700 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ ಅಮೆರಿಕದ ಬಂದೂಕಿನಲ್ಲಿ ದೋಷ!
ಉನ್ನತಾಧಿಕಾರಿಯ ನೇತೃತ್ವದ ರಕ್ಷಣಾ ಸಚಿವಾಲಯದ ಸಮಿತಿಯು ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ನಿರ್ಧಾರಗಳನ್ನು ಅಂತಿಮಗೊಳಿಸುತ್ತದೆ. ಹೀಗಿರುವಾಗ, ದುಬಾರಿ ಬೆಲೆಯ ರೈಫಲ್‌ಗಳನ್ನು ಖರೀದಿಸಿ ಅವನ್ನು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಲು ಮತ್ತಷ್ಟು ಹಣ ವ್ಯಯಿಸುವುದರಲ್ಲಿ ಅರ್ಥವಿಲ್ಲ ಎಂದು ಭಾರತೀಯ ಸೇನಾ ಪಡೆಯ ಹಿರಿಯ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕಿಂತಲೂ ವಿಷಾದದ ವಿಷಯವೆಂದರೆ, ಈ ತಪ್ಪಿಗೆ ಯಾರನ್ನೂ ಹೊಣೆಗಾರರನ್ನಾಗಿಸದಿರುವುದು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಸೇನೆಯ ಬಳಕೆಗಾಗಿ ಅಮೆರಿಕದ 'ಪ್ಯಾಟ್ರೊಲ್ ಸಿಗ್ ಸಾರ್' ಬಂದೂಕುಗಳನ್ನು ಖರೀದಿಸುವ 700 ಕೋಟಿ ರೂ. ಮೊತ್ತದ ಆದೇಶವನ್ನು ಪುನರಾವರ್ತಿಸದಿರಲು ಭಾರತದ ರಕ್ಷಣಾ ಇಲಾಖೆ ನಿರ್ಧರಿಸಿದೆ. ಈ ಹಿಂದೆ ಖರೀದಿಸಿದ 72,400 ಬಂದೂಕುಗಳಲ್ಲಿ ದೋಷ ವರದಿಯಾಗಿರುವುದು ಇದಕ್ಕೆ ಕಾರಣ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ 'ದಿ ವೈರ್' ವರದಿ ಮಾಡಿದೆ. 2019ರ ಬಳಿಕ ಕಾಶ್ಮೀರದಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ಮತ್ತು ಈ ಪ್ರದೇಶದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧದ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದ ಭಾರತದ ಸೇನೆಗೆ ಒದಗಿಸಲಾಗಿದ್ದ ಈ ರೈಫಲ್‌ಗಳಲ್ಲಿ ಹಲವಾರು ಕಾರ್ಯಾಚರಣೆ ದೋಷ ಕಂಡುಬಂದಿದ್ದರಿಂದ ರೈಫಲ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದಿಂದ ಆಮದು ಮಾಡಿಕೊಂಡಿದ್ದ ಒಟ್ಟು ಎಸ್‌ಐಜಿ716 ರೈಫಲ್‌ಗಳಲ್ಲಿ ಸೇನೆಗೆ 66,400 ರೈಫಲ್ಸ್, ಭಾರತೀಯ ವಾಯುಪಡೆಗೆ 4,000 ಮತ್ತು ಭಾರತದ ನೌಕಾಪಡೆಯ ವಿಶೇಷ ಪಡೆಗೆ 2,000 ರೈಫಲ್ಸ್ ಒದಗಿಸಲಾಗಿತ್ತು. ಸ್ಥಳೀಯವಾಗಿ ಉತ್ಪಾದಿಸಿದ 7.62 ಎಂಎಂ ಬುಲೆಟ್‌ಗಳನ್ನು (ಆಮದು ಮಾಡಿಕೊಂಡ ಮದ್ದುಗುಂಡುಗಳಷ್ಟು ದಕ್ಷತೆ ಹೊಂದಿಲ್ಲ) ಈ ರೈಫಲ್ಸ್ ನಲ್ಲಿ ತುಂಬಿ ಗುಂಡು ಹಾರಿಸಿದಾಗ ಬುಲೆಟ್ ಅಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಅಲ್ಲದೆ ಹಲವು ಸಂದರ್ಭದಲ್ಲಿ ಬಂದೂಕಿನ ನಳಿಕೆಗೆ ಹಾನಿಯಾಗಿ ರೈಫಲ್‌ಗಳು ಕಾರ್ಯಾಚರಣೆಗೆ ಅನರ್ಹವಾಗುತ್ತದೆ. ಗುಂಡು ಹಾರಿಸಿದಾಗ ಮೊದಲ ಬುಲೆಟ್ ಬಂದೂಕಿನ ನಳಿಗೆಯಿಂದ ಹೊರಗೆ ಸಿಡಿಯದೆ ಒಳಗೇ ಸಿಲುಕಿಕೊಂಡರೆ, ಮತ್ತೊಂದು ಗುಂಡು ಸಿಡಿಸಿದಾಗ ಬಂದೂಕಿನ ನಳಿಕೆಯೊಳಗೆ ವಿಪರೀತ ಒತ್ತಡಕ್ಕೆ ಕಾರಣವಾಗುತ್ತದೆ. ಇದರಿಂದ ಬಂದೂಕಿನ ನಳಿಕೆ ಊದಿಕೊಳ್ಳುವುದು, ಸೀಳು ಬಿಡುವುದು ಅಥವಾ ಕೆಲವೊಮ್ಮೆ ಬಂದೂಕೇ ಸ್ಫೋಟಗೊಳ್ಳುವ ಅಪಾಯವಿದೆ.
ರಶ್ಯದ ಕಲಾಶ್ನಿಕೋವ್ ಎಕೆ-47 ಅಥವಾ ದೇಶೀಯವಾಗಿ ಉತ್ಪಾದಿಸಿದ ಇಂಡಿಯನ್ ಸ್ಮಾಲ್‌ಆರ್ಮ್ಸ್ ಸಿಸ್ಟಮ್ (ಐಎನ್‌ಎಸ್‌ಎಸ್) ಅಸಾಲ್ಟ್ ರೈಫಲ್‌ಗಳಿಗೆ ಹೋಲಿಸಿದರೆ, ಅಮೆರಿಕದ ಎಸ್‌ಐಜಿ716 ರೈಫಲ್ಸ್‌ನಲ್ಲಿ ಸ್ಥಳೀಯ ಮದ್ದುಗುಂಡುಗಳು ಅತ್ಯಧಿಕ ಹಿಂಬಡಿತವನ್ನು ಉಂಟು ಮಾಡುತ್ತದೆ. ಎಸ್‌ಐಜಿ716 ನಂತಹ ಸೆಮಿ ಅಟೊಮೆಟಿಕ್ ಬಂದೂಕುಗಳಲ್ಲಿ ಒಂದು ಬಾರಿ ಟ್ರಿಗರ್ ಎಳೆದರೆ 2 ಅಥವಾ 3 ಗುಂಡು ಹಾರಿಸುವ ವ್ಯವಸ್ಥೆಯಿರುತ್ತದೆ. ಜತೆಗೆ, ಈ ರೈಫಲ್ಸ್‌ಗಳಲ್ಲಿ ಕೆಲವೊಮ್ಮೆ ಸ್ಥಳೀಯ ಮಾರ್ಪಾಡುಗಳ ಅಗತ್ಯ ಬೀಳುತ್ತದೆ. ಇವುಗಳಿಗೆ ಮರದ ಹಿಡಿಕೆಯನ್ನು ಸೇರಿಸಬೇಕಾಗುತ್ತದೆ. ಕೆಲವು ಸೇನಾ ತುಕಡಿಗಳು ಈ ಮರದ ಹಿಡಿಕೆಯನ್ನು ಸೇರಿಸುವ ಮೂಲಕ ಬಿಗಿ ಹಿಡಿತಕ್ಕೆ ವ್ಯವಸ್ಥೆ ಮಾಡಿಕೊಂಡಿದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಈ ರೈಫಲ್ಸ್ ಗಳಿಗೆ ನಿಗದಿತ ಗುರಿಯನ್ನು ಸೂಚಿಸುವ ಕೆಂಪು ಬಣ್ಣದ ಲೇಸರ್ ಬೆಳಕಿನ ವ್ಯವಸ್ಥೆಯ ಕೊರತೆಯಿದೆ. (ಆ್ಯಕ್ಷನ್ ಸಿನೆಮಾಗಳಲ್ಲಿ ಇಂತಹ ರೈಫಲ್ಸ್‌ಗಳನ್ನು ಕಾಣಬಹುದು). ಸೇನಾ ಕಾರ್ಯಾಚರಣೆ, ಗುಂಡಿನ ಚಕಮಕಿ ನಡೆಯುವ ಪ್ರದೇಶದಲ್ಲಿ ಕೆಂಪು ಲೇಸರ್ ಕಿರಣಗಳ ಮೂಲಕ ನಿಗದಿತ ಗುರಿಯನ್ನು ಸೂಚಿಸುವ ಬಂದೂಕು ಅತ್ಯಗತ್ಯವಾಗಿದೆ. ಈ ಕೊರತೆಯ ಕಾರಣ, ಶೂಟರ್ ತನ್ನ ಒಂದು ಕಣ್ಣನ್ನು ಮುಚ್ಚಿಕೊಂಡು ಗುರಿ ಹಿಡಿಯಬೇಕಾಗುತ್ತದೆ. ಆಗ ಆತನ ಬಾಹ್ಯ ದೃಷ್ಟಿಯ ವ್ಯಾಪ್ತಿ ಸೀಮಿತಗೊಂಡು ಜೀವನ-ಮರಣದ ಆಯ್ಕೆಯ ಸ್ಥಿತಿಗೆ ಕಾರಣವಾಗಬಹುದು.
