ಒಂದು ಪಕ್ಷದ ಪ್ರಾಬಲ್ಯದ ಅಪಾಯಗಳು: ರಾಜಾಜಿಯ ಎಚ್ಚರಿಕೆ
ಕೆಲವು ವಿದ್ವತ್‌ಪೂರ್ಣ ಕೃತಿಗಳು ಯಾವ ಕಾಲಕ್ಕೂ ಸಲ್ಲುತ್ತವೆ. ಪ್ರಕಟಗೊಂಡ ದಶಕಗಳ ಬಳಿಕವೂ ಓದುವುದಕ್ಕೆ ಅವುಗಳ ಅರ್ಹವಾಗಿವೆ. ರಾಜಾಜಿಯ 1957 ಮತ್ತು 1958ರ ಪ್ರಬಂಧಗಳು ಇಂಥ ಕೃತಿಗಳ ಸಾಲಿನಲ್ಲಿ ಬರುತ್ತವೆ. ಅವರು ಆರು ದಶಕಗಳ ಹಿಂದೆ, ಏಕ ಪಕ್ಷದ ಪ್ರಾಬಲ್ಯವು ಭಾರತೀಯ ಪ್ರಜಾಪ್ರಭುತ್ವ ಮತ್ತು ಸ್ವತಃ ಭಾರತಕ್ಕೆ ಒಡ್ಡಿರುವ ಅಪಾಯಗಳ ಬಗ್ಗೆ ಬರೆದಿದ್ದರು. ಆ ಅಪಾಯಗಳು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿವೆ.
ಭಾರತೀಯ ರಾಜಕಾರಣದಲ್ಲಿ ಇಂದು ಭಾರತೀಯ ಜನತಾ ಪಕ್ಷವು ಯಾವ ಮಟ್ಟಿನ ಪ್ರಾಬಲ್ಯವನ್ನು ಹೊಂದಿದೆಯೋ ಅದೇ ಮಟ್ಟದ ಪ್ರಾಬಲ್ಯವನ್ನು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷವು ಹೊಂದಿತ್ತು. ಒಂದು ಪಕ್ಷದ ವಿಪರೀತ ಪ್ರಾಬಲ್ಯವು ಪ್ರಜಾಪ್ರಭುತ್ವಕ್ಕೆ ಒಡ್ಡುವ ಅಪಾಯಗಳ ಬಗ್ಗೆ 1957ರಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ ಪ್ರಬಂಧವೊಂದನ್ನು ಬರೆದಿದ್ದರು. ಸ್ವಾತಂತ್ರ ಹೋರಾಟಗಾರ ‘ರಾಜಾಜಿ’ ಒಂದು ಕಾಲದಲ್ಲಿ ಗಾಂಧಿ ಮತ್ತು ನೆಹರೂರ ನಿಕಟ ಒಡನಾಡಿಯಾಗಿದ್ದರು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರ ಎರಡರಲ್ಲೂ ಉನ್ನತ ರಾಜಕೀಯ ಹುದ್ದೆಯನ್ನು ಹೊಂದಿದ್ದರು. ಆದರೆ, ಬಳಿಕ ತನ್ನ ಹಳೆಯ ಪಕ್ಷ ಮತ್ತು ಹಳೆಯ ಒಡನಾಡಿಗಳ ನಿರ್ದೇಶನದಲ್ಲಿ ದೇಶವು ಸಾಗುತ್ತಿರುವ ದಿಕ್ಕಿನ ಬಗ್ಗೆ ಅವರು ಹೊಂದಿದ್ದ ಅತೃಪ್ತಿ ದಿನೇ ದಿನೇ ಹೆಚ್ಚಿತು. ಅವರು ತನ್ನ ಈ ಅತೃಪ್ತಿಯನ್ನು ಪತ್ರಿಕೆಯೊಂದರಲ್ಲಿ ಲೇಖನ ಬರೆಯುವ ಮೂಲಕ ವ್ಯಕ್ತಪಡಿಸಿದರು. ಆ ಲೇಖನವು 1957 ಆಗಸ್ಟ್‌ನಲ್ಲಿ ಸ್ವಾತಂತ್ರ ದಿನಾಚರಣೆಯಂದು ಪ್ರಕಟಗೊಂಡಿತು.
