ರೂಪಾಯಿಯನ್ನು ರಕ್ಷಿಸಲು ಪರದಾಡುತ್ತಿರುವ ಆರ್ಬಿಐ
ಆರ್ಥಿಕತೆಯ ಮೇಲೆ ಉಕ್ರೇನ್ ಯುದ್ಧದ ಪರಿಣಾಮದ ಕುರಿತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂದರ್ಭ ಸಿಕ್ಕಿದಾಗೆಲ್ಲ ಮಾತನಾಡುತ್ತಿದ್ದಾರೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸರಕುಗಳು ಮತ್ತು ತೈಲ ಬೆಲೆಗಳ ಏರಿಕೆಯ ಕಂಪನದ ಅಲೆಗಳನ್ನು ಭಾರತಕ್ಕೆ ಪ್ರಸರಣಗೊಳಿಸುತ್ತಿರುವುದಕ್ಕಾಗಿ ಉಕ್ರೇನ್ ಯುದ್ಧವನ್ನು ದೂರುತ್ತಿದ್ದಾರೆ. ಸತ್ಯವೇನೆಂದರೆ ಈ ಕಂಪನದ ಅಲೆಗಳು ಉಕ್ರೇನ್ ಮೇಲೆ ಆಕ್ರಮಣಕ್ಕೆ ಮೊದಲೇ ಸೃಷ್ಟಿಯಾಗಿತೊಡಗಿದ್ದವು, ಆದರೆ ಅದನ್ನು ಸಂಪೂರ್ಣವಾಗಿ ನಿರಾಕರಿಸಿದ್ದ ಆರ್ಬಿಐ ಭಾರತವು ಹೆಚ್ಚಿನ ರಕ್ಷಣೆಯನ್ನು ಹೊಂದಿದೆ ಎಂದೇ ಪ್ರತಿಪಾದಿಸುತ್ತಿತ್ತು. ನೆಹರೂ ಅವರ ಸಂಕಟದಲ್ಲಿ ತಾನೆಂದೂ ಸಿಲುಕುವುದಿಲ್ಲ ಎಂಬ ಮೋದಿಯವರ ಬಡಿವಾರ ಇದಕ್ಕೆ ಕಾರಣವಾಗಿತ್ತೋ ಎನ್ನುವುದು ಗೊತ್ತಿಲ್ಲ.
ಭಾರತದಲ್ಲಿ ಹಣದುಬ್ಬರಕ್ಕಾಗಿ 1953ರ ಕೊರಿಯನ್ ಯುದ್ಧವನ್ನು ದೂರಿದ್ದಕ್ಕಾಗಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಂಸತ್ತಿನಲ್ಲಿ ಟೀಕಿಸಿದ್ದರು. ವಿಪರ್ಯಾಸವೆಂದರೆ ಅವರದೇ ಸರಕಾರವು ಶೀಘ್ರವೇ ಹಣದುಬ್ಬರದೊಂದಿಗೆ ಹೆಣಗಾಡಲಿದೆ ಮತ್ತು ಇದಕ್ಕಾಗಿ ಯುಕ್ರೇನ್ ಯುದ್ಧವನ್ನು ದೂಷಿಸಲಿದೆ.
ಆರ್ಥಿಕತೆಯ ಮೇಲೆ ಉಕ್ರೇನ್ ಯುದ್ಧದ ಪರಿಣಾಮದ ಕುರಿತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂದರ್ಭ ಸಿಕ್ಕಿದಾಗೆಲ್ಲ ಮಾತನಾಡುತ್ತಿದ್ದಾರೆ. ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಸರಕುಗಳು ಮತ್ತು ತೈಲ ಬೆಲೆಗಳ ಏರಿಕೆಯ ಕಂಪನದ ಅಲೆಗಳನ್ನು ಭಾರತಕ್ಕೆ ಪ್ರಸರಣಗೊಳಿಸುತ್ತಿರುವುದಕ್ಕಾಗಿ ಉಕ್ರೇನ್ ಯುದ್ಧವನ್ನು ದೂರುತ್ತಿದ್ದಾರೆ. ಸತ್ಯವೇನೆಂದರೆ ಈ ಕಂಪನದ ಅಲೆಗಳು ಉಕ್ರೇನ್ ಮೇಲೆ ಆಕ್ರಮಣಕ್ಕೆ ಮೊದಲೇ ಸೃಷ್ಟಿಯಾಗತೊಡಗಿದ್ದವು, ಆದರೆ ಅದನ್ನು ಸಂಪೂರ್ಣವಾಗಿ ನಿರಾಕರಿಸಿದ್ದ ಆರ್ಬಿಐ ಭಾರತವು ಹೆಚ್ಚಿನ ರಕ್ಷಣೆಯನ್ನು ಹೊಂದಿದೆ ಎಂದೇ ಪ್ರತಿಪಾದಿಸುತ್ತಿತ್ತು. ನೆಹರೂ ಅವರ ಸಂಕಟದಲ್ಲಿ ತಾನೆಂದೂ ಸಿಲುಕುವುದಿಲ್ಲ ಎಂಬ ಮೋದಿಯವರ ಬಡಿವಾರ ಇದಕ್ಕೆ ಕಾರಣವಾಗಿತ್ತೋ ಎನ್ನುವುದು ಗೊತ್ತಿಲ್ಲ.
ಆದರೆ ಕೆಲವೇ ವಾರಗಳಲ್ಲಿ ಆರ್ಬಿಐನಲ್ಲಿಯ ವಿದ್ಯಮಾನಗಳು ನಾಟಕೀಯ ಬದಲಾವಣೆಗಳನ್ನು ಕಂಡಿವೆ. ಆರ್ಬಿಐ ಈ ವಾರ ಅನಿರೀಕ್ಷಿತವಾಗಿ ರೆಪೊ ದರವನ್ನು ಹೆಚ್ಚಿಸಿದ್ದು ಏಕೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಕಷ್ಟು ದ್ರವ್ಯತೆಯನ್ನು ಹಿಂದೆಗೆದುಕೊಳ್ಳುತ್ತಿರುವುದು ಏಕೆ ಎಂದು ಈಗಲೂ ಪ್ರತಿಯೊಬ್ಬರೂ ಅಚ್ಚರಿ ಪಡುತ್ತಿದ್ದಾರೆ. ಕೇವಲ 25 ದಿನಗಳ ಹಿಂದೆ ತನ್ನ ನಿಗದಿತ ಹಣಕಾಸು ನೀತಿ ಹೇಳಿಕೆಯಲ್ಲಿ ಶೇ.4ರ ರೆಪೊ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಬೆಳವಣಿಗೆಯನ್ನು ಬೆಂಬಲಿಸಲು ತನ್ನ 'ಸೌಲಭ್ಯ' ನೀತಿಯನ್ನು ಮುಂದುವರಿಸುವುದಾಗಿ ಆರ್ಬಿಐ ತಿಳಿಸಿದ್ದರಿಂದ ಅದರ ಈಗಿನ ಕ್ರಮ ಮಾರುಕಟ್ಟೆಯನ್ನು ದಿಗ್ಭ್ರಮೆಗೊಳಿಸಿದೆ. ಆದರೆ ಒಂದೇ ತಿಂಗಳಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿದಿರುವ ಆರ್ಬಿಐ ರೆಪೊ ದರವನ್ನು 40 ಮೂಲಾಂಕಗಳಷ್ಟು ಹೆಚ್ಚಿಸಿದ್ದು ಮಾತ್ರವಲ್ಲ, ನಗದು ಮೀಸಲು ಅನುಪಾತ (ಬ್ಯಾಂಕುಗಳು ಕಡ್ಡಾಯವಾಗಿ ಆರ್ಬಿಐನಲ್ಲಿ ಠೇವಣಿಯಿರಿಸಬೇಕಾದ ಹಣ)ವನ್ನು ಶೇ.0.5ರಷ್ಟು ಹೆಚ್ಚಿಸುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯಿಂದ ಸುಮಾರು 87,500 ಕೋ.ರೂ.ಗಳನ್ನು ತಕ್ಷಣವೇ ಹಿಂದೆಗೆದುಕೊಳ್ಳುವುದಾಗಿ ಪ್ರಕಟಿಸಿದೆ. ಇವೆರಡೂ ಕ್ರಮಗಳು ಸಂಪೂರ್ಣವಾಗಿ ಅನಿರೀಕ್ಷಿತವಾಗಿದ್ದವು ಮತ್ತು ಶೇರು ಮಾರುಕಟ್ಟೆಗಳಲ್ಲಿ ರಕ್ತಪಾತವನ್ನೇ ಉಂಟು ಮಾಡಿದ್ದವು.
