varthabharthi


ಸಂಪಾದಕೀಯ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿಳಂಬವೇಕೆ?

ವಾರ್ತಾ ಭಾರತಿ : 14 May, 2022

ಅಧಿಕಾರಾವಧಿ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ರಾಜ್ಯಗಳ ಸಂವಿಧಾನಾತ್ಮಕ ಹೊಣೆಗಾರಿಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಕಿವಿ ಹಿಂಡಬೇಕಾಗಿ ಬಂದಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಪೂರ್ಣಗೊಂಡಿದೆ. ಆದರೆ ಚುನಾವಣೆ ನಡೆಸಿ ನಿರ್ವಾತ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯಿಂದ ರಾಜ್ಯ ಸರಕಾರಗಳು ನುಣುಚಿಕೊಳ್ಳುತ್ತಿರುವುದು ಸುಪ್ರೀಂ ಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ.ಇದು ಸರ್ವೋಚ್ಚ ನ್ಯಾಯಾಲಯದಿಂದ ಕೇಳಿಸಿಕೊಂಡು ಮಾಡುವ ಕೆಲಸ ಅಲ್ಲ ಎಂಬ ಅರಿವು ರಾಜ್ಯ ಸರಕಾರಗಳಿಗೆ ಇರಬೇಕಾಗಿತ್ತು.

ಕರ್ನಾಟಕದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಚುನಾವಣೆಯನ್ನು ಕಳೆದ ಒಂದು ವರ್ಷದಿಂದ ಮುಂದೂಡುತ್ತ ಬರಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2020 ಸೆಪ್ಟಂಬರ್ ತಿಂಗಳಿನಲ್ಲೇ ಚುನಾವಣೆ ನಡೆಯಬೇಕಾಗಿತ್ತು. ಅದೂ ಕೂಡ ನಡೆದಿಲ್ಲ. ಇದರಿಂದ ಮತದಾರನ ಹಕ್ಕಿಗೆ ಧಕ್ಕೆ ತಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಮಾಡಿದಂತಾಗುತ್ತದೆ.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿಖರ ದತ್ತಾಂಶಗಳ ಆಧಾರದಲ್ಲಿ ಗುರುತಿಸಿ, ಮೀಸಲಾತಿ ಯನ್ನು ನಿಗದಿಪಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಪರಿಣಾಮವಾಗಿ ಸಕಾಲದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಈ ಬಿಕ್ಕಟ್ಟಿನ ಹೊಣೆಯನ್ನು ರಾಜ್ಯ ಸರಕಾರ ಹೊರಬೇಕಾಗಿದೆ. ಮಾಡುವ ಕೆಲಸ ಬಿಟ್ಟು ಜನರನ್ನು ವಿಭಜಿಸುವ ಕೋಮುವಾದಿ ಕಾರ್ಯಸೂಚಿ ಜಾರಿಯ ಬಗ್ಗೆ ವಿಶೇಷ ಆಸಕ್ತಿ ತೋರಿಸುತ್ತ ಬಂದ ರಾಜ್ಯದ ಬಿಜೆಪಿ ಸರಕಾರ ಇನ್ನಾದರೂ ಈ ಬಿಕ್ಕಟ್ಟಿನಿಂದ ಹೊರಗೆ ಬರಬೇಕಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎರಡು ವಾರಗಳಲ್ಲಿ ಅಧಿಸೂಚನೆಯನ್ನು ಹೊರಡಿಸುವಂತೆ ಮಧ್ಯಪ್ರದೇಶ ರಾಜ್ಯದ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಾಡಿರುವ ಆದೇಶ ಎಲ್ಲ ರಾಜ್ಯಗಳಿಗೂ ಅನ್ವಯವಾಗಲಿದೆ.

ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಅಧಿಕಾರ ವಿಕೇಂದ್ರೀಕರಣ ಅಗತ್ಯ. ಸ್ಥಳೀಯ ಸಂಸ್ಥೆಗಳು ಜನತಂತ್ರ ವ್ಯವಸ್ಥೆಯ ಅಡಿಪಾಯವೆಂದು ಹೆಸರಾಗಿವೆ. ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಮುಂದೂಡುತ್ತಾ ಬರುವುದು ಸರಿಯಲ್ಲ. ಈ ವಿಳಂಬಕ್ಕೆ ಇನ್ನೊಂದು ಕಾರಣ ಸ್ಥಳೀಯ ಸಂಸ್ಥೆಗಳ ಜೊತೆ ಅಧಿಕಾರ ಹಂಚಿಕೊಳ್ಳುವುದು ಶಾಸಕರಿಗೆ ಬೇಕಾಗಿಲ್ಲ. ಎಲ್ಲಾ ಕಡೆ ತಮ್ಮ ಮಾತು ನಡೆಯಬೇಕು ಎಂದು ಭಾವಿಸಿರುವ ಕೆಲವು ಶಾಸಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡಯದಂತೆ ನೋಡಿಕೊಳ್ಳುತ್ತಾರೆಂಬ ಟೀಕೆಗಳೂ ಇವೆ.ಚುನಾವಣೆ ಸಕಾಲದಲ್ಲಿ ನಡೆಯದಿರಲು ಮೀಸಲಾತಿ ಪಟ್ಟಿ ಸಿದ್ಧವಾಗದಿರುವುದು ಕಾರಣ ಎಂದು ರಾಜ್ಯ ಸರಕಾರ ನೆಪ ಹೇಳುತ್ತದೆ. ಆದರೆ ಇದಕ್ಕೆ ಸಂಬಂಧಿಸಿದ ತೊಡಕುಗಳನ್ನು ನಿವಾರಿಸಲು ಅಧಿಕಾರದಲ್ಲಿರುವವರಿಗೆ ಪುರುಸೊತ್ತಿಲ್ಲ.

 ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಿ ಮೀಸಲಾತಿಯನ್ನು ನಿಗದಿಪಡಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ ಹನ್ನೆರಡು ವರ್ಷಗಳಾಗಿವೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೋರ್ಟ್ ಇದೇ ಮಾತನ್ನು ಪುನರುಚ್ಚರಿಸಿತ್ತು. ಮೀಸಲಾತಿ ನಿಗದಿಗೆ ಸಾಕಷ್ಟು ಕಾಲಾವಕಾಶ ಇದ್ದರೂ ನಿರ್ಲಕ್ಷ ಮಾಡಿ ಈಗ ಮೀಸಲಾತಿ ವಿಳಂಬದ ನೆಪ ಹೇಳುವುದು ಸರಿಯಲ್ಲ. ಮೀಸಲಾತಿ ನಿಗದಿ ಪಡಿಸಲು ಈಗ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದರೂ ಈ ಸಮಿತಿಗೆ ವರದಿ ನೀಡಲು ಕಾಲಮಿತಿ ನಿಗದಿ ಪಡಿಸದಿರುವುದು ಸರಕಾರ ಚುನಾವಣೆ ನಡೆಸಲು ಎಷ್ಟು ಆಸಕ್ತಿ ಹೊಂದಿದೆ ಎಂಬುದಕ್ಕೆ ಉದಾಹರಣೆಯಾಗಿದೆ.

ಸುಪ್ರೀಂ ಕೋರ್ಟ್ ರಾಜ್ಯ ಸರಕಾರದ ಕಿವಿ ಹಿಂಡಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘‘ನಾವು ಚುನಾವಣೆಗೆ ಸಿದ್ಧರಾಗಿದ್ದೇವೆ, ನೀವು ಸಿದ್ಧರಿದ್ದೀರಾ?’’ ಎಂದು ಪ್ರತಿಪಕ್ಷಗಳನ್ನು ಕೆಣಕಿದ್ದಾರೆ. ಇದರರ್ಥ ಆಡಳಿತ ಪಕ್ಷ ಎಲ್ಲಾ ತಯಾರಿ ಮಾಡಿಕೊಂಡ ಮೇಲೆ ಚುನಾವಣೆ ಕುರಿತು ಕಾರ್ಯೋನ್ಮುಖವಾಗಲಿದೆ ಎಂಬ ಸುಳಿವು ನೀಡಿದಂತಾಗಿದೆ. ಅದೇನೇ ಇರಲಿ ಸಕಾಲದಲ್ಲಿ ಚುನಾವಣೆಯನ್ನು ನಡೆಸಿದರೆ ಸಾಕು. ರಾಜಕೀಯ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಮಾಡಬಾರದು. ಇನ್ನಾದರೂ ರಾಜ್ಯ ಸರಕಾರ ಸಮರೋಪಾದಿಯಲ್ಲಿ ಮೀಸಲಾತಿ ನಿಗದಿಗೆ ಕ್ರಮ ಕೈಗೊಂಡು ಹಿಂದುಳಿದ ವರ್ಗಗಳ ಮೀಸಲಾತಿಗೆ ಧಕ್ಕೆಯಾಗದಂತೆ ವಿಳಂಬ ಮಾಡದೆ ಚುನಾವಣೆಯನ್ನು ನಡೆಸುವ ಮೂಲಕ ಸಾಂವಿಧಾನಿಕ ಹೊಣೆಯನ್ನು ನಿಭಾಯಿಸುವುದು ಸೂಕ್ತ.

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಿಗದಿತ ಸಮಯದಲ್ಲಿ ನಡೆಸಲೇಬೇಕಾಗಿದೆ. ಹಾಗೆಂದು ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಧಕ್ಕೆಯಾಗಬಾರದು. ಇದು ಸಾಮಾಜಿಕ ನ್ಯಾಯದ ಪ್ರಶ್ನೆ. ಹಿಂದುಳಿದ ವರ್ಗಗಳ ಆಯೋಗವು ಸಂಗ್ರಹಿಸಿರುವ ವಿಶ್ವಾಸಾರ್ಹ ದತ್ತಾಂಶಗಳನ್ನು ಬಳಸಿಕೊಂಡು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಮೂರು ಹಂತದ ಪರಿಶೀಲನೆಯನ್ನು ಪೂರ್ಣಗೊಳಿಸಿ ಸಾಮಾಜಿಕ ನ್ಯಾಯಕ್ಕೆ ಚ್ಯುತಿ ಬರದಂತೆ ನೋಡಿಕೊಂಡು ಚುನಾವಣೆ ನಡೆಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)