varthabharthi


ಅನುಗಾಲ

ದಾಸ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ನ್ಯಾಯದ ಮೌಲ್ಯಗಳು

ವಾರ್ತಾ ಭಾರತಿ : 12 May, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾಗ-2

ದಾಸರ ಕಾಲದಲ್ಲಿ ಇಂದು ನಾವು ಹೇಳುವ ‘ಕಾನೂನು’ ಇರಲಿಲ್ಲ. ನ್ಯಾಯನಿರ್ಣಯವೇ ಮುಖ್ಯವಾಗಿತ್ತು. ಆದರೆ ರಾಜಸತ್ತೆಗೆ ವಿರುದ್ಧವಾಗಿ ವಾಚ್ಯ ಪ್ರಚಾರ ಸಾಧ್ಯವಿರಲಿಲ್ಲ. ಮೇಲಾಗಿ ದಾಸರು ವಿರಕ್ತರು. ಸನ್ಯಾಸಿಗಳಂತಲ್ಲದಿದ್ದರೂ, ಲೌಕಿಕರ ಸತತ ಸಂಪರ್ಕದಲ್ಲಿದ್ದರೂ ಅಲ್ಲಿಂದ ಏನನ್ನೂ ಅಪೇಕ್ಷಿಸದ ಅವರ ಚಿಂತನೆಗಳು ಸಮಾಜವಿಮುಖವೇ ಆಗಿದ್ದವು. ಆದರೂ ಅವರು ಸಮಾಜದ ನೀತಿ-ನಿಯಮಗಳನ್ನು ಗಮನಿಸಿದ್ದರೆಂಬುದನ್ನು ಮತ್ತು ಅದರ ಕುರಿತು ಗಾಢ ಚಿಂತನೆಯನ್ನು ನಡೆಸಿದ್ದರೆಂಬುದನ್ನು ಮತ್ತು ಹೀಗೆ ಜೀವಿಸುವ ಮೂಲಕ ತಮ್ಮ ಕಾಲದ ಸಾಕ್ಷಿಪ್ರಜ್ಞೆಗಳಂತಿದ್ದರೆಂಬುದನ್ನು ನಾವು ಕಂಡುಕೊಳ್ಳಬಹುದಾಗಿದೆ.

ವಿಜಯನಗರ ಸಾಮ್ರಾಜ್ಯವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಹುಟ್ಟಿದ ಈ ಇಬ್ಬರು ದಾಸರಾದ ಕನಕ-ಪುರಂದರರು ಸಾಮಾಜಿಕ ಅವನತಿಯ ಕಾಲದಲ್ಲೇ ಈ ಇಬ್ಬರೂ ತೀರಿಕೊಂಡರು. ಆಗಲೂ ರಾಯ ಮುನಿಯುತ್ತಿದ್ದ. ಮುನಿದರೆ ಪ್ರಜೆ ರಾಜ್ಯಭ್ರಷ್ಟನಾಗುತ್ತಿದ್ದ. ಕನಕದಾಸರು ಇದನ್ನೇ ‘ರಾಯ ಮುನಿದರೆ ಮತ್ತೆ ರಾಜ್ಯವನು ಬಿಡಬಹುದು’ ಎಂದು ಬರೆದಿದ್ದಾರೆ. ಧರ್ಮದ ಹೆಸರಿನಲ್ಲಿ ಜಾತಿ ಮತ್ತು ಮತ ಪದ್ಧತಿ ತನ್ನ ಕೇಡುಗಳನ್ನು ಇಂದು ಭಯಾನಕವಾಗಿ ಪ್ರದರ್ಶಿಸುತ್ತಿದ್ದರೆ ಅದು ಭಾರತೀಯ ಸಂಸ್ಕೃತಿಯಲ್ಲೇ ತನ್ನ ಕೊಳೆತ ಬೇರನ್ನು ಊರಿಕೊಂಡಿದೆಯೆನ್ನಬಹುದು. ಪುರಂದರದಾಸರ ಕಾಲದಲ್ಲಿ ಮಾತ್ರವಲ್ಲ ವಚನಕಾರರ ಕಾಲದಲ್ಲೇ ಅದಿತ್ತು. ಇವುಗಳನ್ನು ಶುದ್ಧ ಭಾರತೀಯ ಪ್ರವೃತ್ತಿಯೆನ್ನಬೇಕೋ ಪ್ರಾಣಿಜನ್ಯ ವಿಕೃತಿಯೆನ್ನಬೇಕೋ ತಿಳಿಯದಾಗಿದೆ. ಪುರಂದರದಾಸರು ಸೂಚ್ಯವಾಗಿ ‘ನಾನಾ ವರ್ಣದ ಆಕಳು ಅದು ನಾನಾ ವರ್ಣದ ಕ್ಷೀರವೇನೋ’ ಎಂದು ಮತ್ತು ವಾಚ್ಯವಾಗಿ ‘ಆವ ಕುಲದವನಾದರೇನು ಆವನಾದರೇನು ಆ್ಮ ಭಾವವರಿತ ಮೇಲೆ’ ಎಂದಿದ್ದಾರೆ.

