varthabharthi


ಕಾಲಂ 9

ಹಣದುಬ್ಬರ, ಆರ್‌ಬಿಐ ಮತ್ತು ಮೋದಿ ಸರಕಾರ

ವಾರ್ತಾ ಭಾರತಿ : 18 May, 2022
ಶಿವಸುಂದರ್

ನ್ಯಾಷನಲ್ ಸ್ಯಾಂಪಲ್ ಸರ್ವೇ ಮತ್ತು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇಗಳ ಅಂಕಿ-ಅಂಶಗಳನ್ನು ಆಧರಿಸಿ ಪರಿಣಿತರು ಮಾಡಿರುವ ಅಧ್ಯಯನದ ಪ್ರಕಾರ ಶೇ. 20ರಷ್ಟಿರುವ ಬಡವರು ತಮ್ಮ ಆದಾಯದ ಶೇ. 60ರಷ್ಟು ಭಾಗವನ್ನು ಆಹಾರ ಧಾನ್ಯಗಳ ಖರೀದಿಗೆ ವೆಚ್ಚ ಮಾಡಿದರೆ, ಶೇ. 20ರಷ್ಟಿರುವ ಶ್ರೀಮಂತರು ತಮ್ಮ ಆದಾಯದ ಶೇ. 30ರಷ್ಟನ್ನು ಮಾತ್ರ ಆಹಾರ ವಸ್ತುಗಳ ಖರೀದಿಗೆ ವೆಚ್ಚ ಮಾಡುತ್ತಾರೆ. ಹೀಗಾಗಿ ಆಹಾರ ಧಾನ್ಯಗಳ ಕಾರಣದಿಂದಾಗಿ ಸಂಭವಿಸುವ ಹಣದುಬ್ಬರದಿಂದ ಅತ್ಯಂತ ತೀವ್ರವಾದ ಪರಿಣಾಮಕ್ಕೆ ಗುರಿಯಾಗುವವರು ಬಡವರೇ ಆಗಿರುತ್ತಾರೆ.


ಆರ್‌ಬಿಐ-ಭಾರತೀಯ ರಿಸರ್ವ್ ಬ್ಯಾಂಕಿನ-ಇತ್ತೀಚಿನ ಹೇಳಿಕೆಯ ಪ್ರಕಾರವೇ ಭಾರತದ ಗ್ರಾಹಕ ಹಣದುಬ್ಬರ ಶೇ.8ನ್ನು ಸಮೀಪಿಸುತ್ತಿದೆ. ಅದರಲ್ಲೂ ಆಹಾರ ಧಾನ್ಯಗಳ ಬೆಲೆ ಏರಿಕೆಯಂತೂ ಕಳೆದ ಎಂಟು ವರ್ಷಗಳಲ್ಲೇ ಅತಿ ಹೆಚ್ಚಾಗಿ ಮುಗಿಲು ಮುಟ್ಟುತ್ತಿದೆ. ಹಾಗೆ ನೋಡಿದರೆ ಕಳೆದ ಜನವರಿಯಿಂದಲೂ ಹಣದುಬ್ಬರ ಶಾಸನ ಮಿತಿಯಾದ ಶೇ.6ರ ಗಡಿಯನ್ನು ದಾಟಿದ್ದರೂ, ರಿಸರ್ವ್ ಬ್ಯಾಂಕು ಮಾತ್ರ ಇದು ಕೇವಲ ತಾತ್ಕಾಲಿಕ, ಎಲ್ಲವೂ ಸರಿಹೋಗುತ್ತದೆ ಎಂದು ತಿಪ್ಪೆಸಾರಿಸುತ್ತಾ ಬಂದಿತ್ತು. ಈರುಳ್ಳಿ ಬೆಲೆ ಜಾಸ್ತಿಯಾದಾಗ ''ನಾನು ಈರುಳ್ಳಿಯನ್ನೇ ತಿನ್ನುವುದಿಲ್ಲ'' ಎಂದು ಹೇಳಿದ್ದ ಮಹಾಮುತ್ಸದ್ಧಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರಂತೂ ಮೊನ್ನೆ ''ಭಾರತದಲ್ಲಿ ಆಗುತ್ತಿರುವ ಹಣದುಬ್ಬರದಿಂದ ಶ್ರೀಮಂತರಿಗೆ ತೊಂದರೆಯಾಗಿದೆಯೇ ವಿನಾ ಭಾರತದ ಬಡವರಿಗೆ ಯಾವ ತೊಂದರೆಯೂ ಆಗಿಲ್ಲ, ಬದಲಿಗೆ ಹಣದುಬ್ಬರದಿಂದ ಶ್ರೀಮಂತರ ಮತ್ತು ಬಡವರ ನಡುವಿನ ಸಮಾನತೆ ಕುಗ್ಗಿದೆ'' ಎಂದು ಅತ್ಯಂತ ಹಾಸ್ಯಾಸ್ಪದ ಹಾಗೂ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ. ಈ ಹಣಕಾಸು ಮಂತ್ರಿಗೆ ಈ ದೇಶದ ಬಡವರ ಬದುಕಿನ ಕಿಂಚಿತ್ತೂ ಪರಿಚಯವಿಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಹಣದುಬ್ಬರವೆಂದರೆ ಬಡವರ ಮೇಲೆ ಶಾಸನ ಬಾಹಿರ ತೆರಿಗೆ ವಾಸ್ತವವಾಗಿ ಹಣದುಬ್ಬರ ಅರ್ಥಾತ್ ಬೆಲೆ ಏರಿಕೆಯೆನ್ನುವುದು ಪರೋಕ್ಷ ತೆರಿಗೆಯಿದ್ದಂತೆ. ಬಡಜನರ ನೈಜ ಆದಾಯ ಹೆಚ್ಚಾಗದೆ ಬೆಲೆ ಮಾತ್ರ ಹೆಚ್ಚುತ್ತಿದ್ದಾಗ ಹೆಚ್ಚುವರಿಯಾಗಿ ತೆರಬೇಕಾದ ಬೆಲೆಯು ಮಾರುಕಟ್ಟೆ ವಿಧಿಸುವ ತೆರಿಗೆಯೇ ಆಗಿದ್ದು ಇದರಿಂದ ಬಡಜನರ ಕೊಳ್ಳುವ ಹಾಗೂ ಬದುಕುವ ಶಕ್ತಿ ಇನ್ನಷ್ಟು ಕುಗ್ಗುತ್ತದೆ. ಆದ್ದರಿಂದಲೇ ಹಣದುಬ್ಬರವನ್ನು ಬಡವರ ಮೇಲಿನ 'ಕ್ರೂರ ತೆರಿಗೆ'ಯೆಂದೂ (ಕ್ರುಯೆಲ್ ಟ್ಯಾಕ್ಸ್) ಬಣ್ಣಿಸುತ್ತಾರೆ.

