ಅನುಗಾಲ
ದಾಸ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ನ್ಯಾಯದ ಮೌಲ್ಯಗಳು

ಪುರಂದರದಾಸರು ‘ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗೆ ಸುಭಿಕ್ಷ ಕಾಲ.. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ ಕರ್ಮಿಪಾತಕರಿಗೆ ಬಹುಸೌಖ್ಯ ಕಾಲ’ ಎಂದರು. ಹಲವು ಶತಮಾನಗಳ ಹಿಂದೆ ದಾಸರು ದಾಖಲಿಸಿದ ಇಂತಹ ಸಮಾಜವನ್ನು ಕಂಡಾಗ ಬದಲಾವಣೆಯೆಂದರೆ ಶಿಥಿಲವಾಗುವುದು ಎಂಬ ಮಾತಿನಂತೆ ಈಗ ಇಷ್ಟೊಂದು ವಿಷಮತೆಯಿರುವುದು ಹೆಚ್ಚೇನಲ್ಲ ಅನ್ನಿಸುತ್ತದೆ.
ಭಾಗ-1
ನಮ್ಮ ಆಧುನಿಕ ಅಥವಾ ವರ್ತಮಾನದ ಕಾನೂನು ಎಷ್ಟರ ಮಟ್ಟಿಗೆ ಪಾಶ್ಚಾತ್ಯ ಅದರಲ್ಲೂ ಬ್ರಿಟಿಷ್ ಕಾನೂನು ಪದ್ಧತಿಯನ್ನು ಅನುಸರಿಸಿದೆಯೆಂದರೆ ನಮಗೆ ಸುಲಭವಾಗಿ ಅರ್ಥವಾಗುವ ‘Socio Legal Values’ ಎಂಬ ಆಂಗ್ಲ ಪದ ಸಮುಚ್ಚಯವು ಕನ್ನಡದಲ್ಲಿ ಅರ್ಥವಿಸಿಕೊಳ್ಳಬೇಕಾದರೆ ರಾದ್ಧಾಂತವನ್ನೆಬ್ಬಿಸುತ್ತದೆ. ‘ಸಮಾಜೋ ನ್ಯಾಯಿಕ’ ಎಂದು ಹೇಳಿದರೆ ಅದು ‘Legal’ ಎಂಬ ಪದಕ್ಕಿಂತ ಬೇರೇನೋ ಹೇಳುತ್ತದೆ. ‘Legal’ ಎಂದರೆ ‘ಕಾನೂನು ಸಮ್ಮತ’ ಅಥವಾ ‘ಕಾನೂನು ರೀತ್ಯಾ’ ಎಂದರ್ಥ. ಹಾಗೆ ನೋಡಿದರೆ ನಮ್ಮ ‘ನ್ಯಾಯಾಂಗ’ ಎಂಬ ಪದವು ಆಂಗ್ಲ ‘Judiciary’ ಪದಕ್ಕೆ ಸಂವಾದಿಯಲ್ಲ. ‘Judicial’ ಬೇರೆ; ‘Justice’ ಬೇರೆ. ಪ್ರಾಯಃ ‘Justice’ ಎಂಬ ಪದಕ್ಕೆ ‘ನ್ಯಾಯ’ ಎಂದು ಬಳಸಬೇಕು. ಆದರೆ ನಾವು ರೂಢಿಯಲ್ಲಿ ‘Judicial’ ಎಂಬ ಪದಕ್ಕೆ ‘ನ್ಯಾಯಿಕ’ ಎಂದು ಬಳಸುತ್ತೇವೆ. ಅಧೀನ ನ್ಯಾಯಾಧೀಶರಿಗೆ ‘Judge’(ತೀರ್ಪು ನೀಡುವವನು) ಅಥವಾ ‘Judicial Officer’(ಇದಕ್ಕೆ ಅಷ್ಟೇನೂ ತೃಪ್ತಿಕರವಲ್ಲದ ‘ನ್ಯಾಯಿಕ ಅಧಿಕಾರಿ’ ಎಂಬ ಪದ ಬಳಕೆಯಲ್ಲಿದೆ!) ಎನ್ನುತ್ತೇವೆ. ನ್ಯಾಯಾಧೀಶ, ನ್ಯಾಯಮೂರ್ತಿ ಈ ಪದಗಳು ಕನ್ನಡದಲ್ಲಿದ್ದರೆ ಅದಕ್ಕೆ ಪರ್ಯಾಯವಾಗಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಧೀಶರಿಗೆ ‘Justice’ ಎಂದು ಉಲ್ಲೇಖಿಸುತ್ತೇವೆ ಅಥವಾ ಸಂಬೋಧಿಸುತ್ತೇವೆ. ಈ ಕೆಲವು ಪದಗಳು ಸಮಾನಾರ್ಥದ ನ್ಯಾಯ ಪಡೆಯದಿರುವುದಕ್ಕೆ ಕಾರಣ ಅವುಗಳ ಸಾಂಸ್ಕೃತಿಕ ಹಿನ್ನೆಲೆ ಮತ್ತು ಪರಿಸರ. ನಮ್ಮ ಕಾನೂನಿನ ಮತ್ತು ನ್ಯಾಯಿಕ ಹಿನ್ನೆಲೆ. ನಮ್ಮಲ್ಲಿ ನ್ಯಾಯವೆಂಬ ಮೌಲ್ಯವಿತ್ತು. ಕಾನೂನಿರಲಿಲ್ಲ. ನ್ಯಾಯ ನಿರ್ಣಯಗಳಿದ್ದವು; ನ್ಯಾಯದ ಮುಂದೆ ಎಲ್ಲರೂ ಸಮಾನವೆಂಬ ಅಲಿಖಿತ ಮತ್ತು ಸಾಂಪ್ರದಾಯಿಕ ನೀತಿಯಿತ್ತು. ಕಾನೂನಿನ ಮುಂದೆ ಎಲ್ಲರೂ ಸಮಾನ ಎಂಬ ಪ್ರಕ್ರಿಯೆಯಿರಲಿಲ್ಲ.