ಭ್ರಷ್ಟಾಚಾರವೆಂಬ ಪದ ಇಂದು ನಿನ್ನೆಯದಲ್ಲ. ಆದರೆ ಅದರ ಆಯಾಮಗಳು ಬೇರೆ ಬೇರೆ ಇದ್ದಿರಬಹುದು. ಪುರಂದರದಾಸರ ಒಂದು ಹಾಡು ‘ಭ್ರಷ್ಟರಾದರು ಮನುಜರು’ ಎಂದೇ ಆರಂಭವಾಗುತ್ತದೆ. ಈ ಹಾಡಿನಲ್ಲಿ ಬೇರೆ ಬೇರೆ ರೂಪಿನ ಭ್ರಷ್ಟತನದ ವಿವರಗಳಿವೆ. ಮನಸ್ಸನ್ನು ಕಂಗೆಡಿಸುವ ‘ಬಡವರಿಗೆ ಕೊಟ್ಟ ನುಡಿ ನಡೆಸದವ ಭ್ರಷ್ಟ’, ‘ಸೇರದವರೊಡನೆ ಸ್ನೇಹಿಸುವ ಭ್ರಷ್ಟ’ ಇತ್ಯಾದಿ ಇಂದಿನ ರಾಜಕಾರಣಿಗಳ, ಜನಪ್ರತಿನಿಧಿಗಳನ್ನು ಸಂಕೇತಿಸುವ ನುಡಿಗಳಿವೆ. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ’ ಎಂಬ ಸಾಲುಗಳು ಇಂದು ಸಾರ್ವಜನಿಕ ಜೀವನದಲ್ಲಿ ಪರಸ್ಪರ ಬೈದಾಡಿಕೊಂಡು ಕೆಸರೆರೆಚುವವರಿಗೆ ಅನ್ವಯಿಸುವಂತಿದೆ. ‘ಮೂರ್ಖರಾದರು ಜನರು ಲೋಕದೊಳಗೆ’ ಎಂಬ ಹಾಡಿನಲ್ಲಿ ಮೂರ್ಖತನದ ಪಟ್ಟಿಯೇ ಇದೆ: ‘ನೆಂಟರಿಗೆ ಸಾಲ ಕೊಡುವಾತ ಮೂರ್ಖ’, ‘ಒತ್ತೆಯಿಲ್ಲದೆ ಸಾಲ ಕೊಡುವವನು ಮೂರ್ಖ’, ‘ಕೊಟ್ಟ ಸಾಲವ ಕೊಡದ ನಾಯಿ ಇಟ್ಟ ಭಾಷೆಯ ತಪ್ಪುವ ನಾಯಿ’.

ಕನಕದಾಸರ ರಾಮಧಾನ್ಯ ಚರಿತ್ರೆಯಲ್ಲಿ ಆಗಿನ ಶ್ರೀಮಂತ ಧಾನ್ಯವಾದ ಅಕ್ಕಿ ಮತ್ತು ಬಡವರ ಧಾನ್ಯವಾದ ರಾಗಿ ಇವುಗಳನ್ನು ಹೋಲಿಸಿ ರಾಗಿಯೇ ಶ್ರೇಷ್ಠವೆಂದು ಕಾವ್ಯರೂಪದಲ್ಲಿ ಹೇಳಿದೆ. ಇದೊಂದು ರೀತಿಯ ಸುಧಾರಣಾ ಮತ್ತು ಪ್ರಗತಿಪರ ಕಾವ್ಯ.

ದಾಸರ ಕಾಲದಲ್ಲಿ ಇಸ್ಲಾಮ್ ಭಾರತದಲ್ಲಿ ಸಾಕಷ್ಟು ವ್ಯಾಪಕವಾಗಿ ಬೆಳೆದಿತ್ತು. ಅವರು ಸಮಾಜದ ಭಾಗವಾಗಿದ್ದರು; ಬೆರೆತಿದ್ದರು. ಸರ್ವಧರ್ಮ ‘ಸಹಿಷ್ಣುತೆ’ ಮಾತ್ರವಲ್ಲ, ‘ಸಮಭಾವ’ವೂ ಇತ್ತು. ಪುರಂದರ ದಾಸರ ಹಾಡೊಂದರಲ್ಲಿ ‘ಅರಿತು ಬಂದೆನಲ್ಲಿ, ಪುರಂದರ ವಿಠಲನಲ್ಲದಿಲ್ಲಲ್ಲಾ’ ಎಂದೂ, ‘ಅಲ್ಲಾ ಖುದಾ ಎಂದು ಆತ್ಮದಲಿ ತಿಳಿಯದೆ ಮುಲ್ಲ ಶಾಸ್ತ್ರದ ನೆಲೆಯ ತಾನರಿಯದೆ’ ಎಂದೂ, ‘ಅರಿಯದೆ ಬಂದೆವು ಕಿಮ್ಸನ್, ಪರಿಹರಿಸಯ್ಯ ಬಮ್ಸನ್, ಪರಿಯಿಂದಲೆ ಹರಿ ಹರಿ ಎಂದರೆದುರಿತದ ಭಯ ಒಂದಿಲ್ಲವಲ್ಲಾ’ ಎಂಬ ಸಾಲುಗಳಿವೆ. ಐದು ಶತಮಾನಗಳಿಂದ ಬಂದಿರುವ ಈ ಜಾತ್ಯತೀತತೆ ಆಗಿನ ಸಾಮಾಜಿಕ ಲೋಕ ನ್ಯಾಯವನ್ನೂ ಹೇಳುತ್ತದೆ.

