varthabharthi


ವಿಶೇಷ-ವರದಿಗಳು

ಒಬಿಸಿಗಳ ರಾಜಕೀಯ ಮೀಸಲಾತಿ ಬಿಕ್ಕಟ್ಟಿಗೆ ಜಾತಿ ಗಣತಿಯೇ ಉತ್ತರ

ವಾರ್ತಾ ಭಾರತಿ : 14 May, 2022
ಯಶವಂತ ಝಗಾಡೆ ಮತ್ತು ಸಾಯಿ ಠಾಕೂರ್

ಒಬಿಸಿಗಳ ಜನಸಂಖ್ಯೆಯನ್ನು ಗುರುತಿಸುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಸರಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಜಾರಿಗೊಳಿಸಲು ಜನಗಣತಿಯ ಅಂಕಿ-ಸಂಖ್ಯೆಗಳು ಮುಖ್ಯವಾಗಿವೆ. ಜನಗಣತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯನ್ನು ಪ್ರತ್ಯೇಕವಾಗಿ ದಾಖಲಿಸುತ್ತದೆ ಮತ್ತು ಆ ಸಮುದಾಯಗಳ ವಿವಿಧ ಸಾಮಾಜಿಕ-ಆರ್ಥಿಕ ಸೂಚ್ಯಂಕಗಳ ಬಗ್ಗೆ ಅಂಕಿ-ಅಂಶಗಳನ್ನು ಸಂಗ್ರಹಿಸುತ್ತದೆ. ಆದರೆ, ಒಬಿಸಿಗಳಿಗೆ ಸಂಬಂಧಿಸಿದ ಇಂತಹ ಅಂಕಿ-ಅಂಶಗಳನ್ನು ಪ್ರತ್ಯೇಕವಾಗಿ ದಾಖಲಿಸಲು ಅದು ನಿರಾಕರಿಸಿದೆ.


ಇತರ ಹಿಂದುಳಿದ ಜಾತಿ (ಒಬಿಸಿ)ಗಳಿಗೆ ಮೀಸಲಾತಿ ಇಲ್ಲದೆಯೇ ಎರಡು ವಾರಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮೇ 4ರಂದು ನಿರ್ದೇಶನ ನೀಡಿತು.

ಇದು ರಾಜ್ಯದಲ್ಲಿರುವ ಒಬಿಸಿ ಸಮುದಾಯಗಳಿಗೆ ನೀಡಿದ ದೊಡ್ಡ ಹೊಡೆತವಾಗಿದೆ. ಯಾಕೆಂದರೆ ರಾಜ್ಯದ 18ಕ್ಕೂ ಅಧಿಕ ಪುರಸಭೆಗಳು ಮತ್ತು 24 ಜಿಲ್ಲಾ ಪರಿಷತ್‌ಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಈ ಸಮುದಾಯಗಳಿಗೆ ಯಾವುದೇ ಮೀಸಲಾತಿ ಇರುವುದಿಲ್ಲ.

