varthabharthi


ತಿಳಿ ವಿಜ್ಞಾನ

ಕೆಪ್ಲರ್‌ನ ಮಫ್ಲರ್‌ನೊಳಗೆ ಅಡಗಿದ್ದ ಅಂತರಿಕ್ಷದ ಸತ್ಯಗಳು

ವಾರ್ತಾ ಭಾರತಿ : 24 Apr, 2022
ಆರ್.ಬಿ.ಗುರುಬಸವರಾಜ

ಜರ್ಮನಿನ ಗಣಿತಜ್ಞ, ಖಗೋಳಶಾಸ್ತ್ರಜ್ಞನಾಗಿದ್ದ ಜೊಹಾನ್ಸ್ ಕೆಪ್ಲರ್ 17ನೇ ಶತಮಾನದ ವೈಜ್ಞಾನಿಕ ಕ್ರಾಂತಿಯ ಪ್ರಮುಖರಲ್ಲಿ ಒಬ್ಬರು. ಅವರು ರಚಿಸಿದ ಗ್ರಹಗಳ ಚಲನೆಯ ನಿಯಮಗಳು ಅವರ ಕೆಲಸಕ್ಕೆ ಸಾಕ್ಷಿಯಾಗಿವೆ. ಕೆಪ್ಲರ್‌ನ ಗ್ರಹಗಳ ಚಲನೆಯ ನಿಯಮಗಳು ಐಸಾಕ್ ನ್ಯೂಟನ್ ಅವರಿಗೆ ಸಾರ್ವತ್ರಿಕ ಗುರುತ್ವಾಕರ್ಷಣೆಯ ಸಿದ್ಧಾಂತಕ್ಕೆ ಅಡಿಪಾಯಗಳನ್ನು ಒದಗಿಸಿಕೊಟ್ಟವು. ಜೋಹಾನ್ಸ್ ಕೆಪ್ಲರ್‌ರ ಪೋಷಕರು ಬಡವರಾದ್ದರಿಂದ ಅವರ ವಿದ್ಯಾಭ್ಯಾಸದಲ್ಲಿ ಹಲವಾರು ಏರಿಳಿತಗಳಿದ್ದವು. ಟ್ಯೂಬಿಂಗನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ವೇತನವನ್ನು ಪಡೆದು ವಿದ್ಯಾಭ್ಯಾಸ ಮುಂದುವರಿಸಿದ್ದರು. ಕೆಲದಿನಗಳ ಕಾಲ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡರು. ಅಲ್ಲಿದ್ದಾಗ ಅವರಿಗೆ ನಿಕೋಲಸ್ ಕೋಪರ್ನಿಕಸ್ ಅವರ 'ಗ್ರಹಗಳು ಭೂಮಿಗಿಂತ ಸೂರ್ಯನನ್ನು ಸುತ್ತುತ್ತವೆ' ಎಂಬ ತತ್ವವನ್ನಾಧರಿಸಿದ ಕೃತಿಯ ಪರಿಚಯವಾಯಿತು. ಮುಂದೆ ಇದು ಅವರಲ್ಲಿ ಗ್ರಹಗಳ ಚಲನೆಯ ಕುರಿತ ಅಧ್ಯಯನಕ್ಕೆ ನಾಂದಿಯಾಯಿತು. ಕೆಪ್ಲರ್ ಅವರು ಆಸ್ಟ್ರಿಯಾದ ಗ್ರಾಜ್‌ನಲ್ಲಿನ ಒಂದು ಸೆಮಿನರಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದರು. ನಂತರ ಖ್ಯಾತ ಖಗೋಳಶಾಸ್ತ್ರಜ್ಞ ಟೈಕೋ ಬ್ರಾಹೆಗೆ ಸಹಾಯಕರಾಗಿ ಕೆಲಸ ಮಾಡಿದರು.