ಇವೆಲ್ಲ ಕಾನೂನಿನ ಪರಿಧಿಯನ್ನು ದಾಟಿದ ವ್ಯಾಪ್ತಿಗಳು. ವಿಜಯನಗರದ ಇಳಿಕೆಯ ಕಾಲದಲ್ಲಿ ದಾಸರು ‘ನೆಚ್ಚದಿರಿ ಈ ಭಾಗ್ಯ ಸ್ಥಿರವಲ್ಲ’ ಎಂದು ಮುನ್ನೆಚ್ಚರಿಕೆಯನ್ನು ನೀಡಿದ್ದರು. ಮುಂದೆ ನಡೆದದ್ದು ಸರ್ವನಾಶ. ಬಿಜಾಪುರದ ಸುಲ್ತಾನರ ವಿಜಯದೊಂದಿಗೆ ಸುಖೀಸಾಮ್ರಾಜ್ಯದ ಕನಸು ಹರಿಯಿತು. ದಾಸರು ‘ಭಾವಿಸಿದ್ದೆಲ್ಲ ಭೂಮಿ ಪಾಲಾಯಿತು ಸರಸ ಸಂಸಾರದ ಸವಿ ಹಾರಿಹೋಯಿತು’ ಎಂದರು. ಕನಕದಾಸರ ಕಾಲದಲ್ಲೇ ಕುಲ, ಜಾತಿ, ಮತ ಇವುಗಳ ಆಧಾರದಲ್ಲಿ ವಿವಾದ ನಡೆಯುತ್ತಿತ್ತು. ಮೇಲುಕೀಳುಗಳ ಅಂತರ ಸ್ಪಷ್ಟವಿದ್ದಿರಬೇಕು. ಸ್ವತಃ ಕೆಳಜಾತಿಯವನೆನಿಸಿಕೊಂಡಿದ್ದ ಕನಕದಾಸರು ‘ನಾವು ಕುರುಬರು ನಮ್ಮ ದೇವರೋ ಬೀರಯ್ಯ ಕಾವ ನಮ್ಮಜ್ಜ ನರಕುರಿಯ ಹಿಂಡುಗಳ’ ಎಂದು ಹಾಡಿ ‘ನರಕುರಿಯ ಹಿಂಡುಗಳ’ ಎಂಬ ಬಳಕೆಯ ಮೂಲಕ ಮನುಷ್ಯನ ದಡ್ಡತನದ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು. ಸಮಾಜಕ್ಕೆ ಕುಲಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರ’ ಎಂದು ಟೀಕಿಸಿದರು. ಆನಂತರ ‘ಕುಲಕುಲ ಕುಲವೆನ್ನುತಿಹರು ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ’ ಎಂದು ಹಾಡಿದರು. ಡಾಂಭಿಕತನವನ್ನು ಸಹಿಸದೆ ‘ಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥ ಹೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ?’ ಎಂದೂ (ಈಗಾಗಲೇ ಉಲ್ಲೇಖಿಸಿದ) ‘ಅಲ್ಲಾ ಖುದಾ ಎಂಬ ಅರ್ಥವನು ಅರಿಯದೆ ಮುಲ್ಲಾ ಶಾಸ್ತ್ರದ ನೆಲೆಯ ಗುರುತರಿಯದೆ’ ಮುಂತಾಗಿ ದನಿಯೆತ್ತಿದರು.