ನಾನು ಹೇಳಬೇಕಾದ ಮಾತುಗಳಿಗೆ ಇದು ಹೇಗೆ ಅನ್ವಯಿಸುತ್ತದೆಯೆಂದು ವಿಷದಪಡಿಸಬೇಕಾಗಿದೆ. ದಾಸ ಸಾಹಿತ್ಯವೆಂಬುದು 15-16ನೇ ಶತಮಾನದ ಕೊಡುಗೆ. ಆಗ ಇದ್ದದ್ದು ರಾಜಸತ್ತೆ. ಯಥಾ ರಾಜಾ ತಥಾ ಪ್ರಜಾಃ ಒಂದೆಡೆಯಾದರೆ ರಾಜಾ ಪ್ರತ್ಯಕ್ಷ ದೇವತಾಃ ಇನ್ನೊಂದೆಡೆ. ಲೋಕನ್ಯಾಯ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಪ್ರಜ್ಞಾಪೂರ್ವಕವಾಗಿ ಬಳಸಬೇಕು. ಏಕೆಂದರೆ ಆಗ ಇದ್ದದ್ದು ಭೂಪತಿ ನ್ಯಾಯ. ರಾಜನ ನ್ಯಾಯವೇ ದೇವರ ನ್ಯಾಯ. ಪ್ರಜೆಗಳು ಸ್ಥಿರ ಮತ್ತು ಚರ ಆಸ್ತಿಗಳನ್ನು ಹೊಂದಿದರೂ ಎಲ್ಲವೂ ರಾಜನಿಗೇ ಅಂದರೆ ದೇವರಿಗೇ. ಇಲ್ಲಿ ಆಸ್ತಿಗಳ ಕುರಿತು ಉಲ್ಲೇಖಿಸುವಾಗ ಅದಕ್ಕೆ ಇಂದಿನ ಅರ್ಥ ಸೇರದು. ಆಗ ಸ್ಥಿರ ಮತ್ತು ಅಸ್ಥಿರ ಮಾತ್ರ ಇದ್ದದ್ದು. ಶರಣರ ಕಾಲದ ಸ್ಥಾವರ-ಜಂಗಮದ ಹಾಗೆ. ಕೊನೆಗೂ ಸ್ಥಿರ ಎಂದರೆ ದೈವಿಕ ಮತ್ತು ಪಾರಮಾರ್ಥಿಕ. ದಾಸರೂ ಈ ಕುರಿತು ‘ಹಿಂದೆ ಶತಕೋಟಿ ರಾಯರುಗಳಾಳಿದ ನೆಲನ..’ ಎಂದು ಹಾಡಿದ್ದರು. ರಾಜನ ಆನುವಂಶಿಕ ಹಕ್ಕನ್ನು ಪ್ರಜೆಗಳು ಮಾನ್ಯ ಮಾಡುತ್ತಿದ್ದ ಕಾಲ ಅದು. ಒಮ್ಮೆ ರಾಜನಾದನೆಂದರೆ ಎಲ್ಲರಿಗೂ ಅವನು ಹೊಣೆ. ರಾಜನು ಕೇಡಿಗನಾದರೆ ರಾಜ್ಯದಲ್ಲಿ ನ್ಯಾಯವಿಲ್ಲ. ಲಿಖಿತ ಹೋಗಲಿ, ಮೌಖಿಕ ಕಾನೂನೂ ಪಾಲನೆಗಾಗಿ ಇರಲಿಲ್ಲ. ನ್ಯಾಯವೇ ಎಲ್ಲರನ್ನೂ ಹರಸುವುದು, ದಂಡಿಸುವುದು ಪ್ರಚಲಿತ. ಇಂತಹ ಕಾಲದಲ್ಲಿ ರೂಢಿಯ, ಸಂಪ್ರದಾಯದ ನೀತಿ ಅನೀತಿಗಳು ಸಮಾಜವನ್ನು ಆಳುತ್ತಿದ್ದವು. ಮುಂದೆ 19ನೇ ಶತಮಾನದ ವರೆಗೂ ದಾಸಸಾಹಿತ್ಯವು ಬೆಳೆದುಬಂದರೂ ಅವೆಲ್ಲವೂ ಶ್ರೀಪಾದರಾಜರ, ವ್ಯಾಸರಾಯರ, ವಾದಿರಾಜರ, ಕನಕ-ಪುರಂದರರ ಕಾಲದ ದಾಸಸಾಹಿತ್ಯವಲ್ಲ. ಭಕ್ತಿಪಂಥದ ಬರಹಗಳು. ದಾಸಸಾಹಿತ್ಯ ಎಂದಾಗ ಮಧ್ವಪಂಥ, ದ್ವೈತ, ಭಕ್ತಿ, ವೈಷ್ಣವರನ್ನು ಉಲ್ಲೇಖಿಸಿಯೇ ಹೇಳುತ್ತೇವೆ. ಹಾಗಾದರೆ ಆ ಕಾಲದಲ್ಲಿದ್ದ ಅದ್ವೈತ ಮತ್ತು ವಿಶಿಷ್ಟಾದ್ವೈತ ಪಂಥ ಅಥವಾ ತತ್ವಗಳ ಜಿಜ್ಞಾಸೆ ಮಾಡಬೇಕಲ್ಲವೇ ಅನ್ನಿಸುತ್ತದೆ. ಹೌದು: ಕೆಲವಂಶಗಳನ್ನು ಗಮನಿಸಿದಾಗ ಕನಕದಾಸರು ವಿಶಿಷ್ಟಾದ್ವೈತದ ಬೆನ್ನುಹತ್ತಿದ್ದರು ಮತ್ತು ಕನಕ-ಪುರಂದರರು ಸೇರಿದಂತೆ ದಾಸಪಂಥದವರೆಲ್ಲರೂ ಬ್ರಾಹ್ಮಣರೇನಲ್ಲ ಎಂಬುದು ನೆನಪಾದಾಗ ಈ ವೈದೃಶ್ಯ ಸ್ವಲ್ಪ ಮರೆಗೆ ಸರಿಯುತ್ತದೆ.
