ಮುದೂರು, ಜಡ್ಕಲ್ ಭಾಗದಲ್ಲಿ ಕಡಿಮೆಯಾಗದ ಡೆಂಗಿ ಪ್ರಕರಣಗಳು
ಕೊಲ್ಲೂರು : ಕಳೆದ ಮಾರ್ಚ್ ತಿಂಗಳಿನಿಂದ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮುದೂರು, ಜಡ್ಕಲ್ ಹಾಗೂ ಕೊಲ್ಲೂರು ಭಾಗದಲ್ಲಿ ಡೆಂಗಿ ಕಾಯಿಲೆ ನಿಯಂತ್ರಣಕ್ಕೆ ಸಿಗದಂತೆ ಹೆಚ್ಚುತ್ತಿದೆ. ಇಂದು ಸಹ ಮುದೂರಿನಿಂದ ಎಂಟು ಡೆಂಗಿ ಪ್ರಕರಣ ಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಕಳೆದೊಂದು ತಿಂಗಳಿಗೂ ಅಧಿಕ ಸಮಯದಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಭಾಗದಲ್ಲಿ ಡೆಂಗಿಯ ನಿಯಂತ್ರಣಕ್ಕೆ ಮುತುವರ್ಜಿ ಯಿಂದ ಕೆಲಸ ಮಾಡುತ್ತಿದೆಯಾದರೂ, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದೆಯಾದರೂ ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆಯಾಗುತ್ತಿಲ್ಲ.
ಕಳೆದ ಜನವರಿ ತಿಂಗಳಿನಿಂದ ಮೇ ೧೫ರವರೆಗೆ ಜಿಲ್ಲೆಯಲ್ಲಿ ಒಟ್ಟು ೧೫೨ ಡೆಂಗಿ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ೧೧೩ ಪ್ರಕರಣಗಳು ಕೊಲ್ಲೂರು ಪಿಎಚ್‌ಸಿ ವ್ಯಾಪ್ತಿಯದ್ದಾಗಿದೆ. ಈ ೧೧೩ ಪ್ರಕರಣಗಳಲ್ಲಿ ಮುಧೂರು ಗ್ರಾಮ ಒಂದರಿಂದಲೇ ೧೦೫ ಪ್ರಕರಣಗಳು ವರದಿಯಾಗಿದ್ದು, ಜಡ್ಕಲ್‌ನಿಂದ ಆರು ಹಾಗೂ ಕೊಲ್ಲೂರಿನಿಂದ ಎರಡು ಪ್ರಕರಣಗಳು ವರದಿಯಾಗಿವೆ. ಉಳಿದ ೩೯ ಪ್ರಕರಣಗಳು ಜಿಲ್ಲೆಯಾದ್ಯಂತದಿಂದ ವರದಿಯಾಗಿವೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ (ಪ್ರಭಾರ) ಡಾ.ಚಿದಾನಂದ ಸಂಜು ತಿಳಿಸಿದ್ದಾರೆ.
ಕುಂದಾಪುರ ವಿಭಾಗದಿಂದ ವರದಿಯಾಗಿರುವ ೧೧೩ ಪ್ರಕರಣಗಳಲ್ಲಿ ನಿನ್ನೆ ಸಂಜೆಯವರೆಗೆ ಒಟ್ಟು ೪೭ ಮಂದಿ ಕುಂದಾಪುರದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ೧೮ ವರ್ಷದೊಳಗಿನ ಆರು ಮಂದಿ ಮಕ್ಕಳು ಸೇರಿದ್ದಾರೆ. ಕುಂದಾಪುರ ಆಸ್ಪತ್ರೆಯಲ್ಲಿ ಡೆಂಗಿ ಪೀಡಿತರಿಗಾಗಿಯೇ ೬೦ ಹಾಸಿಗೆಗಳ ವಿಶೇಷ ವಾರ್ಡ್‌ನ್ನು ತೆರೆಯಲಾಗಿದೆ. ಇವುಗಳನ್ನು ೨೫ ಪುರುಷರು, ೨೫ ಮಂದಿ ಮಹಿಳೆಯರು ಹಾಗೂ ೧೦ ಮಂದಿ ಮಕ್ಕಳಿಗಾಗಿ ಮೀಸಲಿರಿಸಲಾಗಿದೆ.