ಇತರರು ಹೋಗಲಿ, ಕನಕದಾಸರಂತಹವರೇ ದಾಸರ ಕುರಿತು ಮೇಲ್ಜಾತಿಯ ಜನರು ಹೇಗೆ ನಡೆದುಕೊಳ್ಳುತ್ತಿದ್ದರೆಂಬುದುದನ್ನು ನೊಂದುಕೊಂಡು ಹೀಗೆ ಹೇಳಿದರು: ‘ಕನಕದಾಸನ ಮೇಲೆ ದಯಮಾಡಲು, ವ್ಯಾಸ ಮುನಿಮಠದ ಜನರೆಲ್ಲ ದೂರಿಕೊಂಬುವರೊ’

ದಾಸರ ಪದಗಳಲ್ಲಿ ನ್ಯಾಯದರ್ಶನವನ್ನೊದಗಿಸುವ ಸಾಕಷ್ಟು ಉಕ್ತಿ-ಸೂಕ್ತಿಗಳು ಲಭ್ಯ: ಕಂಠೀರಾವ್ ಇಂಥದ್ದೊಂದು ಪಟ್ಟಿಯನ್ನೇ ಮಾಡಿದ್ದಾರೆ: ‘ಕಳ್ಳನೊಳ್ಳಿದನಲ್ಲ ಕಳ್ಳ ಸೊಕ್ಕಲಾದುದಿಲ್ಲ’, ‘ಕಳ್ಳ ತಾ ಕೆಟ್ಟು ಏಳೊಕ್ಕಲಂ ಕೆಡಿಸಿದನೆ ಕಳವೇಲಿ ಕೊಲ್ಲದೆ ಕಾಯ್ವುದೇ’, ‘ಕಳ್ಳ ಸತ್ತೊಡಮಕ್ಕುಂ ಕಳ್ಗುಡುಕಿಗಳಂ ನಿರ್ದಯರುಂ ಮಾಡದ ಪಾಪವಿಲ್ಲ’, ‘ಮಧುಪಾಯಿಗಳಿಗುಂಟೆ ಶುಚಿಭಾವ’, ‘ಶಪಥಮುಂಟೇ ದ್ಯೂತವರ್ತಿಗೆ’, ‘ಹೆಣನಿರಿದು ಹಗೆಗೊಂಡರೆ’, ‘ಪೆಂಡಿರ ದೋಷಕೆ ಮಕ್ಕಳ ಮೂಗಂ ಕೊಯ್ವರೆ’, ‘ಗಂಡನಿಲ್ಲದ ಶಶಿವದನೆಗೆ ಗರ್ಭಮಾದ ತೆರದಿಂ’, ‘ಹಾದರ ಸದರವೆ ಸಾವಿಗೆ ಮೊದಲು’, ‘ಸಾಲ ಮಾಡಲೆಬೇಡ, ಸಾಲವೆಂದೆನಬೇಡ’ (ಲೋನ್), ‘ಒತ್ತೆಯಿಲ್ಲದೆ ಸಾಲ ಕೊಡುವವನು ಮೂರ್ಖ’ (ಆಧಾರ, ಮಾರ್ಗೇಜ್), ‘ಋಣಭಾರಕೆಣೆಯಾವುದೈ’ ‘ತರಬೇಡೊತ್ತಗೆ ಬಡ್ಡಿಯಂ’, ‘ಸಾಕ್ಷಿಯಿಲ್ಲದೆ ಸಾಲಂಗೊಟ್ಟೋನಂತೆ’ (ಭಾರತೀಯ ಸಾಕ್ಷ ಸಂಹಿತೆಯ ಪುಷ್ಟೀಕರಣ ಸಾಕ್ಷ), ‘ಭೂಪನಂ ಹೊದ್ದುವುದು ರಾಷ್ಟ್ರದ ಪಾಪ’ (ಭಾರತೀಯ ದಂಡಸಂಹಿತೆಯ ಕಲಂ332, 352), ‘ಶಿಶುಗಳಪರಾಧಕ್ಕೆ ನಯನದಂಜಿಕೆ ಶಿಕ್ಷೆ’ (ಬಾಲಾಪರಾಧ).