ಆರ್ಬಿಐ ತನ್ನ ನಿಲುವನ್ನು ಅಷ್ಟೊಂದು ತ್ವರಿತವಾಗಿ ಬದಲಿಸಿದ್ದು ಏಕೆ ಎನ್ನುವುದು ಈಗಿನ ಪ್ರಶ್ನೆಯಾಗಿದೆ. ಉತ್ತರ ಸರಳವಾಗಿದೆ; ಆರ್ಬಿಐ ಹಣದುಬ್ಬರದ ಪ್ರಮಾಣವನ್ನು ತಪ್ಪಾಗಿ ಲೆಕ್ಕ ಹಾಕಿತ್ತು. ತನ್ನ ಎಪ್ರಿಲ್ ಹೇಳಿಕೆಯಲ್ಲಿ ಆರ್ಬಿಐ 2022-23ನೇ ಸಾಲಿಗೆ ಶೇ.5.7ರಷ್ಟು ಗ್ರಾಹಕ ಬೆಲೆ ಹಣದುಬ್ಬರವನ್ನು ಅಂದಾಜಿಸಿತ್ತು. ಆದಾಗ್ಯೂ, ಮುಂದಿನ ವಾರ ಪ್ರಕಟಗೊಳ್ಳಲಿರುವ ಎಪ್ರಿಲ್ ತಿಂಗಳಿನ ಮಾಸಿಕ ಹಣದುಬ್ಬರ ಶೇ.7.5ರಿಂದ ಶೇ.8ರಷ್ಟಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದು ಆರ್ಬಿಐ ಮಾಡಿರುವ ಬೃಹತ್ ಕೀಳಂದಾಜು ಆಗಿದೆ. 2022-23ನೇ ಸಾಲಿಗಾಗಿ ಆರ್ಬಿಐ ಹಣದುಬ್ಬರವನ್ನು ಮೊದಲ ತ್ರೈಮಾಸಿಕಕ್ಕೆ ಶೇ.6.3, ಎರಡನೇ ತ್ರೈಮಾಸಿಕಕ್ಕೆ ಶೇ.5.8, ಮೂರನೇ ತ್ರೈಮಾಸಿಕಕ್ಕೆ ಶೇ.5.4 ಮತ್ತು ನಾಲ್ಕನೇ ತ್ರೈಮಾಸಿಕಕ್ಕೆ ಶೇ.5-1 ಎಂದು ಬಿಂಬಿಸುತ್ತಿದೆ. ಮುಂದಿನ ತಿಂಗಳು ಆರಂಭದಲ್ಲಿ ಹೊರಡಿಸಲಿರುವ ತನ್ನ ನಿಗದಿತ ಹೇಳಿಕೆಯಲ್ಲಿ ಆರ್ಬಿಐ ಇವೆಲ್ಲ ಸಂಖ್ಯೆಗಳನ್ನು ಪರಿಷ್ಕರಿಸಬೇಕಾಗಬಹುದು. ಕೆಲವು ತಿಂಗಳುಗಳ ಹಿಂದಿನವರೆಗೂ ಆರ್ಬಿಐ ಬೆಳವಣಿಗೆ, ಹಣದುಬ್ಬರ ಮತ್ತು ಹಣಕಾಸು ಸ್ಥಿರತೆ ಇವು ಕ್ರಮವಾಗಿ ತನ್ನ ಕಾಳಜಿಗಳಾಗಿವೆ ಎಂದು ಹೇಳಿಕೊಂಡು ಬಂದಿತ್ತು. ಈಗ ಇದು ತಿರುವುಮುರುವಾಗಿದೆ. ಹಣದುಬ್ಬರ ಪ್ರಾಥಮಿಕ ಸಮಸ್ಯೆಯಾಗಿದೆ ಮತು ಹಣಕಾಸು ಸ್ಥಿರತೆಯೂ ಅಲುಗಾಡುತ್ತಿದೆ.
