varthabharthi


ನಿಮ್ಮ ಅಂಕಣ

ಕೊಲ್ವ ಮುನ್ನ ಸೊಲ್ಲಡಗಿಸುವ ಹುನ್ನಾರ

ವಾರ್ತಾ ಭಾರತಿ : 17 May, 2022
ಪ್ರೊ. ಶಿವರಾಮಯ್ಯ

ಸರಕಾರ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಕಾಯ್ದೆ ಮಾಡಿದರೆ ಪೋಷಕರು, ಖಾಸಗಿ ಶಾಲೆಗಳ ಒಕ್ಕೂಟ ಸಂಘಸಂಸ್ಥೆಗಳು ಸಂವಿಧಾನದಲ್ಲಿ ಮಗುವಿಗೆ ಬೇಕಾದ ಭಾಷೆಯನ್ನು ಕಲಿಯುವ ಹಕ್ಕಿದೆ ಎಂದಿದೆಯಲ್ಲಾ ಎಂದು ಮಗುವಿಗೆ ತಿಳಿಯದಿದ್ದರೂ ಇವರೇ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ. ತಾಯಿನುಡಿಯ ಬಗ್ಗೆ ನ್ಯಾಯದ ತಕ್ಕಡಿಯೂ ಮ್ಯಾನೇಜ್‌ಮೆಂಟ್ ಶಾಲೆಗಳ ಕಡೆಗೆ ವಾಲುತ್ತದೆ. ಸರಕಾರಿ ಶಾಲೆಗಳ ಕಲಿಕಾ ಮಟ್ಟ, ಮೂಲಸೌಕರ್ಯ ಖಾಸಗಿ ಶಾಲೆಗಳ ಮಟ್ಟದಲ್ಲಿದ್ದೂ ಯಾಕೆ ನೀವು ಮಕ್ಕಳನ್ನು ಗೋಳಾಡಿಸುತ್ತೀರಿ ಎಂದು ನ್ಯಾಯಾಲಯಗಳೂ ಬಿಡಿಸಿ ಹೇಳುವುದಿಲ್ಲ.

‘‘ಕೊಲ್ವ ಮುನ್ನ ಸೊಲ್ಲಡಗಿಸು’’ ಇದೊಂದು ಕನ್ನಡದ ನಾಣ್ಣುಡಿ. ಒಂದು ನುಡಿಯನ್ನಾಡುವ ಒಂದು ಜನಾಂಗವನ್ನೂ ಕೊಲ್ಲುವ ಮುನ್ನ ಅವರ ಸೊಲ್ಲನ್ನು (Mother Tongue) ಅಡಗಿಸಬೇಕಾಗುತ್ತದೆ. ಒಂದು ಭಾಷೆ-ಸೊಲ್ಲು-ನುಡಿ ಜೀವಂತ ಇದೆ ಎಂದರೆ ಅದನ್ನಾಡುವ ಸಮೂಹ ಜೀವಂತ ಇದೆ ಎಂದರ್ಥ. ಇದು ಜೀವಾತ್ಮ ಸಂಬಂಧ. ಆದ್ದರಿಂದ ಒಂದು ಜನಾಂಗವನ್ನು ನಾಶಮಾಡುವುದೆಂದರೆ ಮೊದಲು ಅವರಾಡುವ ಮಾತನ್ನು ನಾಶಗೊಳಿಸಬೇಕು. ‘ಮಾತು’ ಮರೆತ ಜನಾಂಗ ಬದುಕಿದ್ದರೂ ಸತ್ತಂತೆ ತಾನೆ? ಭಾಷೆ ಎಂದರೆ ನಮ್ಮ ಸಂಸ್ಕೃತಿಯ ಅಭಿವ್ಯಕ್ತಿ. ಅದನ್ನು ಮರೆತೆವೆಂದರೆ ನಮ್ಮ ಅಸ್ಮಿತೆ (Identity)ಯನ್ನೇ ಮರೆತಂತೆ. ಒಮ್ಮೆ ಮಾತು ವಿಸ್ಮತಿಗೆ ಹೋಯಿತೆಂದರೆ ಅದನ್ನಾಡುವ ಜನ ಗೆದ್ದವರ ಗುಲಾಮರು. ಗುಲಾಮರಾಗುವ ಜನ ಅನುಗಾಲ ಬದುಕಿದರೇನು ಬಂತು? ಸರಪಣಿಯಲ್ಲಿ ಕಟ್ಟಿಸಿಕೊಂಡ ನಾಯಿಗೆ ಸ್ವಾತಂತ್ರ್ಯ ಉಂಟೆ?

