ಅತಿ ಕೇಂದ್ರೀಕೃತ, ಪರೀಕ್ಷೆ ಕೇಂದ್ರಿತ ‘ಶಿಕ್ಷಣ’ಕ್ಕೆ ಇನ್ನೊಂದು ಸೇರ್ಪಡೆ- ಸಿಯುಇಟಿ
ನಮ್ಮ ಕ್ಷೋಭೆಗೊಳಗಾಗಿರುವ ಜಗತ್ತಿನ ತುರ್ತು ಅಗತ್ಯಗಳ ಪೈಕಿ ಅರ್ಥಪೂರ್ಣ ಶಿಕ್ಷಣ ವ್ಯವಸ್ಥೆಯೂ ಒಂದು. ನ್ಯಾಯ, ಸಮಾನತೆ, ಪ್ರಾಮಾಣಿಕತೆ, ಸತ್ಯ, ದಯೆ, ಅಹಿಂಸೆ, ಎಲ್ಲ ಜೀವಿಗಳ ಬಗ್ಗೆ ಕಾಳಜಿ, ಪ್ರಕೃತಿ ರಕ್ಷಣೆ ಮತ್ತು ಧೈರ್ಯ ಮುಂತಾದ ಬಲವಾದ ನೈತಿಕ ವೌಲ್ಯಗಳು ಅಡಕವಾಗಿರುವ ಆಹ್ಲಾದಕರ ಮತ್ತು ಆಸಕ್ತಿದಾಯಕ ಕಲಿಕೆಯನ್ನು ಸೃಷ್ಟಿಸಬಲ್ಲ ಶಿಕ್ಷಣ ವ್ಯವಸ್ಥೆ. ಹೆಚ್ಚು ನ್ಯಾಯಯುತ ಮತ್ತು ಸುರಕ್ಷಿತ ಜಗತ್ತಿಗಾಗಿ ನಾನು ಯಾವ ದೇಣಿಗೆ ನೀಡಬಹುದು ಮತ್ತು ಇದಕ್ಕಾಗಿ ನಾನು ನನ್ನ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು?- ಇದು ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ತಾನು ಕೇಳಿಕೊಳ್ಳಬೇಕಾದ ಅತ್ಯಂತ ಮಹತ್ವದ ಪ್ರಶ್ನೆಯಾಗಿರಬೇಕು. ವಿದ್ಯಾರ್ಥಿಗಳ ಈ ಶೋಧಕ್ಕೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಈ ಶೋಧವು ವಿಶಾಲ ವ್ಯಾಪ್ತಿಯ, ಓಡಾಟವನ್ನು ಒಳಗೊಂಡ ಅದ್ಭುತ ಪ್ರಯತ್ನ ವಾಗಿರುವಂತೆ ಹಾಗೂ ಅತ್ಯಂತ ಸೃಜನಾತ್ಮಕ ಮತ್ತು ತೃಪ್ತಿದಾಯಕವಾಗಿರುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ಹಾಗೂ ಈ ಪ್ರಕ್ರಿಯೆಯಲ್ಲಿ, ತಮ್ಮ ಸಂಶಯಗಳು, ಕುತೂಹಲಗಳು ಮತ್ತು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಅಗತ್ಯವಾದ ಸಮಯ ಮತ್ತು ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಬೇಕು.