ಮಾರ್ಚ್‌ನಲ್ಲಿ, ವಾರ್ಡ್ ಪುನರ್ವಿಂಗಡಣೆ ಮತ್ತು ರಚನೆ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗದಿಂದ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಾಜ್ಯದ ಮಹಾ ವಿಕಾಸ್ ಅಘಾಡಿ (ಎಮ್‌ವಿಎ) ಸರಕಾರವು ಎರಡು ಮಸೂದೆಗಳನ್ನು ಅಂಗೀಕರಿಸಿತ್ತು. ಅದು, ಒಬಿಸಿ ಮೀಸಲಾತಿ ಮರಳುವವರೆಗೆ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಿಲ್ಲಿಸುವ ಉದ್ದೇಶದಿಂದ ರಾಜ್ಯ ಸರಕಾರ ತೆಗೆದುಕೊಂಡ ಹತಾಶ ಕ್ರಮವಾಗಿತ್ತು. ಇದನ್ನು ಬಳಿಕ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಈ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವದ ಕುರಿತ ತನ್ನ ನಿರ್ಧಾರವನ್ನು ನ್ಯಾಯಾಲಯ ಕಾದಿರಿಸಿದೆ. ಆದರೆ, ಒಬಿಸಿ ಮೀಸಲಾತಿ ಇಲ್ಲದೆಯೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
‘ತ್ರಿವಳಿ ಪರೀಕ್ಷೆ’ಯನ್ನು ಪಾಲಿಸಲು ರಾಜ್ಯ ಸರಕಾರ ವಿಫಲವಾಗಿರುವುದರಿಂದ ಮೀಸಲಾತಿಯನ್ನು ರದ್ದುಪಡಿಸಲಾಗಿದೆ.
ತ್ರಿವಳಿ ಪರೀಕ್ಷೆಗಳೆಂದರೆ: ಹಿಂದುಳಿದಿರುವಿಕೆಯ ಬಗ್ಗೆ ನೈಜ ಅಂಕಿ-ಅಂಶಗಳನ್ನು ಸಂಗ್ರಹಿಸುವುದಕ್ಕಾಗಿ ಆಯೋಗವೊಂದರ ಸ್ಥಾಪನೆ; ಮೀಸಲಾತಿಗಳ ಪ್ರಮಾಣವನ್ನು ನಿರ್ದಿಷ್ಟಪಡಿಸುವುದು; ಮತ್ತು ಒಟ್ಟು ಮೀಸಲು ಸ್ಥಾನಗಳು ಒಟ್ಟು ಸ್ಥಾನಗಳ ಗರಿಷ್ಠ ಮಿತಿಯಾದ 50 ಶೇಕಡಾವನ್ನು ಮೀರದಂತೆ ಖಾತರಿಪಡಿಸುವುದು.
ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಇಂದು ಜಾತಿ ಗಣತಿಯು ಅಗತ್ಯವಾಗಿದೆ ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯಾಗಲಾರದು.
ಒಬಿಸಿಗಳಿಗೆ ಮೀಸಲಿಡುವ ಸ್ಥಾನಗಳ ಪ್ರಮಾಣವನ್ನು ನಿರ್ಧರಿಸಲು ಜಾತಿ ಆಧರಿತ ಜನಗಣತಿ ಅಗತ್ಯವಾಗಿದೆ. ಇದಕ್ಕೆ ಸಮೀಕ್ಷೆಯು ಪರ್ಯಾಯವಲ್ಲ. ಯಾಕೆಂದರೆ ಸಮೀಕ್ಷೆಯು ಪರಿಪೂರ್ಣವಲ್ಲ; ಅದನ್ನು ಒಟ್ಟು ಜನಸಂಖ್ಯೆಯ ಒಂದು ಭಾಗವನ್ನು ಗುರಿಯಾಗಿರಿಸಿ ಮಾಡಲಾಗುತ್ತದೆ. ವಾಸ್ತವಿಕ ಜನಸಂಖ್ಯೆಯನ್ನು, ಅಂದರೆ ಈಗ ಒಬಿಸಿಗಳ ಜನಸಂಖ್ಯೆಯನ್ನು ಗುರುತಿಸಲು ಅದು ಉಪಯುಕ್ತವಲ್ಲ.

ಹಾಗಾಗಿ, ಪರೋಕ್ಷವಾಗಿ, ಒಬಿಸಿಗಳ ಜನಗಣತಿ ಕಾರ್ಯವನ್ನು ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಲಾಗಿತ್ತು. ಜನಗಣತಿಯೆಂದರೆ ಅಗಾಧ ಮತ್ತು ಕಠಿಣ ಕೆಲಸ. ಹಿಂದುಳಿದ ವರ್ಗಗಳ ಆಯೋಗದಂತಹ ಸುಸಜ್ಜಿತವಲ್ಲದ, ಸಂಪನ್ಮೂಲ ಕೊರತೆಯನ್ನು ಎದುರಿಸುವ, ಪರಿಣತಿಯ ಕೊರತೆಯಿರುವ ಮತ್ತು ಮೂಲಸೌಕರ್ಯವಿಲ್ಲದ ಆಯೋಗವು ಈ ಕೆಲಸಕ್ಕೆ ಸರಿಯಾದ ಸಂಸ್ಥೆಯಲ್ಲ.

