ಸಂತೋಷ ಮತ್ತು ಸೌಹಾರ್ದ ಸಾರುವ ಈದುಲ್ ಫಿತ್ರ್

ಈದ್ ಎಂದರೆ ಮರುಕಳಿಸುವ ಸಂತೋಷ. ಪ್ರತಿ ವರ್ಷ ರಮಝಾನ್ ತಿಂಗಳಿನ ಅಂತ್ಯದಲ್ಲಿ ಬರುವ ಸಂತೋಷದ ದಿನ ಈಗ ಮತ್ತೆ ಬಂದಿದೆ. ಈ ಹಬ್ಬವನ್ನು ‘ಈದುಲ್ ಫಿತ್ರ್’ ಅಥವಾ ಪಾರಣೆಯ ಹಬ್ಬ ಎಂದು ಕರೆಯುತ್ತಾರೆ.
ಇಸ್ಲಾಮಿನಲ್ಲಿ ಎರಡು ಹಬ್ಬಗಳಿವೆ. ಒಂದು ರಮಝಾನ್ ತಿಂಗಳ ಅಂತ್ಯದಲ್ಲಿ ಬರುವ ‘ಈದುಲ್ ಫಿತ್ರ್’ ಇನ್ನೊಂದು ಚಾಂದ್ರಮಾನ ಮಾಸದ ಹನ್ನೆರಡನೇ ತಿಂಗಳಾದ ‘ದುಲ್ಹಜ್‌ನ’ ಹತ್ತನೇ ತಾರೀಕಿನಂದು ಆಚರಿಸಲ್ಪಡುವ ‘ಈದುಲ್ ಅಝ್‌ಹಾ’ ಅಥವಾ ತ್ಯಾಗ ಬಲಿದಾನದ ಹಬ್ಬ. ಬೇರೆ ಹಬ್ಬಗಳಿಗೆ ಹೋಲಿಸಿದರೆ ಇಸ್ಲಾಮಿನ ಎರಡು ಹಬ್ಬಗಳಿಗೆ ಒಂದು ವಿಶೇಷತೆ ಇದೆ. ಇದು ಯಾವುದೇ ಮಹಾ ಪುರುಷರ ಜನ್ಮದಿನದಂದು ಆಚರಿಸಲ್ಪಡುವ ಹಬ್ಬವಲ್ಲ. ಯಾವುದೇ ಪ್ರಾದೇಶಿಕತೆಯ ಛಾಪು ಇರುವ ಹಬ್ಬಗಳಲ್ಲ. ಬದಲಾಗಿ ವಿಶ್ವದ ಎಲ್ಲಾ ಕಡೆ ಸಮಾನವಾದ ಮೂಲಭೂತ ಆಚರಣೆಗಳೊಂದಿಗೆ ಆಚರಿಸಲ್ಪಡುವ ನಿಸ್ಸೀಮವಾದ ಮಾನವೀಯ ಸಂದೇಶಗಳನ್ನು ಸಾರುವ, ಮಾನವನ ಸಂತೋಷಕ್ಕೆ ಬೇಕಾದ ಅತ್ಯಂತ ಪ್ರಮುಖ ಮೌಲ್ಯಗಳನ್ನು ಸಾರುವ ಹಬ್ಬಗಳಾಗಿವೆ.