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ

ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!

ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,

ದೇವನುಡಿಯೆಂದೊಂದು ಹತ್ತಿ ಜಗ್ಗಿ

ಎಂದು ರಾಷ್ಟ್ರಕವಿ ಕುವೆಂಪು 1935ರಲ್ಲೇ ಎಚ್ಚರಿಸಿದರು. ಆದರೆ ಇವತ್ತಿಗೂ ಕನ್ನಡಿಗರು ಎಚ್ಚರಗೊಳ್ಳಲಾಗಿಲ್ಲ. ಇಂಗ್ಲಿಷ್-ಹಿಂದಿ-ಸಂಸ್ಕೃತದ ಹೊರೆ ಇಳಿಯಲಿಲ್ಲ. ‘‘ಕರ್ನಾಟಕ ಎಂಬುದೇನು ಬರಿಯ ಹೆಸರೇ ಮಣ್ಣಿಗೆ?’’ ಎಂದು ಕೇಳಲಾಗಿಲ್ಲ! ಸ್ವಾತಂತ್ರ್ಯವೂ ಬಂತು; ಸ್ವರಾಜ್ಯವೂ ಆಯಿತು; ಭಾಷಾವಾರು ಪ್ರಾಂತಗಳೂ ಆದುವು. ಒಂದೊಂದು ಭಾಷೆಯೂ ಒಂದೊಂದು ರಾಷ್ಟ್ರೀಯತೆ. ಆದರೆ ಕೂಡು ರಾಷ್ಟ್ರಗಳಿಗೆ ಸಲ್ಲಬೇಕಾದ ಸಮಬಾಳು ಸಮಪಾಲು ದಕ್ಕಲಿಲ್ಲ. ಉತ್ತರದವರದೇ ಪಾರುಪತ್ಯ. ‘‘ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದ ಹಾಕಿ ತಿವಿದರದು ಹೂವೆ?’’ ಎಂದು ಕವಿವರ ಕೇಳಿದರು. ಆದರೂ ನಮ್ಮವರೇ ಈಗ ಹದಹಾಕಿ ತಿವಿಯುತ್ತಲೇ ಇದ್ದಾರೆ- ಮತ್ತೆ ಮತ್ತೆ! ಕೇಳುವರಾರು? ಎಂದು ಕೆಲವು ಲೇಖಕರು ಮೊನಚು ಭಾಷೆಯಲ್ಲಿ ತಿವಿದು ಕೇಳುತ್ತಿದ್ದಾರೆ-ಘೆಂಡಾಮೃಗದ ದಪ್ಪಚರ್ಮಕ್ಕೂ ಚುರುಕು ಮುಟ್ಟುವಂತೆ. ಆದರೆ ಈ ಕನ್ನಡಿಗರ ದನಿ ವಿಧಾನಸೌಧ, ಪಾರ್ಲಿಮೆಂಟ್ ಭವನಕ್ಕೆ ಮುಟ್ಟೀತೆ? ಖಾಸಗಿ ಶಾಲಾ ಕಾಲೇಜು ಸಂಘಸಂಸ್ಥೆಗಳಿಗೆ ಕೇಳುವುದೇ? ಪೋಷಕರಿಗೆ ಮುಟ್ಟುವುದೇ? ಇಲ್ಲ.