ಉನ್ನತಾಧಿಕಾರಿಯ ನೇತೃತ್ವದ ರಕ್ಷಣಾ ಸಚಿವಾಲಯದ ಸಮಿತಿಯು ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ನಿರ್ಧಾರಗಳನ್ನು ಅಂತಿಮಗೊಳಿಸುತ್ತದೆ. ಹೀಗಿರುವಾಗ, ದುಬಾರಿ ಬೆಲೆಯ ರೈಫಲ್‌ಗಳನ್ನು ಖರೀದಿಸಿ ಅವನ್ನು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಲು ಮತ್ತಷ್ಟು ಹಣ ವ್ಯಯಿಸುವುದರಲ್ಲಿ ಅರ್ಥವಿಲ್ಲ ಎಂದು ಭಾರತೀಯ ಸೇನಾ ಪಡೆಯ ಹಿರಿಯ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕಿಂತಲೂ ವಿಷಾದದ ವಿಷಯವೆಂದರೆ, ಈ ತಪ್ಪಿಗೆ ಯಾರನ್ನೂ ಹೊಣೆಗಾರರನ್ನಾಗಿಸದಿರುವುದು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಭಾರತೀಯ ಸೇನಾಪಡೆಯ ಗುಣಾತ್ಮಕ ಅವಶ್ಯಕತೆಗಳ ಅಡೆತಡೆಯ ಬಗ್ಗೆ ಸತತ ಸಂಸದೀಯ ರಕ್ಷಣಾ ಸಮಿತಿ, ಸಿಎಜಿ (ನಿಯಂತ್ರಕರು ಮತ್ತು ಮಹಾಲೆಕ್ಕಪಾಲರು) ಹೊರಗೆಳೆದಿದ್ದು, ಇದರಿಂದ ಹಲವಾರು ಖರೀದಿಗಳು ಅಮಾನತುಗೊಂಡು ಸೇನಾಪಡೆಗಳ ಅತ್ಯಾಧುನೀಕರಣ ಪ್ರಕ್ರಿಯೆಗೆ ತೊಡಕಾಗುತ್ತಿದೆ. ಉದಾಹರಣೆಗೆ, ಕಳೆದ 18 ತಿಂಗಳಲ್ಲಿ ಸೇನೆಗೆ ವಿವಿಧ ಶಸ್ತ್ರಾಸ್ತ್ರ, ಉಪಕರಣ ಪೂರೈಸುವ 41 ಟೆಂಡರ್‌ಗಳನ್ನು ಮಹತ್ವಾಕಾಂಕ್ಷೆಯ ಗುಣಾತ್ಮಕ ಅವಶ್ಯಕತೆಗಳ ಕಾರಣಕ್ಕೆ ರದ್ದುಪಡಿಸಲಾಗಿದೆ ಎಂದು 2012ರಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಂಸತ್‌ನ ಸ್ಥಾಯಿ ಸಮಿತಿ ಘೋಷಿಸಿದೆ. 2015ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಂದಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಭಾರತೀಯ ಸೇನೆಯ ಕೆಲವೊಂದು ಗುಣಾತ್ಮಕ ಅವಶ್ಯಕತೆ (ಕ್ಯೂಆರ್) ಅವಾಸ್ತವಿಕವಾಗಿದ್ದು ಕಾಮಿಕ್ ಪುಸ್ತಕದಿಂದ ಹೊರತೆಗೆದ ರೀತಿಯಲ್ಲಿವೆ ಎಂದಿದ್ದರು.
