ನಿರಂತರ ವಿದ್ಯುತ್ ಕಡಿತ: ಬಿಸಿಲ ತಾಪಕ್ಕೆ ಒಣಗುತ್ತಿರುವ ಬೆಳೆಗಳು
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ರಾಜ್ಯಾದ್ಯಂತ ಬಿಸಿಲಿನ ಝಳ ಹೆಚ್ಚಾಗಿ ಸಾರ್ವಜನಿಕರು ಸಂಕಟ ಅನುಭವಿಸುತ್ತಿರುವುದು ಒಂದೆಡೆಯಾದರೇ ಬಿಸಿಲ ತಾಪಕ್ಕೆ ರೈತರು ಬೆಳೆದ ಬೆಳೆ ಒಣಗಿ ಹೋಗುತ್ತಿರುವ ದೃಶ್ಯಗಳು ಕಾಫಿನಾಡಿನ ರೈತರನ್ನು ಚಿಂತೆಗೀಡು ಮಾಡಿದೆ. ಜಿಲ್ಲೆಯ ಬಯಲು ಭಾಗದ ರೈತರು ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆ ಕಣ್ಣೆದುರೇ ಒಣಗುತ್ತಿರುವುದನ್ನು ಕಂಡು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ನಿರಂತರ ವಿದ್ಯುತ್ ಕಡಿತದಿಂದಾಗಿ ಕೊಳೆವೆಬಾವಿಗಳಿಂದ ಬೆಳೆಗಳಿಗೆ ನೀರು ಪೂರೈಸಲಾಗದೇ ರೈತರು ಸರಕಾರ ಹಾಗೂ ಮೆಸ್ಕಾಂ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹೌದು... ಕಾಫಿನಾಡು ತಂಪಿನ ವಾತಾವರಣಕ್ಕೆ ಹೆಸರಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಚಿಕ್ಕಮಗಳೂರು ಜಿಲ್ಲೆಯೂ ಬಿಸಿಲ ಝಳಕ್ಕೆ ಕಾದ ಕೆಂಡದಂತಾಗುತ್ತಿದೆ. ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ತಂಪುಪಾನೀಯ, ಎಳನೀರಿನ ಮೊರೆ ಹೋಗುತ್ತಿರುವುದು ಒಂದೆಡೆಯಾದರೇ ಜಿಲ್ಲೆಯ ಬಯಲುಸೀಮೆ ಭಾಗದ ತಾಲೂಕುಗಳಾದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಲಕ್ಯಾ, ಅಂಬಳೆ, ಚಿಕ್ಕಮಗಳೂರು ಕಸಬ ಹೋಬಳಿ ವ್ಯಾಪ್ತಿಯಲ್ಲಿ ರೈತರು ಬೆಳೆದ ಬೆಳೆ ಬಿಸಿಲ ತಾಪಕ್ಕೆ ಸೊರಗಿ ಹೋಗುತ್ತಿದ್ದು, ಇದು ಈ ಭಾಗದ ರೈತರನ್ನು ಚಿಂತೆಗೀಡು ಮಾಡುತ್ತಿದೆ.
ಜಿಲ್ಲೆಯ ಬಯಲು ಭಾಗದ ರೈತರು ಹೆಚ್ಚಾಗಿ ತರಕಾರಿ, ಜೋಳ, ರಾಗಿ, ಟೊಮಾಟೊ, ನೆಲಗಡಲೆಯಂತಹ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ನೀರಾವರಿ ಸೌಲಭ್ಯ ಇಲ್ಲದ ಪರಿಣಾಮ ಇಲ್ಲಿನ ರೈತರು ಬೇಸಿಗೆಯಲ್ಲಿ ಕೊಳವೆ ಭಾವಿಯನ್ನು ಅವಲಂಭಿಸಿ ಕೃಷಿ ಮಾಡುವುದು ವಾಡಿಕೆಯಾಗಿದೆ. ಅದರಂತೆ ಈ ಬಾರಿಯೂ ಬಯಲು ಭಾಗದ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಈ ಬೆಳೆಗಳನ್ನು ರಕ್ಷಿಸಲು ರೈತರು ಕೊಳವೆ ಭಾವಿಗಳಿಂದ ನೀರು ಪೂರೈಕೆ ಮಾಡಬೇಕಿದ್ದು, ಸದ್ಯ ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಕಡಿತದಿಂದಾಗಿ ಕೊಳವೆ ಬಾವಿಗಳ ವಿದ್ಯುತ್ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಇಲ್ಲದೇ ರೈತರು ಬೆಳೆಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬಯಲು ಭಾಗದಲ್ಲಿನ ಭಾರೀ ತಾಪಮಾನಕ್ಕೆ ಸಿಲುಕಿ ಪ್ರತೀ ಎಕರೆಯಲ್ಲಿ ಬೆಳೆದಿರುವ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ರೈತರ ಕಣ್ಣೆದುರೇ ಒಣಗಲಾರಂಭಿಸಿವೆ.
ಸುಳ್ಳಾದ ಇಂಧನ ಸಚಿವರ ಭರವಸೆ: ಚಿಕ್ಕಮಗಳೂರು ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಇಂಧನ ಸಚಿವ ಸುನೀಲ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ರೈತರ ಪಂಪ್ಸೆಟ್ಗಳಿಗೆ 10 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿ ಹೋಗಿದ್ದರು. ಆದರೆ ಈ ಭರವಸೆಯನ್ನು ಈಡೇರಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆಂದು ರೈತರು ಆರೋಪಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸತತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. 2-3 ಗಂಟೆಗಲ ಕಾಲ ವಿದ್ಯುತ್ ಪೂರೈಕೆ ಮಾಡಿ ಮತ್ತೆ ಕಡಿತ ಮಾಡಲಾಗುತ್ತಿದೆ. ಅನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳಿಗೆ ಸಕಾಲದಲ್ಲಿ ವಿದ್ಯುತ್ ಪಂಪ್ಸೆಟ್ ಬಳಸಿಕೊಂಡು ನೀರು ಪೂರೈಕೆ ಮಾಡಲಾಗುತ್ತಿಲ್ಲ. ಸಕಾಲದಲ್ಲಿ ನೀರು ಸಿಗದೆ ಬೆಳೆಗಳು ಒಣಗಲಾರಂಭಿಸಿವೆ. ಇಂಧನ ಸಚಿವರು ತಮ್ಮ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದು, ರೈತರನ್ನು ವಂಚಿಸಿದ್ದಾರೆ ಎಂದು ಬಯಲು ಭಾಗದ ರೈತರು ಸರಕಾರ ಹಾಗೂ ಇಂಧನ ಇಲಾಖೆ ಸಚಿವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಕಾಫಿ, ಅಡಿಕೆ ತೋಟಗಳಿಗೆ ಕೊಂಚವಾದರೂ ನೀರು ಪೂರೈಕೆಯಾದಂತಾಗಿದೆ. ಆದರೆ ಜಿಲ್ಲೆಯ ಬಯಲು ಭಾಗದಲ್ಲಿ ಮಳೆ ಇನ್ನೂ ಬಾರದ ಪರಿಣಾಮ ಬೆಳೆದ ಬೆಳೆ ನೀರಿನ ಪೂರೈಕೆ ಇಲ್ಲದೇ ಒಣಗಲಾರಂಭಿಸಿವೆ.
------------------------------
ಕೊಳವೆ ಬಾವಿಗಳನ್ನು ನಂಬಿ ತರಕಾರಿ, ರಾಗಿ, ಜೋಳ, ಕೋಸು ಮತ್ತಿತರ ಬೆಳೆಗಳನ್ನು ಬೆಳೆದಿದ್ದೇವೆ, ಹಿರೇಗೌಜ, ಲಕ್ಯಾ ಭಾಗದಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ನೀರಿಲ್ಲದೇ ಒಣಗಲಾರಂಭಿಸಿವೆ. ಸರಕಾರ ಕೂಡಲೇ ರೈತರ ಪಂಪ್ಸೆಟ್ಗಳಿಗೆ ಕನಿಷ್ಠ 10 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲೇಬೇಕು. ತಪ್ಪಿದಲ್ಲಿ ಸಾಲ ಮಾಡಿ ಕೃಷಿ ಮಾಡಿದ ರೈತರು ಆತ್ಮಹತ್ಯೆಗೆ ಶರಣಾಗುವುದು ಖಚಿತ. ಇದಕ್ಕೆ ಸರಕಾರ ಹಾಗೂ ಇಂಧನ ಇಲಾಖೆ ಸಚಿವರೇ ನೇರ ಹೊಣೆಗಾರರಾಗಲಿದ್ದಾರೆ.
- ಶಿವಕುಮಾರ್, ಹಿರೇಗೌಜ ಗ್ರಾಪಂ ಸದಸ್ಯ