ಇಂತಹ ಸಂದರ್ಭದಲ್ಲಿ ನೆನಪಾಗುವುದು ಗುರು ವ್ಯಾಸರಾಯರ ಕುರಿತು ಪುರಂದರದಾಸರ ಒಂದು ಸುಳಾದಿಯ ಮೊದಲ ಎರಡು ಸಾಲುಗಳು: ‘ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಮೊದಲಾದ ನ್ಯಾಯಗ್ರಂಥಗಳ ರಚಿಸಿ ತನ್ನಯ ಭಕ್ತರಿಗಿತ್ತೆ’. ವ್ಯಾಸರಾಯರು ಉದ್ದಾಮ ಪಂಡಿತರು. ಅವರು ಬರೆದ ಗ್ರಂಥಗಳ ಪೈಕಿ (ಅದ್ವೈತಮತಖಂಡನರೂಪವಾದ ನಾಲ್ಕು ಪರಿಚ್ಛೇದಗಳ) ‘ನ್ಯಾಯಾಮೃತ’, (ವೈಶೇಷಿಕ ಮತಗಳ ಖಂಡನೆಗಾಗಿ ಬರೆದ ಮೂರು ಪರಿಚ್ಛೇದಗಳ) ‘ತರ್ಕತಾಂಡವ ಮತ್ತು (ಜಯತೀರ್ಥರ ‘ತತ್ವ ಪ್ರಕಾಶಿಕಾ’ ಎಂಬ ಬ್ರಹ್ಮಸೂತ್ರ ಮಾಧ್ವಭಾಷ್ಯಟೀಕಾಗ್ರಂಥದ ಟಿಪ್ಪಣಿರೂಪ) ‘ತತ್ವ ಪ್ರಕಾಶಿಕಾ ತಾತ್ಪರ್ಯಚಂದ್ರಿಕಾ’ಗಳ ಹೆಸರಿದೆ. ವ್ಯಾಸರಾಯರ ಈ ಮೂರು ಗ್ರಂಥಗಳಿಗೆ ಅವರ ಶಿಷ್ಯರಾದ ವಿಜಯೀಂದ್ರರು ಕ್ರಮವಾಗಿ ‘ಲಘು ಆಮೋದ’, ‘ಯುಕ್ತಿ ರತ್ನಾಕರ’, ಮತ್ತು ‘ನ್ಯಾಯಮೌಕ್ತಿಕಮಾಲಾ’ ಎಂಬ ಟೀಕಾಗ್ರಂಥಗಳನ್ನು ಬರೆದಿದ್ದಾರೆಂದು ತಿಳಿದಿದ್ದೇನೆ. ನ್ಯಾಯಗ್ರಂಥಗಳೆಂದರೆ ಬ್ರಹ್ಮಸೂತ್ರದಲ್ಲಿ ಬರುವ ಪ್ರಮೇಯಗಳ ಕುರಿತು, ಖಂಡನೆಗಾಗಿ ಸಿದ್ಧವಾದವುಗಳು. ಬಾದರಾಯಣರ ಬ್ರಹ್ಮಸೂತ್ರಕ್ಕೆ ‘ನ್ಯಾಯ ಪ್ರಸ್ಥಾನ’ವೆಂಬ ಹೆಸರಿದೆ. ನ್ಯಾಯದರ್ಶನದಲ್ಲಿ ವಾದವಿವಾದಗಳ ಪ್ರಕ್ರಿಯೆ ಬಹುಮಟ್ಟಿಗೆ ಇದೆ ಎನ್ನಲಾಗಿದೆ. ಕುರ್ತಕೋಟಿಯವರು ಹೇಳಿದಂತೆ ‘ವ್ಯಾಸಕೂಟದ ಪಂಡಿತರು ಖಂಡನ-ಮಂಡನಗಳ, ವಾದ-ವಿವಾದಗಳ ಸಂರಚನೆಯಲ್ಲಿ ನಿರತರಾಗಿದ್ದರು. ವಾದವಿವಾದಗಳ ಕಂಠತ್ರಾಣದಲ್ಲಿ ದೇವರ ದನಿ ಅವರಿಗೆ ಕೇಳಿಸುತ್ತಿರಲಿಲ್ಲ. ದೇವರಿಗೆ ದನಿ ಇದೆ ಎಂದು ಸಿದ್ಧಮಾಡಿ ತೋರಿಸಿದರೆ ಸಾಕಾಗಿತ್ತು.