ರಾಜಾಜಿಯ ಲೇಖನ ಹೀಗೆ ಆರಂಭಗೊಳ್ಳುತ್ತದೆ: ‘‘ಸಂಸದೀಯ ಪ್ರಜಾಪ್ರಭುತ್ವದ ಯಶಸ್ಸು ಎರಡು ಅಂಶಗಳನ್ನು ಅವಲಂಬಿಸಿದೆ. ಮೊದಲನೆಯದು, ಸರಕಾರದ ಉದ್ದೇಶಗಳ ಬಗ್ಗೆ ಎಲ್ಲ ವರ್ಗದ ನಾಗರಿಕರಲ್ಲಿ ವ್ಯಾಪಕ ಸಹಮತ; ಎರಡನೆಯದು, ಎರಡು ಪಕ್ಷಗಳ ವ್ಯವಸ್ಥೆ. ಎರಡು ಪಕ್ಷಗಳ ವ್ಯವಸ್ಥೆಯಲ್ಲಿ ಎರಡು ದೊಡ್ಡ ರಾಜಕೀಯ ಗುಂಪುಗಳು ಪರಿಣಾಮಕಾರಿ ಮತ್ತು ನಿರಂತರ ನಾಯಕತ್ವವನ್ನು ಹೊಂದಿರಬೇಕು ಮತ್ತು ದೇಶದ ಮತದಾರರ ಪೈಕಿ ಹೆಚ್ಚಿನವರು ಬಯಸಿದಾಗ ಸರಕಾರದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಸಾಮರ್ಥ್ಯ ಅವುಗಳಿಗಿರಬೇಕು.’’
‘‘ಯಾಕೆಂದರೆ, ಒಂದು ಪಕ್ಷವು ಯಾವಾಗಲೂ ಅಧಿಕಾರದಲ್ಲಿ ಉಳಿದರೆ ಹಾಗೂ ಅಸಂಘಟಿತ ವ್ಯಕ್ತಿಗಳಲ್ಲಿ ಮತ್ತು ಒಗ್ಗಟ್ಟಾಗದ ಮತ್ತು ಒಗ್ಗಟ್ಟಾಗಲು ಸಾಧ್ಯವೂ ಇಲ್ಲದ ನಗಣ್ಯ ಗುಂಪುಗಳಲ್ಲಿ ಭಿನ್ನಮತ ಕರಗಿದರೆ ಸರಕಾರವು ಅನಿವಾರ್ಯವಾಗಿ ಸರ್ವಾಧಿಕಾರಿಯಾಗುತ್ತದೆ’’ ಎಂಬುದಾಗಿಯೂ ರಾಜಾಜಿ ಬರೆದಿದ್ದಾರೆ.
ರಾಜಾಜಿ ಲೇಖನ ಬರೆಯುವ ಹೊತ್ತಿಗೆ, ಕಾಂಗ್ರೆಸ್ ಒಂದು ದಶಕದವರೆಗೆ ಅಧಿಕಾರದಲ್ಲಿತ್ತು ಹಾಗೂ ಬಹುತೇಕ ಎಲ್ಲ ರಾಜ್ಯಗಳಲ್ಲೂ ನಿರಂತರವಾಗಿ ಅಧಿಕಾರಕ್ಕೆ ಬರುತ್ತಿತ್ತು. ಕಾಂಗ್ರೆಸ್‌ನ ಸಂತೃಪ್ತ ಮನೋಭಾವ ಮತ್ತು ಅಹಂಕಾರದ ಬಗ್ಗೆ ರಾಜಾಜಿ ಹೀಗೆ ಬರೆಯುತ್ತಾರೆ: ‘‘ಏಕ ಪಕ್ಷ ಪ್ರಜಾಪ್ರಭುತ್ವವು ಶೀಘ್ರವೇ ತನ್ನ ಸಂವೇದನೆಗಳನ್ನು ಕಳೆದುಕೊಳ್ಳುತ್ತದೆ. ಏನು ಮಾಡಬೇಕು ಎನ್ನುವುದು ಅದಕ್ಕೆ ಗೊತ್ತಿದ್ದರೂ ಅದನ್ನು ಮಾಡಬೇಕಾದ ರೀತಿಯಲ್ಲಿ ಮಾಡಲು ಅದಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಪ್ರಶ್ನೆಯೊಂದರ ಎಲ್ಲ ಮಗ್ಗಲುಗಳನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇದು ಇಂದಿನ ಭಾರತದ ಪರಿಸ್ಥಿತಿ.’’
‘‘ಒಂದು ಪಕ್ಷವು ಅತ್ಯಂತ ಪ್ರಬಲವಾದಾಗ, ಪಕ್ಷವು ಸಂಸತ್‌ಗಿಂತಲೂ ಹೆಚ್ಚು ಮುಖ್ಯವಾಗುವುದು ಸಹಜ. ಪಕ್ಷದ ಬಹು ಜನರ ಅಭಿಪ್ರಾಯಕ್ಕೆ ಅನುಗುಣವಾಗಿ ನಾಯಕನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಇದು ಸಂಪೂರ್ಣ ಏಕಾಧಿಪತ್ಯವನ್ನು ಆಂಶಿಕವಾಗಿಯಾದರೂ ತಡೆಯುತ್ತದೆ ಎಂದಾದರೂ ಹೇಳಬಹುದು. ಆದರೆ, ಸ್ವತಃ ನಾಯಕನೇ ಅಗಾಧ ಶಕ್ತಿಯಾದರೆ ಇದು ಕೂಡ ನಡೆಯದು. ಇಂಥ ಸಂದರ್ಭದಲ್ಲಿ, ಖಾಸಗಿಯಾಗಿಯಾದರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಅವಕಾಶವೇ ಇರುವುದಿಲ್ಲ. ಬಳಿಕ, ಸಂಪೂರ್ಣ ಸರ್ವಾಧಿಕಾರವು ಯಾವುದೇ ತಡೆಯಿಲ್ಲದೆ ಕೆಲಸ ಮಾಡುತ್ತದೆ.’’