ಕೆಪ್ಲರ್ ದೃಗ್ವಿಜ್ಞಾನ ಕ್ಷೇತ್ರದಲ್ಲಿ ಮೂಲಭೂತ ಕೆಲಸ ಮಾಡಿ, ಪ್ರತಿಫಲಿತ ದೂರದರ್ಶಕದ ಸುಧಾರಿತ ಆವೃತ್ತಿಯನ್ನು ಕಂಡುಹಿಡಿದರು. ಮುಂದೆ ಇದು 'ಕೆಪ್ಲರ್ ದೂರದರ್ಶಕ' ಎಂದೇ ಪ್ರಸಿದ್ಧಿಯಾಯಿತು. ಕೆಪ್ಲರ್ ಖಗೋಳಶಾಸ್ತ್ರದಲ್ಲಿ ಅಪರಿಮಿತವಾದ ಕೆಲಸ ಮಾಡಿದ್ದರು. ಅದಕ್ಕಾಗಿ ಅವರು ತಮ್ಮ ಖಗೋಳಶಾಸ್ತ್ರವನ್ನು 'ಬಾನಿನ ಭೌತಶಾಸ್ತ್ರ' (ಆಸ್ಟ್ರೋ ಫಿಸಿಕ್ಸ್) ಎಂದು ಹೆಸರಿಸಿದರು. ಕೆಪ್ಲರ್ ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆಯನ್ನು ವಿವರಿಸುವ ಗ್ರಹಚಲನೆಯ ಮೂರು ನಿಯಮಗಳನ್ನು ಕಂಡು ರೂಪಿಸಿದರು.

1) ಪ್ರತಿಯೊಂದು ಗ್ರಹವೂ ಸೂರ್ಯನ ಸುತ್ತ ದೀರ್ಘ ವೃತ್ತ ಕಕ್ಷೆಯಲ್ಲಿ ಚಲಿಸುತ್ತದೆ ಮತ್ತು ಸೂರ್ಯ ಇದರ ಒಂದು ನಾಭಿಯಲ್ಲಿದೆ. 2) ಪ್ರತಿಯೊಂದು ಗ್ರಹವೂ ಸೂರ್ಯನನ್ನು ಕುರಿತಂತೆ ಸಮ ಅವಧಿಗಳಲ್ಲಿ ಸಮ ಕ್ಷೇತ್ರಫಲಗಳನ್ನು ರೇಖಿಸುತ್ತದೆ. 3) ಗ್ರಹದ ಪರಿಭ್ರಮಣಾವಧಿಯ ವರ್ಗವು ಸೂರ್ಯ ಮತ್ತು ಗ್ರಹಗಳ ನಡುವಣ ಸರಾಸರಿ ಅಂತರದ ಘನಕ್ಕೆ ಅನುಲೋಮವಾಗಿದೆ. ಇವು ಕೆಪ್ಲರ್ ರೂಪಿಸಿದ ಮೂರು ಗ್ರಹ ನಿಯಮಗಳು. ಗ್ರಹಗಳ ಚಲನೆಯ ವಿವರಣೆಗಳು ಕೆಪ್ಲರ್ ನಿಯಮಗಳು ಎಂದು ಕರೆಯಲ್ಪಟ್ಟವು. ಇಂತಹ ಮಹಾನ್ ಸಂಶೋಧನೆ ಮಾಡಿದ ಕೆಪ್ಲರ್ ಶ್ರೀಮಂತನಾಗಿರಲಿಲ್ಲ. ವೈಯಕ್ತಿಕ ಜೀವನದಲ್ಲಿ ಹೊಟ್ಟೆಪಾಡಿಗಾಗಿ ಇವರು ಫಲಜ್ಯೋತಿಷ್ಯದ ವೃತ್ತಿಯನ್ನು ಹಿಡಿದಿದ್ದರು. ಗ್ರಹಗಳ ಗ್ರಹಚಾರ ಬೆನ್ನುಹತ್ತಿದ್ದ ಕೆಪ್ಲರ್ ಅದಕ್ಕಾಗಿಯೇ ತನ್ನ ಜೀವನವನ್ನು ಮುಡಿಪಾಗಿರಿಸಿದ್ದರು. ಗ್ರಹಗಳ ಮಾರ್ಗಗಳ ಬಗ್ಗೆ ಹೆಚ್ಚು ವಿವರವಾದ ಟಿಪ್ಪಣಿಗಳ ಹುಡುಕಾಟದಲ್ಲಿ, ಕೆಪ್ಲರ್ ಖಗೋಳಶಾಸ್ತ್ರಜ್ಞ ಟೈಕೋ ಬ್ರಾಹೆ ಅವರನ್ನು ಸಂಪರ್ಕಿಸಿದರು. ಶ್ರೀಮಂತ ದ್ಯಾನಿಶ್ ಕುಟುಂಬದ ಬ್ರಾಹೆ ಅವರು ಪ್ರೇಗ್‌ನಲ್ಲಿ ವೀಕ್ಷಣಾಲಯವನ್ನು ನಿರ್ಮಿಸಿದ್ದರು. ಅಲ್ಲಿ ಅವರು ಗ್ರಹಗಳ ಚಲನೆಯನ್ನು ವೀಕ್ಷಿಸುತ್ತಾ ದಾಖಲಿಸುತ್ತಿದ್ದರು. ಆ ಸಮಯದಲ್ಲಿ ಸೌರವ್ಯೆಹದ ಅತ್ಯಂತ ನಿಖರವಾದ ವೀಕ್ಷಣೆಗಳನ್ನು ನಿರ್ವಹಿಸಿದರು. 1600ರಲ್ಲಿ, ಬ್ರಾಹೆ ಕೆಪ್ಲರ್ ಅವರನ್ನು ತನ್ನೊಂದಿಗೆ ಸಹಾಯಕರಾಗಿ ಕೆಲಸ ಮಾಡಲು ಆಹ್ವಾನಿಸಿದ್ದರು.