ಅಮೆರಿಕದ ಬಾಂಡ್ ಪ್ರತಿಫಲಗಳು ನಾಟಕೀಯವಾಗಿ ಹೆಚ್ಚುತ್ತಿರುವುದರಿಂದ ಮತ್ತು ಭಾರತ ಸರಕಾರದ ಸೆಕ್ಯೂರಿಟಿಗಳ ಪ್ರತಿಫಲದೊಂದಿಗಿನ ಅಂತರವನ್ನು ಅಪಾಯಕಾರಿಯಾಗಿ ತಗ್ಗಿಸುತ್ತಿರುವುದರಿಂದ ಆರ್ಬಿಐ ಅವಸರದಿಂದ ರೆಪೊ ದರವನ್ನು ಹೆಚ್ಚಿಸಿದೆ ಎಂದು ಕೆಲವು ಆರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ. ಈ ವಿದ್ಯಮಾನವು ಭಾರತದ ಮಾರುಕಟ್ಟೆಯಿಂದ ತುಲನಾತ್ಮಕವಾಗಿ ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ಪ್ರತಿಫಲ ನೀಡುತ್ತಿರುವ ಯುಎಸ್ ಬಾಂಡ್ಗಳಿಗೆ ಭಾರೀ ಪ್ರಮಾಣದಲ್ಲಿ ಬಂಡವಾಳ ವರ್ಗಾವಣೆಗೆ ಕಾರಣವಾಗಬಹುದಿತ್ತು ಮತ್ತು ರೂಪಾಯಿಯ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿತ್ತು. ವಾಸ್ತವದಲ್ಲಿ ಆರ್ಬಿಐ ರೂಪಾಯಿಯನ್ನು ರಕ್ಷಿಸಿಕೊಳ್ಳಲು ತನ್ನ ಮೀಸಲಿನಿಂದ ಈಗಾಗಲೇ 25 ಶತಕೋಟಿಗೂ ಹೆಚ್ಚು ಡಾಲರ್ಗಳನ್ನು ವ್ಯಯಿಸಿದೆ. ಅದರ ಹಸ್ತಕ್ಷೇಪವಿರದಿದ್ದರೆ ಡಾಲರ್ನೆದುರು ರೂಪಾಯಿ ವೌಲ್ಯ ಇಂದು 80ರ ಸಮೀಪವಿರುವ ಸಾಧ್ಯತೆಯಿತ್ತು. ಬಲವಾದ ರೂಪಾಯಿಗೆ ಹೆಚ್ಚಿನ ಸದೃಢತೆಯನ್ನು ನೀಡಲು ಬಿಜೆಪಿ ಹೆಸರಾಗಿದೆ ಮತ್ತು ಈ ನಿಲುವು ಇಂತಹ ಸಮಯಗಳಲ್ಲಿ ತರ್ಕಬದ್ಧ ಮಾರುಕಟ್ಟೆ ತತ್ವಗಳಿಗೆ ವಿರುದ್ಧವಾಗುತ್ತದೆ.
2019ರ ಅಕ್ಟೋಬರ್ನಲ್ಲಿ 640 ಶತಕೋಟಿ ಡಾಲರ್ಗಳಷ್ಟು ಉತ್ತುಂಗ ಮಟ್ಟದಲ್ಲಿದ್ದ ವಿದೇಶಿ ವಿನಿಮಯ ಮೀಸಲು ಈಗಾಗಲೇ 40 ಶತಕೋಟಿ ಡಾಲರ್ಗಿಂತಲೂ ಕಡಿಮೆಯಾಗಿದೆ, ಇಂತಹ ಸ್ಥಿತಿಯಲ್ಲಿ ಮೋದಿ ವಿದೇಶಿ ವಿನಿಮಯ ಮೀಸಲನ್ನು ವ್ಯಯಿಸಿ ರೂಪಾಯಿಯನ್ನು ರಕ್ಷಿಸಲು ಆರ್ಬಿಐಗೆ ಎಷ್ಟರ ಮಟ್ಟಿಗೆ ಅವಕಾಶವನ್ನು ನೀಡಬಹುದು ಎನ್ನುವುದು ಕುತೂಹಲಕಾರಿಯಾಗಿದೆ. ಭಾರತದ ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆಯನ್ನು ಹೊಸ ಬಂಡವಾಳ ಹರಿವು ಸರಿದೂಗಿಸದಿರಬಹುದು ಮತ್ತು ಮೀಸಲು ಇನ್ನಷ್ಟು ಕುಸಿಯಬಹುದು. ಅನೇಕ ಅರ್ಥಶಾಸ್ತ್ರಜ್ಞರು 2022-23ನೇ ಸಾಲಿಗೆ ಪಾವತಿಗಳ ಋಣಾತ್ಮಕ ಶಿಲ್ಕನ್ನು ಮುನ್ನಂದಾಜಿಸಿದ್ದಾರೆ. ಹೊಸ ವಿದೇಶಿ ಬಂಡವಾಳದ ಒಳಹರಿವು ತನ್ನ ಕುಸಿಯುತ್ತಿರುವ ವಿದೇಶಿ ವಿನಿಮಯ ಸಂಗ್ರಹದ ಚೇತರಿಕೆಗೆ ನೆರವಾಗುತ್ತದೆ ಮತ್ತು ಕೆಟ್ಟ ಜಾಗತಿಕ ಹಣಕಾಸು ಮಾರುಕಟ್ಟೆ ಸ್ಥಿತಿಗಳಲ್ಲಿಯೂ ಭಾರತವು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದೆ ಎನ್ನುವುದಕ್ಕೆ ಸಂಕೇತವಾಗಬಹುದು ಎಂದು ಸರಕಾರವು ಆಶಿಸಿರುವುದು ಅದು ಎಲ್ಐಸಿ ಐಪಿಒಗೆ ಒತ್ತು ನೀಡುತ್ತಿರುವ ಹತಾಶೆಗೆ ಕಾರಣವಾಗಿರಬಹುದು ಎಂದು ಕೆಲವು ಆರ್ಥಿಕ ತಜ್ಞರು ಹೇಳಿದ್ದಾರೆ.