ಅವುಗಳು ಹಿಂದಿನ ಕಾಂಗ್ರೆಸ್ ಆಳ್ವಿಕೆಯ ಭಾರತವನ್ನು ಉದ್ದೇಶಿಸಿ ರಾಜಾಜಿ ವ್ಯಕ್ತಪಡಿಸಿದ್ದ ಅಭಿಪ್ರಾಯಗಳಾಗಿದ್ದವು. ಆದರೆ ಇಂದಿನ ಕಾಲದ ಬಿಜೆಪಿ ಆಳ್ವಿಕೆಯ ಭಾರತಕ್ಕೂ ಅವು ಅತ್ಯಂತ ಪ್ರಸ್ತುತವಾಗಿವೆ. ಬಿಜೆಪಿ ಈಗ ಕೇಂದ್ರದಲ್ಲಿ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ. ಆದರೆ, ಹಲವಾರು ಪ್ರಮುಖ ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿಲ್ಲ. ಇದು ಬಿಜೆಪಿಯ ಸಂಪೂರ್ಣ ಸರ್ವಾಧಿಕಾರಕ್ಕೆ ಕೊಂಚ ತಡೆಯಾಗಿ ಕೆಲಸ ಮಾಡಬಹುದಾಗಿದೆ.
ಆದರೂ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಕ್ಷವು ದುರ್ಬಲವಾಗಿದೆ ಮತ್ತು ಚಿಂದಿಯಾಗಿದೆ. ಅದೂ ಅಲ್ಲದೆ, ಜವಾಹರಲಾಲ್ ನೆಹರೂಗಿಂತಲೂ ಹೆಚ್ಚಾಗಿ ನರೇಂದ್ರ ಮೋದಿ ‘ಏಕೈಕ ಅಗಾಧ ಶಕ್ತಿಯಾಗಲು’ ಬಯಸುತ್ತಿದ್ದಾರೆ. ಅವರು ಎಲ್ಲ ಆಧುನಿಕ ಪ್ರಚಾರ ಮಾಧ್ಯಮಗಳನ್ನು ಬಳಸಿಕೊಂಡು ತನ್ನ ಸುತ್ತ ‘ವ್ಯಕ್ತಿ ಪೂಜೆಯ ಪರಂಪರೆ’ಯೊಂದನ್ನು ನಿರ್ಮಿಸಲು ಬಯಸುತ್ತಿದ್ದಾರೆ. 1950ರ ದಶಕದಲ್ಲಿ ಈ ಮಾದರಿಯ ಪ್ರಚಾರ ಮಾಧ್ಯಮಗಳನ್ನು ಊಹಿಸಲೂ ಸಾಧ್ಯವಿರಲಿಲ್ಲ. ಮೋದಿಯು ತನ್ನ ಗೃಹ ಮಂತ್ರಿಯ ನೆರವಿನೊಂದಿಗೆ, ನೆಹರೂಗಿಂತ ಅತ್ಯಂತ ಹೆಚ್ಚು ವ್ಯವಸ್ಥಿತವಾಗಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದಾರೆ ಮತ್ತು ಬುಡಮೇಲುಗೊಳಿಸಿದ್ದಾರೆ.
