ್ನು ಇತರರಿಂದ ದೂರಮಾಡುವುದಕ್ಕಲ್ಲ. ಆದರೆ ಒತ್ತಾಯದ ದಾಂಪತ್ಯದಂತಿರುವ ಪ್ರಸ್ತುತ ಧೋರಣೆಯು ಬಿಕ್ಕಟ್ಟುಗಳನ್ನಷ್ಟೇ ಸೃಷ್ಟಿಸಬಲ್ಲುದು.
ಕೆಲವು ಕ್ಷೇತ್ರಗಳಲ್ಲಿ ಸಮವಸ್ತ್ರಗಳನ್ನು ನಿಯಮಿಸುತ್ತಾರೆ. ಅದು ಗುರುತಿಗೆ. ಸೇನೆ, ಪೊಲೀಸ್ ಮುಂತಾದ ವಿಶೇಷ ಕರ್ತವ್ಯದ ಸ್ಥಾನಗಳಲ್ಲಿ ಅವರು ತಮ್ಮ ಕರ್ತವ್ಯದ ಹೊತ್ತಿನಲ್ಲಿ ದೇಶದ ಮತ್ತು ಸಮಾಜದ ಸಾಮಾನ್ಯ ಕ್ಷೇತ್ರದಿಂದ ಬೇರೆಯಾದವರಲ್ಲ; ಮತ್ತು ತಮ್ಮ ಈ ಪ್ರತ್ಯೇಕತೆಯನ್ನು ಉಳಿಸಿಕೊಂಡು ಅವರು ಸಾಮಾಜಿಕ ಕೇಡಿಗೆ ತಡೆಯೊಡ್ಡುವವರು ಎಂಬುದೇ ವಿನಾ ಅದೇ ಅವರಿಗೆ ಶಾಶ್ವತ ಗುರುತೆಂಬುದಕ್ಕಲ್ಲ. ಅದು ಉದ್ಯೋಗ ಸಂಬಂಧಿಯಾಗಿ ಇತರ ಕ್ಷೇತ್ರಗಳಲ್ಲೂ ಇದೆ. ಎಲ್ಲ ನಾಗರಿಕರಿಗೂ ಒಂದೇ ಸಮವಸ್ತ್ರವನ್ನು ಆದೇಶಿಸಿದರೆ ಹೇಗಾದೀತು? ಈಗ ಸರಕಾರದ ಎಲ್ಲ ಉದ್ಯೋಗಿಗಳಿಗೆ ಅಥವಾ ಶಾಸಕರಿಗೆ ಸಮವಸ್ತ್ರಗಳಿಲ್ಲ. ತಾವೇ ಶಿಸ್ತನ್ನು ಕಲಿಯದೆ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿಧಿಸುವುದು ಸರಕಾರಕ್ಕೆ ಬಿಡಿ, ಆಯಾಯ ಶಾಲೆಗಳಿಗೂ ಸರಿಯಾಗದು. ಬಹುತೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಸಮವಸ್ತ್ರವಿಲ್ಲ. ಹಾಗಾದರೂ ಸಮಾಜವು ಇದನ್ನು ತಡೆದುಕೊಂಡಿದೆಯೆಂದರೆ ಅದು ಒಂದು ಸೀಮಿತ ಚೌಕಟ್ಟಿನಲ್ಲಿ. ಯಾವ ಸಮವಸ್ತ್ರವೂ ಸಮಾನತೆಯನ್ನು ತಂದುಕೊಡದು. ಆದರೂ ಸರಕಾರಗಳು ಇವನ್ನು ಮತ್ತೆ ಮತ್ತೆ ಘೋಷಿಸುತ್ತವೆಯೆಂದರೆ ಇದರಲ್ಲಿ ಘನೋದ್ದೇಶವಿಲ್ಲವೆಂದು ಮತ್ತು ರಾಜಕೀಯದ ಲಾಭವಿದೆಯೆಂದು ಭಾವಿಸಬೇಕು. ಭಾರತದಂತಹ ಹಿಂದೂ ಬಹುಸಂಖ್ಯಾತ ದೇಶದಲ್ಲಿ ಕೋಟಿಕೋಟಿ ದೇವರುಗಳಿದ್ದಾರೆ.
