varthabharthi


ರಾಷ್ಟ್ರೀಯ

ದಲಿತರ ವಿರುದ್ಧ ನಿಂದನಾತ್ಮಕ ಮಾತುಗಳನ್ನಾಡಿದ ಜಾನಪದ ಗಾಯಕನ ವಿರುದ್ಧ ಪ್ರಕರಣ ದಾಖಲು

ವಾರ್ತಾ ಭಾರತಿ : 16 May, 2022

photo- facebook  (Yogesh Gadhvi)

ಹೊಸದಿಲ್ಲಿ: ಗುಜರಾತ್‍ನ ಕಚ್ಛ್ ಜಿಲ್ಲೆಯ ಭುಜ್ ಎಂಬಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಾತಿ ನಿಂದನೆಗೈದ ಆರೋಪದ ಮೇಲೆ ಜನಪದ ಗಾಯಕ ಯೋಗೇಶ್ ಗಢ್ವಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯೋಗೇಶ್ ಬೊಕ್ಸ ಎಂದೂ ಕರೆಯಲ್ಪಡುವ ಗಢ್ವಿ ಅವರು  ಭುಜ್ ಎಂಬಲ್ಲಿ ಭೀಮರತ್ನ ಸಾಮರಸ್ ಕನ್ಯಾ ವಿದ್ಯಾಲಯ  ಎಂಬ ಹಾಸ್ಟೆಲಿನ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡುವ ಸಂದರ್ಭ ಜಾತಿನಿಂದನೆಗೈದಿದ್ದಾರೆಂದು ಆರೋಪಿಸಲಾಗಿದೆ.

ದಲಿತ ಹಕ್ಕುಗಳ ಹೋರಾಟಗಾರ ವಿಶಾಲ್ ಗರ್ವ ಎಂಬವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಸುಮಾರು 4 ಗಂಟೆಗೆ ವೇದಿಕೆ ಏರಿದ ಕಲಾವಿದ ಪ್ರದರ್ಶನ ವೇಳೆ ದಲಿತ ಸಮುದಾಯದ ಕುರಿತು ನಿಂದನಾತ್ಮಕ ಮಾತುಗಳನ್ನಾಡಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಲಿತ ನಾಯಕರು ತಕ್ಷಣ ವೇದಿಕೆಯೇರಿ ನಿಂದನೆಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಮುಖವಾಗಿ ದಲಿತ ಸಮುದಾಯದ ಹೆಣ್ಣುಮಕ್ಕಳಿಗಾಗಿ ನಿರ್ಮಿಸಲಾದ ಹಾಸ್ಟೆಲ್ ಉದ್ಘಾಟನೆಗಾಗಿ ಆಗಮಿಸಿದ ಸಂದರ್ಭ ಇಂತಹ ಮಾತುಗಳನ್ನೇಕೆ ಆಡಿದ್ದೀರಿ ಎಂದು ಅವರನ್ನು ಪ್ರಶ್ನಿಸಲಾಗಿದೆ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್, ಅಸೆಂಬ್ಲಿ ಸ್ಪೀಕರ್ ನೀಮಾಬೆನ್ ಆಚಾರ್ಯ ಮತ್ತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ವಿನೋದ್ ಚಾವ್ಡ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)