ಬಿಡ್‌ನಲ್ಲಿ ಗೆದ್ದ ಅಮೆರಿಕದ ಕಂಪೆನಿಗೆ 'ಪ್ಯಾಟ್ರೊಲ್ ಸಿಗ್ ಸಾರ್' ರೈಫಲ್ಸ್ ಟೆಂಡರ್ ನೀಡಿರುವುದಾಗಿ ಮಾಜಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ 2019ರ ಜನವರಿಯಲ್ಲಿ ಘೋಷಿಸಿದ್ದರು. ಅದರಂತೆ ನಿಗದಿತ 12 ತಿಂಗಳಲ್ಲಿ ರೈಫಲ್ಸ್‌ಗಳನ್ನು ಪೂರೈಸಲಾಗಿದೆ. 2020ರ ಸೆಪ್ಟಂಬರ್‌ನಲ್ಲಿ ಹೆಚ್ಚುವರಿ 72,400 ರೈಫಲ್ಸ್ ಖರೀದಿಸಲಾಗಿದೆ. ಆದರೆ ಮತ್ತೊಮ್ಮೆ ಅಸಾಧಾರಣ ಕ್ಯೂಆರ್‌ನ ಕಾರಣದಿಂದ ಈ ಖರೀದಿಗೆ ತಡೆ ನೀಡಲಾಗಿದೆ. ಈ ಮಧ್ಯೆ, ಭಾರತ ಇನ್ನು ಮುಂದೆ ಆಮದು ಮಾಡಿಕೊಳ್ಳದ 310 ಮಿಲಿಟರಿ ವಸ್ತುಗಳ ಪಟ್ಟಿಯಲ್ಲಿ ಅಸಾಲ್ಟ್ ರೈಫಲ್ಸ್ ಗಳನ್ನು ಸೇರ್ಪಡೆಗೊಳಿಸಿದೆ ಎಂದು ಮೂಲಗಳು ಹೇಳಿವೆ. ಜತೆಗೆ, ಅದಾನಿ ಡಿಫೆನ್ಸ್ (ಅಹ್ಮದಾಬಾದ್), ಎಸ್‌ಎಸ್‌ಎಸ್ ಡಿಫೆನ್ಸ್ (ಬೆಂಗಳೂರು), ಜಿಂದಾಲ್ ಡಿಫೆನ್ಸ್ (ದಿಲ್ಲಿ), ಆಪ್ಟಿಕ್ ಇಲೆಕ್ಟ್ರಾನಿಕ್ಸ್ ಇಂಡಿಯಾ (ನೊಯ್ಡ) ಸಂಸ್ಥೆಗಳಿಗೆ ವಿದೇಶದ ಉತ್ಪಾದಕರೊಂದಿಗೆ ಸಹಯೋಗ ಸ್ಥಾಪಿಸಿ ಅಸಾಲ್ಟ್ ರೈಫಲ್ಸ್‌ಗಳನ್ನು ಉತ್ಪಾದಿಸಲು ಭಾರತದ ರಕ್ಷಣಾ ಇಲಾಖೆ ಲೈಸೆನ್ಸ್ ನೀಡಿದ್ದು ಮುಂದಿನ ಎಲ್ಲಾ 'ಪ್ಯಾಟ್ರೊಲ್ ಸಿಗ್ ಸಾರ್' ರೈಫಲ್ಸ್‌ಗಳ ಆಮದಿಗೆ ತಡೆಯೊಡ್ಡಿದೆ.