ಉಡುಪಿ: ಉಷ್ಣತೆ 35 ಡಿಗ್ರಿ ಸೆಲ್ಶಿಯಸ್; ಆದರೆ 42-44 ಡಿಗ್ರಿಯ ಅನುಭವ
ಉಡುಪಿ : ಮಾನವನ ಬದುಕಿನ ಮೂಲಾಧಾರವಾದ ಭೂಮಿ ಮತ್ತು ಸೂರ್ಯ ಉರಿಯುವ ಕೆಂಡದಂತಾಗಿದೆ. ಬೇಸಿಗೆಯ ಬಿರುಬಿಸಿಲಿನ ಝಳ ದಿನದಿಂದ ದಿನಕ್ಕೆ ಸಹಿಸಲಸಾಧ್ಯವೆಂಬಂತಾಗುತ್ತಿದೆ. ಉಡುಪಿ ಜಿಲ್ಲೆಯ ಜನತೆ ಇನ್ನೂ ಕನಿಷ್ಠ 20ರಿಂದ 25 ದಿನ ಇದೇ ಬಿರುಬಿಸಿಲನ್ನು ಸಹಿಸಿಕೊಂಡು ಬದುಕ ಬೇಕಾಗಿದೆ.
ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯ ಉಷ್ಣಮಾನ 34ರಿಂದ 35 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿದೆ. ಅಧಿಕೃತವಾಗಿ ನಿನ್ನೆಯ ಗರಿಷ್ಠ ಉಷ್ಣಾಂಶ 35.4 ಡಿಗ್ರಿ ಸೆ. ಆದರೆ ಕನಿಷ್ಠ 25.4 ಡಿಗ್ರಿ. ಅದೇ ಶುಕ್ರವಾರ ಗರಿಷ್ಠ 35 ಹಾಗೂ ಕನಿಷ್ಠ 24 ಡಿಗ್ರಿ ಇರಬಹುದು ಎಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಜಿಕೆಎಂಎಸ್ ವಿಭಾಗದ ತಾಂತ್ರಿಕ ಅಧಿಕಾರಿ ಪ್ರವೀಣ್ ಕೆ.ಎಂ.ತಿಳಿಸಿದರು.
ಆದರೆ ಜಿಲ್ಲೆಯ ಉಷ್ಣಾಂಶ 34 ರಿಂದ 35 ಡಿಗ್ರಿ ಆಸುಪಾಸಿನಲ್ಲಿದ್ದರೂ, ಮನೆಯಿಂದ ಹೊರಗೆ ತಲೆಹಾಕಿದರೆ, ವಾತಾವರಣದ ಉಷ್ಣಾಂಶ 42 ರಿಂದ 44 ಡಿಗ್ರಿಯವರೆಗೆ ಇರುವ ಅನುಭವವಾಗುತ್ತದೆ. ಉಷ್ಣತೆ ಅಥವಾ ಶಾಖ ಅಷ್ಟೊಂದು ತೀಕ್ಷ್ಣತೆಯನ್ನು ಹೊಂದಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಇದಕ್ಕೆ ಗಾಳಿಯಲ್ಲಿರುವ ತೇವಾಂಶದ ಅಂಶ ಕಡಿಮೆಯಾಗಿರುವುದೇ ಕಾರಣ ಎಂದು ಮಣಿಪಾಲ ಎಂಐಟಿಯ ಭೂವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಆರ್.ಉದಯಶಂಕರ ಭಟ್ ಹೇಳುತ್ತಾರೆ.
ಉಷ್ಣತಾಮಾನ ಇಷ್ಟೊಂದು ತೀವ್ರವಾಗಿ ಕಾಡಲು ಹವಾಮಾನ ವೈಫರಿತ್ಯವೇ ಕಾರಣ. ಭೂಮಿಯ ಹಸಿರು ವಲಯವನ್ನು ನಾಶ ಮಾಡಿದ ಮೇಲೆ, ನಗರ ಪ್ರದೇಶದೊಳಗಿನ ಮರಗಳನ್ನು ಬೇಕಾಬಿಟ್ಟಿ ಕಡಿದು ಉರುಳಿಸಿದ ಮೇಲೆ ಉಷ್ಣತೆಯಲ್ಲಿ 2 ಡಿಗ್ರಿಗಳಷ್ಟು ಹೆಚ್ಟಳವಾಗಿರುವುದನ್ನು ಗಮನಿಸಲಾಗಿದೆ ಎಂದವರು ನುಡಿದರು.