ಭಾರತದಲ್ಲಿ ಬೆಲೆ ಏರಿಕೆಯನ್ನು ಗ್ರಾಹಕ ದರ ಸೂಚ್ಯಂಕ (ಕನ್ಸೂಮರ್ ಪ್ರೈಸ್ ಇಂಡೆಕ್ಸ್) ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಇದರ ಲೆಕ್ಕಾಚಾರಕ್ಕಾಗಿ ಗ್ರಾಹಕರು ಖರೀದಿಸುವ ಸಾಮಗ್ರಿಗಳನ್ನು ಆಹಾರ ಧಾನ್ಯಗಳು ಮತ್ತು ಪಾನೀಯಗಳು, ಇಂಧನ ಮತ್ತು ವಿದ್ಯುತ್ ಮತ್ತು ಇತರ ಕೀಲಕ ಸಾಮಗ್ರಿಗಳೆಂದು ಮೂರು ಘಟಕಗಳನ್ನಾಗಿ ವಿಂಗಡಿಸುತ್ತಾರೆ. ಪ್ರತಿ ಘಟಕಕ್ಕೆ ಶೇಕಡಾವಾರು ತೂಕಾಂಶವನ್ನು ನಿಗದಿಪಡಿಸಲಾಗುತ್ತದೆ. ಆಯಾ ಘಟಕದಲ್ಲಿರುವ ಸಾಮಗ್ರಿಗಳ ಬೆಲೆ ಏರಿದಾಗ ಅದರ ತೂಕಂಶಕ್ಕೆ ತಕ್ಕಂತೆ ಒಟ್ಟಾರೆ ಹಣದುಬ್ಬರ ದರವನ್ನು ಲೆಕ್ಕಹಾಕಲಾಗುತ್ತದೆ. ಇದರಲ್ಲಿ ಆಹಾರ ಧಾನ್ಯಗಳ ಮತ್ತು ಪಾನೀಯಗಳ ಘಟಕಕ್ಕೆ ಶೇ. 45ರಷ್ಟು ತೂಕಾಂಶವಿದೆ. ವಸತಿ, ಇಂಧನ, ವಿದ್ಯುತ್, ಜವಳಿ ಇತ್ಯಾದಿಗಳ ಘಟಕಗಳ ಬೆಲೆ ಏರಿಕೆಗೆ ಶೇ. 24ರಷ್ಟು ತೂಕಾಂಶವನ್ನು ನಿಗದಿಪಡಿಸಲಾಗಿದೆ. ಅಂದರೆ ಆಹಾರ ಧಾನ್ಯಗಳ ಮತ್ತು ಇಂಧನಗಳ ತೂಕಾಂಶ ಗ್ರಾಹಕ ಸೂಚ್ಯಂಕದಲ್ಲಿ ಶೇ. 70ರಷ್ಟಾಗುವುದರಿಂದ ಇವುಗಳ ಬೆಲೆ ಏರಿದರೆ ಸಹಜವಾಗಿ ಗ್ರಾಹಕ ಸೂಚ್ಯಂಕದ ಆಧಾರದ ಹಣದುಬ್ಬರ ತಾನಾಗಿಯೇ ಏರಿ ಬಿಡುತ್ತದೆ. ಆದರೆ ಹಣದುಬ್ಬರವು ಆಹಾರ ಧಾನ್ಯಗಳ ಏರಿಕೆಯಲ್ಲದೆ ಇತರ ಅಂಶಗಳ ಬೆಲೆ ಏರಿಕೆಯಿಂದಲೂ ಹೆಚ್ಚಾಗಬಹುದು. ಹೀಗಾಗಿಯೇ ಯಾವ ಕಾರಣದಿಂದಾಗಿ ಹಣದುಬ್ಬರವು ಸಂಭವಿಸಿದೆ ಎನ್ನುವುದನ್ನು ಆಧರಿಸಿ ಹಣದುಬ್ಬರದ ಪ್ರಭಾವವು ಬೇರೆಬೇರೆ ಜನವರ್ಗಗಳಿಗೆ ಭಿನ್ನವಾಗಿರುತ್ತದೆ.

