varthabharthi


ಅನುಗಾಲ

ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ

ವಾರ್ತಾ ಭಾರತಿ : 28 Apr, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾರತೀಯತೆಯೆಂದರೆ ಮತೀಯತೆಯಲ್ಲ. ಸರಕಾರಕ್ಕೆ ಈ ದೇಶದಲ್ಲಿ ರಾಕ್ಷಸಾಕಾರವಾಗಿ ಬೆಳೆದಿರುವ, ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವ ಸಾಮರ್ಥ್ಯವಿಲ್ಲವೋ ಇಚ್ಛಾಶಕ್ತಿಯಿಲ್ಲವೋ ಎಂದು ಪರಿಶೀಲಿಸಿದರೆ ಎರಡೂ ಇಲ್ಲವೆಂದು ಕಾಣಿಸುತ್ತದೆ.

ಅಮೆರಿಕ ಸಂಯುಕ್ತ ಸಂಸ್ಥಾನದ ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಆಯೋಗವು ಸತತ ಮೂರನೆಯ ಬಾರಿ ತನ್ನ ವಾರ್ಷಿಕ ವರದಿಯಲ್ಲಿ ಭಾರತವನ್ನು ‘ಪ್ರತ್ಯೇಕ ಆತಂಕದ ದೇಶ’ ಎಂದು ಹೆಸರಿಸಿದೆ ಮತ್ತು ಧಾರ್ಮಿಕ ಸ್ವಾತಂತ್ರದ ಹಕ್ಕು ತೀರ ಹದಗೆಟ್ಟಿದೆ ಎಂದಿದೆ. ತಮ್ಮ ಸಾಧನೆಗಳಿಗೆ ಪಾಶ್ಚಾತ್ಯ ದೇಶಗಳ ಶಿಫಾರಸು ಪತ್ರಗಳನ್ನು ಉಲ್ಲೇಖಿಸುವ ಭಾರತ ಸರಕಾರವು ಸಹಜವಾಗಿಯೇ ವ್ಯಗ್ರಗೊಂಡಿದೆ. ಈ ವರದಿಯೆಂದಲ್ಲ, ನಮ್ಮ ಬಗ್ಗೆ ಬರುವ ಯಾವುದೇ ವ್ಯತಿರಿಕ್ತ ವರದಿಯನ್ನು ನಾವು ಸಹಿಸುವುದಿಲ್ಲ. ಇದು ಸಹಜವೇ. ಯಾವುದೇ ದೇಶವೂ ತನ್ನ ಕುರಿತ ಟೀಕೆಯನ್ನು ಸಹಿಸುವುದಿಲ್ಲ. ಸರಕಾರಗಳೂ ತಮ್ಮ ದೇಶದೊಳಗೇ ತಮ್ಮ ಬಗ್ಗೆ ಟೀಕೆಯನ್ನು ಸಹಿಸುವುದಿಲ್ಲವೆಂದಾದ ಮೇಲೆ ಅಂತರ್‌ರಾಷ್ಟ್ರೀಯ ರಾಜಕಾರಣದಲ್ಲಿ ಇದು ಭಿನ್ನವಾಗಿರಲು ಹೇಗೆ ಸಾಧ್ಯ? ಭಾರತದ ಮಿತ್ರ ದೇಶವೊಂದು ನೆಹರೂ ಅವರನ್ನು ಹೊಗಳಿದಾಗಲೂ ನಮ್ಮ ಪ್ರಸಕ್ತ ಸರಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.

