ದ್ವೇಷದ ಬೀಜ ಬಿತ್ತುವವರಿಗೆ ಫಸಲು ಕೈಗೆ ಸಿಗದು ಎಂಬ ಸಂದೇಶ ಸಾರಲು ಈ ಸಹಬಾಳ್ವೆ ಸಮಾವೇಶ: ಯೋಗೇಂದ್ರ ಯಾದವ್
ಉಡುಪಿ, ಮೇ 14: ದ್ವೇಷದ ಹೊಸ ಅಲೆಯೊಂದು ಇತ್ತೀಚೆಗೆ ಉಡುಪಿ ಯಿಂದ ಪ್ರಾರಂಭಗೊಂಡು ಇಡೀ ದೇಶಾದ್ಯಂತ ಹಬ್ಬಿದೆ. ಇದಕ್ಕಾಗಿ ಉಡುಪಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಕರಾವಳಿಯ ಈ ಮಣ್ಣಿನಲ್ಲಿ ಏನೂ ಬೆಳೆಯುವ ಗುಣವೊಂದಿದೆ. ಹೀಗಾಗಿ ಇಲ್ಲೇ ದ್ವೇಷದ ಬೀಜವನ್ನು ಬಿತ್ತಲಾಗಿತ್ತು. ಆದರೆ ಇಂದಿನ ಈ ಸಮಾವೇಶದ ಮೂಲಕ ದ್ವೇಷದ ಬೆಳೆಯ ಫಸಲು ಕೈಗೆ ಸಿಗುವುದಿಲ್ಲ ಎಂಬ ಸಂದೇಶವನ್ನು ಸಾರಲಾಗಿದೆ ಎಂದು ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ ಹೊಸದಿಲ್ಲಿಯ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಸಹಬಾಳ್ವೆ ಉಡುಪಿ ಹಾಗೂ ಕರ್ನಾಟಕದ ಸೌಹಾರ್ದ ಪರ ಸಂಘಟನೆಗಳ ಸಹಯೋಗದಲ್ಲಿ ಇಂದು ನಗರದಲ್ಲಿ ನಡೆದ ರಾಜ್ಯಮಟ್ಟದ ಸಾಮರಸ್ಯದ ನಡಿಗೆ ಹಾಗೂ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಹಬಾಳ್ವೆ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಪ್ರಧಾನ ಭಾಷಣ ಮಾಡಿದರು.
ಇಂದು ದೇಶದಲ್ಲಿ ನಡೆಯುತ್ತಿರುವುದು ಎಲ್ಲರ ಕಣ್ಣೇದುರೇ ನಡೆಯುತ್ತಿದೆ. ದೇಶವನ್ನು ಛಿದ್ರಗೊಳಿಸುವ ಪ್ರಯತ್ನ ವನ್ನು ನಡೆಸಲಾಗುತ್ತಿದೆ. ಈ ಪ್ರಯತ್ನವನ್ನು ನಾವೆಲ್ಲರೂ ಸೇರಿ ವಿಫಲಗೊಳಿಸಬೇಕಿದೆ. ಅವರು ಛಿದ್ರ ಗೊಳಿಸುತ್ತಿ ರುವುದನ್ನು ನಾವು ಮತ್ತೆ ಜೋಡಿಸುತ್ತೇವೆ ಎಂಬ ಘೋಷಣೆಯನ್ನು ಅವರು ನೆರೆದವರ ಮೂಲಕ ಹೇಳಿಸಿದರು.
ದೇಶವನ್ನು ಛಿದ್ರಗೊಳಿಸುವರ, ದೇಶದೊಳಗಿನ ಜಾತಿ-ಧರ್ಮದೊಳಗೆ ಸಾಮರಸ್ಯರನ್ನು ಕದಡುವವರು ಎರಡು ವರ್ಗದ ನಾಗರಿಕರನ್ನು ಸೃಷ್ಟಿಸಲು ಪ್ರಯತ್ನಿಸುತಿದ್ದಾರೆ. ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ. ಇವರಲ್ಲಿ ಪ್ರಥಮ ದರ್ಜೆಯವರು ಮಾಲಕರು ಹಾಗೂ ಮತ್ತೊಬ್ಬರು ಬಾಡಿಗೆದಾರರು ಎಂದು ಯೋಗೇಂದ್ರ ಯಾದವ್ ವಿವರಿಸಿದರು.