ರಮಝಾನ್ ತಿಂಗಳ ನಿರಂತರ ಉಪವಾಸ ಮಾನವ ಸಂತೋಷ ಪಡಲು ಬೇಕಾದ ಹಲವಾರು ಉನ್ನತ ಮೌಲ್ಯಗಳನ್ನು ಬೆಳೆಸುತ್ತದೆ. ಜಗತ್ತ್ತಿನ ಮುಸ್ಲಿಮರ ಪೈಕಿ ಹೆಚ್ಚಿನವರು ಬಹಳ ಕಟ್ಟುನಿಟ್ಟಾಗಿ ಯಾವುದೇ ಚ್ಯುತಿಯಾಗದಂತೆ ಆಚರಿಸುವ ಒಂದು ಅರಾಧನಾ ಕರ್ಮವೆಂದರೆ ಉಪವಾಸ ವ್ರತ. ರಮಝಾನ್ ತಿಂಗಳು ಚಾಂದ್ರಮಾನ ಮಾಸವಾಗಿರುವುದರಿಂದ ಅದು ಜಗತ್ತಿನ ಎಲ್ಲೆಡೆ ಬೇರೆ ಬೇರೆ ಋತುಗಳಲ್ಲಿ ಬರುತ್ತದೆ. ಈ ವರ್ಷ ನ್ಯೂಝಿಲ್ಯಾಂಡ್, ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಕಡಿಮೆ ಅವಧಿಯ ಉಪವಾಸ ವ್ರತವಿದೆ. ಅಂದರೆ ಸುಮಾರು 11-12 ಗಂಟೆಗಳ ಉಪವಾಸ ವ್ರತವಿದೆ. ಅಮೆರಿಕ, ಇಂಗ್ಲೆಂಡ್, ಟರ್ಕಿ, ಚೀನಾ ಮತ್ತು ಫ್ರಾನ್ಸ್‌ನಂತಹ ಹಲವಾರು ದೇಶಗಳಲ್ಲಿ ಬಹಳ ಸುದೀರ್ಘವಾದ ಅಂದರೆ 15-17 ಗಂಟೆಯವರೆಗಿನ ಉಪವಾಸವಿದೆ. ಇಷ್ಟು ದೀರ್ಘ ಹೊತ್ತು ಅನ್ನ-ನೀರು ಯಾವುದೂ ಇಲ್ಲದೆ, ಗುಟುಕು ನೀರನ್ನು ಸೇವಿಸದೆ ಉಪವಾಸ ಆಚರಿಸಬೇಕಾದರೆ ಕಠಿಣ ನಿರ್ಧಾರ ಮತ್ತು ಮನೋದಾರ್ಢ್ಯತೆಯ ಅಗತ್ಯವಿದೆ. ರಮಝಾನ್ ತಿಂಗಳಲ್ಲಿ ಹಲವೊಮ್ಮೆ ಗಾಢ ನಿದ್ದೆಯಿಂದ ಎಚ್ಚರವಾಗದೆ ಹಲವರು ಸುಪ್ರಭಾತಕ್ಕಿಂತ ಮೊದಲು ಮಾಡುವ ‘ಸಹ್ರಿ’ ಎಂದು ಕರೆಯಲ್ಪಡುವ ಭೋಜನವನ್ನು ತಪ್ಪಿಸಿಕೊಳ್ಳುತ್ತಾರೆ. ಆದರೆ ಯಾರೂ ಆ ಕಾರಣಕ್ಕೆ ಉಪವಾಸವನ್ನು ತೊರೆಯುವುದಿಲ್ಲ. ಆಗ ಕೆಲವೊಮ್ಮೆ ಉಪವಾಸದ ಅವಧಿ ಇಮ್ಮಡಿಯಾಗುತ್ತದೆ. ಆದರೂ ಉಪವಾಸ ಅನಿವಾರ್ಯ ಮತ್ತು ನಿರ್ದಿಷ್ಟ ಕಾರಣಗಳ ಹೊರತು ತೊರೆಯಲಾಗದ ಕಡ್ಡಾಯ ಕರ್ಮವಾಗಿರುವುದರಿಂದ ಎಲ್ಲರೂ ಉಪವಾಸ ಮುಂದುವರಿಸುತ್ತಾರೆ. ಇಂತಹ ‘ಅಚಲ ನಿರ್ಧಾರ’ ಮತ್ತು ‘ಮನೋದಾರ್ಢ್ಯತೆ’ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಜೀವನದಲ್ಲಿ ಸಂತೋಷವನ್ನು ತಂದುಕೊಳ್ಳಲು ಇಂತಹ ಮನೋದಾರ್ಢ್ಯತೆ ಬಹಳ ಸಹಾಯಕವಾಗಿದೆ.
