varthabharthi


ಈ ಹೊತ್ತಿನ ಹೊತ್ತಿಗೆ

ತುಳು ಅಧ್ಯಯನಕ್ಕೊಂದು ಹೊಸ ಸೇರ್ಪಡೆ: ಕರಾವಳಿ ಕಥನಗಳು

ವಾರ್ತಾ ಭಾರತಿ : 5 May, 2022
ಪುರುಷೋತ್ತಮ ಬಿಳಿಮಲೆ

ಕಳೆದ ಸುಮಾರು ಒಂದೂವರೆ ಶತಮಾನಗಳಿಂದ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮಹತ್ವದ ಸಂಗ್ರಹ ಮತ್ತು ಸಂಶೋಧನೆಗಳು ನಡೆದಿವೆ. ತುಳುನಾಡಿನ ಎರಡು ಮುಖ್ಯ ಅಭಿವ್ಯಕ್ತಿಗಳಾದ ಭೂತಾರಾಧನೆ ಮತ್ತು ಯಕ್ಷಗಾನಗಳ ಬಗ್ಗೆ ನಡೆದಿರುವ ಶೈಕ್ಷಣಿಕ ಕೆಲಸಗಳು ಅಂತರ್‌ರಾಷ್ಟ್ರೀಯ ಮಟ್ಟದ ವಿದ್ವಾಂಸರ ಗಮನವನ್ನೂ ಸೆಳೆದಿವೆ. ಇಷ್ಟಿದ್ದರೂ ತುಳುವಿನ ಕುರಿತಾಗಿ ನಡೆದ ಸಂಶೋಧನೆಗಳು ಹೇಳಬೇಕಾದಷ್ಟನ್ನು ಹೇಳಿವೆ ಅಂತ ಅನ್ನಿಸುತ್ತಿಲ್ಲ.

ಜೊತೆಗೆ ತುಳು ಸಂಸ್ಕೃತಿ ಅಂದರೆ ಭೂತ ಮತ್ತು ಯಕ್ಷಗಾನ ಮಾತ್ರವೇ ಅಲ್ಲವಲ್ಲ! ಉಳಿದ ಪ್ರಕಾರಗಳೆಲ್ಲ ಯಾಕೆ ನಮ್ಮ ಅಧ್ಯಯನ ಸಂದರ್ಭದಲ್ಲಿ ಹೊರಗುಳಿದುಬಿಟ್ಟವು? ಇಂಥ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡುವಂತೆ ಪ್ರೊ. ಚಿನ್ನಪ್ಪ ಗೌಡರ ‘ಕರಾವಳಿ ಕಥನಗಳು’ ಪ್ರಕಟವಾಗಿದೆ. ನುರಿತ ಸಂಶೋಧಕರಾದ ಅವರು ತುಳು ಸಂಸ್ಕೃತಿಯ ವಿಭಿನ್ನ ಮುಖಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ, ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಹಾಗೆ ಮಾಡುವುದರ ಮೂಲಕ ನಮ್ಮ ಕಾಲದ ಅಗತ್ಯವೊಂದನ್ನು ಅವರು ಸಮರ್ಪಕವಾಗಿ ಪೂರೈಸಿದ್ದಾರೆ. 