ಬಡವರಿಗೆ ಹಣದುಬ್ಬರ ಶಾಪ- ಶ್ರೀಮಂತರಿಗೆ ಶಾಪದ ರೂಪದಲ್ಲಿರುವ ವರ

ಉದಾಹರಣೆಗೆ ಹಣದುಬ್ಬರದ ಪ್ರಭಾವವನ್ನು ಅಧ್ಯಯನ ಮಾಡಲು ಭಾರತದ ಜನ ವರ್ಗಗಳನ್ನು ಶೇ. 20ರಷ್ಟಿರುವ ಬಡವರ್ಗ, ಶೇ. 60ರಷ್ಟಿರುವ ಮಧ್ಯಮ ವರ್ಗ ಹಾಗೂ ಶೇ. 20ರಷ್ಟಿರುವ ಶ್ರೀಮಂತ ವರ್ಗ ಎಂದು ವರ್ಗೀಕರಿಸಲಾಗಿದೆ. ಇದನ್ನು ಮತ್ತೆ ಗ್ರಾಮೀಣ ಮತ್ತು ನಗರ ಎಂದು ವರ್ಗೀಕರಿಸಲಾಗಿದೆ. ನ್ಯಾಷನಲ್ ಸ್ಯಾಂಪಲ್ ಸರ್ವೇ ಮತ್ತು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇಗಳ ಅಂಕಿ-ಅಂಶಗಳನ್ನು ಆಧರಿಸಿ ಪರಿಣಿತರು ಮಾಡಿರುವ ಅಧ್ಯಯನದ ಪ್ರಕಾರ ಶೇ. 20ರಷ್ಟಿರುವ ಬಡವರು ತಮ್ಮ ಆದಾಯದ ಶೇ. 60ರಷ್ಟು ಭಾಗವನ್ನು ಆಹಾರ ಧಾನ್ಯಗಳ ಖರೀದಿಗೆ ವೆಚ್ಚ ಮಾಡಿದರೆ, ಶೇ. 20ರಷ್ಟಿರುವ ಶ್ರೀಮಂತರು ತಮ್ಮ ಆದಾಯದ ಶೇ. 30ರಷ್ಟನ್ನು ಮಾತ್ರ ಆಹಾರ ವಸ್ತುಗಳ ಖರೀದಿಗೆ ವೆಚ್ಚ ಮಾಡುತ್ತಾರೆ. ಹೀಗಾಗಿ ಆಹಾರ ಧಾನ್ಯಗಳ ಕಾರಣದಿಂದಾಗಿ ಸಂಭವಿಸುವ ಹಣದುಬ್ಬರದಿಂದ ಅತ್ಯಂತ ತೀವ್ರವಾದ ಪರಿಣಾಮಕ್ಕೆ ಗುರಿಯಾಗುವವರು ಬಡವರೇ ಆಗಿರುತ್ತಾರೆ. ಇದಲ್ಲದೆ ಬಡವರು ತಮ್ಮ ದೈನಂದಿನ ಉಳಿವಿಗೆ ಆಹಾರದ ಮೇಲೆ ಮಾತ್ರವಲ್ಲದೆ ಇನ್ನಿತರ ಸಾಮಗ್ರಿಗಳನ್ನು ಖರೀದಿಸಬೇಕಿರುತ್ತದೆ. ಹೀಗಾಗಿ ಅವರು ತಮ್ಮ ಸೀಮಿತ ಆದಾಯದ ಶೇ. 90 ರಷ್ಟು ಭಾಗವನ್ನು ವೆಚ್ಚ ಮಾಡಲೇ ಬೇಕಾಗುತ್ತದೆ. ಆದ್ದರಿಂದ ಬಡವರ ಉಳಿತಾಯ ಹೆಚ್ಚೂ ಕಡಿಮೆ ಶೂನ್ಯ. ಸಾಲದಲ್ಲಿರುವುದೇ ಹೆಚ್ಚು. ಇದಕ್ಕೆ ಪ್ರತಿಯಾಗಿ ಶ್ರೀಮಂತರು ತಮ್ಮ ಆದಾಯದ ಶೇ. 30 ರಷ್ಟನ್ನೂ ಮಾತ್ರ ವೆಚ್ಚ ಮಾಡಿದರೆ ಉಳಿದದ್ದನ್ನು ಸ್ಟಾಕ್ ಮಾರ್ಕೆಟ್ ಅಥವಾ ಇನ್ನಿತರ ಲಾಭದಾಯಕ ವ್ಯವಹಾರಗಳ ಮೇಲೆ ಹೂಡಿಕೆ ಮಾಡುತ್ತಾರೆ ಅಥವಾ ಉಳಿತಾಯ ಮಾಡುತ್ತಾರೆ. ಹೀಗಾಗಿ ಅವರು ತಮ್ಮ ಮೇಲಿನ ಹಣದುಬ್ಬರದ ಪ್ರಭಾವಗಳನ್ನು ಇನ್ನಿತರ ಮಾರ್ಗಗಳ ಮೂಲಕ ನಿವಾರಿಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಆದರೆ ಬಡವರ್ಗಗಳಿಗೆ ಆ ಬಗೆಯ ಅವಕಾಶಗಳಿರುವುದಿಲ್ಲ. ಆದ್ದರಿಂದಲೇ ಹಣದುಬ್ಬರ ಎಂಬುದು ಬಡವರ ಪಾಲಿನ ಕ್ರೂರ ತೆರಿಗೆ ಎಂದು ಬಣ್ಣಿಸಲಾಗುತ್ತದೆ.