ಆದರೆ, ದುರದೃಷ್ಟವಶಾತ್ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯು ಈ ಆದರ್ಶ ವ್ಯವಸ್ಥೆಯಿಂದ ತುಂಬಾ ದೂರವಿದೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆಯು ಅತ್ಯಂತ ಸಂಕುಚಿತ ಮನೋಭಾವ ಆಧಾರಿತವಾಗಿದೆ ಹಾಗೂ ಇದರಲ್ಲಿ ಪೀಡಕ ಪರೀಕ್ಷಾ ವ್ಯವಸ್ಥೆಯೇ ಪ್ರಧಾನವಾಗಿದೆ. ಪರೀಕ್ಷೆಯ ಒತ್ತಡಗಳು ಅಧ್ಯಯನ ಮಾಡುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಪಡುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ ಎನ್ನುವುದು ಇಲ್ಲಿನ ಕಲ್ಪನೆಯಾಗಿದೆ. ಆದರೆ, ಉಲ್ಲಸಿತ ಸೃಜನಶೀಲತೆ ಮತ್ತು ಕುತೂಹಲ ಆಧಾರಿತ ಶಿಕ್ಷಣ ವ್ಯವಸ್ಥೆಗೆ ವಿವಿಧ ಮಾದರಿಯ ಒತ್ತಡಗಳನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆಯು ಯಾವತ್ತೂ ಸಾಟಿಯಾಗಲಾರದು ಎಂಬ ಸತ್ಯವನ್ನು ಸಂಪೂರ್ಣವಾಗಿ ಮರೆತುಬಿಡಲಾಗಿದೆ. ಅದೂ ಅಲ್ಲದೆ, ಮಕ್ಕಳ ಮೇಲೆ ಹೆಚ್ಚಿನ ಹೊರೆಯನ್ನು ಹೇರಬಾರದು ಹಾಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂದರ್ಭಗಳಲ್ಲಿ ಪೀಡಕವಾಗುವ ವ್ಯವಸ್ಥೆಯೊಂದನ್ನು ಕಲಿಯಲು ಬಲವಂತಪಡಿಸಬಾರದು ಎಂಬ ಅತ್ಯಂತ ಸಹಜ ಸತ್ಯವನ್ನೂ ನಿರ್ಲಕ್ಷಿಸಲಾಗುತ್ತಿದೆ.
ವಿವಿಧ ವಿಷಯಗಳ ಕಲಿಕೆಯನ್ನು ನೈತಿಕ ವೌಲ್ಯಗಳೊಂದಿಗೆ ಸಮೀಕರಿಸುವುದು ಹಾಗೂ ತರ್ಕ ಮತ್ತು ವಾಸ್ತವಾಂಶಗಳ ಆಧಾರದಲ್ಲಿ ಈ ವಿಷಯಗಳ ಬಗ್ಗೆ ಸ್ವತಂತ್ರವಾಗಿ ಚಿಂತಿಸುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು ಮತ್ತು ಪ್ರೇರೇಪಿಸುವುದು ಇಂದಿನ ಸಂಕುಚಿತ ಪರೀಕ್ಷಾ ಕೇಂದ್ರಿತ ವ್ಯವಸ್ಥೆಯಲ್ಲಿ ಬಹುತೇಕ ಮರೆತೇ ಹೋಗಿದೆ.
ನನ್ನ ಮಗಳು ಪ್ರೌಢಶಾಲೆಗೆ ಹೋದಾಗ ಶಾಲಾ ಚೀಲಗಳ ಹೊರೆಯನ್ನು ತಗ್ಗಿಸುವುದು ಹೇಗೆ ಎಂಬ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿತ್ತು. ಈಗ ನನ್ನ ಮೊಮ್ಮಗಳು ಪ್ರೌಢಶಾಲೆಗೆ ಹೋಗುತ್ತಿದ್ದಾಳೆ. ಈ ಎರಡು ಚೀಲಗಳನ್ನು (ಒಂದು ನನ್ನ ಮಗಳದ್ದು ಮತ್ತು ಇನ್ನೊಂದು ಮೊಮ್ಮಗಳದ್ದು) ತುಲನೆ ಮಾಡುವಾಗ, ಚೀಲದ ಭಾರವು ಅಂದಿನಿಂದ ಇಂದಿಗೆ ಹೆಚ್ಚಿದೆ ಎಂದು ನನಗೆ ಅನಿಸುತ್ತದೆ. ಆ ಎಲ್ಲ ಚರ್ಚೆಗಳು ನಮ್ಮನ್ನು ಎಲ್ಲಿಗೆ ಒಯ್ದವು? ನಾವು ಮೂಲ ಸಮಸ್ಯೆಗಳಿಗೆ ಜೋತು ಬೀಳುತ್ತಲೇ, ನಿರಂತರವಾಗಿ ಶೈಕ್ಷಣಿಕ ಸುಧಾರಣೆಯ ಬಗ್ಗೆ ಮಾತನಾಡುತ್ತೇವೆ. ಬಹುಷಃ ಅಲ್ಲೊಂದು ಇಲ್ಲೊಂದು ಸುಧಾರಣೆಗಳು ಆಗಿರಬಹುದು. ಆದರೆ, ಈ ಪ್ರಕ್ರಿಯೆಯಲ್ಲಿ ಇತರೆಡೆಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ.
