varthabharthi


ಸಂಪಾದಕೀಯ

ಯಕ್ಷಗಾನಕ್ಕೆ ಮುಳುವಾಗಿರುವ ಮೈಕಾಸುರ ಮೋಕ್ಷ ಪ್ರಸಂಗ!

ವಾರ್ತಾ ಭಾರತಿ : 16 May, 2022

ಧ್ವನಿವರ್ಧಕಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರಕಾರ ತೀರ್ಮಾನಿಸಿದೆ ಮಾತ್ರವಲ್ಲ, ಜಿಲ್ಲಾಡಳಿತಗಳ ಮೂಲಕ ಈಗಾಗಲೇ ಸಂಬಂಧಪಟ್ಟವರಿಗೆ ಆದೇಶಗಳನ್ನೂ ನೀಡಿದೆ. ಸಂಘಪರಿವಾರ ಸಂಘಟನೆಗಳು ಈ ಧ್ವನಿವರ್ಧಕ ವಿವಾದವನ್ನು ಬೀದಿಗೆ ತಂದಿರುವುದು ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸುವುದಕ್ಕಾಗಿಯೇ ಹೊರತು, ಧ್ವನಿವರ್ಧಕಗಳ ಮೇಲಿನ ಮುನಿಸಿನಿಂದಲ್ಲ. ಆದರೆ ಧ್ವನಿವರ್ಧಕಕ್ಕೂ ಮುಸ್ಲಿಮರ ಆರಾಧನೆಗಳಿಗೂ ಯಾವುದೇ ಅಧಿಕೃತ ಭಾವನಾತ್ಮಕ ಸಂಬಂಧ ಇಲ್ಲದೆ ಇರುವ ಕಾರಣ, ಸರಕಾರದ ಆದೇಶ ಪಾಲಿಸುವುದು ರಾಜ್ಯದ ಮುಸ್ಲಿಮರಿಗೆ ಕಷ್ಟದ ವಿಷಯವೇನೂ ಆಗಿಲ್ಲ. ಆದುದರಿಂದಲೇ ಕೆಲವು ಪ್ರಮುಖ ಮುಸ್ಲಿಮ್ ಸಂಘಟನೆಗಳು ಸರಕಾರದ ಆದೇಶಗಳಿಗೆ ತಕ್ಷಣವೇ ತಲೆಬಾಗಿವೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲದೇ ಇರುವುದರಿಂದ ಮುಂಜಾವಿನ ಅಝಾನ್‌ನ್ನು ಧ್ವನಿವರ್ಧಕದ ಮೂಲಕ ನೀಡದೇ ಇರುವುದಕ್ಕೆ ಬಹುತೇಕ ಸಂಘಟನೆಗಳು ಒಮ್ಮತಕ್ಕೆ ಬಂದಿವೆ. ಇಲ್ಲಿಗೆ ಸಮಸ್ಯೆ ಪರಿಹಾರವಾಗಬಹುದು ಎಂದು ಭಾವಿಸಲಾಗಿತ್ತಾದರೂ, ಇದೀಗ ನಿಜವಾದ ಸಮಸ್ಯೆ ಆರಂಭವಾಗಿದೆ.

