ಆಮ್ ಆದ್ಮಿ ಪಕ್ಷ: ಹಾವಿನಂತಿರುವ ಕೋಲೋ? ಕೋಲಿನಂತಿರುವ ಹಾವೋ?
ಎರಡು ವರ್ಷಗಳ ಹಿಂದೆ ಸಿಎಎ ವಿರುದ್ಧ ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ಮುಸ್ಲಿಮ್ ಮಹಿಳೆಯರು ಧೀರೋದ್ಧಾತ ಹೋರಾಟ ನಡೆಸುತ್ತಿದ್ದಾಗ ಆಪ್ ಪಕ್ಷದವರು ಅಲ್ಲಿಗೆ ಒಮ್ಮೆಯೂ ಭೇಟಿ ನೀಡಲಿಲ್ಲ. ಬದಲಿಗೆ ಶಾಹೀನ್‌ಬಾಗ್ ಹೋರಾಟ ಮುಸ್ಲಿಮ್ ಉಗ್ರಗಾಮಿಗಳ ಬೆಂಬಲದೊಂದಿಗೆ ನಡೆಯುತ್ತಿರುವ ಹೋರಾಟ ಎಂದು ಬಿಜೆಪಿ ಪ್ರಚಾರ ಮಾಡಲು ಶುರು ಮಾಡಿದಾಗ ಆಪ್ ಅದನ್ನು ಖಂಡಿಸುವುದಿರಲಿ, ತಮ್ಮ ಬಳಿ ಪೊಲೀಸ್ ಅಧಿಕಾರವಿದ್ದಿದ್ದರೆ ಎರಡೇ ಗಂಟೆಯಲ್ಲಿ ಶಾಹೀನ್‌ಬಾಗ್ ಅನ್ನು ತೆರವುಗೊಳಿಸುತ್ತಿದ್ದೆವು ಎಂದು ಹೇಳಿದ್ದರು.
ಈ ದೇಶ ಒಂದು ನಿಜವಾದ ರಾಜಕೀಯ ಪರ್ಯಾಯಕ್ಕಾಗಿ ತಹತಹಿಸುತ್ತಿರುವ ಸಂದರ್ಭದಲ್ಲಿ ದೇಶದ ರಾಜಕಾರಣದಲ್ಲಿ ಅಚ್ಚರಿಗೊಳಿಸುವ ಫಲಿತಾಂಶಗಳೊಂದಿಗೆ ಆಮ್ ಆದ್ಮಿ ಪಕ್ಷ ಪ್ರವೇಶ ಮಾಡಿತು. 2014ರಲ್ಲಿ ಮೋದಿಯವರನ್ನು ನೇರಾನೇರಾ ಚುನಾವಣೆಯಲ್ಲಿ ಎದುರಿಸುವ ಧೈರ್ಯವನ್ನು ತೋರಿದ ಆಮ್ ಆದ್ಮಿ ಪಕ್ಷ 2015ರಲ್ಲಿ ಮತ್ತು 2020ರಲ್ಲಿ ಎರಡು ಬಾರಿ ದಿಲ್ಲಿ ಶಾಸನಾ ಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿತು. ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಪಂಜಾಬಿನಲ್ಲೂ ಕೂಡಾ ಅಭೂತಪೂರ್ವ ಚುನಾವಣಾ ಸಾಧನೆಯನ್ನು ಮಾಡಿ ಸರಕಾರವನ್ನು ರಚಿಸುವ ಮೂಲಕ ಕಾಂಗ್ರೆಸ್, ಬಿಜೆಪಿ ಮತ್ತು ಕಮ್ಯುನಿಸ್ಟರನ್ನು ಬಿಟ್ಟರೆ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸರಕಾರ ರಚಿಸಿದ ಪಕ್ಷವೆಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ತಾನು ಆಡಳಿತ ನಡೆಸುತ್ತಿರುವ ದಿಲ್ಲಿಯಲ್ಲಿ ಉಚಿತ ವಿದ್ಯುತ್ ಮತ್ತು ನೀರಿನ ಜೊತೆಗೆ ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಹಾಗೂ ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯುವ ಮೂಲಕ ಒಂದು ಮಾದರಿ ಸರಕಾರವೆಂಬ ಪ್ರಚಾರಕ್ಕೂ ಭಾಜನವಾಗಿದೆ. ಇದರಲ್ಲಿ ಸಹಜವಾಗಿ ಒಂದಷ್ಟು ಸರಕಾರಿ ಪ್ರಚಾರಗಳ ಉತ್ಪ್ರೇಕ್ಷೆ ಇದ್ದರೂ, ಆಡಳಿತಾತ್ಮಕ ಭ್ರಷ್ಟಾಚಾರವನ್ನು ತಹಬದಿಗೆ ತಂದರೂ ಜನರಿಗೆ ಅತ್ಯಗತ್ಯವಾದ ಸೇವೆ ಮತ್ತು ಸರಕುಗಳನ್ನು ಒದಗಿಸಲು ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯ ಎಂಬುದನ್ನು ಒಂದಷ್ಟು ಮಟ್ಟಿಗಾದರೂ ಆಮ್ ಆದ್ಮಿ ಪಕ್ಷ ರುಜುವಾತು ಮಾಡಿದೆ.