ಇದು ಸಹಜ. ಯಾವ ದೇಶವಾಗಲೀ ಪರರು ತನ್ನ ಅಸ್ಮಿತೆಯನ್ನು ಪ್ರಶ್ನಿಸಿದರೆ ಸಹಿಸುವುದಿಲ್ಲ. ಆದರೆ ತನ್ನ ದೇಶದ ರಾಜಕೀಯವು ಧ್ರುವೀಕರಣದ ಕಡೆಗೆ ಅದರಲ್ಲೂ ಸರಕಾರದ ಹಸ್ತಕ್ಷೇಪದಿಂದಲೇ ಸರಿದಾಗ ಇತರ ದೇಶಗಳು ಮೇಲಾಗಿ ಶಕ್ತ ದೇಶಗಳು ಇವನ್ನು ಟೀಕಿಸುವ ಹಕ್ಕನ್ನು ಹೊಂದುತ್ತವೆ-ನಾವು ಇತರ ದೇಶಗಳ ಆಂತರಿಕ ಅನ್ಯಾಯಗಳನ್ನು ಟೀಕಿಸುತ್ತೇವಲ್ಲವೇ ಅಥವಾ ಅನಗತ್ಯ ಹಸ್ತಕ್ಷೇಪ ನಡೆಸುತ್ತೇವಲ್ಲವೇ, ಹಾಗೆ; ಪಾಕಿಸ್ತಾನದಲ್ಲಿ ಅಥವಾ ಬಾಂಗ್ಲಾದೇಶದಲ್ಲಿ ಹಿಂದೂ ಪೂಜಾಸ್ಥಾನಗಳ ಮೇಲೆ ಹಲ್ಲೆಯೋ ದಾಳಿಯೋ ನಡೆದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ, ನಮ್ಮ ಪ್ರಧಾನಿಗಳು ದೇಶದೊಳಗೆ ‘ಅಬ್ ಕೀ ಬಾರ್, ಮೋದಿ ಸರ್ಕಾರ್’ ಎಂದಂತೆ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದಾಗಲೂ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎನ್ನಲಿಲ್ಲವೇ, ಹಾಗೆ.

ಒಂದು ವೇಳೆ ಯಾವುದಾದರೂ ದೇಶವು ಹೀಗೆ ಟೀಕಿಸಿದಾಗ ಅವನ್ನು ಅಲ್ಲಗಳೆದರೂ ಇಂತಹ ಟೀಕೆಗಳ ಸತ್ಯಾಸತ್ಯತೆಯನ್ನು ಆತ್ಮಾವಲೋಕನ ಮಾಡಿ ಕೊಳ್ಳಬೇಕು. ಏಕೆಂದರೆ ಅಧಿಕಾರ ಬರುತ್ತದೆ, ಹೋಗುತ್ತದೆ, ನಾಯಕರು ಬರುತ್ತಾರೆ, ಹೋಗುತ್ತಾರೆ, ಆದರೆ ದೇಶದ ಘನತೆ ಶಾಶ್ವತವಾಗಿ ಉಳಿಯುವಂತೆ ನೋಡಿ ಕೊಳ್ಳುವುದು ಪ್ರತಿಯೊಂದು ದೇಶದ-ಅಂದರೆ ಅಲ್ಲಿನ ಸರಕಾರದ, ನಾಯಕರ, ವ್ಯವಸ್ಥೆಯ, ಸಮಾಜದ, ಪ್ರಜೆಗಳ ಕರ್ತವ್ಯ. ಹೀಗಲ್ಲದಿದ್ದರೆ ಉತ್ತರ ಕೊರಿಯಾದ ಸರ್ವಾಧಿಕಾರಿಯ ಹಾಗೆ ಯಾರೇ ಕೂಗಾಡಲಿ ನಮ್ಮ ನೆಮ್ಮದಿಗೆ ಭಂಗವಿಲ್ಲ.

ಅಮೆರಿಕದ ಈ ಶಾಸನಬದ್ಧ ಸಂಸ್ಥೆಯು ಭಾರತವನ್ನೊಂದೇ ಹೆಸರಿಸಿಲ್ಲ. ಭಾರತದ ಸುತ್ತಮುತ್ತ ಇರುವ ಪಾಕಿಸ್ತಾನ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಚೀನಾ, ರಶ್ಯ, ಇರಾನ್, ಸಿರಿಯಾ, ಉತ್ತರ ಕೊರಿಯಾ, ವಿಯೆಟ್ನಾಂ, ಸೌದಿ ಅರೇಬಿಯಾ, ನೈಜೀರಿಯಾ ಮುಂತಾದ ಒಟ್ಟು 15 ದೇಶಗಳನ್ನು