ಇವೆಲ್ಲ ಇಂದಿನ ಕಾನೂನಿನ ಭ್ರೂಣರೂಪಗಳು. (ಸಾಕ್ರೆಟಿಸ್ ಶಿಷ್ಯರೊಂದಿಗೆ ನಡೆಸಿದ ಚರ್ಚೆಯಲ್ಲಿ ನ್ಯಾಯವೆಂದರೇನು ಎಂಬ ಪ್ರಶ್ನೆಗೆ ಒಬ್ಬ ಋಣಮುಕ್ತನಾಗುವುದೇ ನ್ಯಾಯ ಎನ್ನುತ್ತಾನೆ. ಸಾಕ್ರೆಟಿಸ್ ಸಾಯುವ ಹೊತ್ತಿನಲ್ಲಿ ಕ್ರೀಟೋ ಎಂಬ ಶಿಷ್ಯನಿಗೆ ‘ಸ್ಕ್ಲೇಪಿಯಸ್‌ಗೆ ನಾನೊಂದು ಕೋಳಿ ಕೊಡಬೇಕು, ಮರೆಯದೆ ಕೊಡುತ್ತೀ ತಾನೇ?’ ಎಂದಿದ್ದನಂತೆ. ಹೀಗೆ ‘ಸಾಲ ಮಾಡಲೆಬೇಡ, ಸಾಲವೆಂದೆನಬೇಡ’, ‘ಋಣಭಾರಕೆಣೆಯಾವುದೈ’ ಮುಂತಾದ ಸುಸಂಗತಗಳಲ್ಲಿ ಪೂರ್ವಕ್ಕೂ ಪಶ್ಚಿಮಕ್ಕೂ ಶತಮಾನಗಳಂತರದ ನಡುವೆಯೂ ಸಾಮ್ಯವಿದೆ.) ದಾಸ ಸಾಹಿತ್ಯದಲ್ಲಿ ಸ್ತ್ರೀವಾದವಿತ್ತೇ? ಇಂದಿನ ಅರ್ಥದಲ್ಲಿ ಇರಲಿಲ್ಲ. ವಚನಕಾಲದಲ್ಲಿ ವಚನಕಾರ್ತಿಯರು, ಶಿವಶರಣೆಯರು ಇದ್ದಂತೆ ದಾಸಪಂಥದಲ್ಲಿ ‘ದಾಸಿ’ಯರು ಇರಲಿಲ್ಲ. ಬಹಳ ತಡವಾಗಿ ಹೆಳವನಕಟ್ಟೆ ಗಿರಿಯಮ್ಮನಂತಹ ಭಕ್ತಿಪಂಥದವರು ಬಂದರು. ಭಗವಂತನಿಗೆ ಲಿಂಗವಿಲ್ಲ. ಆತ ನಿರಾಕಾರ. ಭಕ್ತಿ ಆತನಿಗೊಂದು ಆಕಾರ ಕೊಟ್ಟು ಅರ್ಚಿಸುತ್ತದೆ, ಭಜಿಸುತ್ತದೆ, ಪೂಜಿಸುತ್ತದೆ. ಶರಣರ, ದಾಸರ ಕಾಲದಲ್ಲಿ ಮತ್ತು ಇತ್ತೀಚೆಗಿನ ವರೆಗೂ ಇದ್ದುದು ಪುರುಷಪ್ರಧಾನ ಕುಟುಂಬ ವ್ಯವಸ್ಥೆ. ಗಂಡುಮಗುವೇ ವಂಶಾಭಿವೃದ್ಧಿಯ ಸಂಕೇತವಾಗಿ ಸೃಷ್ಟಿಯಾದ ಯುಗ. (1956ರ ಹಿಂದೂ ವಾರಸುದಾರಿಕೆ ಕಾಯ್ದೆಯ 2005ರ ತಿದ್ದುಪಡಿ ಬಂದ ಆನಂತರವೇ ಹೆಣ್ಣುಮಗಳೂ ದಾಯಾದಿತ್ವಕ್ಕೆ ಒಳಪಟ್ಟು ಗಂಡುಮಕ್ಕಳಂತೆಯೇ ಹಿಂದೂ ಅವಿಭಕ್ತ ಕುಟುಂಬದಲ್ಲಿ ಸಮಾನ ಹಕ್ಕನ್ನು ಪಡೆದಳು). ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎನ್ನುವ ಮೂಲಕ ಮಹಿಳೆಯರನ್ನು ಗೌರವಿಸಬೇಕೆಂಬ ತಾತ್ವಿಕ ಚಿಂತನೆಯಿದ್ದಾಗಲೂ ‘ನಹಿ ಸ್ವಾತಂತ್ರಮರ್ಹತಿ’ ಎಂಬ ಸಿದ್ಧಾಂತವು ನೆಲೆನಿಂತಿತ್ತು. ಇದು ಮಹಿಳೆಯನ್ನು ಕೀಳಾಗಿ ಕಾಣಬೇಕೆಂಬುದಕ್ಕಲ್ಲ. ಬದಲಾಗಿ ಅವಳು ಸುಕೋಮಲೆ, ಮದುವೆಯಾಗಿ ತೌರನ್ನು ತೊರೆದು ಗಂಡನ ಮನೆಗೆ ಹೋಗುವವಳು ಮತ್ತು