varthabharthi


ತಿಳಿ ವಿಜ್ಞಾನ

ಭವಿಷ್ಯದ ನೆಲೆಗಾಗಿ ಬಾಹ್ಯಾಕಾಶದಲ್ಲಿ ಇಟ್ಟಿಗೆ

ವಾರ್ತಾ ಭಾರತಿ : 8 May, 2022
ಆರ್.ಬಿ.ಗುರುಬಸವರಾಜ

ಒಂದು ಇಟ್ಟಿಗೆಯನ್ನು ಮಂಗಳ ಗ್ರಹಕ್ಕೆ ಸಾಗಿಸಲು ಒಂದು ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಅಲ್ಲಿಯೇ ಇಟ್ಟಿಗೆಗಳನ್ನು ತಯಾರಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ.


ಭೂಮಿಯಾಚೆಗಿನ ನೆಲೆಗಾಗಿ ಅಲೆದಾಡುತ್ತಿರುವ ಮಾನವನ ಕಣ್ಣು ಸಮೀಪದ ಕೆಂಪು ಗ್ರಹದ ಮೇಲೆ ನೆಟ್ಟಿರುವುದು ನಮಗೆಲ್ಲಾ ಗೊತ್ತು. ಅಲ್ಲಿ ನೆಲೆಸುವ ನಮ್ಮ ಕನಸಿಗೆ ಈಗ ರೆಕ್ಕೆ ಮೂಡುತ್ತಿವೆ. ಮಂಗಳನ ಅಂಗಳದಲ್ಲಿ ನೆಲೆಯೂರಲು ಅಗತ್ಯವಾದ ಇಟ್ಟಿಗೆ ನಿರ್ಮಾಣ ಆಗುತ್ತಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಗಳ ಸಹಯೋಗ ದೊಂದಿಗೆ ಈ ಮಹತ್ಕಾರ್ಯ ನಡೆಯುತ್ತಿರುವುದು ವಿಶೇಷ.