ಶಿಕ್ಷಣದ ವ್ಯಾಪಾರೀಕರಣ ಖಂಡಿತವಾಗಿಯೂ ಹೆಚ್ಚಿದೆ. ಅದರಂತೆಯೇ, ಇತರರಿಗಿಂತ ಮುಂದೆ ಹೋಗಬೇಕು ಎನ್ನುವುದಕ್ಕೆ ನೀಡುವ ಆದ್ಯತೆಯೂ ಹೆಚ್ಚಿದೆ. ಇದರ ಪರಿಣಾವೇನು? ಪರಸ್ಪರ ಸಹಕಾರ ಮತ್ತು ನೆರವಿನ ಮನೋಭಾವದೊಂದಿಗೆ ಜೊತೆಯಾಗಿ ಕೆಲಸ ಮಾಡುವುದನ್ನು ಕಲಿಯುವ ಬದಲು ಮಕ್ಕಳು ಪರಸ್ಪರರನ್ನು ನೋಡಿ ಅಸೂಯೆಪಡುವುದನ್ನು ಮತ್ತು ಪರಸ್ಪರರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಕಲಿಯುತ್ತಾರೆ. ಕಲಿಕೆಯಲ್ಲಿ ಮುಂದಿರುವವರೂ ಸೇರಿದಂತೆ ಹೆಚ್ಚಿನ ಸಂಖ್ಯೆಯ ಮಕ್ಕಳು ಹೆಚ್ಚಿನ ಸಂದರ್ಭಗಳಲ್ಲಿ ಅತಿ ಒತ್ತಡದಿಂದ ಬಳಲುತ್ತಾರೆ ಹಾಗೂ ಗಣನೀಯ ಸಂಖ್ಯೆಯ ಮಕ್ಕಳು ಸೋತ ಭಾವನೆಯನ್ನು ಹೊಂದುತ್ತಾರೆ.
ನಮ್ಮ ಸೃಜನಶೀಲತೆಯಲ್ಲೇ ಹೊಸತನವನ್ನು ಕಂಡುಕೊಳ್ಳುವ ಬದಲು, ನಾವು ನಿರಂತರವಾಗಿ ಅಮೆರಿಕ ಮುಂತಾದ ಶ್ರೀಮಂತ ದೇಶಗಳನ್ನು ನಮ್ಮ ಮಾದರಿಗಳನ್ನಾಗಿ ಮಾಡಿಕೊಂಡಿದ್ದೇವೆ. ಆದರೆ, ನಾವು ಇಲ್ಲಿ ಒಂದು ವಿಷಯವನ್ನು ಮರೆತೇ ಬಿಟ್ಟಿದ್ದೇವೆ. ಅಂದರೆ, ಅಮೆರಿಕವು ಮಕ್ಕಳ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂಬುದಾಗಿ ಆ ದೇಶದ ಮಕ್ಕಳ ಆರೋಗ್ಯ ಕುರಿತ ಮೂರು ಅತ್ಯಂತ ವಿಶ್ವಾಸಾರ್ಹ ಸಂಘಟನೆಗಳು ತೀರಾ ಇತ್ತೀಚೆಗೆ ಎಚ್ಚರಿಕೆಯನ್ನು ನೀಡಿವೆ. ಇದಕ್ಕಿಂತಲೂ ಮೊದಲು, ಎಂಟು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಅವರು ಆತಂಕದಿಂದ ಬಳಲುತ್ತಿದ್ದಾರೆಯೇ ಎನ್ನುವುದನ್ನು ಪತ್ತೆಹಚ್ಚಬೇಕು ಎಂಬುದಾಗಿ ಇನ್ನೊಂದು ವಿಶ್ವಾಸಾರ್ಹ ಸಂಘಟನೆ ಕರೆ ನೀಡಿತ್ತು.