ಇದಕ್ಕೆ ಇತ್ತೀಚೆಗೆ ಪ್ರಾರಂಭಗೊಂಡ ಹಿಂದಿ ರಾಷ್ಟ್ರಭಾಷೆ ವಿವಾದವನ್ನು ಅವರು ಉದಾಹರಣೆಯಾಗಿ ನೀಡಿದರು. 2500 ವರ್ಷಗಳ ಇತಿಹಾಸವಿರುವ ಕನ್ನಡದ ವಿರುದ್ಧ ಅದಕ್ಕಿಂತ ಸಾವಿರ ವರ್ಷಗಳ ಬಳಿಕ ಹುಟ್ಟಿಕೊಂಡ ಹಿಂದಿ ಭಾಷೆಯ ಪಾರಮ್ಯ ಸಾರುವ ಈ ಪ್ರಯತ್ನವನ್ನು ನಾವು ಉಡುಪಿಯ ಈ ಸಮಾವೇಶದ ಮೂಲಕ ತಡೆಗಟ್ಟಬೇಕಿದೆ. ಈ ದೇಶದ ಪ್ರತಿಯೊಬ್ಬರು ಇಲ್ಲಿನ ಮಾಲಕನೇ ಹೊರತು ಯಾರೂ ಬಾಡಿಗೆದಾರರಿಲ್ಲ ಎಂದು ನಾವು ಸ್ಪಷ್ಟವಾಗಿ ಸಾರಬೇಕಿದೆ ಎಂದರು.
ಜಾತ್ಯತೀತತೆ ಪ್ರಶ್ನೆ: ಕೆಲವರು ಈ ದೇಶದಲ್ಲಿ ಜಾತ್ಯತೀತತೆ ಎಲ್ಲಿದೆ ಎಂದು ಪಶ್ನಿಸುತಿದ್ದಾರೆ. 1976ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಸಂವಿಧಾನದಲ್ಲಿ ಈ ಶಬ್ದವನ್ನು ಸೇರಿಸಿದ್ದಾರೆ ಎಂಬ ಶುದ್ಧ ಸುಳ್ಳನ್ನು ಹೇಳುತಿದ್ದಾರೆ. ಈ ದೇಶದ ಮಣ್ಣಿನಲ್ಲೇ ಜಾತ್ಯಾತೀತೆ, ಸಾಮರಸ್ಯ, ಸೌಹಾರ್ದತೆ ಇತ್ತು. ಇದು ನಮಗೆ ಆಂಗ್ಲರ ಕೊಡುಗೆಯಲ್ಲ. ಮಹಾತ್ಮಗಾಂಧಿ ಮೂಲಕ ಸ್ವಾತಂತ್ರ್ಯ ಹೋರಾಟ ನಡೆದಿರುವುದು ಜಾತ್ಯತೀತತೆ ಆಧಾರದಲ್ಲೇ. ಸಂವಿಧಾನದಲ್ಲಿ ಅದನ್ನು ಬರಹ ರೂಪದಲ್ಲಿ ಸೇರಿಸಲಾಗಿದೆ ಅಷ್ಟೇ ಎಂದರು.
ಬುದ್ಧ, ಬಸವಣ್ಣ, ಅಶೋಕ, ಅಕ್ಬರ್ ಎಲ್ಲರೂ ಇದನ್ನೇ ಹೇಳಿದ್ದಾರೆ. ಇದು ನಮಗೆ ಆಂಗ್ಲರ ಕೊಡುಗೆ ಅಲ್ಲ. 5000 ವರ್ಷಗಳಿಂದ ಇದು ಭಾರತೀಯರ ಮೂಲಮಂತ್ರವೇ ಆಗಿತ್ತು. ಈ ದೇಶದ ಎಲ್ಲರನ್ನು, ಎಲ್ಲಾ ಧರ್ಮದವರನ್ನು, ಜಾತಿಯವರನ್ನು ಒಟ್ಟಾಗಿ ಕರೆದೊಯ್ಯುವುದು ಆಳುವವರ ಧರ್ಮ. ಆದರೆ ಇಂದು ಅಂಥ ಒಂದು ಧರ್ಮ ಆಳುವವರಲ್ಲಿ ಕಾಣುತ್ತಿಲ ಎಂದರು.