 ಆದಾಗ್ಯೂ, ಬ್ರಾಹೆ ತಮ್ಮ ಟಿಪ್ಪಣಿಗಳನ್ನು ಅವರ ಸಹಾಯಕರೊಂದಿಗೆ ಹಂಚಿಕೊಳ್ಳಲು ಇಷ್ಟಪಡಲಿಲ್ಲ. ಬದಲಾಗಿ, ಅವರು ಆ ಸಮಯದಲ್ಲಿ ಖಗೋಳಶಾಸ್ತ್ರದಲ್ಲಿನ ಅತ್ಯಂತ ಗೊಂದಲಮಯ ಸಮಸ್ಯೆಗಳಲ್ಲಿ ಒಂದಾದ ಮಂಗಳ ಗ್ರಹದ ಹಿಮ್ಮುಖ ಚಲನೆಯ ರಹಸ್ಯವನ್ನು ಪರಿಹರಿಸಲು ಕೆಪ್ಲರ್ ಅವರನ್ನು ನಿಯೋಜಿಸಿದರು. ವಿಪರ್ಯಾಸವೆಂದರೆ ಈ ಸವಾಲಿನ ಕೆಲಸವು ಕೆಪ್ಲರ್ ಅವರನ್ನು ಜಗತ್ತಿಗೆ ಪರಿಚಯಿಸಿತ್ತು. ಮಂಗಳ ಗ್ರಹ ಹಾಗೂ ಸೌರವ್ಯೆಹವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರವಾದ ದಾಖಲೆಗಳೊಂದಿಗೆ ಕೆಪ್ಲರ್ ಅಧ್ಯಯನ ಮಾಡಿದರು. ಎಂಟು ದಿನಗಳಲ್ಲಿ ತಮಗೆ ವಹಿಸಿದ ಕೆಲಸವನ್ನು ಮುಗಿಸುವುದಾಗಿ ಹೇಳಿದ್ದ ಕೆಪ್ಲರ್‌ಗೆ, ಮಂಗಳನ ಚಲನೆಯ ಸಮಸ್ಯೆಗೆ ಉತ್ತರವು ಸುಮಾರು ಎಂಟು ವರ್ಷಗಳ ಸತತ ಅಧ್ಯಯನ ಮತ್ತು ವೀಕ್ಷಣೆಯಿಂದ ದೊರಕಿತ್ತು. ರಾತ್ರಿಯ ಆಕಾಶದಲ್ಲಿ ಮಂಗಳನ ಚಲನೆಯು ಏಕೆ ನಿಯತಕಾಲಿಕವಾಗಿ ಹಿಮ್ಮುಖವಾಗಿ ಕಾಣಿಸಿಕೊಂಡಿತು ಎಂಬುದನ್ನು ಕಂಡುಹಿಡಿಯಲು ಖಗೋಳಶಾಸ್ತ್ರಜ್ಞರು ದೀರ್ಘಕಾಲ ಹೆಣಗಾಡುತ್ತಿದ್ದರು. ಗ್ರಹಗಳು ದೀರ್ಘವೃತ್ತದ ಹಾದಿಯಲ್ಲಿ ಚಲಿಸುತ್ತವೆ ಎಂಬ ಅಂಶವನ್ನು ಕೆಪ್ಲರ್ ಮೊದಲ ಬಾರಿಗೆ ಕಂಡುಕೊಂಡರು. ಈ ನಿಯಮದ ಅನ್ವಯದಂತೆ ಭೂಮಿಯು ಒಳಗಿನ ಕಕ್ಷೆಯಲ್ಲಿ ಕೆಂಪು ಗ್ರಹದ ಹಿಂದಿನಿಂದ ಬಂದಾಗ ಮಂಗಳವು ಹಿಂದಕ್ಕೆ ಚಲಿಸುವಂತೆ ತೋರಿತು. ನಂತರ ಅದನ್ನು ಚಲಿಸುತ್ತಿರುವ ಭೂಮಿಯಿಂದ ವೀಕ್ಷಿಸಿದಾಗ ಅವಲೋಕನಗಳು ಹಿಮ್ಮುಖ ಚಲನೆಗೆ ಕಾರಣವಾಗಬಹುದು ಎಂದು ಕೋಪರ್ನಿಕಸ್ ಸೂಚಿಸಿದರು. ಎರಡು ಗ್ರಹಗಳು ದೀರ್ಘವೃತ್ತಗಳ ಮೇಲೆ ಪ್ರಯಾಣಿಸುವುದರಿಂದ ರಾತ್ರಿಯ ಆಕಾಶದಲ್ಲಿ ಕೆಂಪು ಗ್ರಹದ ಹಿಮ್ಮುಖ ಚಲನೆಯ ನೋಟವನ್ನು ಸೃಷ್ಟಿಸುತ್ತದೆ ಎಂದು ಕೆಪ್ಲರ್ ಅರಿತುಕೊಂಡರು. ಹೀಗೆ ಗ್ರಹಗಳ ಸತತ ಅಧ್ಯಯನ ಮತ್ತು ಲೆಕ್ಕಾಚಾರಗಳಲ್ಲಿ ಗ್ರಹಗಳ ನಿಯಮಗಳನ್ನು ರೂಪಿಸಿದರು.

