varthabharthi


ನಿಮ್ಮ ಅಂಕಣ

ದೋಪ್ದಿ ಕಥನ ವಾಸ್ತವಕ್ಕಿಳಿದಾಗ...

ವಾರ್ತಾ ಭಾರತಿ : 13 May, 2022
ಪ್ರೊ. ಶಿವರಾಮಯ್ಯ

ಜ್ಞಾನಪೀಠ ಪ್ರಶಸ್ತಿ ವಿಜೇತ ಮಹಾಶ್ವೇತಾದೇವಿಯರ ಒಂದು ಕರುಣಾಕ್ರಂದನ ಕತೆ ‘ದೋಪ್ದಿ’ (ದ್ರೌಪದಿ). ಓದಿದರೆ ಒಡಲೊಳಗೆ ಅಲಗಿಕ್ಕಿ ತಿರುವಿದಂತಹ ಅನುಭವ! ದೋಪ್ದಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸೇರಿದ ಒಂದು ಬುಡಕಟ್ಟು ಜನಾಂಗದ ಹೋರಾಟಗಾರ್ತಿ. ಜನತಂತ್ರ ಭಾರತದಲ್ಲಿ ವಸಾಹತು ಸಂಸ್ಕೃತಿ ಬಿಟ್ಟುಹೋದ ಪೊಲೀಸ್ ಪಾಪದ ಬೆಳಸಿನ ಫಲವಿದು. ಆದಿವಾಸಿ ಜನರನ್ನು ಇಂದಿಗೂ ಮನುಷ್ಯರೆಂಬಂತೆ ನಡೆಸಿಕೊಳ್ಳುತ್ತಿಲ್ಲ. ಅವರ ಮೇಲೆ ಹಿಂಸೆ, ಅತ್ಯಾಚಾರ, ದೌರ್ಜನ್ಯಗಳನ್ನು ನಾಗರಿಕ ಜಗತ್ತು ನಡೆಸುತ್ತಲೇ ಬಂದಿದೆ. ಅವರ ಬದುಕಿನ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಬರಬರುತ್ತಾ ಈ ಕಾಡಾಡಿಗಳ ಬದುಕು ನಾಡಾಡಿಗಳಿಂದ ನರಕ ಸದೃಶ್ಯವಾಗುತ್ತಿದೆ. ಅಭಿವೃದ್ಧಿಯ ಮಾತುಗಳೆಲ್ಲ ಯೋಜನೆಯ ಹಾಳೆಯಲ್ಲಿಯೇ ಉಳಿದುಹೋಗುತ್ತಿವೆ. ಹೊಟ್ಟೆಪಾಡಿಗಾಗಿ ಅವರು ಕಾಡಿನ ಸಂಪನ್ಮೂಲಗಳನ್ನು ಬಳಸಿಕೊಂಡರೆ ಅವರಿಗೆ ಅಪರಾಧಿಗಳೆಂದು ಪೊಲೀಸ್ ನಿರ್ಣಯಿಸುವ ಮೂಲಕ ಶಿಕ್ಷೆಗೊಳಗಾಗುತ್ತಾರೆ. ಇದನ್ನು ಪ್ರತಿಭಟಿಸಿದವರು ದೋಪ್ದಿ ದಂಪತಿ. ಸೈನಿಕರ ಗುಂಡಿಗೆ ಗಂಡ ಬಲಿಯಾದ ಮೇಲೆ ದೋಪ್ದಿಯೊಬ್ಬಳೇ ಏಕಾಂಗಿಯಾಗಿ ಪೊಲೀಸರ ವಿರುದ್ಧ ಸೆಣಸಾಡುತ್ತಾಳೆ. ಆದರೆ ತಲೆಹಿಡುಕ ಮಧ್ಯವರ್ತಿಗಳ ಮೋಸದಿಂದ ಅವಳು ಸೈನಿಕರಿಗೆ ಸೆರೆ ಸಿಕ್ಕುತ್ತಾಳೆ.

