varthabharthi


ಸಂಪಾದಕೀಯ

ಮೆಕಾಲೆಯ ಮೇಲಿರುವ ಅಸಹನೆ ದೇಶದ್ರೋಹ ಕಾಯ್ದೆಯ ವಿರುದ್ಧ ಯಾಕಿಲ್ಲ?

ವಾರ್ತಾ ಭಾರತಿ : 13 May, 2022

ಬ್ರಿಟಿಷರ ಕಾಲದ ಹಲವು ಕಾನೂನುಗಳ ಬಗ್ಗೆ , ವ್ಯವಸ್ಥೆಗಳ ಬಗ್ಗೆ ಸಂಘಪರಿವಾರ ಮತ್ತು ಬಿಜೆಪಿ ಆಗಾಗ ಕಿಡಿಕಾರುವುದಿದೆ. ಅವುಗಳಲ್ಲಿ ಬಹುಮುಖ್ಯವಾದುದು ಮೆಕಾಲೆ ಶಿಕ್ಷಣ ವ್ಯವಸ್ಥೆ. ‘ಭಾರತದ ಇಂದಿನ ದುಸ್ಥಿತಿಗೆ ಮುಖ್ಯ ಕಾರಣ ‘ಮೆಕಾಲೆ ಶಿಕ್ಷಣ ವ್ಯವಸ್ಥೆ’. ಯಾವಾಗ ಭಾರತೀಯ ಪರಂಪರೆಯ ಹಿನ್ನೆಲೆಯನ್ನು ಹೊಂದಿರುವ ಗುರುಕುಲ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುತ್ತದೆಯೋ ಆಗ ದೇಶದ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ’ ಎನ್ನುವ ವಾದವನ್ನು ಸಂಘಪರಿವಾರ ಕಾಲ ಕಾಲಕ್ಕೆ ಮಂಡಿಸುತ್ತಾ ಬಂದಿದೆ. ಆದರೆ, ಈ ದೇಶದಲ್ಲಿ ಮೆಕಾಲೆ ಶಿಕ್ಷಣ ವ್ಯವಸ್ಥೆ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿತು. ಕೆಲವೇ ಕೆಲವು ಬಲಾಢ್ಯ ಜಾತಿಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರ ಸೊತ್ತಾಗಿಸಿದ್ದು ಮೆಕಾಲೆ ಶಿಕ್ಷಣ ಪದ್ಧತಿ.