ದೇಶದ್ರೋಹಿ ಯಾರು?: ಇಂದು ಹೆಚ್ಚಾಗಿ ಕೇಳಿಬರುತ್ತಿರುವ ಪದ ದೇಶದ್ರೋಹಿ ಎಂಬುದಾಗಿದೆ. ಈ ಸರ್ಟಿಫಿಕೇಟ್ ಕೊಡುವವರು ಯಾರು ಎಂದು ಪ್ರಶ್ನಿಸಿದ ಯೋಗೇಂದ್ರ ಯಾದವ್, ಯಾರು ಈ ದೇಶದ ಜನರನ್ನು ಕೂಡಿಸುವ, ಒಂದಾಗಿ ಕಾಣುತ್ತಾರೋ ಅವರು ದೇಶಪ್ರೇಮಿ. ಯಾರು ದೇಶದಲ್ಲಿ ಧ್ವೇಷವನ್ನು ಹರಡುತ್ತಾರೋ, ಜಾತಿ-ಜಾತಿ, ಧರ್ಮ-ಧರ್ಮದ ನಡುವೆ ಜಗಳಕ್ಕೆ ಕಾರಣರಾಗುತ್ತಾರೋ ಅವರು ದೇಶದ್ರೋಹಿಗಳು ಎಂದು ವ್ಯಾಖ್ಯಾನಿಸಿದರು. ಸದ್ಯ ಈ ದೇಶದ ದೇಶದ್ರೋಹಿಗಳು ಯಾರು ಎಂದು ಯಾರೊಬ್ಬರೂ ಬಾಯಿಬಿಟ್ಟು ಹೇಳಬೇಕಿಲ್ಲ ಎಂದರು.
ದೇಶದ ಮೇಲೆ ಇಂದು ಬುಲ್ಡೋಜರ್ ಹರಿಯುತ್ತಿದೆ. ದೇಶದ ಸಂವಿಧಾನದ ಮೇಲೆ, ಸೌಹಾರ್ದತೆಯ ಮೇಲೆ, ದೇಶದ ಸಾಮರಸ್ಯದ ಮೇಲೆ ಬುಲ್ಡೋಜರ್ ಹರಿಯುತ್ತಿದೆ. ಆದರೆ ಈ ದೇಶದ ಅಡಿಪಾಯವನ್ನು ಉಳಿಸುವ, ರಕ್ಷಿಸುವ ಸಂಕಲ್ಪ ಹೊತ್ತ ನಾವೆಲ್ಲರೂ ಎಂದೂ ಒಂದಾಗಿ ಇರುತ್ತೇವೆ ಎಂದು ಸಾರಿದರು.
ಇಂದು ಬುಲ್ಡೋಜರ್ ಹರಿಸುವವರ ಕೈಯಲ್ಲಿ ಮಾಧ್ಯಮಗಳಿವೆ. ಹೀಗಾಗಿ ನಾಳೆ ಉಡುಪಿಯ ಈ ಸಹಬಾಳ್ವೆ ಸಮಾವೇಶ ಮುಖಪುಟದ ಸುದ್ದಿಯಾಗುವುದಿಲ್ಲ. ಇಂದು ಕುರ್ಚಿ, ಲಾಠಿ, ಪೊಲೀಸ್ ಪಡೆ ಎಲ್ಲರೂ ಅವರ ಕೈಯಲ್ಲಿದೆ. ಆದರೆ ನಮ್ಮ ಬಳಿ ಇರುವುದು ಬುದ್ಧ, ಅಂಬೇಡ್ಕರ್, ಸೂಫಿಸಂತರು ಮಾತ್ರ. ನಮ್ಮ ಬಳಿ ಅಂಬೇಡ್ಕರ್‌ರ ಸಂವಿಧಾನವಿದೆ. ಅದನ್ನು ನಾವು ರಕ್ಷಿಸಿಕೊಳ್ಳಬೇಕಿದೆ ಎಂದು ಯೋಗೇಂದ್ರ ಯಾದವ್ ಹೇಳಿದರು.
ಉದ್ಘಾಟನೆ: ವೇದಿಕೆಯ ಮೇಲಿದ್ದ ಗಣ್ಯರು, ಅತಿಥಿಗಳೆಲ್ಲರೂ ಪಂಪನ ‘ಮನುಜ ಕುಲ ತಾನೊಂದೇ ವಲಂ’ ಘೋಷಣೆ ಬರೆದ ಆಶಯ ಫಲಕವನ್ನು ಎತ್ತಿ ಹಿಡಿಯುವ ಮೂಲಕ ರಾಜ್ಯಮಟ್ಟದ ಈ ಸಮಾವೇಶವನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು. ದೇಶದೆಲ್ಲೆಡೆ ಹಿಂಸೆಯಿಂದ ಮಡಿದ ಎಲ್ಲಾ ಜೀವಾತ್ಮಗಳಿಗೆ ಸಭೆ ಒಂದು ನಿಮಿಷದ ಮೌನದ ಮೂಲಕ ಶೃದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಹಿರೇಮಠದ ಸಂಸ್ಥಾದ ಶ್ರೀಗುರುಬಸವ ಪಟ್ಟದೇವರು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆ ಸಂಯುಕ್ತ ಜಮಾಅತ್‌ನ ಖಾಜಿಗಳಾದ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪುತ್ತೂರು ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಬಿಷಪ್ ಅ.ವಂ.ವರ್ಗೀಸ್ ಮಾರ್ ಮಕರಿಯೋಸ್ ಅವರು ಧರ್ಮ ಸಂದೇಶ ನೀಡಿದರು.