 ಏಕೆಂದರೆ ನಮ್ಮ ಶಾಸಕರಿಗೆ, ಸಂಸದರಿಗೆ, ಮಕ್ಕಳ ಪೋಷಕರಿಗೆ ಹಾಗೂ ಕನ್ನಡ ಹೋರಾಟಗಾರರಿಗೆ ಕನ್ನಡದ ಅಭ್ಯುದಯ ಬೇಕಿಲ್ಲ. ಅವರ ಭಾಷಾಭಿಮಾನ ಏನಿದ್ದರೂ ನವೆಂಬರ್ ತಿಂಗಳ ಭಾಷಣಗಳಲ್ಲೇ ಆವಿಯಾಗಿ ಹೋಗುತ್ತದೆ. ಇಂಗ್ಲಿಷ್ ಹಾಗೂ ಹಿಂದಿ ಮಂಪರಿನಲ್ಲಿ ತೇಲಿ ಹೋಗುತ್ತಿದ್ದಾರೆ. ನಾವು ಹೀಗೆ ಅಸಡ್ಡೆ ತೋರಿದರೆ ನಮ್ಮ ಅಸ್ತಿತ್ವವೇ ಇರುವುದಿಲ್ಲ, ನಮ್ಮ ಅಸ್ಮಿತೆಯೇ ಉಳಿಯಲಾರದು ಎಂಬ ಪರಿಜ್ಞಾನವೇ ಅವರಿಗಿಲ್ಲ. ಐ.ಪಿ.ಎಸ್; ಕೆ.ಎ.ಎಸ್ ಪರೀಕ್ಷೆಗಳಲ್ಲಿ ಕನ್ನಡವನ್ನು ಕೈಬಿಡಲಾಗಿದೆ. ಕೇಂದ್ರ ರೈಲ್ವೆ, ಅಂಚೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಮಾತಾಡುವವರು ಕಣ್ಮರೆಯಾಗುತ್ತಿದ್ದಾರೆ. ಎಲ್ಲೆಡೆಗಳಲ್ಲೂ ಹಿಂದಿಯದೇ ಮೇಲುಗೈ! ಒಂದು ಜನಾಂಗ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ. ಒಂದು ಜಿಎಸ್‌ಟಿ ಮುಂತಾಗಿ ಹೇಳುತ್ತಾ ಉಳಿದಂತೆ ಎಲ್ಲವನ್ನು ಮೂಲೆಗೆ ತಳ್ಳಲಾಗುತ್ತಿದೆ. ಹಿಂದಿಯೇತರ ಪ್ರಾದೇಶಿಕ ಭಾಷೆಗಳು ನೂಕಿದ ಕಡೆ ಬಿದ್ದು ಸೊರಗಬೇಕಾಗಿದೆ. ಶಾಸಕರು, ಸಂಸದರು ಪಕ್ಷಸಿದ್ಧಾಂತ, ಸ್ವಧರ್ಮ, ಸ್ವಜಾತಿ, ಕಡೆಗೆ ಕಾಂಚನವೆಂಬ ಮೃಗದ ಬೆನ್ನು ಹತ್ತಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗುತ್ತಿದ್ದಾರೆ. ಇತ್ತ ಮತದಾರ ಪ್ರಭುಗಳು ಚುನಾವಣೆ ಬರುತ್ತವೆ ಹೋಗುತ್ತವೆ, ಯಾವ ಪಕ್ಷ ಆಳಿದರೇನು? ನಾವು ಗೇಯುವುದು ತಪ್ಪೀತೆ? ಎಂಬ ಕರ್ಮ ಸಿದ್ಧಾಂತ ನಂಬಿ ದುಡಿಯುತ್ತಿದ್ದಾರೆ. ಆದರೂ ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಕಲಿತರೆ ಸಾಕು ಉದ್ಧಾರ ಆಗುವರೆಂಬ ಭ್ರಮೆಯಿಂದ ಕೂಲಿನಾಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಹಣ ಕೂಡಿಸಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಮಕ್ಕಳು ಇಂಗ್ಲಿಷ್ ಹಿಂದಿ ವ್ಯಾಕರಣ ನಿಯಮಗಳನ್ನು ಕಲಿಯುವುದರಲ್ಲಿಯೇ ಅವರ ಶಾಲಾ ಜೀವನ ಮುಗಿಯುತ್ತದೆ. ಅಷ್ಟರಲ್ಲಿ ಅವರ ಸೃಜನಶೀಲ ಪ್ರತಿಭೆ ಮುರುಟಿ ಹೋಗುತ್ತದೆ. ಮಾತೃಭಾಷೆ ಮರೆತು ಹೋಗುತ್ತದೆ; ತಾಯಿನುಡಿ ತೊದಲುತ್ತದೆ!