ಒಬ್ಬೊಬ್ಬರಿಗೆ ಒಂದೊಂದು ದೇವರು; ಒಂದೊಂದು ಕ್ಷೇತ್ರ. ‘‘ಅಯೋಧ್ಯಾ ಮಥುರಾಮಾಯಾ ಕಾಶಿ ಕಾಂಚಿ ಅವಂತಿಕಾ ಪುರಿ ದ್ವಾರಾವತೀ ಚೈವ..’’ ಎನ್ನುವಾಗ ಯಾರಿಗೆ ಯಾರು ಪ್ರೀತಿಯೆಂದು ಹೇಳಲಾಗುವುದಿಲ್ಲ. ಹಾಗೆಯೇ ‘‘ಗಂಗೇಚ ಯಮುನೇಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧು ಕಾವೇರಿ..’’ ಎನ್ನುವಾಗಲೂ ಅದು ಒಂದೇ ನದಿಯ ಹಲವು ಹೆಸರುಗಳಲ್ಲವೆಂದು ಎಲ್ಲರಿಗೂ ಗೊತ್ತಿದೆ. ಈ ಬಹುನಾಮಗಳ ಸಂಕೇತವೇ ಭಿನ್ನತೆ. ಇವು ಜೋಡಣೆಗಿರುವುದಲ್ಲ. ಈಗ ಸರಕಾರವು ಜಾರಿ ಮಾಡುತ್ತಿರುವ ಬಹುತೇಕ ಆದೇಶಗಳು, ಕಾನೂನುಗಳು ರಾಜಕೀಯ ಮೂಲವೇ ಹೊರತು ಮೌಲ್ಯ, ತತ್ವ, ಸಿದ್ಧಾಂತ, ತರ್ಕಮೂಲಗಳಲ್ಲ. ಕರ್ನಾಟಕ ಸರಕಾರವು ಹಜ್‌ಯಾತ್ರೆಯಂತೆ ಕಾಶಿಯಾತ್ರೆಯನ್ನು ಆಯೋಜಿಸುವ ಸುದ್ದಿ ಬಂದಿದೆ. ಕಾಶಿಯೇ ಯಾಕೆ, ತಿರುಪತಿ ಯಾಕಾಗದು? ರಾಮೇಶ್ವರ ಅಥವಾ ಈ ದೇಶದ ಸಾವಿರಾರು ಕ್ಷೇತ್ರಗಳು ಯಾಕಿಲ್ಲ? ಸರಕಾರಿ ಕ್ಷೇತ್ರದಂತಿರುವ ಅಯೋಧ್ಯೆ ಯಾಕಿಲ್ಲ? ಇದರ ಹಿಂದೆ ಬಹುಸಂಖ್ಯಾತ ಕೋಮು ಸಂವರ್ಧನೆಯ ದುರುದ್ದೇಶವಿದೆಯೇ ಹೊರತು ಬೇರೆ ಸದುದ್ದೇಶವಿಲ್ಲ. ಒಂದು ವೇಳೆ ಸರಕಾರವು ಇದನ್ನೊಂದು ಸಾಮಾಜಿಕ ಹಿತವೆಂದು ಗಣಿಸಿದರೆ ಅದು ಪ್ರತಿಯೊಬ್ಬ ಪ್ರಜೆಗೂ ತನ್ನಿಷ್ಟದ ಒಂದು ಕ್ಷೇತ್ರಕ್ಕೆ ಅಥವಾ ಇಷ್ಟು ಮೌಲ್ಯದೊಳಗೆ ಹೋಗಿಬರಬಲ್ಲ ಯೋಜನೆಯನ್ನು ಜಾರಿ ಮಾಡಬೇಕು.