ಎಂಟು ಪ್ರೌಢ ಲೇಖನಗಳಿರುವ ಪ್ರಸ್ತುತ ಕೃತಿಯಲ್ಲಿ ಡಾ. ಚಿನ್ನಪ್ಪ ಗೌಡರು, ಪಾಡ್ದನಗಳ ಲೋಕ ದೃಷ್ಟಿ, ಅಜ್ಜಿ ಕತೆಗಳ ಸೃಜನಶೀಲತೆ, ಕೆಲಸದ ಹಾಡುಗಳ ಕನಸುಗಾರಿಕೆ, ಉಳ್ಳಾಲ್ತಿ ಭೂತದ ಇತಿಹಾಸ, ಹೊಸ ತುಳು ಕಾವ್ಯ ಹಿಡಿಯುತ್ತಿರುವ ಹಾದಿ, ತುಳು ಕತೆಗಳ ಸ್ವರೂಪ, ತುಳು ಅನುವಾದಗಳ ಅಗತ್ಯ ಮತ್ತು ಯಕ್ಷಗಾನ ಪ್ರದರ್ಶನಗಳ ಇತಿಹಾಸದ ಬಗ್ಗೆ ವಿವರವಾಗಿ ಮತ್ತು ನಿಖರವಾಗಿ ಬರೆದಿದ್ದಾರೆ. ಅಗತ್ಯ ಮಾಹಿತಿಗಳ ತಾಳ್ಮೆಯ ಸಂಗ್ರಹ, ವಿಷಯಗಳನ್ನು ಅಚ್ಚುಕಟ್ಟಾಗಿ ಮಂಡಿಸಿ ವಿಶ್ಲೇಷಿಸುವ ವಿದ್ವತ್ತು, ಅಪೂರ್ವ ಒಳನೋಟಗಳುಳ್ಳ ಚಿಂತನಾಕ್ರಮ, ತುಳು-ಕನ್ನಡ ಭಾಷೆಗಳ ಮೇಲಣ ಅಪೂರ್ವ ಹಿಡಿತ, ವಸ್ತುವಿಗೆ ಅನುಗುಣವಾದ ಬರವಣಿಗೆಯ ವಿನ್ಯಾಸ, ಇತ್ಯಾದಿ ಕಾರಣಗಳಿಂದಾಗಿ ಈ ಪುಸ್ತಕ ಬಹಳ ಮೌಲಿಕವಾಗಿದೆ. 

ಚಿನ್ನಪ್ಪ ಗೌಡರು 1980ರ ದಶಕದಿಂದಲೇ ಭೂತಾರಾಧನೆಯ ಬಗೆಗೆ ಕೆಲಸ ಮಾಡುತ್ತಲೇ ಬಂದಿದ್ದಾರೆ. ಈ ಪುಸ್ತಕದ ಮೊದಲ ಲೇಖನದಲ್ಲಿ ಅವರು ಭೂತಾರಾಧನೆಯ ಪ್ರಮುಖ ಭಾಗವಾದ ಪಾಡ್ದನದ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ. ‘ಇತಿಹಾಸವು ಪಾಡ್ದನವಾಗಿ, ಪಾಡ್ದನವು ಪ್ರದರ್ಶನ ಪಠ್ಯವಾಗಿ ಪರಿವರ್ತನೆಗೊಂಡು ಚಲನಶೀಲಗೊಳ್ಳುವ ವಿಧಾನ ಮತ್ತು ಉದ್ದೇಶವು ದೈವಾರಾಧನೆಯ ಮುಖ್ಯವಾದ ತಾತ್ವಿಕತೆಯಾಗಿದೆ’ ಎಂದು ಹೇಳುವ ಅವರು, ಅದೇ ಚೌಕಟ್ಟಿನಲ್ಲಿ ಕಲ್ಕುಡ-ಕಲ್ಲುರ್ಟಿ, ಕೊರಗ ತನಿಯ, ಬಿಲ್ಲರಾಯ ಬಿಲ್ಲಾರ್ತಿ ಮತ್ತು ಪಂಜುರ್ಲಿ ಪಾಡ್ದನಗಳನ್ನು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೋಟೆದ ಬಬ್ಬು ಬಾರಗ-ತನ್ನಿಮಾನಿಗ, ಮದನಗ, ಬಳಜೇಯಿ ಮಾನಿಗ, ಬಾಲೆ ಮಾಡೆದಿ, ದೇವುಪೂಂಜ, ಬಬ್ಬರ್ಯ, ಮೈಸಂದಾಯ, ಆಲಿ ಭೂತ, ಮತ್ತು ಕಾಂತಾಬಾರೆ ಬೂದಾಬಾರೆ ಪಾಡ್ದನಗಳನ್ನೂ ಬಳಸಿಕೊಂಡಿದ್ದಾರೆ.

