varthabharthi


ಸಂಪಾದಕೀಯ

ಸರಕಾರಿ ಶಾಲೆಗಳು ಪುನಶ್ಚೇತನಗೊಳ್ಳಲಿ

ವಾರ್ತಾ ಭಾರತಿ : 12 May, 2022

ಸಮವಸ್ತ್ರದ ಹೆಸರಿನಲ್ಲಿ ನಡೆದ ಸರಕಾರಿ ಪ್ರಾಯೋಜಿತ ಗೊಂದಲಗಳ ಜೊತೆಗೆ ಕಳೆದ ಶಾಲಾ ವರ್ಷ ಸಂಪನ್ನವಾಯಿತು. ಸರಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳ ಪ್ರವೇಶಕ್ಕೆ ಯೋಜನೆ ರೂಪಿಸಬೇಕಾದ ಸರಕಾರವೇ, ಸಮವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿನಿಯರನ್ನು ಸರಕಾರಿ ಶಾಲೆಗಳಲ್ಲಿ ಕಲಿಯುವುದರಿಂದ ವಂಚಿತರನ್ನಾಗಿಸಿತು. ಕೊರೋನ ಮತ್ತು ಲಾಕ್‌ಡೌನ್ ಕಾರಣದಿಂದ ಸಾವಿರಾರು ವಿದ್ಯಾರ್ಥಿಗಳು ಹಸಿವು, ಬಟ್ಟೆ, ಆಹಾರ, ಆರೋಗ್ಯ ಕಾರಣದಿಂದ ಶಾಲೆಯನ್ನು ತೊರೆದಿರುವ ಹೊತ್ತಿಲ್ಲಿ ಅವರನ್ನು ಮರಳಿ ಶಾಲೆಗೆ ಸೇರಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಬದಲಿಗೆ ಶಾಲೆಗೆ ಬಂದವರನ್ನು ಮರಳಿ ಮನೆಗೆ ಕಳುಹಿಸುವ ಆಂದೋಲನದಲ್ಲಿ ಯಶಸ್ವಿಯಾಯಿತು. ಹೊಟ್ಟೆಗೆ ಹಿಟ್ಟಿಲ್ಲದೆ ನರಳುತ್ತಿದ್ದ ಸರಕಾರಿ ಶಾಲೆಗಳಿಗೆ ಸಮವಸ್ತ್ರವೆಂಬ ಮಲ್ಲಿಗೆ ಮುಡಿಸಲು ಹೊರಟು ವಿಶ್ವಾದ್ಯಂತ ಛೀಮಾರಿಗೆ ತುತ್ತಾ ಯಿತು. ಇದೀಗ ಸಮವಸ್ತ್ರ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

2022-23ನೇ ಶೈಕ್ಷಣಿಕ ವರ್ಷ ಆರಂಭವಾಗಲು ನಾಲ್ಕೈದು ದಿನಗಳಷ್ಟೇ ಬಾಕಿ ಉಳಿದಿದೆ. ಸರಕಾರಿ ಶಾಲೆಯಲ್ಲಿ ಸುಮಾರು ಮೂರು ಲಕ್ಷ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಪೂರೈಕೆ ಯಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸರಕಾರ ಇನ್ನೂ ಟೆಂಡರ್ ಪ್ರಕ್ರಿಯೆಯಲ್ಲಿ ಕಾಲಹರಣ ಮಾಡುತ್ತಿರುವುದರಿಂದ ಎರಡನೇ ಜತೆ ಸಮವಸ್ತ್ರ ಪೂರೈಕೆ ಸಾಧ್ಯವಾಗಿಲ್ಲ. ಈ ವಿಳಂಬದಿಂದಾಗಿ ಸಮವಸ್ತ್ರ ವೆಚ್ಚ ಇನ್ನಷ್ಟು ದುಬಾರಿಯಾಗಿದೆ. ಸದ್ಯಕ್ಕೆ ಶಾಲಾ ಮಕ್ಕಳಿಗೆ ಸಮವಸ್ತ್ರ ಅತ್ಯಗತ್ಯ ಅಲ್ಲದೇ ಇದ್ದರೂ ಬಡ ಮಕ್ಕಳಿಗೆ ಸಮವಸ್ತ್ರದ ನೆಪದಲ್ಲಿ ಉಡುಪುಗಳು ದೊರಕುತ್ತಿದ್ದವು. ಈ ಬಟ್ಟೆಯ ಆಸೆಗಾಗಿಯೇ ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರು ಇನ್ನೂ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಒಂದೆಡೆ ಸರಕಾರಿ ಶಾಲೆಗೆ ಸಮವಸ್ತ್ರವೆನ್ನುವುದು ಅಳಿವು ಉಳಿವಿನ ಪ್ರಶ್ನೆಯೆಂದು ಬಿಂಬಿಸುತ್ತಾ, ಮಗದೊಂದೆಡೆ ಉಚಿತ ಸಮವಸ್ತ್ರವನ್ನು ಒದಗಿಸಲು ಸರಕಾರ ಮೀನಾಮೇಷ ಎಣಿಸುತ್ತಿರುವುು ವಿಪರ್ಯಾಸವಾಗಿದೆ.

