ಉಡುಪಿ: ಆಶಯ ಫಲಕ ಅನಾವರಣಗೊಳಿಸಿ ಸಹಬಾಳ್ವೆ ಸಮಾವೇಶ ಉದ್ಘಾಟನೆ
ವಿವಿಧ ಧರ್ಮಗುರುಗಳಿಂದ ಮೊಳಗಿದ ಸೌಹಾರ್ದತೆಯ ಸಂದೇಶ
ಉಡುಪಿ : ಸಹಬಾಳ್ವೆ ಉಡುಪಿ ಮತ್ತು ಕರ್ನಾಟಕದ ಸಮಸ್ತ ಸೌಹಾರ್ದಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ಶನಿವಾರ ನಡೆದ ಸಹಬಾಳ್ವೆ ಸಮಾವೇಶವನ್ನು ವಿವಿಧ ಧರ್ಮಗಳ ಧರ್ಮಗುರುಗಳು ‘ಮನುದ ಜಾತಿ ತಾನೊಂದೆ ವಲಂ’ ಆಶಯ ಫಲಕವನ್ನು ಅನಾವರಣಗೊಳಿಸಿ, ದ್ವೇಷ ಅಲಿಸಿ, ಪ್ರೀತಿ ಬೆಳೆಯಲಿ ಎಂಬ ಸಂದೇಶವನ್ನು ಸಾರಿದರು.
ಹಿರೇಮಠ ಸಂಸ್ಥಾನದ ಶ್ರೀಗುರುಬಸವ ಪಟ್ಟದೇವರು ಧರ್ಮ ಸಂದೇಶ ನೀಡಿ, ವಿವಿಧತೆಯಲ್ಲಿ ಏಕತೆಯ ರಾಷ್ಟ್ರ ನಮ್ಮ ಭಾರತ. ಇಲ್ಲಿ ಭಾಷೆ, ಧರ್ಮ ಒಂದೇ ಆಗಿದೆ. ಎಲ್ಲರನ್ನು ಪ್ರೀತಿಸಿ, ಗೌರವಿಸಿದಾಗ ಮಾತ್ರ ದೇವರು ಮೆಚ್ಚಿ ಕೊಳ್ಳುತ್ತಾರೆ. ಆದುದರಿಂದ ಇದು ಪ್ರೀತಿಯ ಕಾರ್ಯಕ್ರಮವಾಗಿದೆ. ಈ ಮೂಲಕ ಎಲ್ಲಡೆ ಪ್ರೀತಿ ಹರಡಿ, ಧ್ವೇಷವನ್ನು ಅಲಿಸುವ ಕೆಲಸ ಆಗಲಿ ಎಂದು ಹಾರೈಸಿದರು.
ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲುಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮಾತನಾಡಿ, ಭಾರತವು ಎಲ್ಲ ಧರ್ಮೀಯರ ಹೂದೋಟವಾಗಿದೆ. ನಾವೆಲ್ಲ ಸಹೋದರತೆಯಿಂದ ಬದುಕಬೇಕಾಗಿದೆ. ಮುಸ್ಲಿಮರು ಎಲ್ಲ ಧರ್ಮದವರೊಂದಿಗೆ ಸಹಬಾಳ್ವೆ, ಪ್ರೀತಿಯಿಂದ ಇರಬೇಕು. ಯಾವುದೇ ಅನ್ಯಾಯದಲ್ಲಿ ತೊಡಗಿಸಿಕೊಳ್ಳಬಾರದು. ನಮ್ಮ ಇಸ್ಲಾಮ್ ಧರ್ಮ ಅದನ್ನೇ ಕಲಿಸಿಕೊಡುತ್ತದೆ. ನಾವೆಲ್ಲ ನೆಮ್ಮದಿಯಿಂದ ಬದುಕು ನಡೆಸಬೇಕಾಗಿದೆ ಎಂದರು.
ಪುತ್ತೂರು ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಬಿಷಪ್ ಅ.ವಂ.ವರ್ಗೀಸ್ ಮಾರ್ ಮಕರಿಯೋಸ್ ಧರ್ಮ ಸಂದೇಶ ನೀಡಿದರು. ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ದೇವಿ, ಬೆಳಗಾವಿ ಬಸವ ಮಂಟಪದ ಬಸವ ಧರ್ಮ ಪೀಠದ ಶ್ರೀಬಸವ ಪ್ರಕಾಶ್ ಸ್ವಾಮೀಜಿ, ಬೆಳಗಾವಿಯ ಸಯೀದ್ ಮೊಹಮ್ಮದ್, ಕರ್ನಾಟಕ ಜಮೀಯ್ಯತುಲ್ ಉಲೆಮಾಯೆ ಹಿಂದ್ ಅಧ್ಯಕ್ಷ ಮೌಲಾನ ಇಫ್ತಿಕಾರ್ ಅಹ್ಮದ್ ಕಾಸ್ಮಿ ಸಂತ ಸಂದೇಶ ನೀಡಿದರು.
ಕರ್ನಾಟಕ ಸುನ್ನೀ ಯುವಜನ ಸಂಘದ ಅಧ್ಯಕ್ಷ ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಸಖಾಫಿ, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಡಾ.ಹರ್ಬಟ್ ಎಂ.ವಾಟ್ಸನ್, ಕರ್ನಾಟಕ ರಾಜ್ಯ ದಾರಿಮಿ ಉಲೆಮಾ ಒಕ್ಕೂಟದ ಕಾರ್ಯದರ್ಶಿ ಮೌಲಾನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಚೇತನ್ ಲೋಬೊ, ಮಣಿಪಾಲ ಗುರುದ್ವಾರದ ಜ್ಞಾನಿ ಬಲರಾಜ್ ಸಿಂಗ್ ಸಹಬಾಳ್ವೆ ಸಂದೇಶ ನೀಡಿದರು.
