varthabharthi


ವಿಶೇಷ-ವರದಿಗಳು

ಶೋಷಿತರ ಯೋಜನಾ ನಿಧಿಯ ಅಸಮರ್ಪಕ ಬಳಕೆ

ವಾರ್ತಾ ಭಾರತಿ : 16 May, 2022
ಭರತ್ ದೋಗ್ರಾ

ದಲಿತ ಸಮುದಾಯವು ಯಾವಾಗಲೂ ಅತ್ಯಧಿಕ ಮಟ್ಟದ ಬಡತನ ಮತ್ತು ಅತೀ ಹೆಚ್ಚಿನ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದ್ದರೆ, ದಲಿತರ ಉಪವರ್ಗವು ಇನ್ನಷ್ಟು ಕೆಟ್ಟ ರೀತಿಯ ಸಾಮಾಜಿಕ ತಾರತಮ್ಯ ಮತ್ತು ಕಡುಬಡತನದ ಬೇಗೆಯಲ್ಲಿದೆ. ಈ ವರ್ಗದವರು ಸಾಂಪ್ರದಾಯಿಕವಾಗಿ ಕೈಯಿಂದಲೇ ಶೌಚ, ಮಲ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡವರು. ಹಲವು ವರ್ಷಗಳಿಂದ ಅವರು ಅನುಭವಿಸಿದ ಆಘಾತಕಾರಿ ಅನ್ಯಾಯವು ವ್ಯಾಪಕವಾಗಿ ಗುರುತಿಸಲ್ಪಟ್ಟ ಹಿನ್ನೆಲೆಯಲ್ಲಿ ಕೈಗಳಿಂದ ಶೌಚಗುಂಡಿ, ಮಲ ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಯಿತು. ಇದೇ ಸಂದರ್ಭ ಈ ಕಾರ್ಯದಲ್ಲಿ ತೊಡಗಿದವರಿಗೆ ಪರ್ಯಾಯ ಉದ್ಯೋಗ, ಪುನರ್ವಸತಿ ರೂಪಿಸುವ ತುರ್ತು ಅಗತ್ಯವೂ ಎದುರಾಯಿತು. ಈ ಹಿನ್ನೆಲೆಯಲ್ಲಿ ಸ್ವ-ಉದ್ಯೋಗ ಯೋಜನೆಯೊಂದನ್ನು ರೂಪಿಸಲಾಯಿತು. ಈ ಯೋಜನೆಯ ಅನುದಾನದ ಹಂಚಿಕೆ ಮತ್ತು ವೆಚ್ಚವನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ಬಜೆಟ್ ಅಂದಾಜು ಎಂದರೆ ಬಜೆಟ್ ಮಂಡಿಸಿದಾಗ ಮಾಡಿದ ಮೂಲ ಹಂಚಿಕೆ. ಕಳೆದ 8 ವರ್ಷದಲ್ಲಿ ವಾಸ್ತವಿಕ ವೆಚ್ಚ 236 ಕೋಟಿ ರೂ. ಎಂದು ಈ ಕೋಷ್ಟಕದಲ್ಲಿ ಸ್ಪಷ್ಟವಾಗಿದ್ದು ಇದು ಬಜೆಟ್ ಅಂದಾಜು ವೆಚ್ಚ (1,225 ಕೋಟಿ ರೂ.)ದ ಶೇ.19ರಷ್ಟು ಮಾತ್ರ. ಬಡವರಲ್ಲಿ ಕಡು ಬಡವರ ಅಭ್ಯುದಯದ ನಿಟ್ಟಿನಲ್ಲಿ ಅತ್ಯಂತ ನಿಕಟವಾಗಿ ಸಂಬಂಧಿಸಿದ ಯೋಜನೆ ಇದಾಗಿರುವುದರಿಂದ ಈ ಅಂಕಿಅಂಶ ಅತ್ಯಂತ ಆಘಾತಕಾರಿಯಾಗಿದೆ. 