ಆಮದಾದ ಹಣದುಬ್ಬರ- ಮೋದಿ ನೀತಿಗಳಿಂದಾದ ಹಣದುಬ್ಬರ
ಇಂದು ಭಾರತ ಎದುರಿಸುತ್ತಿರುವ ಹಣದುಬ್ಬರ ಯಾವ ಮೂಲದ್ದು? ಅದು ಪ್ರಧಾನವಾಗಿ ಆಹಾರ ಧಾನ್ಯಗಳ ಬೆಲೆ ಏರಿಕೆ ಹಾಗೂ ಕಚ್ಚಾ ತೈಲದ ಬೆಲೆ ಏರಿಕೆಯ ಕಾರಣಗಳಿಂದಾಗಿ ಸಂಭವಿಸುತ್ತಿದೆ. ಅದರಲ್ಲೂ ತರಕಾರಿ, ಗೋಧಿ, ಖಾದ್ಯ ತೈಲ, ಗ್ಯಾಸ್, ಪೆಟ್ರೋಲ್-ಡೀಸೆಲ್ ಬೆಲೆಗಳ ಏರಿಕೆಯಿಂದಾಗಿಯೇ ಹಣದುಬ್ಬರವು ಒಂದೇ ಸಮನೆ ಏರುತ್ತಿದೆ.
ಉಕ್ರೇನ್ ಯುದ್ಧ ಪ್ರಾರಂಭವಾದ ಮೇಲೆ ಅಲ್ಲಿಂದ ಆಮದು ಮಾಡಿಕೊಳ್ಳುತ್ತಿದ್ದ ಸೂರ್ಯಕಾಂತಿ ಎಣ್ಣೆ ಸರಬರಾಜು ನಿಂತಿದೆ. ಇದರ ಜೊತೆಗೆ ಇಂಡೋನೇಶ್ಯ ಹಾಗೂ ಮಲೇಶ್ಯಗಳು ತಮ್ಮ ಖಾದ್ಯ ಎಣ್ಣೆಯ ರಫ್ತನ್ನು ನಿರ್ಬಂಧಿಸಿರುವುದರಿಂದಲೂ ಖಾದ್ಯ ತೈಲದ ಬೆಲೆ ಏರಿಕೆ ಆಗುತ್ತಿದೆ. ಹಾಗೆಯೇ ದೇಶಕ್ಕೆ ಅಗತ್ಯವಿರುವ ಶೇ. 85 ರಷ್ಟು ಕಚ್ಚಾ ಪೆಟ್ರೋಲಿಯಂ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಅದರ ಬೆಲೆಯೂ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವುದರಿಂದ ಆಮದು ತುಟ್ಟಿಯಾಗಿ ಬೆಲೆ ಏರಿಕೆಯಾಗುತ್ತಿದೆ. ಇದೆಲ್ಲದರ ಜೊತೆಗೆ ಮೋದಿ ಸರಕಾರದ ಹಾಗೂ ಈ ಹಿಂದಿನ ಸರಕಾರಗಳ ಆಮದು ಅವಲಂಬನೆ ನೀತಿಗಳಿಂದಾಗಿ ಡಾಲರ್ ಎದುರು ರೂಪಾಯಿಯ ಮೌಲ್ಯ ಒಂದೇ ಸಮನೆ ಕುಸಿಯುತ್ತಿರುವುದರಿಂದಲೂ ಎಲ್ಲಾ ಆಮದುಗಳು ತುಟ್ಟಿಯಾಗುತ್ತಿವೆ. ಆದ್ದರಿಂದಲೇ ನಮ್ಮ ದೇಶದ ಹಣದುಬ್ಬರವು ಒಂದರ್ಥದಲ್ಲಿ ಆಮದಾದ ಹಣದುಬ್ಬರವೆಂದೇ ಬಣ್ಣಿಸುತ್ತಾರೆ. ಇಷ್ಟು ಮಾತ್ರವಲ್ಲದೆ, ಎಲ್ಲಾ ಆಮದುಗಳ ಮೇಲೆ ಮೋದಿ ಸರಕಾರ ಜನರ ರಕ್ತವನ್ನು ಹೀರುವಂತಹ ಸೆಸ್ ಮತ್ತು ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತದೆ. ಉದಾಹರಣೆಗೆ ಪ್ರತಿ ಪೆಟ್ರೋಲ್ ಲೀಟರ್ ಒಂದಕ್ಕೆ 100ರೂ. ಇದ್ದರೆ ಅದರಲ್ಲಿ 60 ರೂಪಾಯಿಗಳು ಸರಕಾರಕ್ಕೆ ನಾವು ಕಟ್ಟುವ ತೆರಿಗೆಗಳು. ಹಾಗೆಯೇ ಖಾದ್ಯ ತೈಲದ ಮೇಲೂ ಅಗಾಧ ಆಮದು ತೆರಿಗೆಗಳನ್ನು ವಿಧಿಸುವುದರಿಂದ ಬೆಲೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಸಾರಾಂಶದಲ್ಲಿ ಹೇಳುವುದಾದರೆ ಇಂದು ಆಗುತ್ತಿರುವ ಬೆಲೆ ಏರಿಕೆಗೆ ಪ್ರಧಾನ ಕಾರಣ ಆಮದು ಅವಲಂಬನೆ ಹಾಗೂ ಮೋದಿ ಸರಕಾರದ ತೆರಿಗೆ ಪಿಪಾಸು ನೀತಿಗಳು. ಹೀಗಾಗಿ ಬೆಲೆ ಏರಿಕೆ/ಹಣದುಬ್ಬರ ಕಡಿಮೆಯಾಗಬೇಕು ಎಂದರೆ ಮೋದಿ ಸರಕಾರ ಪೆಟ್ರೋಲ್ ಮೇಲೆ, ಖಾದ್ಯ ತೈಲಗಳ ಮೇಲೆ ಹಾಕುತ್ತಿರುವ ಸೆಸ್‌ಗಳನ್ನು ಕಡಿಮೆ ಮಾಡಬೇಕು ಮತ್ತು ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಸರಬರಾಜು ಹೆಚ್ಚಾಗುವಂತೆ ಮಾಡುವ ಮೂಲಕ ಮಾತ್ರ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯ. ಆದರೆ ಮೋದಿ ಸರಕಾರ ಅಂತಹ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪದೆ ರಿಸರ್ವ್ ಬ್ಯಾಂಕು ಹಣಕಾಸು ಹರಿವನ್ನು ನಿಯಂತ್ರಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಬೇಕೆಂದು ಪರೋಕ್ಷವಾಗಿ ಸೂಚಿಸಿದೆ. ಆದರೆ ಆಹಾರ ಧಾನ್ಯ ಮತ್ತು ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಂಭವಿಸುತ್ತಿರುವ ಹಾಲಿ ಹಣದುಬ್ಬರವನ್ನು ಆರ್‌ಬಿಐ ಹಣಕಾಸು ಹರಿವನ್ನು ನಿಯಂತ್ರಿಸುವ ಮೂಲಕ ತಡೆಯಲು ಸಾಧ್ಯವೇ?