ಸರಕಾರ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಕಾಯ್ದೆ ಮಾಡಿದರೆ ಪೋಷಕರು, ಖಾಸಗಿ ಶಾಲೆಗಳ ಒಕ್ಕೂಟ ಸಂಘಸಂಸ್ಥೆಗಳು ಸಂವಿಧಾನದಲ್ಲಿ ಮಗುವಿಗೆ ಬೇಕಾದ ಭಾಷೆಯನ್ನು ಕಲಿಯುವ ಹಕ್ಕಿದೆ ಎಂದಿದೆಯಲ್ಲಾ ಎಂದು ಮಗುವಿಗೆ ತಿಳಿಯದಿದ್ದರೂ ಇವರೇ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ. ತಾಯಿನುಡಿಯ ಬಗ್ಗೆ ನ್ಯಾಯದ ತಕ್ಕಡಿಯೂ ಮ್ಯಾನೇಜ್‌ಮೆಂಟ್ ಶಾಲೆಗಳ ಕಡೆಗೆ ವಾಲುತ್ತದೆ. ಸರಕಾರಿ ಶಾಲೆಗಳ ಕಲಿಕಾ ಮಟ್ಟ, ಮೂಲಸೌಕರ್ಯ ಖಾಸಗಿ ಶಾಲೆಗಳ ಮಟ್ಟದಲ್ಲಿದ್ದೂ ಯಾಕೆ ನೀವು ಮಕ್ಕಳನ್ನು ಗೋಳಾಡಿಸುತ್ತೀರಿ ಎಂದು ನ್ಯಾಯಾಲಯಗಳೂ ಬಿಡಿಸಿ ಹೇಳುವುದಿಲ್ಲ. ಅಷ್ಟೇ ಅಲ್ಲ ನ್ಯಾಯಾಲಯಗಳೂ ಕನ್ನಡದಲ್ಲಿ ತೀರ್ಪು ನೀಡುತ್ತಿಲ್ಲ. ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ‘ವಿಶ್ವಗುರು’ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿರುವ ಭಾರತವು ‘ಇದು ಬಹುಭಾಷಾ ಸಂಸ್ಕೃತಿಗಳ ಕೂಟ ರಾಷ್ಟ್ರ ವ್ಯವಸ್ಥೆ’ ಎಂಬ ಸಂವಿಧಾನದ ಮಾತನ್ನೇ ಮರೆತು ವರ್ತಿಸುತ್ತಿದೆ. ನಮ್ಮ ಕವಿ ಸರ್ವಜ್ಞ ‘ಮಾತನೆ ಉಣಕೊಟ್ಟು, ಮಾತನೆ ಉಡಕೊಟ್ಟು, ಮಾತಿನ ಮುತ್ತ ಸುರಿಸಿ ಹೋದಾತನೇ ಜಾಣ’ ಎಂದ ಮಾತು ನಿಜವಾಗುತ್ತಿದೆ. ಹಿಂದೆ ವಸಾಹತು ಸಾಮ್ರಾಜ್ಯಶಾಹಿ ವಿಸ್ತರಣಾವಾದಿಗಳು ಆಫ್ರಿಕಾ, ಇಂಡಿಯಾ ಮುಂತಾದ ತಮ್ಮ ವಸಾಹತು ರಾಷ್ಟ್ರಗಳನ್ನು ವಶಪಡಿಸಿಕೊಳ್ಳುವ ಕಾಲಕ್ಕೆ, ಇಲ್ಲಿಯ ನೈಸರ್ಗಿಕ ಸಂಪತ್ತನ್ನೂ ಮಾನವ ಬಲವನ್ನೂ ಕೊಳ್ಳೆ ಹೊಡೆಯುವುದಕ್ಕಾಗಿ ಎರಡು ಬಗೆಯ ಕಾರ್ಯಾಚರಣೆಯನ್ನು ಕೈಗೊಂಡರು; ಒಂದು ತಮ್ಮ ಮತಧರ್ಮವೇ ಸರ್ವಶ್ರೇಷ್ಠ ಎಂಬ ಪ್ರಚಾರ; ಇನ್ನೊಂದು ತಮಗೆ ಬೇಕಾದ ಯೋಧರನ್ನು ಹಾಗೂ ಗುಮಾಸ್ತರನ್ನು ತಯಾರು ಮಾಡಿಕೊಳ್ಳುವುದಕ್ಕಾಗಿ ದೇಶೀಯರಿಗೆ ಇಂಗ್ಲಿಷ್ ಕಲಿಸುವಿಕೆ. ಇದರ ಪರಿಣಾಮ ಏನಾಯಿತು? ಸ್ಥಳೀಯ ಭಾಷೆಗಳು ನೇಪಥ್ಯಕ್ಕೆ ಹೋದವು. ನಮ್ಮ ಶೂದ್ರ, ರೈತ, ದಲಿತರ ಮಕ್ಕಳು ಬಂದೂಕು ಹಿಡಿದು ಸ್ವದೇಶಿ ಚಳವಳಿಯ ನೇತಾರರತ್ತಲೇ ಗುರಿಯಿಟ್ಟರು. ಇಂಗ್ಲಿಷ್ ಕಲಿತ ಬಿಳಿಕಾಲರ್ ಗುಮಾಸ್ತರು ದುಬಾಷಿಗಳೂ ದಳ್ಳಾಳಿಗಳೂ ಆಗಿ ಸಂಪತ್ತು ಗಳಿಸಿ ನಮ್ಮವರ ಶೋಷಣೆಗೇ ನೆರವಾದರು.

