ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ನಿಧನ
photo- twitter
ಬೆಂಗಳೂರು, ಮೇ 17: ದೇಹದ ಕೊಬ್ಬಿನಾಂಶ ತೆಗೆದು ಹಾಕುವ(ಫ್ಯಾಟ್) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿರುತರೆ ನಟಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
21 ವರ್ಷದ ಚೇತನಾರಾಜ್ ಎಂಬಾಕೆ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ದೇಹದ ಕೊಬ್ಬಿನಾಂಶ ತೆಗೆದು ಹಾಕುವ(ಫ್ಯಾಟ್) ಶಸ್ತ್ರಚಿಕಿತ್ಸೆಗೆ ನವರಂಗ್ ಸರ್ಕಲ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಚೇತನಾ ದಾಖಲಾಗಿದ್ದರು. ಆದರೆ, ಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದ್ದರಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.
ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ಚೇತನಾರಾಜ್ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟನೆ ಮಾಡಿದ್ದರು ಎಂದು ತಿಳಿದುಬಂದಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ನಟಿಯ ಪೋಷಕರು, ಸೋಮವಾರ ಬೆಳಗ್ಗೆ 8:30ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನಮಗೆ ವಿಚಾರ ಗೊತ್ತಾಗಿ, ನಾವು ಬರುವ ಹೊತ್ತಿಗೆ ವೈದ್ಯರು ಚಿಕಿತ್ಸೆ ನಡೆಸುತ್ತಿದ್ದರು. ಸಂಜೆ ಹೊತ್ತಿಗೆ ಶ್ವಾಸಕೋಶಕ್ಕೆ ಕೊಬ್ಬಿನ ಅಂಶ ತುಂಬಿ ಉಸಿರಾಟದ ತೊಂದರೆಯಾಗಿದೆ. ಆಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಯಾವುದೇ ವ್ಯವಸ್ಥೆ ಸೂಕ್ತವಾಗಿಲ್ಲ ಎಂದು ದೂರಿದರು.
ಆಸ್ಪತ್ರೆ ನಿರ್ಲಕ್ಷ್ಯಕ್ಕೆ ನನ್ನ ಮಗಳು ಸಾವನ್ನಪ್ಪಿದ್ದಾಳೆ. ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಇಲ್ಲದೆ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದಾರೆ ಎಂದು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.