ಇದು ಹಿಂದೂಗಳಿಗಷ್ಟೇ ಅಲ್ಲ, ಕ್ರೈಸ್ತರಿಗೂ, ಮುಸ್ಲಿಮರಿಗೂ, ಜೈನ, ಬೌದ್ಧರಿಗೂ, ಪಾರ್ಸಿಗಳಿಗೂ ಮತ್ತಿತರ ಜಾತಿಗೂ ಮತಕ್ಕೂ ಅನ್ವಯಿಸಬೇಕು. ಅದಲ್ಲದೆ ಹೋದರೆ ಸಾರ್ವಜನಿಕ ಹಣವನ್ನು ಸಾರ್ವಜನಿಕ ಯೋಜನೆಗಳಿಗೆ ವಿನಿಯೋಗಿಸುವುದನ್ನು ತಡೆದುಕೊಳ್ಳಬಹುದು; ರಾಜಕೀಯ ದುರುದ್ದೇಶಕ್ಕೆ ಲೂಟಿಮಾಡುವುದನ್ನಲ್ಲ. ಈಗೀಗ ಎಲ್ಲೆಡೆ ಐಕ್ಯತೆಯ ಪ್ರತಿಮೆಗಳು, ಮೂರ್ತಿಗಳು ಸೃಷ್ಟಿಯಾಗುತ್ತಿವೆ. ಅವುಗಳಡಿಯ ಕೊಳಕು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ ಸ್ವಾರ್ಥ ರಾಜಕಾರಣಕ್ಕೆ ಇವು ಬಲಿಯಾಗಿವೆ. ದೇಶಾದ್ಯಂತ ಇಂತಹ ಎಷ್ಟೇ ಪ್ರತಿಮೆಗಳು ಮೂಡಿದರೂ ಅವು ರಾಜಕೀಯದ ಹೊಲಸನ್ನು ನಿವಾರಿಸವು. ಅಲ್ಲಲ್ಲಿಗೆ ಹೊಂದುವಂತಹ ಭಾಷಣಗಳಿಂದ, ಉಪದೇಶಗಳಿಂದ ಸಮಾಜವಾಗಲೀ ದೇಶವಾಗಲೀ ನಿರ್ಮಲವಾಗದು; ಉದ್ಧಾರವಾಗದು. ಇದು ಭರತೇಶನ ದಿಗ್ವಿಜಯ ವೈಭವ- ಅಷ್ಟೇ.
ಇದೀಗಷ್ಟೇ ಕೆಂಪುಕೋಟೆಯ ಮೇಲಿಂದ ಇರುಳಿನ ಹೊತ್ತಿನಲ್ಲಿ ಪ್ರಧಾನಿಯ ಭಾಷಣದ ಸುದ್ದಿಯೂ ಬಂದಿದೆ. ಇದು ಗುರು ತೇಗ್‌ಬಹದ್ದೂರರ ಗೌರವಾರ್ಥವಾಗಿ. 1675ರ ಅದೇ ದಿನ ಮೊಗಲ್ ಸಾಮ್ರಾಟ ಔರಂಗಜೇಬ ಗುರು ತೇಗ್‌ಬಹದ್ದೂರ್ ಅವರಿಗೆ ಮರಣದಂಡನೆ ವಿಧಿಸಿದ್ದ. ಆದರೆ ಈಗ ದೇಶದಲ್ಲಿ ಬೆಳೆಯುತ್ತಿರುವ ಅದ್ವೈತವೆಂದರೆ ಒಂದೇ ಭಾಷೆ, ಒಂದೇ ಗುರುತು, ಒಂದೇ ಬಣ್ಣ. ದೇಶದಲ್ಲಿ ಒಂದೇ ಇರುವುದು ಕೆಂಪು ಬಣ್ಣದ ರಕ್ತ ಮಾತ್ರ. ಕೇಸರಿಯೆಂಬುದು