ಹಣಕಾಸು ನಿಯಂತ್ರಣದಿಂದ ಹಾಲಿ ಹಣದುಬ್ಬರ ನಿಲ್ಲುವುದೇ?

ಸಾಮಾನ್ಯವಾಗಿ ಆರ್ಥಿಕತೆಯಲ್ಲಿ ಸರಕುಗಳ ಮೌಲ್ಯಕ್ಕಿಂತಲೂ ಹೆಚ್ಚಿನ ಹಣಕಾಸು ಹರಿವಿದ್ದರೆ ಹಣದುಬ್ಬರವಾಗುತ್ತದೆ ಎಂದು ಹೇಳಲಾಗುತ್ತದೆ. ಆಗ ರಿಸರ್ವ್ ಬ್ಯಾಂಕಿನಂತಹ ಕೇಂದ್ರೀಯ ಬ್ಯಾಂಕುಗಳು ಮಧ್ಯಪ್ರವೇಶ ಮಾಡಿ ಹೆಚ್ಚುವರಿ ಹಣವನ್ನು ಮಾರುಕಟ್ಟೆಯಿಂದ ವಾಪಸ್ ಪಡೆದುಕೊಂಡಾಗ ಹಣದುಬ್ಬರ ಕಡಿಮೆಯಾಗುತ್ತದೆ ಎಂಬುದು ಹಣದುಬ್ಬರ ಮತ್ತು ಕೇಂದ್ರೀಯ ಬ್ಯಾಂಕುಗಳ ಪಾತ್ರದ ಬಗ್ಗೆ ಶಾಸ್ತ್ರೀಯ ತಿಳುವಳಿಕೆ. ಈ ರೀತಿ ಆರ್ಥಿಕತೆಯಲ್ಲಿ ಹಣದ ಹರಿವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕು ಎರಡು ಕ್ರಮಗಳನ್ನು ಅನುಸರಿಸುತ್ತದೆ. ಮೊದಲನೆಯದಾಗಿ ರಿಸರ್ವ್ ಬ್ಯಾಂಕು ಇತರ ಬ್ಯಾಂಕುಗಳಿಗೆ ಹಣವನ್ನು ಕೊಡಲು ವಿಧಿಸುವ ಬಡ್ಡಿ ದರದ ನಿಯಂತ್ರಣ ಹಾಗೂ ಪ್ರತಿ ಬ್ಯಾಂಕುಗಳು ತಮ್ಮಲ್ಲಿ ಇಡಲಾಗುವ ಪ್ರತಿ ಡಿಪಾಸಿಟ್‌ನಲ್ಲಿ ರಿಸರ್ವ್ ಬ್ಯಾಂಕಿನಲ್ಲಿ ಕಾಪಿಡಬೇಕಾದ ನಿಧಿ -ಕ್ಯಾಶ್ ರಿಸರ್ವ್ ರೇಶಿಯೋವನ್ನು ನಿಯಂತ್ರಿಸುವ ಮೂಲಕ ಹಣದ ಹರಿವನ್ನು ಆ ಮೂಲಕ, ಹಣದುಬ್ಬರವನ್ನು ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆಂದು ಮಾರುಕಟ್ಟೆ ಆಧಾರಿತ ಆರ್ಥಿಕತೆ ಚಾಲ್ತಿಗೆ ಬಂದ ಮೇಲೆ ಎಲ್ಲಾ ದೇಶಗಳು ನಿರೀಕ್ಷಿಸುತ್ತವೆ. ಆರ್ಥಿಕತೆಯಲ್ಲಿ ಬೇಡಿಕೆಯ ಮತ್ತು ಹೂಡಿಕೆಯ ಕೊರತೆ ಇದ್ದಾಗ ಅವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ತಾನು ವಿಧಿಸುವ ಬಡ್ಡಿದರ-ರೆಪೋದರ-ವನ್ನು ರಿಸರ್ವ್ ಬ್ಯಾಂಕು ಕಡಿಮೆ ಮಾಡುತ್ತದೆ. ಆಗ ಬ್ಯಾಂಕುಗಳು ತಮ್ಮ ಬಳಿ ಸಾಲ ತೆಗೆದುಕೊಳ್ಳುವವರಿಗೆ ವಿಧಿಸುವ ಬಡ್ಡಿ ದರವನ್ನು ಕಡಿಮೆ ಮಾಡುವ ಮೂಲಕ ಹೂಡಿಕೆಯನ್ನು ಹಾಗೂ ಖರೀದಿಯನ್ನು ಆ ಮೂಲಕ ಹಣದ ಹರಿವನ್ನು ಹೆಚ್ಚಿಸುತ್ತದೆ. ಅದೇ ರೀತಿ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಲ್ಲಿ ಕಾಪಿಡಬೇಕಿದ್ದ ಕ್ಯಾಶ್ ರಿಸರ್ವ್ ರೇಶಿಯೋವನ್ನು ಕಡಿಮೆ ಮಾಡುವ ಮೂಲಕ ಬ್ಯಾಂಕುಗಳ ಬಳಿ ಸಾಲವನ್ನು ನೀಡಲು ಹೆಚ್ಚುವರಿ ಹಣ ಇರುವಂತೆ ನೋಡಿಕೊಳ್ಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಾಗಿ ಹಣದ ಹರಿವು ಹೆಚ್ಚಾಗಿ ಬೆಲೆಗಳು ಏರಿದಾಗ ರಿಸರ್ವ್ ಬ್ಯಾಂಕು ರೆಪೋ ದರ ಅಂದರೆ ಬ್ಯಾಂಕುಗಳಿಗೆ ತಾನು ಹಣಕಾಸು ಒದಗಿಸುತ್ತಿದ್ದ ದರವನ್ನು ಹೆಚ್ಚಿಸುತ್ತದೆ.