ಹಾಗಾಗಿ, ಆಯೋಗದ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದರಲ್ಲಿ ಅಚ್ಚರಿಯೇನಿಲ್ಲ. ಈಗ ಎಮ್‌ವಿಎ ಸರಕಾರವು ಮಾಜಿ ಮುಖ್ಯ ಕಾರ್ಯದರ್ಶಿ ಜಯಂತ್ ಕುಮಾರ್ ಬಂತಿಯ ನೇತೃತ್ವದಲ್ಲಿ ಈ ಕಾರ್ಯಕ್ಕಾಗಿಯೇ ಮೀಸಲಾದ ಹೊಸ ಆಯೋಗವೊಂದನ್ನು ರಚಿಸಬೇಕಾಗಿದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ, ಒಬಿಸಿಗಳ ಜನಸಂಖ್ಯೆಯನ್ನು ಗುರುತಿಸುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಸರಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಜಾರಿಗೊಳಿಸಲು ಜನಗಣತಿಯ ಅಂಕಿ-ಸಂಖ್ಯೆಗಳು ಮುಖ್ಯವಾಗಿವೆ. ಜನಗಣತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯನ್ನು ಪ್ರತ್ಯೇಕವಾಗಿ ದಾಖಲಿಸುತ್ತದೆ ಮತ್ತು ಆ ಸಮುದಾಯಗಳ ವಿವಿಧ ಸಾಮಾಜಿಕ-ಆರ್ಥಿಕ ಸೂಚ್ಯಂಕಗಳ ಬಗ್ಗೆ ಅಂಕಿ-ಅಂಶಗಳನ್ನು ಸಂಗ್ರಹಿಸುತ್ತದೆ. ಆದರೆ, ಒಬಿಸಿಗಳಿಗೆ ಸಂಬಂಧಿಸಿದ ಇಂತಹ ಅಂಕಿ-ಅಂಶಗಳನ್ನು ಪ್ರತ್ಯೇಕವಾಗಿ ದಾಖಲಿಸಲು ಅದು ನಿರಾಕರಿಸಿದೆ.
ಜಾತಿ ಗಣತಿಗಾಗಿ ಒಬಿಸಿಗಳು ಹಾತೊರೆಯುತ್ತಿರುವುದು ಸಹಜ. ಯಾಕೆಂದರೆ, ಪ್ರಸಕ್ತ ಬಿಕ್ಕಟ್ಟು ಒಬಿಸಿ ಸಮುದಾಯದಲ್ಲಿ ಅಶಾಂತಿ ಮತ್ತು ಅಭದ್ರತೆಯನ್ನು ಸೃಷ್ಟಿಸಿದೆ. ಇದರ ಹೊರತಾಗಿಯೂ, ಮಹಾರಾಷ್ಟ್ರದ ಎಮ್‌ವಿಎ ಸರಕಾರ ಮತ್ತು ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ತಮ್ಮ ಆರೋಪ-ಪ್ರತ್ಯಾರೋಪಗಳನ್ನು ಮುಂದುವರಿಸುತ್ತಿವೆ.