ವೈರಾಗ್ಯದ ಸಂಕೇತವಾಗಿ ರಾಷ್ಟ್ರಧ್ವಜವಾಗಿ ಬೆಳಗಿದರೆ ಅದರ ಇತರ ಬಣ್ಣಗಳನ್ನು ತೊಳೆಯುವ ಮತ್ತು ಕೇಸರಿಯನ್ನು ಮಾತ್ರ ಬೆಳೆಸುವ ಹುನ್ನಾರ ನಡೆದಿದೆ. ಅದೀಗ ವಿರಕ್ತಿಯ ಪ್ರತಿನಿಧಿಯಲ್ಲ; ಗಲಭೆಯ, ಹಿಂಸೆಯ, ಕಲುಷಿತ ಸಮಾಜದ ಬಣ್ಣವಾಗುತ್ತಿದೆ. ಯಾರು ಸಂತರಾಗಿ, ಸನ್ಯಾಸಿಗಳಾಗಿ, ಮಠಾಧೀಶರಾಗಿ ಕೇಸರಿಯನ್ನು ಬಳಸುತ್ತಿದ್ದಾರೋ ಅಂಥವರೂ ಈಗ ಈ ಕಲಬೆರಕೆಗೆ ಒಪ್ಪಿದ್ದು ಈ ದೇಶದ ಆರ್ಷೇಯ ಪರಂಪರೆಯ ಅಂತ್ಯವನ್ನು ಹೇಳುತ್ತಿದೆಯೇನೋ? ಗೊತ್ತಿಲ್ಲ. ಆದರೆ ಕೆಂಪುಕೋಟೆಯ ಮೇಲಿನಿಂದ ಗುರು ತೇಗ್ ಬಹದ್ದೂರರ ನೆನಪಿನಲ್ಲಿ, ನೆಪದಲ್ಲಿ, ಪ್ರಧಾನಿಯ ಮಾತುಗಳು ಈ ದೊಡ್ಡ ದೇಶದ ಸಹಜ ವೈವಿಧ್ಯತೆಗೆ ಮತ್ತು ಆ ಮೂಲಕ ಪ್ರಜಾಮತ/ಯಂತ್ರಕ್ಕೆ ಮರಣದಂಡನೆಯನ್ನು ವಿಧಿಸುವಂತೆಯೇ ಇದೆ.
ದೇಶಕ್ಕೊಂದು ರಾಷ್ಟ್ರಗೀತೆಯಿದೆ. ಅದು ದೇಶದ ಸಾಂಸ್ಕೃತಿಕ ಪ್ರತಿನಿಧಿ. ದೇಶಕ್ಕೊಂದು ಲಾಂಛನ, ಪಕ್ಷಿ, ಇತ್ಯಾದಿ ಸಾಂಕೇತಿಕ ಗುರುತುಗಳಿವೆ. ಇವು ಸಮವಸ್ತ್ರದಂತೆ ವಿಧಿಸಿದವುಗಳಲ್ಲ. ಜನಗಣಮನವನ್ನು ಓದಿದರೂ ಅದು ದೇಶದ ವೈವಿಧ್ಯವನ್ನು ಬಣ್ಣಿಸುತ್ತದೆಯೆಂದನ್ನಿಸುತ್ತದೆಯೇ ಹೊರತು ಮೇಲುಕೀಳುಗಳನ್ನಲ್ಲ; ವಿವಿಧ ಭಾಷೆ, ಜಾತಿ, ಜನಾಂಗಗಳು ಇವನ್ನೆಲ್ಲ ಆಪೋಶನ ತೆಗೆದುಕೊಂಡೂ ಜೀರ್ಣ ಮಾಡಿಕೊಂಡೋ ಒಂದಾಗಿಸುತ್ತಿಲ್ಲ. ವೀಳ್ಯದೆಲೆಯಡಿಕೆ ತಿಂದು ಉಗುಳುವ ಒಂದೇ ಬಣ್ಣದ ರಸವನ್ನು ಈ ಯಾವ ಐಕ್ಯಗಾನಗಳೂ ಪೋಷಿಸುತ್ತಿಲ್ಲ.
