varthabharthi


ವಿಶೇಷ-ವರದಿಗಳು

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಿಯುಇಟಿ ತಂದಿರುವ ಬದಲಾವಣೆ

ದುಬಾರಿ ಕ್ರಾಶ್‌ಕೋರ್ಸ್ ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳು

ವಾರ್ತಾ ಭಾರತಿ : 17 May, 2022
ಸೋನಿಯಾ ಅಗರ್ವಾಲ್

ಸಿಯುಇಟಿ ಅನ್ನು ಆರಂಭಿಸಿರುವುದರಿಂದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಾಲೇಜು ಸೀಟು ಪಡೆಯುವಲ್ಲಿ ಎದುರಾಗುತ್ತಿದ್ದ ತೀವ್ರ ಪೈಪೋಟಿ, ಸ್ಪರ್ಧೆ ಇನ್ನಷ್ಟು ತೀವ್ರಗೊಂಡಂತೆ ಆಗಿದೆ. ಶಾಲಾ ಪಠ್ಯಪುಸ್ತಕಗಳನ್ನು ಓದಿ, ಲೈಬ್ರೆರಿಯಲ್ಲಿ ಉಚಿತವಾಗಿ ದೊರಕುವ ಪೂರಕ ವಿಷಯಗಳನ್ನು ಅಭ್ಯಾಸ ಮಾಡಿ ಸಿದ್ಧತೆ ನಡೆಸಿದರೂ, ಹೆಚ್ಚು ಸವಲತ್ತು, ತರಬೇತಿ ಪಡೆಯುವ ಸಾಮರ್ಥ್ಯ ಇರುವ ಖಾಸಗಿ ಶಾಲೆಗಳ ಸಮಕಾಲೀನ ವಿದ್ಯಾರ್ಥಿಗಳ ಎದುರು ಕಾಲೇಜು ಸೀಟು ಪಡೆಯುವುದಕ್ಕಾಗಿನ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಆತಂಕ ಇವರನ್ನು ಕಾಡುತ್ತದೆ.

  12ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಎಚ್ಚರಿಕೆಯ ಕರೆಗಂಟೆ ಮೊಳಗಿಸಲಾಗಿದೆ. ಇದುವರೆಗೆ ಹೆಚ್ಚಿನ ಹೊರೆಯಿಲ್ಲದ ಪದವಿ ಪ್ರವೇಶ ಪ್ರಕ್ರಿಯೆ ಇದೀಗ ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ (ಸಿಯುಇಟಿ)ಗೆ ಸಿದ್ಧತೆ ನಡೆಸುವ ದುಬಾರಿ ಕ್ರ್ಯಾಶ್ ಕೋರ್ಸ್‌ಗಳಿಗೆ ನೋಂದಣಿ ನಡೆಸುವ ವ್ಯವಸ್ಥೆಯಾಗಿ ಬದಲಾಗಿದೆ.

ಕ್ರ್ಯಾಶ್‌ಕೋರ್ಸ್ ಎಂದರೆ ಕ್ಷಿಪ್ರ ಮತ್ತು ತೀವ್ರವಾದ ಅಧ್ಯಯನ ಕ್ರಮವಾಗಿದೆ. 2021ರಲ್ಲಿ ಪರಿಚಯಿಸಲಾದ ಸಿಯುಇಟಿ, ದೇಶದಾದ್ಯಂತ ಯುಜಿಸಿ ಅನುದಾನ ಪಡೆದಿರುವ 45 ವಿವಿಗಳಲ್ಲಿ ಯಾವುದಾದರೊಂದರಲ್ಲಿ ಪದವಿ ತರಗತಿಗಳಿಗೆ ಪ್ರವೇಶ ಪಡೆಯಲು ಏಕಗವಾಕ್ಷಿ ಪ್ರವೇಶ ಪರೀಕ್ಷೆಯಾಗಿದೆ. ಸಿಯುಇಟಿ ಕೋರ್ಸ್ ಬಗ್ಗೆ ವಿಚಾರಣೆ ನಡೆಸುವ ಕನಿಷ್ಠ 200 ಕರೆಗಳು ಪ್ರತೀ ದಿನ ಬರುತ್ತಿವೆ. ಸುಮಾರು 35,000 ರೂ.ನಿಂದ 70,000 ರೂ.ವರೆಗೆ ವೆಚ್ಚವಾಗುವ ಕ್ರ್ಯಾಶ್ ಕೋರ್ಸ್‌ಗಳಿಗೆ ಈಗಾಗಲೇ ಕೆಲವು ಸಾವಿರ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ ಎಂದು ಕ್ರ್ಯಾಶ್‌ಕೋರ್ಸ್ ಸಂಸ್ಥೆ ‘ಕ್ಯಾರಿಯರ್ ಲಾಂಚರ್’ನ ಸಿಯುಇಟಿ ಪ್ರೊಡಕ್ಟ್ ಹೆಡ್ ಅಮಿತೇಂದ್ರ ಕುಮಾರ್ ಹೇಳಿದ್ದಾರೆ.