ಆ ಮೂಲಕ ಸಾಲಗಾರರಿಗೆ ಬ್ಯಾಂಕುಗಳು ವಿಧಿಸುತ್ತಿದ್ದ ಬಡ್ಡಿ ದರವನ್ನು ಹೆಚ್ಚಿಸುವಂತೆ ಮಾಡುತ್ತದೆ. ಆಗ ಜನರು ಸಾಲವನ್ನು ತೆಗೆದುಕೊಳ್ಳುವುದು, ಸಾಲ ಬಂಡವಾಳ ತೆಗೆದುಕೊಂಡು ಹೂಡಿಕೆ ಮಾಡುವುದನ್ನು ಕಡಿಮೆ ಮಾಡಿ ಉಳಿತಾಯ ಮಾಡುತ್ತಾರೆ. ಆಗ ಆರ್ಥಿಕತೆಯಲ್ಲಿ ಹಣದ ಹರಿವು ಕಡಿಮೆಯಾಗಿ ಹಣದುಬ್ಬರವು ಕಡಿಮೆಯಾಗುತ್ತದೆ ಎಂಬುದು ನಿರೀಕ್ಷೆ, ಹಾಗೆಯೇ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಲ್ಲಿ ಇಡಬೇಕಿದ್ದ ಕ್ಯಾಶ್ ರೇಶಿಯೋವನ್ನು ಹೆಚ್ಚಿಸುವ ಮೂಲಕವು ಹಣದ ಹರಿವನ್ನು ಆರ್ಥಿಕತೆಯಲ್ಲಿ ಕಡಿಮೆ ಮಾಡಲಾಗುತ್ತದೆ. ಆದರೆ ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಈ ಹಣದ ಹರಿವಿನ ನಿಯಂತ್ರಣದ ಲೆಕ್ಕಾಚಾರಗಳು ಪುಸ್ತಕದ ಲೆಕ್ಕಾಚಾರಕ್ಕೆ ತಕ್ಕಂತೆ ನಡೆಯುವುದಿಲ್ಲ. ಉದಾಹರಣೆಗೆ ಕೋವಿಡ್ ನಂತರದಲ್ಲಿ ಆರ್ಥಿಕತೆಯಲ್ಲಿ ಬೇಡಿಕೆಯೇ ಇಳಿಮುಖವಾಗಿದೆ. ಜನರ ಬಳಿ ಖರ್ಚು ಮಾಡಲು ಹಣವೇ ಕಡಿಮೆಯಾಗಿದೆ. ಹೂಡಿಕೆ ಕಡಿಮೆಯಾಗಿದೆ. ಅಂದರೆ ಆರ್ಥಿಕತೆಯಲ್ಲಿ ಹಣದ ಹರಿವು ಕಡಿಮೆಯಾಗಿದೆ. ಆದರೂ ಹಣದುಬ್ಬರ ಜಾಸ್ತಿಯಾಗಿದೆ. ಕಾರಣ ಬೇಡಿಕೆಯದ್ದಲ್ಲ. ಸರಬರಾಜಿನದ್ದು ಮತ್ತು ಸರಕಾರದ ತೆರಿಗೆ ನೀತಿಯದ್ದು. ಇಂತಹ ಸಂದರ್ಭದಲ್ಲಿ 'ಎತ್ತು ಈಯಿತಾ, ಕೊಟ್ಟಿಗೆಗೆ ಕಟ್ಟು' ಎಂಬಂತೆ ಯಾವ ಕಾರಣಕ್ಕೆ ಹಣದುಬ್ಬರವಾಗಿದೆ ಎಂಬುದಕ್ಕೆ ಸಂಬಂಧವೇ ಇಲ್ಲದಂತೆ, ಬೇಡಿಕೆ-ಹೂಡಿಕೆ ಕಡಿಮೆಯಾಗಿರುವಾಗಲೂ ಬಡ್ಡಿ ದರವನ್ನು ಏರಿಸಿ ಹೂಡಿಕೆಯ ವೆಚ್ಚವನ್ನು ನಿರುತ್ತೇಜನ ಮಾಡಿದರೆ ಹಣದುಬ್ಬರವೂ ಕಡಿಮೆಯಾಗುವುದಿಲ್ಲ. ಆರ್ಥಿಕತೆಯು ಕಂಗೆಟ್ಟು ಆರ್ಥಿಕತೆಯಲ್ಲಿ ಅಭಿವೃದ್ಧಿಯಿರದಿದ್ದರೂ ಹಣದುಬ್ಬರ ಮಾತ್ರ ಜಾಸ್ತಿಯಾಗುವ ಸ್ಥಗಿತೋಬ್ಬರ(ಸ್ಥಗಿತ+ಉಬ್ಬರ- ಸ್ಟಾಗ್‌ಫ್ಲೇಶನ್)ಕ್ಕೆ ಕಾರಣವಾಗುತ್ತದೆ.