 ಅಸಾಮಾನ್ಯ ರಚನೆಗಳಾಗಿರುವ ಪಾಡ್ದನಗಳಲ್ಲಿ ಕಂಡುಬರುವ ನೀತಿ ಸಂಹಿತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಕಂಡು ಹಿಡಿಯುವುದು, ಜಾತ್ಯಾಧರಿತ ಸಮಾಜಕ್ಕೆ ಪಾಡ್ದನಗಳು ಪ್ರತಿಕ್ರಿಯಿಸುವ ರೀತಿಗಳ ಹುಡುಕಾಟ, ದಲಿತ ಮತ್ತು ಕಾರ್ಮಿಕ ವರ್ಗದ ಹೋರಾಟಗಳನ್ನು ಹತ್ತಿಕ್ಕುವ ಶಕ್ತಿಗಳ ಶೋಧ, ಸಮುದಾಯದ ಹೋರಾಟಗಳನ್ನು ಅಧಿಕಾರ ಕೇಂದ್ರಗಳು ದುರ್ಬ ಲಗೊಳಿಸಲು ನಡೆಸಿದ ಹುನ್ನಾರಗಳ ಪರಿಶೀಲನೆ ಮೊದಲಾದ ಹಲವು ಸಂಗತಿಗಳನ್ನು ಲೇಖಕರು ಇಲ್ಲಿ ಕೈಗೆತ್ತಿಕೊಂಡು ಅವುಗಳಿಗೆ ಸೂಕ್ತವಾದ ಉತ್ತರಗಳನ್ನು ಕಂಡುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪಾಡ್ದನಗಳ ಮೂಲ ಪಠ್ಯದ ಮುಖ್ಯ ಭಾಗಗಳನ್ನು ತುಳುವಿನಲ್ಲಿಯೇ ನೀಡಿ, ಅದನ್ನು ಸುಲಲಿತವಾಗಿ ಕನ್ನಡಕ್ಕೂ ಅನುವಾದಿಸಿ, ಡಾ. ಗೌಡರು ತಮ್ಮ ಲೇಖನಗಳನ್ನು ಬೆಳೆಸಿರುವುದರಿಂದ ಕನ್ನಡದ ವಿದ್ವಾಂಸರಿಗೂ ಈ ಕೃತಿ ಸಂಪುಟ ಬಹಳ ಉಪಯುಕ್ತವಾಗಿದೆ. ಪುಸ್ತಕದ ಎರಡನೇ ಲೇಖನವು ತುಳುವಿನ ಅಜ್ಜಿಕತೆಗಳ ಕುರಿತಾಗಿದೆ. ತುಳು ಅಜ್ಜಿ ಕತೆಗಳ ಸಂಗ್ರಹದ ಇತಿಹಾಸ, ಕತೆಗಳನ್ನು ಹೇಳುವ ಸಂದರ್ಭ, ಕತೆಗಳ ಸಾಂಸ್ಕೃತಿಕ ಮಹತ್ವ ಇತ್ಯಾದಿಗಳನ್ನು ವಿವರಿಸಿರುವ ಲೇಖಕರು ‘ಒಟ್ಟಿನಲ್ಲಿ ತುಳು ಅಜ್ಜಿಕತೆಗಳು ಸಾಂಸ್ಕೃತಿಕ ಪಠ್ಯಗಳಾಗಿ ಮುಖ್ಯವಾಗುತ್ತವೆ. ಅಜ್ಜಿ ಹೇಳುವ ಮಕ್ಕಳ ಕತೆಗಳು ಬಡವರ ಮತ್ತು ಅಶಕ್ತರ ಆಯುಧಗಳು. ಅವುಗಳನ್ನು ಸೃಷ್ಟಿಸಿದ ಸಮಾಜಕ್ಕೆ ಕನ್ನಡಿ ಹಿಡಿಯುತ್ತವೆ. ಈ ಕನ್ನಡಿ ಕಿಟಿಕಿಗಳೂ ಆಗಬಲ್ಲುವು’ ಎಂದು ಲೇಖನವನ್ನು ಮುಗಿಸಿದ್ದಾರೆ. 