ತಮ್ಮ ಮಕ್ಕಳನ್ನು ಶಾಲೆಯಿಂದ ಹಿಂದಕ್ಕೆ ಕರೆಸಿಕೊಳ್ಳಲು ಬಯಸಿ ಪೋಷಕರಿಂದ ಕೋರಿಕೆ ಬರುತ್ತಿದೆ. 12ನೇ ತರಗತಿಯ ಅಂಕಗಳಿಗೆ ಕೇವಲ ಶೇ. 40 ಮೌಲ್ಯ ಮಾತ್ರವಿದೆ. ಅದರ ಬದಲು ಮುಕ್ತ ವಿವಿಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಸಿಯುಇಟಿ ಕೋಚಿಂಗ್‌ಗೆ ಹೆಚ್ಚಿನ ಗಮನ ನೀಡುವುದನ್ನು ಅವರು ಬಯಸುತ್ತಿದ್ದಾರೆ ಎಂದು 122 ದಿಲ್ಲಿ ಶಾಲೆಗಳ ಸಂಘಟನೆ ‘ನ್ಯಾಷನಲ್ ಪ್ರೊಗ್ರೆಸಿವ್ ಸ್ಕೂಲ್ ಕಾನ್ಫರೆನ್ಸ್’ (ಎನ್‌ಪಿಎಸ್‌ಸಿ)ಯ ಅಧ್ಯಕ್ಷೆ ಸುಧಾ ಆಚಾರ್ಯ ಹೇಳುತ್ತಾರೆ. ಇನ್ನೊಂದೆಡೆ, ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಸಿಯುಇಟಿ ಕ್ರ್ಯಾಶ್‌ಕೋರ್ಸ್‌ಗಳ ದುಬಾರಿ ಶುಲ್ಕ ಭರಿಸುವಲ್ಲಿನ ತಮ್ಮ ಅಸಮರ್ಥತೆ ಪದವಿ ತರಗತಿಗೆ ಉತ್ತಮ ಕೇಂದ್ರೀಯ ವಿವಿಗೆ ಪ್ರವೇಶ ಪಡೆಯುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕಕ್ಕೆ ಒಳಗಾಗುತ್ತಾರೆ. ಕೇಂದ್ರೀಯ ವಿವಿಗಳಲ್ಲಿ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆಯಲ್ಲಿ ಬದಲಾವಣೆ ಬಗ್ಗೆ ಮಾರ್ಚ್‌ನಲ್ಲಿ ಯುಜಿಸಿ ಘೋಷಣೆ ಹೊರಬಿದ್ದ ಕೆಲ ದಿನಗಳಲ್ಲೇ ಈ ವರ್ಷದ ಸಿಯು ಇಟಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕ್ರ್ಯಾಶ್‌ಕೋರ್ಸ್‌ಗಳಿಗೆ ಕೋಚಿಂಗ್ ಸೆಂಟರ್‌ಗಳು ಚಾಲನೆ ನೀಡಿದವು. ಆನ್‌ಲೈನ್ ಕೋಚಿಂಗ್ ಹಾಗೂ ಕ್ರ್ಯಾಶ್‌ಕೋರ್ಸ್‌ಗಳಿಗೆ ಹೆಸರಾದ ‘ಕ್ಯಾರಿಯರ್ ಲಾಂಚರ್’ನಲ್ಲಿ 3 ವಿಧದ ಸಿಯುಇಟಿ ಕ್ರ್ಯಾಶ್‌ಕೋರ್ಸ್‌ಗಳಿವೆ. ಆನ್‌ಲೈನ್, ಆಫ್‌ಲೈನ್ ಹಾಗೂ ಮೊದಲೇ ರೆಕಾರ್ಡ್ ಮಾಡಿರುವ ವೀಡಿಯೊ ಉಪನ್ಯಾಸಗಳು. ವಿಜ್ಞಾನ, ಮಾನವಿಕತೆ, ವಾಣಿಜ್ಯ ಸಹಿತ 14 ವಿಷಯಗಳು ಈ ಕೋರ್ಸ್‌ಗಳ ವ್ಯಾಪ್ತಿಯಲ್ಲಿವೆ. ಜತೆಗೆ, ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯಗಳೊಂದಿಗೆ ‘ಕಸ್ಟಮೈಸ್ ಪ್ಯಾಕೇಜ್’ ಅನ್ನು ಸಹ ಆರಿಸಬಹುದು.