ಸೇನಾನಾಯಕ ಅವಳಿಗೆ ಬೇಕಾದ್ದು ಮಾಡಿ ಎಂದು ಹೇಳಿ ರಾತ್ರಿ ಮನೆಗೆ ಹೋಗುತ್ತಾನೆ. ಇರುಳು ರಣಹದ್ದುಗಳ ಕಾರ್ಯಾಚರಣೆ ಶುರುವಾಗುತ್ತದೆ. ಕಪ್ಪುದೋಪ್ದಿಯ ನಿಃಶ್ಚಲ ದೇಹದ ಮೇಲೆ ಇಡೀ ರಾತ್ರಿ ಮಾಂಸದ ಬಂದೂಕುಗಳು ಹತ್ತಿ ಇಳಿಯುತ್ತವೆ. ಬೆಳಗ್ಗೆ ಆರಕ್ಷಕರು ಅವಳ ಮೇಲೆ ಬಟ್ಟೆಯ ತುಂಡನ್ನು ಎಸೆೆದು ಸೇನಾನಾಯಕನ ಶಿಬಿರಕ್ಕೆ ಕರೆತರುತ್ತಾರೆ. ಆದರೆ ಅವಳು ಅವರೆಸೆದ ಬಟ್ಟೆ ತುಂಡು ಧರಿಸದೆ ಅವನೆದುರು ಬೆತ್ತಲೆಯೇ ಹೋಗಿ ನಿಲ್ಲುತ್ತಾಳೆ. ‘‘ನನ್ನನ್ನು ಬೆತ್ತಲೆ ಮಾಡಬಹುದು ಆದರೆ ಮತ್ತೆ ಬಟ್ಟೆ ತೊಡಿಸಿ ನೋಡೋಣ. ನಾನು ನಾಚಿಕೆಪಟ್ಟುಕೊಳ್ಳಬೇಕಾದ ಯೋಗ್ಯತೆಯುಳ್ಳ ಒಬ್ಬ ಗಂಡಸೂ ಇಲ್ಲಿಲ್ಲ. ನನಗೆ ಹೇಗೆ ಬಟ್ಟೆ ತೊಡಿಸುವಿರೋ ನೋಡೇಬಿಡ್ತೀನಿ. ನೀವಿನ್ನೇನು ತಾನೆ ಮಾಡಲು ಸಾಧ್ಯ?’’ ಎಂದ ದೋಪ್ದಿ ನೇರ ನಡೆದು ತನ್ನ ರಕ್ತಸಿಕ್ತ ಮೊಲೆಗಳಿಂದ ಅವರ ಸೇನಾನಾಯಕನನ್ನು ಅತ್ತ ದೂಡಿದಳು. ನಿಶ್ಯಸ್ತ್ರ ಎದುರಾಳಿಯ ಮುಂದೆ ತಾನು ನಿಲ್ಲಲು ಸಾಧ್ಯವಾಗದೆ ಸೇನಾನಾಯಕ ತತ್ತರಿಸಿ ನಡುಗಿದ! ಬೈರಾಗಿಯಂತಹ ಗಾಂಧೀಜಿ ಬ್ರಿಟಿಷರ ವಿರುದ್ಧ ಹೇಗೆ ಪ್ರತಿಭಟಿಸಿ ನಿಂತರೋ ಹಾಗೆಯೇ ಶಸ್ತ್ರಸಜ್ಜಿತ ಶಕ್ತಿಯ ವಿರುದ್ಧ ಬುಡಕಟ್ಟಿನ ಈ ಮಹಿಳೆ ವಿಜಯ ಸಾಧಿಸುತ್ತಾಳೆ. ಹೆಣ್ಣಿನ ಯಾವ ಕಾಮಕ್ಷೇತ್ರಕ್ಕೆ ಲಜ್ಜಾಹೀನ ಗಂಡು ಕಾಮಿಸಿ ಮುತ್ತುವನೋ ಅದೇ ಕ್ಷೇತ್ರವನ್ನು ತನ್ನ ಅಸ್ತ್ರವನ್ನಾಗಿ ಮಾಡಿಕೊಂಡು ಅದನ್ನೇ ಅವನ ವಿರುದ್ಧ ಗೆಲುವಿನ ಸಾಧನವನ್ನಾಗಿ ಮಾಡಿಕೊಳ್ಳುತ್ತಾಳೆ. ಬುಡಕಟ್ಟು ಮಹಿಳೆ ಒಬ್ಬಳು ಸದ್ದುಗದ್ದಲವಿಲ್ಲದೆ ಗಂಡಿನ ಶೋಷಣೆಯ ವಿರುದ್ಧ ತಿರುಗಿಬಿದ್ದು ಗೆಲುವು ಸಾಧಿಸುವ ಇಂತಹ ಸರಳ ಸನ್ನಿವೇಶವನ್ನು ದೋಪ್ದಿ ಕಥೆಯಲ್ಲಿ ನಾವು ನೋಡುತ್ತೇವೆ. ಸಾಮಾಜಿಕ ಕಾರ್ಯಕರ್ತೆ ಹಾಗೂ ಸೃಜನಶೀಲ ಶಕ್ತಿಯುಳ್ಳ ಮಹಾಶ್ವೇತಾದೇವಿಯವರ ಅನುಭವದ ಪರಿಪಕ್ವ ಫಲ ಅವರ ಸಾಹಿತ್ಯ ಕೃತಿಗಳು. ಈ ಮಾತಿಗೆ ‘ದೋಪ್ದಿ’ ಎಂಬ ಈ ಕಥೆಯೇ ಸಾಕ್ಷಿ. ಕಥೆಗಾರ್ತಿಯ ಬರವಣಿಗೆಯ ಅಥೆಂಟಿಸಿಟಿ ಪ್ರಶ್ನಾತೀತವಾದುದು. ಇದು ಜಗತ್‌ಸಾಹಿತ್ಯಕ್ಕೆ ನೀಡಿದ ಬಹು ದೊಡ್ಡ ಕೊಡುಗೆ. (ನೋಡಿ: ದೋಪ್ದಿ ಮತ್ತು ಇತರ ಕಥೆಗಳು. ಮಹಾಶ್ವೇತಾದೇವಿ. ಕನ್ನಡಕ್ಕೆ ಎಚ್.ಎಸ್.ಶ್ರೀಮತಿ)

‘ದೋಪ್ದಿ’ ಕತೆಯನ್ನಿಲ್ಲಿ ಇಷ್ಟು ಪ್ರಸ್ತಾಪಿಸಿದ ಕಾರಣ ಏಕೆಂದರೆ ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ರಾಜ್ಯದಲ್ಲಿ ಮಹಾಶ್ವೇತಾದೇವಿಯರ ದೋಪ್ದಿ ಕತೆಯನ್ನೇ ಯಥಾವತ್ತಾಗಿ ಹೋಲುವಂತೆ ನಡೆದಿರುವ ಒಬ್ಬ ಬಾಲಕಿಯ ಮೇಲಿನ ಅತ್ಯಾಚಾರ ಘಟನೆ. ಆ ರಾಜ್ಯದ ಲಲಿತಪುರ ಜಿಲ್ಲೆಯಲ್ಲಿ ಕಳೆದ ತಿಂಗಳು ನಾಲ್ಕು ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ 13 ವರ್ಷದ ಒಬ್ಬ ಬಾಲಕಿಯು ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಾಳೆ. ಆ ಸಂದರ್ಭದಲ್ಲಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೇ ಆ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ವರದಿಯಾಗಿದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಘಟನೆಗೆ ಸಂಬಂಧಪಟ್ಟ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟೋ ಇಷ್ಟೋ ಪರಿಹಾರ ಇತ್ಯಾದಿಯೂ ಬರಬಹುದು. ಆದರೆ ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯಗಳು ಇಲ್ಲಿಗೆ ನಿಲ್ಲುವುದುಂಟೆ? ಇದು ಸ್ವಾತಂತ್ರ್ಯದ ಅಮೃತ ವರ್ಷ ಆಚರಿಸುತ್ತಿರುವ ನಮ್ಮ ಭಾರತೀಯ ಮಹಿಳಾ ಕಥನ!