ಈ ಎಲ್ಲಾ ಕಾರಣಗಳಿಂದಾಗಿ ಹಾಗೂ ವಿಶೇಷವಾಗಿ ಪಂಜಾಬಿನಲ್ಲಿ ಅದರ ಬೆರಗುಗೊಳಿಸುವ ಸಾಧನೆಯನ್ನು ಗಮನಿಸಿ ಒಂದು ಜನವರ್ಗ ಆಪ್ ಪಕ್ಷದತ್ತ ಆಸೆಗಣ್ಣುಗಳಿಂದ ನೋಡುತ್ತಿದೆ. ಬಂಗಾಳದಲ್ಲಿ ಟಿಎಂಸಿ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲ್ಲಿ ಕಮ್ಯುನಿಸ್ಟ್ ಪಕ್ಷಗಳನ್ನು ಹೊರತುಪಡಿಸಿದರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸನ್ನೂ ಒಳಗೊಂಡಂತೆ ಈ ಯಾವ ಪಕ್ಷಗಳೂ ಬಿಜೆಪಿಗೆ ಪರಿಣಾಮಕಾರಿ ಚುನಾವಣಾ ವಿರೋಧವನ್ನೂ ನೀಡಲಾಗದಂಥ ಪರಿಸ್ಥಿತಿ ಇರುವಾಗ ಆಪ್ ಪಕ್ಷ ಒಂದು ನಿಜವಾದ ಪರ್ಯಾಯವಾಗಬಹುದು, ಪರ್ಯಾಯವಾಗಬೇಕು ಎಂದು ನಿರೀಕ್ಷಿಸುತ್ತಿದ್ದಾರೆ.
ಹೀಗಾಗಿ ಪಂಜಾಬ್ ಚುನಾವಣೆಯ ನಂತರ ಆಪ್ ಪಕ್ಷಕ್ಕೆ ಕರ್ನಾಟಕವನ್ನೂ ಒಳಗೊಂಡಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹೊಸಬರು, ಹಳೆಯ ಪಕ್ಷಗಳಲ್ಲಿ ಚಲಾವಣೆ ಕಳೆದುಕೊಳ್ಳುತ್ತಿರುವ ಹಳಬರು, ಅವಕಾಶವಾದಿಗಳು, ಕೋಮುವಾದಿಗಳು, ಗುಪ್ತ ಭ್ರಷ್ಟಾಚಾರಿಗಳು ಮತ್ತು ಗುಪ್ತ ಹಿಂದುತ್ವವಾದಿಗಳೆಲ್ಲರೂ ಹೊಸ ಬಟ್ಟೆ ಧರಿಸಿ ಆಪ್ ಸೇರುತ್ತಿದ್ದಾರೆ. ಆಪ್ ಅವರೆಲ್ಲರನ್ನು ಯಾವುದೇ ತಕರಾರಿಲ್ಲದೆ ಸೇರಿಸಿಕೊಳ್ಳುತ್ತಿದೆ. ಈ ಕಾರಣದಿಂದಲೇ ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ನಂತಹ ರಾಜ್ಯಗಳಲ್ಲಿ ಪರಮ ಹಿಂದುತ್ವವಾದಿ ಬಿಜೆಪಿಯ ನಾಯಕರು ಆಪ್ ಪಕ್ಷಕ್ಕೂ, ಆಪ್ ಪಕ್ಷದಿಂದ ಬಿಜೆಪಿಗೂ ಕೂಡ ಸರಾಗವಾಗಿ ಪಕ್ಷಾಂತರಗೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ಇಂದು ದಿಲ್ಲಿಯ ಬಿಜೆಪಿ ನಾಯಕರಾಗಿರುವ, ಅತ್ಯಂತ ಕಡು ಹಿಂದುತ್ವವಾದಿ ಹಾಗೂ ಮುಸ್ಲಿಮ್ ದ್ವೇಷಿ ಮತ್ತು ದಿಲ್ಲಿಯಲ್ಲಿ 2020ರಲ್ಲಿ ನಡೆದ ಮುಸ್ಲಿಮ್ ಹತ್ಯಾಕಾಂಡದ ಸೂತ್ರಧಾರಿಗಳಲ್ಲಿ ಒಬ್ಬರಾದ -ಗೋಲಿ ಮಾರೋ ಸಾಲೊಂಕೋ- 'ಖ್ಯಾತಿಯ' ಕಪಿಲ್ ಮಿಶ್ರಾ ಕೂಡಾ 2019ರ ತನಕ ಆಪ್ ಪಕ್ಷದ ನಾಯಕರಾಗಿದ್ದವರೇ..
ಹೊಸ ಪಕ್ಷಗಳು ಹಳೆಯದರ ನಕಲಾಗುವ ಇತಿಹಾಸ ಅದೇನೇ ಇರಲಿ. ಈ ದೇಶದ ಇತಿಹಾಸದಲ್ಲಿ ಹಳೆಯದರ ಬಗ್ಗೆ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಬಗ್ಗೆ ಸಕಾರಣವಾದ ಅಸಹನೆ ಮತ್ತು ಅಸಮಾಧಾನಗಳನ್ನು ಆಧರಿಸಿ 1960, 70 ಹಾಗೂ 80ರ ದಶಕಗಳಲ್ಲಿ ಹುಟ್ಟಿಕೊಂಡ ಹಲವಾರು ಪ್ರಾದೇಶಿಕ ಪಕ್ಷಗಳು, ರೈತ ಪಕ್ಷಗಳು, ವಿಕೇಂದ್ರೀಕರಣ ಪ್ರತಿಪಾದಕ ಪಕ್ಷಗಳೆಲ್ಲಾ (ಅಕಾಲಿ ದಳ, ಡಿಎಂಕೆ, ಆರ್‌ಎಲ್‌ಡಿ, ಎಐಎಡಿಎಂಕೆ, ಎಜಿಪಿ, ಜನತಾ ಪರಿವಾರ, ಟಿಡಿಪಿ, ಟಿಆರ್‌ಎಸ್, ನಮ್ಮಲ್ಲಿ ಜೆಡಿಎಸ್.. ಇತ್ಯಾದಿಗಳು) ಒಂದು ರಾಷ್ಟ್ರೀಯ ಮಟ್ಟದ ಸುಸ್ಥಿರ ಚುನಾವಣಾ ಪರ್ಯಾಯಗಳನ್ನೂ ಒದಗಿಸಲಿಲ್ಲ ಅಥವಾ ಒಂದು ರಾಜಕೀಯ ಹಾಗೂ ಸೈದ್ಧಾಂತಿಕ ಪರ್ಯಾಯವನ್ನೂ ಒದಗಿಸಲಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಮೋದಿಯವರ ನೇತೃತ್ವದಲ್ಲಿ ಹಿಂದುತ್ವವಾದಿ ಅಜೆಂಡಾಗಳ ಆಧಾರದಲ್ಲಿ ಸಂಘಪರಿವಾರವು ಒಂದು ಸುಸ್ಥಿರ ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸುವುದರಲ್ಲಿ ಯಶಸ್ವಿಯಾಗುತ್ತಿದೆ. ಪರಿಣಾಮವಾಗಿ ಕಾಂಗ್ರೆಸನ್ನೂ ಒಳಗೊಂಡಂತೆ ಈ ಎಲ್ಲಾ ಪಕ್ಷಗಳು ಕೂಡಾ ಹಿಂದೂ ಅಜೆಂಡಾವನ್ನು ಪಾಲಿಸುತ್ತಿವೆ ಅಥವಾ ಒಮ್ಮಿಮ್ಮೆ ಬಿಜೆಪಿಗೆ ಪೈಪೋಟಿ ಕೊಡುವ ರೀತಿಯಲ್ಲಿ ಅವರಿಗಿಂತ ಆಕ್ರಮಣಕಾರಿಯಾಗಿ ಸಂ ಫ್ಯಾಶಿಸ್ಟ್ ಕಥನಗಳನ್ನೂ ಹಾಗೂ ಅಜೆಂಡಾಗಳನ್ನು ಜಾರಿಗೊಳಿಸುತ್ತಿವೆ. ಹೀಗಾಗಿ ಇಂದು ಸಂ ಫ್ಯಾಶಿಸಂಗೆ ತಾತ್ವಿಕ ರಾಜಕಾರಣದಲ್ಲಿರಲಿ, ಚುನಾವಣಾ ರಾಜಕೀಯದಲ್ಲೂ ಎದುರಿಲ್ಲವಾಗಿದೆ. ಕೆಲವೊಮ್ಮೆ ಬಿಜೆಪಿ ಚುನಾವಣೆಯಲ್ಲಿ ಸೋತರೂ ಗೆದ್ದ ಇತರ ಪಕ್ಷಗಳೂ ಸಹ ಸಂ ಅಜೆಂಡಾಗಳನ್ನೇ ಪಾಲಿಸುತ್ತಾ ಹಿಂದೂ ದೇಶ ಹಾಗೂ ಹಿಂದೂ ರಾಷ್ಟ್ರ ಕಟ್ಟಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸುತ್ತಿವೆ. ಫ್ಯಾಶಿಸಂನ ಸವಾಲು ಮತ್ತು ಆಮ್ ಆದ್ಮಿ ಪಕ್ಷ ಹೀಗಾಗಿ ಇಂದು ಭಾರತದ ರಾಜಕಾರಣದಲ್ಲಿ ಸಂ ಫ್ಯಾಶಿಸಂಗೆ ವಿರೋಧ ಪಕ್ಷವೇ ಇಲ್ಲದಂತಾಗಿದೆ. ನಿಜವಾದ ಜನಪರ್ಯಾಯವೇ ಇಲ್ಲವಾಗಿದೆ. ಏಕೆಂದರೆ ಸಂ ಫ್ಯಾಶಿಸಂ ಈ ದೇಶಕ್ಕೆ ಒಡ್ಡಿರುವುದು ಕೇವಲ ಚುನಾವಣಾ ಸವಾಲಲ್ಲ.
ಅದು ನಮ್ಮ ದೇಶದ ಸಂವಿಧಾನಕ್ಕೆ ಹಾಗೂ ಸಹಸ್ರಾರು ವರ್ಷದ ಕೂಡುಬಾಳ್ವೆಯ ನಾಗರಿಕತೆಗೆ ಒಡ್ಡಿರುವ ಸವಾಲಾಗಿದೆ. ಹೀಗಾಗಿ ಅದನ್ನು ಎದುರಿಸಲು ಅಷ್ಟೇ ಬಲವಾದ ಹಾಗೂ ಪ್ರತಿಯಾದ ಸೈದ್ಧಾಂತಿಕ, ತಾತ್ವಿಕ, ರಾಜಕೀಯ ಗಟ್ಟಿತನ ಪ್ರತಿರೋಧಕ್ಕೆ ಇರಬೇಕಾಗುತ್ತದೆ. ಅದಿಲ್ಲದಿರುವುದರಿಂದಲೇ ಎಲ್ಲಾ ವಿರೋಧ ಪಕ್ಷಗಳು ಸಂ ಅಜೆಂಡಾಗಳನ್ನು ಪರೋಕ್ಷವಾಗಿ ಜಾರಿ ಮಾಡುವ ಬಿ ಟೀಂಗಳಾಗಿ ಬಿಡುತ್ತಿವೆ. ಇಂಥ ಸನ್ನಿವೇಶದಲ್ಲಿ ತನ್ನ ಚುನಾವಣಾ ಗೆಲುವಿನ ಮೂಲಕ ಒಂದು ಪರ್ಯಾಯದ ಭರವಸೆಯನ್ನು ಹುಟ್ಟಿಸಿರುವ ಆಪ್ ಪಕ್ಷ ನಿಜಕ್ಕೂ ಸಂ ಸವಾಲಿಂದ ಈ ದೇಶವನ್ನು ಉಳಿಸಬಹುದಾದ ಪರ್ಯಾಯವೇ? ಅಥವಾ ಇತರ ವಿರೋಧ ಪಕ್ಷಗಳಂತೆ ಕೇವಲ ಚುನಾವಣಾ ಪರ್ಯಾಯವನ್ನು ಒದಗಿಸಿ ಸಾರಾಂಶದಲ್ಲಿ ಸಂ ಅಜೆಂಡಾಗಳನ್ನೇ ಪಾಲಿಸುವ ಮತ್ತೊಂದು ವಿರೋಧ ಪಕ್ಷವೇ? ಅಥವಾ ಆಳದಲ್ಲಿ ಅದೂ ಕೂಡ ಬಿಜೆಪಿಯಂತೆ ಮತ್ತೊಂದು ಸಂ ಪಕ್ಷವೇ? ಎಂಬುದನ್ನು ಈ ದೇಶ ಮತ್ತೊಮ್ಮೆ ಮೋಸಹೋಗಬಾರದು ಎಂದು ಬಯಸುವ ಎಲ್ಲರೂ ವಿಶ್ಲೇಷಿಸಬೇಕಿದೆ. ಇತ್ತೀಚೆಗೆ ದಿಲ್ಲಿಯ ಜಹಾಂಗೀರ್ ಪುರಿಯಲ್ಲಿ ನಡೆದ ಗಲಭೆಯಲ್ಲಿ ಆಪ್ ತೆಗೆದುಕೊಂಡ ನಿಲುವು ಹಾಗೂ ಕಳೆದ ಕೆಲವು ವರ್ಷಗಳಿಂದ ದಿಲ್ಲಿಯ ಆಪ್ ಸರಕಾರದ ಮತ್ತು ಆಪ್ ಪಕ್ಷದ ಕಾರ್ಯಕ್ರಮಗಳು, ಅದರ ಮೌನಗಳು ಮತ್ತು ಅದರ ಮಾತುಗಳು, ನಡೆ ಮತ್ತು ನುಡಿಗಳು..