ಕರ್ನಾಟಕ ಕ್ರೈಸ್ತ ಸಂಘ-ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ.ರೊನಾಲ್ಡ್ ಕುಲಾಸೋ ಸೌಹಾರ್ದ ಸಂದೇಶವನ್ನು ಲೂವಿಸ್ ಲೊಬೋ ವಾಚಿಸಿದರು. ಇದೇ ಸಂದರ್ಭದಲ್ಲಿ ದೇಶದೆಲ್ಲೆಡೆ ಹಿಂಸೆಯಿಂದ ಮಡಿದ ಎಲ್ಲ ಜೀವಾತ್ಮಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಿವಿಧ ಲೇಖಕರು ಬರೆದ ಪುಸ್ತಕಗಳನ್ನು ಬಿಡಗಡೆಗೊಳಿಸಲಾಯಿತು. ಅಮೃತ್ ಶೆಣೈ ಸ್ವಾಗತಿಸಿದರು. ಯಾಸೀನ್ ಮಲ್ಪೆ ಆಶಯ ಮಾತುಗಳನ್ನಾಡಿದರು. ಕೆ.ಎಲ್.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವರೋನಿಕಾ ಕರ್ನೆಲಿಯೋ ಕಾರ್ಯಕ್ರಮ ನಿರೂಪಿಸಿದರು.
‘ಹಿಂದುತ್ವ ಅಲ್ಲ, ಮಾನವ ಬಂಧುತ್ವ ಬೇಕು’
ನಮಗೆ ಹಿಂದುತ್ವ ಬೇಕಾಗಿಲ್ಲ. ಮಾನವ ಬಂಧುತ್ವ ಬೇಕಾಗಿದೆ. ನಾವೆಲ್ಲರು ಒಂದೇ ತಾಯಿ ಮಕ್ಕಳಂತೆ ಬದುಕಬೇಕು. ಆ ಸಂದೇಶವನ್ನು ಜಗತ್ತಿಗೆ ಸಾರಬೇಕು ಎಂದು ಬೆಳಗಾವಿ ಬಸವ ಮಂಟಪದ ಬಸವ ಧರ್ಮ ಪೀಠದ ಶ್ರೀಬಸವ ಪ್ರಕಾಶ್ ಸ್ವಾಮೀಜಿ ಹೇಳಿದರು.
ಇಂದು ಧರ್ಮ ದೇವರು ಹೆಸರಿನಲ್ಲಿ ಕೋಮುಗಲಭೆಗಳು ನಡೆಯುತ್ತಿವೆ. ಉಸಿರುಗಟ್ಟುವ ವಾತಾವರಣ ಸಮಾಜದಲ್ಲಿ ನಿರ್ಮಿಸಲಾಗಿದೆ. ನಾವೆಲ್ಲ ಭಾರತೀಯರು ಎಂಬ ಸಂದೇಶ ಮೊಳಗಬೇಕಾಗಿದೆ. ಎಲ್ಲರು ದೇವರ ಒಂದೇ. ನಮ್ಮ ಧರ್ಮಗಳನ್ನು ನಮ್ಮ ಮಂದಿರದೊಳಗೆ ಇಟ್ಟು ನಾವೆಲ್ಲ ಒಂದಾಗಬೇಕು ಎಂದು ಅವರು ತಿಳಿಸಿದರು.
ಸ್ವಾಮೀಜಿಗಳಿಗೆ ಬೆದರಿಕೆ ಪತ್ರ
‘ಸಮಾನತೆ ಸಮಾನತೆ ಎಂದು ಹಾರಾಡುವ ನೀನು ಬುಲೆಟ್ ಗುಂಡಿಗೆ ಬಲಿಯಾಗುತ್ತೀಯಾ’ ಎಂಬ ಎರಡು ಬೆದರಿಕೆ ಪತ್ರ ನನ್ನ ಮಠಕ್ಕೆ ಬಂದಿದೆ. ಆದರೆ ಅಂಬೇಡ್ಕರ್ ಸಂವಿಧಾನ ಇರುವಾಗ ಅವರು ನೂರು ಗುಂಡು ಹಾರಿಸಿದರೂ ನನಗೆ ಏನು ಆಗುವುದಿಲ್ಲ. ಅಂತಹ ಬಲವಾದ ಕಾನೂನು ಅಂಬೇಡ್ಕರ್ ನೀಡಿದ್ದಾರೆ ಎಂದು ಬೆಳಗಾವಿ ಬಸವ ಮಂಟಪದ ಬಸವ ಧರ್ಮ ಪೀಠದ ಶ್ರೀಬಸವ ಪ್ರಕಾಶ್ ಸ್ವಾಮೀಜಿ ತಿಳಿಸಿದರು.
‘ನನಗೂ ಶಿವಮೊಗ್ಗ ಅಂಚೆ ಕಚೇರಿಯಿಂದ ಪೋಸ್ಟ್ ಮಾಡಲಾದ ಪತ್ರದಲ್ಲಿ ಬೆದರಿಕೆ ಕರೆ ಬಂದಿದೆ. ಆದರೆ ಇದಕ್ಕೆಲ್ಲ ನಾವು ಬಗ್ಗುವುದಿಲ್ಲ ’ಎಂದು ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ದೇವಿ ತಿಳಿಸಿದರು.
ಶ್ರೀಬಸವ ಪ್ರಕಾಶ್ ಸ್ವಾಮೀಜಿ