ಜನಪದ ಕತೆಗಳ ಸಂಗ್ರಹ ಮತ್ತು ಅಧ್ಯಯನದ ಕೆಲಸಗಳು ಮುಗಿದೇ ಹೋದವು ಎಂದು ಅನ್ನಿಸುತ್ತಿರುವ ಹೊತ್ತಿಗೆ ಚಿನ್ನಪ್ಪ ಗೌಡರು ಬರೆದ ಈ ಲೇಖನವು ಚೇತೋಹಾರಿಯಾಗಿ ಕಾಣಿಸಿಕೊಳ್ಳುತ್ತಿದೆ. ತುಳುವಿನಲ್ಲಿ ಕೆಲಸದ ಹಾಡುಗಳು ‘ಕಬಿತ’ಗಳೆಂದು ಪ್ರಸಿದ್ಧವಾಗಿವೆ. ಆದರೆ ಈ ಹಾಡುಗಳ ದೊಡ್ಡ ಮಟ್ಟಿನ ಸಂಗ್ರಹ, ಭಿನ್ನ ಪಠ್ಯಗಳ ದಾಖಲೀಕರಣ, ಹಾಡುಗಾರ ಕೇಂದ್ರಿತ ಕಬಿತಗಳ ಮತ್ತು ದುಡಿ ಹಾಡುಗಳ ಸಂಗ್ರಹ, ಸಂಪಾದನೆ ಮತ್ತು ಪ್ರಕಟನೆ ಕಾರ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಈ ಕುರಿತು ಅಧ್ಯಯನ ನಡೆಸಿರುವ ಡಾ. ಗೌಡರು, ‘ಈ ತುಳು ಪ್ರಕಾರಗಳು ತುಳುನಾಡಿನ ಮಳೆ ಮತ್ತು ಬೇಸಾಯ ಪದ್ಧತಿಯೊಂದಿಗೆ ಹೇಗೆ ನಿಕಟ ಸಂಬಂಧ ಹೊಂದಿವೆ’ ಎಂಬುದನ್ನು ತಾಳ್ಮೆಯಿಂದ ಪರಿಶೀಲಿಸಿದ್ದಾರೆ. ‘ಮಹಿಳೆಯರು, ರೈತರು, ಕಾರ್ಮಿಕರು ಮೊದಲಾದ ಅಲಕ್ಷಿತ ಸಮುದಾಯಗಳ ಇತಿಹಾಸಗಳನ್ನು ಕಟ್ಟಲು, ಮರುಕಟ್ಟಲು ಕಬಿತಗಳು ಮತ್ತು ದುಡಿಹಾಡುಗಳು ಉಪಯುಕ್ತ’ ಎಂಬ ಅವರು ಮಾತು ಬಹಳ ಮುಖ್ಯವಾಗಿದ್ದು ಮುಂದಿನ ಅಧ್ಯಯನಗಳಿಗೆ ದಿಕ್ಸೂಚಿಯಾಗಿದೆ.