.. ಈ ದೇಶದ ಸೆಕ್ಯುಲರ್ ಮತ್ತು ಪ್ರಜಾಸತ್ತಾತ್ಮಕ ರಚನೆಯನ್ನೇ ಬದಲಿಸುವಂಥ ಕಾಯ್ದೆಗಳನ್ನು ಮೋದಿ ಸರಕಾರ ಜಾರಿಗೆ ತಂದಾಗ ಆಪ್ ತೆಗೆದುಕೊಂಡ ನಿಲುವುಗಳು, ಕಾರ್ಪೊರೇಟ್ ಭ್ರಷ್ಟಾಚಾರದ ಬಗ್ಗೆ ಅದರ ನಿಗೂಢ ಮೌನಗಳು..ಇವೇ ಇತ್ಯಾದಿಗಳು ಇಂಥ ವಿಶ್ಲೇಷಣೆಯ ಅಗತ್ಯಗಳನ್ನು ಜರೂರು ಮಾಡಿವೆ. 'ಎಡ-ಬಲ'ವಿಲ್ಲದ, ಕೆಲಸವೇ ಸಿದ್ಧಾಂತವೆನ್ನುವ ಮೋಹಕ ಅವಕಾಶವಾದ ಆಪ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥರಾದ ಅಂಕಿತ್ ಲಾಲ್ ಅವರು ಇತ್ತೀಚಿನ ಸಂದರ್ಶನದಲ್ಲಿ ಆಪ್‌ನ ತಾತ್ವಿಕ(?) ಗ್ರಹಿಕೆಯನ್ನು ಮುಂದಿಟ್ಟಿದ್ದಾರೆ. ಅದರ ಪ್ರಕಾರ ಆಪ್ ಪಕ್ಷ ಯಾವುದೇ ಸಿದ್ಧಾಂತಕ್ಕೆ ಬದ್ಧವಲ್ಲ. ಜನರಿಗೆ ಬೇಕಾಗುವ ಪರಿಹಾರಗಳು ಎಡದಲ್ಲಿದ್ದರೆ ಎಡದ ಕಡೆ, ಬಲದಲ್ಲಿದ್ದರೆ ಬಲದ ಕಡೆ ವಾಲುತ್ತೇವೆ ಎಂದು ಆಪ್ ಸ್ಪಷ್ಟವಾಗಿ ಹೇಳುತ್ತದೆ. ಪಕ್ಷದ ಮುಖ್ಯಸ್ಥ ಕೇಜ್ರಿವಾಲರ ಪ್ರಕಾರ ಕೆಲಸವೇ ಅವರ ಸಿದ್ಧಾಂತ. ಸಾಮಾನ್ಯ ಜನರ ಪರವಾಗಿ ಕೆಲಸ ಮಾಡಲು ಅವರು ಏನು ಬೇಕಾದರೂ ಮಾಡಬಲ್ಲರು. ಹಾಗಿದ್ದರೆ ಈ ಜನಸಾಮಾನ್ಯರು ಯಾರು? ಆಪ್ ಪಕ್ಷದ ಕರ್ನಾಟಕದ ಅಧ್ಯಕ್ಷ ಪೃಥ್ವಿ ರೆಡ್ಡಿಯವರ ಆಮ್ ಆದ್ಮಿ- ಜನಸಾಮಾನ್ಯ- ಎಂದರೆ ಬಡವ ಎಂದಲ್ಲ. ಹೆಚ್ಚೆಂದರೆ ಆಮ್ ಆದ್ಮಿ ಎಂದರೆ ಸರಕಾರದಲ್ಲಿ ಇರದಿರುವವರು ಎಂಬರ್ಥ. ಹೀಗಾಗಿ ಆಪ್ ಪಕ್ಷ ತಮ್ಮಲ್ಲಿ ಬಡವರು, ಶ್ರೀಮಂತರು, ದಲಿತರು, ಬ್ರಾಹ್ಮಣರು, ಹಿಂದೂ-ಮುಸ್ಲಿಮರು, ಗಂಡು-ಹೆಣ್ಣು ಎಲ್ಲರೂ ಇದ್ದಾರೆ ಎಂದು ಸಮರ್ಥಿಸಿಕೊಳ್ಳುತ್ತದೆ. (https://thewire.in/politics/aap-ideology-caa-shaheen-bagh-ankit-lal)
ಆದರೆ ಭಾರತದ ಆಮ್ ಆದ್ಮಿಯ -ಜನ ಸಾಮಾನ್ಯರ- ಸಾಮಾಜಿಕ ಆರ್ಥಿಕ ಬದುಕು ಸರಕಾರದಿಂದ ಮಾತ್ರವಲ್ಲದೆ, ಸರಕಾರದಿಂದ ಬೆಂಬಲಿತವಾದ ಇತರ ಆರ್ಥಿಕ-ಸಾಮಾಜಿಕ ಸಂಸ್ಥೆಗಳಿಂದ ಶೋಷಣೆಗೆ ಒಳಗಾಗುತ್ತವೆ. ಸಾಮಾಜಿಕ ಸಂಸ್ಥೆಯಾಗಿರುವ ಜಾತಿ ಸಾಮಾಜಿಕ ಅಧಿಕಾರವನ್ನು ದಲಿತ-ಬ್ರಾಹ್ಮಣರ ನಡುವೆ ಅಸಮಾನವಾಗಿ ಹಂಚುತ್ತದೆ. ಆದ್ದರಿಂದಲೇ ಸಾಮಾಜಿಕ ಪ್ರಜಾತಂತ್ರ ಬೇಕೆಂದರೆ ಜಾತಿ ವ್ಯವಸ್ಥೆ ನಾಶವಾಗಬೇಕು ಎಂಬ ಸಿದ್ಧಾಂತವನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಹಾಗೆಯೇ ಕುಟುಂಬ ಮತ್ತು ಸಮಾಜದೊಳಗೆ ಗಂಡು-ಹೆಣ್ಣಿನ ನಡುವೆ ಅಸಮಾನತೆ ಇದೆ. ಅದರ ಹುಟ್ಟು ಇರುವುದು ಪುರುಷಾಧಿಪತ್ಯದಲ್ಲಿ ಹೀಗಾಗಿ ಆಮ್ ಔರತ್ (ಹೆಂಗಸು) ಆಮ್ ಆದ್ಮಿ (ಪುರುಷ)ಯಿಂದಲೇ ಶೋಷಣೆಗೊಳಗಾಗುವಾಗ ಪುರುಷಾಧಿಪತ್ಯವನ್ನು ನಾಶ ಮಾಡುವ ಸಿದ್ಧಾಂತವನ್ನು ಹೊಂದಿದ್ದರೆ ಮಾತ್ರ ಅದು ನಿಜವಾದ ಪರ್ಯಾಯ. ಆರ್ಥಿಕ ವ್ಯವಸ್ಥೆಯಲ್ಲಿ ಆಸ್ತಿ ಮತ್ತು ಸಂಪತ್ತು ಒಂದು ಕಡೆ ಕೇಂದ್ರೀಕರಣಗೊಳ್ಳದ ಸಿದ್ಧಾಂತವಿದ್ದರೆ ಮಾತ್ರ ಆಮ್ ಆದ್ಮಿಗಳ ನಡುವೆ ಆರ್ಥಿಕ ಅಂತರ ಕಡಿಮೆಯಾಗಬಲ್ಲದು. ಸ್ವಾತಂತ್ರಾ ನಂತರದಲ್ಲಿ ಕೇಂದ್ರ ದ ಸರ್ವಾಧಿಕಾರ ರಾಜ್ಯಗಳ ಮೇಲೆ ಹೆಚ್ಚುತ್ತಿದ್ದು, ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದಿ ಹೇರಿಕೆ ಇತ್ಯಾದಿಗಳು ಇನ್ನೂ ಹೆಚ್ಚುತ್ತಿವೆ. ಇದು ನಿಲ್ಲಬೇಕೆಂದರೂ ಭಾರತದ ಒಕ್ಕೂಟತತ್ವದ ಬಗ್ಗೆ ಗಟ್ಟಿಯಾದ ಸೈದ್ಧಾಂತಿಕ ನಿಲುವು ಬೇಕಿರುತ್ತದೆ.
ಹೀಗೆಯೇ ಆಮ್ ಆದ್ಮಿ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಧರ್ಮಾನುಯಾಯಿಯೂ ಆಗಿರುತ್ತಾರೆ. ಅಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶಕೊಡದಂಥ ಬಲವಾದ ಸೆಕ್ಯುಲರ್ ಸಿದ್ಧಾಂತವಿಲ್ಲದೆ ಪರ್ಯಾಯ ಸಾಧ್ಯವೇ ಇಲ್ಲ. ಭಾರತೀಯ ಸಮಾಜದೊಳಗಿನ ಈ ಮೂಲಭೂತ ವೈರುಧ್ಯಗಳನ್ನು ಒಂದೆರಡು ಒಳ್ಳೆಯ ಸರಕಾರಿ ಶಾಲೆಗಳು ಮತ್ತು ಒಂದೆರಡು ಒಳ್ಳೆಯ ಸರಕಾರಿ ಆಸ್ಪತ್ರೆಗಳನ್ನು ಕಟ್ಟುವುದರಿಂದ ಬಗೆಹರಿಸಲು ಸಾಧ್ಯವಿಲ್ಲ. ಸಮಾಜದೊಳಗೆ ಇರುವ ಈ ವೈರುಧ್ಯಗಳನ್ನು ಬಗೆಹರಿಸಲು ಬಲವಾದ ಮತ್ತು ಅತ್ಯಂತ ಪ್ರಾಮಾಣಿಕವಾದ ತಾತ್ವಿಕ ನೆಲೆಗಟ್ಟು ಇರಬೇಕಾಗುತ್ತದೆ. ಹಾಗೆ ನೋಡಿದರೆ ಭಾರತೀಯ ಸಮಾಜದಲ್ಲಿರುವ ಈ ಆರ್ಥಿಕ-ಸಾಮಾಜಿಕ ವೈರುಧ್ಯಗಳನ್ನು ಬಗೆಹರಿಸಲು ಸಂವಿಧಾನದ ಮುನ್ನುಡಿ, ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನಾ ತತ್ವಗಳಲ್ಲಿ ಸಮಾಜವಾದಿ ಮತ್ತು ಪ್ರಜಾತಾಂತ್ರಿಕ ಸಿದ್ಧಾಂತದ ಹಿನ್ನೆಲೆಯ ಪರಿಹಾರಗಳನ್ನೂ ಒದಗಿಸಲಾಗಿದೆ ಹಾಗೂ ಧಾರ್ಮಿಕ ತಾರತಮ್ಯಗಳನ್ನು ನಿವಾರಿಸಲು ಸೆಕ್ಯುಲರ್ ಸಿದ್ಧಾಂತದ ಪರಿಹಾರಗಳನ್ನು ಒದಗಿಸಲಾಗಿದೆ. ಅವನ್ನು ರಾಜಕೀಯ ಪರಿಭಾಷೆಯಲ್ಲಿ 'ಎಡವಾದಿ' ಪರಿಹಾರಗಳೆಂದೇ ಕರೆಯುತ್ತಾರೆ. ಅಂಥ ಪರಿಹಾರಗಳು 'ಬಲಪಂಥೀಯತೆ'ಯಲ್ಲಿ ಇರುವುದಿಲ್ಲ. ಆದ್ದರಿಂದಲೇ ಅದನ್ನು