varthabharthi


ನಿಮ್ಮ ಅಂಕಣ

ಚಿಂತಕರ ಬಾಯಿ ಮುಚ್ಚಿಸುವ ಕೆಲಸ ಮಾಡಬೇಡಿ

ವಾರ್ತಾ ಭಾರತಿ : 17 May, 2022
ಡಾ.ಬಿ.ಪಿ.ಮಹೇಶ ಚಂದ್ರ ಗುರು

ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಪ್ರಾಯೋಜಿತ ಹಿಂದುತ್ವವಾದಿಗಳ ಅಬ್ಬರ, ಅಟ್ಟಹಾಸ, ದೌರ್ಜನ್ಯ ಮತ್ತು ಶೋಷಣಾ ಪ್ರವೃತ್ತಿಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮೇಲೆ ಬಲಾಢ್ಯರು ಜಾತಿ ಬಲ, ಧನ ಬಲ ಮತ್ತು ಅಧಿಕಾರ ಬಲಗಳಿಂದ ನಿರಂತರ ದೌರ್ಜನ್ಯ ನಡೆಸುತ್ತಿರುವುದನ್ನು ಸರಕಾರ ನಿರ್ಲಕ್ಷಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಹಿಂದುತ್ವವಾದಿಗಳು ಬಂಧುತ್ವ, ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಬಹುತ್ವ, ಧರ್ಮ ನಿರಪೇಕ್ಷತೆ ಮೊದಲಾದ ಸಾಂವಿಧಾನಿಕ ಮೌಲ್ಯಗಳನ್ನು ನಾಶಪಡಿಸಿ ಭಾರತದಲ್ಲಿ ‘ಬುಲ್ಡೋಜರ್ ಪ್ರಭುತ್ವ’ ಸ್ಥಾಪಿಸಲು ಹೊರಟಿರುವುದು ತರವಲ್ಲ. ಶಿಕ್ಷಣದ ಕೇಸರೀಕರಣ, ಆರ್ಥಿಕ ಉದಾರೀಕರಣ, ಸಾಮಾಜಿಕ ದಬ್ಬಾಳಿಕೆ, ರಾಜಕೀಯ ಭ್ರಷ್ಟಾಚಾರ ಮೊದಲಾದವುಗಳಿಂದಾಗಿ ಭಾರತದ ಪ್ರಜಾಸತ್ತೆಗೆ ಬಹುದೊಡ್ಡ ಅಪಾಯ ಎದುರಾಗಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನಸಮುದಾಯಗಳನ್ನು ದೇವರು ಮತ್ತು ಮಂದಿರಗಳ ಹೆಸರಿನಲ್ಲಿ ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರಕಾರದ ವಾರಸುದಾರರು ರಾಷ್ಟ್ರೀಯ ವಿಧ್ವಂಸಕರ ಕೂಟದಲ್ಲಿ ವಿಜೃಂಭಿಸುತ್ತಿರುವುದರಿಂದ ಬಹುಸಂಖ್ಯಾತ ಹಿಂದುಳಿದವರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿರುವ ಅಸಹನೀಯ ಸ್ಥಿತಿ ನಿರ್ಮಾಣವಾಗಿದೆ.

ತಾವು ‘‘ತಿನ್ನುವುದಿಲ್ಲ - ತಿನ್ನುವುದಕ್ಕೂ ಬಿಡುವುದಿಲ್ಲ’’ ಎಂಬ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಇಂದು ಭಾರತದಲ್ಲಿ ಬಹುದೊಡ್ಡ ಮೇದಪ್ಪಗಳಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಅಟ್ಟಹಾಸದಿಂದ ವರ್ತಿಸಿ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಿ ಜನಾಂಗೀಯ ದ್ವೇಷ ಹೆಚ್ಚಿಸುವ ಕಾರ್ಯದಲ್ಲಿ ನಮ್ಮನ್ನು ಆಳುವವರು ನಿರತರಾಗಿದ್ದಾರೆ. ಹುಟ್ಟಿನಿಂದ ಸಾಯುವತನಕ ಅಪ್ಪಟ ಭಾರತೀಯರಾಗಿರುವ ಅಲ್ಪಸಂಖ್ಯಾತ ಸಮುದಾಯಗಳನ್ನು ಅತಂತ್ರರನ್ನಾಗಿಸುವ ಹಿಂದುತ್ವವಾದಿಗಳ ಹುನ್ನಾರವನ್ನು ಬಹುಸಂಖ್ಯಾತ ಹಿಂದುಳಿದ ಸಮುದಾಯಗಳು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಇಂತಹವರ ಅಜ್ಞಾನವನ್ನೇ ಬಂಡವಾಳವಾಗಿಸಿಕೊಂಡು ಕೋಮುಭಾವನೆಗಳನ್ನು ಕೆರಳಿಸಿ ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಹಿಂದುತ್ವವಾದಿಗಳು ಕಾರ್ಯನಿರತರಾಗಿದ್ದಾರೆ. ಇತ್ತೀಚೆಗೆ ‘ಸಹಿಷ್ಣು ಹಿಂದು’ ಎಂಬ ಹೆಸರಿನ ಪುಂಡನೊಬ್ಬ ಸುಮಾರು 61 ಪ್ರಮುಖ ರಾಜಕೀಯ ನಾಯಕರು, ಸಾಮಾಜಿಕ ಚಿಂತಕರು, ಧಾರ್ಮಿಕ ಮುಖಂಡರು ಮತ್ತು ಪ್ರಗತಿಪರ ಚಿಂತಕರನ್ನು ಕೊಲ್ಲುವುದಾಗಿ ಬೆದರಿಸಿ ವಿಚಾರವಾದಿ ಕುಂ.ವೀರಭದ್ರಪ್ಪಅವರಿಗೆ ಪತ್ರ ಬರೆದಿರುವುದು ಅವಿವೇಕದ ಪರಮಾವಧಿಯಾಗಿದೆ. ಶೋಷಿತ ಸಮುದಾಯಗಳ ಬೆವರು, ರಕ್ತ ಮತ್ತು ಶ್ರಮಗಳನ್ನು ಬಂಡವಾಳವಾಗಿಸಿಕೊಂಡು ಧರ್ಮ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಬಹುಜನರನ್ನು ದಮನಿಸುವ ಸಂವಿಧಾನ ವಿರೋಧಿ ಶಕ್ತಿಗಳ ಹುನ್ನಾರಗಳನ್ನು ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಬಯಲುಗೊಳಿಸುತ್ತಿರುವ ಪ್ರಗತಿಪರ ಚಿಂತಕರು ಮತ್ತು ಶಕ್ತಿಗಳ ಬಾಯಿ ಮುಚ್ಚಿಸುವ ಕೆಲಸವನ್ನು ನಕಲಿ ಹಿಂದುತ್ವವಾದಿಗಳು ಕೂಡಲೇ ನಿಲ್ಲಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)