ಸುಪ್ರೀಂ ಕೋರ್ಟ್‌ನ ಆದೇಶದಿಂದ ನುಣುಚಿಕೊಳ್ಳುವುದಕ್ಕಾಗಿ ಎಮ್‌ವಿಎ ಸರಕಾರವು ಅಧ್ಯಾದೇಶವೆಂಬ ಸಾಮಾನ್ಯ ದಾರಿಯನ್ನು ಆರಿಸಿಕೊಂಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಾಲ್ಕು ತಿಂಗಳುಗಳ ಬಳಿಕ ಸರಕಾರವು ಆಯೋಗವನ್ನೂ ರಚಿಸಿತು. ಆದರೆ ಇಡೀ ವರ್ಷದ ನೈಜ ಅಂಕಿ-ಅಂಶಗಳನ್ನು ಸಂಗ್ರಹಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಲು ವಿಫಲವಾಯಿತು. ಒಬಿಸಿಗಳ ಬಗ್ಗೆ ಸರಕಾರ ಮತ್ತು ಪ್ರತಿಪಕ್ಷಗಳೆರಡೂ ಹೊಂದಿರುವ ನಿರ್ಲಕ್ಷ ಧೋರಣೆಯು ಇದರಿಂದ ಗೊತ್ತಾಗುತ್ತದೆ.
ಆದರೆ, ಪ್ರಸಕ್ತ ಬಿಕ್ಕಟ್ಟಿಗೆ ಎಮ್‌ವಿಎ ಸರಕಾರ ಮಾತ್ರ ಕಾರಣವಲ್ಲ. ಮೊದಲನೆಯದಾಗಿ, ಸ್ವಾತಂತ್ರ ಬಂದಂದಿನಿಂದಲೂ ಕೇಂದ್ರ ಸರಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಇತರ ಜಾತಿಗಳ ಗಣತಿಯನ್ನು ಮಾಡಲು ನಿರಾಕರಿಸಿವೆ.
2011ರಲ್ಲಿ, ಕಾಂಗ್ರೆಸ್ ಸರಕಾರವು ಜಾತಿ ಗಣತಿಗೆ ಅರೆಮನಮಸ್ಸಿನಿಂದ ಒಪ್ಪಿಗೆ ನೀಡಿತು. ಹಾಗಾಗಿ, ಜನಗಣತಿಯ ವೇಳೆ, ‘ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (ಎಸ್‌ಇಸಿಸಿ)’ಯನ್ನೂ ಪ್ರತ್ಯೇಕವಾಗಿ ನಡೆಸಲಾಯಿತು. ಆದರೆ, ಎಸ್‌ಇಸಿಸಿ ಗಣತಿಯನ್ನು 120 ಕೋಟಿ ಜನರ ಪೈಕಿ 90 ಕೋಟಿ ಜನರ ಮೇಲೆ ಮಾತ್ರ ಮಾಡಲಾಯಿತು. ವ್ಯಾಖ್ಯೆಯ ಪ್ರಕಾರ, ಇದು ಜನಗಣತಿಯಲ್ಲ.