  ಧ್ವನಿವರ್ಧಕ ಕಾನೂನು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಜಾರಿಗೊಳಿಸಿರುವುದಲ್ಲ. ಇದು ರಾತ್ರಿಯ ಶಬ್ದ ಮಾಲಿನ್ಯದಿಂದ ಜನಸಾಮಾನ್ಯರಿಗಾಗುತ್ತಿರುವ ಕಿರುಕುಳವನ್ನು ತಪ್ಪಿಸುವುದಕ್ಕಾಗಿ ನ್ಯಾಯಾಲಯ ನೀಡಿರುವ ತೀರ್ಪು. ಈ ರಾಜ್ಯದಲ್ಲಿ ಕೇವಲ ಮುಸ್ಲಿಮರ ಅಝಾನ್ ಮಾತ್ರವೇ ಧ್ವನಿವರ್ಧಕಗಳ ಮೂಲಕ ಮೊಳಗುತ್ತಿದ್ದರೆ ಸರಕಾರದ ಆದೇಶದ ಜೊತೆಗೆ ಸಮಸ್ಯೆ ಮುಗಿದು ಬಿಡುತ್ತಿತ್ತು. ಆದರೆ, ನಮ್ಮ ಸಮಾಜದ ಬದುಕಿನಲ್ಲಿ ‘ಮೈಕ್ ಸಂಸ್ಕೃತಿ’ ಕಳಚಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆಳವಾಗಿ ಬೇರು ಬಿಟ್ಟಿದೆ. ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲ, ಸಾಂಸ್ಕೃತಿಕ , ರಾಜಕೀಯ ಕಾರ್ಯಕ್ರಮಗಳಿಗೂ ಊರಿಡೀ ಕೇಳಿಸುವಂತೆ ಹಗಲು-ರಾತ್ರಿ ಮೈಕ್ ಹಚ್ಚಿ ಸಂಭ್ರಮಿಸುವ ಸಮಾಜ ನಮ್ಮದು. ಈಗ ಏಕಾಏಕಿ ಈ ಮೈಕಾಸುರನ ವಿರುದ್ಧ ಕತ್ತಿ ಬೀಸಿದರೆ ಅದು ಸಮಾಜದ ಎಲ್ಲಾ ವರ್ಗದ ಆಚರಣೆಗಳನ್ನೂ ಇರಿಯುತ್ತಾ ಹೋಗುತ್ತದೆ. ನ್ಯಾಯಾಲಯದ ಈ ಆದೇಶಕ್ಕೆ ಮುಸ್ಲಿಮ್ ಸಮುದಾಯ ತಲೆಬಾಗುತ್ತಿರುವ ಹೊತ್ತಿನಲ್ಲೇ, ಸಮಾಜದ ವಿವಿಧ ಕ್ಷೇತ್ರಗಳ ಜನರು, ಮುಖಂಡರು ನ್ಯಾಯಾಲಯದ ತೀರ್ಪಿನ ವಿರುದ್ಧ ಧ್ವನಿಯೆತ್ತಿರುವುದು ವಿಶೇಷವಾಗಿದೆ.


ಕರಾವಳಿಯನ್ನು ಯಕ್ಷಗಾನದಿಂದ ಬೇರ್ಪಡಿಸಿ ನೋಡುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ನ ಜನಸಾಮಾನ್ಯರ ಬದುಕಿನಲ್ಲಿ ಯಕ್ಷಗಾನ ಆ ಮಟ್ಟಿನಲ್ಲಿ ಬೆಳೆದಿದೆ. ಇಂದು ಯಕ್ಷಗಾನವೆನ್ನುವುದು ವಾಣಿಜ್ಯೀಕರಣ ಮತ್ತು ವೈದಿಕೀಕರಣವಾಗಿದೆ ಎನ್ನುವ ಆರೋಪಗಳ ಹೊರತಾಗಿಯೂ ಈ ಯಕ್ಷಗಾನವನ್ನು ಅವಲಂಬಿಸಿ ಬದುಕು ಸಾಗಿಸುತ್ತಿರುವ 1500 ಕ್ಕೂ ಅಧಿಕ ಕಲಾವಿದರಿದ್ದಾರೆ. ಸುಪ್ರೀಂಕೋರ್ಟ್‌ನ ತೀರ್ಪು ಅನುಷ್ಠಾನಗೊಂಡರೆ ರಾತ್ರಿ 10 ಗಂಟೆಯ ಬಳಿಕ ಯಕ್ಷಗಾನವನ್ನು ಮುಂದುವರಿಸುವಂತೆ ಇಲ್ಲ. ಯಕ್ಷಗಾನ ಮೇಳದ ಜೊತೆಗೆ ಹಳ್ಳಿ ಹಳ್ಳಿ ತಿರುಗುವ ಕಲಾವಿದರಿಗೆ ಇದೊಂದು ದೊಡ್ಡ ಆಘಾತ. ಸರಕಾರದ ಆದೇಶದ ವಿರುದ್ಧ ಯಕ್ಷಗಾನ ಕಲಾವಿದರು ಒಂದಾಗಿ ಧ್ವನಿಯೆತ್ತಿದ್ದಾರೆ. ವಿಪರ್ಯಾಸವೆಂದರೆ, ಈ ಕಲಾವಿದರಲ್ಲಿ ಕೆಲವರು ‘‘ಯಕ್ಷಗಾನವೆನ್ನುವುದು ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಲ್ಲದೇ ಇರುವುದರಿಂದ ಸುಪ್ರೀಂಕೋರ್ಟ್‌ನ ಆದೇಶದಿಂದ ಯಕ್ಷಗಾನಕ್ಕೆ ವಿನಾಯಿತಿ ನೀಡಬೇಕು’’ ಎಂದು ವಾದಿಸುತ್ತಿದ್ದಾರೆ. ಆದರೆ ಯಕ್ಷಗಾನ ಕಲಾವಿದರು ಒಂದನ್ನು ಗಮನಿಸಬೇಕಾಗಿದೆ. ಈ ತೀರ್ಪನ್ನು ಒಂದು ನಿರ್ದಿಷ್ಟ ಧರ್ಮದ ವಿರುದ್ಧ ನೀಡಿರುವುದಲ್ಲ. ಅಥವಾ ಯಾವುದೇ ಧರ್ಮಗಳ ಧಾರ್ಮಿಕ ಕಾರ್ಯಕ್ರಮಗಳ ವಿರುದ್ಧ ನೀಡಿರುವುದೂ ಅಲ್ಲ. ರಾತ್ರಿಯ ಹೊತ್ತಲ್ಲಿ ಮೈಕಾಸುರನ ಅಬ್ಬರದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ, ಅವರಿಗೆ ಕಿರುಕುಳವಾಗುತ್ತದೆ ಎನ್ನುವ ಕಾರಣಕ್ಕೆ ನೀಡಿರುವ ತೀರ್ಪು. ಇಲ್ಲಿ ತೀರ್ಪು ಹೊರಬಿದ್ದಿರುವುದು ಧ್ವನಿವರ್ಧಕದ ವಿರುದ್ಧವೇ ಹೊರತು, ಯಾವುದೇ ಅಝಾನ್ ಅಥವಾ ಸುಪ್ರಭಾತದ ವಿರುದ್ಧ ಅಲ್ಲ. ಯಕ್ಷಗಾನ ಇಷ್ಟವಿರುವವರಿಗೆ ಅದನ್ನು ವೀಕ್ಷಿಸುವ ಎಲ್ಲ ಹಕ್ಕುಗಳು ಇವೆ. ಇದೇ ಸಂದರ್ಭದಲ್ಲಿ ಯಕ್ಷಗಾನದ ಕುರಿತಂತೆ ಅಭಿರುಚಿಯಿಲ್ಲದ ಜನರಿಗೆ ಇಡೀ ರಾತ್ರಿ ಮೈಕಾಸುರನ ಅಬ್ಬರ ಕಿರುಕುಳವೇ ಸರಿ. ಆದುದರಿಂದ, ಇಂತಹದೊಂದು ವಿನಾಯಿತಿಯನ್ನು ನಿರೀಕ್ಷಿಸುವುದು ತಪ್ಪೇ ಆಗುತ್ತದೆ. ಸರಕಾರ ಹಾಗೆ ವಿನಾಯಿತಿಯನ್ನು ನೀಡಿದರೆ, ಈ ಧ್ವನಿವರ್ಧಕಗಳ ವಿರುದ್ಧ ಸರಕಾರ ಸಾರಿರುವ ಸಮರದ ಹಿಂದೆ ಬೇರೆ ಕೋಮು ಕಾರಣಗಳಿವೆ ಎಂದು ಜನರು ತಪ್ಪು ತಿಳಿಯುವಂತಾಗುತ್ತದೆ. ಇಷ್ಟಕ್ಕೂ ಇತ್ತೀಚಿನ ದಿನಗಳಲ್ಲಿ ಯಕ್ಷಗಾನವು ಕಲೆಗೆ ಹೊರತಾದ ಕಾರಣಗಳಿಗಾಗಿ ಹೆಚ್ಚು ಸುದ್ದಿಯಾಗುತ್ತಿವೆ. ಯಕ್ಷಗಾನ ಕಲಾವಿದರು ಕಲೆಯ ವೌಲ್ಯಗಳನ್ನು ಗಾಳಿಗೆ ತೂರಿ, ರಾಜಕೀಯ ಪಕ್ಷಗಳ ಮುಖವಾಣಿಯಾಗುತ್ತಿದ್ದಾರೆ ಎಂಬ ಆರೋಪಗಳಿವೆ. ರೈತರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಾಗ ಆ ರೈತರನ್ನು ‘ದೇಶದ್ರೋಹಿಗಳು’ ಎಂದು ಯಕ್ಷಗಾನದಲ್ಲಿ ಪರೋಕ್ಷವಾಗಿ ನಿಂದಿಸಿರುವುದು ಇತ್ತೀಚೆಗೆ ಸುದ್ದಿಯಾಗಿತ್ತು. ಈ ಯಕ್ಷಗಾನದಲ್ಲಿ ಪ್ರಧಾನಿಯನ್ನು ಹಾಡಿ ಹೊಗಳಲಾಗಿತ್ತು ಮಾತ್ರವಲ್ಲ, ಬೀದಿಗಿಳಿದ ರೈತರನ್ನು ನಿಂದಿಸಲಾಗಿತ್ತು. ಇದೇ ಕಲಾವಿದರು ಲಾಕ್‌ಡೌನ್ ಕಾರಣದಿಂದ ಬೀದಿ ಪಾಲಾದಾಗ ತಮ್ಮ ದುರವಸ್ಥೆಯನ್ನು ಹೇಳಿಕೊಂಡು ಸಮಾಜದ ನೆರವು ಕೇಳಿದ್ದರು. ಯಕ್ಷಗಾನವನ್ನು ದುರ್ಬಳಕೆ ಮಾಡಿಕೊಂಡು ಅದನ್ನು ನಿರ್ದಿಷ್ಟ ಸಿದ್ಧಾಂತ, ಗುಂಪುಗಳ ಪರವಾಗಿ ಪ್ರಚಾರಕ್ಕೆ ಬಳಸಿ ಬಳಿಕ, ‘ಯಕ್ಷಗಾನ ಎಲ್ಲರ ಸೊತ್ತು’ ಎಂದು ಹೇಳುವುದರಲ್ಲಿ ಏನು ಅರ್ಥವಿದೆ? ಆದುದರಿಂದ ಯಕ್ಷಗಾನ ಕಲಾವಿದರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು. ಇದೇ ಸಂದರ್ಭದಲ್ಲಿ ಕರಾವಳಿಯೂ ಸೇರಿದಂತೆ ರಾಜ್ಯದ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳು ಇಡೀ ರಾತ್ರಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮೈಕ್ ಇಲ್ಲದೆ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಕರಾವಳಿಯಲ್ಲಿ ಇಡೀ ರಾತ್ರಿ ನಡೆಯುವ ಭೂತಕೋಲಗಳಲ್ಲೂ ಮೈಕ್‌ಗಳನ್ನು ಬಳಸುತ್ತಾರೆ. ಆದರೆ ಇಂದು ಸಂಘಪರಿವಾರದ ನೀಚ ರಾಜಕಾರಣದಿಂದಾಗಿ ಇವರೆಲ್ಲರೂ ಇಕ್ಕಟ್ಟಿಗೆ ಸಿಲುಕಬೇಕಾಗಿ ಬಂದಿದೆ. ನ್ಯಾಯಾಲಯ ಮತ್ತು ಸರಕಾರದ ಆದೇಶಕ್ಕೆ ಗೌರವ ನೀಡುವುದು ಎಲ್ಲಾ ಧರ್ಮ, ವರ್ಗ, ಕ್ಷೇತ್ರಗಳ ಜನರ ಕರ್ತವ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ನೆಲದ ಶ್ರೀಸಾಮಾನ್ಯರ ಬೇಡಿಕೆಗಳಿಗೆ ಕಿವುಡಾಗಿ ರಾಮಸೇನೆಯಂತಹ ಕಾನೂನು ಬಾಹಿರ ಸಂಘಟನೆ ಮತ್ತು ಅದರೊಳಗಿರುವ ಕಾನೂನುಬಾಹಿರ ಜನರ ಮನವಿಗೆ ಬೆದರಿ ಸರಕಾರ ಇಂತಹದೊಂದು ಕಾಯ್ದೆಯನ್ನು ಅವಸರವಸರದಲ್ಲಿ ಜಾರಿಗೊಳಿಸಿರುವುದು ಎಷ್ಟು ಸರಿ ಎನ್ನುವುದು ಈ ನಾಡಿನ ಸತ್ಪ್ರಜೆಗಳು ಕೇಳುತ್ತಿರುವ ಪ್ರಶ್ನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)