ಪುಸ್ತಕದ ನಾಲ್ಕನೇ ಲೇಖನವು ‘ಉಳ್ಳಾಲ್ತಿ’ ಹೆಸರಿನ ಪ್ರಭಾವೀ ದೈವದ ಕುರಿತಾಗಿದೆ. ಆಕೆಯು ಅರಸು ಮನೆತನಕ್ಕೆ ಸೇರಿದವಳಾಗಿದ್ದು, ಸಾಮಾಜಿಕವಾದ ಕೆಲವು ನಿಯಮಗಳನ್ನು ಉಲ್ಲಂಘಿಸಿ ಹೋರಾಟದ ಬದುಕನ್ನು ನಡೆಸಿದ ಹೆಣ್ಣಾದ್ದರಿಂದ ಅವಳ ಕಥನಕ್ಕೆ ವಿಶೇಷವಾದ ಮನ್ನಣೆಯೂ ಇದೆ. ಆಕೆ ಇತರ ದೈವಗಳ ಹಾಗೆಯೇ ಅಸಹಜವೂ ಅಕಾಲಿಕವೂ ಆದ ಮರಣಕ್ಕೊಳಪಡುತ್ತಾಳೆ. ಅವಳ ಕುರಿತಾದ ಇಲ್ಲಿನ ಅಧ್ಯಯನವು ಸ್ತ್ರೀಕೇಂದ್ರಿತ ಪಾಡ್ದನಗಳು ತುಳುನಾಡಿನ ಚರಿತ್ರೆ ಮತ್ತು ವರ್ತಮಾನದ ಸಮಾಜದೊಂದಿಗೆ ಹೊಂದಿರುವ ಸಂಬಂಧವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಪುಸ್ತಕದ ಐದನೆಯ ಲೇಖನವು ತುಳು ಕವಿತೆಯ ಕುರಿತಾಗಿದೆ. ಈಚಿನ ತುಳು ಕವಿತೆಗಳು ಹಿಡಿಯುತ್ತಿರುವ ಹೊಸ ಹಾದಿಯನ್ನು ಅವರು ಲೇಖನದಲ್ಲಿ ಸ್ಪಷ್ಟವಾಗಿ ಗುರುತಿಸಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಹಿಂದಿನ ಕವಿತೆಗಳು ಹಿಡಿದಿದ್ದ ಹಾದಿಯ ಸಾಧ್ಯತೆಗಳು ಮತ್ತು ಮಿತಿಗಳನ್ನು ವಿಶ್ಲೇಷಿಸಿದ್ದಾರೆ. 

‘ಹೊಸಕಾಲದ ಹೊಸ ತುಳು ಕವಿಗಳು ಹೊಸತೊಂದು ತುಳು ಸಮಾಜವನ್ನು ಕಟ್ಟುವ ಕಡೆಗೆ ಹೆಜ್ಜೆಯಿಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂಬುದು ಅವರ ಒಟ್ಟು ತೀರ್ಮಾನ. ತುಳು ಕತೆಗಳ ಕುರಿತಾದ ಆರನೆಯ ಲೇಖನವು ‘ಆಧುನಿಕ ಕಾಲಘಟ್ಟದಲ್ಲಿ ಕತೆಗಳನ್ನು ಬರೆದ ಲೇಖಕರು ಸಮಾಜದ ಅನ್ಯಾಯ, ಮೋಸ, ಅಸಮಾನತೆ, ಶೋಷಣೆ, ಹಿಂಸೆ ಇವುಗಳ ವಿರುದ್ಧ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂಬ ಸಂದೇಶವನ್ನು ಪ್ರಬಲವಾಗಿ ಸಾರಿದ್ದಾರೆ’ ಎಂಬುದನ್ನು ಸೋದಾಹರಣವಾಗಿ ಸ್ಥಾಪಿಸಿದೆ. ಏಳನೆಯ ಲೇಖನವು ಅನುವಾದಗಳ ಕುರಿತಾಗಿದ್ದು ವಿಶೇಷವಾದ ಒಳನೋಟಗಳನ್ನು ಹೊಂದಿದೆ. ತುಳುವಿನಿಂದ ಇಂಗ್ಲಿಷ್‌ಗೆ ಏಳು ಪುಸ್ತಕಗಳನ್ನು ಬಿ. ಸುರೇಂದ್ರ ರಾವ್ ಅವರೊಡನೆ ಅನುವಾದಿಸಿದ ಅನುಭವದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಈ ಲೇಖನವು, ಅನುವಾದಕ್ಕೆ ಆಯ್ದುಕೊಂಡ ಕೃತಿಗಳು, ಅನುವಾದದ ಸಂದರ್ಭದಲ್ಲಿ ಅನುಸರಿಸಿದ ವಿಧಾನಗಳು ಮತ್ತು ಅನುವಾದದ ಉದ್ದೇಶಗಳನ್ನು ಬಿಡಿಸಿ ಹೇಳುತ್ತದೆ. ಅವರೇ ಹೇಳಿಕೊಂಡಂತೆ, ‘ಇದರಿಂದ ಒಟ್ಟಾರೆಯಾಗಿ ಅನುವಾದದ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ಮತ್ತು ನಿರ್ದಿಷ್ಟವಾಗಿ ತುಳುವಿನಿಂದ ಇತರ ಭಾಷೆಗಳಿಗೆ ಅನುವಾದ ಮಾಡುವವರಿಗೆ ಶೈಕ್ಷಣಿಕ ಪ್ರಯೋಜನವಾದೀತು’. 