2015-16ರಲ್ಲಿ ಈ ಯೋಜನೆಗೆ ಬಜೆಟ್‌ನಲ್ಲಿ 461 ಕೋಟಿ ರೂ. ಅಂದಾಜು ಅನುದಾನ ನಿಗದಿಯಾಗಿದ್ದರೆ 2022-23ರ ಬಜೆಟ್‌ನಲ್ಲಿ ಕೇವಲ 70 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ವಾಸ್ತವವಾಗಿ ಪ್ರಮುಖ ಯೋಜನೆಗಳಿಗೆ ಬಜೆಟ್ ಹಂಚಿಕೆ ಮತ್ತು ವಾಸ್ತವಿಕ ಖರ್ಚುಗಳು ಅತ್ಯಂತ ಅನಿಯಂತ್ರಿತ, ಅನಿರೀಕ್ಷಿತ ಮತ್ತು ಅನಿಶ್ಚಿತವಾಗಿವೆ. ಇಂತಹ ಪ್ರಮುಖ ರಾಷ್ಟ್ರೀಯ ಯೋಜನೆ ಸೂಕ್ತ ರೀತಿಯಲ್ಲಿ ಜಾರಿಯಾಗಬೇಕಿದ್ದರೆ, ಕನಿಷ್ಠ ನಿಧಿಯ ಖಾತರಿ ಇರಬೇಕು. ಆಗ ಮಾತ್ರ ಸರಿಯಾಗಿ ಯೋಜಿಸಬಹುದು ಮತ್ತು ಮೂಲಸೌಕರ್ಯ, ಪರಿಣತರು ಮತ್ತು ಮಹಿಳಾ ಸಂಪನ್ಮೂಲವನ್ನು ಸೂಕ್ತ ರೀತಿಯಲ್ಲಿ ನೆಲೆಗೊಳಿಸಬಹುದಾಗಿದೆ. ಜನರನ್ನು ಗುರುತಿಸಿ ಅವರನ್ನು ಸಂಪರ್ಕಿಸಬೇಕು, ಅವರಿಗೆ ಯಾವ ರೀತಿಯ ಸ್ವ-ಉದ್ಯೋಗದ ಅಗತ್ಯವಿದೆ ಎಂಬ ಬಗ್ಗೆ ಸಭೆ ನಡೆಸಬೇಕು. ಇವೆಲ್ಲವನ್ನೂ ಅತ್ಯಂತ ಬಡ, ಕುಗ್ರಾಮದಲ್ಲಿ ನಡೆಸಬೇಕು. ಮುಖ್ಯ ವಾಹಿನಿಯಿಂದ ದೂರವಿರುವ, ನಿರ್ಲಕ್ಷಕ್ಕೆ ಒಳಗಾದ ವರ್ಗದ ಜನತೆ ಈ ಯೋಜನೆಯಲ್ಲಿ ಸೇರಿರುವುದರಿಂದ ಮತ್ತು ಸಾಮಾನ್ಯವಾಗಿ ಪ್ರಬಲ ವ್ಯಕ್ತಿಗಳು ಇವರ ಅಸ್ತಿತ್ವವನ್ನು ನಿರಾಕರಿಸಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಈ ಯೋಜನೆಯ ವ್ಯಾಪ್ತಿಗೆ ಬರುವ ಜನರನ್ನು ಗುರುತಿಸುವ ಕಾರ್ಯ ಅಷ್ಟೊಂದು ಸುಲಭವಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಕೈಗಳಿಂದ ಮಲ ಸ್ವಚ್ಛಗೊಳಿಸುವ ಪ್ರಕರಣ ಕ್ರಮೇಣ ಇಳಿಮುಖವಾಗುತ್ತಿದ್ದರೂ, ಹೊಸ ವಿಧಗಳು ಹುಟ್ಟಿಕೊಂಡಿದ್ದು ಅದರ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಪುನರ್ವಸತಿ ಕಾರ್ಯ ಪ್ರತ್ಯೇಕವಾಗಿ ನಡೆಯಲು ಸಾಧ್ಯವಿಲ್ಲದ ಕಾರಣ ವಿಶಾಲ ಸಮುದಾಯದ ಜತೆಗೆ ಸಮಾಲೋಚಿಸಬೇಕು ಮತ್ತು ಇದಕ್ಕಾಗಿ ಸಿದ್ಧಗೊಳಿಸಬೇಕು. ಸಮುದಾಯದ ಮುಖಂಡರ ಬೆಂಬಲವನ್ನೂ ಪಡೆಯಬೇಕು. ಇದೆಲ್ಲ ತುರ್ತಾಗಿ ನಡೆಯುವ ಕೆಲಸವಲ್ಲ. ಜತೆಗೆ, ಸಿದ್ಧತೆ ಪೂರ್ಣಗೊಂಡಾಗ ವಾಸ್ತವಿಕ ಪುನರ್ವಸತಿ ಕಾರ್ಯಕ್ಕೆ ಅಗತ್ಯದ ಹಣ ಬರುವ ಬಗ್ಗೆ ಖಚಿತತೆ ಇರಬೇಕು. ಸ್ವ-ಉದ್ಯೋಗಕ್ಕೆ ಸಂಬಂಧಿಸಿದ ವಿವಿಧ ಹಂತ, ಕ್ಷೇತ್ರಗಳ ಬಗ್ಗೆ ತರಬೇತಿ ಒದಗಿಸಬೇಕು. ಇದಕ್ಕೆ ಹೊಸ ಸಂಸ್ಥೆ ಸ್ಥಾಪಿಸಬಹುದು ಅಥವಾ ಈಗ ಇರುವ ಸಂಸ್ಥೆಗಳನ್ನೇ ಇದಕ್ಕೆ ನಿಯೋಜಿಸಬಹುದು. ಈ ರೀತಿ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸಂಪರ್ಕಿಸಿ ಅವರಲ್ಲಿ ಉತ್ತಮ ರೀತಿಯ ಪುನರ್ವಸತಿ ಬಗ್ಗೆ ಆಶಾವಾದ ಮೂಡಿಸಿದ ಮೇಲೆ, ಅನುದಾನ, ನಿಧಿ ಖಂಡಿತಾ ದೊರಕುವ ಖಾತರಿ ಇರಬೇಕು. ಕೆಲವೊಂದು ಸಣ್ಣಪುಟ್ಟ ಬದಲಾವಣೆ ಇರಬಹುದು, ಆದರೆ ನಿಧಿಯ ಲಭ್ಯತೆ ನಿರ್ಧಿಷ್ಟ ಹಂತಕ್ಕಿಂತ ಕೆಳಗಿಳಿಯಬಾರದು. ಆದರೆ ವಾಸ್ತವವಾಗಿ , ವರ್ಷದಿಂದ ವರ್ಷಕ್ಕೆ ಅನುದಾನ, ನಿಧಿಯಲ್ಲಿ ಬೃಹತ್ ಮತ್ತು ಅನಿಯಂತ್ರಿತ ಬದಲಾವಣೆಗಳನ್ನು ಮಾಡುತ್ತಿರುವುದಕ್ಕೆ ಯಾವುದೇ ಅರ್ಥವಿಲ್ಲ ಮತ್ತು ಇದರಿಂದ ಸೂಕ್ತವಾಗಿ ಯೋಜಿಸಿದ ಯೋಜನೆಯ ಅನುಷ್ಠಾನ ಕಷ್ಟವಾಗುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ವಾರ್ಷಿಕ ಹಂಚಿಕೆ 5 ಕೋಟಿ ರೂ.ನಿಂದ 461 ಕೋಟಿಗೆ ಏರಿತು, ಆದರೆ ವಾಸ್ತವಿಕ ವೆಚ್ಚ 0ಯಿಂದ 86 ಕೋಟಿಯ ನಡುವೆ ಇದ್ದು ಒಂದು ಬಾರಿಯೂ ಮೂರಂಕಿಯನ್ನು ತಲುಪಿಲ್ಲ. 2018ರಲ್ಲಿ ದೈಹಿಕ ಶೌಚಗುಂಡಿ ಸ್ವಚ್ಛಗೊಳಿಸುವವರ ಗಣತಿಯನ್ನು ನಡೆಸಿದ್ದು ಆ ಬಳಿಕ ಈ ಯೋಜನೆ ಹಂತ ಹಂತವಾಗಿ ಬೆಳೆಯಬೇಕಿತ್ತು. ಆದರೆ 2020-21ರಲ್ಲಿ ಬಜೆಟ್ ಹಂಚಿಕೆ 110 ಕೋಟಿ ರೂ. ಆಗಿದ್ದರೆ ವಾಸ್ತವಿಕ ವೆಚ್ಚ 17 ಕೋಟಿ ರೂ. ಮಟ್ಟಕ್ಕೆ ಇಳಿದಿತ್ತು. ಇದು ಕೊರೋನ ಸಾಂಕ್ರಾಮಿಕದ ಭಯಾನಕ ದಿನಗಳಾಗಿದ್ದವು ಮತ್ತು ಈ ಹಿಂದೆ ದೈಹಿಕವಾಗಿ ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿದ್ದ ಕೆಲ ಜನ, ತಾವು ಹಲವು ದಿನಗಳಿಂದ ಉಪವಾಸವಿದ್ದೇವೆ ಮತ್ತು ತಮಗೆ ಪರ್ಯಾಯ ಉದ್ಯೋಗ ಒದಗಿಸಿಲ್ಲ ಎಂದು ಸಮಸ್ಯೆ ತೋಡಿಕೊಂಡಿದ್ದ ಸಮಯವಾಗಿತ್ತು. 2018ರ ಗಣತಿಯಲ್ಲಿನ ಅಂಕಿಅಂಶ ಸಮರ್ಪಕವಾಗಿ