ಬಲಪಂಥ ಎಂದು ಕರೆಯುತ್ತಾರೆ. ಆದರೆ 1991ರ ನಂತರದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳು, ಅದರಲ್ಲೂ 2014ರ ನಂತರದಲ್ಲಿ ಮೋದಿ ನೇತೃತ್ವದ ಸರಕಾರ ಸಂವಿಧಾನ ಸಿದ್ಧಾಂತಕ್ಕೆ ವಿರುದ್ಧವಾಗಿ ಬಲವಾದಿ ಮತ್ತು ಹಿಂದುತ್ವವಾದಿ ಸಿದ್ಧಾಂತವನ್ನು ಅನುಷ್ಠಾನಗೊಳಿಸುತ್ತಿದೆ. ಹೀಗಿರುವಾಗ ಒಂದು ರಾಜಕೀಯ ಪಕ್ಷ ತನ್ನದು ಕೇವಲ ಕೆಲಸದ ಸಿದ್ಧಾಂತ ಎಂದು ಹೇಳುವುದು ಕೇವಲ ರಮ್ಯ ಅವಕಾಶವಾದ. ಅಷ್ಟು ಮಾತ್ರವಲ್ಲ, ಬಲದಲ್ಲಿ ಪರಿಹಾರವಿದ್ದರೆ ಅಲ್ಲಿಂದಲೂ ತೆಗೆದುಕೊಳ್ಳಲು ಸಿದ್ಧ ಎಂದು ಘೋಷಿಸುವುದು ಸಂವಿಧಾನ ವಿರೋಧಿ. ಏಕೆಂದರೆ ಬಲವೆಂದರೆ ಪ್ರಬಲರ ಪರವಾಗಿರುವುದು ಎಂದರ್ಥ.
ಪ್ರಬಲ ಧರ್ಮೀಯರ ಪರ, ಪ್ರಬಲ ವರ್ಗದ ಪರ, ಪ್ರಬಲ ಜಾತಿಯ ಪರ, ಪುರುಷಾಧಿಪತ್ಯದ ಪರವಾಗಿರುವುದು ಎಂದರ್ಥ. ವಾಸ್ತವದಲ್ಲಿ ಆಪ್ ಪಕ್ಷದ ನಿಲುವುಗಳು ಮತ್ತು ಕಾರ್ಯಕ್ರಮಗಳನ್ನು ನೋಡಿದರೆ ಆಮ್ ಆದ್ಮಿಯ ಹೆಸರಿನಲ್ಲಿ ಹೀಗೆ ಸಮಾಜದಲ್ಲಿರುವ ಪ್ರಬಲ ಧರ್ಮೀಯರ, ಪ್ರಬಲ ವರ್ಗದವರ ಹಾಗೂ ಪ್ರಬಲ ಜಾತಿಗಳ ಅಧಿಕಾರವನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಗಟ್ಟಿಗೊಳಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಬಿಜೆಪಿಯನ್ನು ವಿರೋಧಿಸುತ್ತಲೇ ಹಿಂದುತ್ವ ಅಜೆಂಡಾವನ್ನು ಸಮರ್ಥಿಸುವ ಆಪ್ ನಿಲುವುಗಳು
ಉದಾಹರಣೆಗೆ ಇತ್ತೀಚಿನ ಜಹಾಂಗೀರ್ ಪುರಿಯ ಗಲಭೆಯನ್ನೇ ಗಮನಿಸೋಣ. ಈ ವರ್ಷದ ಶ್ರೀರಾಮನವಮಿ ಮತ್ತು ಹನುಮ ಜಯಂತಿಯಂದು ಸಂ ಪಡೆಗಳು ದಿಲ್ಲಿಯನ್ನು ಒಳಗೊಂಡಂತೆ ದೇಶದ ಹಲವಾರು ರಾಜ್ಯಗಳಲ್ಲಿ ರಾಮ ಹಾಗೂ ಹನುಮಂತನ ಹೆಸರಿನಲ್ಲಿ ತಲ್ವಾರ್, ಬಂದೂಕುಗಳನ್ನು ಪ್ರದರ್ಶಿಸುತ್ತಾ ಮಸೀದಿಯ ಮುಂದೆ ಮೆರವಣಿಗೆ ಮಾಡುತ್ತಾ, ಮೈಕ್‌ನಲ್ಲಿ ಜೋರುಧ್ವನಿಯಲ್ಲಿ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಹೀಯಾಳಿಸುತ್ತಾ ಮುಸ್ಲಿಮರನ್ನು ಪ್ರಚೋದಿಸಿದವು, ಅವಮಾನಿಸಿದರು. ಹಲವು ಮಸೀದಿಗಳ ಮೇಲೆ ಭಗವಾಧ್ವಜವನ್ನು ಹಾರಿಸಿದರು. ಆದರೂ ಬಹುಪಾಲು ಕಡೆ ಮುಸ್ಲಿಮರು ಪ್ರಚೋದನೆಗೆ ಬಲಿಯಾಗಲಿಲ್ಲ. ಕೆಲವು ಕಡೆ ಈ ಅವಮಾನವನ್ನು ಸಹಿಸದೆ ಮುಸ್ಲಿಮರು ಪ್ರಚೋದನೆಯೆಂಬ ''ಕ್ರಿಯೆಗೆ ಪ್ರತಿಕ್ರಿಯೆ''ಯಾಗಿ ಪ್ರತಿಭಟಿಸಿದರು. ಕಲ್ಲುತೂರಾಟಗಳು ನಡೆದವು.