IISc ಮತ್ತು ISRO ಮಂಗಳ ಗ್ರಹದ ಮೇಲೆ ಕಟ್ಟಡದಂತಹ ರಚನೆಗಳನ್ನು ಮಾಡಲು ಬಳಸಬಹುದಾದ ಬಾಹ್ಯಾಕಾಶ ಇಟ್ಟಿಗೆಗ ಳನ್ನು ಅಭಿವೃದ್ಧಿಪಡಿಸಿದೆೆ. ಇದು ಮಂಗಳ ಗ್ರಹದಲ್ಲಿ ಮಾನವ ನೆಲೆ ಸಲು ಸಹಾಯ ಮಾಡಬಹುದು ಎಂಬ ಆಶಾಭಾವನೆ ಮೂಡಿದೆ. ಮಂಗಳ ಗ್ರಹದ ಮಣ್ಣಿಗೆ ಬ್ಯಾಕ್ಟೀರಿಯಾ ಮತ್ತು ಯೂರಿಯಾ ಸೇರಿಸಿ ಇಟ್ಟಿಗೆ ತಯಾರಿಸಲಾಗುತ್ತಿದೆ. ಮಂಗಳದ ಮಣ್ಣಿಗೆ ಸ್ಪೋರೊಸಾರ್ಸಿನಾ ಪಾಶ್ಚುರಿ ಎಂಬ ಬ್ಯಾಕ್ಟೀರಿಯಾ, ಯೂರಿಯಾ ಮತ್ತು ನಿಕಲ್ ಕ್ಲೋರೈಡ್ (NiCl2) ಬೆರೆಸಿ ಸ್ಲರಿ(ಮಡ್ಡಿ) ಯನ್ನು ರಚಿಸಲಾಗುತ್ತದೆ. ಈ ಸ್ಲರಿಯನ್ನು ಯಾವುದೇ ಅಪೇಕ್ಷಿತ ಆಕಾರದ ಅಚ್ಚುಗಳಲ್ಲಿ ಸುರಿಯಬಹುದು. ಕೆಲವು ದಿನಗಳಲ್ಲಿ ಬ್ಯಾಕ್ಟೀರಿಯಾವು ಯೂರಿಯಾವನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಹರಳುಗಳಾಗಿ ಪರಿವರ್ತಿಸುತ್ತದೆ. ಸೂಕ್ಷ್ಮಜೀವಿಗಳಿಂದ ಸ್ರವಿಸುವ ಬಯೋಪಾಲಿಮರ್‌ಗಳ ಜೊತೆಗೆ ಈ ಹರಳುಗಳು ಮಣ್ಣಿನ ಕಣಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಸಿಮೆಂಟ್‌ನಂತೆ ಕಾರ್ಯನಿರ್ವಹಿಸುತ್ತವೆ. ಈ ಹಿಂದೆಯೂ ಇಂತಹ ಪ್ರಯತ್ನಗಳನ್ನು ನಡೆಸಲಾಗಿದ್ದರೂ ಅವು ವಿಫಲವಾಗಿದ್ದವು. ಆದರೆ ಈ ಬಾರಿ ಯಶಸ್ಸು ಸಿಗುತ್ತದೆ ಎನ್ನುತ್ತಾರೆ ಐ.ಐ.ಎಸ್.ಸಿ.ಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಲೋಕ್ ಕುಮಾರ್ ಅವರು. ಬ್ಯಾಕ್ಟೀರಿಯಾಗಳು ರಂಧ್ರಗಳ ಜಾಗದಲ್ಲಿ ಆಳವಾಗಿ ನುಸುಳುತ್ತವೆ, ಕಣಗಳನ್ನು ಒಟ್ಟಿಗೆ ಬಂಧಿಸಲು ತಮ್ಮದೇ ಆದ ಪ್ರೋಟೀನ್‌ಗಳನ್ನು ಬಳಸುತ್ತವೆ, ಸರಂಧ್ರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಲವಾದ ಇಟ್ಟಿಗೆಗಳಿಗೆ ಕಾರಣವಾಗುತ್ತದೆ ಎಂಬುದು ಅವರ ಬಲವಾದ ಅಭಿಮತ. ಹಿಂದೆ, ಇದೇ ಸಂಶೋಧನಾ ತಂಡವು ಚಂದ್ರನ ಮಣ್ಣಿನಿಂದ ಇಟ್ಟಿಗೆ ತಯಾರಿಸುವ ವಿಧಾನವನ್ನು ಮಾಡಿತ್ತು. ಈ ವಿಧಾನದಿಂದ ಕೇವಲ ಸಿಲಿಂಡರಾಕಾರದ ಇಟ್ಟಿಗೆಗಳನ್ನು ಮಾತ್ರ ತಯಾರಿಸಲು ಸಾಧ್ಯವಾಗಿತ್ತು. ಆದರೆ ಪ್ರಸ್ತುತ ಸ್ಲರಿ-ಕಾಸ್ಟಿಂಗ್ ವಿಧಾನವು ಸಂಕೀರ್ಣ ಆಕಾರದ ಇಟ್ಟಿಗೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. IIScನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕೌಶಿಕ್ ವಿಶ್ವನಾಥನ್ ಅವರ ಸಹಾಯದಿಂದ ಸ್ಲರಿ-ಕಾಸ್ಟಿಂಗ್ ವಿಧಾನವನ್ನು ಅಭಿವೃದ್ಧಿಪಡಿ ಸಲಾಗಿದೆ. ಅವರ ಲ್ಯಾಬ್ ಸುಧಾರಿತ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ವಿಧಾನವನ್ನು ಮಂಗಳದ ಮಣ್ಣಿಗೆ ವಿಸ್ತರಿಸುವುದು ಅದರ ಸವಾಲುಗಳಲ್ಲೊಂದು ಆಗಿತ್ತು. ಮಂಗಳದ ಮಣ್ಣಿನಲ್ಲಿ ಬಹಳಷ್ಟು ಕಬ್ಬಿಣವಿದೆ, ಇದು ಜೀವಿಗಳಿಗೆ ವಿಷತ್ವವನ್ನು ಉಂಟುಮಾಡುತ್ತದೆ. ಆರಂಭದಲ್ಲಿ, ನಮ್ಮ ಬ್ಯಾಕ್ಟೀರಿಯಾಗಳು ಬೆಳೆಯಲಿಲ್ಲ. ಮಣ್ಣನ್ನು ಬ್ಯಾಕ್ಟೀರಿಯಾಕ್ಕೆ ಆತಿಥ್ಯ ನೀಡುವಲ್ಲಿ ನಿಕಲ್ ಕ್ಲೋರೈಡ್ ಅನ್ನು ಸೇರಿಸುವುದು ಪ್ರಮುಖ ಹಂತವಾಗಿದೆ ಎಂದು ಕುಮಾರ್ ವಿವರಿಸಿದ್ದಾರೆ.

