ಅದಮ್ಯ ದಂಗೆ
ಉಳಿಯುವ ಆಸೆ ಮತ್ತು ಅಳಿಯುವ ಭೀತಿ; ಈ ಎರಡೂ 'ನಾನು' ಅಥವಾ ನನ್ನತನ ಎಂಬ ಆತ್ಮಕೇಂದ್ರಿತ ವಿಷಯವನ್ನು ಮುನ್ನಡೆಸುವ ಶಕ್ತಿಗಳು ಅಥವಾ ಡ್ರೈವಿಂಗ್ ಫೋರ್ಸಸ್ ಎಂದು ತಿಳಿದುಕೊಂಡೆವು. ಯಾರು ಉಳಿಯುತ್ತಾರೆ? ಯಾವುದು ಉಳಿಯುತ್ತದೆ? ಯಾರು ಬಲಶಾಲಿಗಳೋ ಅವರು ಉಳಿಯುತ್ತಾರೆ. ಯಾವುದು ಬಲವನ್ನು ಹೊಂದಿರುತ್ತದೆಯೋ ಅದು ಉಳಿಯುತ್ತದೆ. ದುರ್ಬಲವಾಗಿರುವುದು, ನಿರ್ಬಲವಾಗಿರುವುದು ನಾಶ ಹೊಂದುತ್ತದೆ. ಹಾಗಾಗಿ ಉಳಿಯಬೇಕೆಂದರೆ, ಅಳಿಯಬಾರದೆಂದರೆ ಬಲಶಾಲಿಗಳಾಗಿರಬೇಕು. ಈ ಅರಿವು ಮನಸ್ಸಿನ ಮೂಲಕೇಂದ್ರಕ್ಕೆ ಖಂಡಿತವಾಗಿಯೂ ಇದೆ. ಸುಪ್ತಮನಸ್ಸಿಗೆ ಬಲ ಸಂಪಾದನೆ ಮತ್ತು ಬಲ ಸಂವರ್ಧನೆಯ ಬಗ್ಗೆ ಚೆನ್ನಾಗಿ ಅರಿವಿದೆ. ಬಲವನ್ನು ಸಂಪಾದಿಸುವುದು ಮಾತ್ರವಲ್ಲ, ಇರುವ ಬಲವನ್ನು ಹೆಚ್ಚಿಸಿಕೊಳ್ಳಬೇಕು. ತನ್ನ ಉಳಿವಿಗೆ ಮಾರಕವಾಗಿ ಬರುವುದನ್ನು ಎದುರಿಸುವ ಸಾಮರ್ಥ್ಯವನ್ನು ಪಡೆಯಬೇಕು. ನಿರೋಧಕ ಶಕ್ತಿ ತನ್ನಲ್ಲಿ ಇರಬೇಕು, ಅದು ಇಲ್ಲದಿದ್ದರೆ, ಪಡೆಯಬೇಕು ಅಥವಾ ಕಡಿಮೆ ಇದ್ದರೆ ಹೆಚ್ಚಿಸಿಕೊಳ್ಳಬೇಕು ಎಂಬ ಅರಿವು ಆ ಮನದಾಳದ ಅರಿವಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿಯೇ ಅದು ತನ್ನ ಇರುವನ್ನು ಅಥವಾ ಅಸ್ತಿತ್ವವನ್ನು ಸ್ಥಿರಗೊಳಿಸಿಕೊಳ್ಳಲು, ಅದು ಸ್ಥಿರಗೊಳ್ಳಲು ಬೇಕಾದ ಬಲವನ್ನು ಪಡೆದುಕೊಳ್ಳಲು ಸದಾ ಯತ್ನಿಸುತ್ತಿರುತ್ತದೆ. ಇದು ನೈಸರ್ಗಿಕ, ಸ್ವಾಭಾವಿಕ. ಯಾವುದೇ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಕ್ಕೆ ಅದರ ಆಹಾರ ಏನೆಂದು ಯಾರೂ ತೋರಿಸಿಕೊಡಬೇಕಾಗಿಲ್ಲ. ಯಾವುದೇ ಗಿಡ ಮರ ಹುಲ್ಲು ಕೂಡಾ ತಾನು ಹುಟ್ಟಿದ ಮೇಲೆ ತಾನು ಉಳಿದು ನಿಲ್ಲಲು, ಅಳಿಯದಿರಲು ಬೇಕಾದ ಬಲವನ್ನು ಪಡೆದುಕೊಳ್ಳಲು, ತನ್ನ ತಾನು ರಕ್ಷಣೆ ಮಾಡಿಕೊಳ್ಳಲು ತನ್ನ ಸರ್ವಪ್ರಯತ್ನವನ್ನು ಮಾಡುತ್ತದೆ. ದೊರಕದೇ ಇದ್ದ ಪಕ್ಷದಲ್ಲಿ ಅವು ಆ ಪ್ರಯತ್ನದಲ್ಲಿಯೇ ನಾಶವಾಗುತ್ತವೆ. ಹಾಗೆಯೇ ಮನುಷ್ಯನು ಕೂಡಾ, ಅವನ ಅನುವಂಶೀಯ ಮನಸ್ಥಿತಿಯೂ ಕೂಡಾ. ಜೈವಿಕವಾಗಿಯೂ, ತಾತ್ವಿಕವಾಗಿಯೂ ಮನುಷ್ಯನು ಸಾಯಲು ಅಥವಾ ನಾಶಗೊಳ್ಳಲು ಸಿದ್ಧನಿಲ್ಲ. ಮನುಷ್ಯನ ಮನಸ್ಸು ಸ್ವಾಭಾವಿಕವಾಗಿ ಜೀವಪರ. ಜೀವಂತವಾಗಿರಲೇ ಬಯಸುವುದು. ಉಳಿಯಲೇ ಆಶಿಸುವುದು. ಅಳಿಯಲು ನಿರಾಕರಿಸುವುದು. ಇದು ಯಾವುದೇ ಜೀವಂತ ಸೃಷ್ಟಿಯ ಸ್ವಾಭಾವಿಕ ಲಕ್ಷಣ.