ಈಗಿನ ರಾಜಕಾರಣಿಗಳು ಹಾಗೆಯೇ ಸ್ವಧರ್ಮ, ಸ್ವಜಾತೀಯ ದೇವರು ಧರ್ಮಕ್ಕೆ ಸಂಬಂಧಿಸಿದ ಮೂಢನಂಬಿಕೆಗಳಿಗೆ ಒತ್ತುಕೊಟ್ಟು ಬಿತ್ತಿ ಬೆಳೆದು ವೋಟು ಗಿಟ್ಟಿಸಿ ಗೆಲ್ಲುತ್ತಾರೆ. ಆಮೇಲೆ ಗೆದ್ದ ಏಣಿಯನ್ನು ಒದ್ದು ಮೇಲೇರುತ್ತಾರೆ. ಹಿಂದೆ ನೋಡಿದರೆ ಸಾವು ನೋವಿನ ಬದುಕು ಹಾಗೆಯೇ ಬಿದ್ದಿದೆ!. ಸತ್ತಂತಿಹರನು ಬಡಿದೆಚ್ಚರಿಸುವ ಡಿಂಡಿಮ ಎಲ್ಲಿ ಹೋಯಿತು? ಒಡಕು ದನಿ ಬರುತ್ತಿದೆಯಲ್ಲ ಏನು ಮಾಡಬೇಕು? ಕನ್ನಡಿಗರೂ ಉಳಿಯಬೇಕು; ಕನ್ನಡವೂ ಉಳಿಯಬೇಕು. ಏನು ಮಾಡಬೇಕು ಎಂಬುದನ್ನು ಕುವೆಂಪು 1965ರಲ್ಲಿ ರಾಷ್ಟ್ರಕವಿ ಪ್ರಶಸ್ತಿ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ: ‘‘ಮಹನೀಯರೆ, ಕೊನೆಯದಾಗಿ ಅಧಿಕೃತ ಶಾಸನಕರ್ತರಾದ ನಿಮ್ಮಲ್ಲಿ ಅನಧಿಕೃತ ಶಾಸನಕರ್ತನಾದ ನನ್ನ ಒಂದು ಅಹವಾಲು; ಅದು ಇಂಗ್ಲಿಷ್ ಭಾಷೆಗೂ ಶಿಕ್ಷಣ ಮಾಧ್ಯಮಕ್ಕೂ ಸಂಬಂಧಪಟ್ಟಿದ್ದು. ವಿವರಕ್ಕಾಗಲಿ, ವಾದಕ್ಕಾಗಲಿ, ಜಿಜ್ಞಾಸೆಗಾಗಲಿ ನಾನೀಗ ಕೈ ಹಾಕುವುದಿಲ್ಲ. ಅದು ತತ್ಸಮಯ ಸಾಧ್ಯವೂ ಅಲ್ಲ; ಅದಕ್ಕಿಲ್ಲಿ ಕಾಲಾವಕಾಶವೂ ಇಲ್ಲ. ತಮ್ಮ ಗಮನವನ್ನು ಅತ್ತಕಡೆ ಎಳೆದು, ಅದು ತಮ್ಮ ಶೀಘ್ರ ಪರಿಶೀಲನೆಗೂ ಇತ್ಯರ್ಥಕ್ಕೂ ಒಳಗಾಗುವಂತೆ ಮಾಡುವುದೇ ನನ್ನ ಸದ್ಯ ಪ್ರಯತ್ನದ ಮುಖ್ಯ ಉದ್ದೇಶ. ಆ ವಿಚಾರವಾಗಿ ನಮ್ಮ ರಾಷ್ಟ್ರಪಿತನಾದಿಯಾಗಿ ಸಾವಿರಾರು ದೇಶಭಕ್ತರೂ, ನೂರಾರು ಸ್ವದೇಶೀಯ ಮತ್ತು ವಿದೇಶೀಯ ವಿದ್ಯಾತಜ್ಞರೂ ಹೇಳಿದ್ದಾರೆ, ಮಾತನಾಡಿದ್ದಾರೆ, ಬರೆದಿದ್ದಾರೆ. ಹೊತ್ತಗೆಗಳನ್ನೇ ಪ್ರಕಟಿಸಿಯೂ ಇದ್ದಾರೆ. ಆದರೆ ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರ ಹಿತಾಸಕ್ತ ಪ್ರತಿಗಾಮಿ ಶಕ್ತಿಗಳು, ಮಕ್ಕಳಿಗೆ ಹಾಲುಣಿಸುವ ನೆವದಿಂದ ಅವರನ್ನು ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಭಾಷೆಯಿಂದಲೂ ಇಂಗ್ಲಿಷ್ ಮಾಧ್ಯಮದಿಂದಲೂ ವರ್ಷ ವರ್ಷವೂ ಪರೀಕ್ಷೆಯ ಜಿಲೊಟಿನ್ನಿಗೆ ಕೋಟ್ಯಂತರ ಬಾಲಕರ ಮತ್ತು ತರುಣರ ತಲೆಗಳನ್ನು ಬಲಿ ಕೊಡುತ್ತಿದ್ದಾರೆ. ಆ ನಷ್ಟದ ಪರಿಮಾಣವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಶಃ ಸರಿಯಾಗಿ ಲೆಕ್ಕ ಹಾಕಿದರೆ, ನಾಲ್ಕಾರು ಪಂಚವಾರ್ಷಿಕ ಯೋಜನೆಗಳ ಮೊತ್ತವೇ ಆದರೂ ಆಗಬಹುದೇನೊ!