ಬ್ಯಾಕ್ಟೀರಿಯಾಗಳು ಬಹುಮುಖ ಜೀವಿಗಳು ಮತ್ತು ಕೆಲವು ಪ್ರಭೇದಗಳು ಜೈವಿಕ ಖನಿಜೀಕರಣಕ್ಕೆ ಸಮರ್ಥವಾಗಿವೆ. ಈ ಪ್ರಕ್ರಿಯೆಯ ಮೂಲಕ ಜೀವಂತ ಜೀವಿಗಳು ಖನಿಜಗಳನ್ನು ಉತ್ಪಾದಿ ಸುವ ಮೂಲಕ ಅಸ್ತಿತ್ವದಲ್ಲಿರುವ ಅಂಗಾಂಶಗಳನ್ನು ಗಟ್ಟಿಯಾಗಿಸಲು ಅಥವಾ ಗಟ್ಟಿಯಾಗಿಡಲು ಇದನ್ನು ಬಳಸಲಾಗುತ್ತಿತ್ತು. ಕೆಂಪು ಗ್ರಹದ ಕಡಿಮೆ ವಾತಾವರಣ ಮತ್ತು ಕಡಿಮೆ ಗುರುತ್ವಾಕರ್ಷಣೆಯ ಪರಿಣಾಮದ ವಿರುದ್ಧ ಈ ಇಟ್ಟಿಗೆಗಳ ಬಲವನ್ನು ಪರೀಕ್ಷಿಸುವ ಅವಕಾಶವನ್ನು ತಂಡವು ಪಡೆದುಕೊಂಡಿದೆ. ಭೂಮಿಗೆ ಹೋಲಿಸಿದರೆ, ಮಂಗಳ ಗ್ರಹದ ವಾತಾವರಣವು 100 ಪಟ್ಟು ತೆಳ್ಳಗಿದೆ. ಆದರೆ 95 ಪ್ರತಿಶತದಷ್ಟು ಕಾರ್ಬನ್ ಡೈಆಕ್ಸೈಡ್ ಅನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ತಂಡವು ಲ್ಯಾಬ್-ಆನ್-ಎ-ಚಿಪ್ ಸಾಧನವನ್ನು ಅಭಿವೃದ್ಧಿ ಪಡಿಸಿದೆ. ಇದು ಮೈಕ್ರೋಗ್ರಾವಿಟಿ ಪರಿಸ್ಥಿತಿಗಳಲ್ಲಿ ಬ್ಯಾಕ್ಟೀರಿಯಾದ ಚಟುವಟಿಕೆಯನ್ನು ಅಳೆಯುವ ಗುರಿಯನ್ನು ಹೊಂದಿದೆ. ಭವಿಷ್ಯದಲ್ಲಿ ಮೈಕ್ರೋಗ್ರಾವಿಟಿ ಪರಿಸ್ಥಿತಿಗಳಲ್ಲಿ ಪ್ರಯೋಗಗಳನ್ನು ಮಾಡುವ ನಮ್ಮ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು IIScನಲ್ಲಿ DBT-ಬಯೋಕೇರ್ ಫೆಲೋ ಮತ್ತು ಅಧ್ಯಯನದ ಮೊದಲ ಲೇಖಕಿ ರಶ್ಮಿ ದೀಕ್ಷಿತ್ ವಿವರಿಸುತ್ತಾರೆ. ಈ ಹಿಂದೆ ಚಂದ್ರನ ಇಟ್ಟಿಗೆ ತಯಾರಿಕೆಯಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ISRO  ಸಹಾಯದಿಂದ, ತಂಡವು ನವೀನ ಸಾಧನಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಹೊಂದಿದೆ. ಇದರಿಂದಾಗಿ ಅವರು ಬ್ಯಾಕ್ಟೀರಿಯಾದ ಬೆಳವಣಿಗೆಯ ಮೇಲೆ ಕಡಿಮೆ ಗುರುತ್ವಾಕರ್ಷಣೆಯ ಪರಿಣಾಮವನ್ನು ಇನ್ನಷ್ಟು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಹೀಗಿರಲಿವೆ ಇಟ್ಟಿಗೆ