ಅದು ನಿಧಾನವಾಗಿ ಆರ್ಥಿಕ ಬಿಕ್ಕಟ್ಟಿಗೂ ದಾರಿ ಮಾಡಿಕೊಡುತ್ತದೆ. ಖಾಸಗಿ ಹಣಕಾಸು ಬಂಡವಾಳಶಾಹಿಗಳಿಗೆ ಮಾತ್ರ ಸಹಾಯ ಮಾಡುವ ಇಂತಹ ಸೆಂಟ್ರಲ್ ಬ್ಯಾಂಕ್ ನೀತಿಗಳನ್ನು ನವ ಉದಾರವಾದದ ಕಾಲಘಟ್ಟದಲ್ಲಿ ಹಣಕಾಸು ಬಂಡವಾಳಶಾಹಿಗಳ ಮೇಲೆ ಅವಲಂಬಿತರಾಗಿರುವ ಎಲ್ಲಾ ದೇಶಗಳು ಅನುಸರಿಸುತ್ತಿವೆ. ಅದರ ಭಾಗವಾಗಿಯೇ 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಹಣಕಾಸು ಕಾಯ್ದೆಗೆ 2016ರಲ್ಲಿ ತಿದ್ದುಪಡಿ ತಂದು ರಿಸರ್ವ್ ಬ್ಯಾಂಕು ತನ್ನ ರೆಪೋದರ, ಕ್ಯಾಶ್ ರೇಶಿಯೋ ನಿಯಂತ್ರಣದ ಮೂಲಕ ದೇಶದಲ್ಲಿ ಹಣದುಬ್ಬರ ಪ್ರಮಾಣವು ಹೆಚ್ಚಾಗದಂತೆ ನೋಡಿಕೊಳ್ಳಬೇಕೆಂಬ ಶಾಸನವನ್ನು ಜಾರಿಗೆ ತಂದಿತು. ಅದರ ಭಾಗವಾಗಿ ದೇಶದ ರಿಸರ್ವ್ ಬ್ಯಾಂಕು ಮೇಲೆ ಹೇಳಿದ ಹಣಕಾಸು ಕ್ರಮವನ್ನು ಬಳಸಿ ದೇಶದಲ್ಲಿ ಹಣದುಬ್ಬರವನ್ನು ಶೇ.2-6ರ ಮಿತಿಯಿಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ. ಅದನ್ನು ಸಾಧಿಸಲು ಅದರ ಬಳಿ ಇರುವ ಹಣಕಾಸು ಕ್ರಮ ರೆಪೋ ದರ ಹಾಗೂ ಕ್ಯಾಶ್ ರೇಶಿಯೋ ನಿಯಂತ್ರಣಗಳು ಮಾತ್ರ. ಹಣದ ಹರಿವಿನ ನಿಮಿತ್ತವಿಲ್ಲದೆ ಸರಕಾರದ ಜನವಿರೋಧಿ ತೆರಿಗೆ ನೀತಿ, ಆರ್ಥಿಕ ನೀತಿ, ಆಮದು ನೀತಿಗಳಿಂದ ಉಂಟಾಗುವ ಹಣದುಬ್ಬರವನ್ನು ನಿಯಂತ್ರಿಸುವ ಯಾವ ಹಣಕಾಸು ಕ್ರಮಗಳಾಗಲೀ, ಅಧಿಕಾರವಾಗಲೀ ರಿಸರ್ವ್ ಬ್ಯಾಂಕುಗಳಿಗಿಲ್ಲ. ತೆರಿಗೆ ಕಡಿಮೆ ಮಾಡುವ, ಜನರ ಬಳಿ ಕೊಳ್ಳುವ ಶಕ್ತಿ ಹೆಚ್ಚಿಸುವಂತೆ ಮಾಡುವ ಯಾವ ವಿತ್ತೀಯ ಅಧಿಕಾರವೂ ಅದಕ್ಕಿಲ್ಲ.