ಈ ಅಂಕಿ-ಸಂಖ್ಯೆಯನ್ನೂ ಎಮ್‌ವಿಎ ಸರಕಾರಕ್ಕೆ ನೀಡಲು ಕೇಂದ್ರ ಸರಕಾರ ನಿರಾಕರಿಸಿತು. ಇದಕ್ಕೆ ಕೇಂದ್ರ ಸರಕಾರ ಕೊಟ್ಟ ಕಾರಣಗಳು- ಈ ಅಂಕಿ-ಸಂಖ್ಯೆಗಳು ಪರಿಪೂರ್ಣವಾಗಿಲ್ಲ ಮತ್ತು ವಿಶ್ವಾಸಾರ್ಹವಲ್ಲ. ಆದರೆ, ಆಶ್ಚರ್ಯದ ಸಂಗತಿಯೆಂದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವಿಭಾಗಗಳಿಗೆ ಸಂಬಂಧಿಸಿದ ಅಂಕಿ-ಸಂಖ್ಯೆಗಳು ಎಸ್‌ಇಸಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.
ಇಲ್ಲೊಂದು ವಿಷಯವನ್ನು ಗಮನಿಸಬೇಕು. ಕಳೆದೆರಡು ಚುನಾವಣೆಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಒಬಿಸಿ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದು. ಇದರ ಹೊರತಾಗಿಯೂ, ಒಬಿಸಿ ಸಮುದಾಯಗಳ ಗಣತಿ ನಡೆಸಲು ಸರಕಾರ ಹಿಂದೇಟು ಹಾಕುತ್ತಿದೆ.
ಸಂಪನ್ಮೂಲಗಳು, ರಾಜಕೀಯ ಅಧಿಕಾರ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ‘ಮೇಲ್ಜಾತಿ’ಗಳು ನಿಯಂತ್ರಣವನ್ನು ಹೊಂದಿವೆ ಎನ್ನುವುದನ್ನು ಬ್ರಿಟಿಷರ ಕಾಲದ ಜನಗಣತಿಗಳ ಆಧಾರದಲ್ಲಿ ನಡೆದ ಸಂಶೋಧನೆಗಳು ಬಹಿರಂಗಪಡಿಸಿವೆ. ‘ಕೆಳ ಜಾತಿ’ಗಳಿಗೂ ರಾಜಕೀಯ ಪ್ರಾತಿನಿಧ್ಯ ಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬರುವಲ್ಲಿ ಈ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸಿವೆ. ಹಾಗಾಗಿ, ಜನಗಣತಿಯ ವೇಳೆ ಜಾತಿ ಗಣತಿಯನ್ನೂ ನಡೆಸುವುದಕ್ಕೆ ‘ಮೇಲ್ಜಾತಿ’ಗಳು ಸಹಜವಾಗಿಯೇ ವಿರೋಧ ವ್ಯಕ್ತಪಡಿಸುತ್ತವೆ. ಜಾತಿ ಗಣತಿಯು ಭಾರತೀಯ ಸಮಾಜವನ್ನು ಒಡೆಯುತ್ತದೆ ಎಂಬುದಾಗಿ ಮೇಲ್ಜಾತಿಗಳು ವಾದಿಸುತ್ತವೆ. ಹಾಗಾಗಿ, 1941ರಿಂದ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯ ವೇಳೆ ಜಾತಿ ಗಣತಿಯನ್ನು ನಡೆಸುವುದನ್ನು ನಿಲ್ಲಿಸಲಾಗಿದೆ.

ಇಂದಿಗೂ ಅದೇ ಪದ್ಧತಿ ಮುಂದುವರಿದಿದೆ. ‘‘ಜಾತಿ ಗಣತಿಯ ಬಗ್ಗೆ ಯಾರು ಹೆದರಿಕೆ ಹೊಂದಿದ್ದಾರೆ?’’ ಎಂದು ಸಮಾಜಶಾಸ್ತ್ರಜ್ಞ ಸತೀಶ್ ದೇಶಪಾಂಡೆ ಪ್ರಶ್ನಿಸುತ್ತಾರೆ. ಅದಕ್ಕೆ ಅವರೇ ಉತ್ತರ ನೀಡುತ್ತಾರೆ: ‘‘ಭಾರತವು ಅತ್ಯಂತ ಮುದ್ದಿನಿಂದ ಸಾಕಿದ ‘ಮೇಲ್ಜಾತಿ’ ಅಲ್ಪಸಂಖ್ಯಾತರು. ಬಹುಸಂಖ್ಯಾತರ ಮೇಲೆ ತಾವು ಹೊಂದಿರುವ ಪಾರಮ್ಯವನ್ನು ಈ ಮೇಲ್ಜಾತಿಗಳು ಮುಂದುವರಿಸಿಕೊಂಡು ಹೋಗಲು ಬಯಸುತ್ತಾರೆ. ಇದನ್ನು ಜಾತಿ ಗಣತಿಯು ಖಂಡಿತವಾಗಿಯೂ ಬಹಿರಂಗಗೊಳಿಸುತ್ತದೆ’’.
ಹಾಗಾಗಿ, ಮಹಾರಾಷ್ಟ್ರದ ರಾಜಕೀಯದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ನಿಭಾಯಿಸಲು, ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯ ವೇಳೆ ಜಾತಿ ಗಣತಿಯನ್ನೂ ನಡೆಸುವುದು ಸರಿಯಾದ ಪರಿಹಾರವಾಗಿದೆ. ಅದು ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ನಿಖರ ಮಾಹಿತಿಯನ್ನು ಒದಗಿಸುತ್ತದೆ.

ಕೃಪೆ: thewire.in 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)