ಗ್ರಹಗಳ ಚಲನೆಗೆ ಸಂಬಂಧಿಸಿದ ನಿಯಮಗಳನ್ನು ವ್ಯಾಖ್ಯಾನಿಸಲು ಕೆಪ್ಲರ್ ಹೆಚ್ಚು ಹೆಸರುವಾಸಿಯಾಗಿದ್ದರೂ, ಅವರು ವಿಜ್ಞಾನಕ್ಕೆ ಹಲವಾರು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ವಕ್ರೀಭವನವು ಕಣ್ಣಿನಲ್ಲಿ ದೃಷ್ಟಿಯನ್ನು ಪ್ರೇರೇಪಿಸುತ್ತದೆ ಮತ್ತು ಎರಡು ಕಣ್ಣುಗಳನ್ನು ಬಳಸುವುದರಿಂದ ಆಳ ಗ್ರಹಿಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ನಿರ್ಧರಿಸಿದವರಲ್ಲಿ ಅವರು ಮೊದಲಿಗರು. ಅವರು ಹತ್ತಿರ ಮತ್ತು ದೂರದೃಷ್ಟಿ ಎರಡಕ್ಕೂ ಕನ್ನಡಕಗಳನ್ನು ರಚಿಸಿದರು ಮತ್ತು ದೂರದರ್ಶಕವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದರು. ಗ್ರಹಗಳ ಚಲನೆಯ ಬಗ್ಗೆ ಕೆಪ್ಲರ್ ತಿಳುವಳಿಕೆ ಮತ್ತು ಅವರ ಕೊಡುಗೆಯನ್ನು ಗುರುತಿಸಿದ ಅಮೆರಿಕದ ನಾಸಾ ಸಂಸ್ಥೆಯು ತನ್ನ ಬಾಹ್ಯಾಕಾಶ ವೀಕ್ಷಣಾಲಯಕ್ಕೆ 'ಕೆಪ್ಲರ್ ದೂರದರ್ಶಕ' ಎಂಬ ಹೆಸರನ್ನು ಇಟ್ಟಿರುವುದು ಸಾರ್ಥಕವಾಗಿದೆ. ಕೆಪ್ಲರ್ ಬಾಹ್ಯಾಕಾಶ ನೌಕೆಯನ್ನು ಮಾರ್ಚ್ 7, 2009ರಂದು ಉಡಾವಣೆ ಮಾಡಲಾಗಿತ್ತು. ವಿಸ್ತಾರವಾದ ಕ್ಷೀರಪಥದ ಪ್ರದೇಶದಲ್ಲಿ ವಾಸಯೋಗ್ಯ ಗ್ರಹಗಳನ್ನು ಅನ್ವೇಷಿಸಲು ಮತ್ತು ಕ್ಷೀರಪಥದಲ್ಲಿರುವ ಶತಕೋಟಿ ನಕ್ಷತ್ರಗಳ ಪೈಕಿ ಎಷ್ಟು ನಕ್ಷತ್ರಗಳಿಗೆ ಈ ರೀತಿಯಾದ ಗ್ರಹಗಳು ಇವೆ ಎಂಬುದರ ಅಂದಾಜು ಪಡೆಯಲು ಹಾಗೂ ಸಮೀಕ್ಷೆ ನಡೆಸಲು ಈ ಉಪಗ್ರವನ್ನು ವಿನ್ಯಾಸಗೊಳಿಸಲಾಗಿತ್ತು.