ದೇವರು ಗೀರ್ವಾಣ ಭಾಷೆಯನ್ನು ಮರೆತು ಕನ್ನಡದಲ್ಲಿ, ಪ್ರಾದೇಷಿಕ ಭಾಷೆಗಳಲ್ಲಿ ಮಾತಾಡತೊಡಗಿದಾಗ ಪಂಡಿತರಿಗಾದ ದಿಗಿಲು ಇನ್ನೂ ಹೋಗಿಲ್ಲ’. ಹೀಗೆ ‘ನ್ಯಾಯ’ ಎಂಬ ಪದಕ್ಕೆ ಈಗಿರುವ ಅರ್ಥ ಹಿಂದೆ ಇರಲಿಲ್ಲ ಎಂದು ವ್ಯಾಖ್ಯಾನಿಸಬಹುದು. ಇಂದಿನ ಕಾನೂನಿಗೂ ನ್ಯಾಯನಿರ್ಣಯ ಪದ್ಧತಿಗೂ ಹಿಂದಿನ ಪದ್ಧತಿಗೂ ಸಂಬಂಧವಿದ್ದಂತೆ ಕಾಣುವುದಿಲ್ಲ. ಒಂದರ್ಥದಲ್ಲಿ ‘ನ್ಯಾಯವಾದಿ’ ಎಂಬ ಪದವಷ್ಟೇ ಈ ನಿಟ್ಟಿನಲ್ಲಿ ಅತೀ ಹತ್ತಿರದ ಅರ್ಥವನ್ನು ನೀಡಿದೆಯೆಂದು ಅನ್ನಿಸುತ್ತದೆ. ದಾಸಸಾಹಿತ್ಯ ಸೃಷ್ಟಿಯಾದದ್ದು ಕ್ರಿ.ಶ. 15-16ನೇ ಶತಮಾನದಲ್ಲಿ ಎನ್ನಲಾಗಿದೆ. ಆದರೆ ಭಕ್ತಿಪಂಥವು ಮೊದಲೇ ಇದ್ದಿರಬೇಕು. ಹಿಂದೂ ಧರ್ಮ ಅಥವಾ ಕಾನೂನಿನ ಮೂರು ಬೇರುಗಳೆಂದರೆ ಶ್ರುತಿ, ಸ್ಮತಿ ಮತ್ತು ಸಂಪ್ರದಾಯಗಳು. ಧರ್ಮಶಾಸ್ತ್ರದ ಮೂಲಪಠ್ಯಗಳನ್ನು ಭಾಷ್ಯ ಅಥವಾ ವ್ಯಾಖ್ಯಾನ, ನಿಬಂಧನೆಗಳು ಮತ್ತು ಸಂಪ್ರದಾಯವೆಂಬ ಮೂರು ವಿಭಾಗಗಳಾಗಿ ವಿಂಗಡಿಸಬಹುದೆಂದು ಹೇಳಲಾಗಿದೆ. ಮಿತಾಕ್ಷರ ಎಂದರೆ ಯಾಜ್ಞವಲ್ಕ ಸಂಹಿತೆಯ ಭಾಷ್ಯ. ಅದನ್ನು ವಿಜ್ಞಾನೇಶ್ವರನು 11ನೇ ಶತಮಾನದ ಉತ್ತರಾರ್ಧದಲ್ಲಿ ಬರೆದರೆ ದಯಾಭಾಗವನ್ನು ಜೀಮೂತವಾಹನನು 12ನೇ ಶತಮಾನದಲ್ಲಿ ಬರೆದನು.
