ಉಡುಪಿ: ಸಾಮರಸ್ಯದ ನಡಿಗೆಯಲ್ಲಿ ಬಹುತ್ವ ಭಾರತದ ಅನಾವರಣ
ಹರಿದುಬಂದ ಜನಸಾಗರದ ಮಧ್ಯೆ ಮೊಳಗಿದ ಸಹಬಾಳ್ವೆಯ ಘೋಷಣೆ
ಉಡುಪಿ, ಮೇ 14: ಸಹಬಾಳ್ವೆ ಉಡುಪಿ ಹಾಗೂ ಕರ್ನಾಟಕದ ಸೌಹಾರ್ದ ಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸಹಬಾಳ್ವೆ ಸಮಾವೇಶದ ಪ್ರಯುಕ್ತ ಶನಿವಾರ ಮಧ್ಯಾಹ್ನ ಉಡುಪಿ ನಗರದಲ್ಲಿ ನಡೆದ ಸಾಮರಸ್ಯದ ನಡಿಗೆಯು ನಾಡಿನ ಸೌಹಾರ್ದತೆ ಪರಂಪರೆಗೆ ಸಾಕ್ಷಿಯಾಗಿ ಬಹುತ್ವ ಭಾರತವನ್ನು ಅನಾವರಣಗೊಳಿಸಿತು.
ಅಜ್ಜರಕಾಡಿನ ಹುತಾತ್ಮ ಸ್ಮಾರಕ ಚೌಕದ ಬಳಿ ಸಾಮರಸ್ಯದ ನಡಿಗೆಗೆ ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಆರ್.ಮೋಹನ್ ರಾಜ್, ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್, ರೈತ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಮಹಿಳಾ ಹಕ್ಕು ಹೋರಾಟಗಾರ್ತಿ ಕೆ.ನೀಲಾ, ಯುವ ಹೋರಾಟಗಾರರಾದ ಸಬೀಹ ಫಾತಿಮ ಹಾಗೂ ನಜ್ಮಾ ಚಿಕ್ಕನೇರಳೆ, ಯೂಸುಫ್ ಕನ್ನಿ, ಫಾದರ್ ವಿಲಿಯಂ ಮಾರ್ಟಿಸ್ ಏಳು ಬಣ್ಣದ ಪತಾಕೆಯನ್ನು ಬೀಸುವ ಮೂಲಕ ಚಾಲನೆ ನೀಡಿದರು.
ಹುತಾತ್ಮ ಚೌಕದಿಂದ ಹೊರಟ ನಡಿಗೆ, ಜೋಡುಕಟ್ಟೆ, ಕೋರ್ಟ್ ರೋಡ್, ಹಳೆ ಡಯಾನ ವೃತ್ತ, ತ್ರಿವೇಣಿ ಸರ್ಕಲ್, ಕ್ಲಾಕ್ ಟವರ್, ಕಿದಿಯೂರು ಹೊಟೇಲ್, ಸಿಟಿ ಬಸ್ ನಿಲ್ದಾಣ ರಸ್ತೆ, ಸರ್ವಿಸ್ ಬಸ್ ನಿಲ್ದಾಣದ ಪಕ್ಕದ ರಸ್ತೆ, ಕ್ಲಾಕ್ ಟವರ್ ಎಡ ರಸ್ತೆ, ಡಯಾನ ಸರ್ಕಲ್, ಹಳೆ ತಾಲೂಕು ಕಚೇರಿ ವೃತ್ತ, ಮಿಷನ್ ಆಸ್ಪತ್ರೆ ಮಾರ್ಗವಾಗಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಂಡಿತು.
ಸಾಮರಸ್ಯದ ನಡಿಗೆಯಲ್ಲಿ ಕಂಬಳದ ಕೋಣ, ಹುಲಿವೇಷ ಚೆಂಡೆ, ನಾಸಿಕ್ ಬ್ಯಾಂಡ್, ಕಂಗಿಲು ನೃತ್ಯ ಡೊಳ್ಳು ಕುಣಿತ ಧಪ್ ಹಾಗೂ ನಾಡಿನ ಮಹಾನ್ ವ್ಯಕ್ತಿಗಳಾದ ನಾರಾಯಣ ಗುರುಗಳು, ಡಾ.ಬಿ.ಆರ್.ಅಂಬೇಡ್ಕರ್, ಗಾಂಧೀಜಿ, ಸ್ವಾಮಿ ವಿವೇಕಾನಂದ, ಮದರ್ ತೆರೇಸಾ, ಹಾಜಿ ಅಬ್ದುಲ್ಲಾ, ಮಾಧವ ಮಂಗಲ, ಡಾ.ಟಿಎಂಎ ಪೈ, ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸ್ತಬ್ದ ಚಿತ್ರಗಳು ಬಹುತ್ವ ಭಾರತವನ್ನು ಪ್ರತಿಬಿಂಬಿಸುತ್ತಿದ್ದವು. ಕರ್ನಾಟಕ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾ ತಂಡಗಳು, ರಾಷ್ಟ್ರಧ್ವಜ ಹಾಗೂ ಏಳು ಬಣ್ಣದ ಪತಾಕೆ ಹಿಡಿದ ಸಹಸ್ರಾರು ಮಂದಿ ಗಮನ ಸೆಳೆದರು.