ಕೆಪ್ಲರ್ ದೂರದರ್ಶಕವು ಡಿಸೆಂಬರ್ 2009ರಿಂದ ವೈಜ್ಞಾನಿಕ ಮಾಹಿತಿ ಮತ್ತು ವಿಶ್ಲೇಷಣೆ ನೀಡಲು ಪ್ರಾರಂಭಿಸಿತು. ಪ್ರಾರಂಭದಲ್ಲಿ ಇದರ ಆಯಸ್ಸನ್ನು ಸುಮಾರು 3.5 ವರ್ಷಗಳೆಂದು ನಿಗದಿಪಡಿಸಲಾಗಿತ್ತು. ಆದರೆ, ಉಪಗ್ರಹದಿಂದ ಪಡೆಯಲಾದ ದತ್ತಾಂಶಗಳಲ್ಲಿ ಗೊಂದಲಗಳು ಇದ್ದ ಕಾರಣ ಉಪಗ್ರಹದ ವಯೋಮಿತಿಯನ್ನು 2012ರಿಂದ 2016 ತನಕ ವಿಸ್ತರಿಸುವುದು ಎಂದು ನಿರ್ಧರಿಸಲಾಗಿತ್ತು. ದುರದೃಷ್ಟವಶಾತ್ ಜುಲೈ 14, 2012ರಂದು, ಉಪಗ್ರಹದ ನಾಲ್ಕು ಪ್ರತಿಕ್ರಿಯೆ ಚಕ್ರಗಳ ಪೈಕಿ ಒಂದು ಚಕ್ರ ಕಾರ್ಯ ನಿಲ್ಲಿಸಿತು. ಇಂತಹ ಸಂದರ್ಭದಲ್ಲಿ ಉಳಿದ ಪ್ರತಿಕ್ರಿಯೆ ಚಕ್ರಗಳು ಕಾರ್ಯನಿರ್ವಹಿಸಿದರೆ ಮಾತ್ರ ಸಂಶೋಧನೆ ಕಾರ್ಯಾಚರಣೆ ಸಾಧ್ಯವಾಗಿತ್ತು. ನಂತರ ಮೇ 11, 2013ರಲ್ಲಿ ಎರಡನೇ ಪ್ರತಿಕ್ರಿಯೆ ಚಕ್ರ ನಿಷ್ಕ್ರಿಯಗೊಂಡ ಕಾರಣ ವಿಜ್ಞಾನ ಮಾಹಿತಿ ಸಂಗ್ರಹಣೆ ಸಂಶೋಧನೆ ಪೂರ್ಣಗೊಳಿಸಲು ಅಡಚಣೆಯಾಯಿತು. ಆಗಸ್ಟ್ 15, 2013ರಂದು ನಾಸಾ ಎರಡು ಪ್ರತಿಕ್ರಿಯೆ ಚಕ್ರಗಳನ್ನು ಸರಿಪಡಿಸುವ ಪ್ರಯತ್ನವನ್ನು ಕೈಚೆಲ್ಲಿತು. ಆದರೆ ಅದರಿಂದ ಗ್ರಹದ ವೀಕ್ಷಣೆಗೆ ಯಾವುದೇ ತೊಂದರೆಯಾಗಲಿಲ್ಲ. ನಾಸಾ, ಉಳಿದ ಎರಡು ಪ್ರತಿಕ್ರಿಯೆ ಚಕ್ರಗಳನ್ನು ಬಳಸಿಕೊಂಡು, ಪರ್ಯಾಯ ಯೋಜನೆಗಳನ್ನು ಪ್ರಸ್ತಾಪಿಸಲು ಬಾಹ್ಯಾಕಾಶ ವಿಜ್ಞಾನ ಸಮುದಾಯಕ್ಕೆ ಕೇಳಿತು.