'ಬಾಹ್ಯಾಕಾಶ ಇಟ್ಟಿಗೆಗಳನ್ನು' ಮಂಗಳ ಗ್ರಹದಲ್ಲಿ ಕಟ್ಟಡದಂತಹ ರಚನೆಗಳನ್ನು ನಿರ್ಮಿಸಲು ಬಳಸಬಹುದು. ಅದು ಕೆಂಪು ಗ್ರಹದಲ್ಲಿ ಮಾನವ ವಸಾಹತುವನ್ನು ಸುಲಭಗೊಳಿಸುತ್ತದೆ. ತಂಡವು ಮೊದಲು ಮಂಗಳದ ಮಣ್ಣನ್ನು ಗ್ವಾರ್ ಗಮ್, ಸ್ಪೋರೊ ಸಾರ್ಸಿನಾ ಪಾಸ್ಟೂರಿ ಎಂಬ ಬ್ಯಾಕ್ಟೀರಿಯಾ, ಯೂರಿಯಾ ಮತ್ತು ನಿಕಲ್ ಕ್ಲೋರೈಡ್ (NiCl  2) ನೊಂದಿಗೆ ಬೆರೆಸಿ ಸ್ಲರಿಯನ್ನು ತಯಾರಿಸಿತು. ಈ ಸ್ಲರಿಯನ್ನು ಯಾವುದೇ ಅಪೇಕ್ಷಿತ ಆಕಾರದ ಅಚ್ಚುಗಳಲ್ಲಿ ಸುರಿಯಬಹುದು ಮತ್ತು ಕೆಲವು ದಿನಗಳಲ್ಲಿ ಬ್ಯಾಕ್ಟೀರಿಯಾವು ಯೂರಿಯಾವನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಹರಳುಗಳಾಗಿ ಪರಿವರ್ತಿಸುತ್ತದೆ. ಈ ಸ್ಫಟಿಕಗಳು, ಸೂಕ್ಷ್ಮಜೀವಿಗಳಿಂದ ಸ್ರವಿಸುವ ಬಯೋಪಾಲಿಮರ್‌ಗಳೊಂದಿಗೆ, ಮಣ್ಣಿನ ಕಣಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಸಿಮೆಂಟ್ ಆಗಿ ಕಾರ್ಯನಿರ್ವಹಿಸುತ್ತವೆ. ಬ್ಯಾಕ್ಟೀರಿಯಾಗಳು ರಂಧ್ರದ ಜಾಗಗಳಲ್ಲಿ ಆಳವಾಗಿ ನುಸುಳುತ್ತವೆ. ಕಣಗಳನ್ನು ಒಟ್ಟಿಗೆ ಬಂಧಿಸಲು ತಮ್ಮದೇ ಆದ ಪ್ರೋಟೀನ್ ಬಳಸುತ್ತವೆ. ಸರಂಧ್ರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಲವಾದ ಇಟ್ಟಿಗೆ ನಿರ್ಮಾಣಕ್ಕೆ ಕಾರಣವಾಗುತ್ತವೆ. ಮಂಗಳದ ಮಣ್ಣಿನ ಸಂಯೋಜನೆಯು ಮತ್ತೊಂದು ಸವಾಲಾಗಿತ್ತು, ಇದು ಜೀವಿಗಳಿಗೆ ವಿಷತ್ವವನ್ನು ಉಂಟುಮಾಡುವ ಬಹಳಷ್ಟು ಕಬ್ಬಿಣವನ್ನು ಹೊಂದಿದೆ. ಕಾರಣ ಆರಂಭದಲ್ಲಿ ಅಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲಿಲ್ಲ. ನಿಕಲ್ ಕ್ಲೋರೈಡ್ ಅನ್ನು ಮಂಗಳನ ಮಣ್ಣಿಗೆ ಸೇರಿಸುವ ಮೂಲಕ ಬ್ಯಾಕ್ಟೀರಿಯಾ ಬೆಳೆಯಲು ಸೂಕ್ತ ವಾತಾವರಣ ನೀಡಲಾಯಿತು. ಈ ಹಿಂದೆಯೂ ಇಂತಹ ಅನೇಕ ಪ್ರಯತ್ನಗಳು ನಡೆದಿದ್ದವು. ಅದರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳನ್ನು ಒಳಗೊಂಡ ತಂಡವೊಂದು ಹೊಸದಾದ ಪ್ರಸ್ಥಾವನೆಯನ್ನು ಜಗತ್ತಿನ ಮುಂದಿಟ್ಟಿತ್ತು. ಇತರ ಗ್ರಹಗಳಲ್ಲಿ ಕಟ್ಟಡ ಸಾಮಗ್ರಿಗಳನ್ನು ಪಡೆಯುವ ಅತ್ಯಂತ ವಿಭಿನ್ನವಾದ ಹಾಗೂ ಅಗ್ಗದ ಮಾರ್ಗವನ್ನು ಪ್ರಸ್ತಾಪಿಸಿತ್ತು. ಇವರ ಪ್ರಸ್ಥಾವನೆ ಒಂದು ರೀತಿಯ ರೋಚಕ ಕಾದಂಬರಿ ಯಂತಿತ್ತು. ಮಾನವನ ಬೆವರು ಮತ್ತು ಕಣ್ಣೀರನ್ನು ಬಳಸಿಕೊಂಡು ಆಸ್ಟ್ರೋಕ್ರೀಟ್ ತಯಾರಿಸುವ ಪ್ರಸ್ತಾವನೆ ಇದಾಗಿತ್ತು. ಮಾನವನ ಸೀರಮ್ ಅಲ್ಬುಮಿನ್, ರಕ್ತದ ಪ್ಲಾಸ್ಮಾದಿಂದ ಸಾಮಾನ್ಯ ಪ್ರೊಟೀನ್ ಬಳಸಿಕೊಂಡು, ಚಂದ್ರ ಅಥವಾ ಮಂಗಳದ ಮಣ್ಣಿನಿಂದ ಆಸ್ಟ್ರೋಕ್ರೀಟ್ ಅನ್ನು ರಚಿಸುವ ವಿಧಾನವೊಂದನ್ನು ಅವರು ಪ್ರದರ್ಶಿಸಿದ್ದರು. ಆರು ಗಗನಯಾತ್ರಿಗಳ ತಂಡವು ಮಂಗಳಗ್ರಹದಲ್ಲಿ ಎರಡು ವರ್ಷಗಳ ಕಾರ್ಯಾಚರಣೆಯಲ್ಲಿ 500 ಕೆಜಿಗಿಂತ ಹೆಚ್ಚು ಆಸ್ಟ್ರೋಕ್ರೀಟ್ ಅನ್ನು ಉತ್ಪಾದಿಸಬಹುದು ಎಂಬುದು ಅವರ ಪ್ರಸ್ತಾವನೆ ಯಲ್ಲಿ ಸೇರಿತ್ತು. ಇದೆಲ್ಲವೂ ಬಹಳ ಫ್ಯೂಚರಿಸ್ಟಿಕ್ ಎಂದು ತೋರುತ್ತದೆ. ಆದರೆ ಕಟ್ಟಡ ಸಾಮಗ್ರಿಗಳಿಗೆ ರಕ್ತವನ್ನು ಬಳಸುವ ಕಲ್ಪನೆಯು ಹೊಸದೇನೂ ಅಲ್ಲ. ಮಧ್ಯಕಾಲೀನ ಕಾಲದಲ್ಲಿ ಪ್ರಾಣಿ ಗಳ ರಕ್ತವನ್ನು ಹೆಚ್ಚಾಗಿ ಗಾರೆಗಳಲ್ಲಿ ಬೈಂಡರ್ ಆಗಿ ಬಳಸಲಾಗುತ್ತಿತ್ತು.

