ಮೊಹಾಲಿ ದಾಳಿ ಹಿಂದೆ ನಿಷೇಧಿತ ಎಸ್ಎಫ್ಜೆ ಕೈವಾಡ
(ಫೋಟೊ - PTI)
ಮೊಹಾಲಿ: ಇಲ್ಲಿನ ಸೆಕ್ಟರ್ 77ರಲ್ಲಿನ ಪಂಜಾಬ್ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಕೇಂದ್ರ ಕಚೇರಿ ಇರುವ ಕಟ್ಟಡದ ಮೇಲೆ ನಡೆದ ರಾಕೆಟ್ನಿಂದ ಚಿಮ್ಮಿದ ಗ್ರೆನೇಡ್ ದಾಳಿಗೆ ಬಳಸಲಾದ ಲಾಂಚರ್ ಮಂಗಳವಾರ ಪತ್ತೆಯಾಗಿದೆ.
ನಿಷೇಧಿತ ಸಿಖ್ಸ್ ಫಾರ್ ಜೆಸ್ಟೀಸ್ (ಎಸ್ಎಫ್ಜೆ) ಸಂಘಟನೆಯ ಗುರುಪಾತವಂತ್ ಸಿಂಗ್ ಪನ್ನು ಧ್ವನಿ ಸಂದೇಶದಲ್ಲಿ ಈ ಘಟನೆಯ ಹೊಣೆ ಹೊತ್ತಿದ್ದು, ಆತನ ಹೇಳಿಕೆಗೆ ಈ ಲಾಂಚರ್ ಪತ್ತೆಯಾಗಿರುವುದು ಪುಷ್ಟಿ ನೀಡಿದೆ.
ಪಂಜಾಬ್ ಪೊಲೀಸರು 18-20 ಮಂದಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ. ಇದು ಭಯೋತ್ಪಾದಕ ಕೃತ್ಯವೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಆರ್ಪಿಜಿ ದಾಳಿ ನಡೆದ ಮರುದಿನ ರಾಜ್ಯ ಪೊಲೀಸರು ಮೊಹಾಲಿಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದಾರೆ. ಈ ಘಟನೆಯ ಹೊಣೆ ಹೊತ್ತಿರುವ ಗುರುಪಾತವಂತ್ ಸಿಂಗ್ ನ ಧ್ವನಿ ಸಂದೇಶವನ್ನು ದೃಢಪಡಿಸುವ ಪ್ರಕ್ರಿಯೆ ನಡೆದಿದೆ. "ನಾವು ಈ ಪ್ರಕರಣವನ್ನು ಬೇಧಿಸುವ ಸನಿಹದಲ್ಲಿದ್ದೇವೆ" ಎಂದು ಮೊಹಾಲಿ ಎಸ್ಪಿ ವಿವೇಕ್ ಶೀಲ್ ಸೋನಿ ಹೇಳಿದ್ದಾರೆ.
ತನಿಖಾಧಿಕಾರಿಗಳು ಗುಪ್ತಚರ ವಿಭಾಗದ ಕಟ್ಟಡದ ಸಮೀಪದಲ್ಲಿರುವ ಮೂರು ಮೊಬೈಲ್ ಟವರ್ ಗಳಿಂದ ಸುಮಾರು ಆರೇಳು ಸಾವಿರ ಮೊಬೈಲ್ ಡಾಟಾಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ, ಆರ್ಪಿಜಿ ದಾಳಿ ನಡೆಸಲು ಮಾರುತಿ ಸುಝುಕಿ ಸ್ವಿಫ್ಟ್ ಕಾರನ್ನು ಬಳಸಲಾಗಿದೆ ಎಂದು ಅವರು ವಿವರ ನೀಡಿದ್ದಾರೆ.