ನವೆಂಬರ್ 18, 2013ರಂದು ಕೆ-2 ಸೆಕೆಂಡ್ ಲೈಟ್ ಪ್ರಸ್ತಾವನೆ ಸಿದ್ಧವಾಯಿತು. ನಿಷ್ಕ್ರಿಯಗೊಂಡ ಕೆಪ್ಲರ್ ಉಪಗ್ರಹವನ್ನು ಬಳಸಿಕೊಂಡು ವಾಸಯೋಗ್ಯ ಗ್ರಹಗಳ ಪತ್ತೆ, ಕೆಂಪು ಕುಬ್ಜಗಳನ್ನು ಪತ್ತೆಮಾಡುವುದು ಇದರ ಧ್ಯೇಯವಾಗಿತ್ತು. ಮೇ 16, 2014ರಂದು ನಾಸಾ ಕೆ-2 ವಿಸ್ತರಣೆಗೆ ಅನುಮೋದನೆ ಘೋಷಿಸಿತು. ಅಕ್ಟೋಬರ್ 30, 2018ರಂದು ಅಂತಿಮವಾಗಿ ಇಂಧನ ಖಾಲಿಯಾಗುವವರೆಗೂ ಕೆಪ್ಲರ್ ಉಪಗ್ರಹವು ನಿರಂತರವಾಗಿ ಕಾರ್ಯಮಗ್ನವಾಗಿತ್ತು. ಕೆಪ್ಲರ್ ಉಪಗ್ರಹವು 2009ರಿಂದ ಅದು ನಿಷ್ಕ್ರಿಯವಾಗುವವರೆಗೆ ತನ್ನ ಜೀವಿತಾವಧಿಯಲ್ಲಿ 1,50,000ಕ್ಕೂ ಹೆಚ್ಚು ನಕ್ಷತ್ರಗಳನ್ನು ನಿರಂತರವಾಗಿ ವೀಕ್ಷಿಸಿ, ಅವುಗಳಲ್ಲಿ ಹಲವು ಸಾವಿರ ಗ್ರಹಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಕೆಪ್ಲರ್ ಉಪಗ್ರಹವು ಒಟ್ಟು 4,696 ಹೊರಗಿನ ಗ್ರಹಗಳನ್ನು ಪತ್ತೆ ಹಚ್ಚಿತ್ತು. ಅದರಲ್ಲಿ 1,031 ಗ್ರಹಗಳನ್ನು ದೃಢಪಡಿಸಲಾಗಿದೆ. ಅದರಲ್ಲಿ ವಾಸಯೋಗ್ಯ ಗ್ರಹಗಳು 12. ಕೆಪ್ಲರ್ ಉಪಗ್ರಹವು ತನ್ನ ಜೀವಿತಾವಧಿಯ ನಂತರವೂ ಅನೇಕ ಗ್ರಹಗಳ ಮಾಹಿತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು ಎಂದರೆ ಅಚ್ಚರಿ ಎನಿಸುತ್ತದೆ. ಕೆ-2 ಮಿಷನ್ 25 ಹೊರಗಿನ ಗ್ರಹಗಳನ್ನು ಪತ್ತೆ ಹಚ್ಚಿತ್ತು. ನಾವು ಇದುವರೆಗೂ ಕಂಡುಹಿಡಿದ ಎಲ್ಲಾ ಬಹಿರ್ ಗ್ರಹಗಳಲ್ಲಿ, ಸರಿಸುಮಾರು ಶೇ. 70 ಗ್ರಹಗಳು ಕೆಪ್ಲರ್ ಉಪಗ್ರಹದಿಂದ ಗುರುತಿಸಲ್ಪಟ್ಟಿವೆ ಎಂಬುದು ಹೆಮ್ಮೆಯ ವಿಷಯ. ಹಾಗಾಗಿ ಕೆಪ್ಲರ್ ಉಪಗ್ರಹವನ್ನು ಅಂತರಿಕ್ಷದ ಸಾರಿಗೆ ಎಂದು ಕರೆಯಲಾಗುತ್ತದೆ.