 ‘‘ಈ ವರ್ಷ ಹಾಜರಾಗುವ ವಿದ್ಯಾರ್ಥಿಗಳಿಗೆ, 2023ರಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ವರ್ಷಾವಧಿಯ ಕೋರ್ಸ್ ಹಾಗೂ 2024ರಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಕೋರ್ಸ್ ಅನ್ನು ಆರಂಭಿಸಿದ್ದೇವೆ’’ ಎಂದು ಕ್ಯಾರಿಯರ್ ಲಾಂಚರ್‌ನ ಸಿಯುಇಟಿ ವಿಭಾಗದ ಪ್ರೊಡಕ್ಟ್ ಮುಖ್ಯಸ್ಥ ಅಮಿತೇಂದ್ರ ಕುಮಾರ್ ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ. ನೀಟ್/ಜೆಇಇ ಆಕಾಂಕ್ಷಿಗಳಿಗೆ ಕೋಚಿಂಗ್ ನೀಡುವ ರಾಷ್ಟ್ರ ವ್ಯಾಪಿ ಜಾಲ ಹೊಂದಿರುವ ಆಕಾಶ್ ಇನ್‌ಸ್ಟಿಟ್ಯೂಟ್ ಈಗ ಕೇವಲ ವಿಜ್ಞಾನ ವಿಷಯದಲ್ಲೇ 24 ದಿನಗಳ ಕ್ಯಾಶ್‌ಕೋರ್ಸ್ ಆರಂಭಿಸಿದೆ. ‘‘ನಮ್ಮ ಪರೀಕ್ಷಾ ಸರಣಿಯ ಕೋರ್ಸ್‌ಗಳು ಜೂನ್ 6ರಿಂದ ಆರಂಭವಾಗಲಿದ್ದು ಇದರಲ್ಲಿ ವಿದ್ಯಾರ್ಥಿಗಳು 14 ಪರೀಕ್ಷೆ ಬರೆಯುತ್ತಾರೆ. ಇದು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಲಭ್ಯವಿದೆ’’ ಎಂದು ಆಕಾಶ್ + ಬೈಜೂಸ್‌ನ ನ್ಯಾಷನಲ್ ಅಕಾಡಮಿಕ್ ಡೈರೆಕ್ಟರ್ ಅನುರಾಗ್ ತಿವಾರಿ ಹೇಳಿದ್ದಾರೆ. ಈ ವರ್ಷ ಇದುವರೆಗೆ 100 ವಿದ್ಯಾರ್ಥಿಗಳು ಕ್ರ್ಯಾಶ್ ಕೋರ್ಸ್‌ಗಳಿಗೆ ನೋಂದಾಯಿಸಿಕೊಂಡಿದ್ದು ಇದರ ವೆಚ್ಚ ಸುಮಾರು 20ರಿಂದ 30 ಸಾವಿರ ರೂಪಾಯಿಯಷ್ಟು. 12ನೇ ತರಗತಿ ಪರೀಕ್ಷೆ ಮುಗಿದೊಡನೆ ಇನ್ನಷ್ಟು ದಾಖಲಾತಿಯನ್ನು ನಿರೀಕ್ಷಿಸಲಾಗಿದೆ. ದಿಲ್ಲಿ ವಿವಿಯೊಂದಿಗೆ ಸಂಯೋಜನೆಗೊಂಡಿರುವ ರಾಮಾನುಜನ್ ಕಾಲೇಜು ಕೂಡಾ ಸಿಯುಇಟಿ ಕ್ರ್ಯಾಶ್‌ಕೋರ್ಸ್ ಆರಂಭಿಸಿ ಪ್ರತೀ ವಿದ್ಯಾರ್ಥಿಗೆ 12,000 ರೂ. ಶುಲ್ಕ ವಿಧಿಸಿತ್ತು. ಬಳಿಕ ಈ ನಿರ್ಧಾರವನ್ನು ಹಿಂಪಡೆಯಲಾಗಿದೆ. ‘‘ಇತರ ಕಾಲೇಜುಗಳ ಹಲವು ಪ್ರೊಫೆಸರ್‌ಗಳು ಆಕ್ಷೇಪ ಎತ್ತಿದ್ದರಿಂದ ಕೋಚಿಂಗ್ ತರಗತಿ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು. ಆದರೂ, ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಹೋಲಿಸಿದರೆ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ತರಬೇತಿ ಒದಗಿಸುವ ಆಶಯವನ್ನು ಹೊಂದಿದ್ದೇವೆ’’ ಎಂದು ರಾಮಾನುಜನ್ ಕಾಲೇಜಿನ ಪ್ರಾಂಶುಪಾಲ ಎಸ್.ಪಿ. ಅಗರ್‌ವಾಲ್ ಹೇಳಿದ್ದಾರೆ.