ಪುರುಷನಿಗಿಂತ ಸುಲಭವಾಗಿ ಪೀಡನೆೆಗೆ ಬಲಿಯಾಗಬಹುದಾದವಳು ಎಂಬ ನಿಲುವಿತ್ತು. ಜೊತೆಗೆ ಬಹುಪತ್ನಿ ವ್ಯವಸ್ಥೆಯಿತ್ತು. ಆದ್ದರಿಂದ ಎಲ್ಲವನ್ನೂ ಪುರುಷದೃಷ್ಟಿಯಿಂದ ನೋಡಲಾಗುತ್ತಿತ್ತು. ನಾಲ್ಕು ಶತಮಾನಗಳ ಹಿಂದೆಯೇ ಅಕ್ಕಮಹಾದೇವಿ ಶರಣರೊಂದಿಗೆ ಅನುಭವಮಂಟಪದಲ್ಲಿ ಕಂಗೊಳಿಸಿದಳಾದರೂ, ದಾಸರ ಕಾಲದಲ್ಲಿ ಈಗಿನ ಉತ್ತರ ಭಾರತದಲ್ಲಿ ಮೀರಾಬಾಯಿ ಸಂತಳಾದರೂ, ಶ್ರೀನಿವಾಸ ನಾಯಕ ಪುರಂದರದಾಸರಾಗಿ ಬದಲಾಗುವಲ್ಲಿ ಅವರ ಪತ್ನಿ ಮಹತ್ತರ ಪಾತ್ರ ವಹಿಸಿದರೂ ಅದೇನೂ ಸಮಾಜದಲ್ಲಿ ಕ್ರಾಂತಿಯನ್ನು ಸೃಷ್ಟಿಸಲಿಲ್ಲ. ಆದರೆ ದಾಸರು ಮಹಿಳೆಯ ಹಿರಿತನವನ್ನು, ಪ್ರಾಮುಖ್ಯತೆಯನ್ನು ಘೋಷಿಸಿದ್ದಾರೆ. ವಿಷ್ಣುವನ್ನು ಆರಾಧಿಸುವಾಗ ಲಕ್ಷ್ಮೀ, ಕೃಷ್ಣನೊಂದಿಗೆ ರುಕ್ಮಿಣಿ (ಯಶೋದೆ ಕೂಡಾ) ಸಹಜವಾಗಿಯೇ ಪೂಜಾರ್ಹರಾಗಿದ್ದರು. ಭಾಗವತದಲ್ಲಿಲ್ಲದ ರಾಧೆ ಕೃಷ್ಣನೊಂದಿಗೆ ಮುಖ್ಯಳಾದದ್ದು ದಾಸಯುಗದ ಸಮಕಾಲೀನರಾದ ಕೃಷ್ಣಚೈತನ್ಯ ಮಹಾಪ್ರಭುವಿನ ಭಕ್ತಿಪಂಥದ ಮೂಲಕ; ಗೀತಗೋವಿಂದದ ಮೂಲಕ. ದಾಸರ ಮೂಲಕವಲ್ಲ. ಕನಕ-ಪುರಂದರರ ಗುರು ವ್ಯಾಸತೀರ್ಥರು ದೇವರನ್ನು ತಾಯಿಗೆ ಹೋಲಿಸಿದ್ದಾರೆ: ‘ಕಣ್ದೆರೆಯದ ಹಸುಳೆ ತಾಯನರಿಯದಂತೆ ಎನ್ನಲ್ಲಿ ಹೊಂದಿಪ್ಪ ನಿನ್ನನರಿಯದಂತೆ’ ಬರೀ ಸೊಗಸಿಗಾಗಿ ಅಲ್ಲ, ದಾಸರ ಪಾಲಿಗೆ ಕೃಷ್ಣ- ‘ದೇವಕಿ ಕಂದ ಮುಕುಂದ’. ಇನ್ನೊಂದೆಡೆ, ‘ಭಾಗೀರಥಿಯ ಪಿತ’. ಪ್ರಸಿದ್ಧವಾದ ಒಂದು ಹಾಡು ಆರಂಭವಾಗುವುದೇ- ‘ಜಗದುದ್ಧಾರನ ಆಡಿಸಿದಳೆಶೋದೆ’ ಎಂಬ ಸಾಲಿನಿಂದ. ಮಧ್ಯಮಾವಧಿಯ- ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಪೂರ್ತಿಯಾಗಿ ಲಕ್ಷ್ಮೀಯ ಆರಾಧನೆ. ಅಷ್ಟೇ ಅಲ್ಲ, ಮೋಹಿನೀ ಭಸ್ಮಾಸುರ ಐತಿಹ್ಯದ ವಿಷ್ಣುವನ್ನು- ‘ಹೆಂಡಿರುನಾಳುವಳೀ ಕನ್ನಿಕೆ ಗಂಡನಿಲ್ಲದ ಹೆಂಗಸೀ ಕನ್ನಿಕೆ’ ಎಂದು ಕಂಡು ಭಗವಂತನನ್ನು ಹೆಣ್ಣೂ ಅಲ್ಲದ ಗಂಡೂ ಅಲ್ಲದ ಸ್ವರೂಪವನ್ನು ಕಾಣುವುದರಲ್ಲಿ ವಚನಕಾರರೊಂದಿಗೆ ಸಾಮ್ಯತೆಯಿದೆ.