ಹೆಸರಿಸಿದೆ. ಇವುಗಳಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳೂ ಇವೆ. ಈ ನಾಮಕರಣಕ್ಕೆ ಕಾರಣವೆಂದರೆ ‘ಇಲ್ಲಿನ ಸರಕಾರ(ಗಳು) ಕಾನೂನಿನ ಅಮಾನುಷ ಉಲ್ಲಂಘನೆಗಳಲ್ಲಿ ತೊಡಗಿವೆ ಇಲ್ಲವೇ ಸಹಿಸುತ್ತಿವೆ’. ಅದರಲ್ಲೂ ಭಾರತದ ಕುರಿತಂತೆ ‘2021ರಲ್ಲಿ ಧಾರ್ಮಿಕ ಸ್ವಾತಂತ್ರ ನಿಯಮಗಳು ಕೆಟ್ಟುಹೋಗಿವೆ. ಹಿಂದೂ ರಾಷ್ಟ್ರೀಯ ಕಾರ್ಯಸೂಚಿಯನ್ನು ಜಾರಿಗೆ ತರುವ ದುರಾವಸರದಲ್ಲಿ ಮುಸ್ಲಿಮ್, ಕ್ರೈಸ್ತ, ಸಿಖ್, ದಲಿತ ಮತ್ತಿತರ ಸಮೂಹಗಳನ್ನು ಋಣಾತ್ಮಕವಾಗಿ ಪ್ರಭಾವಿಸಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತರಹಿತ ಕೋಮು ದೃಷ್ಟಿಕೋನವನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಎಲ್ಲ ಹಂತಗಳಲ್ಲೂ ಪ್ರಯತ್ನಿಸಿದೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷಧೋರಣೆಯನ್ನು ತಾಳಿದೆ’ ಎಂದಿದೆ. ಅಸ್ಸಾಮಿನಲ್ಲಿ ಧರ್ಮ, ಕಾನೂನು ಮತ್ತು ನಾಗರಿಕ ಹಕ್ಕಿನ ವಿವಾದಗಳ ವ್ಯವಸ್ಥಿತ ಉಲ್ಲಂಘನೆಯನ್ನು ಹೆಸರಿಸಿದೆ. ವರದಿಯಲ್ಲಿ ಫಾ.ಸ್ಟಾನ್ ಸ್ವಾಮಿಯ ದಸ್ತಗಿರಿ ಮತ್ತು ಕಸ್ಟಡಿಯಲ್ಲೇ ಆದ ಅವರ ದುರಂತ ಅಂತ್ಯವನ್ನು ಉಲ್ಲೇಖಿಸಿದೆ. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರು ಭಾರತದಲ್ಲಿ ಯುಎಪಿಎ ಕಾನೂನಿನನ್ವಯ ಅತೀ ಹೆಚ್ಚು ದಸ್ತಗಿರಿ, ಪ್ರಕರಣಗಳು ಮತ್ತು ಉಲ್ಲಂಘನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿವೆಯೆಂಬುದನ್ನು ಹೇಳಿದ್ದನ್ನು ಈ ಆಯೋಗವು ಅಧರಿಸಿದೆ. ವಿದೇಶಿ ದೇಣಿಗೆಗಳನ್ನು ತನಿಖೆ ಮಾಡುವ ನೆಪದಲ್ಲಿ ನೂರಾರು ಸ್ವಯಂಸೇವಾ ಸಂಘಗಳಿಗೆ ಕಿರುಕುಳ ನೀಡಿ ಅವುಗಳ ಕೆಲಸ ಕಾರ್ಯಗಳಿಗೆ, ಪರವಾನಿಗೆಗಳಿಗೆ ಅಡ್ಡಿ-ತೊಡಕುಂಟುಮಾಡಿ ಶೋಷಿಸಿದೆ. ಅನೇಕ ಸಂಸ್ಥೆಗಳು ಈ ದಬ್ಬಾಳಿಕೆಯನ್ನೆದುರಿಸಲಾಗದೆ ಮುಚ್ಚಿಹೋಗಿವೆ. ಅನೇಕ ಬಿಜೆಪಿ ರಾಜ್ಯ ಸರಕಾರಗಳು ಬಲಾತ್ಕಾರದ ಅಂತರ್ಜಾತೀಯ ವಿವಾಹಗಳನ್ನು ನಿರ್ಬಂಧಿಸುವ ನೆಪ ಹೂಡಿ ಅಂತರ್ಜಾತೀಯ ದಂಪತಿಗಳ ಮೇಲೆ ದಮನಕಾರಿ ಕ್ರಮವನ್ನು ಹೇರಿವೆ. ಮತಾಂತರದ ಹೆಸರಿನಲ್ಲಿ ಚರ್ಚುಗಳ ತನಿಖೆ ಮಾಡಿವೆ. ಉತ್ತರ ಪ್ರದೇಶ ಸರಕಾರವು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ತಮ್ಮ ವಿರೋಧಿಗಳನ್ನು, ಪ್ರತಿಭಟನಾಕಾರರನ್ನು ದಮನಿಸಿದೆ. ಒಕ್ಕೂಟ ಸರಕಾರವು ಸಿಎಎ ಮತ್ತು ಎನ್‌ಆರ್‌ಸಿ ಮೂಲಕ ಜನರನ್ನು ಹೆದರಿಸುತ್ತಿದೆ. ಭಾಜಪ ಬೆಂಬಲಿತ ಮತ್ತು ಭಾಜಪವನ್ನು ಬೆಂಬಲಿಸುವ ಹಿಂದೂ ಮೂಲಭೂತವಾದಿ ಸಮೂಹದ ಮೂಲಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆದಾಗಲೂ ಪೊಲೀಸರು ಸುಮ್ಮನಿದ್ದಾರೆ, ಏಕೆಂದರೆ ಅವರನ್ನು ಸರಕಾರಗಳು ನಿರ್ವೀರ್ಯವಾಗಿಸಿವೆ. ಕೋವಿಡ್-19ರಂತಹ ಮಾರಕ ಸನ್ನೀವೇಶದಲ್ಲೂ ಧಾರ್ಮಿಕ ತಾರತಮ್ಯವನ್ನು ಸರಕಾರವೇ ಪ್ರಾಯೋಜಿಸಿತು ಎನ್ನುತ್ತದೆ ಈ ವರದಿ. ಇವೆಲ್ಲದರ ಜೊತೆಗೆ, ಸುಳ್ಳು ಸುದ್ದಿಗಳನ್ನು ಬೇಕೆಂದೇ ಹರಿಬಿಟ್ಟು ಜನರ ನಡುವಣ ಸಾಮರಸ್ಯಕ್ಕೆ ಧಕ್ಕೆ ತಂದಿದೆಯೆಂಬ ಅಂಶವನ್ನು ಹೆಳಿದೆ. ಅಮೆರಿಕವು ಭಾರತದೊಂದಿಗೆ ಸ್ಥಾಪಿಸಿದ ಸೌಹಾರ್ದ ಸಂಬಂಧವನ್ನು ಪ್ರಸ್ತಾವಿಸಿ, ಅಮೆರಿಕ ಸರಕಾರವು ಈ ಸಂಬಂಧವನ್ನುಪಯೋಗಿಸಿಕೊಂಡು ಭಾರತದಲ್ಲಿರುವ ಸ್ಥಿತಿಯನ್ನು ಸುಧಾರಿಸಲು ಕ್ರಮೈಗೊಳ್ಳಬೇಕೆಂದು ಸಲಹೆ ಮಾಡಿದೆ.

ಇವನ್ನು ಸುಳ್ಳೆಂದು ತಳ್ಳಿಹಾಕುವುದು, ತಿರಸ್ಕರಿಸುವುದು, ಒಂದು ರೀತಿಯ ಪ್ರತಿಕ್ರಿಯೆ. ಆದರೆ ಈ ವಿಚಾರಕ್ಕೆ ಇನ್ನೂ ಒಂದು ಮುಖವಿದೆ. ಪತ್ನಿಗೆ ಒಬ್ಬಾತ ಹೊಡೆಯುತ್ತಿದ್ದ. ಆಗ ದಾರಿಹೋಕನೊಬ್ಬ ಅದನ್ನು ತಡೆದನಂತೆ. ಆಗ ಆ ಪತಿವ್ರತೆ ‘ಹೊಡೆಯುವವನು ನನ್ನ ಗಂಡ, ಹೊಡೆಸಿಕೊಳ್ಳುವವಳು ನಾನು. ನಿನಗೇನು ನಷ್ಟ?’ ಎಂದಳು. ಆತ ‘ನನ್ನ ಕೆರದಲ್ಲಿ ನನಗೇ ಹೊಡೆದುಕೊಳ್ಳಬೇಕು’ ಎನ್ನುತ್ತ ನಡೆದ. ದೇಶದೊಳಗೆ ನಡೆಯುವ ಅಕ್ರಮಗಳನ್ನು ಇತರರು ಹೇಳಿದಾಗ ‘ನಮ್ಮ ದೇಶ, ನಮ್ಮ ಸರಕಾರ ಏನು ಮಾಡಿದರೂ ಅದನ್ನು ಅನುಭವಿಸುವವನು ನಾನು; ಪ್ರಶ್ನಿಸಲು ನಿಮಗೇನು ಹಕ್ಕಿದೆ?’ ಎಂಬ ದೇಶಭಕ್ತ ಧಾಟಿ ಅನೇಕರದ್ದು. ಈಗಲೂ ಅಷ್ಟೇ: ಜನರು ಕಾನೂನನ್ನು ಕೈಗೆತ್ತಿಕೊಂಡು ಸಮಾಜವನ್ನು ಅದರ ಧಾರ್ಮಿಕ/ಮತೀಯ/ಜಾತೀಯ ಸಾಮರಸ್ಯವನ್ನು ಒಡೆಯುವಾಗ ಮತ್ತು ಸರಕಾರವು ಅದಕ್ಕೆ ಪರೋಕ್ಷವಾಗಿ, ಕೆಲವೊಮ್ಮೆ ಪ್ರತ್ಯಕ್ಷವಾಗಿ ಬೆಂಬಲ ಮತ್ತು ಕುಮ್ಮಕ್ಕು ನೀಡಿದಾಗ ಅದನ್ನು ವೈಯಕ್ತಿಕ ಲಾಭಕ್ಕಾಗಿ, ಇಲ್ಲವೇ ಸ್ವಾರ್ಥಕ್ಕಾಗಿ, ಪಕ್ಷನಿಷ್ಠೆಗಾಗಿ, ಹೊಗಳುವವರಿಗೆ ಈ ತರ್ಕಗಳ್ಯಾವುವೂ ಅನ್ವಯಿಸುವುದಿಲ್ಲ. ಪಲ್ಲಟಗೊಂಡ ಇಂತಹ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸರಿ; ಒಟ್ಟಿನಲ್ಲಿ ಹೊಗಳು ಭಟರಿಗೆ, ವಂದಿ ಮಾಗಧರಿಗೆ ಇಲ್ಲಿ/ಇದು ಪುಣ್ಯ ಕಾಲ. ಜನರು ಗಮನಿಸದೆ ಇರುವ ಅಂಶವೆಂದರೆ ಇದು ಅನ್ಯ ಕೋಮಿನವರ ಕುರಿತ ದ್ವೇಷಮಾತ್ರವಲ್ಲ; ಸರಕಾರದ ಮತ್ತು ಆಳುವವರ ವಿರುದ್ಧವಿರುವ ಎಲ್ಲರ ಕುರಿತೂ ಕೀಳು ಮಟ್ಟದ, ವ್ಯಕ್ತಿಗತ ಸೇಡಿನ ಮನೋಭಾವವಿರುವುು.

ಧಾರ್ಮಿಕ ಸ್ವಾತಂತ್ರವು ಸಂವಿಧಾನ ಮೂಲವಾದದ್ದು. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯತೀತ ಎಂಬ ಪದಕ್ಕೆ ಅಧಿಕೃತವಾಗಿ ಸಹನಾತ್ಮಕವಾದ ‘ಸರ್ವಧರ್ಮ ಸಮಭಾವ’ ಎಂಬ ಪದವನ್ನು ಈ ದೇಶದ ಲಕ್ಷಣಗಳಲ್ಲೊಂದಾಗಿ ಮತ್ತು ಅದೇ ನಿಟ್ಟಿನಲ್ಲಿ ರಚಿಸಲು ಬದ್ಧವಾಗಿರುವ ಬಗ್ಗೆ ಸೂಚನೆಯಿದೆ. ಸರ್ವಧರ್ಮದ ಸಮಭಾವ ಎಂಬ ಪದವನ್ನು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಇಂದಿರಾ ಗಾಂಧಿ ಸೇರಿಸಿದರೆಂಬ ಆಪಾದನೆಯನ್ನು ಇಂದಿನ ಬಿಜೆಪಿ ಸರಕಾರ ಮಾಡುತ್ತಿದೆಯಾದರೂ ಅದು ಸಂವಿಧಾನದಲ್ಲಿ ಅಂತರ್ಗತವಾದ ಮೂಲತತ್ವವೆಂದು ಸರ್ವೋಚ್ಚ ನ್ಯಾಯಾಲಯ ಸಾಕಷ್ಟು ಬಾರಿ ಘೋಷಿಸಿದೆ. ದಡ್ಡರಿಗೆ ಇದು ಅರ್ಥವಾಗುವುದಿಲ್ಲವೋ ಅಥವಾ ದಡ್ಡರೆಂದು ನಾವು ಭಾವಿಸುವ ಮಂದಿ ಅರ್ಥವಾಗಿಯೂ ಅರ್ಥವಾಗದವರಂತೆ ನಟಿಸುವ ಧೂರ್ತರೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕಾಗಿದೆ. ಇವಿಷ್ಟೇ ಆಗಿದ್ದರೆ ಧಾರ್ಮಿಕ ಸ್ವಾತಂತ್ರವನ್ನು ಅಮೂರ್ತವೆಂದು ಭಾವಿಸಬಹುದಾಗಿತ್ತು. ಆದರೆ ಮುಂದಕ್ಕೆ 25ರಿಂದ 28ನೇ ವಿಧಿಗಳಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಯಾವುದೇ ಕಾನೂನು ಈ ಚೌಕಟ್ಟಿನೊಳಗೇ ಇರಬೇಕು. ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಬದಿಗಿಟ್ಟು ಚರ್ಚಿಸಿದಾಗಲೂ ಈ ಧಾರ್ಮಿಕ ಹಕ್ಕು ಎಲ್ಲರಿಗೂ ಸಮಾನವಾಗಿ, ಅಂದರೆ ಸಮಾನ ಅವಕಾಶಗಳನ್ನು ಹೊಂದಿ ಬದುಕುವ ಸಾಧ್ಯತೆಯನ್ನು ನೀಡಿದೆ. ಇದನ್ನು ಗೌರವಿಸುವುದು ಧಾರಾಳತನವಲ್ಲ; ಕರ್ತವ್ಯ. ಅದರಲ್ಲೂ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞಾವಿಧಿಯನ್ನು ಹೇಳಿ ಅಧಿಕಾರ ಸ್ವೀಕಾರ ಮಾಡುವ ಪ್ರತಿಯೊಬ್ಬ ಸರಕಾರಿ ಪ್ರತಿನಿಧಿ/ಅಧಿಕಾರಿಯೂ ಇದರಿಂದ ವಿಚಲಿತರಾಗುವುದೆಂದರೆ ಅದು ದೇಶದ್ರೋಹ. ಮೇಲಾಗಿ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಆದ್ದರಿಂದ ಅದನ್ನು ಖಂಡಿಸಬೇಕಾದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಕಳೆದ ಕೆಲವು ವರ್ಷಗಳಲ್ಲಿ ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನು ಭಾರತ ಶಿಥಿಲಗೊಳಿಸುತ್ತಿದೆ. ನಮ್ಮ ನ್ಯಾಯಾಲಯಗಳು ನಿಯಮಬದ್ಧವಾಗಿರುವುದರಿಂದ ಅವು ಸಾಕಷ್ಟು ತಾಳ್ಮೆಯನ್ನು ಪ್ರದರ್ಶಿಸುವುದು ಒಕ್ಕೂಟ ಸರಕಾರಕ್ಕೆ ಅನುಕೂಲವಾಗಿ ಪರಿಣಮಿಸಿದೆ. ಇದರ ಪರಿಣಾಮವೆಂದರೆ ಸರಕಾರವೇ ಅನಾಗರಿಕವಾಗಿ ವರ್ತಿಸುತ್ತಿರುವುದು. ವಿಧಿ 25ರಲ್ಲಿ ಹೇಳಿದಂತೆ ಪ್ರತಿಯೊಬ್ಬ ಪ್ರಜೆಯೂ ‘ಅಬಾಧಿತವಾಗಿ ಧರ್ಮವನ್ನು ಅವಲಂಬಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಪಡೆದಿರುತ್ತಾರೆ’. ಅಂತಃಕರಣ ಸ್ವಾತಂತ್ರವನ್ನು ಅರ್ಥೈಸಲು ಆಳುವವರಲ್ಲಿ ಅಂತಹ ಅಂತಃಕರಣವು ಬೇಕು. ಆದರೆ ಸರಕಾರವು ಮಾಡಬೇಕಾದ್ದನ್ನು ಮಾಡದೆ ಮಾಡಬಾರದ್ದನ್ನು ಮಾಡುತ್ತಿದೆ. ಉದಾಹರಣೆಗೆ ಈ ವಿಧಿಯಲ್ಲಿರುವ ‘ಸಮಾಜ ಕಲ್ಯಾಣಕ್ಕಾಗಿ ಮತ್ತು ಸುಧಾರಣೆಗಾಗಿ ಅಥವಾ ಸಾರ್ವಜನಿಕ ಸ್ವರೂಪದ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಹಿಂದೂಗಳ ಎಲ್ಲ ವರ್ಗ ಮತ್ತು ವಿಭಾಗಗಳಿಗೆ ತೆರೆದಿಡುವುದಕ್ಕಾಗಿ ಅವಕಾಶ ಮಾಡಿಕೊಡಲು’ ಸರಕಾರ ಹಕ್ಕು ನೀಡಬೇಕು. ಆದರೆ ಇಂದಿಗೂ ದಲಿತರಿಗೆ ಪ್ರವೇಶವಿಲ್ಲದ, ಅಕಸ್ಮಾತಾಗಿ ಶಾಸನದಲ್ಲಿ ಪ್ರವೇಶವನ್ನು ಒದಗಿಸಿದಾಗಲೂ ಪ್ರವೇಶಿಸಿದಾಗ ಅವರ ಮೇಲೆ ದೌರ್ಜನ್ಯ ನಡೆಯುವುದನ್ನು ಸರಕಾರ ಅಲಕ್ಷಿಸುತ್ತಿದೆ. ವಿಧಿ 28 (1)ರಲ್ಲಿ ಹೇಳಲಾದ ‘ರಾಜ್ಯ ನಿಧಿಗಳಿಂದ ಸಂಪೂರ್ಣವಾಗಿ ನಿರ್ವಹಿಸಲಾಗುತ್ತಿರುವ ಶೈಕ್ಷಣಿಕ ಸಂಸ್ಥೆಯಲ್ಲಿ ಯಾವುದೇ ಧಾರ್ಮಿಕ ಶಿಕ್ಷಣವನ್ನು ಒದಗಿಸುವಂತಿಲ್ಲ’ ಎಂದಿದ್ದರೂ ಭಾಜಪ ಸರಕಾರಗಳು ಚರ್ಚುಗಳನ್ನು, ಮದ್ರಸಗಳನ್ನು ಟೀಕಿಸುತ್ತಲೇ ‘ಭಗವದ್ಗೀತೆ’ಯನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಠ್ಯವಾಗಿಸಲು ಎಗ್ಗಿ ಲ್ಲದ ಪ್ರಯತ್ನವನ್ನು ನಡೆಸುತ್ತಿವೆ. ‘ಭೂತದ ಬಾಯಲ್ಲಿ ಭಗವದ್ಗೀತೆ’ಯೆಂಬ ಭಾರತೀಯ ಮಾತನ್ನು ಅಕ್ಷರಶಃ ಸತ್ಯವಾಗಿಸುತ್ತವೆ.

ಭಾರತೀಯತೆಯೆಂದರೆ ಮತೀಯತೆಯಲ್ಲ. ಸರಕಾರಕ್ಕೆ ಈ ದೇಶದಲ್ಲಿ ರಾಕ್ಷಸಾಕಾರವಾಗಿ ಬೆಳೆದಿರುವ, ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವ ಸಾಮರ್ಥ್ಯವಿಲ್ಲವೋ ಇಚ್ಛಾಶಕ್ತಿಯಿಲ್ಲವೋ ಎಂದು ಪರಿಶೀಲಿಸಿದರೆ ಎರಡೂ ಇಲ್ಲವೆಂದು ಕಾಣಿಸುತ್ತದೆ. ವಿಶೇಷವೆಂದರೆ ಇಲ್ಲಿರುವ ಯಾವ ಕ್ರಮವನ್ನೂ ಬೋಧಿಸದೆ, ಇತರರು ಮಾಡುವ ಆಚರಣೆಯನ್ನು ನಿಷೇಧಿಸಬೇಕು ಅಥವಾ ಅದಕ್ಕೆ ಪ್ರತಿಕ್ರಿಯೆಯಾಗಿ ನಾವೂ ಏನಾದರೂ ಮಾಡಬೇಕು ಎಂಬ ಹಿಂದೂ ಮೂಲಭೂತವಾದವನ್ನು ಸರಕಾರ ಬೆಂಬಲಿಸುತ್ತಿದೆ ಮತ್ತು ಪ್ರೋತ್ಸಾಹಿಸುತ್ತಿದೆ. ಹಿಜಾಬ್-ಕೇಸರಿ ಶಾಲು, ಅಝಾನ್-ಹನುಮಾನ್ ಚಾಲೀಸಾ ಹೀಗೆ ಸ್ವಂತಿಕೆಯಿಲ್ಲದೆ ವಿನಾಕಾರಣ ಅತೀ ಪ್ರತಿಕ್ರಿಯಾತ್ಮಕವಾಗಿ ಮುನ್ನುಗ್ಗುತ್ತಿದೆ. ಭಾರತೀಯತೆಯೆಂದರೆ ಹದಗೆಟ್ಟ ಅನೀತಿಯೆಂದು ವಿಶ್ವವೇ ಹೇಳುವವರೆಗೂ ಈ ಸಂಪ್ರದಾಯ ಮುಂದುವರಿಯಬಹುದು. ಇದಕ್ಕೆ ಯಾರು ಕಾರಣ? ಒಬ್ಬನೇ, ಒಂದು ಪಕ್ಷವೇ? ವ್ಯಕ್ತಿಯನ್ನೂ ಪಕ್ಷವನ್ನೂ ಕುುಡಾಗಿ ಬೆಂಬಲಿಸುವ ಕುರಿಮಂದೆಯೇ?