ಲ್ಲ ಮತ್ತು ದೈಹಿಕವಾಗಿ ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿದ್ದವರ ಪ್ರಮಾಣ ಇನ್ನಷ್ಟು ಹೆಚ್ಚಿದೆ ಎಂಬ ವ್ಯಾಪಕ ವರದಿಯ ಹಿನ್ನೆಲೆಯಲ್ಲಿ, ಯೋಜನೆಗೆ ಹೆಚ್ಚು ಅನುದಾನ ಒದಗಿಸಿ ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಅಗತ್ಯವಿತ್ತು. ವಾಸ್ತವವಾಗಿ, 2011ರ ಸಾಮಾಜಿಕ-ಆರ್ಥಿಕ ಜಾತಿ ಗಣತಿಯಲ್ಲಿ ಸೂಚಿಸಿರುವ ದೈಹಿಕ ಶೌಚಗುಂಡಿ ಸ್ವಚ್ಛಗೊಳಿಸುವವರ ಪ್ರಮಾಣವು ಗ್ರಾಮೀಣ ಪ್ರದೇಶದಲ್ಲೇ 2018ರ ಗಣತಿಯಲ್ಲಿ ಉಲ್ಲೇಖಿಸಿದ್ದಕ್ಕಿಂತ 4 ಪಟ್ಟು ಅಧಿಕವಾಗಿತ್ತು. ಗ್ರಾಮೀಣ, ನಗರ ಪ್ರದೇಶಗಳನ್ನು ಕೂಡಿಸಿದರೆ ಇದು ಇನ್ನಷ್ಟು ಹೆಚ್ಚಬಹುದು. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಈ ರೀತಿಯ ಪುನರ್ವಸತಿ ಯೋಜನೆಯ ಜಾರಿಯ ಬಗ್ಗೆ ‘ಪರಮಾರ್ಥ’ ಎಂಬ ಸ್ವಯಂ ಸೇವಾ ಸಂಸ್ಥೆ ಮಾಡಿದ ವರದಿಯಲ್ಲಿ, ದೈಹಿಕ ಶೌಚಗುಂಡಿ ಕಾರ್ಯದಲ್ಲಿ ನಿರತರಾದವರಿಗೆ ಘನತೆಯ ಹೊಸ ಉದ್ಯೋಗ ಪಡೆಯುವ ಸಂದರ್ಭ ಎದುರಾದ ಭಾವನಾತ್ಮಕ, ಸಂತಸದ ಕ್ಷಣಗಳನ್ನು ಹೃದಯಸ್ಪರ್ಶಿಯಾಗಿ ಉಲ್ಲೇಖಿಸಲಾಗಿದೆ. ಆದ್ದರಿಂದ ಈ ಪುನರ್ವಸತಿ ಯೋಜನೆ ಅತ್ಯಂತ ಸಮೃದ್ಧ ಮತ್ತು ಸೃಜನಾತ್ಮಕವಾಗಿರಬಹುದು. ಆದರೆ ಯಶಸ್ಸು ಸಾಧ್ಯವಾಗಬೇಕಿದ್ದರೆ ಸರಕಾರದ ಇನ್ನಷ್ಟು ಉತ್ತಮ ನೆರವಿನ ಅಗತ್ಯವಿದೆ. ಅನುದಾನ, ನಿಧಿ, ತಜ್ಞರ ನೆರವನ್ನು ಸರಕಾರ ಸೂಕ್ತ ರೀತಿಯಲ್ಲಿ ಒದಗಿಸಬೇಕು. ಜತೆಗೆ ಅತ್ಯಂತ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಹ ಇದರಲ್ಲಿ ತೊಡಗಿಸಿಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)