ಭೂಮಿಯ ಹಸಿರುವಲಯ ನಾಶವಾಗುವುದರೊಂದಿಗೆ ಕಂಡಕಂಡಲ್ಲಿ ಕಾಂಕ್ರಿಟೀಕರಣ, ಇಂಟರ್‌ಲಾಕ್‌ನ ಅಳವಡಿಕೆ ಹಾಗೂ ಪೇವ್‌ಮೆಂಟ್‌ನ ರಚನೆ ಉಷ್ಣತೆಯ ಹೆಚ್ಚಳ ಹಾಗೂ ಅದರ ತೀಕ್ಷ್ಮತೆಯ ವೃದ್ಧಿಗೆ ಪ್ರಮುಖ ಕಾರಣ ಎಂದವರು ಹೇಳುತ್ತಾರೆ. ಇಂದು ಸಹ ನೀವು ಮಣ್ಣಿನ ದಾರಿಯಲ್ಲಿ, ಹುಲ್ಲಿನ ಮೇಲೆ ಹಾಗೂ ಕಾಂಕ್ರಿಟ್ ರಸ್ತೆಯ ಮೇಲೆ ನಡೆದುನೋಡಿ. ನಿಮಗೆ ಇದರ ವ್ಯತ್ಯಾಸ ದಟ್ಟವಾಗಿ ಹಾಗೂ ಅಷ್ಟೇ ತೀಕ್ಷ್ಣವಾಗಿ ಗಮನಕ್ಕೆ ಬರುತ್ತದೆ ಎಂದವರು ಹೇಳುತ್ತಾರೆ.
ಗರಿಷ್ಠ ಉಷ್ಣಾಂಶ 36 ಡಿಗ್ರಿ: ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಜಿಕೆಎಂಎಸ್ ವಿಭಾಗದಲ್ಲಿ ಜಿಲ್ಲೆಯ ದಿನ ದಿನದ ಉಷ್ಣಾಂಶವನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಇದನ್ನು ಜಿಲ್ಲೆಯ ಉಷ್ಣಾಂಶವೆಂದು ಪರಿಗಣಿಸಲಾಗುತ್ತದೆ. ಇಲ್ಲಿನ ದಾಖಲೆಗಳ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಉಡುಪಿ ಜಿಲ್ಲೆಯ ಗರಿಷ್ಠ ಉಷ್ಣಾಂಶ ದಾಖಲಾಗಿರುವುದು 2013ರ ಎಪ್ರಿಲ್ ತಿಂಗಳಲ್ಲಿ. ಅಂದು 36.08 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಜಿಲ್ಲೆಯಲ್ಲಿ ಇದುವರೆಗೆ ದಾಖಲಾಗಿರುವ ಗರಿಷ್ಠ ಉಷ್ಣಾಂಶವಾಗಿದೆ.
ಗರಿಷ್ಠ ಉಷ್ಣಾಂಶದ ಮೂರು ದಾಖಲೆಗಳು 2013ರಲ್ಲಿ (ಮಾರ್ಚ್ ೩೫.೫೬, ಎಪ್ರಿಲ್ ೩೬.೦೮, ಮೇ ೩೫.೯೬ ಡಿಗ್ರಿ) ದಾಖಲಾಗಿವೆ ಎಂದು ಪ್ರವೀಣ್ ಕೆ.ಎಂ. ತಿಳಿಸಿದರು. ಪ್ರವೀಣ್ ಪ್ರಕಾರ, ವಾತಾವರಣದಲ್ಲಿ ಶೇ. 48ರಷ್ಟು ತೇವಾಂಶವಿದ್ದರೆ ತಾಪಮಾನ ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ಇರುತ್ತದೆ.
ಎದುರಿಸುವುದು ಹೇಗೆ?
ಬಿಸಿಲಿನ ಝಳದಿಂದ ಕೂಲಿಕಾರ್ಮಿಕರು ಹೆಚ್ಚು ತೊಂದರೆಗೊಳಗಾಗುತ್ತಾರೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬೀಸುವ ಬಿಸಿಗಾಳಿ ಹೊರಗೆ ಕೆಲಸ ಮಾಡುವ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ಪಾರಾಗಲು ಹೆಚ್ಚು ಹೆಚ್ಚು ಶುದ್ಧ ನೀರು ಕುಡಿಯಬೇಕು. ದಿನಕ್ಕೆ 3ರಿಂದ 5ಲೀ.ನೀರನ್ನು ಸೇವಿಸಬೇಕಾಗುತ್ತದೆ.
ಈ ಬಾರಿಯ ಒಂದು ಅನುಕೂಲವೆಂದರೆ ಅಂತರ್ಜಲ ಕಡಿಮೆಯಾಗದಿರುವುದು. ಈ ವರ್ಷ ಜನವರಿಯಲ್ಲೂ ಮಳೆ ಬಿದ್ದಿರುವುದರಿಂದ ಜಿಲ್ಲೆಯ ಎಲ್ಲಾ ನದಿ, ಕೆರೆ, ಬಾವಿಗಳಲ್ಲಿ ಸಾಕಷ್ಟು ನೀರು ಇನ್ನೂ ಇದೆ. ಹೀಗಾಗಿ ಕುಡಿಯುವ ನೀರಿಗೆ ಸಮಸ್ಯೆ ಸದ್ಯಕ್ಕೆ ಕಂಡುಬಂದಿಲ್ಲ. ಆದರೆ ಈ ಬಿರುಬೇಸಿಗೆ ಇನ್ನೂ 20 ರಿಂದ 30ದಿನಗಳಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ಡಾ.ಉದಯ ಶಂಕರ ಭಟ್ ಹೇಳುತ್ತಾರೆ.