ವಿದ್ವತ್ಪೂರ್ಣವಾದ ಈ ಪ್ರಮೇಯಗಳು ಶರಣರ ಸಮಾಜವನ್ನಾಗಲೀ ಶತಮಾನಗಳ ನಂತರ ಬಂದ ದಾಸಜೀವನವನ್ನಾಗಲೀ ಪ್ರಭಾವಿಸಲಿಲ್ಲವೋ ಅಥವಾ ಇವೆರಡೂ ಪ್ರತ್ಯೇಕ ಹಳಿಗಳಲ್ಲಿ (ವಿದ್ವತ್ತು ಮತ್ತು ಸಾಮಾನ್ಯತೆ) ಸಂಚರಿಸಿದವೋ ಎಂದು ಸ್ಪಷ್ಟವಾಗಿ ಹೇಳಲಾಗದು. ಭಾಷೆಯನ್ನು ಸರಳೀಕರಿಸಿ ಜನರ ನಡುವೆ ಇದ್ದ ವಚನಸಾಹಿತ್ಯವು ದಾಸಸಾಹಿತ್ಯದ ಕಾಲಕ್ಕೆ ಯಾಕೆ ಮರೆಯಾಯಿತು ಎಂದು ಅರ್ಥವಾಗುವುದಿಲ್ಲ. ಆದರೆ ದಾಸರ ಕಾಲದಲ್ಲಿ ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸ ಮುಂತಾದವರು ಜನಜೀವನವನ್ನು ತಮ್ಮ ಕಾವ್ಯದಲ್ಲಿ ಬಿಂಬಿಸಿದರೂ ವಚನಸಂಭ್ರಮವು ಮರೆಯಾಗಿತ್ತು. ಇದ್ದರೂ ಅದು ಕಾದಭೂಮಿಯ ಗರಿಕೆಯಂತೆ ನೆಲದಡಿಯಲ್ಲಿದ್ದು ಮಳೆಗೆ ಕಾದಿತ್ತು. ಅದು ಮರುಕಳಿಸಬೇಕಾದರೆ ಆಧುನಿಕ ಅಧ್ಯಯನ ಮಾಡಬೇಕಾಯಿತು. ಆದ್ದರಿಂದ ಹೇಗೆ ವಚನಕಾರರು ಒಂದು ಸಮೂಹವಾಗಿ ತಮ್ಮ ಕಾಲದ ಸಮಾಜದ ಟೀಕಾಕಾರರಾದರೋ ಹಾಗೆಯೇ ದಾಸರು ಸಮಾಜಕ್ಕೆ ಎಲ್ಲ ಮೌಲ್ಯಗಳನ್ನು ಪ್ರತಿಪಾದಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸಿದರು. ಇದರಲ್ಲಿ ಅವರ ಟೀಕೆಗೆ ಮತ್ತು ಚಿಂತೆ-ಚಿಂತನೆಗೆ ಗುರಿಯಾದವುಗಳೆಂದರೆ ಸಾಮಾಜಿಕ ಅವ್ಯವಸ್ಥೆ. ಈ ಅಸ್ತವ್ಯಸ್ತತೆಗೆ ಕಾರಣವೆಂದರೆ ಸಾಮಾಜಿಕ ಶಿಸ್ತಿನ ನೀತಿಯ ಅಭಾವ. ವಿಜಯನಗರ ಸಾಮ್ರಾಜ್ಯದ ವೈಭವ ದೂರದೇಶಗಳಿಗೆ ತಲುಪಿದ ಕಾಲ ಅದು. ವಿಜಯನಗರದಿಂದ ಸಾಕಷ್ಟು ಸಂಬಾರ ಜೀನಸುಗಳು, ಪರದೇಶಗಳಿಗೆ ಮಾರಾಟವಾಗುತ್ತಿದ್ದವು; ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ‘ರಫ್ತು’ ಆಗುತ್ತಿತ್ತು.
ವಿದೇಶೀಯರು ವಿಜಯನಗರದ ವೈಭವವನ್ನು ಕೇಳಿ ಅಥವಾ ತಮ್ಮ ವ್ಯಾಪಾರದ ಅಗತ್ಯಗಳಿಗೆ ಬರುತ್ತಿದ್ದರು. ಅದು ಚರಿತ್ರೆಯ ಕಾಲವೇ ಹೊರತು ಪೌರಾಣಿಕ ಕಾಲವಲ್ಲ. ವಿಜಯನಗರದ ಉಚ್ಛ್ರಾಯ ಸ್ಥಿತಿಯಲ್ಲಿ ದಾಸರು ಮೆರೆಯಲಿಲ್ಲ. ಆಲ್ಲಿದ್ದದ್ದು ಆಸ್ಥಾನದ ಕವಿರತ್ನಗಳು. ದಾಸರು ಮೆರೆಯುವ ಕಾಲಕ್ಕೆ ವಿಜಯನಗರವು ಅವನತಿಯತ್ತ ಸಾಗುತ್ತಿತ್ತು. ಆದ್ದರಿಂದ ಶ್ರೀನಿವಾಸನಾಯಕನು ಪುರಂದರದಾಸನಾಗುವುದಕ್ಕೆ ಕಾರಣವಾದ ವಿಷದ ಬಟ್ಟಲಿನ ಮೂಗುತಿ, ಕನಕದಾಸರಿಗೆ ಉಡುಪಿಯ ಶ್ರೀಕೃಷ್ಣನು ಬಾಗಿಲನು ತೆರೆಯುವ ಬದಲು ಗೋಡೆಯಲ್ಲಿ ಹೃದಯವನ್ನು ತೆರೆದು ಸೇವೆಯನು ಕೊಟ್ಟ ಕಥೆ, ಆಧುನಿಕತೆಯ ಬದಲಾವಣೆಯ, ಚರಿತ್ರೆಯ, ನಡುವೆಯೂ ಯಾರೋ ಒಬ್ಬನ ಭವ್ಯ ಮತ್ತು ಆಕರ್ಷಕ ಕಲ್ಪನೆಯೇ ಹೊರತು ವಾಸ್ತವಿಕವಾಗದು. ಕುರ್ತಕೋಟಿಯವರು ‘ಈ ಕಥೆಗಳ ಐತಿಹಾಸಿಕತೆಯ ಬಗ್ಗೆ ಅನುಮಾನ ಹುಟ್ಟಬಹುದು. ಆದರೆ ಮನುಷ್ಯಜೀವ ಅನಿರೀಕ್ಷಿತವಾಗಿ ತನ್ನ ಸಂಸ್ಕಾರಗಳನ್ನೆಲ್ಲ ಕಳೆದುಕೊಂಡು ಬೇರೆ ದಾರಿಯನ್ನು ಹಿಡಿದಾಗ ಈ ಅವಸ್ಥಾಂತರವನ್ನು ವಿವರಿಸಲು ಒಂದು ಕಥೆ ಬೇಕಾಗುತ್ತದೆ’ ಎಂದಿದ್ದಾರೆ. ಇದನ್ನು ನಾವು ಒಪ್ಪಲಿ ಬಿಡಲಿ, ನಾವು ಗಮನಿಸಬೇಕಾದದ್ದು ಆ ಕಾಲದಲ್ಲಿ ಈ ದಾಸರುಗಳು ಚಿತ್ರಿಸಿದ ವ್ಯವಹಾರಸ್ಥರ, ದೇಗುಲಗಳ ಬಳಿಯಿದ್ದವರ, ಜಿಪುಣತನ, ಧೂರ್ತತನದಂತಹ ಸಣ್ಣತನಗಳು. ದಾಸರ ಕಾಲದಲ್ಲಿ ಆಡಳಿತ ಹೇಗಿತ್ತೆಂದು ಚರಿತ್ರಕಾರರು ಉಲ್ಲೇಖಿಸಿದ್ದಾರೆ. ವಚನಕಾರರನ್ನು ಬಾಧಿಸಿದಷ್ಟು ರಾಜಸ ಪ್ರಕ್ಷುಬ್ಧ ಸ್ಥಿತಿ ದಾಸರ ಕಾಲದಲ್ಲಿರದಿದ್ದರೂ ಸಾಮಾಜಿಕ ಮತ್ತು ನ್ಯಾಯಿಕ, ನೈತಿಕ ಬದುಕಿನ ಗುಣಮಟ್ಟವು ತೀವ್ರ ಕುಸಿದಿತ್ತೆಂದು ಕಾಣುತ್ತದೆ.
ವಚನಕಾರರ ಕಾಲದಲ್ಲಿ ಜಾತಿ ಸಾಮರಸ್ಯವನ್ನು ಬೆಸೆಯಲು ವಚನಕಾರರು ತೀವ್ರ ಯತ್ನವನ್ನು ಮಾಡಿದ್ದರು. ಆದರೆ ದಾಸರು ಅಂತಹ ಪ್ರಯತ್ನಕ್ಕೆ ಹೋದದ್ದು ಗೊತ್ತಾಗುವುದಿಲ್ಲ. ಕೀರ್ತನೆಗಳು ಕ್ರಾಂತಿಗಾಗಿ ಸೃಷ್ಟಿಯಾಗಲಿಲ್ಲ. ಸಮಾಜದ ಹುಳುಕುಗಳ ನಡುವೆಯೂ ಭಕ್ತಿಯನ್ನು ಹಬ್ಬಿಸಿದರು. ಸಾಮಾಜಿಕ ವಿಷಮತೆಯನ್ನು ಟೀಕಿಸುತ್ತಲೇ ಅದಕ್ಕೆ ಬೆನ್ನು ಹಾಕಿ ಅಧ್ಯಾತ್ಮ, ಭಕ್ತಿ ಮುಂತಾದ ವೈಯಕ್ತಿಕ ಮಾದರಿಗಳ ಹರಿಕಾರರಾದರು. ಹೀಗಾಗಿ ಸಮಾಜವನ್ನು ಕಾರ್ಯೋನ್ಮುಖವಾಗಿ ತಿದ್ದಲು ಅವರಿಂದ ಸಾಧ್ಯವಾಗಲಿಲ್ಲ. ಬಿಜ್ಜಳನ ಕೊಲೆಯೊಂದಿಗೆ, ಹತಾಶರಾದ ಬಸವಣ್ಣನ ಲಿಂಗೈಕ್ಯತೆಯೊಂದಿಗೆ ವಚನಯುಗ ಭೂತಕ್ಕೆ ಸರಿಯಿತು. ವಚನಕಾರರು (ಮತ್ತು ವಚನಗಳನ್ನು ಬರೆಯದೆಯೂ ಅವರೊಂದಿಗೆ ಜೊತೆಯಾಗಿದ್ದವರು, ಭಾಗವಹಿಸುತ್ತಿದ್ದವರು, ಸಹಕರಿಸುತ್ತಿದ್ದವರು) ಅಪೇಕ್ಷಿಸಿದ ಸಾಮಾಜಿಕ, ನ್ಯಾಯಿಕ ಸಾಮರಸ್ಯವು ಕೊನೆಗೂ ನೆರವೇರಲೇ ಇಲ್ಲ. ಆದರೆ ದಾಸರ ಕಾಲವು ಮುಂದೆ ಮಠ-ಮಂದಿರಗಳ ಮೂಲಕ ಅಧ್ಯಾತ್ಮಕ್ಕಿಂತ ಹೆಚ್ಚಾಗಿ ಮಾಧ್ವಮತವನ್ನು, ಬ್ರಾಹ್ಮಣ್ಯವನ್ನು, ಸನಾತನ ಸಂಪ್ರದಾಯವನ್ನು ಮೇಲೆತ್ತಿತು. ದಾಸಸಾಹಿತ್ಯ ಬಹುಪಾಲು ಸಂಗೀತಕ್ಕೆ ಒಪ್ಪುವ ಕೀ