ಹೊಸ ಶೈಕ್ಷಣಿಕ ವರ್ಷದಲ್ಲಿ ಸರಕಾರದ ಹೊಣೆಗಾರಿಕೆ ಬಹುದೊಡ್ಡದಿದೆ. ಕೊರೋನ ಕಾರ್ಮೋಡ ಹಂತಹಂತವಾಗಿ ಕರಗಿ, ಶಾಲೆಗಳು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸಜ್ಜುಗೊಳ್ಳುತ್ತಿರುವ ಸಮಯವಿದು. ಈ ಬಾರಿ ಸರಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ. ಇದರ ಅರ್ಥ, ಜನರಿಗೆ ಸರಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟದ ಬಗ್ಗೆ ನಂಬಿಕೆ ಬಂದಿದೆ, ಆದುದರಿಂದ ಪೋಷಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದಲ್ಲ. ಬದಲಿಗೆ, ಜನರು ಖಾಸಗಿ ಶಾಲೆಗಳಿಗೆ ಡೊನೇಶನ್, ಶುಲ್ಕ ನೀಡಿ ವಿದ್ಯಾರ್ಥಿಗಳನ್ನು ಸೇರಿಸುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ದೇಶ ಕಂಡಿರುವ ಆರ್ಥಿಕ ಹಿಂಜರಿತದ ಫಲವಾಗಿ, ಪಾಲಕರು ಅನಿವಾರ್ಯವಾಗಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಹಂತಕ್ಕೆ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ಸರಕಾರಿ ಶಾಲೆಗಳಲ್ಲಿ ಈಗಾಗಲೇ ಕಲಿಯುತ್ತಿರುವ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆ ತೊರೆದು ದುಡಿಮೆಯ ಕಡೆಗೆ ಮುಖ ಮಾಡಿದ್ದಾರೆ. ಆನ್‌ಲೈನ್ ಶಿಕ್ಷಣಗಳಿಗೆ ತೆರೆದುಕೊಳ್ಳಲಾಗದೆ ಶಾಲೆ ತೊರೆದವರು ಒಂದೆಡೆ. ಇದೇ ಸಂದರ್ಭದಲ್ಲಿ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಸರಿದೂಗಿಸಲು ಬಾಲಕಾರ್ಮಿಕರಾದವರು ಇನ್ನೊಂದು ಕಡೆ. ಗ್ರಾಮೀಣ ಪ್ರದೇಶದಲ್ಲಿ ಪಾಲಕರ ಸಾಲ ತೀರಿಸುವುದಕ್ಕೆ ಮಕ್ಕಳು ಅನಿವಾರ್ಯವಾಗಿ ಜೀತಕ್ಕಿಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅವರನ್ನೆಲ್ಲ ಮತ್ತೆ ಶಾಲೆಗೆ ಕರೆತರುವುದಕ್ಕಾಗಿ ಸರಕಾರ ಹಾಕಿಕೊಂಡಿರುವ ಯೊೀಜನೆಗಳ ಬಗ್ಗೆ ಇನ್ನೂ ವಿವರಗಳಿಲ್ಲ.