ಆರು ತಿಂಗಳ ಬಳಿಕ, ರಾಜಾಜಿ ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಗತಿಯ ಬಗ್ಗೆ ಎರಡನೇ ಲೇಖನ ಬರೆದರು. ಅದಕ್ಕೆ ಅವರು ‘ವಾಂಟೆಡ್: ಇಂಡಿಪೆಂಡೆಂಟ್ ತಿಂಕಿಂಗ್’ (ಬೇಕಾಗಿದೆ: ಸ್ವತಂತ್ರ ಆಲೋಚನೆ) ಎಂಬ ಶೀರ್ಷಿಕೆಯನ್ನು ಕೊಟ್ಟರು. ‘‘ಪ್ರಜಾಪ್ರಭುತ್ವದಲ್ಲಿರುವ ನಾಗರಿಕರು ತಮ್ಮ ಪರವಾಗಿ ಯೋಚಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ವಹಿಸಲು ಮುಂದೆ ಬರದಿದ್ದರೆ, ನಾಗರಿಕ ಜೀವನದ ಯಾವುದೇ ಸಿದ್ಧಾಂತವು ತೃಪ್ತಿಕರವಾಗಿ ಕೆಲಸ ಮಾಡುವುದಿಲ್ಲ’’ ಎಂಬುದಾಗಿ ಈ ಲೇಖನದಲ್ಲಿ ಅವರು ಅಭಿಪ್ರಾಯಪಟ್ಟರು. ಆದರೆ ಈಗಿನ ಮಟ್ಟಿಗೆ ಹೇಳುವುದಾದರೆ, ‘‘ಸ್ವತಂತ್ರ ಯೋಚನೆ ಮತ್ತು ಮುಕ್ತ ನಿರ್ಧಾರಕ್ಕೆ ಬದಲಾಗಿ, ಗಿಳಿಗಳ ಪ್ರವೃತ್ತಿಗಳು ಜನರಲ್ಲಿ ಬೆಳೆಯುತ್ತಿವೆ. ಜನರು ಅಧಿಕಾರಸ್ಥರು ಆಡಿದ ಮಾತುಗಳ ಅರ್ಥ ಮತ್ತು ಪರಿಣಾಮಗಳ ಬಗ್ಗೆ ಯೋಚಿಸದೆ ಆ ಮಾತುಗಳನ್ನು ಪುನರಾವರ್ತಿಸುತ್ತಿದ್ದಾರೆ’’ ಎಂಬುದಾಗಿಯೂ ಅವರು ಬರೆದರು.
ಅವರ ಈ ಮಾತುಗಳು ಇಂದಿನ ಭಾರತಕ್ಕೆ ಅತ್ಯಂತ ಸಮರ್ಪಕವಾಗಿ ಅನ್ವಯಿಸುತ್ತವೆ. ಈ ವಿಷಯದಲ್ಲೂ 1950ರ ದಶಕದ ಕಾಂಗ್ರೆಸ್ ಮತ್ತು ನೆಹರೂಗಿಂತ ಬಿಜೆಪಿ ಭಾರೀ ಮುಂದಿದೆ. ಯಾಕೆಂದರೆ, ಆಗಲೇ ಹೇಳಿದಂತೆ, ಸಂಪರ್ಕ ವ್ಯವಸ್ಥೆಗಳು ಮತ್ತು ಸಿದ್ಧಾಂತಗಳನ್ನು ಜನರ ಮೇಲೆ ಹೇರುವ ವಿಧಾನಗಳು ಆ ಕಾಲದಲ್ಲಿ ಲಭ್ಯವಿರಲಿಲ್ಲ. ದಿಲ್ಲಿಯ ಪತ್ರಿಕೆಗಳ ಸಂಪಾದಕೀಯ ಪುಟಗಳಲ್ಲಿ ಪ್ರತಿ ದಿನ ಮಂತ್ರಿಗಳು ಮತ್ತು ಸಂಸದರು ಭಟ್ಟಂಗಿಗಳ ತರಹ ಮೋದಿಯ ಗುಣಗಾನ ಮಾಡುವುದನ್ನು ಗಮನಿಸಿ. ಈ ಪತ್ರಿಕೆಗಳು ಒಂದು ಕಾಲದಲ್ಲಿ ಪ್ರತಿಷ್ಠಿತ ಪತ್ರಿಕೆಗಳಾಗಿದ್ದವು. ಇಂಗ್ಲಿಷ್ ಮತ್ತು ಮುಖ್ಯವಾಗಿ ಹಿಂದಿ ಟೆಲಿವಿಶನ್ ಚಾನೆಲ್‌ಗಳು, ಸರಕಾರದ ನಿಲುವುಗಳನ್ನು ಗಿಳಿ ಪಾಠದಂತೆ ಒಪ್ಪಿಸುವ ಅವುಗಳ ಗುಲಾಮಗಿರಿ ಮತ್ತು ಮೋದಿಯ ‘ವ್ಯಕ್ತಿ ಪೂಜೆ ಪರಂಪರೆ’ ನಿರ್ಮಾಣದಲ್ಲಿ ಅವುಗಳು