ಜಿಲ್ಲೆಯಲ್ಲಿ ಕಳೆದ ವರ್ಷ ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಟ್ಟು ೫೦೨.೫ಮಿ.ಮೀ ಮಳೆಯಾಗಿದ್ದರೆ, ಈ ವರ್ಷ ಇದುವರೆಗೆ (ಎ.೨೯) ಆಗಿರುವುದು ಕೇವಲ ೧೦೬.೫ಮಿ.ಮೀ ಮಾತ್ರ. ಮೇ ತಿಂಗಳ ಮಳೆಯನ್ನು ಕಾದು ನೋಡಬೇಕಿದೆ ಎಂದು ಪ್ರವೀಣ್ ತಿಳಿಸಿದರು.
ʼʼಬಿರುಬಿಸಿಲಿನ ಝಳವನ್ನು ತಡೆಯಲು ಹೆಚ್ಚು ಹೆಚ್ಚು ಶುದ್ಧ ನೀರನ್ನು ಕುಡಿಯಿರಿ. ಉಷ್ಣತೆಯನ್ನು ತಡೆದುಕೊಳ್ಳಲು ಹೊರಹೋಗುವಾಗ ತಲೆಯ ಮೇಲೊಂದು ಟೊಪ್ಪಿಯೊ ಅಥವಾ ಬೇರೇನಾದರೂ ಹಾಕಿಕೊಳ್ಳಿ. ಮಾನವನ ದೇಹ ೩೬ಡಿಗ್ರಿ ಸೆಲ್ಷಿಯಸ್ ಉಷ್ಣತೆಯನ್ನು ತಡೆದುಕೊಳ್ಳುತ್ತದೆ. ಅದಕ್ಕಿಂತ ಹೆಚ್ಚಾದರೆ ಜಾಗೃತೆ ವಹಿಸಬೇಕಾಗುತ್ತದೆ. ಮರಗಿಡಗಳಿರುವಲ್ಲಿ, ಮಣ್ಣಿನ ಮೇಲೆ ನಡೆಯಬೇಕು.
-ಡಾ.ಉದಯಶಂಕರ್ ಭಟ್, ಭೂವಿಜ್ಞಾನಿ, ನಿವೃತ್ತ ಪ್ರಾಧ್ಯಾಪಕ ಮಣಿಪಾಲ
ʼʼಸೆಕೆ, ದಾಹ ಎಂದು ಕಂಡ ಕಂಡ ನೀರು, ತಂಪು ಪಾನೀಯ ಕುಡಿಯಬೇಡಿ. ಕುದಿಸಿ ಆರಿಸಿದ ನೀರನ್ನೇ ಹೆಚ್ಚಾಗಿ ಕುಡಿಯಿರಿ. ಬೇಸಿಗೆಯಲ್ಲಿ ತಣ್ಣೀರಿಗಿಂತ ಬಿಸಿನೀರ ಸ್ನಾನವೇ ದೇಹಕ್ಕೆ ಒಳ್ಳೇದುʼʼ.
ಡಾ.ಕೆ.ಕೆ.ಕಲ್ಕೂರ, ನಿವೃತ್ತ ಡಿಎಚ್‌ಓ ಉಡುಪಿ
ಬೇಸಿಗೆಯ ಝಳದಲ್ಲಿ ಇದನ್ನು ನೆನಪಿಡಿ...
*ಮನುಷ್ಯರಂತೆ ಪ್ರಾಣಿ, ಪಕ್ಷಿಗಳೂ ಬಿರುಬೇಸಿಗೆಯಿಂದ ಬಳಲುತ್ತವೆ. ಅವುಗಳಿಗೂ ಕುಡಿಯಲು ನೀರಿಡೋದನ್ನು ಮರೆಯಬೇಡಿ.
*ಸೀಯಾಳ, ಪಪ್ಪಾಯಿ, ಕಲ್ಲಂಗಡಿ, ಖರ್ಬೂಜ ಹಣ್ಣು, ಇಬ್ಬುಳ ಸೇವನೆ ದೇಹಕ್ಕೆ ಒಳಿತು.
*ಬೆವರಿದರೂ ಸ್ನಾನ ಮಾಡದಿದ್ದರೆ ರೋಮರಂಧ್ರಗಳಿಂದ ಜಿಡ್ಡು ಹೊರಬಂದು ಧೂಳಿಗೆ ಮುಚ್ಚಿ ತುರಿಕೆಯಾಗುತ್ತದೆ. ಬೆವರು ಸಾಲೆ, ಕಜ್ಜಿ, ತೊಡೆಸಂಧಿಯಲ್ಲಿ ಕೆರೆತವೆಲ್ಲವೂ ಹೆಚ್ಚುತ್ತವೆ. ಇದಕ್ಕೆ ಚರ್ಮರೋಗ ತಜ್ಞರನ್ನು ಕಾಣುವುದೇ ಒಳಿತು.