ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಗೆ 1000 ರೂ. ಪಾವತಿಸುವಂತೆ ಆರೆಸ್ಸೆಸ್ ನಾಯಕನಿಗೆ ನ್ಯಾಯಾಲಯ ಆದೇಶ
ರಾಹುಲ್ ಗಾಂಧಿ (PTI)
ಮುಂಬೈ: ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ನಾಯಕ ರಾಜೇಶ್ ಕುಂಟೆರಿಗೆ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯ ಒಂದು ಸಾವಿರ ದಂಡ ವಿಧಿಸಿದೆ. ಆ ಮೊತ್ತವನ್ನು ರಾಹುಲ್ ಗಾಂಧಿಯವರಿಗೆ ಪಾವತಿಸುವಂತೆ ಆದೇಶಿಸಿದೆ. ಈ ಹಿಂದೆ ನ್ಯಾಯಾಲಯ ವಿಧಿಸಿದ್ದ ರುಪಾಯಿ 500 ದಂಡವನ್ನು ಕುಂಟೆ ಇದುವರೆಗೆ ಪಾವತಿಸಲಿಲ್ಲ ಎಂದು indiatoday.in ವರದಿ ಮಾಡಿದೆ.
2014 ರ ಭಾಷಣವೊಂದರಲ್ಲಿ, ಮಹಾತ್ಮಾ ಗಾಂಧಿ ಹತ್ಯೆಗೆ ಆರೆಸ್ಸೆಸ್ ಕಾರಣ ಎಂದು ರಾಹುಲ್ ಗಾಂಧಿ ಭಾಷಣ ಮಾಡಿದ್ದರು. ಇದರ ವಿರುದ್ಧ ಭಿವಂಡಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ತಾನು ತಪ್ಪಿತಸ್ಥರಲ್ಲ ಎಂದು ವಾದಿಸಿದ್ದರು. ಅದಾಗ್ಯೂ, ನ್ಯಾಯಾಲಯವು 2018 ರಲ್ಲಿ ರಾಹುಲ್ ಗಾಂಧಿ ವಿರುದ್ಧ ಆರೋಪಗಳನ್ನು ರೂಪಿಸಿತ್ತು
2014 ರಿಂದ ಭಿವಂಡಿ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಈಗಾಗಲೇ ಬಾಂಬೆ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿರುವುದರಿಂದ ಪ್ರಕರಣ ಮುಂದೂಡುವಂತೆ ಕುಂಟೆ ಕೋರಿದ್ದರು. ನ್ಯಾಯಾಲಯವು 2014 ರಿಂದ ಬಾಕಿ ಉಳಿದಿರುವ ಪ್ರಕರಣವನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂದರ್ಭದಲ್ಲಿ ಕುಂಟೆ ಮುಂದೂಡಲು ಕೋರುತ್ತಿರುವುದರಿಂದ ವೆಚ್ಚವನ್ನು ವಿಧಿಸಲಾಗಿದೆ.
ಪ್ರಸ್ತುತ ವಿಚಾರಣೆಯ ಸಂದರ್ಭದಲ್ಲಿ, ಕುಂಟೆ ಅವರ ಪರ ವಕೀಲರು ಭಿವಂಡಿಯ ನಿಜಾಂಪುರ್ ಪೊಲೀಸ್ ಠಾಣೆಯ ಅಶೋಕ್ ಸಾಯಕರ್ ಎಂಬ ಪೊಲೀಸ್ ಅವರನ್ನು ವಿಚಾರಣೆ ನಡೆಸಲು ಬಯಸುತ್ತಾರೆ ಎಂದು ಹೇಳಿದರು. ಸಿಆರ್ಪಿಸಿ ಸೆಕ್ಷನ್ 202ರ ಅಡಿ ಮಾನಹಾನಿ ದೂರಿನ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗೂ ಸಮನ್ಸ್ ಜಾರಿ ಮಾಡಬೇಕು ಎಂದು ಅವರು ವಾದಿಸಿದ್ದರು. ಆದರೆ, ರಾಹುಲ್ ಗಾಂಧಿ ಪರ ವಕೀಲ ಎನ್ ವಿ ಅಯ್ಯರ್ ಅವರು ಈ ಮನವಿಯನ್ನು ವಿರೋಧಿಸಿದ್ದರು.
ಇನ್ನೊಂದು ಸಾಕ್ಷಿಯನ್ನು ಆಲಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಸಾಬೀತುಪಡಿಸಬೇಕು ಎಂದು ಹೇಳಿರುವ ನ್ಯಾಯಮೂರ್ತಿ ಡಾ. ಜೆ ವಿ ಪಾಲಿವಾಲ್, ಸಮನ್ಸ್ ಜಾರಿ ಮಾಡಲು ಕುಂಟೆ ಕೋರಿರುವ ಎರಡನೇ ಮನವಿಗೆ ನಿರಾಕರಿಸಿದ್ದಾರೆ. ಹಾಗೂ ಮುಂದಿನ ವಿಚಾರಣೆಯಲ್ಲಿ ತಪ್ಪದೇ ಸಾಕ್ಷಿ ನುಡಿಯುವಂತೆ ಕುಂಟೆಗೆ ಆದೇಶಿಸಿದೆ. ಅಲ್ಲದೆ, ರಾಹುಲ್ ಗಾಂಧಿ ಅವರಿಗೆ ಸಾವಿರ ರುಪಾಯಿಯನ್ನು ವೆಚ್ಚವನ್ನು ಪಾವತಿಸುವಂತೆ ಆದೇಶಿಸಿದೆ.