ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ನಿಧನ
ಶೇಖ್ ಖಲೀಫಾ ಬಿನ್ ಝಾಯೆದ್ (Photo:Twitter/@gulf_news)
ರಿಯಾಧ್ : ಸಂಯುಕ್ತ ಅರಬ್ ಸಂಸ್ಥಾನದ ಅಧ್ಯಕ್ಷ ಹಾಗೂ ಅಬುಧಾಬಿಯ ದೊರೆ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಇಂದು ನಿಧನರಾಗಿದ್ದಾರೆ ಎಂದು ಅಲ್ಲಿನ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ನವೆಂಬರ್ 3, 2004ರಿಂದ ಅಬುಧಾಬಿಯ ಆಡಳಿತಗಾರರಾಗಿದ್ದರು.
ಅವರ ತಂದೆ ಹಿಂದಿನ ದೊರೆ ಶೇಖ್ ಝಾಯೆದ್ ಬಿನ್ ಸುಲ್ತಾನ್ ನಹ್ಯಾನ್ ಅವರು ನವೆಂಬರ್ 2, 2004ರಂದು ನಿಧನರಾದ ನಂತರ ಶೇಖ್ ಖಲೀಫಾ ಅವರು ಅಬುಧಾಬಿಯ ದೊರೆಯಾಗಿ ಅಧಿಕಾರ ವಹಿಸಿದ್ದರು. ಅವರು ಶೇಖ್ ಝಾಯೆದ್ ಅವರ ಹಿರಿಯ ಪುತ್ರರಾಗಿದ್ದರು ಹಾಗೂ ಸಂಯುಕ್ತ ಅರಬ್ ಸಂಸ್ಥಾನದ ಎರಡನೇ ಅಧ್ಯಕ್ಷ ಹಾಗೂ ಎಮಿರೇಟ್ ಆಫ್ ಅಬುಧಾಬಿಯ 16ನೇ ದೊರೆಯಾಗಿದ್ದರು.
ಯುಎಇ ಅಧ್ಯಕ್ಷರಾಗಿ ಅಧಿಕಾರ ವಹಿಸಿದಂದಿನಿಂದ ಅವರು ಅಲ್ಲಿನ ಸರಕಾರ ಮತ್ತು ಅಬುಧಾಬಿ ಸರಕಾರದಲ್ಲಿ ಹಲವಾರು ಅಮೂಲಾಗ್ರ ಬದಲಾವಣೆಗಳನ್ನು ತರಲು ಶ್ರಮಿಸಿದ್ದರು. ಅಭಿವೃದ್ಧಿಯ ವೇಗವನ್ನೂ ಹೆಚ್ಚಿಸಿದ ಅವರು ಈ ದೇಶವನ್ನು ತಮ್ಮ ಮನೆಯೆಂದೇ ತಿಳಿದು ಅಲ್ಲಿ ಕೆಲಸ ಮಾಡುವ ಜನರಿಗೆ ಉತ್ತಮ ಜೀವನ ಒದಗಿಸುವ ನಿಟಿನಲ್ಲೂ ಶ್ರಮಿಸಿದ್ದರು.
ತೈಲ ಮತ್ತು ಅನಿಲ ಕ್ಷೇತ್ರಗಳು ಮತ್ತು ಇತರ ಸಂಬಂಧಿತ ಕೈಗಾರಿಕೆಗಳ ಅಭಿವೃದ್ಧಿಯತ್ತವೂ ಬಹಳಷ್ಟು ಗಮನ ನೀಡಿದ್ದ ಅವರು ತಮ್ಮ ದೇಶದ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದ್ದರು.
ಸಂಯುಕ್ತ ಅರಬ್ ಸಂಸ್ಥಾನದುದ್ದಕ್ಕೂ ಸಂಚರಿಸಿದ್ದ ಅವರು ಈ ಸಂದರ್ಭ ವಸತಿ ನಿರ್ಮಾಣ, ಶಿಕ್ಷಣ ಮತ್ತು ಸಮಾಜ ಸೇವೆಗಳ ಕಾರ್ಯಗಳಿಗೆ ಸಂಬಂಧಿಸಿದ ಯೋಜನೆಗಳ ಜಾರಿಗೆ ಸೂಚಿಸಿದ್ದರು, ಅಲ್ಲಿನ ಫೆಡರಲ್ ನ್ಯಾಷನಲ್ ಕೌನ್ಸಿಲ್ಗೆ ಸದಸ್ಯರ ನೇಮಕಾತಿ ವ್ಯವಸ್ಥೆಗೂ ಮುಂದಡಿಯಿಟ್ಟಿದ್ದ ಅವರು ಯುಎಇಯಲ್ಲಿ ನೇರ ಚುನಾವಣೆ ನಡೆಸುವತ್ತ ಮೊದಲ ಹೆಜ್ಜೆಯನ್ನಿಟ್ಟಿದ್ದರು.