ಹೋರಾಟವಾಗಲಿ, ಸಂಘರ್ಷವಾಗಲಿ, ಯುದ್ಧವಾಗಲಿ, ಪೈಪೋಟಿಯಾಗಲಿ; ಇವೆಲ್ಲವೂ ತಾನು ಉಳಿಯಲು ಮತ್ತು ತಾನು ಅಳಿಯದಿರಲು. ತನ್ನ ಉಳಿಯುವಿಕೆಗೆ ಬೆದರಿಕೆ ಬಂದಾಗ ತನ್ನೆಲ್ಲಾ ಶಕ್ತಿಯನ್ನೂ ಕ್ರೋಡೀಕರಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸೃಷ್ಟಿಯ ಜೀವವು ಸರ್ವಶಕ್ತಿಯನ್ನು ಬಳಸಿಕೊಳ್ಳುತ್ತದೆ. ತನ್ನ ಅಸ್ತಿತ್ವಕ್ಕೆ ಸಂಚಕಾರ ಬಂದಾಗಲೇ ತಮ್ಮ ಇರುವಿಕೆಗೆ ಬೆದರಿಕೆ ಎನಿಸಿದಾಗಲೇ ಪ್ರಕೃತಿಯಲ್ಲಿ ಪ್ರಾಣಿಗಳು ದಂಗೆಯೇಳುವುದು. ಸುಮ್ಮನೆ ಪುರುಸೊತ್ತಾಗಿ ಇದ್ದೇವೆ ಎಂದು ಅವೆಂದಿಗೂ ಇನ್ನೊಂದು ಪ್ರಾಣಿಗಳ ಮೇಲೆ ದಾಳಿ ಮಾಡಲು ಹೋಗುವುದಿಲ್ಲ. ತನ್ನ ಉಳಿಯುವಿಕೆಗೆ ಬಲಬೇಕು. ಬಲಸಂವರ್ಧನೆಯಾಗಬೇಕು. ಜೈವಿಕವಾಗಿ ಉಳಿಯುವುದಕ್ಕೆ ಆಹಾರ ಬೇಕು. ತನ್ನ ಆಹಾರವನ್ನು ತಾನು ಸಂಪಾದಿಸಿಕೊಂಡು, ಆ ಮೂಲಕ ಉಳಿಯಲು ಬಲ ಪಡೆಯಲು ಎಲ್ಲಾ ಪ್ರಾಣಿ, ಪಕ್ಷಿಗಳು ಮತ್ತು ಮಾನವರು ಅಲೆದಾಡುತ್ತವೆ. ವಲಸೆ ಹೋಗುತ್ತವೆ. ತಾನು ಜೈವಿಕವಾಗಿ ಮುಂದಿನ ಪೀಳಿಗೆಗಳ ಮೂಲಕ ಉಳಿಯಲು ಸಂತಾನಾಭಿವೃದ್ಧಿ ಮಾಡಲು ಕೂಡಾ ಸೂಕ್ತಪರಿಸರವನ್ನು ಹುಡುಕಿಕೊಂಡು ಹೋಗುತ್ತವೆ. ಇದು ನೈಸರ್ಗಿಕ ಮತ್ತು ಅತ್ಯಂತ ಸ್ವಾಭಾವಿಕ. ಶ್ರೀಲಂಕಾದ ಜನರು ದಂಗೆ ಎದ್ದಿದ್ದು ನೆನಪಿಗೆ ಬರಲಿ. ಜನರಿಗೆ ತಾವಳಿಯುತ್ತಿದ್ದೇವೆ ಎಂಬ ಭಾವ ತೀವ್ರವಾದಾಗ ಇರುವ ಸ್ಥಳವನ್ನು ಬಿಟ್ಟು ಅವರು ವಲಸೆ ಹೋಗಬೇಕಾಗುತ್ತದೆ. ಆದರೆ ಮನುಷ್ಯನಿಗೆ ಅನಿವಾರ್ಯವಾದರೂ ಯಾವುದೇ ಪ್ರಾಣಿ ಪಕ್ಷಿಗಳಷ್ಟು ಸಹಜವಾಗಿ ಮತ್ತು ನೈಸರ್ಗಿಕವಾಗಿ ವಲಸೆ ಹೋಗಲು ಆಗದು. ಹಾಗೆಯೇ ಇರಲೂ ಆಗದು. ಹಾಗಾದಾಗಲೇ ದಂಗೆ ಏಳುವುದು.