ರ್ತನೆ ಮುಂತಾದ ಪದ್ಯರೂಪದಲ್ಲಿದೆ. ಆದ್ದರಿಂದ ಸಹಜವಾಗಿಯೇ ವಿವರಣೆೆಗಳು ಸಂಕ್ಷಿಪ್ತವಾಗಿವೆ. ಇವು ವಚನಗಳಂತೆ ಕನ್ನಡ ರೂಪದಲ್ಲಿದೆ. ಸಂಸ್ಕೃತದಿಂದ ದೂರವಿದ್ದದ್ದು ದಾಸರುಗಳಿಗೆ ಜನರ ಸಮೀಪವಿರುವುದಕ್ಕೆ ಅನುಕೂಲವಾಯಿತು. ಈ ದೃಷ್ಟಿಯಿಂದ ವಚನಗಳಿಗೆ ದಾಸ ಸಾಹಿತ್ಯವನ್ನು ಹೋಲಿಸಬಹುದು. ಸಂಪ್ರದಾಯದ ಸುಳಿಯ ನಡುವೆ ಉದಿಸಿದ ದಾಸರುಗಳು ನೇರ ಚಳವಳಿ ಹೂಡಲಿಲ್ಲ. ತಮ್ಮ ಕೀರ್ತನೆಗಳ ಮತ್ತಿತರ ಪದ್ಯಮಾಧ್ಯಮಗಳ ಮೂಲಕ ಸಮಾಜದ ವಿಷಮತೆೆಯನ್ನು ಟೀಕಿಸಿದರು. ಈ ಪೈಕಿ ದಾಸ ಸಾಹಿತ್ಯದ ಹೊರತಾದ ಕನ್ನಡ ಕಾವ್ಯ ಪರಂಪರೆಯ ಮೂಲಕ ಛಂದೋಬದ್ಧವಾಗಿ ಬರೆದು ಶುದ್ಧ ಮತ್ತು ಉತ್ತಮ ಸಾಹಿತಿಯೆನಿಸಿಕೊಂಡವರು ಕನಕದಾಸರೊಬ್ಬರೇ. 16ನೇ ಶತಮಾನದ ದಾಸ ಸಾಹಿತ್ಯದಲ್ಲಿ ಸಾಮಾಜಿಕ ಓರೆಕೋರೆಗಳು, ಅಂಕುಡೊಂಕುಗಳ ಕುರಿತಂತೆ ತೀವ್ರ ಮತ್ತು ಕೆಲವೊಮ್ಮೆ ವಿಷಾದಕರ ಟೀಕೆಗಳಿವೆ. ವ್ಯಾಸರಾಯ, ವಾದಿರಾಜ, ಶ್ರೀಪಾದರಾಯರ ಶಿಷ್ಯ ವೃತ್ತಿಯ ದಾಸರೇ ಹೆಚ್ಚು. ಇವರ ಪೈಕಿ ವ್ಯಾಸರಾಯಸ್ವಾಮಿಗಳ (ಇವರನ್ನು ವ್ಯಾಸತೀರ್ಥರೆಂದು ಕರೆಯುವುದು ವಾಡಿಕೆ) ಶಿಷ್ಯರಾಗಿದ್ದ ಕನಕ-ಪುರಂದರರು ಹೆಚ್ಚು ಪ್ರಸಿದ್ಧರು. ಕನಕದಾಸರು (1491-1580) ಆಡಳಿತದ ಭಾಗವಾಗಿದ್ದವರು. ಯುದ್ಧದ ಸಾಮಾಜಿಕ ಸಂಕಟ ಮತ್ತು ವೈಯಕ್ತಿಕ ಸಂಕಟ ಇವೆರಡನ್ನೂ ಅನುಭವಿಸಿ ದಾಸರಾದವರು. ಪುರಂದರ ದಾಸರು (1485-1565) ವ್ಯಾಪಾರ ವೃತ್ತಿಯವರು. ಸಂಪತ್ತಿನ ನೌಕೆಯಿಂದ ಸಮುದ್ರಕ್ಕೆ ಹಾರಿದವರು. ಇಬ್ಬರೂ ಸಾಮಾಜಿಕ ಹಿನ್ನೆಲೆಯವರು. ಕುಮಾರವ್ಯಾಸ ಇವರಿಗಿಂತ ಒಂದು ತಲೆಮಾರಿನಷ್ಟಾದರೂ ಹಿರಿಯರು. (ಕೆಲವರು ಇವರು ಸಮಕಾಲೀನರೆಂದು ಹೇಳುವುದುಂಟು.) ಹಾಗೆಯೇ ವಿಠ್ಠಲದಾಸರು, ಗೋಪಾಲದಾಸರು, ವೆಂಕಟದಾಸರು ಹೀಗೆ ಒಂದೆರಡು ಶತಮಾನಗಳ ಕಾಲದ ಶ್ರೇಷ್ಠ ದಾಸಕೋಟಿಯ, ದಾಸಸಾಹಿತ್ಯದ, ಪರಂಪರೆಯೇ ಇದೆ. ಅವರ ಕಾಲದಲ್ಲಿ ಅವರು ಏನು ಮಾಡಿದ್ದರು ಎಂಬುದನ್ನು ಈ ಸಾಹಿತ್ಯ ತೋರಿಸಲಾರದು. ಆದರೆ ಅವರ ಬರಹಗಳು ಅವರ ಕಾಲದ ಈ ವಿಷಮತೆಯನ್ನೂ ಅವರು ಇದನ್ನು ಸುಧಾರಿಸಲು ಸೂಚಿಸಿದ ಮಾರ್ಗಗಳನ್ನೂ ದರ್ಶಿಸಿದೆ.