ಮನಸಾರೆ ಭಾಗವಹಿಸುತ್ತಿರುವುದನ್ನು ಗಮನಿಸಿ. ಇದು ಭಾರತೀಯ ಪ್ರಜಾಪ್ರಭುತ್ವವನ್ನು ಅಪವೌಲ್ಯಗೊಳಿಸುತ್ತದೆ ಮತ್ತು ಕೆಳ ದರ್ಜೆಗೆ ತಳ್ಳುತ್ತದೆ. ಪ್ರಧಾನಿಯನ್ನು ಅತಿ ಮಾನವನಂತೆ ಮತ್ತು ದೇವಮಾನವನಂತೆ ತೋರಿಸುವ ಹಾಗೂ ಅವರು ಕ್ರೀಡಾಪಟುಗಳನ್ನು ಆಶೀರ್ವದಿಸುವ ಅಥವಾ ಯೋಜನೆಗಳನ್ನು ಉದ್ಘಾಟಿಸುವ ಅಥವಾ ನವಿಲುಗಳೊಂದಿಗೆ ಆಡುವುದನ್ನು ತೋರಿಸುವ ವೀಡಿಯೊಗಳ ಮಹಾಪೂರವೇ ನಿಯಮಿತವಾಗಿ ಬಿಡುಗಡೆಗೊಳ್ಳುತ್ತಿವೆ. ಈ ವೀಡಿಯೊಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ಮಿಸಲಾಗುತ್ತದೆ. ಅದೇ ವೇಳೆ, ನಾಗರಿಕರು ತಮ್ಮ ಪರವಾಗಿ ಯೋಚಿಸುವುದನ್ನು ಮತ್ತು ತೀರ್ಮಾನಿಸುವುದನ್ನು ನಿಲ್ಲಿಸಲು ಮತ್ತು ಈ ವಿಷಯದಲ್ಲಿ ಅವರನ್ನು ನಿರುತ್ತೇ ಜಿಸಲು ಹಾಗೂ ಹೀಗೆ ಮಾಡುವವರ ಚಾರಿತ್ರವಧೆ ಮಾಡಲು ಭಕ್ತಗಡಣ, ಸರಕಾರ ಮತ್ತು ಪಕ್ಷ ಟೊಂಕ ಕಟ್ಟಿ ನಿಂತಿರುವುದನ್ನು ಗಮನಿಸಿ. ಇದಕ್ಕಾಗಿ ಭಕ್ತ ಗಡಣವು ಕಟ್-ಪೇಸ್ಟ್ ಟ್ವೀಟ್‌ಗಳನ್ನು ಬಳಸುತ್ತದೆ.
1958ರ ಮೇ ತಿಂಗಳಲ್ಲಿ ರಾಜಾಜಿ ಎಚ್ಚರಿಸಿದರು: ‘‘ಅಧೀನ ಮನೋಭಾವ ಮತ್ತು ಗುಲಾಮಗಿರಿಯು ಸ್ವತಂತ್ರ ಯೋಚನೆಯ ಸ್ಥಾನವನ್ನು ಪಡೆದರೆ ಮತ್ತು ಭಯ ಮತ್ತು ಹಿಂಜರಿಕೆಯಿಲ್ಲದೆ ಟೀಕೆ ಮಾಡುವ ಪರಿಸ್ಥಿತಿ ಇಲ್ಲದಿದ್ದರೆ, ಅದು ಪ್ರಜಾಪ್ರಭುತ್ವಕ್ಕೆ ವಿಶಿಷ್ಟವಾಗಿರುವ ರಾಜಕೀಯ ಕಾಯಿಲೆಗಳಿಗೆ ಹಾದಿ ಮಾಡಿಕೊಡುತ್ತವೆ.’’
‘‘ಸಮತೋಲಿತ ಪ್ರಜಾಪ್ರಭುತ್ವದ ಮುಕ್ತ ಮತ್ತು ವಿಮರ್ಶಾತ್ಮಕ ವಾತಾವರಣ ಇಲ್ಲದಿದ್ದರೆ, ಭಾರತವು ಷಡ್ಯಂತ್ರ ಮತ್ತು ವಿವಿಧ ರೀತಿಯ ಮತ್ತು ಮಟ್ಟದ ಅಪ್ರಾಮಾಣಿಕತೆಗಳೆಂಬ ಕಳೆಗಳ ಬೆಳವಣಿಗೆಯನ್ನು ಶೀಘ್ರವೇ ನೋಡುತ್ತದೆ’’ ಎಂಬುದಾಗಿಯೂ ಅವರು ಬರೆದರು. ಇಂಥ ವಿಷಕಾರಿ ಕಳೆಗಳಿಗೆ ಪ್ರತಿಪಕ್ಷವು ಸಹಜ ತಡೆಯಾಗಿದೆ ಎಂದು ವಾದಿಸಿದ ರಾಜಾಜಿ, ‘‘ಹಾಗಾಗಿ, ರೋಗದ ಗುಣ ಲಕ್ಷಣಗಳೇ ಸೂಚಿಸುವಂತೆ ಪ್ರತಿಪಕ್ಷವು ತುರ್ತು ಪರಿಹಾರವಾಗಿದೆ’’ ಎಂದರು.
ಭಾರತೀಯ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ನೆರವಾಗಬಲ್ಲ ಪ್ರತಿಪಕ್ಷಗಳು ಯಾವ ಅರ್ಹತೆಗಳನ್ನು ಹೊಂದಿರಬೇಕು ಎನ್ನುವುದನ್ನೂ ತನ್ನ ಎರಡನೇ ಲೇಖನದಲ್ಲಿ ರಾಜಾಜಿ ಸಂಕ್ಷಿಪ್ರವಾಗಿ ವಿವರಿಸಿದ್ದಾರೆ. ಅವರು ಹೀಗೆ ಬರೆದಿದ್ದಾರೆ: ‘‘ನಮಗೆ ವಿಭಿನ್ನವಾಗಿ ಯೋಚಿಸುವ ಪ್ರತಿಪಕ್ಷ ಬೇಕು. ವಿಸ್ತೃತ ಕಲ್ಯಾಣದತ್ತ ಗುರಿಯಿರಿಸಿರುವ ತೀಕ್ಷಣವಾಗಿ ಯೋಚಿಸುವ ನಾಗರಿಕರ ಗುಂಪೊಂದು ನಮಗೆ ವಿರೋಧ ಪಕ್ಷವಾಗಿ ಬೇಕು. ಬಡವರ ಮತಗಳನ್ನು ಪಡೆಯುವ ಉದ್ದೇಶದಿಂದ ಅಧಿಕಾರದಲ್ಲಿರುವ ಪಕ್ಷ ಕೊಟ್ಟಿರುವುದಕ್ಕಿಂತ ಹೆಚ್ಚಿನದನ್ನು ಕೊಡುತ್ತೇವೆ ಎನ್ನುವ ಪಕ್ಷ ಬೇಡ. ತಾರ್ಕಿಕವಾಗಿ ಯೋಚಿಸುವ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಭಾರತವನ್ನು ಉತ್ತಮವಾಗಿ ಮುನ್ನಡೆಸುವ ವಿಶ್ವಾಸವನ್ನು ಹೊಂದಿರುವ ಪಕ್ಷ ಬೇಕು. ಸಕಾರಣದ ರಾಜಕಾರಣವನ್ನು ಬಡವರೂ ತಿರಸ್ಕರಿಸುವುದಿಲ್ಲ ಎನ್ನುವ ತತ್ವದ ಮೇಲೆ ನಂಬಿಕೆ ಹೊಂದಿರುವ ವಿರೋಧ ಪಕ್ಷ ಬೇಕು.’’
ಮುಂದಿನ ವರ್ಷ, ತನ್ನ 80ನೇ ವರ್ಷದ ವಯಸ್ಸಿನಲ್ಲಿ ಹೊಸ ಪಕ್ಷವೊಂದನ್ನು ಸ್ಥಾಪಿಸುವ ಮೂಲಕ ರಾಜಾಜಿ ತನ್ನ ಚಿಂತನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ಪಕ್ಷದ ಹೆಸರು ‘ಸ್ವತಂತ್ರ’. ಲೈಸನ್ಸ್-ಪರ್ಮಿಟ್-ಕೋಟ ವ್ಯವಸ್ಥೆಯಿಂದ ಆರ್ಥಿಕತೆಗೆ ಮುಕ್ತಿ ನೀಡುವುದು, ವ್ಯಕ್ತಿ ಸ್ವಾತಂತ್ರಗಳನ್ನು ರಕ್ಷಿಸುವುದು ಮತ್ತು ಪಾಶ್ಚಿಮಾತ್ಯ ಪ್ರಜಾಸತ್ತಾತ್ಮಕ ದೇಶಗಳೊಂದಿಗೆ ನಿಕಟ ಮೈತ್ರಿ ಬೆಳೆಸುವುದು- ಪಕ್ಷದ ಪ್ರಧಾನ ಉದ್ದೇಶಗಳಾಗಿದ್ದವು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ರಾಜಾಜಿ ಕಾಂಗ್ರೆಸ್ ಸರಕಾರದ ಆರ್ಥಿಕ ಮತ್ತು ವಿದೇಶಿ ನೀತಿಗಳನ್ನು ವಿರೋಧಿಸಿದರಾದರೂ, ಧಾರ್ಮಿಕ ಸಾಮರಸ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ವಿಷಯದಲ್ಲಿ ನೆಹರೂ ಹೊಂದಿದ್ದ ಬದ್ಧತೆಯನ್ನೇ ಪ್ರತಿಪಾದಿಸಿದರು.