ಇದೇ ಸಂದರ್ಭದಲ್ಲಿ ಸರಕಾರಿ ಶಾಲೆಗಳಿಗೆ ಮುಖ ಮಾಡಿದ ಇತರ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಯಲ್ಲೇ ಉಳಿಸಿಕೊಳ್ಳುವುದಕ್ಕೂ ಸರಕಾರ ಪ್ರಯತ್ನಿಸಬೇಕು. ಮುಖ್ಯವಾಗಿ, ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಹಿಂದೆ ಯಾವೆಲ್ಲ ಯೋಜನೆಗಳನ್ನು ಸರಕಾರ ರೂಪಿಸಿತ್ತೋ ಅವುಗಳಿಗೆಲ್ಲ ಮರು ಜೀವ ನೀಡಬೇಕಾಗಿದೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಸೈಕಲ್ ಇನ್ನಿತರ ಸವಲತ್ತುಗಳನ್ನು ಸರಕಾರ ನೀಡುತ್ತಿತ್ತು. ಇದರ ಜೊತೆಗೆ ಬಿಸಿಯೂಟ ಸರಕಾರಿ ಶಾಲೆಯ ಪ್ರಧಾನ ಆಕರ್ಷಣೆಯಾಗಿತ್ತು. ಈ ಬಿಸಿಯೂಟದ ಗುಣಮಟ್ಟವನ್ನು ಉಳಿಸಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ. ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಕಾರ್ಯಕ್ರಮ ಈ ಬಾರಿ ಮುಂದುವರಿಯುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಅನುಮಾನವಿದೆ. ಮೊಟ್ಟೆ ಯೋಜನೆ ಮುಂದುವರಿಕೆಗೆ ಬೇಕಾದ ಅನುದಾನ ಸರಕಾರದಿಂದ ದೊರಕುತ್ತಿಲ್ಲ ಎನ್ನುವುದು ಶಿಕ್ಷಣ ಇಲಾಖೆಯ ದೂರು. ಮೊಟ್ಟೆಯ ಹಣವನ್ನು ಶಿಕ್ಷಕರೇ ಭರಿಸಬೇಕಾಗದಂತಹ ಸ್ಥಿತಿ ಹಲವು ಸರಕಾರಿ ಶಾಲೆಗಳಲ್ಲಿವೆ. ಮಠ, ಮಂದಿರ, ಗೋಶಾಲೆಗಳೆಂದು ಹಣವನ್ನು ಪೋಲು ಮಾಡುವ ಬದಲು ಆ ಅನುದಾನವನ್ನು ಸರಕಾರಿ ಶಾಲೆಗಳೆಡೆಗೆ ತಿರುಗಿಸಬೇಕಾಗಿದೆ. ಶಾಲಾ ವಿದ್ಯಾರ್ಥಿಗಳ ಮೂಲಭೂತ ಅಗತ್ಯಗಳನ್ನು ಈಡೇರಿಸುವುದಕ್ಕೆ ಅವುಗಳನ್ನು ಬಳಸಬೇಕಾಗಿದೆ.

ಪೋಷಕರು ಖಾಸಗಿ ಶಾಲೆಗಳ ಕಡೆಗೆ ಮುಖ ಮಾಡುವುದೇ ಇಂಗ್ಲಿಷ್ ಮಾಧ್ಯಮದ ಮೇಲಿನ ಮೋಹದಿಂದಾಗಿ. ಇದನ್ನು ಕೇವಲ ಮೋಹ ಎಂದು ತುಚ್ಛೀಕರಿಸುವಂತಿಲ್ಲ. ಇಂಗ್ಲಿಷ್ ಇಂದು ಬದುಕುವ ಭಾಷೆಯಾಗಿ ಪರಿವರ್ತನೆಗೊಂಡಿದೆ. ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳ ಮುಂದೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೀಳರಿಮೆಯಿಂದ ನರಳುವಂತಹ ಸನ್ನಿವೇಶವಿದೆ. ಇದೀಗ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಗೊಂಡಿರುವುದರಿಂದ, ದೊಡ್ಡ ಮಟ್ಟದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಜೊತೆ ಜೊತೆಯಾಗಿ ಸಾಗುವಂತೆ ನೋಡಿಕೊಳ್ಳಬೇಕು. ಹಾಗೆಯೇ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು. ಅಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡಬೇಕು. ಯೋಗ್ಯ ಶಿಕ್ಷಕರು ಸರಕಾರಿ ಶಾಲೆಗಳಿಗೆ ದೊರಕುವಂತಾಗಬೇಕು. ಕೊರೋನ ದಿನಗಳಲ್ಲಿ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಸರಕಾರಿ ಶಾಲೆಗಳು ಆಶಾದಾಯಕ ವಿದ್ಯಾಲಯಗಳಾಗಿ ಅಭಿವೃದ್ಧಿ ಹೊಂದಲಿ. ನಾಡು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)