ಅಧ್ಯಕ್ಷತೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೆಂಥಿಲ್ ವಹಿಸಿದ್ದರು. ಕರ್ನಾಟಕ ಕ್ರೈಸ್ತ ಸಂಘ-ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ.ರೊನಾಲ್ಡ್ ಕುಲಾಸೋ ಕಳುಹಿಸಿದ ಸೌಹಾರ್ದ ಸಂದೇಶವನ್ನು ವಾಚಿಸಲಾಯಿತು.
ವೇದಿಕೆಯಲ್ಲಿ ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ದೇವಿ, ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ, ಬೆಳಗಾವಿ ಬಸವ ಮಂಟಪದ ಬಸವ ಧರ್ಮಪೀಠದ ಶ್ರೀಬಸವಪ್ರಕಾಶ್ ಸ್ವಾಮೀಜಿ, ಲೋಕರತ್ನ ಬುದ್ಧ ವಿಹಾರ ಬೆಂಗಳೂರಿನ ಭಂತೆ ಮಾತೆ ಮೈತ್ರಿ, ಜಮಿಯ್ಯತುಲ್ ಉಲಮಾ ಹಿಂದ್ ಕರ್ನಾಟಕದ ಅಧ್ಯಕ್ಷ ಮೌಲಾನ ಇಫ್ತಿಯಾರ್ ಅಹ್ಮದ್ ಕಾಸ್ಮಿ, ಸುನ್ನಿ ಯುವಜನ ಸಂಘ ಕರ್ನಾಟಕದ ಅಧ್ಯಕ್ಷ ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಡಾ.ಹಾಬರ್ಟ್ ಎಂ.ವಾಟ್ಸನ್, ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಕಾರ್ಯದರ್ಶಿ ಮೌಲಾನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿ ಕಾರಿ ವಂ.ಚೇತನ್ ಲೋಬೊ, ಮಣಿಪಾಲ ಗುರುಧ್ವಾರದ ಗ್ಯಾನಿ ಬಲರಾಜ್ ಸಿಂಗ್ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಸಹಭಾಗಿಯಾಗಿರುವ ಕರ್ನಾಟಕದ ಸೌಹಾರ್ದ ಸಂಘಟನೆಗಳ ಮುಂದಾಳುಗಳಾದ ಮಾವಳ್ಳಿ ಶಂಕರ್, ಆರ್.ಮೋಹನ್ ರಾಜ್ (ದಸಂಸ), ಎಚ್.ಆರ್. ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಕೆ.ನೀಲಾ (ಮಹಿಳಾಹಕ್ಕು ಹೋರಾಟ ಗಾರ್ತಿ), ಡಾ.ಬೆಳಗಾಮಿ ಮಹಮ್ಮದ್ ಸಾದ್, ಸಬೀಹ ಫಾತಿಮ ಹಾಗೂ ನಜ್ಮಾ ಚಿಕ್ಕನೇರಳೆ (ಯುವ ಹೋರಾಟಗಾರರು) ಉಪಸ್ಥಿತರಿದ್ದರು.
ಉಡುಪಿ ಸಹಬಾಳ್ವೆಯ ಸಂಚಾಲಕ ಅಮೃತ ಶೆಣೈ ಅತಿಥಿಗಳನ್ನು ಸ್ವಾಗತಿಸಿದರೆ, ಯಾಸಿನ್ ಮಲ್ಪೆ ಆಶಯದ ಮಾತುಗಳನ್ನಾಡಿದರು. ಕೆ.ಎಲ್.ಅಶೋಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೆರೋನಿಕಾ ಕರ್ನೇಲಿಯೊ ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶಕ್ಕೆ ಮುನ್ನ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಅವರಿಂದ ಸೌಹಾರ್ದ ಗೀತ ಗಾಯನ ಕಾರ್ಯಕ್ರಮವಿತ್ತು.