ಮೋದಿ ತೆರಿಗೆಯ ದಾಳಿ ಜೊತೆಗೆ ಆರ್‌ಬಿಐ ಅನಾಹುತಕಾರಿ ಕ್ರಮಗಳು

ಆದರೂ ರಿಸರ್ವ್ ಬ್ಯಾಂಕು ಹಣದುಬ್ಬರ ಕಡಿಮೆಯಾಗಬೇಕೆಂದರೆ ಪೆಟ್ರೋಲ್ ಮತ್ತು ಖಾದ್ಯ ತೈಲದ ಮೇಲಿನ ತೆರಿಗೆ ಕಡಿಮೆ ಮಾಡಬೇಕೆಂದು ಸರಕಾರಕ್ಕೆ ಜನವರಿಯಿಂದ ಸಲಹೆ ಮಾಡುತ್ತಿತ್ತು. ಆದ್ದರಿಂದಲೇ ಜನವರಿಯಿಂದಲೇ ಹಣದುಬ್ಬರ ಶೇ. 6ರ ಗಡಿ ದಾಟಿದ್ದರೂ ಅದು ತಾತ್ಕಾಲಿಕ ಎಂದು ಹೇಳಿಕೆ ನೀಡುತ್ತಾ ಹಣದುಬ್ಬರ ಕಡಿಮೆ ಮಾಡಲು ತನ್ನ ಬಳಿ ಇದ್ದ ಬಡ್ಡಿ ದರ ಹೆಚ್ಚಳ ಅರ್ಥಾತ್ ಆರ್ಥಿಕತೆಯಲ್ಲಿ ಬೇಡಿಕೆ-ಹೂಡಿಕೆ ಕಡಿಮೆ ಮಾಡುವ ಕ್ರಮಗಳನ್ನು ನಿಯಂತ್ರಿಸುವ ಅನಾಹುತಕಾರಿ ಕ್ರಮಗಳಿಗೆ ಮುಂದಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಯಾವಾಗ ಮೋದಿ ಸರಕಾರ ಯಾವ ಕಾರಣಕ್ಕೂ ತೆರಿಗೆ ಕಡಿಮೆ ಮಾಡಲು ಮುಂದಾಗದಿದ್ದಾಗ ಮತ್ತು ಉಕ್ರೇನ್ ಯುದ್ಧ ಇನ್ನೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಕೈ ಮೀರಿ ಹೋಗಬಹುದಾದ ಹಣದುಬ್ಬರವನ್ನು ನಿಯಂತ್ರಿಸಲು ರೆಪೋ ದರವನ್ನು ಅಂದರೆ ಬಡ್ಡಿ ದರವನ್ನು ಶೇ. 4ರಿಂದ ಶೇ.4.4ಕ್ಕೆ ಹಾಗೂ ಕ್ಯಾಶ್ ರೇಶಿಯೋವನ್ನು ಶೇ. 4ರಿಂದ ಶೇ. 4.5ಕ್ಕೆ ಏರಿಸುವಂತಹ ಅನಾಹುತಕಾರಿ ಕ್ರಮಗಳಿಗೆ ಆರ್‌ಬಿಐ ಮುಂದಾಗಿದೆ. ಇದು ಇಲ್ಲಿಗೆ ನಿಲ್ಲದೆ ಬರಲಿರುವ ತಿಂಗಳುಗಳಲ್ಲಿ ರಿಸರ್ವ್ ಬ್ಯಾಂಕು ರೆಪೋ ದರ ಮತ್ತು ಕ್ಯಾಶ್ ರೇಶಿಯೋ ಎರಡನ್ನೂ ಹೆಚ್ಚಿಸುವ ಸಾಧ್ಯತೆ ಇದೆ. ರಿಸರ್ವ್ ಬ್ಯಾಂಕಿನ ಈ ಹಣಕಾಸು ಕ್ರಮದಿಂದ ಈಗಾಗಲೇ ಬೇಡಿಕೆ ಇಲ್ಲದೆ, ಹೂಡಿಕೆ ಇಲ್ಲದೆ ಸೊರಗಿರುವ ಭಾರತದ ಆರ್ಥಿಕತೆ ಇನ್ನಷ್ಟು ಸೊರಗುತ್ತದೆ. ಇದರಿಂದ ಇನ್ನಷ್ಟು ವಹಿವಾಟು ಕುಸಿತ, ನಿರುದ್ಯೋಗ, ಅದರಿಂದ ಬಡತನ ಹೆಚ್ಚಲಿದೆ. ಅದು ಆರ್ಥಿಕತೆಯಲ್ಲಿ ಬೇಡಿಕೆಯನ್ನು ಇನ್ನಷ್ಟು ಇಲ್ಲದಂತೆ ಮಾಡಿ ಸ್ಥಗಿತೋಬ್ಬರಕ್ಕೂ, ಆರ್ಥಿಕ ಬಿಕ್ಕಟ್ಟಿಗೂ, ಜನರ ಸಂಕಷ್ಟಗಳಿಗೂ ಕಾರಣವಾಗುವ ಎಲ್ಲಾ ಸೂಚನೆಗಳಿವೆ. ಇದಕ್ಕೆ ಕಾರಣ ಮಾತ್ರ ಉಕ್ರೇನ್ ಯುದ್ಧವೂ ಅಲ್ಲ. ಕೇವಲ ಕಚ್ಚಾ ತೈಲ ಬೆಲೆ ಏರಿಕೆಯೂ ಅಲ್ಲ. ಬದಲಿಗೆ ಕಾರ್ಪೊರೇಟುಗಳ ಪರವಾದ ಮೋದಿ ಸರಕಾರದ ಜನದ್ರೋಹಿ ಮತ್ತು ದೇಶದ್ರೋಹಿ ಆರ್ಥಿಕ ನೀತಿಗಳೇ ಈ ಅನಾಹುತಕ್ಕೆ ಏಕೈಕ ಕಾರಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)