ಪಾಶ್ಚಿಮಾತ್ಯ ಮಾದರಿಗಳ ಅನುಕರಣೆಯ ಅತ್ಯಂತ ಈಚಿನ ಉದಾಹರಣೆಯೆಂದರೆ ಸಿಯುಇಟಿ (ಕಾಮನ್ ಯುನಿವರ್ಸಿಟಿ ಎಂಟ್ರಾನ್ಸ್ ಟೆಸ್ಟ್)ಗೆ ಚಾಲನೆ. ಆದರೆ, ಇದು ನಿಜವಾಗಿ ಅಷ್ಟೇನೂ ಉತ್ತಮ ಕಲ್ಪನೆಯೇನಲ್ಲ. ಸಿಯುಇಟಿಯು ನೀಟ್ ಮತ್ತು ಜೆಇಇ ಹಾದಿಯನ್ನು ಅನುಸರಿಸಿಕೊಂಡು ಬಂದಿದೆ. ಇದು ಪರೀಕ್ಷೆ ಕೇಂದ್ರಿತ ಶಾಲಾ ವ್ಯವಸ್ಥೆಯಲ್ಲಿ ಮುಗಿಯದ ಪರೀಕ್ಷೆಗಳ ಸಾಲಿಗೆ ಇನ್ನೊಂದು ಸೇರ್ಪಡೆಯಾಗಿದೆ. ಅದೇ ವೇಳೆ, ಇದು ಶಾಲೆ ಮತ್ತು ಮಂಡಳಿ ಪರೀಕ್ಷೆಗಳ ವೌಲ್ಯವನ್ನು ತಗ್ಗಿಸುತ್ತದೆ.
ಎಲ್ಲ ದೋಷಗಳ ಹೊರತಾಗಿಯೂ ಈಗಿನ ಶೈಕ್ಷಣಿಕ ವ್ಯವಸ್ಥೆಯ ವ್ಯಾಪ್ತಿಯಲ್ಲಿ, ಶಾಲಾ ಮತ್ತು ಮಂಡಳಿ ಪರೀಕ್ಷೆಗಳನ್ನು ಬರೆಯಲು ಕಠಿಣ ಪರಿಶ್ರಮಪಟ್ಟ ವಿದ್ಯಾರ್ಥಿಗಳಲ್ಲಿ, ಇದು ತಮ್ಮ ಭವಿಷ್ಯದ ಯಶಸ್ಸಿಗೆ ಒಳ್ಳೆಯದು ಎಂಬ ಸಮಾಧಾನವಾದರೂ ಇತ್ತು. ಈಗ ಈ ಸಮಾಧಾನವನ್ನೂ ತಗ್ಗಿಸಲಾಗಿದೆ ಹಾಗೂ ಉನ್ನತ ಶಿಕ್ಷಣಕ್ಕೆ ಹೋಗುವ ಮಕ್ಕಳ ಹೆಚ್ಚುವರಿ ವೌಲ್ಯಮಾಪನ, ಪರಿಶೀಲನೆ ಮತ್ತು ಆಯ್ಕೆಗಾಗಿ ನೂತನ ಸಂಕುಚಿತ ವ್ಯವಸ್ಥೆಗೆ ಹೆಚ್ಚಿನ ಪಾತ್ರವನ್ನು ನೀಡಲಾಗಿದೆ. ನೂತನ ವ್ಯವಸ್ಥೆಯು ರಚನಾತ್ಮಕ ಶಾಲಾ ಸುಧಾರಣೆಯ ಸಾಧ್ಯತೆಯನ್ನು ಕಿರಿದುಗೊಳಿಸುತ್ತದೆ ಹಾಗೂ ಅತ್ಯಂತ ವಾಣಿಜ್ಯೀಕೃತ ಕೋಚಿಂಗ್ ವ್ಯವಸ್ಥೆಯ ಅವಕಾಶಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಈ ವಾಣಿಜ್ಯೀಕೃತ ಕೋಚಿಂಗ್ ವ್ಯವಸ್ಥೆಯು ನಮ್ಮ ಶಿಕ್ಷಣ ವ್ಯವಸ್ಥೆಯ ಸೃಜನಶೀಲತೆಯನ್ನೇ ಹೀರಿ ತೆಗೆಯುತ್ತಿದೆ ಹಾಗೂ ಅದರ (ಶಿಕ್ಷಣ ವ್ಯವಸ್ಥೆಯ) ಅಸಮಾನತೆಗಳನ್ನು ಹೆಚ್ಚಿಸುತ್ತಿದೆ. ಪರೀಕ್ಷೆಗಳ ಹೊರೆಯು ಇನ್ನಷ್ಟು ಹೆಚ್ಚುತ್ತದೆ ಮತ್ತು ಮಿತಿಮೀರಿದ ಕೇಂದ್ರೀಕರಣವು ದೊಡ್ಡ ಸಮಸ್ಯೆಯಾಗಲಿದೆ.