ಉದಾಹರಣೆಗೆ ಪುರಂದರದಾಸರು ‘ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗೆ ಸುಭಿಕ್ಷ ಕಾಲ.. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ ಕರ್ಮಿಪಾತಕರಿಗೆ ಬಹುಸೌಖ್ಯ ಕಾಲ’ ಎಂದರು. ಹಲವು ಶತಮಾನಗಳ ಹಿಂದೆ ದಾಸರು ದಾಖಲಿಸಿದ ಇಂತಹ ಸಮಾಜವನ್ನು ಕಂಡಾಗ ಬದಲಾವಣೆಯೆಂದರೆ ಶಿಥಿಲವಾಗುವುದು ಎಂಬ ಮಾತಿನಂತೆ ಈಗ ಇಷ್ಟೊಂದು ವಿಷಮತೆಯಿರುವುದು ಹೆಚ್ಚೇನಲ್ಲ ಅನ್ನಿಸುತ್ತದೆ. ಆ ಕಾಲದಲ್ಲೇ ದಾಸರು ‘ಅಪರಾಧಂಗಳ ಕ್ಷಮಿಸೋ’ ಎಂದರು. ಇಷ್ಟಕ್ಕೂ ಕಾನೂನು ಎಂದರೇನು? ನಿಷೇಧರೂಪವಾದದ್ದು. ತಪ್ಪುಗಳ ಪಟ್ಟಿ ಮಾಡಿ ಅದಕ್ಕೆ ಶಿಕ್ಷೆ ಹಾಗೂ ಬಲಿಪಶುವಿಗೆ ಪರೋಕ್ಷ ನ್ಯಾಯದ ಪರಿಹಾರ. ಅಪರಿಹಾರ್ಯವಾದ ತಪ್ಪುಗಳಿಗೆ ಯಾವ ಶಿಕ್ಷೆಯೂ ಸಾಲದು. ಕೊಲೆಗಾರನಿಗೆ ಮರಣದಂಡನೆ ನೀಡಬಹುದು. ಆದರೆ ಹೋದ ಜೀವ ಬರದು. ಇನ್ನೊಂದು ಸಾವು, ಅಷ್ಟೇ. ದಾಸರು ಈ ಅಪರಾಧಗಳನ್ನು ತಗ್ಗಿಸಲು ಯತ್ನಿಸಲು ಸರಿದಾರಿಯನ್ನು ಹೇಳುತ್ತ ಹೋದರು. ಪುಣ್ಯ-ಪಾಪದ ನೀತಿ ಹೇಳಿದರು. ‘ಸ್ನಾನ ಮಾಡಿರಯ್ಯ ಜ್ಞಾನತೀರ್ಥದಲಿ ನಾನು ನೀನೆಂಬಹಂಕಾರವನು ಬಿಟ್ಟು’ ಎಂಬ ಹಾಡು ಮುಂದೆ ತನ್ನೊಳು ತಾನು ತಿಳಿದರೆ, ಅನ್ಯಾಯಗಾರಿ ಕಳೆದರೆ, ಅನ್ಯಾಯವಾಡದಿದ್ದರೆ, ಪರಸತಿಯ ಬಯಸದಿದ್ದರೆ, ಪರನಿಂದೆ ಮಾಡದಿದ್ದರೆ, ಪರದ್ರವ್ಯ ಅಪಹರಿಸದಿರೆ, ಪರತತ್ವ ತಿಳಿದುಕೊಂಡರೆ, ತಂದೆತಾಯಿಗಳ ಸೇವೆ, ಅತ್ತೆಮಾವನ ಸೇವೆ, ಭರ್ತನ ಮಾತು ಕೇಳಿದರೆ, ವೇದಶಾಸ್ತ್ರಗಳನೋದಿದರೆ, ಭೇದಾಭೇದ ತಿಳಿದರೆ, ಸಾಧುಸಜ್ಜನರ ಸಂಗ-ಇವೆಲ್ಲವೂ ಸ್ನಾನ ಎನ್ನುತ್ತದೆ. ಬದುಕಲು ಬೇಕಾದ ಇತ್ಯಾತ್ಮಕವಾದ ಮೌಲ್ಯಗಳನ್ನು ಬಿಟ್ಟು ಯಾವಾಗ ದಂಡವಿಧಾನದ ಕಾನೂನು ಪ್ರವೇಶಿಸಿತೋ ಆಗ ನೇತ್ಯಾತ್ಮಕತೆ ಕಾಲಿಟ್ಟಿತು. ‘ಇಲ್ಲಿ ಧೂಮಪಾನ ನಿಷೇಧಿಸಿದೆ’ ಎಂದರೆ ಸಿಗರೇಟು ನೆನಪಾಗುತ್ತದೆ. ‘ಸದ್ದು ಮಾಡಬೇಡಿ’ ಎಂದರೆ ಮಾತನಾಡುವರು ಜನರು.
(ಮುಂದುವರಿಯುವುದು)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