ಮೇ 1ರಿಂದ 3ರವರೆಗೆ ಶಿರ್ಲಾಲು ಬಸದಿ ರಜತ ರಥೋತ್ಸವ - ಮಹಾಮಸ್ತಕಾಭಿಷೇಕ
ಕಾರ್ಕಳ, ಎ.29: ಅನಂತನಾಥ ಸ್ವಾಮಿ ಬಸದಿ ಶ್ರೀ ಸಿದ್ದಗಿರಿ ಕ್ಷೇತ್ರದ ರಜತ ರಥೋತ್ಸವ ಮತ್ತು ಮಹಾಮಸ್ತಕಾಭಿಷೇಕ ಮೇ 1ರಿಂದ 3ರವರೆಗೆ ನಡೆಯಲಿದೆ ಎಂದು ಬಸದಿ ಆಡಳಿತ ಸಮಿತಿಯ ಉಪಾಧ್ಯಕ್ಷ ಸನತ್ ಕುಮಾರ್ ಜೈನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶ್ರವಣಬೆಳಗೋಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯ ಆಶೀರ್ವಾದದೊಂದಿಗೆ ಕಾರ್ಕಳ ಶ್ರೀ ಜೈನಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಶ್ರೀ ಕ್ಷೇತ್ರ ಕಂಬದಹಳ್ಳಿಯ ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು ಆಶೀರ್ವಚನ ನೀಡಲಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆ ಮಾರ್ಗದರ್ಶನ ನೀಡಲಿದ್ದು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಭಗವಾನ್ ಆದಿನಾಥ ಸ್ವಾಮಿ, ಭಗವಾನ್ ಬಾಹುಬಲಿ ಸ್ವಾಮಿ, ಭಗವಾನ್ ಭರತ ಸ್ವಾಮಿ ಮೂರ್ತಿ ಇರುವ ಕರ್ನಾಟಕದ ಏಕೈಕ ಬಸದಿ ಇದಾಗಿದೆ ಎಂದು ಸನತ್ ಕುಮಾರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಸದಿ ಆಡಳಿತ ಸಮಿತಿ ಅಧ್ಯಕ್ಷ ಡಾ.ಮಹಾವೀರ ಜೈನ್, ಕಾರ್ಯದರ್ಶಿ ಸುದರ್ಶನ ಅತಿಕಾರಿ, ಅನಂತ್ರಾಜ ಪೂವಣಿ ಉಪಸ್ಥಿತರಿದ್ದರು.