ದೇಶಾದ್ಯಂತ ರೈಲ್ವೆ ಸೇವೆಯಿದೆ. ಇದು ಒಕ್ಕೂಟ ಸರಕಾರದ ಆಶ್ರಯದಲ್ಲಿ ನಡೆಯುವುದರಿಂದ ಹಿಂದಿಯೇ ಪ್ರಧಾನವಾಗಿದೆ. ಆದರೆ ಅದು ಸುತ್ತುವಲ್ಲೆಲ್ಲ ಭಿನ್ನ ಧ್ವನಿಯ ಭಿನ್ನ ವೇಷಭೂಷಣದ ಜನರಿರುತ್ತಾರೆ. ಒಂದು ದೇಶದ ವೈವಿಧ್ಯವು ಅನಾವರಣಗೊಳ್ಳುವುದೇ ಈ ದೇಶ ಸುತ್ತುವ ಕಾಯಕದಲ್ಲಿ. ಆದರೆ ಸರಕಾರಗಳು ಎಲ್ಲವನ್ನೂ ಎಲ್ಲರನ್ನೂ ಬಾಗಿಸುವ ಯತ್ನವನ್ನು ಸಮೂಹ ಮಾಧ್ಯಮಗಳ ಮೂಲಕ, ಜಾಹೀರಾತುಗಳ ಮೂಲಕ ಮತ್ತು ತಮ್ಮ ಅಧಿಕಾರ ಶಕ್ತಿಯ ಮೂಲಕ ಮಾಡುತ್ತಿರುವ ಕೆಲಸಗಳು ದೇಶದ ದೌರ್ಬಲ್ಯವನ್ನು, ಕುಸಿಯುತ್ತಿರುವ ಸಾಂಸ್ಕೃತಿಕ, ಸಾಮಾಜಿಕ ಶಿಥಿಲ ಸೇತುವೆಯನ್ನು ಸೂಚಿಸುತ್ತಿದೆ. ಒಂದು ದೇಶವೆಂದರೆ ನಮ್ಮ ರಾಷ್ಟ್ರೀಯತೆಯನ್ನು ಗುರುತುಹಚ್ಚಬಲ್ಲ ಒಂದು ಮೌಲ್ಯವೇ ಹೊರತು ಇನ್ನೇನೂ ಅಲ್ಲ. ಕಾನೂನು ಯಾರನ್ನು ಬೇಕಾದರೂ ಭಾರತೀಯಗೊಳಿಸಬಲ್ಲುದು ಮತ್ತು ಕಳೆದುಕೊಳ್ಳಬಲ್ಲುದು. ಒಂದು ದೇಶದ ಜನರು ಇನ್ನೊಂದು ದೇಶಕ್ಕೆ ಹೋಗಿ ನೆಲೆಸಬಲ್ಲರು. ಅಲ್ಲಿನ ಸರಕಾರ ಈ ಮಂದಿಗೆ ಅವಕಾಶ ಮತ್ತು ಅನುಮತಿ ನೀಡಬೇಕೇ ಹೊರತು ನಮ್ಮ ದೇಶವಲ್ಲ. ಆ ದೇಶವು ನೀಡುವ ಹಸಿರು ಕಾರ್ಡು ಆ ದೇಶದ ನಾಗರಿಕತ್ವದ ಸಂಕೇತವಾಗುತ್ತದೆ. ಹಸಿರು ಕಾರ್ಡನ್ನು ಬೇಡುವವನು ತನ್ನ ದೇಶಕ್ಕೆ ಒಂದರ್ಥದಲ್ಲಿ ದ್ರೋಹವನ್ನು ಬಗೆಯುತ್ತಾನಾದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗೆ ಹೋದವರು ತನ್ನ ದೇಶದ್ರೋಹಿಯಾಗುತ್ತಾರೆಯೇ? ಇಲ್ಲ. ಬದುಕಿಗೊಂದು ನೆಲೆಯೆಂಬ ಉದಾತ್ತ ಮಾತುಗಳನ್ನು ಹೇಳುತ್ತೇವೆಯಾದರೂ ಅದು ಹೊಟ್ಟೆಪಾಡಿನ ನೆಲೆ. ಸುಮ್ಮನೆ ಹೋಗಿ ನೆಲೆಸುವವರಿಲ್ಲ. ಆದ್ದರಿಂದ ಬದುಕು ವಿಶ್ವಾತ್ಮಕವಾಗುವುದು ಈ ಭೌತಿಕ ನೆಲೆಯಲ್ಲೇ ಹೊರತು ಭಾವನಾತ್ಮಕವಾಗಿಯೂ ಅಲ್ಲ, ವೈಚಾರಿಕವಾಗಿಯೂ ಅಲ್ಲ. ರಾಷ್ಟ್ರದ ಬದುಕು ಕೊಳೆಯಬಾರದು; ಏಳು ಬಣ್ಣ ಸೇರಿದ ಬಿಳಿಯ ಬಣ್ಣವಾಗಬೇಕೇ ಹೊರತು ಖಾಲಿ ಬಿಳಿಯ ಹಾಳೆಯಾಗಬಾರದು. ಸಮವಸ್ತ್ರವೆಂಬುದು ಒಂದು ಗುರುತಷ್ಟೇ. ಅದು ಬಲವಂತ ವಸ್ತ್ರಾಪಹಾರವಲ್ಲ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