ಆದರೆ ‘‘ಕ್ರ್ಯಾಶ್ ಕೋರ್ಸ್‌ಗಳು ಅಣಬೆಯಂತೆ ತಲೆ ಎತ್ತುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ’’ ಎನ್ನುತ್ತಾರೆ ಸುಧಾ ಆಚಾರ್ಯ. ‘‘ವಿದ್ಯಾರ್ಥಿಗಳು ಪ್ರಥಮ ಟರ್ಮ್ ಪರೀಕ್ಷೆಯಲ್ಲಿ ಈಗಾಗಲೇ ಉತ್ತಮ ಅಂಕ ಪಡೆದಿರುವುದರಿಂದ ತಮ್ಮ ದ್ವಿತೀಯ ಟರ್ಮ್ ಪರೀಕ್ಷೆಗೆ ಕಠಿಣ ಶ್ರಮ ಪಡುವುದಿಲ್ಲ. ಸಿಯುಟಿಯು ಬಹು ಆಯ್ಕೆ ಪ್ರಶ್ನೆ ಆಧಾರಿತವಾದ್ದರಿಂದ, ಪರಿಕಲ್ಪನಾ ಕಲಿಕೆ, ಪ್ರಸ್ತುತಿ ಕೌಶಲ್ಯ ಮತ್ತು ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಯಂತಹ ಕೌಶಲ್ಯಗಳಿಗೆ ಇನ್ನು ಮುಂದೆ ಹೆಚ್ಚಿನ ಗಮನ ನೀಡುವುದಿಲ್ಲ’’ ಎಂದವರು ಹೇಳಿದ್ದಾರೆ. ಸಿಯುಇಟಿ ಅನ್ನು ಆರಂಭಿಸಿರುವುದರಿಂದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಾಲೇಜು ಸೀಟು ಪಡೆಯುವಲ್ಲಿ ಎದುರಾಗುತ್ತಿದ್ದ ತೀವ್ರ ಪೈಪೋಟಿ, ಸ್ಪರ್ಧೆ ಇನ್ನಷ್ಟು ತೀವ್ರಗೊಂಡಂತೆ ಆಗಿದೆ. ಶಾಲಾ ಪಠ್ಯಪುಸ್ತಕಗಳನ್ನು ಓದಿ, ಲೈಬ್ರೆರಿಯಲ್ಲಿ ಉಚಿತವಾಗಿ ದೊರಕುವ ಪೂರಕ ವಿಷಯಗಳನ್ನು ಅಭ್ಯಾಸ ಮಾಡಿ ಸಿದ್ಧತೆ ನಡೆಸಿದರೂ, ಹೆಚ್ಚು ಸವಲತ್ತು, ತರಬೇತಿ ಪಡೆಯುವ ಸಾಮರ್ಥ್ಯ ಇರುವ ಖಾಸಗಿ ಶಾಲೆಗಳ ಸಮಕಾಲೀನ ವಿದ್ಯಾರ್ಥಿಗಳ ಎದುರು ಕಾಲೇಜು ಸೀಟು ಪಡೆಯುವುದಕ್ಕಾಗಿನ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಆತಂಕ ಇವರನ್ನು ಕಾಡುತ್ತದೆ. ‘‘ಕ್ರ್ಯಾಶ್ ಕೋರ್ಸ್‌ಗಳ ಮೂಲಕ ಪರೀಕ್ಷೆ ಬರೆಯುವ ಪ್ರಾಯೋಗಿಕ ಕೌಶಲ್ಯ ಪಡೆದಿರುವ ವಿದ್ಯಾರ್ಥಿ ಖಂಡಿತವಾಗಿಯೂ ನನಗಿಂತ ಉತ್ತಮ ಅಂಕ ಪಡೆಯುತ್ತಾನೆ. ಆದ್ದರಿಂದ ಈ ಹೊಸ ವ್ಯವಸ್ಥೆ ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ವ್ಯವಸ್ಥೆ ಹೇಗಾಗುತ್ತದೆ?’’ ಎಂದು ಸರಕಾರಿ ಶಾಲೆಯ ಓರ್ವ ವಿದ್ಯಾರ್ಥಿ ಪ್ರಶ್ನಿಸಿದ್ದಾನೆ. ‘‘ಕಟ್-ಆಫ್ ಅಂಕ (ಅರ್ಹತೆ ಗಳಿಸಲು ನಿಗದಿಗೊಳಿಸಿದ ಕನಿಷ್ಠ ಅಂಕ) ಅಧಿಕವಾಗಿರುವುದರಿಂದ ದಿಲ್ಲಿ ವಿವಿ ಕೈಗೆ ಎಟುಕದು ಎಂದು ಕಳೆದ ವರ್ಷದವರೆಗೆ ನನ್ನ ಪುತ್ರಿ ಯೋಚಿಸಿದ್ದಳು. ಈಗ ಹಾಗೆಯೇ ಆಗಿದೆ, ಯಾಕೆಂದರೆ ಆಕೆಯನ್ನು ಕೋಚಿಂಗ್ ತರಗತಿಗೆ ಸೇರಿಸಲು ನನ್ನಲ್ಲಿ ಸಾಕಷ್ಟು ಹಣವಿಲ್ಲ’’ ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ತಾಯಿ ನೀತು ದೇವಿ ಆತಂಕ ತೋಡಿಕೊಂಡಿದ್ದಾರೆ.