ಸಮಾನ ಅವಕಾಶಗಳನ್ನು ನೀಡುವುದಕ್ಕಾಗಿ ಸಿಯುಇಟಿಯನ್ನು ಪರಿಚಯಿಸಲಾಗಿದೆ ಎಂಬುದಾಗಿ ಹೇಳಿಕೊಳ್ಳಲಾಗಿದೆ. ಆದರೆ, ಇಂಥ ಪರೀಕ್ಷೆಗಳು ದುಬಾರಿ ಕೋಚಿಂಗ್ ತರಗತಿಗಳಿಗೆ ಅವಕಾಶ ಮಾಡಿಕೊಡುತ್ತವೆ ಎನ್ನುವುದನ್ನು ನಮ್ಮ ಹಿಂದಿನ ಅನುಭವ ಹೇಳುತ್ತದೆ. ದುರ್ಬಲ ವರ್ಗಗಳಿಂದ ಬರುವವರ ಅವಕಾಶಗಳು ಮತ್ತಷ್ಟು ಕಡಿತಗೊಳ್ಳುತ್ತವೆ. ಅದೂ ಅಲ್ಲದೆ, ಪ್ರಮಾಣೀಕೃತ ಪಠ್ಯಪುಸ್ತಕಗಳು ಮತ್ತು ಪಠ್ಯಕ್ರಮಗಳಿಂದ ಭಿನ್ನವಾದ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳ ವಿದ್ಯಾರ್ಥಿಗಳ ಅವಕಾಶಗಳನ್ನೂ ಇದು ತಗ್ಗಿಸುತ್ತದೆ. ಇಡೀ ವ್ಯವಸ್ಥೆಯು ಹೆಚ್ಚೆಚ್ಚು ಕೇಂದ್ರೀಕೃತಗೊಳ್ಳುತ್ತಿದೆ.
ಸಿಯುಇಟಿಯನ್ನು ಜಾರಿಗೊಳಿಸುವುದಿದ್ದರೂ ಚರ್ಚೆ ಮತ್ತು ಸಮಾಲೋಚನೆಗಳಿಗೆ ಹೆಚ್ಚಿನ ಸಮಯಾವಕಾಶವನ್ನು ಕೊಡಬಹುದಾಗಿತ್ತು. ಬದಲಿಗೆ, ಅದನ್ನು ಅತ್ಯಂತ ಅವಸರದಿಂದ ಈ ವರ್ಷವೇ ಜಾರಿಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಣ ತಜ್ಞರೂ ಆಶ್ಚರ್ಯಚಕಿತರಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಹೆತ್ತವರ ಅನಿಶ್ಚಿತತೆ ಮತ್ತು ಉದ್ವೇಗ ಹೆಚ್ಚಿದೆ. ಸರಕಾರದ ಶೈಕ್ಷಣಿಕ ಯೋಜನೆಯಲ್ಲಿ ಸಿಯುಇಟಿ ಸೇರ್ಪಡೆಗೊಳ್ಳುವುದಿದ್ದರೆ, ಅದರ ಜಾರಿಗೆ ಸರಿಯಾದ ಸಮಯ ಮಂದಿನ ವರ್ಷ (2023) ಆಗಿರಬೇಕಾಗಿತ್ತು. ಸಿಯುಇಟಿಯನ್ನು ‘ಸುಧಾರಣೆ’ ಎನ್ನುವ ಪದದ ಧನಾತ್ಮಕ ರೂಪವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಈಗಿನ ದಿನಗಳಲ್ಲಿ ಎಲ್ಲ ರೀತಿಯ ಕಳಪೆ ಆರ್ಥಿಕ ನೀತಿಗಳನ್ನು ‘ಆರ್ಥಿಕ ಸುಧಾರಣೆಗಳು’ ಎಂಬುದಾಗಿ ಹೇಳಲಾಗುತ್ತದೆ. ನೈಜ ಶೈಕ್ಷಣಿಕ ಸುಧಾರಣೆಗಾಗಿ ನಾವು ಈಗಲೂ ಕಾಯುತ್ತಿದ್ದೇವೆ.