ಸ್ವತಂತ್ರ ಪಕ್ಷವು ಕಾಂಗ್ರೆಸ್‌ಗೆ ತೀವ್ರ ವೈಚಾರಿಕ ಮತ್ತು ಸೈದ್ಧಾಂತಿಕ ಸವಾಲುಗಳನ್ನು ಒಡ್ಡಿತು. ಆದರೆ, ಅದಕ್ಕಾಗಲಿ, ಇತರ ಪ್ರತಿಪಕ್ಷಗಳಿಗಾಗಲಿ ಕಾಂಗ್ರೆಸ್ ಹೊಂದಿದ್ದ ರಾಜಕೀಯ ಪ್ರಾಬಲ್ಯಕ್ಕೆ ಸಡ್ಡು ಹೊಡೆಯಲು ಸಾಧ್ಯವಾಗಲಿಲ್ಲ. ‘‘ಚುನಾವಣಾ ಪ್ರಚಾರಗಳ ವಿಪರೀತ ಖರ್ಚು ಮತ್ತು ಹಣದ ಮೇಲೆ ಕಾಂಗ್ರೆಸ್ ಹೊಂದಿರುವ ಏಕಸ್ವಾಮ್ಯವೇ ಆ ಪಕ್ಷದ ಯಶಸ್ಸಿಗೆ ಮುಖ್ಯ ಕಾರಣ’’ ಎಂಬುದಾಗಿ ಬಳಿಕ ರಾಜಾಜಿ ವಿಷಾದಪೂರ್ವಕವಾಗಿ ಬರೆದಿದ್ದಾರೆ. ಈ ಅಂಶವು ಇಂದಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸುತ್ತದೆ. ಆಡಳಿತ ಯಂತ್ರದ ಮೇಲೆ ಬಿಜೆಪಿ ಹೊಂದಿರುವ ನಿಯಂತ್ರಣ ಮತ್ತು ಚುನಾವಣಾ ಬಾಂಡ್‌ಗಳ ಯೋಜನೆಯ ಅಪಾರದರ್ಶಕತೆ (ಇದನ್ನು ಸುಪ್ರೀಂ ಕೋರ್ಟ್ ನಿರಾಕರಿಸಿರುವುದು ಆಶ್ಚರ್ಯದ ಸಂಗತಿ)ಯು ಬಿಜೆಪಿಗೆ ಅದರ ಎದುರಾಳಿಗಳಿಗಿಂತ ಅತಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಿದೆ. ಅದರಲ್ಲೂ ಮುಖ್ಯವಾಗಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಇದು ಹೆಚ್ಚು ಅನ್ವಯಿಸುತ್ತದೆ.
ಕೆಲವು ವಿದ್ವತ್‌ಪೂರ್ಣ ಕೃತಿಗಳು ಯಾವ ಕಾಲಕ್ಕೂ ಸಲ್ಲುತ್ತವೆ. ಪ್ರಕಟಗೊಂಡ ದಶಕಗಳ ಬಳಿಕವೂ ಓದುವುದಕ್ಕೆ ಅವುಗಳ ಅರ್ಹವಾಗಿವೆ. ರಾಜಾಜಿಯ 1957 ಮತ್ತು 1958ರ ಪ್ರಬಂಧಗಳು ಇಂಥ ಕೃತಿಗಳ ಸಾಲಿನಲ್ಲಿ ಬರುತ್ತವೆ. ಅವರು ಆರು ದಶಕಗಳ ಹಿಂದೆ, ಏಕ ಪಕ್ಷದ ಪ್ರಾಬಲ್ಯವು ಭಾರತೀಯ ಪ್ರಜಾಪ್ರಭುತ್ವ ಮತ್ತು ಸ್ವತಃ ಭಾರತಕ್ಕೆ ಒಡ್ಡಿರುವ ಅಪಾಯಗಳ ಬಗ್ಗೆ ಬರೆದಿದ್ದರು. ಆ ಅಪಾಯಗಳು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿವೆ.
ನೆಹರೂ ಮತ್ತು ಅವರ ಸಹೋದ್ಯೋಗಿಗಳಲ್ಲಿ ರಾಜಾಜಿ ದೋಷಗಳು ಮತ್ತು ಅಭದ್ರತೆಗಳನ್ನು ಕಂಡಿದ್ದರೂ, ಅವರು ‘ಒಳ್ಳೆಯ ವ್ಯಕ್ತಿಗಳು’ ಎಂಬುದಾಗಿ ಭಾವಿಸಿರುವ ಸಾಧ್ಯತೆಯೂ ಇತ್ತು. ಆದರೆ, ಇಂದು ಅಧಿಕಾರದಲ್ಲಿರುವ ಜನರನ್ನು ಬಣ್ಣಿಸಲು ಬಳಸಬಹುದಾದ ಬಣ್ಣನೆ ಅದಲ್ಲ. ಮೋದಿ ಮತ್ತು ಶಾ ಅವರ ಬಿಜೆಪಿಯು ನಿರ್ದಯಿ, ನೈತಿಕ ಪ್ರಜ್ಞೆಯೇ ಇಲ್ಲದ್ದು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಬಹುಸಂಖ್ಯತ್ವವಾದಿ. ಅದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನೆಹರೂ ಕಾಲದ ಕಾಂಗ್ರೆಸ್‌ಗಿಂತ ಎಷ್ಟೋ ಪಟ್ಟು ಹೆಚ್ಚು ಹಾನಿಕರ.