ನಾಯಕನು ಧೃತರಾಷ್ಟ್ರನಂತೆ ಕುರುಡನಾಗಿದ್ದರೆ ಆತನಿಗೆ ದುರ್ಯೋಧನ, ದುಃಶಾಸನರಂತಹ ನೂರು ಮಕ್ಕಳಿರುವುದು ಅಚ್ಚರಿಯ ವಿಷಯವೇನಲ್ಲ. ನಾಯಕನು ದುರ್ಬಲನಾಗಿದ್ದರೆ ಆತನಿಗೆ ಕೀಚಕನಂತಹ ನೀಚನೊಬ್ಬನು ಭಾವಮೈದುನನಾಗುವುದೂ ವಿಶೇಷವಲ್ಲ. ದ್ರೌಪದಿಯನ್ನು ಕೀಚಕನು ಪೀಡಿಸುವ ಮಹಾಭಾರತದ ವಿರಾಟಪರ್ವದ ಪ್ರಸಂಗದಲ್ಲಿ ವ್ಯಾಸರೇ ‘ರಾಜನು ದುರ್ಬಲನಾದರೆ ಅ ರಾಜ್ಯದಲ್ಲಿ ಎಂತಹ ಅಧರ್ಮ ಕಾರ್ಯಗಳು ನಡೆಯುತ್ತವೆಂಬುದಕ್ಕೆ ಇದು ಪ್ರತ್ಯಕ್ಷ ನಿದರ್ಶನವಾಗಿದೆ’ ಎಂದು ಬರೆದರು. ಅವರು ಇಂದೂ ಇದನ್ನೇ ಹೇಳುತ್ತಿದ್ದರೇನೋ? ತನ್ನ ಕಾಲದ ಅನ್ಯಾಯ ಅಕ್ರಮಗಳನ್ನು ಲೋಕಕ್ಕೆ ಹೇಳುವ ವ್ಯಾಸರಂತಹ ವ್ಯಕ್ತಿಗಳು ಅಮರರಾದರೂ ಅವ್ಯಕ್ತರಾದದ್ದೇ ಇಂದಿನ ಶೋಚನೀಯ ಸ್ಥಿತಿಗೆ ಕಾರಣವಿರಬಹುದು. ಭಾರತೀಯ ತತ್ವ ಸಿದ್ಧಾಂತವನ್ನು ಹೇಳುವ ಯಾವ ವ್ಯಕ್ತಿ-ಸಂಘಟನೆಯೂ ನಮ್ಮ ಬೇರುಗಳಿಗೆ ನೀರೆರೆಯುವುದಿಲ್ಲ. ಬದಲಾಗಿ ಅವನ್ನು ತಿಂದು ಉನ್ಮಾದದ ಸುಖವನ್ನು ಪಡೆದು ನಾಶವನ್ನು ನೋಡಿ ಆನಂದಿಸುತ್ತವೆ. ಅವಕ್ಕೆ ಶೂನ್ಯಶಿಬಿರವೇ ಅರಮನೆ; ಹಿಂಸೆಯೇ ಒಡ್ಡೋಲಗ; ಗೋಡ್ಸೆ-ಗೋಬೆಲ್‌ಗಳೇ ದೇವರುಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)