ಜೀವನದಲ್ಲಿ ಸಂತೋಷ ಪಡಲು ಮುಖ್ಯವಾದ ಇನ್ನೊಂದು ಅಂಶವೇನೆಂದರೆ ಆರಾಮದ ವಲಯ (Comfort Zone) ವನ್ನು ಬಿಟ್ಟು ಹೊರ ನಡೆಯುವುದಾಗಿದೆ. ಆರಾಮದ ವಲಯವನ್ನು ಬಿಟ್ಟು ಹೊಸ ದಿನಚರಿಗಳಿಗೆ ಒಗ್ಗಿಕೊಳ್ಳುವ ಹಲವು ರೀತಿಯ ತರಬೇತಿಯೂ ಉಪವಾಸ ವ್ರತದಲ್ಲಿದೆ. ತಿನ್ನುವ ಸಮಯದಲ್ಲಿ ತಿನ್ನದೆ, ಮಲಗುವ ಸಮಯದಲ್ಲಿ ಮಲಗದೆ, ಕೆರಳಿಸಿದಾಗಲೂ ಸಿಟ್ಟಾಗದೆ, ಉಪವಾಸಿಗನು ಆರಾಮ ವಲಯದ ಗುಲಾಮಗಿರಿಯನ್ನು ಕಿತ್ತೆಸೆಯುವ ತರಬೇತಿಯನ್ನು ಪಡೆಯುತ್ತಾನೆ. ಇದೂ ಮನುಷ್ಯನ ಸಂತೋಷಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವ ಇನ್ನೊಂದು ಅಂಶ.
ರಮಾಝಾನ್ ತಿಂಗಳು ಸಹಾನುಭೂತಿಯ ತಿಂಗಳಾಗಿದೆ ಎಂದು ಪ್ರವಾದಿ ಮುಹಮ್ಮದ್ (ಸ.ಅ)ರು ಹೇಳಿದ್ದಾರೆ. ಆದ್ದರಿಂದಲೇ ಬಡಬಗ್ಗರೊಂದಿಗೆ, ನಿರ್ಗತಿಕರೊಂದಿಗೆ ಮತ್ತು ಕುಟುಂಬದಲ್ಲಿರುವ, ಕಷ್ಟದಲ್ಲಿರುವ ಜನರೊಂದಿಗೆ ಸಹಾನುಭೂತಿ ತೋರುವುದು ಮತ್ತು ಸಹಾಯ ಮಾಡುವುದು ಕೂಡಾ ರಮಝಾನಿನ ಜೀವಾಳವಾಗಿದೆ. ಮುಸ್ಲಿಮರು ನಿರ್ಬಂಧಿತ ದಾನವಾದ ಝಕಾತ್ ಹಣವನ್ನು ಸಾಮಾನ್ಯವಾಗಿ ರಮಝಾನ್ ತಿಂಗಳಲ್ಲಿ ಧಾರಾಳವಾಗಿ ಖರ್ಚು ಮಾಡುತ್ತಾರೆ. ಜಗತ್ತಿನಲ್ಲಿ ಸುಮಾರು 1.9 ಬಿಲಿಯನ್ ಮುಸ್ಲಿಮರಿದ್ದಾರೆ. ಅವರು ರಮಾಝಾನ್ ತಿಂಗಳಲ್ಲಿ ವ್ಯಯಿಸುವ ಝಕಾತ್‌ನ ಮೊತ್ತ ಹಲವು ಶತಕೋಟಿ ಡಾಲರ್‌ಗಳಾಗುತ್ತದೆ. ಅಲ್ಲದೆ ಝಕಾತ್‌ನ ಮೊತ್ತವನ್ನು ಕುರ್‌ಆನ್‌ನಲ್ಲಿ ಗೊತ್ತುಪಡಿಸಲಾಗಿರುವ ಬಡತನ ನಿರ್ಮೂಲನಕ್ಕೆ ಅಗತ್ಯವಾದ ನಿರ್ದಿಷ್ಟ ಎಂಟು ರೀತಿಯ ವ್ಯಯಗಳಿಗೆ ಮಾತ್ರ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಬಡವರು, ನಿರ್ಗತಿಕರು, ಅನಾಥರು, ನಿರಾಶ್ರಿತರು ಮತ್ತು ಹಲವು ರೀತಿಯ ಸಂಕಷ್ಟಗಳಲ್ಲಿರುವವರು ಝಕಾತ್‌ನ ಹಣದಿಂದ ಪ್ರಯೋಜನ ಪಡೆಯುತ್ತಾರೆ. ಹೇರಳ ಪ್ರಮಾಣದ ಮೊತ್ತ ಮಾರುಕಟ್ಟೆಗೆ ಪ್ರವೇಶಿಸಿ ಚಲಾವಣೆಯಾಗುತ್ತದೆ. ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳು ಚುರುಕುಗೊಳ್ಳುತ್ತವೆ. ಇದೂ ಕೂಡ ಮಾನವ ಸಮಾಜದಲ್ಲಿ ದುಃಖ ದುಮ್ಮಾನಗಳನ್ನೂ ಅಳಿಸಿ ಸಂತೋಷವನ್ನು ಹರಡುತ್ತದೆ.