ಮೆಕಾಲೆ ಶಿಕ್ಷಣದಲ್ಲಿ ಹಲವು ದೌರ್ಬಲ್ಯಗಳಿರಬಹುದು. ಬ್ರಿಟಿಷ್ ಆಡಳಿತಕ್ಕೆ ಪೂರಕವಾಗಿಯೇ ಈ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಾಣ ಮಾಡಿರಬಹುದು. ಮೆಕಾಲೆ ಶಿಕ್ಷಣದ ಸುಧಾರಣೆಯ ಅಗತ್ಯವೂ ಇದೆ. ಆದರೆ ಈ ದೇಶದ ತಳಸ್ತರದವರೆಗೆ ಶಿಕ್ಷಣವನ್ನು ತಲುಪಿಸಿದ್ದು ಮೆಕಾಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಂಘಪರಿವಾರಕ್ಕೆ ಈ ಶಿಕ್ಷಣದ ಮೇಲಿರುವ ಸಿಟ್ಟಿನ ಮೂಲ ಕಾರಣವೂ ಇದೆ. ದಲಿತರು, ಶೂದ್ರರು ಮೆಕಾಲೆ ಶಿಕ್ಷಣ ವ್ಯವಸ್ಥೆಯ ಮೂಲಕ ಜ್ಞಾನವನ್ನು ಪಡೆದು ಈ ದೇಶದ ಅತ್ಯುನ್ನತ ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು ಎನ್ನುವ ಅಸಮಾಧಾನ ದೇಶದ ಮೇಲ್‌ಜಾತಿಯ ಜನರಲ್ಲಿ ಇನ್ನೂ ಇದೆ. ಗುರುಕುಲ ಶಿಕ್ಷಣದಲ್ಲಿ ಕೆಳಜಾತಿಯ ಜನರಿಗೆ ಪ್ರವೇಶವಿರಲಿಲ್ಲ. ಮೆಕಾಲೆ ಶಿಕ್ಷಣಕ್ಕೆ ಪರ್ಯಾಯವಾಗಿ ಮನುವಿನ ಕಾಲದ ಗುರುಕುಲ ಶಿಕ್ಷಣವನ್ನು ಜಾರಿಗೊಳಿಸಲು ಪ್ರಯತ್ನಿಸಿದರೆ ದೇಶ ವರ್ಣಭೇದದ ಕಾಲಕ್ಕೆ ವಾಪಾಸಾಗುತ್ತದೆ. ವಿಪರ್ಯಾಸವೆಂದರೆ, ಮೆಕಾಲೆ ಶಿಕ್ಷಣವ್ಯವಸ್ಥೆಯನ್ನು ಬದಲಿಸಲು ಅತ್ಯುತ್ಸಾಹ ತೋರುತ್ತಿದ್ದ ಸಂಘಪರಿವಾರ ಮತ್ತು ಬಿಜೆಪಿ, ವಸಾಹತು ಶಾಹಿ ಯುಗದ ಪಳೆಯುಳಿಕೆಯಾಗಿರುವ ದೇಶದ್ರೋಹ ಕಾನೂನಿನ ಬಗ್ಗೆ ಸದಾ ವೌನವಹಿಸುತ್ತಾ ಬಂದಿದೆ. ಮಾತ್ರವಲ್ಲ, ಈ ಕಾನೂನನ್ನು ಅತ್ಯಂತ ಹೆಚ್ಚು ದುರುಪಯೋಗಗೊಳಿಸಿದ ಹೆಗ್ಗಳಿಕೆಯನ್ನೂ ಬಿಜೆಪಿ ಹೊಂದಿದೆ. ಇದೀಗ ಸರ್ವೋಚ್ಚ ನ್ಯಾಯಾಲಯ ದೇಶದ್ರೋಹ ಕಾನೂನಿಗೆ ತಡೆಯೊಡ್ಡುವ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಉತ್ಸಾಹಕ್ಕೆ ತಣ್ಣೀರೆರಚಿದೆ.