ಪ್ರಾದೇಶಿಕ ಭಾಷೆಗಳಿಂದ ಜಾಗತಿಕ ಭಾಷೆಗಳಿಗೆ ಅನುವಾದ ಮಾಡುವವರು ಗಮನಿಸಲೇ ಬೇಕಾದ ಲೇಖನವಿದು. ಈ ಪುಸ್ತಕದ ಕೊನೆಯ ಲೇಖನ ಯಕ್ಷಗಾನದ ಕುರಿತಾಗಿದೆ. ತಮ್ಮ ಭೂತಾರಾಧನೆಯ ಕುರಿತಾದ ಅಧ್ಯಯನ ಸಂದರ್ಭದಲ್ಲಿ ‘ಯಕ್ಷಗಾನಕ್ಕೆ ಭೂತಾರಾಧನೆಯೇ ಮೂಲವಾಗಿರಬೇಕೆಂದು’ ಹೇಳಿ, ಶಿವರಾಮ ಕಾರಂತರ ವಾದವನ್ನು ತಳ್ಳಿ ಹಾಕಿದ್ದ ಚಿನ್ನಪ್ಪ ಗೌಡರು ಆನಂತರದ ದಿನಗಳಲ್ಲಿ ಯಕ್ಷಗಾನದ ಬಗ್ಗೆ ಬರೆದದ್ದು ಕಡಿಮೆಯೇ. ಆ ಮಿತಿಯನ್ನು ಅವರು ಈ ಲೇಖನದ ಮೂಲಕ ಮೀರಿದ್ದಾರೆ. ಯಕ್ಷಗಾನದ ಪ್ರದರ್ಶನಗಳ ಮೂಲಕ ಅದರ ಇತಿಹಾಸವನ್ನು ಕಟ್ಟುವ ಕಠಿಣ ಕೆಲಸಕ್ಕಿಳಿದ ಲೇಖಕರು ಅಚ್ಚರಿ ಹುಟ್ಟಿಸುವ ಮಾಹಿತಿಗಳನ್ನು ನಮ್ಮ ಮುಂದಿರಿಸಿದ್ದಾರೆ. ತನ್ನ ಅನೇಕ ವರ್ಷಗಳ ಅಧ್ಯಾಪನ ಮತ್ತು ಸಂಶೋಧನೆಯ ಅನುಭವಗಳನ್ನು ಡಾ. ಚಿನ್ನಪ್ಪ ಗೌಡರು ಈ ಪುಸ್ತಕದಲ್ಲಿ ನಮ್ಮ್ಮಾಂದಿಗೆ ಹಂಚಿಕೊಂಡಿದ್ದಾರೆ. ಸಂಶೋಧನೆಗಳು ಪತನಮುಖಿಯಾಗಿರುವ ಇಂದಿನ ಸಂದರ್ಭದಲ್ಲಿ ಈ ಬಗೆಯ ಪುಸ್ತಕಗಳು ನಾವು ನಿರಾಶೆಗೆ ಒಳಗಾಗದಂತೆ ನೋಡಿಕೊಳ್ಳುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)