ಅಲ್ಲದೆ, ಈದ್‌ನ ದಿನ ಫಿತ್ರ್ ದಾನ ಎಂಬ ನಿರ್ಬಂಧಿತವಾದ ದಾನವನ್ನು ಆ ದಿನದ ಖರ್ಚಿಗೆ ಇರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಪರವಾಗಿ ಪ್ರತಿ ವ್ಯಕ್ತಿಗೆ ಸುಮಾರು ಎರಡೂವರೆ ಕಿಲೋ ಧಾನ್ಯ ಅಥವಾ ಅದರ ಮೊತ್ತವನ್ನು ಕೊಡಬೇಕಾಗುತ್ತದೆ. ಸರಿಯಾದ ರೀತಿಯಲ್ಲಿ ಈ ದಾನಗಳು ವಿತರಣೆಯಾದರೆ ಹಬ್ಬದ ದಿನ ಹಸಿವು ಮುಕ್ತವಾದ, ಸಂಕಷ್ಟ ನಿವಾರಣೆಯ ದಿನವಾಗಿ ಮಾರ್ಪಡುತ್ತದೆ. ಈ ಮೂಲಕ ಹಬ್ಬ ಸರ್ವತೋಮುಖವಾದ ಸಂತೋಷವನ್ನು ಖಾತ್ರಿಪಡಿಸುತ್ತದೆ.
ರಮಝಾನ್ ತಿಂಗಳ ಮತ್ತು ವಿಶೇಷವಾಗಿ ಹಬ್ಬದ ದಿನದಂದು ಹತ್ತಿರದ ಸಂಬಂಧಿಕರೊಡನೆ ಅತ್ಯುತ್ತಮ ಸಂಬಂಧವನ್ನು ಬೆಳೆಸುವುದಕ್ಕೂ ಒತ್ತು ಕೊಡಲಾಗಿದೆ. ಭಯಭಕ್ತಿಯನ್ನು ಬೆಳೆಸಿಕೊಳ್ಳುವುದು ಉಪವಾಸ ವ್ರತದ ಉದ್ದೇಶ ಎಂದು ಪವಿತ್ರ ಕುರ್‌ಆನ್ ಸಾರುತ್ತದೆ. ಸಂಬಂಧಿಕರೊಂದಿಗೆ ಸಂಬಂಧ ಸುಧಾರಣೆಯೂ ಭಯ ಭಕ್ತಿಯ ಬೇಡಿಕೆಯಾಗಿದೆ ಎಂದು ಕುರ್‌ಆನ್ ಇನ್ನೊಂದೆಡೆ ಸಾರಿ ಹೇಳುತ್ತವೆ. ‘‘ನೀವು ಯಾವ ದೇವನ ಹೆಸರೆತ್ತಿ ಪರಸ್ಪರರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೋ ಆ ದೇವನ ಭಯ ಭಕ್ತಿ ಬೆಳೆಸಿಕೊಳ್ಳಿರಿ. ನಿಮ್ಮ ಹತ್ತಿರದ ಕುಟುಂಬಸ್ಥರೊಂದಿಗೆ ಅತ್ಯುತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿರಿ. ದೇವನು ನಿಮ್ಮ ಮೇಲೆ ಮೇಲ್ನೋಟವಿರಿಸಿಕೊಂಡಿದ್ದಾನೆ ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಿರಿ’’ (ಕುರ್‌ಆನ್ 4:1) ಎಂಬುದು ಕುರ್‌ಆನ್ ಸಾರುವ ಸಂಬಂಧ ಸುಧಾರಣೆಯ ಸಂದೇಶ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂತೋಷ ಯಾವುದರಲ್ಲಿ ಅಡಕವಾಗಿದೆ ಎಂಬ ಬಗ್ಗೆ ನಡೆದ ವಿಸ್ತೃತವಾದ ಸಂಶೋಧನೆಯ ನಂತರ ಅವರು ಕಂಡುಕೊಂಡ ಸಾರ ("Happiness is