ಇಂಗ್ಲಿಷ್ ಭಾಷೆ ಬಲಾತ್ಕಾರದ ಸ್ಥಾನದಿಂದ ಐಚ್ಛಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯರೋಗಿಯಂತಿರಬೇಕಾಗುತ್ತದೆ.’’

ಇಂದಿಗೂ ಪರಿಸ್ಥಿತಿ ಕುವೆಂಪು ಹೇಳಿದ ಹಾಗೇ ಇದೆ. ವಿದ್ಯಾರ್ಥಿಗಳ, ರೈತರ, ದಲಿತರ, ಮಹಿಳೆಯರ, ಮಕ್ಕಳ ದನಿ ಕೇಳುವರೇ ಇಲ್ಲ. ಧರೆಯೆದ್ದು ಉರಿದರೆ ಆರಿಸುವವರಾರು? 1912ರಲ್ಲಿ ಸಾಮ್ರಾಜ್ಯಶಾಹಿ ನೆಪೋಲಿಯನ್ ತನ್ನ ಹನ್ನೆರಡು ಲಕ್ಷದಷ್ಟು ಸೈನ್ಯ ಸಮೇತ ದಂಡೆತ್ತಿ ಬಂದು ಮಾಸೊ್ಕ ನರದ ಬಾಗಿಲಿೆ ನಿಲ್ಲಿಸುತ್ತಾನೆ. ಆ ಏನಾಯಿತು? ಅದುವರೆೆ ಫ್ರೆಂ್ ಭಾಷೆ, ಫ್ರೆಂ್ ಸಂಸ್ಕೃತಿಯನ್ನೇ ಅನುರಿಸುತ್ತಾ  ಅದೇ ಭ್ರಮೆಯಲ್ಲಿ ತಮ್ಮ ಅಸ್ಮಿತೆಯನ್ನೇ ಮರೆತು ಅದೇ ನಾಗರಿಕತೆ ಎಂದು ಮೈಮರೆತು ಹೋಗಿದ್ದ ರಶ್ಯದ ಎಲೈಟ್ ಜನ ಒಮ್ಮೆಗೆ ಸಿಡಿಲು ಬಡಿದಂತಾಗಿ ಎ್ಚರೊಂರಂತೆ. ಆದಿಮ ರಶ್ಯದ ವೃದ್ಧ ಸಿಂಹ ಒಮ್ಮೆೆ ಎದ್ದು ಮೈಮುರಿದು ಬಾಯ್ದೆರೆದು ಆಳಿಸಿ ಘಜಿರ್ಸುತ್ತಾ ಫ್ರೆಂ್ ಯೋಧರನ್ನು ಬೆನ್ನಟ್ಟಿ ಹೆ ಗಿ ಹಿಮ್ಮೆಟಿಸಿ ತನ್ನ ದೇಶ-ಭಾಷೆ ಸಂಸ್ಕೃತಿಯನ್ನು ಜತನ ಮಾಡಿತು ಎಂದು ಮಹರ್ಷಿ ಟಾಲ್‌ಸ್ಟಾಯ್ ತಮ್ಮ ‘War and Peace’ ಎಂಬ ಬೃಹತ್ ಾದಂಬರಿಯಲ್ಲಿ ಾಣಿಸುತ್ತಾರೆ. ಪ್ರಸ್ತುತ ನ್ನದ ‘ಸೊಲ್ಲು’ ನ್ನಡಿರ ಅಸ್ಮಿತೆ ಉಳಿಯಬೇಾದರೆ ಸಂವಿಧಾನಾತ್ಮ ರೀತಿಯಲ್ಲೇ ಸಮಸ್ತ ನ್ನಡಿರು ಪ್ರತಿಭಟಿಸಿ ದಂಗೆಯೇಳಬೇಕು. ಯಾಕೆಂದರೆ ಆತ್ಮಾಭಿಮಾನ ಸರ್ವೋೀತ್ಕೃಷ್ಟ! ಅದು ತಾಯಿನುಡಿಗೆ ನಿಷ್ಠವಾಗಿದ್ದರೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)