ತೈಲ ಬೆಲೆಗಳ ಮೇಲೆ ದೇಶಿಯ ಪರಿಣಾಮ ಇನ್ನೂ ಸಂಪೂರ್ಣವಾಗಿ ಅನುಭವಕ್ಕೆ ಬಂದಿಲ್ಲವಾದ್ದರಿಂದ ಭಾರತದ ಹಣದುಬ್ಬರದ ಕಥೆಯು ಈಗಲೂ ತೆರೆದುಕೊಳ್ಳುತ್ತಿದೆ. ಈ ನಡುವೆ ಗೋಧಿ ಮತ್ತು ಖಾದ್ಯತೈಲ ಬೆಲೆಗಳು ತೀವ್ರ ಏರುಗತಿಯಲ್ಲಿವೆ. ತಜ್ಞರು ಹೇಳುವಂತೆ ಗೋಧಿ ಸಂಗ್ರಹ 44 ಮಿ.ಟನ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಈ ಅಂದಾಜು ಅರ್ಧಕ್ಕೆ ಇಳಿಯಬಹುದು. ಖಾಸಗಿ ಕ್ಷೇತ್ರವು ಸರಕಾರದ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗಿಂತ ಹೆಚ್ಚಿನ ದರಗಳಲ್ಲಿ ರೈತರಿಂದ ಹೆಚ್ಚಿನ ಗೋಧಿ ದಾಸ್ತಾನನ್ನು ಖರೀದಿಸಿದೆ. ಇದು ಖಂಡಿತ ಗೋಧಿಯ ಬೆಲೆ ಏರಿಕೆಗೆ ಕಾರಣವಾಗಲಿದೆ. ಹೀಗಾಗಿ ಆಹಾರ ಹಣದುಬ್ಬರವನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕಿದೆ, ಅದು ಜಿಡಿಪಿ ಬೆಳವಣಿಗೆಗೆ ಹೊಡೆತ ನೀಡುತ್ತದೆ.
ಒಟ್ಟಾರೆಯಾಗಿ, 2022-23ನೇ ಸಾಲಿಗೆ ಮೊದಲ ತ್ರೈಮಾಸಿಕವನ್ನು ಹೊರತುಪಡಿಸಿ ಮುಂಬರುವ ತ್ರೈಮಾಸಿಕಗಳು ಶೇ.7ರಿಂದ ಶೇ.8ರಷ್ಟು ಹಣದುಬ್ಬರವನ್ನು ಮತ್ತು ಶೇ.4ರಿಂದ ಶೇ.4.5ರಷ್ಟು ಜಿಡಿಪಿ ಬೆಳವಣಿಗೆಯನ್ನು ದಾಖಲಿಸುವ ಸಾಧ್ಯತೆಯಿದೆ. ಕೋವಿಡ್ ಎರಡನೇ ಅಲೆಯಿಂದಾಗಿ 2021 ಎಪ್ರಿಲ್-ಜೂನ್ನಲ್ಲಿ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿದ್ದರಿಂದ ಮೊದಲ ತ್ರೈಮಾಸಿಕ ಅಂಕಿಅಂಶಗಳು ವಿರೂಪಗೊಳ್ಳಲಿವೆ. ರಾಜಕೀಯ ಆರ್ಥಿಕತೆಯಲ್ಲಿ ವಿಷಯಗಳು ತೆರೆದುಕೊಳ್ಳುತ್ತಿರುವ ರೀತಿಯಿಂದಾಗಿ ಮೋದಿ ನೆಹರೂಗೆ ತುಂಬ ಅಗತ್ಯವಾಗಿರುವ ವಿಶ್ರಾಂತಿಯನ್ನು ನೀಡಬಹುದು ಮತ್ತು ಆತ್ಮಾವಲೋಕನವನ್ನು ಆರಂಭಿಸಬಹುದು.
ಕೃಪೆ: thewire.in