ಇದು ಏಕೆ ಮುಖ್ಯ?

ಭೂಮಿಯಿಂದ ಬಾಹ್ಯಾಕಾಶಕ್ಕೆ ವಸ್ತುವನ್ನು ಚಲಿಸುವುದು ತುಂಬಾ ದುಬಾರಿ ಪ್ರತಿಪಾದನೆಯಾಗಿದೆ. ಟನ್‌ಗಳಷ್ಟು ನಿರ್ಮಾಣ ಸಾಮಗ್ರಿಯನ್ನು ಮಂಗಳಕ್ಕೆ ಸ್ಥಳಾಂತರಿಸುವುದನ್ನು ಎಷ್ಟೊಂದು ದುಬಾರಿ ಎಂಬುದನ್ನು ಊಹಿಸಿದರೆ ಆಘಾತವಾಗುತ್ತದೆ. ವಾಸ್ತವವಾಗಿ, ಒಂದು ಇಟ್ಟಿಗೆಯನ್ನು ಮಂಗಳ ಗ್ರಹಕ್ಕೆ ಸಾಗಿಸಲು ಒಂದು ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಅಲ್ಲಿಯೇ ಇಟ್ಟಿಗೆಗಳನ್ನು ತಯಾರಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಅದಕ್ಕಾಗಿ ಮೈಕ್ರೋಸ್ಕೋಪಿಕ್ ಬ್ಯಾಕ್ಟೀರಿಯಾವನ್ನು ಬಳಸಿಕೊಂಡು ಅಲ್ಲಿಯೇ ನಿರ್ಮಾಣ ವಸ್ತುಗಳನ್ನು ನಿರ್ಮಿಸಲು ಸಾಧ್ಯವಾಗುವುದು ಕಾರ್ಯ ಸಾಧ್ಯವಾದ ಆಯ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಇನ್ನಷ್ಟು ಹೊಳಹುಗಳು ದೊರೆಯ ಬಹುದೇ ಎಂಬುದನ್ನು ಕಾದು ನೋಡಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)