ಸಿಯುಇಟಿ ಮಾದರಿ:

  ಸಿಯುಇಟಿ ನಡೆಸುವ ‘ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’(ಎನ್‌ಟಿಎ- ರಾಷ್ಟ್ರೀಯ ಪರೀಕ್ಷಾ ಮಂಡಳಿ)ಯ ಪ್ರಕಾರ ಪ್ರವೇಶ ಪರೀಕ್ಷೆಗೆ ಪ್ರಶ್ನೆಗಳನ್ನು 12ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಆರಿಸಲಾಗುತ್ತದೆ. ಸಿಯುಇಟಿ ಪರೀಕ್ಷೆಯನ್ನು 3 ವಿಭಾಗ ಮಾಡಲಾಗಿದೆ. ಪ್ರಥಮ ವಿಭಾಗದಲ್ಲಿ ಭಾಷಾ ಪರೀಕ್ಷೆಯಿದೆ. ಇದರಲ್ಲಿ ವಿದ್ಯಾರ್ಥಿಗಳು 13 ಭಾಷೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಶ್ನೆಗಳು ಓದುವ ಗ್ರಹಿಕೆ, ಮೌಖಿಕ ಸಾಮರ್ಥ್ಯ, ವ್ಯಾಕರಣ ಇತ್ಯಾದಿಗಳನ್ನು ಆಧರಿಸಿವೆ. ಎರಡನೇ ವಿಭಾಗದಲ್ಲಿ ವಿದ್ಯಾರ್ಥಿಗಳು ಅಕೌಂಟಿಂಗ್, ಬುಕ್‌ಕೀಪಿಂಗ್, ಇತಿಹಾಸ, ಅರ್ಥಶಾಸ್ತ್ರ ಅಥವಾ ಭೂಗೋಳ- ಈ ನಾಲ್ಕರಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಕು. 3ನೇ ವಿಭಾಗದಲ್ಲಿ 2 ಉಪವಿಭಾಗಗಳಿವೆ. ಮೊದಲನೆಯದು ವೃತ್ತಿಪರ ಮತ್ತು ಮುಕ್ತ ಅರ್ಹತಾ ಕಾರ್ಯಕ್ರಮಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ. ಇಲ್ಲಿ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳ ಅರಿವು, ಸಾಮಾನ್ಯ ಮಾನಸಿಕ ಸಾಮರ್ಥ್ಯ ಮತ್ತು ತಾರ್ಕಿಕ ಹಾಗೂ ವಿಶ್ಲೇಷಣಾತ್ಮಕ ತಾರ್ಕಿಕತೆಯನ್ನು ಪರೀಕ್ಷಿಸಲಾಗುತ್ತದೆ. ಎರಡನೆಯ ಉಪವಿಭಾಗವು ಹೆಚ್ಚುವರಿ ಭಾಷಾ ಪರೀಕ್ಷೆಯಾಗಿದ್ದು ಇದರಲ್ಲಿ 13 ಭಾಷೆಗಳಲ್ಲಿ ಒಂದರ ಜ್ಞಾನವನ್ನು ಪರೀಕ್ಷೆ ನಡೆಸಲಾಗುತ್ತದೆ.

ಕೃಪೆ: theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)