ನಗರದಲ್ಲಿ ರಾರಾಜಿಸಿದ ಪತಾಕೆಗಳು!
ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಕೇಸರಿ, ಹಸಿರು, ಕೆಂಪು, ನೀಲಿ, ಬಿಳಿ, ಹಳದಿ ಸೇರಿದಂತೆ ವಿವಿಧ ಬಣ್ಣಗಳ ಪತಾಕೆಗಳು, ಕಟೌಟುಗಳು ರಾರಾಜಿಸುತ್ತಿದ್ದವು. ಕೋರ್ಟ್ ರಸ್ತೆಯಲ್ಲಿರುವ ವೃತ್ತವನ್ನು ಪತಾಕೆಗಳಿಂದ ಶೃಂಗರಿಸಲಾಗಿತ್ತು.
ಬೃಹತ್ ಮೆರವಣಿಗೆ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ 300 ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಯಲ್ಲಿ ಸಾಗಿ ಬಂದವರಿಗೆ ಕುಡಿಯಲು ಸುಮಾರು 25 ಸಾವಿರ ನೀರಿನ ಬಾಟಲಿಗಳ ವ್ಯವಸ್ಥೆ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಯುಆರ್ ಸಭಾಪತಿ ಮೊದಲಾದವರು ಉಪಸ್ಥಿತರಿದ್ದರು.
ಸಂಚಾಲನ ಸಮಿತಿಯ ಸುಂದರ್ ಮಾಸ್ಟರ್ ಸ್ವಾಗತಿಸಿದರು. ವಿನಯ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾಕ್ಟರ್ ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
"ಸಾಮರಸ್ಯ ಹಾಗೂ ಸಮಾನತೆಯ ಬೀಜಗಳನ್ನು ಬಿತ್ತಿದ ಕನಕದಾಸರು, ನಾರಾಯಣಗುರು, ಬುದ್ಧ, ಬಸವ ಕಟ್ಟಿರುವ ನಾಡು ಇದು. ಆದರೆ ಇಂದು ವೈದಿಕ ಪರಂಪರೆಯನ್ನು ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ. ಭಾಗಕ್ಕೆ ಬಂದಿದೆ. ನಾರಾಯಣಗುರು, ಬುದ್ಧ, ಬಸವ, ಅಂಬೇಡ್ಕರ್‌ರ ಭಾರತದ ಬದಲು ಇಂದು ಪೇಶ್ವೆ, ಬುಲ್ಡೋಜರ್ ಭಾರತ ಬರುತ್ತಿದೆ. ಜನಸಾಮಾನ್ಯರನ್ನು ಸಂಪೂರ್ಣ ಬೀದಿಪಾಲು ಮಾಡುವ ವ್ಯವಸ್ಥೆ ಬರುತ್ತಿದೆ".
-ಮಾವಳ್ಳಿ ಶಂಕರ್
"ಹಲವು ವರ್ಷಗಳಿಂದ ಕೂಡಿ ಬದುಕುತ್ತಿದ್ದದನ್ನು ನಾವು ಕೆಲವು ದಿನಗಳಿಂದ ಅದನ್ನು ಮರೆತಿದ್ದೆವು. ಕೆಲವರು ಧ್ವೇಷದ ಬೆಂಕಿ ಹಚ್ಚಿದ ಪರಿಣಾಮ ನಮ್ಮ ಹೃದಯದಲ್ಲಿ ಅಡಗಿದ್ದ ಪ್ರೀತಿ ಹೊರಗಡೆ ಬಂದಿದೆ. ನಾವೆಲ್ಲರು ಕೂಡಿ ಬದುಕಲು ಯಾರ ಅನುಮತಿ ಕೂಡ ಬೇಕಾಗಿಲ್ಲ. ಅವರು ನಮ್ಮನ್ನು ಒಡೆದರೆ ನಾವು ಅದಕ್ಕೆ ಪ್ರತಿಯಾಗಿ ಪ್ರೀತಿಯ ಮೂಲಕ ಮನುಷ್ಯತ್ವದ ಬೆಳಕನ್ನು ತೋರಿಸ ಬೇಕಾಗಿದೆ. ಎಲ್ಲರು ಕೂಡಿ ಬದುಕಿದ ಈ ಪರಂಪರೆಯನ್ನು ನಾವು ಮುಂದು ವರೆಸಬೇಕು".
-ಕೆ.ನೀಲಾ