ಹೀಗೆ ಬರೆದ ಪುರಂದರದಾಸರು ಜಾನಪದದಂತೆ ಭಾಸವಾಗುವ ಒಂದು ಹಾಡಿನಲ್ಲಿ ಹೆಣ್ಣಿಗೂ ಬುದ್ಧಿ ಹೇಳಿದ್ದಾರೆ: ‘ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮಗಳೆ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ’

ದಾಸಯುಗದಲ್ಲಿ ದೇಸಿ ಪೂಜಾವಿಧಿಗಳಿದ್ದವು. ಎಲ್ಲಮ್ಮ ಮುಂತಾದ ಶಕ್ತಿದೇವತೆಗಳ, ಗ್ರಾಮದೇವತೆಗಳ ತೃಪ್ತಿಗಾಗಿ ನಡೆಸುವ ಸಿಡಿ, ಬನದ ಹುಣ್ಣಿಮೆ ಮುಂತಾದ ಅನೇಕ ಹಿಂಸಾತ್ಮಕ ಮತ್ತು ಸ್ತ್ರೀಶೋಷಕ ಆಚರಣೆಗಳನ್ನು ನಿಷ್ಪ್ರಯೋಜಕವೆಂದು ಅವರು ಹೇಳಿದ್ದಾರೆ. (ಬೆತ್ತಲೆ ಪೂಜೆ ಮುಂತಾದ ವಿಧಿಗಳು ಇತ್ತೀಚೆನವರೆಗೂ ಪ್ರಚಲಿತವಿದ್ದವು): ‘ತಾಳಿಯ ಹರಿದು ಬಿಸಾಟೆ ಇಂಥ ಕೀಳು ದೇವತೆಗಳ ಹೆಸರಲ್ಲಿ ಕಟ್ಟಿದ ಒಡತಿಯೆಲ್ಲಮ್ಮನೆಂದು ಇಲ್ಲದ್ಹರಿಕೆ ಹೊತ್ತು ಸಿಡಿಯಾ ಊರಿಸಿಕೊಂಡು ಜೋಲಾಡುವೆ’. ಈ ಹಾಡಿನಲ್ಲಿ ‘ಕರಿಮಣಿ ಕೇಶವಿಲ್ಲದ ಮುಂಡೆ ಕರೆತಂದು’, ‘ಹಡೆದ ಮಕ್ಕಳ ಮುಂಜಿ ಮದುವೆಗೆ ನೇಮಿಸಿ, ಮಡಿವಾಳತಿಯ ಅಧಃಕೇಶ ತಂದು’, ಮುಂತಾದ ಶಾಕ್ತಪಂಥದ ಆಚರಣೆಯ ಮತ್ತು ಕ್ರೌರ್ಯದ ಚಿತ್ರಣವೂ ಇದೆ. ಇವೆಲ್ಲ ಪುರಂದರ ದಾಸರ ಕೃತಿಗಳಲ್ಲಿ ಕಂಡುಬಂದರೆ ಕನಕದಾಸರ ಕೃತಿಯಲ್ಲೂ ಮುಖ್ಯವಾಗಿ ನಳಚರಿತ್ರೆ, ಮೋಹನ ತರಂಗಿಣಿಗಳಲ್ಲಿ ಹೆಣ್ಣಿನ ಚಿತ್ರಣವಿದೆ. (ಸಾಮಾಜಿಕವಾಗಿ ಬಂಡಾಯದ ಧ್ವನಿಯಾಗಿ ಕಾಣಿಸುವ ಕನಕದಾಸರು ತಮ್ಮಕಾಲದಲ್ಲಿ ನಡೆದಿರಬಹುದಾದ ಸ್ತ್ರೀಯರ ಶೋಷಣೆಯನ್ನು ಗಮನಿಸಿದ್ದಾರೆ. ಒಂದೆಡೆ ಹೆಣ್ಣು ಗಂಡು ಹಾಕಿದ ಗೆರೆಯನ್ನು ಮೀರದೆ ನಡೆದರೆ ಒಳ್ಳೆಯದು ಎಂಬಂತೆ ಬರೆದಿದ್ದಾರೆ: ‘ಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣು ಗಂಡಗಂಜದ ನಾರಿ ಅವಳೆ ಹೆಮ್ಮಾರಿ’ ಹಾಗೆಯೇ ‘ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನ್ಯಾತಕೆ ಸನ್ನೆಯನರಿತು ನಡೆಯದಿರುವ ಸತಿಯು ಯಾತಕೆ’ ಎಂದಿದ್ದಾರೆ. ಇನ್ನೊಂದೆಡೆ ಹೆಣ್ಣನ್ನು ಟೀಕಿಸಿದಂತಿದ್ದರೂ ಸಂಸಾರದಲ್ಲಿ ಆಕೆ ತನ್ನ ಕುಟುಂಬಕ್ಕೆ ತಂದುಕೊಡಬಹುದಾದ ಗೌರವವನ್ನು ಹೀಗೆ ಬರೆದಿದ್ದಾರೆ: ‘ಮಾನಿನಿಯ ಮನಸು ನಿಧಾನವಿರದಿರೆ ಮಾನಾಭಿಮಾನಗಳುಳಿಯುವುದೆ’. ಹೆಣ್ಣಿಗೆ ಸಾಂಸ್ಕೃತಿಕ ಸಮಾಜದಲ್ಲೂ ಅವಕಾಶ ಸಿಗಲಿಲ್ಲವೆಂಬುದನ್ನು ಹೀಗೆ ಮರುಗಿದ್ದಾರೆ: ‘ಹೆಣ್ಣು ರಚಿಸಿಹ ಧರ್ಮಶಾಸ್ತ್ರಗಳು ಎಲ್ಲಿಹವು ಹೆಣ್ಣು ರೂಪಿಸಿದ ನೀತಿ ನಿಯಮಗಳು ಇಹವೇ ಹೆಣ್ಣಿನಾಕಾಂಕ್ಷೆಗಳ ಧಿಕ್ಕರಿಸಿ ತುಳಿಯುತ್ತ’ (ಈ ಬಗ್ಗೆ ನನ್ನ ಗಮನ ಸೆಳೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಈಶ್ವರ ಭಟ್ ಅವರಿಗೆ ನಾನು ಋಣಿ.) ಇಂತಹ ಸ್ತ್ರೀವಾದದ ಕೆಲವು ಸ್ಪಷ್ಟ ಮತ್ತು ಕೆಲವು ಅಸ್ಪಷ್ಟ ನಿಲುವುಗಳ ಹಲವು ಹಾಡುಗಳಿವೆ. ಇವು ಹೀಗಿರಲು ಕಾರಣಗಳಿವೆ: ದಾಸರ ಉದ್ದೇಶ ಹರಿಭಕ್ತಿ, ಪಾರಮಾರ್ಥಿಕತೆ, ಸಾಮಾಜಿಕ ಒಳಿತು. ಒಂದು ಹಂತದ ಬಳಿಕ ಅವರು ಎಲ್ಲವನ್ನೂ ಭಗವಂತನ ಪಾದಕ್ಕೆ ಒಪ್ಪಿಸುವವರು. ಆರಂಭದಲ್ಲಿ ಹೇಳಿದಂತೆ ದಾಸರ ಕಾಲದಲ್ಲಿ ಇಂದು ನಾವು ಹೇಳುವ ‘ಕಾನೂನು’ ಇರಲಿಲ್ಲ. ನ್ಯಾಯನಿರ್ಣಯವೇ ಮುಖ್ಯವಾಗಿತ್ತು. ಆದರೆ ರಾಜಸತ್ತೆಗೆ ವಿರುದ್ಧವಾಗಿ ವಾಚ್ಯ ಪ್ರಚಾರ ಸಾಧ್ಯವಿರಲಿಲ್ಲ. ಮೇಲಾಗಿ ದಾಸರು ವಿರಕ್ತರು. ಸನ್ಯಾಸಿಗಳಂತಲ್ಲದಿದ್ದರೂ, ಲೌಕಿಕರ ಸತತ ಸಂಪರ್ಕದಲ್ಲಿದ್ದರೂ ಅಲ್ಲಿಂದ ಏನನ್ನೂ ಅಪೇಕ್ಷಿಸದ ಅವರ ಚಿಂತನೆಗಳು ಸಮಾಜವಿಮುಖವೇ ಆಗಿದ್ದವು. ಆದರೂ ಅವರು ಸಮಾಜದ ನೀತಿ-ನಿಯಮಗಳನ್ನು ಗಮನಿಸಿದ್ದರೆಂಬುದನ್ನು ಮತ್ತು ಅದರ ಕುರಿತು ಗಾಢ ಚಿಂತನೆಯನ್ನು ನಡೆಸಿದ್ದರೆಂಬುದನ್ನು ಮತ್ತು ಹೀಗೆ ಜೀವಿಸುವ ಮೂಲಕ ತಮ್ಮ ಕಾಲದ ಸಾಕ್ಷಿಪ್ರಜ್ಞೆಗಳಂತಿದ್ದರೆಂಬುದನ್ನು ನಾವು ಕಂಡುಕೊಳ್ಳಬಹುದಾಗಿದೆ.

ಇಲ್ಲಿ ಕೆಲವು ವಿಚಾರಗಳನ್ನಷ್ಟೇ ಸ್ಥೂಲವಾಗಿ ಗಮನಿಸಿದ್ದೇನೆ. ಹೆಚ್ಚಿನ ಅಧ್ಯಯನದಿಂದ ಮತ್ತು ಚರ್ಚೆಯಿಂದ ಇನ್ನೂ ಹೊಸ ಬೆಳಕು ಉದಿಸಬಹುದು. ದುರಂತವೆಂದರೆ ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ವರ್ತಮಾನದ ನಡುವೆ ತಲಾ ಐದು ಶತಮಾನಗಳ ಅಂತರವಿದ್ದರೂ ಸ್ಥಿತಿ ಹಾಗೇ ಇದೆ. ಆದರೆ ಸಮಾಜವನ್ನು ಸಾಮಾಜಿಕ ನ್ಯಾಯದ ಸರಿದಾರಿಗೆ ತರಬಲ್ಲ, ಅಥವಾ ಕನಿಷ್ಠ ತರಲು ಯತ್ನಿಸುವ ಶರಣರೂ ಇಲ್ಲ; ದಾಸರೂ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)