in meaningful relationship'') ಅರ್ಥಾತ್ ಸಂತೋಷವು ಅರ್ಥಗರ್ಭಿತ ಸಂಬಂಧಗಳ ಮೇಲೆ ನೆಲೆನಿಂತಿದೆ ಎಂಬುದಾಗಿದೆ. ಇಬ್ಬರು ವ್ಯಕ್ತಿಗಳ ನಡುವೆ ಸಂಬಂಧ ಕೆಟ್ಟು ಹೋದರೆ ಯಾರು ಸಂಬಂಧ ಸುಧಾರಣೆಗೆ ಮುಂದಡಿಯಿಟ್ಟು ಮೊದಲು ಸಲಾಮ್ ಹೇಳುತ್ತಾನೋ ಅವನೇ ಅತ್ಯುತ್ತಮ ವ್ಯಕ್ತಿ ಎಂದು ಪ್ರವಾದಿ ಮುಹಮ್ಮದ್(ಸ.ಅ)ರವರು ಹೇಳಿದ್ದಾರೆ. ರಮಝಾನ್ ತಿಂಗಳು ಮತ್ತು ಈದುಲ್ ಫಿತ್ರ್‌ನ ದಿನ ಸಂಬಂಧಿಕರ, ಸ್ನೇಹಿತರ, ನೆರೆಹೊರೆಯವರ ಮತ್ತು ಜತೆಜತೆಯಾಗಿ ಬದುಕುವ ವಿವಿಧ ಧರ್ಮೀಯರ ನಡುವೆ ಸಂಬಂಧಗಳು ಸುಧಾರಣೆಯಾಗಿ ಸಂತೋಷ ಇಮ್ಮಡಿಗೊಳ್ಳುತ್ತದೆ. ಈ ಕಾರಣಕ್ಕಾಗಿಯೂ ‘ಈದುಲ್ ಫಿತ್ರ್’ ಸಾರ್ವತ್ರಿಕ ಸಂತೋಷದ ದಿನವಾಗಿದೆ.
ಹಬ್ಬಕ್ಕೆ ‘ಈದ್’ ಎಂಬ ಪದ ಬಳಕೆಯಾಗಿರುವುದು ಬಹಳ ಅನ್ವರ್ಥವಾಗಿದೆ. ಈದ್ ಎಂದರೆ ಮರುಕಳಿಸುವ ಸಂತೋಷ. ಮನುಷ್ಯರು ಮತ್ತೆ ಮತ್ತೆ ಸಂತೋಷಪಡಲು ತವಕಪಡುವುದು, ಅದಕ್ಕಾಗಿ ಕಾರಣಗಳನ್ನು ಹುಡುಕುವುದು ಮತ್ತು ಆ ಕಾರಣಕ್ಕಾಗಿ ಎಲ್ಲರೂ ಜತೆಗೂಡಿ ಸಂತೋಷ ಆಚರಣೆ ಮಾಡುವುದು ಸಾಮಾಜಿಕ ಸ್ವಾಸ್ಥಕ್ಕೆ ಬಹಳ ಮುಖ್ಯ. ಈ ಕಾರಣಕ್ಕಾಗಿಯೇ ಎಲ್ಲಾ ಧರ್ಮಗಳಲ್ಲಿ ಹಬ್ಬಗಳ ಕಲ್ಪನೆಯಿದೆ. ಆದರೆ ದುರದೃಷ್ಟವಶಾತ್ ಇಂದಿನ ಸನ್ನಿವೇಶಗಳನ್ನು ಕಂಡಾಗ ಅದರಲ್ಲೂ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೆಸರುವಾಸಿಯಾದ ಕರ್ನಾಟಕದಲ್ಲಿ ಶಾಂತಿಯನ್ನು ಕದಡಲು ಮತ್ತು ಜನರ ಜೀವನದಿಂದ ಸಂತೋಷವನ್ನು ಕೊನೆಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಕಂಡಾಗ ಅಸಹ್ಯವೆನಿಸುತ್ತದೆ. ಹಿಜಾಬ್, ಹಲಾಲ್, ಧಾರ್ಮಿಕ ಸ್ಥಳಗಳಲ್ಲಿ ಅನ್ಯಧರ್ಮದವರ ವ್ಯಾಪಾರಕ್ಕೆ ನಿಷೇಧ, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಬಗ್ಗೆ ಅಪಸ್ವರ ಮತ್ತು ಈ ಮೂಲಕ ಸಮಾಜಗಳ ನಡುವೆ ಕಂದರ ತೋಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಮ್ಮ ಸಮಾಜದ ಸರ್ವಾಂಗೀಣ ಬೆಳೆವಣಿಗೆ ಮತ್ತು ಸಾಮಾಜಿಕ ಸ್ವಾಸ್ಥಕ್ಕೆ ಬಹಳ ಹಾನಿಕರ. ವಿವಿಧತೆಯಲ್ಲಿ ಏಕತೆಯ ಕಲ್ಪನೆಯ ಮೇಲೆ ನೆಲೆ ನಿಂತಿರುವ ಭಾರತೀಯ ಸಮಾಜದಲ್ಲಿ ಧಾರ್ಮಿಕ ವೌಲ್ಯಗಳ ಆಧಾರದಲ್ಲಿ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯ. ಶತಮಾನಗಳಿಂದ ಉಳಿದು- ಬೆಳೆದಿರುವ ಧಾರ್ಮಿಕ ಸೌಹಾರ್ದವನ್ನು ಉಳಿಸಿ ಬೆಳೆಸುವ ರೀತಿಯಲ್ಲಿ ಎಲ್ಲಾ ಧರ್ಮದವರು ಹಬ್ಬಾಚರಣೆ ಮಾಡುವುದು ನಮ್ಮ ಸಮಾಜದ ಸ್ವಾಸ್ಥಮತ್ತು ಸರ್ವಾಗೀಂಣ ಪ್ರಗತಿಗೆ ಬಹಳ ಮುಖ್ಯ. ಅದೇ ವೇಳೆ ಶಾಂತಿಯನ್ನು ಕ್ಷುಲ್ಲಕ ಲಾಭಗಳಿಗಾಗಿ ಕದಡುವ ಪ್ರಯತ್ನ ಸಮಾಜಕ್ಕೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಅತ್ಯಂತ ಮಾರಕ.ರಮಝಾನ್ ತಿಂಗಳು ಮತ್ತು ಈದುಲ್ ಫಿತ್ರ್ ನಲ್ಲಿರುವ ಮಾನವ ಸಹಾನುಭೂತಿ, ಸಮಾನತೆ, ಸಂಕಷ್ಟಗಳಿಗೆ ಮಿಡಿಯುವ ಹೃದಯವಂತಿಕೆ ಮತ್ತು ಸಂಕಲ್ಪ ಶುದ್ಧಿ ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಬಹಳ ಮುಖ್ಯವಾದ ಅಂಶಗಳಾಗಿವೆ .
‘‘ಒಳಿತಿನ ಬಗ್ಗೆ ಸಂತೋಷ ಪಟ್ಟು ಕೆಡುಕುಗಳ ಬಗ್ಗೆ ದುಃಖಕ್ಕೆ ಈಡಾಗುವವನೇ ಸತ್ಯವಿಶ್ವಾಸಿ’’ ಎಂದು ಪ್ರವಾದಿ ಮುಹಮ್ಮದ್ (ಸ.ಅ) ಹೇಳಿದ್ದಾರೆ. ಆದ್ದರಿಂದ ವೈಯಕ್ತಿಕ, ಸಾಮುದಾಯಿಕ ಮತ್ತು ಸಾಮಾಜಿಕ ಹಿತವನ್ನು ಬಯಸುವುದೇ ಇಸ್ಲಾಮಿನ ಹಬ್ಬಗಳ ಜೀವಾಳ. ಇತರ ಎಲ್ಲಾ ಧರ್ಮಗಳ ಹಬ್ಬಗಳಲ್ಲೂ ಈ ಸಮಾಜ ಮುಖಿ ಕಳಕಳಿ ಖಂಡಿತ ಇದೆ. ಸಮಾಜ ಮುಖಿಯಲ್ಲದ ಸ್ವಜನ ಪಕ್ಷಪಾತ ಮತ್ತು ಸ್ವಾರ್ಥವನ್ನು ಸಾರುವ ಯಾವುದೇ ಧರ್ಮ ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿಲ್ಲ, ಅದ್ದರಿಂದ ಸ್ವಾರ್ಥಕ್ಕಾಗಿ ಮತ್ತು ಕ್ಷಣಿಕ ಹಾಗೂ ಕ್ಷುಲ್ಲಕ ಲಾಭಗಳಿಗಾಗಿ ವಿವಿಧ ಧರ್ಮೀಯರ ನಡುವೆ ಕಂದಕ ನಿರ್ಮಾಣ ಮಾಡಲು ನಡೆಯುತ್ತಿರುವ ವ್ಯವಸ್ಥಿತ ಪ್ರಯತ್ನಗಳನ್ನು ಹುಸಿಗೊಳಿಸಲು ಎಲ್ಲಾ ಹಬ್ಬಗಳು ಮಾನವೀಯ ಸಂಬಂಧಗಳನ್ನು ಬೆಸೆಯುವ ಸಂದೇಶವನ್ನು ಸಾರಬೇಕಾಗಿದೆ. ಭಾರತದಲ್ಲಿರುವ ಎಲ್ಲಾ ಧರ್ಮಗಳು ಅತ್ಯಂತ ಉದಾತ್ತವಾದ ಮಾನವೀಯ ಬೋಧನೆಗಳನ್ನು ಹೊಂದಿವೆ. ಧಾರ್ಮಿಕ ನೇತಾರರು ಮತ್ತು ಧಾರ್ಮಿಕ ವಿದ್ವಾಂಸರು ಧರ್ಮಕ್ಕೆ ಮಸಿ ಬಳಿಯುವ ರೀತಿಯಲ್ಲಿ ದ್ವೇಷ ಮತ್ತು ವಿಭಜನಾವಾದವನ್ನು ಹರಡುವುದನ್ನು ಸೋಲಿಸಬೇಕಾದುದು ಬಹಳ ಮುಖ್ಯ. ಭಾರತಕ್ಕೆ ವಿಶ್ವದಾದ್ಯಂತ ತನ್ನದೇ ಆದ ಒಂದು ಅಸ್ಮಿತೆ ಇದೆ. ಅತಿ ದೊಡ್ಡ ಪ್ರಜಾಪ್ರಭುತ್ವ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ, ಹಲವು ವರ್ಣ, ಭಾಷೆ ಮತ್ತು ವೈವಿಧ್ಯತೆಯ ನಡುವೆಯೂ ಏಕತೆಯನ್ನು ಕಾಪಾಡಿಕೊಂಡಿರುವ ದೊಡ್ಡ ದೇಶ. ತಾಳ್ಮೆ, ಸೌರ್ಹಾದ, ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾದ ನಾಡು ಎಂಬುದು ಭಾರತೀಯರಿಗೆ ವಿಶ್ವದಾದ್ಯಂತ ಇರುವ ವಿಶೇಷ ಹೆಗ್ಗುರುತು. ಈ ಗುರುತು ಇಂದಿನ ಸನ್ನಿವೇಶದಲ್ಲಿ ತೀವ್ರವಾಗಿ ವಿಕೃತಗೊಂಡಿದೆ. ಇದರ ದೂರಗಾಮಿ ಪರಿಣಾಮ ದೇಶದ ಎಲ್ಲಾ ರಂಗಗಳ ಮೇಲೆ ಅತ್ಯಂತ ತೀವ್ರವಾಗಿ ಬೀರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಈದ್ ಸೇರಿದಂತೆ ದೇಶದ ಎಲ್ಲಾ ಹಬ್ಬಗಳು ಕೂಡಾ ಹೃದಯಗಳನ್ನು ಬೆಸೆಯುವ, ಮಾನವತೆಯ ಸಂದೇಶ ಸಾರುವ ಮತ್ತು ಮುಂದಿನ ಪೀಳಿಗೆಗೆ ಪ್ರೀತಿ ಮತ್ತು ಸೌಹಾರ್ದವನ್ನು ಸಾರುವ ಹಬ್ಬಗಳಾಗಬೇಕಿದೆ. ಸಾಮಾಜಿಕ ಧುರೀಣರು, ಧಾರ್ಮಿಕ ವಿದ್ವಾಂಸರು ಮತ್ತು ಜಾತ್ಯತೀತ ಬದ್ಧತೆಯಿರುವ ರಾಜಕಾರಣಿಗಳು ಈ ನಿಟ್ಟಿನಲ್ಲಿ ಬಹಳ ಕಾಳಜಿಯಿಂದ ಕೆಲಸ ಮಾಡಬೇಕಾದುದು ಇಂದಿನ ಕಾಲದ ತ್ವರಿತ ಬೇಡಿಕೆಯಾಗಿದೆ.