ದೇಶದ್ರೋಹ ಕಾನೂನ್ನು ಬ್ರಿಟಿಷ್ ಸರಕಾರ ಯಾರ ವಿರುದ್ಧ, ಯಾಕಾಗಿ ಜಾರಿಗೊಳಿಸಿತು ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಸ್ವಾತಂತ್ರಕ್ಕಾಗಿ ಹೋರಾಡಿದ ಲಕ್ಷಾಂತರ ಜನರನ್ನು ಬ್ರಿಟಿಷ್ ಸರಕಾರ ಈ ಕಾಯ್ದೆಯ ಅಡಿಯಲ್ಲೇ ಬಂಧಿಸಿತು. ಸಾವಿರಾರು ಜನರನ್ನು ನೇಣಿಗೇರಿಸಿತು. ಇಷ್ಟಕ್ಕೂ ಬ್ರಿಟಿಷರ ಕಾಲದಲ್ಲಿ ‘ದೇಶದ್ರೋಹ’ದ ಪರಿಕಲ್ಪನೆಯೇ ಬೇರೆಯಾಗಿತ್ತು. ಬ್ರಿಟಿಷರು ಜನರಿಂದ ಆಯ್ಕೆಯಾಗಿರುವ ಸರಕಾರವಾಗಿರಲಿಲ್ಲ. ಅವರು ಭಾರತೀಯರನ್ನು ಯಾವ ರೀತಿಯಲ್ಲೂ ಪ್ರತಿನಿಧಿಸುತ್ತಿರಲಿಲ್ಲ. ಭಾರತದ ಜನರ ಹಿತಾಸಕ್ತಿಯೂ ಅವರದಾಗಿರಲಿಲ್ಲ. ಈ ದೇಶದ ಸಂಪತ್ತನ್ನು ದೋಚಿ, ಬ್ರಿಟನ್‌ಗೆ ಒಯ್ಯುವ ಏಕಮಾತ್ರ ಗುರಿ ಅವರದಾಗಿತ್ತು. ಇದನ್ನು ಯಾರು ಪ್ರಶ್ನಿಸಿದರೂ ಬ್ರಿಟಿಷರ ಪಾಲಿಗೆ ಅದು ದೇಶದ್ರೋಹವಾಗುತ್ತಿತ್ತು. ತನ್ನ ದೇಶವನ್ನು ಪ್ರೀತಿಸುವುದು ಅವರ ಪಾಲಿಗೆ ದೇಶದ್ರೋಹವೂ, ಬ್ರಿಟಿಷರ ಪರವಾಗಿ ನಿಂತು ಕೆಲಸ ಮಾಡುವುದು ದೇಶಪ್ರೇಮವೂ ಆಗಿತ್ತು ಮತ್ತು ಆಗಿನ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರು ಯಾರು? ಬ್ರಿಟಿಷರೊಂದಿಗೆ ಕ್ಷಮೆಯಾಚಿಸಿ ಅವರ ಜೊತೆಗೆ ದೇಶಭಕ್ತರ ವಿರುದ್ಧ ಸಂಚು ಹೂಡಿದವರು ಯಾರು ಎನ್ನುವುದು ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗಿದೆ. ವಿನಾಯಕ ದಾಮೋದರ ಸಾವರ್ಕರ್ ಸೇರಿದಂತೆ ಸಂಘಪರಿವಾರದ ಮುಖಂಡರು ಅಂದು ಬ್ರಿಟಿಷರ ಜೊತೆಗೆ ಶಾಮೀಲಾಗಿದ್ದರು. ಹಿಂದೂ ಮಹಾಸಭಾ ನಾಯಕರ ಮೇಲೆ ದೇಶದ್ರೋಹ ಕಾಯ್ದೆ ಜಾರಿಯಾದ ಪ್ರಕರಣ ಇಲ್ಲ ಎನ್ನುವಷ್ಟು ಕಡಿಮೆ. ಈ ಕಾಯ್ದೆ ಸಾವರ್ಕರ್ ಮೇಲೆ ಜಾರಿಯಾಯಿತಾದರೂ ಅವರು ಕ್ಷಮೆಯಾಚನೆ ಮಾಡಿ, ‘ಬ್ರಿಟಿಷ್ ಸರಕಾರಕ್ಕೆ ಸದಾ ಋಣಿಯಾಗಿರುವುದಾಗಿ’ ಬರೆದುಕೊಟ್ಟರು. ಬಿಜೆಪಿಯ ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಹಿಂದೂ ಮಹಾಸಭಾದ ಯಾವ ನಾಯಕರನ್ನೂ ಬ್ರಿಟಿಷರ ‘ದೇಶದ್ರೋಹ’ ಕಾಯ್ದೆ ಕಾಡಿಲ್ಲ. ಆದುದರಿಂದಲೇ, ಈ ಕಾಯ್ದೆಯನ್ನು ಇಂದು ಬಿಜೆಪಿ ಸರಕಾರ ಅತ್ಯಂತ ಹೆಮ್ಮೆಯಿಂದ ತನ್ನದೇ ಜನರ ಮೇಲೆ ಕ್ರೂರವಾಗಿ ಬಳಸುತ್ತಿದೆ. ಇದೀಗ ಸುಪ್ರೀಂಕೋರ್ಟ್ ಮೂಲಕ ಅದಕ್ಕೆ ಸಣ್ಣದೊಂದು ತಡೆ ಬಿದ್ದಿದೆ.