ಈ ಗ್ಯಾಂಗ್‌ರೇಪ್ ಘಟನೆಗೆ ಅನುಬಂಧವೆಂಬಂತೆ ಮಧ್ಯಪ್ರದೇಶದಲ್ಲಿ ಇನ್ನೊಂದು ಆಘಾತಕಾರಿ ಸುದ್ದಿ ವರದಿಯಾಗಿದೆ. ಗೋಹತ್ಯೆ ಶಂಕೆಯಿಂದ ಇಬ್ಬರು ಬುಡಕಟ್ಟು ವ್ಯಕ್ತಿಗಳನ್ನು 15-20 ಮಂದಿಯ ಗುಂಪೊಂದು ಅಮಾನುಷವಾಗಿ ಥಳಿಸಿ ಕೊಲೆಗೈದಿದೆ. ಇದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ-ಮೊನ್ನೆ ಮಂಗಳವಾರ (3-5-2022) ಬೆಳಗಿನ 3 ಗಂಟೆ ಸಮಯದಲ್ಲಿ. ಆ ವ್ಯಕ್ತಿಗಳು ಸಾಗರ್ ಗ್ರಾಮದ ನಿವಾಸಿ ಸಂಪತ್‌ಲಾಲ್ ಬಾಟ್ಟಿ ಮತ್ತು ಸಿಮಾರಿಯಾ ಗ್ರಾಮದ ನಿವಾಸಿ ಧನಸೆ ಇನಾವಾಟಿಯ ಎಂಬವರು. ಇವರಿಬ್ಬರು ಗೋವಧೆಗೈದಿದ್ದಾರೆಂದು ಆರೋಪಿಸಿದ ಹಿಂದುತ್ವವಾದಿ ಗುಂಪು ತಾವೇ ‘ಕಾನೂನು ಮತ್ತು ಸುವ್ಯವಸ್ಥೆ’(Law and Order)ಯನ್ನು ಕೈಗೆ ತೆಗೆದುಕೊಂಡು ದೊಣ್ಣೆಗಳಿಂದ ಬರ್ಬರವಾಗಿ ಹೊಡೆದು ಅವರನ್ನು ಸಾಯಿಸಿದ್ದಾರೆ. ಇಂತಹ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಲೇ ಇವೆ. ಬಡವರ ಜೀವಕ್ಕೆ ಕವಡೆ ಕಿಮ್ಮತ್ತಿಲ್ಲ.

ಒಟ್ಟಿನಲ್ಲಿ ಮೇಲಿನ ಈ ಎರಡು ಘಟನೆಗಳು ರವಾನಿಸಿದ ಸತ್ಯ ಏನೆಂದರೆ, ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದು ಹೋದರೂ ಇಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ಗುಡ್ಡಗಾಡು ಬಡವರಿಗೆ ಸುಭದ್ರತೆ ಎಂಬುದಿಲ್ಲ ಎಂಬುದು. ಭವ್ಯ ಭಾರತದಲ್ಲಿ ಮಾನವ ಹಕ್ಕುಗಳು ಮರೀಚಿಕೆಯಾಗುತ್ತಿವೆ. ಗ್ರಾಮಸ್ವರಾಜ್ಯದ ಕನಸು ಕಾಣುತ್ತಿದ್ದ ರಾಷ್ಟ್ರಪಿತ ಗಾಂಧೀಜಿ ನಡುರಾತ್ರಿಯಲ್ಲೂ ಒಬ್ಬಂಟಿ ಮಹಿಳೆ ನಿರಾತಂಕವಾಗಿ ನಡೆದಾಡುವಂತಾದರೆ ಅದು ಸ್ವರಾಜ್ಯ ಎಂದಿದ್ದರು. ಆದರೆ ದೇಶ ದಿನದಿಂದ ದಿನಕ್ಕೆ ಕೀಚಕ ಸಂಸ್ಕೃತಿಯತ್ತ ದಾಪುಗಾಲು ಹಾಕುತ್ತಿರುವುದು ಜನತಂತ್ರದ ಅಣಕವಾಗುತ್ತಿದೆ. ಇದೇನು ಸಭ್ಯತೆ? ಇದೇನು ಸಂಸ್ಕೃತಿ? ಇದೇ ಏನು ಹಿಂದೂ ಜಾಗೃತಿ? ಎಂದು ಇಂದು ಕೇಳುತಿಹಳು ನಮ್ಮ ತಾಯಿ ಭಾರತಿ! ಈ ನಿರಾಶೆಯನ್ನು ಹೋಗಲಾಡಿಸುವತ್ತ ಪ್ರಭುತ್ವ ತುರ್ತು ಗಮನ ನೀಡಬೇಕಾಗಿದೆ. ಇಲ್ಲವಾದರೆ ನಾಗರಿಕ ಜಗತ್ತಿನ ಎದುರು ನಾವು ತಲೆ ತಗ್ಗಿಸಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)