ಹಾಗೆಯೇ ಜಹಾಂಗೀರ್‌ಪುರಿಯಲ್ಲೂ ಸಂಗಳು ಮೂರು ಬಾರಿ ಮಸೀದಿಯ ಮುಂದೆ ತಲ್ವಾರ್‌ಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆ ಮಾಡಿ ಮಸೀದಿಯ ಮೇಲೆ ಭಗವಾಧ್ವಜ ಹಾರಿಸಿದರು. ಆದರೆ ಮೂರನೇ ಮೆರವಣಿಗೆಯ ವೇಳೆಗೆ ಸಹನೆ ಕಳೆದುಕೊಂಡ ಮುಸ್ಲಿಮರು ಮಸೀದಿಯ ಮೇಲೆ ಭಗವಾಧ್ವಜವನ್ನು ಹಾರಿಸುವುದನ್ನು ಪ್ರತಿಭಟಿಸಿದರು.
ಸಂಘಿಗಳು ಮಾಡುವ ದೌರ್ಜನ್ಯದ ವಿರುದ್ಧ ಮುಸ್ಲಿಮರು ಪ್ರತಿಭಟನೆಯನ್ನು ಕೂಡಾ ಮಾಡದಂತೆ ಪಾಠ ಕಲಿಸುವ ಉದ್ದೇಶದಿಂದ ಬಿಜೆಪಿಯ ಆಡಳಿತವಿರುವ ಉತ್ತರ ದಿಲ್ಲಿ ನಗರ ಪಾಲಿಕೆಯು ಜಹಾಂಗೀರ್‌ಪುರಿಗೆ ಬುಲ್ಡೋಜರನ್ನು ಕಳಿಸಿ ಮುಸ್ಲಿಮರ ಅಂಗಡಿಗಳನ್ನು ಧ್ವಂಸ ಮಾಡಿತು. ಮಸೀದಿಯ ಗೇಟನ್ನೂ ಒಡೆದುಹಾಕಿತು. ಈ ಅನ್ಯಾಯದ ವಿರುದ್ಧ ಕಪಿಲ್ ಸಿಬಲ್‌ರಂಥ ಕಾಂಗ್ರೆಸ್ ವಕೀಲರು ಕೂಡಲೇ ಸುಪ್ರೀಂ ಕೋರ್ಟಿನ ಮೊರೆ ಹೋಗಿ ತಡೆಯಾಜ್ಞೆ ತಂದರು. ಕೋರ್ಟ್ ಆದೇಶವಿದ್ದರೂ ಧ್ವಂಸ ಕಾರ್ಯ ಮುಂದುವರಿದಾಗ ಬೃಂದಾ ಕಾರಟ್‌ರಂತಹ ಸಿಪಿಎಂ ನಾಯಕಿ ಕೂಡಲೇ ಸ್ಥಳಕ್ಕೆ ತೆರಳಿ ಬುಲ್ಡೋಜರ್ ಎದುರು ನಿಂತು ಕೋರ್ಟ್ ಆದೇಶ ತೋರಿಸಿ ಅನ್ಯಾಯವನ್ನು ನಿಲ್ಲಿಸಿದರು. ಆದರೆ ಇದೇ ಜನರಿಂದ ಓಟು ಪಡೆದುಕೊಂಡ ಆಪ್ ಸರಕಾರ ಮತ್ತು ಆಪ್ ಪಕ್ಷ ಮಾಡಿದ್ದೇನು? ಮೊದಲನೆಯದಾಗಿ ತನ್ನ ಬಳಿ ಪೊಲೀಸ್ ಅಧಿಕಾರವಿಲ್ಲದಿರುವುದರಿಂದ ಏನೂ ಮಾಡಲು ಆಗುವುದಿಲ್ಲ ಎಂದು ತಮ್ಮ ಮೌನವನ್ನು ಸಮರ್ಥನೆ ಮಾಡಿಕೊಂಡರು. ಆ ನಂತರ ''ನಾವು ಅಲ್ಲಿಗೆ ಹೋಗಿದ್ದರೆ ತಾನೇ ಏನಾಗುತ್ತಿತ್ತು? ತಮ್ಮನ್ನು ಮುಸ್ಲಿಮ್ ಪರ ಎಂದು ಪ್ರಚಾರ ಮಾಡಲು ಬಿಜೆಪಿಗೆ ಮತ್ತೊಂದು ಅವಕಾಶವನ್ನು ಕೊಟ್ಟಂತೆ ಆಗುತ್ತಿತ್ತು. ಅದರಿಂದ ಬಿಜೆಪಿಗೇ ಅನುಕೂಲ. ಆದ್ದರಿಂದ ಹಿಂದೂ ಬಹುಸಂಖ್ಯಾತ ಸಮುದಾಯ ನಮ್ಮಿಂದ ದೂರವಾಗುವಂಥ ಯಾವುದೇ ಕೆಲಸವನ್ನು ನಾವು ಮಾಡಬಾರದೆನ್ನುವುದೇ ನಮ್ಮ ನೀತಿಯೆಂದು'' ಆಮ್ ಆದ್ಮಿಯ ವಕ್ತಾರರು ಘೋಷಿಸಿದರು. ಮುಸ್ಲಿಮರೂ ಕೂಡಾ ಇಂಥ ವಿಷಯಗಳಲ್ಲಿ ಪ್ರತಿಭಟನೆ ಇತ್ಯಾದಿಗಳನ್ನು ಮಾಡದೆ ಶಿಕ್ಷಣ, ವ್ಯಾಪಾರ, ಬದುಕು ಮತ್ತು ಉದ್ಯೋಗಗಳತ್ತ ಗಮನಹರಿಸುವುದು ವಾಸಿ ಎಂದು ಪುಕ್ಕಟೆ ವಿಧಿವಾದಿ ಸಲಹೆ ನೀಡಿದರು.