ಬ್ರಿಟಿಷರು ರೂಪಿಸಿದ ದೇಶದ್ರೋಹ ಕಾಯ್ದೆ, ಸ್ವತಂತ್ರ ಭಾರತದ ಪಾಲಿಗೆ ಬಹುದೊಡ್ಡ ಕಳಂಕ. ಇಂದು ದೇಶದಲ್ಲಿ ರಾಜಪ್ರಭುತ್ವವಿಲ್ಲ. ಜನರೇ ರೂಪಿಸಿದ ಪ್ರಜಾಪ್ರಭುತ್ವ ದೇಶವನ್ನು ಆಳುತ್ತಿದೆ. ತಾನು ಆರಿಸಿದ ಸರಕಾರ, ತಪ್ಪು ದಾರಿಯಲ್ಲಿ ನಡೆದರೆ ಅದನ್ನು ಖಂಡಿಸುವ, ಟೀಕಿಸುವ, ಅದರ ವಿರುದ್ಧ ಪ್ರತಿಭಟಿಸುವ ಹಕ್ಕು ಪ್ರಜೆಗಳದ್ದು. ಆದರೆ ನಮ್ಮ ನಾಯಕರು, ಸ್ವಾತಂತ್ರದ ಬಳಿಕವೂ ತಮ್ಮ ರಕ್ಷಣೆಗೆಂದು ಈ ಕಾನೂನನ್ನು ಜೀವಂತ ಉಳಿಸುತ್ತಾ ಬಂದರು. 2014ರಿಂದ ಈ ಕಾಯ್ದೆ ಎಷ್ಟರಮಟ್ಟಿಗೆ ದುರ್ಬಳಕೆಯಾಯಿತು ಎಂದರೆ, ಬ್ರಿಟಿಷರು ಕೂಡ ಬೆಚ್ಚಿ ಬೀಳಬೇಕು, ಅಷ್ಟರಮಟ್ಟಿಗೆ ತನ್ನನ್ನು ಪ್ರಶ್ನಿಸಿದ ಜನರನ್ನು ಈ ಕಾಯ್ದೆಯಡಿಯಲ್ಲಿ ಜೈಲಿಗೆ ತಳ್ಳಿತು. ಬ್ರಿಟಿಷ್ ಕಾಲದಲ್ಲಿ ದೇಶದ ಹಿತಾಸಕ್ತಿಯನ್ನು ಬಯಸಿದ ದೇಶಪ್ರೇಮಿಗಳು ಹೇಗೆ ಜೈಲು ಸೇರಿದ್ದರೋ, ಇದೀಗ 2014ರ ಬಳಿಕ ದೇಶಭಕ್ತರೆಲ್ಲ ಮತ್ತೆ ಬ್ರಿಟಿಷ್ ಕಾಲದ ಕಾನೂನಿಗೆ ಬಲಿಯಾಗಿ ಜೈಲಿನಲ್ಲಿದ್ದಾರೆ. ಹಲವರು ಜೈಲಿನಲ್ಲೇ ಅಸು ನೀಗಿದ್ದಾರೆ. ಬ್ರಿಟಿಷರನ್ನು ಓಲೈಸಿ ಈ ಕಾಯ್ದೆಯಿಂದ ರಕ್ಷಣೆ ಪಡೆದ ತಲೆಮಾರು ಇದೀಗ ಅದೇ ಕಾಯ್ದೆಯನ್ನು ಬಳಸಿ ದೇಶದ ಪರವಾಗಿ ಮಾತನಾಡುವ ಹೋರಾಟಗಾರರನ್ನು ಬಂಧಿಸಿರುವುದು ಕಾಲದ ವೈಪರೀತ್ಯವೇ ಸರಿ. ದೇಶದ್ರೋಹದ ಕಾನೂನನ್ನು ತೆಗೆದು ಕಸದಬುಟ್ಟಿಗೆ ಹಾಕುವ ಮೂಲಕ, ಈಗಾಗಲೇ ದೇಶದ ಹಿತಾಸಕ್ತಿಗಾಗಿ ಜೈಲು ಸೇರಿರುವ ದೇಶಪ್ರೇಮಿಗಳೆಲ್ಲ ಬಿಡುಗಡೆಗೊಂಡು ಸಮಾಜದ ಮುನ್ನೆಲೆಗೆ ಬರಬೇಕಾಗಿದೆ. ಜನವಿರೋಧಿ ಕಾನೂನನ್ನು ಜಾರಿಗೊಳಿಸುವುದಕ್ಕಾಗಿ ತನ್ನದೇ ಜನರ ವಿರುದ್ಧ ದೇಶದ್ರೋಹ ಕಾನೂನನ್ನು ಬಳಸಿದ ‘ನವ ಬ್ರಿಟಿಷರನ್ನು’ ಜೊತೆ ಜೊತೆಗೇ ಕಸದ ಬುಟ್ಟಿಗೆ ಗುಡಿಸಿ ಹಾಕುವ ಸಮಯ ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)