ಎರಡು ಬಾರಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೂ ಸರಕಾರವಾಗಿ ಬಿಜೆಪಿ ಮಾಡಿದ ಸಾಧನೆ ಎಲ್ಲ ರಂಗಗಳಲ್ಲಿ ತೀರಾ ಕಳಪೆ. ಅದರ ಆಳ್ವಿಕೆಯಲ್ಲಿ ಆರ್ಥಿಕತೆ ಕುಸಿಯಿತು, ಸಾಮಾಜಿಕ ಹಂದರದಲ್ಲಿ ಬಿರುಕುಗಳು ಕಾಣಿಸಿಕೊಂಡವು. ನಮ್ಮ ನೆರೆದೇಶಗಳು ಮತ್ತು ಜಗತ್ತಿನ ದೃಷ್ಟಿಯಲ್ಲಿ ನಾವು ಅಗಾಧ ಪ್ರಪಾತಕ್ಕೆ ಬಿದ್ದಿದ್ದೇವೆ. ಇದಕ್ಕೆ ಮುಖ್ಯ ಕಾರಣಗಳೆಂದರೆ- ಆಡಳಿತಾರೂಢ ಪಕ್ಷದ ಅಹಂಕಾರ ಮತ್ತು ಪ್ರಧಾನಿ ಸುತ್ತ ವ್ಯಕ್ತಿ ಪೂಜೆಯ ಪರಂಪರೆಯೊಂದನ್ನು ನಿರ್ಮಿಸಿರುವುದು. ಕೇಂದ್ರದಲ್ಲಿ ಎರಡು ಅವಧಿಗಳಲ್ಲಿ ಬಿಜೆಪಿಯ ಆಡಳಿತ (ಅಥವಾ ದುರಾಡಳಿತ)ಕ್ಕೆ ದೇಶ ಮತ್ತು ಅದರ ನಾಗರಿಕರು ಅಪಾರ ಬೆಲೆ ತೆತ್ತಿದ್ದಾರೆ. ಬಿಜೆಪಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವುದು ಭಾರತದ ಪಾಲಿಗೆ ವಿನಾಶಕಾರಿಯಾಗಬಹುದು.
1950ರ ದಶಕದ ಕೊನೆಯಲ್ಲಿ ನಮ್ಮ ದೇಶಕ್ಕೆ ಪ್ರಬಲ ಮತ್ತು ಸಮರ್ಥ ಪ್ರತಿಪಕ್ಷವೊಂದರ ಅಗತ್ಯವಿತ್ತು. 2020ರ ದಶಕದ ಆರಂಭದಲ್ಲಿ ಅಂಥ ಪ್ರತಿಪಕ್ಷವೊಂದರ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಈ ಪ್ರತಿಪಕ್ಷವು, ರಾಜಾಜಿಯ ಮಾತುಗಳನ್ನು ಕೊನೆಯ ಬಾರಿ ಜ್ಞಾಪಿಸಿಕೊಳ್ಳುವುದಾದರೆ, ‘‘ವಿಭಿನ್ನವಾಗಿ ಯೋಚಿಸಬೇಕು. ವಿಸ್ತೃತ ಕಲ್ಯಾಣದತ್ತ ಗುರಿಯಿರಿಸಿರುವ ತೀಕ್ಷಣವಾಗಿ ಯೋಚಿಸುವ ನಾಗರಿಕರ ಗುಂಪೊಂದು ನಮಗೆ ವಿರೋಧ ಪಕ್ಷವಾಗಿ ಬೇಕು. ಬಡವರ ಮತಗಳನ್ನು ಪಡೆಯುವ ಉದ್ದೇಶದಿಂದ ಅಧಿಕಾರದಲ್ಲಿರುವ ಪಕ್ಷ ಕೊಟ್ಟಿರುವುದಕ್ಕಿಂತ ಹೆಚ್ಚಿನದನ್ನು ಕೊಡುತ್ತೇವೆ ಎನ್ನುವ ಪಕ್ಷ ಬೇಡ. ತಾರ್ಕಿಕವಾಗಿ ಯೋಚಿಸುವ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಭಾರತವನ್ನು ಉತ್ತಮವಾಗಿ ಮುನ್ನಡೆಸುವ ವಿಶ್ವಾಸವನ್ನು ಹೊಂದಿರುವ ಪಕ್ಷ ಬೇಕು. ಸಕಾರಣದ ರಾಜಕಾರಣವನ್ನು ಬಡವರೂ ತಿರಸ್ಕರಿಸುವುದಿಲ್ಲ ಎನ್ನುವ ತತ್ವದ ಮೇಲೆ ನಂಬಿಕೆ ಹೊಂದಿರುವ ವಿರೋಧ ಪಕ್ಷ ಬೇಕು.’’