"ದೇಶದಲ್ಲಿ ನಡೆಯುತ್ತಿರುವುದು ಮನಸ್ಥಿತಿಗಳ ನಡುವಿನ ಸಮಸ್ಯೆಯೇ ಹೊರತು ಧರ್ಮಗಳದ್ದಲ್ಲ"
ಉಡುಪಿಯ ಸಹಬಾಳ್ವೆ ಸಮಾವೇಶದಲ್ಲಿ ಶಶಿಕಾಂತ್ ಸೆಂಥಿಲ್
ಉಡುಪಿ : ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವುದು ಭಾರತವನ್ನು ಒಪ್ಪುವ ಮತ್ತು ಭಾರತವನ್ನು ಒಪ್ಪದೆ ಇರುವ ಮನಸ್ಥಿತಿಗಳ ನಡುವಿನ ಸಮಸ್ಯೆಯೇ ಹೊರತು ಹಿಂದು ಮತ್ತು ಮುಸ್ಲಿಮ್ ಧರ್ಮಗಳ ನಡುವಿನ ವಿವಾದ ಅಲ್ಲ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ಸಹಬಾಳ್ವೆ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಒಂದು ಮನಸ್ಥಿತಿಗೆ ಈ ಸಮಾಜದಲ್ಲಿ ತಾರತಮ್ಯ, ಮೇಲುಕೀಳು ಇರಬೇಕಾಗಿದೆ. ಅದಕ್ಕೆ ಪ್ರೀತಿ, ಸಹೋದರತೆ ಮುಖ್ಯ ಅಲ್ಲ. ಅದು ಸಮಾಜವನ್ನು ನಿಯಂತ್ರಿಸಲು ಭಯ ಹಾಗೂ ಧ್ವೇಷವನ್ನು ಹುಟ್ಟಿಸುತ್ತಿದೆ ಮತ್ತು ಈ ದೇಶವನ್ನು ಆಸ್ತಿಯನ್ನಾಗಿ ಮಾತ್ರ ನೋಡುತ್ತಿದೆ. ಆದರೆ ಇನ್ನೊಂದು ಮನಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಅದಕ್ಕೆ ಈ ಸಮಾಜದಲ್ಲಿ ತಾರತಮ್ಯ ಇಲ್ಲದೆ ಎಲ್ಲರು ಸಮಾನರಾಗಿರಬೇಕು. ಪ್ರೀತಿ ಸಹೋದರತೆಯ ಮೂಲಕವೇ ಸಮಾಜ ನಡೆಯಬೇಕು. ದೇಶ ಅಂದರೆ ಜನ ಎಂದು ನಂಬುವ ಮನಸ್ಥಿತಿ ಆಗಿದೆ ಎಂದರು.
ಭಾರತವನ್ನು ನಂಬದೆ ಇರುವವರು ಕೇವಲ ಶೇ.10-20ರಷ್ಟು ಮಾತ್ರ ಇದ್ದಾರೆ. ಆದರೆ ಶೇ.80ರಷ್ಟು ಮಂದಿ ಇರುವ ಭಾರತವನ್ನು ನಂಬುವವರು ಮೌನ ವಹಿಸಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ನಾವು ಈಗಿನ ಸಮಸ್ಯೆಗಳನ್ನು ಧರ್ಮಗಳ ಆಧಾರದಲ್ಲಿ ನೋಡದೆ ಎರಡು ಮನಸ್ಥಿತಿಗಳ ನಡುವಿನ ಸಮಸ್ಯೆಯಾಗಿ ನೋಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ನಾವು ಕಳೆದ 50 ವರ್ಷಗಳಿಂದ ಭಾರತೀಯ ಎಂಬ ಚಿಂತನೆಯನ್ನು ಆಚರಿಸುವುದನ್ನೇ ಮರೆತು ಬಿಟ್ಟಿದ್ದೇವೆ. ನಾವು ಮರೆತ ಪರಿಣಾಮ ಈ ಧ್ವೇಷ ನಮ್ಮ ಮಧ್ಯೆ ನುಸುಳಿದೆ. ಆದುದರಿಂದ ನಾವು ಸಹಬಾಳ್ವೆಯನ್ನು ಇನ್ನು ಮುಂದಕ್ಕೆ ಆಚರಿಸಬೇಕು. ಅದಕ್ಕೆ ಆರಂಭವೇ ಈ ಸಮಾವೇಶ ಆಗಬೇಕು. ರಾಜ್ಯದ ಮೂಲೆಮೂಲೆಗಳಿಗೂ ಹಬ್ಬಬೇಕು ಎಂದು ಅವರು ತಿಳಿಸಿದರು.
ನಾವು ಮಕ್ಕಳಿಗೆ ಶಿಕ್ಷಣ ನೀಡಿ, ಆಸ್ತಿ ಮಾಡಿದರೆ ಸಾಲದು. ಅವರು ಬದುಕು ನಡೆಸಲು ಒಳ್ಳೆಯ ವಾತಾವರಣ ಕೊಡಬೇಕಾಗಿದೆ. ಅದಕ್ಕಾಗಿ ಹಿರಿಯರಾದ ನಾವು ನಮ್ಮ ಮಕ್ಕಳ ಬದುಕಿಗಾಗಿ ಇಂದಿನ ಸಮಸ್ಯೆ ವಿರುದ್ಧ ಮಾತನಾಡಬೇಕು. ಆಗ ಮಾತ್ರ ಭಾರತ ಆತ್ಮವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಈ ಐತಿಹಾಸಿಕ ಸಮಾವೇಶವನ್ನು ಯುವಕರು ಹಳ್ಳಿಹಳ್ಳಿಗೆ ತೆಗೆದುಕೊಂಡು ಹೋಗಿ ಸಹೋದರತೆ, ಸಹಬಾಳ್ವೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಅವರು ಹೇಳಿದರು.
ಯುವಜನತೆಯಿಂದ ದೇಶ ಕಟ್ಟುವ ಸಂಕಲ್ಪ!
ವಿವಿಧ ಧರ್ಮಗಳ ಯುವಜನತೆ ಧ್ವೇಷ ಅಲಿಸಿ ದೇಶ ಕಟ್ಟುವ ಸಂಕಲ್ಪ ಮಾಡುವ ಮೂಲಕ ಸಹಬಾಳ್ವೆಯ ಸಮಾವೇಶ ಕೊನೆಗೊಂಡಿತು.
ವೇದಿಕೆ ಮೇಲೇರಿದ ಯುವಜನತೆ, ನಾಡಿಗಾಗಿ ನಾಳೆಗಾಗಿ ನಿಮ್ಮ ನಮ್ಮೆಲ್ಲರ ನೆಮ್ಮದಿಗಾಗಿ, ಸಂತವಾಣಿಯ ಸಂದೇಶಕರಾಗುತ್ತೇವೆ. ಧರ್ಮ ರಕ್ಷಣೆಯ ಕಲಿಗಳಾಗುತ್ತೇವೆ. ಸಂವಿಧಾನದ ಸಂರಕ್ಷರಾಗುತ್ತೇವೆ. ಧ್ವೇಷ ಅಲಿಸುತ್ತೇವೆ, ಪ್ರೀತಿ ಬೆಳೆಸುತ್ತೇವೆ. ದ್ವೇಷ ಕಲೆಯುತ್ತೇವೆ ಈ ದೇಶವನ್ನು ಕಟ್ಟೇ ಕಟ್ಟುತ್ತೇವೆ ಎಂದು ಸಂಕಲ್ಪ ಮಾಡಿದರು.