ಆರೋಗ್ಯ ಇಲಾಖೆಯ ಪ್ರಕಾರ ಮುದೂರಿನಲ್ಲಿರುವ ರಬ್ಬರ್ ಪ್ಲಾಂಟೇಷನ್‌ನಲ್ಲಿ ರಬ್ಬರ್‌ನ ಹಾಲಿನ ಸಂಗ್ರಹಕ್ಕಾಗಿ ಇರಿಸಲಾಗಿರುವ ಗೆರಟೆಯಲ್ಲಿ ಸಂಗ್ರಹವಾದ ಮಳೆ ನೀರಿನಲ್ಲಿ ಸೊಳ್ಳೆಯ ಲಾರ್ವ ಹುಟ್ಟುತಿದ್ದು, ಇದೇ ಡೆಂಗಿ ಸೊಳ್ಳೆ ‘ಏಡಿಸ್’ಗಳ ಉಗಮಕ್ಕೆ ಪ್ರದಾನ ಕಾರಣವೆಂದು ಹೇಳಲಾಗುತ್ತದೆ. ಇದರೊಂದಿಗೆ ತೋಟದ ಅಡಿಕೆ ಹಾಳೆಯಲ್ಲಿ ಹಾಗೂ ಈ ಭಾಗದಲ್ಲಿ ವಿಪುಲವಾಗಿ ಬೆಳೆಯಲಾಗುವ ಅನಾನಸ್ ಗಿಡಗಳ ಎಲೆಗಳ ನಡುವೆ ನಿಂತ ನೀರಿನಲ್ಲೂ ಡೆಂಗಿ ಹರಡುವ ಏಡಿಸ್ ಸೊಳ್ಳೆಗಳು ಉಗಮವಾಗುತ್ತಿವೆ.
ಮುದೂರು ಹಾಗೂ ಜಡ್ಕಲ್‌ಗಳ ಮನೆಯ ಸುತ್ತ ನಿಂತ ನೀರಿನಲ್ಲೂ ಲಾರ್ವಾಗಳು ಭಾರೀ ಪ್ರಮಾಣದಲ್ಲಿ ಕಂಡುಬರುತ್ತಿವೆ ಎಂದು ಎರಡು ಗ್ರಾಮಗಳಲ್ಲಿ ಮನೆಮನೆಗೆ ಭೇಟಿ ನೀಡಿ ಸ್ವಚ್ಛತೆಯ ಅಗತ್ಯತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಆಶಾ ಕಾರ್ಯಕರ್ತೆಯರು ಹೇಳುತ್ತಾರೆ. ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಲಾರ್ವಾಗಳು ಮತ್ತೆ ಮತ್ತೆ ಗ್ರಾಮಗಳಲ್ಲಿ ಕಾಣಿಸಿ ಕೊಳ್ಳುತ್ತಿವೆ ಎಂದವರು ಹೇಳುತ್ತಾರೆ.
ಮುದೂರಿನಲ್ಲಿ ೭೮೮ ಮನೆಗಳಿದ್ದು ೩೮೮೫ ಜನಸಂಖ್ಯೆ ಇದ್ದರೆ, ಜಡ್ಕಲ್‌ನಲ್ಲಿ ೮೮೬ ಮನೆಗಳಿದ್ದು ೪೦೭೮ ಜನಸಂಖ್ಯೆ ಇದೆ. ಆರೋಗ್ಯ ಇಲಾಖೆ ಈ ಎರಡು ಗ್ರಾಮಗಳಿಗಾಗಿ ೯ ತಂಡಗಳು ರಚಿಸಿದ್ದು, ೧೮ ಪ್ರತಿದಿನ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿ ಡೆಂಗಿ ರೋಗದ ಬಗ್ಗೆ ಅರಿವು ಮೂಡಿಸುತಿದಾರೆ. ಈಗಾಗಲೇ ಎರಡು ಗ್ರಾಮಗಳ ೯೫೧ ಮನೆಗಳಿಗೆ ಸೊಳ್ಳೆ ಪರದೆಯನ್ನು ವಿತರಿಸಲಾಗಿದೆ. ಎಲ್ಲಾ ಮನೆಗಳಿಗೂ ಎರಡೆರಡು ಬಾಟ್ಲಿ ಡಿಎಂಪಿ ಎಣ್ಣೆಯನ್ನು ವಿತರಿಸಲಾಗಿದೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಗ್ರಾಮದಲ್ಲಿ ತುರ್ತು ಅಗತ್ಯತೆಗಳಿಗಾಗಿ ಎರಡು ಅಂಬುಲೆನ್ಸ್‌ಗಳನ್ನು ಇರಿಸಲಾಗಿದೆ. ಗ್ರಾಮದಲ್ಲಿ ಪ್ರತಿದಿನ ಫಾಗಿಂಗ್ ಸಹ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಕೊಲ್ಲೂರಿನಲ್ಲಿ ಡೆಂಗಿಯ ಕುರಿತಂತೆ ಅಧಿಕಾರಿಗಳ ಹಾಗೂ ಸಂಬಂಧಪಟ್ಟವರ ಸಭೆ ಕರೆದು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದಾರೆ.
ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರೊಂದಿಗೆ ಮುದೂರು ಗ್ರಾಮಕ್ಕೆ ಭೇಟಿ ನೀಡಿದ್ದು, ಡೆಂಗಿಗಾಗಿ ಚಿಕಿತ್ಸೆಯಲ್ಲಿದ್ದು, ನಿನ್ನೆಯಷ್ಟೇ ಕುಂದಾಪುರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ಎಸೆಸೆಲ್ಸಿ ವಿದ್ಯಾರ್ಥಿನಿ ಶಾಂತಿಯ ಮನೆಗೆ ತೆರಳಿ ಆಕೆಯ ಆರೋಗ್ಯ ವಿಚಾರಿಸಿದರು. ತಾಯಿ ಶಾರದಾ ಈ ವೇಳೆ ಸಚಿವರಿಗೆ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಶಾರದಾ ಅವರ ಗಂಡ ಸೋಲೆ ಕೊರಗ ಕೂಲಿಕಾರ್ಮಿಕರಾಗಿದ್ದಾರೆ.
ಮುದೂರಿನ ರಬ್ಬರ್ ಫ್ಲಾಂಟೇಷನ್‌ನಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರು ಹೆಚ್ಚಾಗಿ ಡೆಂಗಿಗೆ ತುತ್ತಾಗುತಿದ್ದಾರೆ. ಮನೆ ಮಂದಿಯೆಲ್ಲಾ ಕಾಯಿಲೆಯಿಂದ ನರಳಿದ ನಿದರ್ಶನಗಳೂ ಇವೆ. ಈಗೀಗ ಡೆಂಗಿ ಬಾಧಿತರ ಆರೋಗ್ಯ ನೋಡಿಕೊಳ್ಳುವ ಅವರ ಮನೆಯವರಿಗೂ ಡೆಂಗಿ ಬಂದಿದೆ ಎಂದು ಮುದೂರು ಗ್ರಾಮಸ್ಥರು ಹೇಳುತ್ತಾರೆ.
ಪರಿಹಾರಕ್ಕೆ ಬೇಡಿಕೆ: ಡೆಂಗಿಗೆ ತುತ್ತಾದಾಗ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಎರಡು-ಮೂರು ತಿಂಗಳು ಮತ್ತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮನೆ ಮಂದಿ ತುಂಬಾ ತೊಂದರೆ ಅನುಭವಿಸುತಿದ್ದಾರೆ. ಕೋವಿಡ್ ಪ್ಯಾಕೇಜ್‌ನಂತೆ ಡೆಂಗಿಯಿಂದ ಬಾಧಿತರ ಕುಟುಂಬಕ್ಕೂ ಏನಾದರೂ ಪ್ಯಾಕೇಜ್‌ನ್ನು ಸರಕಾರ ಘೋಷಿಸಬೇಕು ಎಂದು ಮುಧೂರಿನ ಶಶಿಕುಮಾರ್ ಸಚಿವರಿಗೆ ಮನವಿ ಮಾಡಿದರು.
ಇದು ಡೆಂಗಿ ಅಲ್ಲ; ಮುದೂರು ಗ್ರಾಮಸ್ಥರ ಪ್ರತಿಪಾದನೆ
ಆರೋಗ್ಯ ಇಲಾಖೆ ಮುದೂರು, ಜಡ್ಕಲ್ ಗ್ರಾಮಗಳಲ್ಲಿ ಡೆಂಗಿ ವ್ಯಾಪಕವಾಗಿದೆ ಎಂದು ಕಳೆದೆರಡು ತಿಂಗಳಲ್ಲಿ ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತಿದ್ದರೆ, ಗ್ರಾಮಸ್ಥರು ಮಾತ್ರ ಇದು ಡೆಂಗಿ ಜ್ವರ ಅಲ್ಲ. ಮಣಿಪಾಲ ಮತ್ತು ಮಂಗಳೂರಿನ ವೈದ್ಯರು ಈ ಬಗ್ಗೆ ಖಚಿತ ಪಡಿಸಿದ್ದಾರೆ ಎಂದು ಸಚಿವರೆದುರು ಪ್ರತಿಪಾದಿಸಿದರು.
ಈ ಗ್ರಾಮಗಳ ಎಲ್ಲಾ ಜ್ವರದ ಪ್ರಕರಣಗಳಲ್ಲೂ ವ್ಯಕ್ತಿಯ ದೇಹದಲ್ಲಿ ಪ್ಲೇಟ್‌ಲೆಡ್ ಸಂಖ್ಯೆ ಕಡಿಮೆಯಾಗಿದೆ. ಇದು ಡೆಂಗಿ ಜ್ವರದ ಪ್ರಧಾನ ಲಕ್ಷಣ ಎಂದು ಆರೋಗ್ಯ ಇಲಾಖೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದರೆ ಗ್ರಾಮಸ್ಥರು ಇದನ್ನು ಒಪ್ಪುತ್ತಿಲ್ಲ.
ಇಲ್ಲಿ ಈ ಜ್ವರ ಡಿಸೆಂಬರ್-ಜನವರಿ ತಿಂಗಳಿನಿಂದಲೇ ಕಾಣಿಸಿಕೊಂಡಿದೆ. ಆದರೆ ಮಳೆ ಪ್ರಾರಂಭಗೊಂಡಿರುವುದು ಮಾರ್ಚ್ ತಿಂಗಳಿನಿಂದ. ಹೀಗಾಗಿ ಮಳೆ, ಮಳೆ ನೀರು ನಿಂತು ರೋಗ ಉಲ್ಬಣಗೊಂಡಿದೆ ಎಂಬುದು ಸರಿಯಲ್ಲ. ರಬ್ಬರ್ ತೋಟ ದಶಕಗಳಿಂದ ಇಲ್ಲಿದೆ. ಯಾವತ್ತೂ ಈ ರೀತಿ ಆಗಿಲ್ಲ ಎಂಬುದು ಗ್ರಾಮದ ರಬ್ಬರ್ ಬೆಳೆಗಾರ ರಾದ ಶಶಿಕುಮಾರ್ ಹಾಗೂ ಬೆನ್ನಿ ತಿಳಿಸಿದರು.
ಗ್ರಾಮದ ಜ್ವರ ಬಾಧಿತ ೫-೬ ಮಂದಿಗೆ ಮಣಿಪಾಲ ಹಾಗೂ ಮಂಗಳೂರಿ ನಲ್ಲಿ ಚಿಕಿತ್ಸೆ ಕೊಡಿಸಿದಾಗ, ರೋಗಿಗಳನ್ನು ಪರೀಕ್ಷಿಸಿದ ಅಲ್ಲಿನ ವೈದ್ಯರು ಇದು ಡೆಂಗಿ ಅಲ್ಲ ಎಂದೇ ಹೇಳಿದ್ದಾರೆ. ಪ್ಲೇಟ್‌ಲೆಟ್ ಕಡಿಮೆ ಯಾದರೂ ಜ್ವರ ಡೆಂಗಿ ಅಲ್ಲ ಎಂಬುದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಅವರು ನೀಡಿದ ಚಿಕಿತ್ಸೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಬೆನ್ನಿ ತಿಳಿಸಿದರು.
ಹೀಗಾಗಿ ಆರೋಗ್ಯ ಇಲಾಖೆಯು ಇಲ್ಲಿ ಜನರನ್ನು ಬಾದಿಸುತ್ತಿರುವ ಜ್ವರದ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಬೇಕು. ರೋಗವನ್ನು ಸರಿಯಾಗಿ ಗುರುತಿಸಿ ಈ ಭಾಗದ ಜನರನ್ನು ಆದಷ್ಟು ಬೇಗ ರೋಗಮುಕ್ತ ಗೊಳಿಸಬೇಕು ಎಂದು ಅವರು ಮನವಿ ಮಾಡಿದರು.