ನಾಸಾದ ಖಗೋಳ ಭೌತಶಾಸ್ತ್ರದ ನಿರ್ದೇಶಕ ಪಾಲ್ ಹರ್ಟ್ಜ್ ಅವರು ಕೆಪ್ಲರ್ ಉಪಗ್ರಹ ಕಂಡುಹಿಡಿದ ಗ್ರಹಗಳಲ್ಲಿ ಎರಡರಿಂದ ಹನ್ನೆರಡು ಗ್ರಹಗಳಲ್ಲಿ 'ಗೋಲ್ಡಿಲಾಕ್ಸ್ ವಲಯ' ಎಂದು ಕರೆಯಲ್ಪಡುವಲ್ಲಿ ಕಲ್ಲಿನ ಮತ್ತು ಭೂಮಿಯ ಗಾತ್ರವನ್ನು ಹೊಂದಿವೆ ಎಂದು ಅಂದಾಜಿಸಿದ್ದಾರೆ. ಒಟ್ಟಾರೆ ಗ್ರಹಗಳ ಗಣತಿಯು ರಾತ್ರಿಯ ಆಕಾಶದಲ್ಲಿ ಗೋಚರಿಸುವ 20 ರಿಂದ 50 ಪ್ರತಿಶತದಷ್ಟು ನಕ್ಷತ್ರಗಳು ನಮ್ಮಂತಹ ಗ್ರಹಗಳನ್ನು ಜೀವನಕ್ಕೆ ವಾಸಯೋಗ್ಯ ವಲಯದಲ್ಲಿ ಹೊಂದಬಹುದು ಎಂದು ಕೆಪ್ಲರ್ ಉಪಗ್ರಹವು ತೋರಿಸಿದೆ ಎಂದು ಪಾಲ್ ಹರ್ಟ್ಜ್ ಹೇಳಿದರು.

''ಇದು ಬ್ರಹ್ಮಾಂಡದಲ್ಲಿ ನಮ್ಮ ಸ್ಥಾನದ ಬಗ್ಗೆ ನಮ್ಮ ತಿಳುವಳಿಕೆಯನ್ನು ಕ್ರಾಂತಿಗೊಳಿಸಿದೆ'' ಎಂದು ಹರ್ಟ್ಜ್ ಹೇಳಿರುವುದು ಸೂಕ್ತವಾಗಿದೆ. ನಮ್ಮ ನಕ್ಷತ್ರಪುಂಜದಲ್ಲಿ ನಕ್ಷತ್ರಗಳಿಗಿಂತ ಗ್ರಹಗಳು ಹೆಚ್ಚು ಸಾಮಾನ್ಯವೆಂದು ಕೆಪ್ಲರ್ ಬಾಹ್ಯಾಕಾಶ ಟೆಲಿಸ್ಕೋಪ್ ಮತ್ತು ಅದರ ವಿಜ್ಞಾನದ ಕಾರ್ಯಾಚರಣೆಯ ಕಾರಣದಿಂದಾಗಿ ಈಗ ನಮಗೆ ತಿಳಿದಿದೆ. ನಾವು ಗ್ರಹಗಳಿಂದ ತುಂಬಿರುವ ನಕ್ಷತ್ರಪುಂಜದಲ್ಲಿ ವಾಸಿಸುತ್ತಿದ್ದೇವೆ ಮತ್ತು ಆ ಗ್ರಹಗಳನ್ನು ಅನ್ವೇಷಿಸಲು ನಾವು ಮುಂದಿನ ಹಂತವನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದು ಕೆಪ್ಲರ್ ನಮಗೆ ತೋರಿಸಿದೆ. ಮುಂದಿನ ಹಂತದ ಸಂಶೋಧನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುತ್ತಾ ಕೆಪ್ಲರ್‌ನ ಮಫ್ಲರ್‌ನಲ್ಲಿದ್ದ ಸತ್ಯವನ್ನು ಮೆಲುಕು ಹಾಕುತ್ತಲೇ ಇರೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)