(https://www.telegraphindia.com/india/2020-to-2022-aap-government-plays-riot-bystander/cid/1861399)
ಇದು ಈಗ ಮಾತ್ರವಲ್ಲ. 2020ರಲ್ಲಿ ದಿಲ್ಲಿಯಲ್ಲಿ ಬಿಜೆಪಿ ಸಿಎಎ ವಿರೋಧಿ ಹೋರಾಟಗಾರರ ಮೇಲೆ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಹತ್ಯಾಕಾಂಡ ನಡೆಸಿದಾಗಲೂ ಆಪ್ ಪಕ್ಷ ಇದೇ ಅವಕಾಶವಾದಿ ನಿಲುವನ್ನು ತೆಗೆದುಕೊಂಡು ಮುಸ್ಲಿಮರನ್ನು ಕೈಬಿಟ್ಟಿತ್ತು. ಇಷ್ಟೇ ಆಗಿದ್ದರೂ ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆಪ್ ಪಕ್ಷದ ಇಂಥ ರಾಜಕೀಯ ಅವಕಾಶವಾದಿ ನಿಲುವುಗಳು ನಿಧಾನವಾಗಿ ಸಕ್ರಿಯ ಹಿಂದುತ್ವವಾದಿ ಸಮರ್ಥನೆಗಳಾಗಿ ಪರಿವರ್ತನೆಯಾಗುತ್ತಿವೆ. ಆ ಮೂಲಕ ಬಿಜೆಪಿಯ ನೆರೇಟೆವ್‌ಗಳನ್ನು ಸಮರ್ಥಿಸುತ್ತಾ ಸಂ ಅಜೆಂಡಾಗಳನ್ನು ಸಮಾಜದಲ್ಲಿ ಗಟ್ಟಿಗೊಳಿಸುತ್ತಾ ಬಿಜೆಪಿಯ ಬಿ ಟೀಮ್ ಎಂಬ ಆಪಾದನೆಗೆ ಪುರಾವೆಗಳನ್ನು ಒದಗಿಸುತ್ತಿದೆ.
ಹಿಂದುತ್ವ ಅಜೆಂಡಾಗಳ ಮೌನ ಸಮರ್ಥನೆಯಿಂದ ಸಕ್ರಿಯ ಪ್ರತಿಪಾದನೆಯತ್ತ!
ಇತ್ತೀಚಿನ ಜಹಾಂಗೀರ್ ಪುರಿ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ ಕೇಜ್ರಿವಾಲರು ಗಲಭೆಗೆ ಮುಸ್ಲಿಮರು ನಡೆಸಿದ ಕಲ್ಲು ತೂರಾಟವನ್ನು ಹೊಣೆ ಮಾಡಿದರೇ ವಿನಾ ಹಿಂದುತ್ವವಾದಿಗಳ ತಲ್ವಾರ್ ಮೆರವಣಿಗೆಯನ್ನಲ್ಲ. ಅಷ್ಟು ಮಾತ್ರವಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ತಾವು ಮಾಡಿದ ಅನಾಚಾರವನ್ನು ಸಮರ್ಥಿಸಿಕೊಳ್ಳಲು ಜಹಾಂಗೀರ್ ಪುರಿಯಲ್ಲಿ ಇರುವುದು ಬರ್ಮಾದ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ಮುಸ್ಲಿಮರು. ಅವರಿಂದಲೇ ಗಲಭೆಯಾಗುತ್ತಿದೆ ಮತ್ತು ಅವರು ಅಲ್ಲಿರಲು ಅವಕಾಶ ಮಾಡಿಕೊಟ್ಟಿರುವುದು ಆಪ್ ಪಕ್ಷ ಎಂಬ ಸುಳ್ಳು ಕಥನವನ್ನು ಹರಿಯಬಿಟ್ಟರು. ಇದಕ್ಕೆ ಪ್ರತಿಯಾಗಿ ಆಪ್‌ನ ಮುಖಂಡರಾದ ಆತಿಶ್ ಮತ್ತು ಸಿಸೋಡಿಯಾ ಅವರು ಕೂಡಾ ಗಲಭೆಯನ್ನು ಮಾಡಲೆಂದೇ ಬಿಜೆಪಿ ಪಕ್ಷ ಬಾಂಗ್ಲಾ ಮಾತು ರೋಹಿಂಗ್ಯಾ ಮುಸ್ಲಿಮರನ್ನು ಅಲ್ಲಿ ನೆಲೆಗೊಳಿಸಿದೆ ಎಂದು ಹೇಳಿಕೆಯಿತ್ತು ಪ್ರತಿಪ್ರಚಾರಕ್ಕಿಳಿದರು. ಸಾರಾಂಶ ದಲ್ಲಿ ಜಹಾಂಗೀರ್ ಪುರಿಯಲ್ಲಿ ಗಲಭೆಗೆ ಕಾರಣರಾದವರು ಹಿಂದೂ ಗಳಲ್ಲ ಮುಸ್ಲಿಮರು ಮತ್ತು ಅವರು ರೋಹಿಂಗ್ಯಾ ಹಾಗೂ ಬಾಂಗ್ಲಾ ಮುಸ್ಲಿಮರೆಂಬ ಸಂಗಳ ಸುಳ್ಳು ಕಥನವನ್ನು ಆಪ್ ಕೂಡಾ ದೃಢೀಕರಿಸಿತು ಮತ್ತು ಅಸಲೀ ದಂಗೆಕೋರರಾದ ಸಂಗಳನ್ನು ರಕ್ಷಿಸಿತು. (https://twitter.com/AtishiAAP/status/1516689497018093569)
ಇದಕ್ಕೆ ಸ್ವಲ್ಪ ಮುಂಚೆ